

ಈಗ ದಿನಾ ಫೋನು ಮಾಡಿ ಅವರೂ ಅವರ ತಾಯಿಯೂ ಮನೆಗೆ ಬಂದು ಬೀಳುತ್ತೀಯೋ ಇಲ್ಲವೋ , ನಿನ್ನ ಮನೆಯವರ ಮಾನ ಹರಾಜು ಮಾಡುತ್ತೇವೆ ಎಂದು ಹೆದರಿಸುತ್ತಿದ್ದಾರೆ. ನಮ್ಮ ತಂದೆ ತಾಯಿ ಕುಟುಂಬದ ಮರ್ಯಾದೆಗೆ ಹೆದರಿ ಗಂಡನ ಮನೆಯಲ್ಲೇ ಹೊಂದಿಕೊಂಡು ಹೋಗು ಎನ್ನುತ್ತಿದ್ದಾರೆ. ನನಗೆ ಜೀವನದಲ್ಲಿ ಉತ್ಸಾಹವೇ ಇಲ್ಲದಂತೆ ಆಗಿದೆ. ಏನಾದರೂ ಒಳ್ಳೆಯ ಸಲಹೆ ಕೊಡಿ.
ಉತ್ತರ: ವಿದ್ಯಾವಂತರಾಗಿದ್ದು, ಒಳ್ಳೆಯ ಕೆಲಸದಲ್ಲಿ ಇರುವ ನಿಮ್ಮಂತಹ ಹೆಣ್ಣು ಮಕ್ಕಳೇ ಗಂಡ ಮತ್ತು ಅವರ ಮನೆಯವರು ನಿಮ್ಮ ಮೇಲೆ ಕೌಟುಂಬಿಕ ಹಿಂಸೆ ಮಾಡಿದರೂ ಸಹಿಸಿಕೊಂಡು ಬಂದರೆ ಇನ್ನು ಅಮಾಯಕ ಹೆಣ್ಣು ಮಕ್ಕಳ ಗತಿ ಏನಾಗ ಬೇಕು. ಮದುವೆಯಾದ ಮಾತ್ರಕ್ಕೆ ಹೆಂಡತಿಯನ್ನು ಬಯ್ಯುವ ಹೊಡೆಯುವ ಅಧಿಕಾರ ಬರುವುದಿಲ್ಲ. ಧೈರ್ಯವಾಗಿ ನಿಮ್ಮ ಪತಿಯ ಮತ್ತು ಅವರ ತಾಯಿಯ ವಿರುದ್ಧ ಪೋಲೀಸು ಠಾಣೆಯಲ್ಲಿ ದೂರು ಸಲ್ಲಿಸಿ.
ಕೌಟುಂಬಿಕ ಹಿಂಸೆಯಿಂದ ಮಹಿಳೆಯರನ್ನು ರಕ್ಷಣೆ ಮಾಡುವ ಕಾನೂನಿನ ಕೆಳಗೆ ಪ್ರಕರಣ ದಾಖಲಿಸಿ. ನಿಮ್ಮ ತವರಿನವರು ನಿಮಗೆ ಮಾನಸಿಕವಾಗಿಯಾದರೂ ಸಹಾಯ ಕೊಡಬೇಕು. ಅವರು ಒಪ್ಪದಿದ್ದರೂ ನೀವು ಹೊಡೆತ ಬಡೆತ ಮಾಡುವ ಅವ್ಯಾಚ್ಯ ಶಬ್ದಗಳಿಂದ ಬಯ್ಯುವ ಗಂಡನ ಜೊತೆ ಸಂಸಾರ ಮಾಡಬೇಕಾಗಿಲ್ಲ. ನಿಮ್ಮ ಪತಿಯ ದೌರ್ಜನ್ಯವನ್ನು ಸಹಿಸಿಕೊಂಡು ಹೋದರೆ ನೀವು ಸ್ತ್ರೀಕುಲಕ್ಕೇ ಅವಮಾನ ಮಾಡಿದಂತೆ ಆಗುತ್ತದೆ. ನಾಯಿ ಬೆಕ್ಕನ್ನೂ ಹೊಡೆಯಬಾರದು ಎನ್ನುವ ಚಿಂತನೆ ಇರುವ ಈ ಕಾಲದಲ್ಲಿ ಹೆಂಡತಿಯನ್ನು ಹೊಡೆಯುವುದನ್ನು ಸಹಿಸಿಕೊಂಡು ಬದುಕಲೇ ಬಾರದು.ನಿಮ್ಮ ಕಾಲಿನ ಮೇಲೆ ನೀವು ನಿಲ್ಲುವ ಸಾಮರ್ಥ್ಯ ನಿಮಗಿದೆ. ಧೈರ್ಯವಾಗಿ ಕಾನೂನು ಕ್ರಮ ಜರುಗಿಸಿ.