

ಇದನ್ನೇ ಕನಕರು ಸಮಾಜದಲ್ಲಿ ಕಾಣಬಯಸಿದರು. ಭಾರತೀಯ ಸಮಾಜದ ತರತಮ-ಕಟ್ಟುಪಾಡುಗಳಿಂದ ಸಾಮಾನ್ಯರು ಅನುಭವಿಸಿದ ತಲ್ಲಣಗಳನ್ನು ತೀವ್ರವಾಗಿ ಗಮನಿಸಿದವರು, ಸ್ವತಃ ಅನುಭವಿಸಿದವರು ಕನಕರು. ತಮ್ಮ ಸಂದರ್ಭಗಳಲ್ಲಿ ಪ್ರತಿಷ್ಠಿತವಾಗಿದ್ದ ಸಾಹಿತ್ಯಿಕ ಮತ್ತು ವೈಚಾರಿಕ ವೇದಿಕೆಯಲ್ಲಿ ಕವಿ, ಚಿಂತಕನಾಗಿ ತಮ್ಮನ್ನು ಸ್ಥಾಪಿಸಿಕೊಳ್ಳಬೇಕಾದ; ಧರ್ಮಗಳ ಧೃವೀಕರಣ, ಜ್ಞಾನಕೇತ್ರದ ಸ್ವಾಮ್ಯ-ಬಿಕ್ಕಟ್ಟುಗಳಿಗೆ ಉತ್ತರಿಸಬೇಕಾದ ಮತ್ತು ತನ್ನ ಅಸ್ತಿತ್ವವನ್ನು ಕಂಡುಕೊಳ್ಳಲೇಬೇಕಾದ ಒತ್ತಡಕ್ಕೆ ಸಿಕ್ಕಿದವರು ಕನಕರು. ಕನಕನಾಯಕ ಕನಕದಾಸನಾಗಿ ಸಂಪತ್ತು, ಅಧಿಕಾರದ ಸಾಂಸಾರಿಕ ಪೊರೆಯನ್ನು ಕಳಚಿಕೊಳ್ಳುತ್ತ, ಜಾತಿಯ, ಅಧಿಕಾರದ, ಸಂಪತ್ತಿನ ಬಲವಿಲ್ಲದೆ ಅಂದು ಸಾಹಿತ್ಯ ಹಾಗೂ ಆಧ್ಯಾತ್ಮಿಕವಲಯದಲ್ಲಿ ತಮಗಾಗಿ ಒಂದು ಸ್ಥಾನವನ್ನು ಗಟ್ಟಿಗೊಳಿಸಿಕೊಂಡದ್ದು ಸಾಮಾನ್ಯವಾದ ವಿಚಾರವಲ್ಲ.
ಸಾಮಾಜಿಕ ಅಸಮಾನತೆಯನ್ನು ಧಾರ್ವಿುಕ ನೆಲೆಯಲಿ ತೊಡೆದು ಹಾಕಬಹುದೆಂಬ ಬಸವಾದಿ ಶರಣರು, ರಾಮಾನುಜರ ಪ್ರಯತ್ನಗಳು ಸಾಮಾಜಿಕವಾಗಿ ತಳಸಮುದಾಯಗಳ ಮೇಲ್ಮುಖ ಪರಿಚಲನೆಗೆ ಕಾರಣವಾದರೂ ಪೂರ್ಣವಾಗಿ ಸಮಾಜ ತಮ್ಮನ್ನು ಒಪ್ಪಿಕೊಳ್ಳುತ್ತಿಲ್ಲವೆಂಬ ಅಳಲು, ಬೇಗುದಿ ಉಳಿದೇ ಇತ್ತು. ಪ್ರಭುತ್ವವೂ ಸುಧಾರಕರೊಂದಿಗೆ ನಿಲ್ಲದಿದ್ದರೆ ಪೂರ್ಣರೂಪದಲ್ಲಿ ಇದು ಫಲ ನೀಡುವುದಿಲ್ಲ ಎಂಬುದನ್ನು ಅರಿತ ಕನಕರು ‘ರಾಮಧಾನ್ಯಚರಿತೆ’ಯ ಮೂಲಕ ಬಡವರ, ಸಾಮರ್ಥ್ಯ, ಸತ್ವವುಳ್ಳವರ ಪರವಾಗಿ ಆಳುವವರು (ಪ್ರಭುತ್ವ) ನಿಲ್ಲಬೇಕೆಂದು ಒತ್ತಾಯಿಸಿದರು. ಹಾಗಾಗಿ ರಾಮನಿಗೇ ನ್ಯಾಯವಿತರಣೆಯ ಹೊಣೆ ಹೊರಿಸಿದರು. ‘ರಾಮಧಾನ್ಯ’ವೆಂಬ ಮಾನ್ಯತೆಯನ್ನು ರಾಗಿಗೆ ಒದಗಿಸಿ ಅದಕ್ಕೊಂದು ಅಸ್ಮಿತೆಯನ್ನು ಆ ಮೂಲಕ ಅದು ರೂಪಕಾತ್ಮಕವಾಗಿ ಪ್ರತಿನಿಧಿಸುವ ದುಡಿಯುವ ತಳವರ್ಗಕ್ಕೆ ಸಾಮಾಜಿಕ ಸ್ಥಾನವನ್ನು ಒದಗಿಸಿಕೊಡಲು ಪ್ರಯತ್ನಿಸಿದರು.
ಸಮಾಜವು ಎತ್ತಿಹಿಡಿದಿದ್ದ ಪ್ರತ್ಯೇಕತೆ ಹಾಗೂ ಶ್ರೇಷ್ಠತೆಯ ಮಾದರಿಗಳನ್ನು ಧೈರ್ಯವಾಗಿ ಪ್ರಶ್ನಿಸಿದರು. ಆಹಾರದ ಭೇದ, ಶ್ರೇಷ್ಠತೆ-ಕನಿಷ್ಟತೆಗಳ ವ್ಯಸನವನ್ನು ಬಗೆಹರಿಸಲು, ವಸ್ತುನಿಷ್ಠವಾಗಿ ನ್ಯಾಯದಾನ ನೀಡುವ ಕುರಿತು ಪ್ರಭುತ್ವದ ಮಾದರಿಯೊಂದನ್ನು ತಿಳಿಸಿಕೊಟ್ಟರು. ಕನಕರು ಎಲ್ಲ ರೀತಿಯ ಅಧಿಕಾರ, ಕೀರ್ತಿ, ಹಮ್ಮುಗಳನ್ನು ಹಾಸ್ಯಮಾಡಿ ತಿರಸ್ಕರಿಸಿದ್ದಾರೆ. ‘ಎಲ್ಲಾರು ಮಾಡುವುದು ಹೊಟ್ಟೆಗಾಗಿ’ ಎಂಬ ಕೀರ್ತನೆಯಲ್ಲಿ ಒಬ್ಬ ಸಾಮಾನ್ಯ ಕಳ್ಳನಿರಲಿ, ವೇಶ್ಯೆಯಿರಲಿ, ವ್ಯಾಪಾರಿಯಿರಲಿ, ದಂಡನಾಯಕನಿರಲಿ, ಚಕ್ರವರ್ತಿಯಿರಲಿ ಎಲ್ಲಾರೂ ಮಾಡುವುದು ಹೊಟ್ಟೆಗಾಗಿ ಎಂದು ಆ ‘ಶ್ರೇಷ್ಠತೆ’ಯ ಮಾನದಂಡಗಳನ್ನೇ ಸಪಾಟು ಮಾಡಿ ಎಲ್ಲರನ್ನೂ ಸಾಲಾಗಿ ನಿಲ್ಲಿಸಿಬಿಟ್ಟಿದ್ದಾರೆ. ತಮ್ಮ ಕೀರ್ತನೆಗಳಲ್ಲಿ ‘ಆತ್ಮ ಯಾವಕುಲ, ಜೀವಯಾವಕುಲ’ ಎಂದು ಕುಲದ ಮೂಲವನ್ನು ಪ್ರಶ್ನಿಸಿ ಆತ್ಮವಿಮರ್ಶೆಗೆ ಕನ್ನಡಿಗರನ್ನು ಪ್ರೇರೇಪಿಸಿ, ಸಾಮಾಜಿಕ ನ್ಯಾಯಕ್ಕಾಗಿ ಅವರು ಕುದಿಗೊಂಡಿರುವುದು ಅವರ ಕೃತಿಗಳಲ್ಲಿ ಸ್ಪಷ್ಟವಾಗಿದೆ.
