ಪ್ರಾದೇಶಿಕ ಭಾಷಾ ಸೊಗಡಿನ ಸೇಫ್ ಲಾಕರ್ ವಾಣಿ

ಪ್ರಾದೇಶಿಕ ಭಾಷಾ ಸೊಗಡಿನ ಸೇಫ್ ಲಾಕರ್ ವಾಣಿ
Published on
special article

ನಾನು ಹೊಸತಾಗಿ ನೌಕರಿಗೆ ಸೇರಿದಾಗ ತರಬೇತಿಗೆಂದು ಬೇರೆ ರಾಜ್ಯಕ್ಕೆ ಕಳಿಸಿದ ನಮ್ಮ ಬ್ಯಾಚು ಒಂಥರಾ ಪ್ಯಾನ್ ಕರ್ನಾಟಕದ ರೀತಿ ಇತ್ತು. ರಾಜ್ಯದ ವಿವಿಧ ಮೂಲೆಗಳಿಂದ ಬೇರೆ-ಬೇರೆ ಹಿನ್ನೆಲೆಗಳಿಂದ ಬಂದವರು ಮಾತನಾಡುವ ಕನ್ನಡದ ಆಡುಭಾಷೆ ಹಲವು ಬಾರಿ ನಮ್ಮ ನಮ್ಮಲ್ಲೇ ಗೊಂದಲವನ್ನು ಉಂಟುಮಾಡುತ್ತಿತ್ತು. ಒಮ್ಮೆ ಬೆಂಗಳೂರು ಮೂಲದ ಹುಡುಗನೊಬ್ಬ ತನ್ನ ರೂಮ್ ಗುಡಿಸುತ್ತಿದ್ದ. ಅದನ್ನು ನೋಡಿದ ವಿಜಯಪುರ ಮೂಲದ ಗೆಳೆಯ ‘ಎನ್ಪಾ ಜಬರ್ದಸ್ತ್ ಸಫಾಯಿ ನಡದದಲ್ಲ’ ಅಂತಂದ. ಆತ ಹೇಳಿದ ಮಾತು ಒಂದೂ ಅರ್ಥವಾಗದೆ ಪಿಳಿಪಿಳಿ ಕಣ್ಣು ಬಿಟ್ಟ ಬೆಂಗಳೂರಿಗ ‘ಎನ್ಹೇಳ್ದೇ ಮಚ್ಚಾ ಗೊತ್ತಾಗ್ಲಿಲ್ಲ’ ಅಂದಾಗ ಮತ್ತೆ ಅದೇ ಪ್ರಶ್ನೆ ಆ ಕಡೆಯಿಂದ ಬಂತು. ಊಹೂಂ ಆತನಿಗೆ ಈ ಸಲವೂ ಒಂದಕ್ಷರವೂ ಗೊತ್ತಾಗಲಿಲ್ಲ. ‘ಹೋಗ್ಲಿ ಬಿಡು’ ಅಂತಂದು ಇಬ್ಬರೂ ರಾಜಿ ಆದರು.

