

ಮನೆ ಕಟ್ಟುವವರ ಬಹುತೇಕ ಮಂದಿಯ ಕಷ್ಟ ದೇವರಿಗೇ ಪ್ರೀತಿ. ಒಬ್ಬೊಬ್ಬರದ್ದು ಒಂದೊಂದು ತೆರನಾದ ಎಕ್ಸ್ಪೀರಿಯನ್ಸ್…. ಅದಕ್ಕೇ ತಾನೆ ಮನೆ ಕಟ್ಟಿನೋಡು, ಮದುವೆ ಮಾಡಿ ನೋಡು ಎನ್ನುವುದು… ಹೀಗೆ ಮನೆ ಕಟ್ಟಿರುವವರ ಅನುಭವಗಳನ್ನು ಹಂಚಿಕೊಳ್ಳುವಂತೆ ವಿಜಯವಾಣಿ ನೀಡಿದ ಕರೆಗೆ ಬಂದಿದ್ದ ಪತ್ರಗಳ ಪೈಕಿ ಆಯ್ದ ಕೆಲವು ಪತ್ರಗಳನ್ನು ಇಲ್ಲಿ ದಿನವೂ ಪ್ರಕಟಿಸಲಾಗುತ್ತಿದೆ….
| ಬಸವರಾಜ ಮಲ್ಲಪ್ಪ ಕಡೇತೋಟದ, ಹುಬ್ಬಳ್ಳಿ
ಒಂದಿಷ್ಟು ಕಾಸು ಕೈಯಲ್ಲಿದ್ದುದರಿಂದ ಮನೆ ಕಟ್ಟಿಸುವ ಹುರುಪು ಹುಟ್ಟಿತು. ಎರೆಮಿಶ್ರಿತ ಮಣ್ಣಾದ್ದರಿಂದ ಪಾಯ ಹಾಕಲು ಲಗಟ್ಟಲೆ ಸುರಿದಾಯ್ತು. ಇಂಜಿನಿಯರ್ನ ನೀಲಿ ನಕಾಶೆಯಂತೆ ನೆಲದ ಮೇಲೆ ಏನಾದರೂ ಒಂದು ಆಕೃತಿ ಯಾವಾಗ ಕಾಣುತ್ತದೋ ಎಂಬ ಕುತೂಹಲ ಇತ್ತು.
ಬ್ಯಾಂಕಿನವರು ನೀಡಿದ ಸಾಲದ ದುಡ್ಡೂ ಮುಗಿಯುತ್ತ ಬಂತು. ಆದರೆ ಮನೆಯ ಕೆಲಸ ಮುಗಿಯಲೇ ಇಲ್ಲ. ವಾಚ್ಮನ್ಗೆ ಕೊಡಲೂ ದುಡ್ಡಿಲ್ಲದಂತಾಗಿ ಅವನನ್ನು ಬಿಡಿಸಿಬಿಟ್ಟೆ. ಕೆಲಸ ಅಂತಿಮ ಹಂತದಲ್ಲಿದ್ದಾಗ ಒಂದು ದಿನ ಹೊಸ ಕೆಲಸಗಾರನೊಬ್ಬ ಮನೆ ಮುಂದೆ ನಿಂತಿದ್ದ ನನ್ನನ್ನು ನೋಡಿ ಏಕವಚನದಲ್ಲಿ ಸಂಬೋಧಿಸಿದ. ನಾನು ಕಕ್ಕಾಬಿಕ್ಕಿಯಾದೆ. "ನಾನು ವಾಚ್ಮನ್ ಅಲ್ಲಾರೀ.. ಓನರ್' ಎಂದು ಹೇಳಿಕೊಳ್ಳಬೇಕಾಯಿತು. ಕನ್ನಡಿಯಲ್ಲಿ ನನ್ನ ಅವತಾರ ನೋಡಿಕೊಂಡಾಗ ಅವನು ಹೇಳಿದ್ದರಲ್ಲಿ ಅತಿಶಯ ಏನೂ ಇಲ್ಲ ಎನ್ನಿಸಿಬಿಟ್ಟಿತು. ಅಂತೂ ಬ್ರಹ್ಮಚರ್ಯ ಪರಿಪಾಲಕನಾದ ನಾನು ತಾಯಿಯ ಆಸೆ ಈಡೇರಿಸಲು ಮನೆ ಕಟ್ಟಿಸಿಯೇಬಿಟ್ಟೆ. ಮನೆಗೆ ಸುಮ್ಮನೆ ಎಂದು ಹೆಸರಿಟ್ಟೆ.