ಸಾಮಾನ್ಯನ ಬದುಕು ಹಸನಾಗಬೇಕೆಂಬ ಅವರ ಹಂಬಲದ ಪರಿಣಾಮವಾಗಿಯೇ ಇಂದು ಕನಕದಾಸರು ಇತರ ಎಲ್ಲ ದಾಸರಿಗಿಂತ ಭಿನ್ನವಾಗಿ ನಿಲ್ಲುತ್ತಾರೆ. ಮಹಾನ್ ಸಂತನಾಗಿ ನಮ್ಮ ಮುಂದಿದ್ದಾರೆ. ಭಕ್ತಿ ಅವರ ಕೀರ್ತನೆಗಳ ಸ್ಥಾಯಿಭಾವವಾಗಿದ್ದರೂ ಜೀವಪರ ಕಾಳಜಿ ವಿಶೇಷವಾಗಿರುವ ದಾರ್ಶನಿಕ ಅವರು. ಪರಮ ವೈಷ್ಣವ ಭಕ್ತಿ, ತೊರೆದು ಜೀವಿಸಲಾಗದ ಅನನ್ಯ ಪ್ರಪತ್ತಿ ಕನಕರಲ್ಲಿ ನೆಲೆಯಾಗಿದ್ದಾಗಲೂ ಹರಿಹರಭಕ್ತಿ, ಭಕ್ತರ ಬೆಸುಗೆ, ತತ್ವದ ಸಮನ್ವಯದ ಪರಸ್ಪರ ದ್ವೇಶವಿಲ್ಲದ, ಹಿತವಾದ ವಾತವರಣವನ್ನು ಅವರು ಬಯಸಿದರು. ಆ ಸಮನ್ವಯದ ಪಾಠವನ್ನು ‘ಮೋಹನತರಂಗಿಣಿ’ಯ ಮೂಲಕ, ತಮ್ಮ ಕೀರ್ತನೆಗಳ ಮೂಲಕ ಸಾರಿದರು. ಭಿನ್ನ ಲೋಕದೃಷ್ಟಿ, ಅನುಭಾವಿ ಪಂಥಗಳ ‘ಬಯಲ’ ಪರಿಕಲ್ಪನೆಗಳು ಕನಕರ ಲೋಕದೃಷ್ಟಿಯ ಮೂಲದ್ರವ್ಯವಾಗಿದ್ದುದರಿಂದಲೇ ಕನಕ ಕಿಂಡಿಯಲ್ಲಿ ಕಂಡದ್ದು ‘ಬಯಲ ಭಗವಂತನನ್ನು’.