ಹುಬ್ಬಳ್ಳಿಯ ನನ್ನ ಗೆಳೆಯನೊಬ್ಬ ಹೊಸದಾಗಿ ಮೈಸೂರಿನಲ್ಲಿ ನೌಕರಿಗೆ ಸೇರಿಕೊಂಡಿದ್ದ. ತನ್ನ ರೂಮಿನಲ್ಲಿ ಅಡುಗೆ ಮಾಡಿಕೊಳ್ಳುತ್ತಿದ್ದ ಆತನಿಗೆ ಅಂದು ಆಮ್ಲೇಟ್ ಮಾಡುವ ಮನಸಾಗಿ ತನ್ನ ರೂಮಿನ ಪಕ್ಕದಲ್ಲಿದ್ದ ದಿನಸಿ ಅಂಗಡಿಗೆ ಹೋಗಿ ‘ಐದು ತತ್ತಿ ಕೊಡ್ರಿ’ ಅಂದ. ಒಂದು ಕ್ಷಣ ಯೋಚಿಸಿದ ಅಂಗಡಿಕಾರ ‘ಅದು ಹೇಗಿರುತ್ತೆ? ಮೊದಲ ಬಾರಿ ಕೇಳ್ತಿದ್ದೀನಿ ನಮ್ಮಲ್ಲಿಲ್ಲ ಸಾರ್’ ಅಂತಂದ. ಇವನು ಬಿಟ್ಟಾನೆಯೇ ಮೊದಲೇ ಆಮ್ಲೇಟು ತಿನ್ನೋ ತಲಬು, ‘ಅದೇರಿ ಕೋಳಿ ಹಾಕೆôತಲ್ಲ’ ಅಂತನ್ನುತ್ತಿದ್ದರೆ ಅಂಗಡಿಯವನಿಗೆ ಮತ್ತಷ್ಟು ಗೊಂದಲ. ಕೊನೆಗೂ ಅದು ಹೇಗೋ ಅಂಗಡಿಯೊಳಗೆ ಟ್ರೇನಲ್ಲಿ ಇಟ್ಟಿದ್ದ ಮೊಟ್ಟೆಯನ್ನು ತತ್ತಿಯೆಂದು ಅಂಗಡಿಯವನಿಗೆ ಒಪ್ಪಿಸಿ ಮನೆಗೆ ತರುವಷ್ಟರಲ್ಲಿ ನನ್ನ ಫ್ರೆಂಡು ಸುಸ್ತೋಸುಸ್ತು.

ನಾವು ಶಾಲೆಯಲ್ಲಿದ್ದಾಗ ಒಂದುದಿನ ಕ್ಲಾಸಿನಲ್ಲಿ ಮಾಸ್ತರರು, ‘ನಾಳೆ ತೋಂಡಿ ಪರೀಕ್ಷೆ ಐತಿ. ತಯಾರಾಗಿ ಬರ್ರೀ’ ಅಂತ ಘೊಷಣೆ ಮಾಡಿದರು. ಅದರ ಹಿಂದಿನ ವಾರವಷ್ಟೇ ನಮ್ಮ ಕ್ಲಾಸಿಗೆ ಸೇರಿಕೊಂಡಿದ್ದ ಚಿಂತಾಮಣಿಯ ಹುಡುಗನೊಬ್ಬ ಅದನ್ನೇ ಪಾಟಿಯಲ್ಲಿ ಬರೆದುಕೊಂಡು ಹೋಗಿ ತಾಯಿಹತ್ತಿರ ಹೇಳಿದ್ದಾನೆ. ತಾಯಿಗೂ ಇದ್ಯಾವ ಪರೀಕ್ಷೆಯಂತ ಗೊತ್ತಾಗದೆ ಮಗನಿಗೆ ಮತ್ತಷ್ಟು ವಿವರ ಕೇಳಿದ್ದಾಳೆ. ಏನೂ ಅರ್ಥವಾಗದ ಆತ ಗೋಳೋ ಅಂತ ಅಳಲು ಶುರುಮಾಡಿದ್ದೇ ತಾಯಿ ಮತ್ತಷ್ಟು ಗಾಬರಿಯಾಗಿ ಮಗನನ್ನು ಕರೆದುಕೊಂಡು ನಮ್ಮ ಮನೆಗೆ ಧಾವಿಸಿ ನನಗೆ ಮತ್ತು ನನ್ನ ಅಮ್ಮನಿಗೆ ಕರೆದು ವಿಚಾರಿಸಿದಾಗ ಈ ತೋಂಡಿ ಮುಖತಃ ಪ್ರಶ್ನೋತ್ತರ ಪರೀಕ್ಷೆ ಎಂಬುದು ಗೊತ್ತಾಗಿ ನಿಟ್ಟುಸಿರು ಬಿಟ್ಟಿದ್ದಾಳೆ. ಉತ್ತರ ಕನ್ನಡದ ಆಡುಭಾಷೆಯಲ್ಲಿ ಅಲ್ಲಲ್ಲಿ ನುಸುಳುವ ಕೊಂಕಣಿ ಪದಗಳ ಪ್ರಭಾವ ಚಿಂತಾಮಣಿಯ ಕೂಸಿಗೆ ಚಿಂತೆಗೆ ದೂಡಿ ಒಂದಷ್ಟು ಗೊಂದಲ ಉಂಟುಮಾಡಿತ್ತು.

