ಅಮ್ಮ ದಾನಪತ್ರದ ಮೂಲಕ ಮೊದಲು ನನಗೆ ಆಸ್ತಿ ಬರೆದಿದ್ದು, ಈಗ ಅಕ್ಕನಿಗೆ ಬರೆದಿದ್ದಾರೆ- ಯಾರಿಗೆ ಸಿಗುತ್ತೆ?

nyayadevate
Published on
ನಮ್ಮ ತಾಯಿಗೆ ಅವರ ತವರಿನಿಂದ ದಾನ ಪತ್ರದ ಮೂಲಕ ಬಂದ ಆಸ್ತಿಯನ್ನು ನನಗೆ ವಿಲ್‌ ಮಾಡಿದ್ದಾರೆ. ನನಗೆ ಮದುವೆ ಆಗಿಲ್ಲ . ನಮ್ಮ ತಾಯಿಯನ್ನು ನಮ್ಮ ಅಕ್ಕ ಕರೆದುಕೊಂಡು ಹೋಗಿ ಅವರ ತಲೆ ಕೆಡಿಸಿ, ತನಗೆ ಮತ್ತೆ ವಿಲ್‌ ಮಾಡಿಸಿಕೊಂಡಿದ್ದಾಳೆ. ನಮ್ಮ ತಾಯಿ ಇನ್ನೂ ಬದುಕಿದ್ದಾರೆ. ನನ್ನ ವಿಲ್‌ ಮೊದಲಾಗಿರುವುದರಿಂದ ನನಗೆ ಆಸ್ತಿಯಲ್ಲಿ ಅಧಿಕಾರ ಹೆಚ್ಚು ಅಲ್ಲವೇ? ನಾನು ಈಗ ಆ ಮನೆಗೆ ಹೋಗಿ ನಮ್ಮ ತಾಯಿಯನ್ನು ಅಕ್ಕ ಭಾವನನ್ನು ಹೊರಗೆ ಹಾಕಲು ಕಾನೂನು ಸಹಾಯ ಪಡೆಯಬಹುದೇ?

ಉತ್ತರ: ನಿಮ್ಮ ತಾಯಿಗೆ ಅವರ ತವರಿನ ಕಡೆಯಿಂದ ದಾನ ಪತ್ರದ ಮೂಲಕ ಬಂದ ಆಸ್ತಿ, ಅವರ ಪ್ರತ್ಯೇಕ ಆಸ್ತಿ ಆಗುತ್ತದೆ, ಅವರು ಬದುಕಿರುವವರೆಗೆ ಅವರೇ ಅದರ ಸಂಪೂರ್ಣ ಮಾಲೀಕರು. ಯಾರಿಗೆ ಬೇಕಾದರೂ ಕೊಡಬಹುದು. ಏನು ಬೇಕಾದರೂ ಮಾಡಬಹುದು.

ಇನ್ನು ವಿಲ್‌ ವಿಚಾರಕ್ಕೆ ಬಂದರೆ, ಒಬ್ಬ ವ್ಯಕ್ತಿ ಎಷ್ಟು ಸಲ ಬೇಕಾದರೂ ವಿಲ್‌ ಬದಲಾಯಿಸಬಹುದು. ತನ್ನ ಜೀವಿತ ಕಾಲದಲ್ಲಿ ಮಾಡಿದ ಕಡೆಯ ವಿಲ್‌ ಮಾತ್ರ ಸಿಂಧುವಾಗುತ್ತದೆ. ಹೀಗಾಗಿ ನಿಮ್ಮ ಪರ ಇರುವ ವಿಲ್‌ ಮೊದಲೇ ಮಾಡಿದ್ದರೂ ನಿಮಗೆ ಯಾವ ಹಕ್ಕೂ ಬರುವುದಿಲ್ಲ. ಮೇಲಾಗಿ ನಿಮ್ಮ ತಾಯಿ ಬದುಕಿರುವಾಗ ಅವರು ವಿಲ್‌ ಮಾಡಿದ್ದಾರೆ ಎನ್ನುವ ಆಧಾರದ ಮೇಲೆ ನೀವಾಗಲೀ ನಿಮ್ಮ ಅಕ್ಕನಾಗಲೀ ಆಸ್ತಿಯ ಮೇಲೆ ಹಕ್ಕು ಚಲಾಯಿಸಲು ಆಗುವುದಿಲ್ಲ. ನೀವು ನಿಮ್ಮ ತಾಯಿಯ ಪ್ರೀತಿ ವಿಶ್ವಾಸ ಗೆದ್ದುಕೊಳ್ಳಲು ಪ್ರಯತ್ನಿಸಿ, ಆ ನಂತರ ಆಸ್ತಿಯನ್ನು ಅವರಿಂದ, ಅವರ ಸ್ವ ಇಚ್ಛೆಯಿಂದ ರಿಜಿಸ್ಟರ್‌ ಮಾಡಿಸಿಕೊಳ್ಳುವುದು ಒಳ್ಳೆಯದು.

ಕಾನೂನಿಗೆ ಸಂಬಂಧಿಸಿದ ಇತರ ಪ್ರಶ್ನೋತ್ತರಗಳಿಗಾಗಿ ಈ ಲಿಂಕ್​ ಕ್ಲಿಕ್ಕಿಸಿ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net