ಆ ಬೆಳಕಿಂಡಿಯಲ್ಲಿ ಕನಕ ಕಂಡದ್ದು ಬಯಲೊಳಗೆ ಕರಗಬಲ್ಲ ಆಲಯವನ್ನು ಮತ್ತು ಭಗವಂತನನ್ನು. ಆಲಯದೊಳಗಿನ ನಿತ್ಯ ಪರಿವರ್ತನಶೀಲವಾದ ಜೀವನ್ಮುಖಿಯಾದ, ಬಹುಮುಖಿಯಾದ ಜೀವಚೈತನ್ಯಮೂರ್ತಿಯನ್ನು. ಗೋಡೆ, ಬಾಗಿಲುಗಳಿಲ್ಲದ ಒಳಗು-ಹೊರಗಿಲ್ಲದ ಆಚೆ-ಈಚೆಗಳಿಲ್ಲದ ನಿರಾಳವಾದ ಬಯಲಿಗೆ, ‘ಜನಸಾಮಾನ್ಯರ ಅಂಗ’ಳಕ್ಕೆ ಅವನನ್ನು ಕರೆತಂದು ಬಿಡುತ್ತಾರೆ. ಕನಕರ ಏಕಾಂತವು ಲೋಕಾಂತವಾಗುವುದು, ಅನೇಕಾಂತವಾಗುವುದು ಹೀಗೆ. ‘ಮೇಟೀಯ ಬಿಟ್ಟಾನ, ಕೋಟೆಯ ದಾಟ್ಯಾನ ಕಾಗಿನೆಲೆಯ ಹಾದಿ ಹಿಡಿದಾನ ಕನಕಪ್ಪ ಬಾಡಾದ ಮಾನ ಬೆಳಗ್ಯಾನ’ ಈ ಹಾಡು ಡಣಾಯಕ ತಿಮ್ಮಪ್ಪನು ಕನಕದಾಸನಾದ ‘ಆಗುವಿಕೆಯನ್ನು’ ಹಳ್ಳಿಯ ಹೈದನೊಬ್ಬ ಲೋಕದ ಬೆಳಕಾದದ್ದನೇ ಹೇಳುತ್ತಿದೆ. ಸಂಪತ್ತು, ಅಧಿಕಾರ, ಅಂತಸ್ತು, ಹಮ್ಮುಗಳ ಕೋಟೆಯನ್ನು ದಾಟದ ಹೊರತು ಸಾಗಬೇಕದ ದಾರಿ, ಸೇರಬೇಕಾದ ಗಮ್ಯ ಸ್ಪಷ್ಟವಾಗುವುದಿಲ್ಲವಲ್ಲವೇ.
ಕನಕರು ಆ ಕಾಲದ ದಾಸವರೇಣ್ಯರ ನಡುವೆ ತಮ್ಮ ಸ್ಥಾನಮಾನವನ್ನು ಗುರುತಿಸಿಕೊಳ್ಳುವುದರ ಜೊತೆಗೆ ಜನಸಾಮಾನ್ಯರ ಮಧ್ಯೆ ಇದ್ದುಕೊಂಡು ಅವರ ಬುದ್ಧಿಭಾವಗಳನ್ನು ತಿದ್ದುವುದಕ್ಕೆ ಪ್ರಯತ್ನಿಸುತ್ತ ಸಾಂತ್ವನ ಒದಗಿಸಿದರು. ಅವರ ಎಲ್ಲ ಬರಹದಲ್ಲಿಯೂ ಈ ಸಮಷ್ಠಿಪ್ರಜ್ಞೆ ಎದ್ದುಕಾಣುತ್ತದೆ. ತಮ್ಮ ಅನೇಕ ಕೃತಿಗಳಿಗೆ ಭಾರತೀಯ ಪುರಾಣೋಕ್ತ ಸನ್ನಿವೇಶಗಳನ್ನು ಆರಿಸಿಕೊಂಡರೂ ಅದರಲ್ಲಿ ಸಮಕಾಲೀನ ಸಂವೇದನೆಗಳನ್ನು ತಂದಿದ್ದಾರೆ. ಅಗತ್ಯಕ್ಕೆ ತಕ್ಕಂತೆ ಮಾರ್ಪಡಿಸಿಕೊಂಡಿದ್ದಾರೆ. ವಸ್ತು ಯಾವುದೇ ಆಗಿರಲಿ, ಅದರಲ್ಲಿ ಅವರ ವೈಚಾರಿಕತೆ ದೇಸೀಅಂತಃಸತ್ವ ಮಯ್ಪಡೆದಿದೆ. ಕಷ್ಟಗಳನ್ನು ಸಾಹಸ, ಧೈರ್ಯ, ತೀರ್ಮಾನ ತೆಗೆದುಕೊಳ್ಳುವಲ್ಲಿನ ಸ್ವಾತಂತ್ರ್ಯ, ಆತ್ಮವಿಶ್ವಾಸ, ವಿತರಣಗುಣ, ಧಾರಣಶಕ್ತಿಯಿಂದ ದಾಟುವುದು ಹೇಗೆ, ಹುಡಿಗೊಂಡ ಕುಟುಂಬವನ್ನು ಪುನಃ ಕಟ್ಟಿಕೊಳ್ಳುವುದು ಹೇಗೆ ಎಂಬುದನ್ನು, ‘ಸಹಬಾಳ್ವೆಯಲ್ಲಿ ಸಂತೋಷವಿದೆ’ ಎಂಬುದನ್ನು, ಅವೈಚಾರಿಕ ಮೂಢಾಚರಣೆಗಳನ್ನು ಬಿಡಬೇಕೆಂದೂ ತಮ್ಮ ಕಾವ್ಯ, ಕೀರ್ತನೆಗಳ ಮೂಲಕ ಆಪ್ತದನಿಯಲ್ಲಿ ತಿಳಿಸಿಕೊಟ್ಟಿದ್ದಾರೆ. ತಲ್ಲಣಿಸುವ ಜೀವಗಳಿಗೆ ಕನಕರು ಸಾಂತ್ವನ ಹೇಳಿದ್ದಾರೆ. ಸದಾ ಇತ್ಯಾತ್ಮಕ ಚಿಂತನೆಯನ್ನೂ, ಇತ್ಯಾತ್ಮಕಕಾರ್ಯವನ್ನೂ ಪ್ರೇರೇಪಿಸಿದ ಸಂತರಾಗಿದ್ದಾರೆ. ಸಮಾಜದ ಅಂಕುಡೊಂಕುಗಳನ್ನು ತಿದ್ದಿತೀಡಿದ ಪರಿವರ್ತಕರಾಗಿದ್ದಾರೆ. ‘ನಾನು ನೀನು ಎನ್ನದಿರು ಹೀನಮಾನವ’, ‘ಕುಲಕುಲವೆಂದು ಹೊಡೆದಾಡದಿರಿ’ಎಂದು ಆಗ್ರಹಿಸಿದ್ದಾರೆ. ಸಮಷ್ಠಿಯ ಹಿತಕ್ಕಾಗಿ ಸಮಬಾಳಿನ ಮುಕ್ತವಾತಾವರಣಕ್ಕಾಗಿ ತುಡಿದಿದ್ದಾರೆ.
ಕನಕ ಕನ್ನಡ ಮನಸ್ಸಿನ ವೈಚಾರಿಕ ಪರಂಪರೆಯ ಮಹತ್ವದ ಕೊಂಡಿ ಎಂಬುದರಲ್ಲಿ ಅನುಮಾನವಿಲ್ಲ. ಅಖಿಲ ಭಾರತಮಟ್ಟದ ವೈಚಾರಿಕ ದಾರ್ಶನಿಕ ಪರಂಪರೆಯಲ್ಲಿ ಇವರ ಸ್ಥಾನವನ್ನು ನಾವಿನ್ನೂ ಸರಿಯಾಗಿ ಗುರುತಿಸಬೇಕಾಗಿದೆ. ಅವರು ತೊರಿಕೊಟ್ಟ ಬೆಳಕಿಂಡಿಯಲ್ಲಿ ಕಣ್ಣಿಟ್ಟು ನೋಡಬೇಕಿದೆ.
ಕನಕದಾಸ ಜಯಂತಿ ಪ್ರಯುಕ್ತ ರಾಜ್ಯ ಸರ್ಕಾರ ನೀಡುವ ಕನಕಶ್ರೀ ಪ್ರಶಸ್ತಿಗೆ ಈ ಬಾರಿ ಹಿರಿಯ ವಿದ್ವಾಂಸ ವ್ಯಾಸನಕೆರೆ ಪ್ರಭಂಜನಾಚಾರ್ಯರು ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು 5 ಲಕ್ಷ ರೂ., ಕನಕದಾಸರ ಪುತ್ಥಳಿ ಮತ್ತು ಫಲಕವನ್ನು ಒಳಗೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನವೆಂಬರ್ 18ರಂದು ಬೆಂಗಳೂರಿನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ವೇದ, ಉಪನಿಷತ್ತುಗಳು, ರಾಮಾಯಣ, ಮಹಾಭಾರತ, ಭಾಗವತಕ್ಕೆ ಸಂಬಂಧಿಸಿದ ಅನೇಕ ಪುಸ್ತಕಗಳನ್ನು ಪ್ರಭಂಜನಾಚಾರ್ಯರು ರಚಿಸಿದ್ದಾರೆ.