‘ವಿವಿಧತೆಯಲ್ಲಿ ಏಕತೆ’ ಏನೆಂಬುದನ್ನು ನಮ್ಮ ಮಕ್ಕಳಿಗೆ ಅರ್ಥೈಸಲು ಜಾಸ್ತಿ ದೂರ ಹೋಗುವುದು ಬೇಕಿಲ್ಲ. ಅವರ ಕ್ಲಾಸಿನ ಮಕ್ಕಳ ಆಡುಭಾಷಾ ಸೊಗಡಿನ ಉದಾಹರಣೆಯಷ್ಟೇ ಸಾಕು. ಸುಮಾರು ಒಂದು ಸಾವಿರದ ನಾಲ್ಕುನೂರಿನಷ್ಟು ಭಾಷೆಗಳನ್ನು ಆಡುವ ಭಾರತದಲ್ಲಿ ಆಡುಭಾಷೆಯ ಸೊಗಡಿನಿಂದಲೇ ಅವರ ಊರನ್ನು ಗುರುತಿಸುವಷ್ಟು ವೈವಿಧ್ಯಮಯ ಸಂಸ್ಕೃತಿ ನಮ್ಮದು. ನಮ್ಮ ಕನ್ನಡವನ್ನೇ ಗಮನಿಸಿ. ಬೆಂಗಳೂರಿನ ಕಾಪೋರೇಟ್ ಕನ್ನಡ, ಮೈಸೂರಿನ ಸಾಂಪ್ರದಾಯಿಕ ಕನ್ನಡ, ಕರಾವಳಿಯ ಗ್ರಾಂಥಿಕ ಕನ್ನಡ, ಉತ್ತರ ಕರ್ನಾಟಕದ ಜವಾರಿ ಕನ್ನಡ... ಇಷ್ಟೊಂದು ವೈವಿಧ್ಯತೆಯಿರುವ ಕನ್ನಡದಲ್ಲೂ ಮತ್ತಷ್ಟು ಪ್ರಾದೇಶಿಕ ವೈವಿಧ್ಯತೆಯಿದೆ. ಧಾರವಾಡದ ಅಪ್ಪಟ ಉತ್ತರಕರ್ನಾಟಕ ಕನ್ನಡಕ್ಕೂ ವಿಜಯಪುರದ ಪಕ್ಕಾ ಜವಾರಿ ಕನ್ನಡಕ್ಕೂ ಬಹಳಷ್ಟು ವೈವಿಧ್ಯತೆಯಿದೆ. ಹಾಗೆಯೇ ಢಾಳಾಗಿ ಮರಾಠಿ ಮತ್ತು ಉರ್ದುವಿನ ಛಾಯೆಯಿರುವ ಬೀದರನ ಕನ್ನಡಕ್ಕೂ, ತನ್ನದೇ ಛಾಪು ಹೊಂದಿರುವ ಕಲಬುರಗಿಯ ಕನ್ನಡಕ್ಕೂ ಅಜಗಜಾಂತರ. ಅದಿರಲಿ ಕರ್ನಾಟಕದ ಕೆಲ ಭಾಗಕ್ಕಷ್ಟೇ ಸೀಮಿತವಾಗಿರುವ ಕೊಂಕಣಿಯಂತಹ ಭಾಷೆಯನ್ನೇ ನೋಡಿ.

ಹಿಂದು, ಕ್ರಿಶ್ಚಿಯನ್ ಮತ್ತು ಮುಸ್ಲಿಂ ಹೀಗೆ ಮೂರೂ ಪ್ರಮುಖ ಜಾತಿಗಳ ಸುಮಾರು ನಲವತ್ತಾರು ಪಂಗಡಗಳ ಮಾತೃಭಾಷೆಯಾಗಿರುವ ಆ ಭಾಷೆಯಲ್ಲಿ ಭಟ್ಕಳದ ನವಾಯಿತರಾಡುವ ಕೊಂಕಣಿಗೂ ಜೋಯಿಡಾದ ಕುಣಬಿಗಳು ಮಾತನಾಡುವ ಕೊಂಕಣಿಗೂ ಒಬ್ಬರಿಗೊಬ್ಬರು ಅರ್ಥಮಾಡಿಕೊಳ್ಳದಷ್ಟು ಫರಕು. ಆದರೆ, ಜಾಗತೀಕರಣದ ಭರಾಟೆಯಲ್ಲಿ ಆಡುಭಾಷೆಗಳು ತಮ್ಮತನವನ್ನು ಕಳೆದುಕೊಳ್ಳುತ್ತಿವೆ ಎಂಬ ಕೂಗು ಇತ್ತೀಚೆಗೆ ಹೆಚ್ಚು ಹೆಚ್ಚು ಕೇಳಿಬರುತ್ತಿದೆ. ಇವುಗಳನ್ನು ಕಾಪಿಟ್ಟುಕೊಳ್ಳಬೇಕೆಂದು ಭಾಷಾಪಂಡಿತರು ಆಗಾಗ ಹೇಳುತ್ತಿರುತ್ತಾರೆ. ಪರಿಸ್ಥಿತಿ ಹೀಗಿರುವಾಗ ‘ಭಾರತೀಯ ವಿಜ್ಞಾನ ಸಂಸ್ಥೆ’ ನಡೆಸುತ್ತಿರುವ ಕಾರ್ಯಕ್ರಮವೊಂದು ಈ ನಿಟ್ಟಿನಲ್ಲಿ ಗಮನಾರ್ಹವಾಗಿದೆ.

2022ರ ಡಿಸೆಂಬರ ತಿಂಗಳಿನಲ್ಲಿ ಐಟಿ ದಿಗ್ಗಜ ಗೂಗಲ್ ಸಂಸ್ಥೆಯು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಸಹಯೋಗದಲ್ಲಿ ‘ವಾಣಿ’ ಎಂಬ ಕಾರ್ಯಕ್ರಮವೊಂದನ್ನು ಆಯೋಜಿಸಿರುವುದಾಗಿ ಘೊಷಿಸಿತು. ಯಾಂತ್ರಿಕ ಬುದ್ಧಿಮತ್ತೆಯ ಸವಲತ್ತುಗಳನ್ನು ಭಾರತದ ಎಲ್ಲ ನಾಗರಿಕರಿಗೂ ಅವರದೇ ಭಾಷೆಯಲ್ಲಿ ತಲುಪಿಸುವ ನಿಟ್ಟಿನಲ್ಲಿ ಗೂಗಲ್ ಸಂಸ್ಥೆ ಇಟ್ಟಿರುವ ಪ್ರಮುಖ ಹೆಜ್ಜೆಯಿದು. ಈ ಕಾರ್ಯಕ್ರಮದಡಿಯಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯ ಪ್ರತಿನಿಧಿಗಳು ಭಾರತದ ಎಲ್ಲ 800 ಜಿಲ್ಲೆಗಳಲ್ಲಿ ಸಂಚರಿಸಿ, ಅಲ್ಲಿನ ಜನರನ್ನು ಸಂದರ್ಶಿಸಿ ಅವರ ಆಡುಭಾಷೆಯನ್ನು ರೆಕಾರ್ಡ್ ಮಾಡಿಕೊಂಡು ಅದನ್ನು ಒಂದೇ ಕಡೆ ಸಂಗ್ರಹಿಸುವುದು ಕಾರ್ಯಕ್ರಮದ ಮೂಲ ಉದ್ದೇಶ.

ಭಾರತೀಯ ವಿಜ್ಞಾನ ಸಂಸ್ಥೆಯು ಹಾಕಿಕೊಂಡಿರುವ ಕ್ರಿಯಾಯೋಜನೆಯಂತೆ ಸಂಸ್ಥೆಯ ಪ್ರತಿನಿಧಿಗಳು 2022ರಿಂದ ಫೀಲ್ಡಿಗಿಳಿದು ದೇಶದ ಉದ್ದಗಲದ ವಿವಿಧ ಸಾಮಾಜಿಕ, ಆರ್ಥಿಕ ಹಿನ್ನೆಲೆಯವರನ್ನು, ಎಲ್ಲ ಪ್ರಾಯದವರನ್ನೂ ಸೇರಿಸುವಂತೆ ಸುಮಾರು ಹತ್ತುಲಕ್ಷ ಜನರನ್ನು ಸಂದರ್ಶಿಸಿ ಒಂದೂವರೆ ಲಕ್ಷ ಗಂಟೆಯಷ್ಟು ಅವಧಿಯ ಮಾತುಗಳನ್ನು ರೆಕಾರ್ಡ್ ಮಾಡಿಕೊಳ್ಳುವ ಗುರಿಯಿಂದ ಎಲ್ಲೆಡೆ ಓಡಾಡುತ್ತಿದ್ದಾರೆ. ವಿಷಯದ ಸಾಮ್ಯತೆಗಾಗಿ ಈ ಪ್ರತಿನಿಧಿಗಳು ಒಂದು ಚಿತ್ರವನ್ನೋ ಅಥವಾ ಒಂದು ವಿಷಯವನ್ನೋ ಕೊಟ್ಟು ಸಾರ್ವಜನಿಕರಿಗೆ ಅದರ ಬಗ್ಗೆ ಮಾತನಾಡುವಂತೆ ಸೂಚಿಸುತ್ತಾರೆ. ಇವರಿಂದ ರೆಕಾರ್ಡ್ ಆದ ಮಾತುಗಳಿಗೆ ಆಯಾ ಪ್ರದೇಶದ ಪಿನ್​ಕೋಡ್​ನ್ನು ಮ್ಯಾಪ್ ಮಾಡಿ ‘ವಾಣಿ’ಯ ಮೂಲ ಸರ್ವರ್​ಗೆ ಅಪ್​ಲೋಡ್ ಮಾಡಲಾಗುತ್ತದೆ. ಕಳೆದ ಎರಡು ವರ್ಷಗಳಿಂದ ನಡೆಯುತ್ತಿರುವ ‘ವಾಣಿ’ಯ ಕೆಲಸ ಇದೀಗ ಅಂತಿಮ ಹಂತಕ್ಕೆ ಬಂದಿದ್ದು, ಶೀಘ್ರದಲ್ಲೇ ಬಳಕೆಗೆ ಲಭ್ಯವಾಗಲಿದೆ.

ಭಾರತೀಯ ವಿಜ್ಞಾನ ಸಂಸ್ಥೆಯು ತನ್ನ ಯಾಂತ್ರಿಕ ಬುದ್ಧಿಮತ್ತೆ ಮತ್ತು ಯಂತ್ರಮಾನವ ಶಾಸ್ತ್ರ (ಆರ್ಟ್ ಪಾರ್ಕ್) ಯೋಜನೆಯಡಿಯಲ್ಲಿ ನಮ್ಮ ಭಾರತದ ಪ್ರಾದೇಶಿಕ ಭಾಷೆಗಳ ಮೂಲಕವೂ ತಂತ್ರಜ್ಞಾನವನ್ನು ಬಳಕೆದಾರರಿಗೆ ತಲುಪಿಸುವತ್ತ ಶ್ರಮಿಸುತ್ತಿದೆ. ಅಸಲಿಗೆ ‘ವಾಣಿ’ಯ ಪರಿಕಲ್ಪನೆ ಹುಟ್ಟಿದ್ದು ಆರ್ಟ್ ಪಾರ್ಕ್ ಯೋಜನೆಯಡಿಯಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯು ಅಭಿವೃದ್ಧಿ ಪಡಿಸುತ್ತಿರುವ ಖ್ಗಖಕಐಘ ಎಂಬ ಪರಿಯೋಜನೆಯ ಸಮಯದಲ್ಲಿ. ಸಿಂಥಸೈಜಿಂಗ್ ಸ್ಪೀಚ್ ಇನ್ ಇಂಡಿಯನ್ ಲಾಂಗ್ವೇಜಸ್ (ಸೈಸ್ಪಿನ್) ಎಂಬುದು ಭಾರತೀಯ ಭಾಷೆಗಳನ್ನು ಟೆಕ್ಸ್ಟ್ ಟು ಸ್ಪೀಚ್ ಅಂದರೆ ಮಾತುಗಳನ್ನು ಪಠ್ಯವನ್ನಾಗಿ ಪರಿವರ್ತಿಸಲು ಹಮ್ಮಿಕೊಂಡಿರುವ ಪರಿಯೋಜನೆ. ಇದರನ್ವಯ ಮೊದಲಿಗೆ ಕನ್ನಡ, ಹಿಂದಿ, ಬಂಗಾಳಿ, ಮರಾಠಿ, ತೆಲುಗು, ಭೋಜಪುರಿ, ಛತ್ತೀಸಘರಿ, ಮಗಧಿ ಮತ್ತು ಮೈಥಿಲಿ ಈ ಒಂಬತ್ತು ಭಾರತೀಯ ಭಾಷೆಗಳನ್ನು ಆಯ್ದುಕೊಂಡು ಅವುಗಳನ್ನು ಯಾಂತ್ರಿಕ ಬುದ್ಧಿಮತ್ತೆಯ ಸಹಾಯದಿಂದ ಮಾತುಗಳನ್ನು ಪಠ್ಯವನ್ನಾಗಿ ಪರಿವರ್ತಿಸುವ ತಂತ್ರಾಂಶವನ್ನು ರೂಪಿಸಲಾಗುತ್ತಿದೆ. ಈ ಒಂಬತ್ತು ಭಾಷೆಗಳನ್ನಾಡುವ ಸುಮಾರು ಅರವತ್ತು ಕೋಟಿ ಜನರಿಗೆ ಈ ಯೋಜನೆಯ ಲಾಭ ದೊರಕುವುದೆಂದು ಅಂದಾಜಿಸಲಾಗಿದೆ.

ಟೆಕ್ಸ್ಟ್ ಟು ಸ್ಪೀಚ್ ದುಭಾಷಿಯ ತಂತ್ರಜ್ಞಾನದ ಸಹಾಯದಿಂದ ಆರೋಗ್ಯ, ವಿದ್ಯಾಭ್ಯಾಸ, ಹಣಕಾಸಿನ ಜೊತೆಗೆ ಎಲ್ಲ ಮೂಲಸೌಕರ್ಯಗಳಲ್ಲಿ ಬಳಸಲಾಗುತ್ತಿರುವ ನೂತನ ತಂತ್ರಜ್ಞಾನಗಳನ್ನು ಅನಕ್ಷರಸ್ಥರಿಗೂ ತಲುಪಿಸುವುದು ಈ ಯೋಜನೆಯ ಮೂಲಉದ್ದೇಶ. ಒಂದು ಸದಾಶಯದಿಂದ ಆರಂಭಗೊಂಡ ಈ ಯೋಜನೆಯ ಕಾರ್ಯ ಮುಂದುವರಿದಂತೆ ನೂತನ ತಂತ್ರಾಂಶವನ್ನು ಅಭಿವೃದ್ಧಿಪಡಿಸಲು ಮುಖ್ಯವಾಗಿ ಬೇಕಾಗಿದ್ದ ವಾಕ್ ರೂಪದಲ್ಲಿರುವ ಭಾರತೀಯ ಭಾಷೆಗಳ ದತ್ತಾಂಶದ ಕೊರತೆ ದೊಡ್ಡ ತೊಡಕಾಯಿತು. ಈ ಕಾರಣಕ್ಕೆ ಪರಿಯೋಜನೆ ಕೊಂಚ ವಿಳಂಬವಾದರೂ ಆ ಎಲ್ಲ ಸವಾಲುಗಳನ್ನೂ ಮೆಟ್ಟಿ ಇದೀಗ ತಂಡವು ರೂಪಿಸಿರುವ ಸೈಸ್ಪಿನ್ ಕೊನೆಯ ಹಂತದಲ್ಲಿದೆ. ಆದರೆ ಇದನ್ನು ಅಭಿವೃದ್ಧಿಪಡಿಸುವ ಸಮಯದಲ್ಲಿ ತಂಡಕ್ಕೆ ಅತಿದೊಡ್ಡ ತೊಡಕಾಗಿದ್ದ ಭಾರತೀಯ ಭಾಷೆಗಳ ವಾಕ್ ದತ್ತಾಂಶದ ಕೊರತೆಯನ್ನು ‘ವಾಣಿ’ಯ ಮೂಲಕ ಬಗೆಹರಿಸುವ ಯೋಚನೆ ಚಿಂತಕರ ಚಾವಡಿಯದ್ದು.

ಜಾಗತಿಕವಾಗಿ ಗಮನಿಸಿದರೆ ನಮ್ಮ ಭಾರತೀಯ ಪ್ರಾದೇಶಿಕ ಭಾಷೆಗಳನ್ನು ಮಾತನಾಡುವವರಿಗಿಂತ ಕಡಿಮೆ ಸಂಖ್ಯೆಯ ಜನ ಮಾತನಾಡುವ ಹಲವು ಭಾಷೆಗಳು ಉತ್ತಮ ವಾಕ್ ದತ್ತಾಂಶವನ್ನು ಹೊಂದಿರುವ ಕಾರಣಕ್ಕೆ ಈಗಾಗಲೇ ತಮ್ಮ ಭಾಷೆಯಲ್ಲಿ ನೂತನ ತಂತ್ರಜ್ಞಾನಗಳ ಆವಿಷ್ಕಾರಗಳನ್ನು ಬಳಸುವಲ್ಲಿ ಮುಂದಿದ್ದಾರೆ. ಒಮ್ಮೆ ‘ವಾಣಿ’ ಯೋಜನೆ ಪೂರ್ಣವಾದ ಮೇಲೆ ಸಂಪೂರ್ಣ ದತ್ತಾಂಶವು ಎಲ್ಲ ಬಳಕೆದಾರರಿಗೆ ಉಚಿತವಾಗಿ ಮತ್ತು ಮುಕ್ತವಾಗಿ ಲಭ್ಯವಾಗಲಿದೆಯೆಂದು ಗೂಗಲ್ ಹೇಳಿದೆ. ಇದರಿಂದ ಎಲ್ಲ ತಂತ್ರಾಂಶಗಳ ವಿನ್ಯಾಸಕಾರರಿಗೆ ಭಾರತೀಯ ಪ್ರಾದೇಶಿಕ ಬಳಕೆದಾರರನ್ನು ತಲುಪುವವಲ್ಲಿದ್ದ ದೊಡ್ಡ ಅಡ್ಡಿಯೊಂದು ನಿವಾರಣೆಯಾಗಿ ‘ವಾಣಿ’ಯ ಮೂಲಕ ತಮ್ಮ ಉತ್ಪನ್ನಗಳನ್ನು ಪ್ರಾದೇಶಿಕ ಬಳಕೆದಾರರಿಗೆ ಅವರಾಡುವ ಭಾಷಾ ಸೊಗಡಿನಲ್ಲೇ ಪರಿಣಾಮಕಾರಿಯಾಗಿ ತಲುಪಿಸಲು ನೆರವಾಗಲಿದೆ. ತಂತ್ರಜ್ಞಾನವನ್ನು ಭಾರತದ ಕಟ್ಟಕಡೆಯ ಅನಕ್ಷರಸ್ಥ ನಾಗರಿಕನಿಗೂ ತಲುಪಿಸಲು ಏಣಿಯನ್ನು ‘ವಾಣಿ’ಯು ಹಾಕಿಕೊಡುವ ಜೊತೆಯಲ್ಲೇ ನಮ್ಮ ದೇಶದ ಹೆಮ್ಮೆಯಾಗಿರುವ ಭಾಷಾವೈವಿಧ್ಯವನ್ನು ಒಂದೆಡೆ ಕಾಪಿಡುವ ಸೇಫ್ ಲಾಕರ್ ಥರ ಕಾರ್ಯನಿರ್ವಹಿಸಲಿದೆ. ಹುಬ್ಬಳ್ಳಿಯಂವ ಮುಂದೊಂದು ದಿನ ತನ್ನ ಮೊಬೈಲಿನಲ್ಲಿ ತತ್ತಿ ಅಂತಂದಾಗ ‘ವಾಣಿ’ಯ ಸಹಾಯದಿಂದ ರೂಪಿತವಾಗಿರುವ ತಂತ್ರಾಂಶದಿಂದ ಪರದೆಯ ಮೇಲೆ ಕೋಳಿಮೊಟ್ಟೆ ಮೂಡಿ ಮೈಸೂರಿಗನಿಗೆ ಅರ್ಥೈಸುವುದು ಸರಳವಾಗಿ ಆಮ್ಲೇಟ್ ಮಾಡುವ ಕಾರ್ಯ ಸುರಳಿತವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net