

ಬನ್ನಿ ಮೈಸೂರಿಗೆ! ಈ ಭೂಲೋಕದ ಬೆಡಗಿನೂರಿಗೆ! ನೀವು ಮೊದಲಬಾರಿ ಮೈಸೂರಿಗೆ ಬರುತ್ತಿದ್ದರೆ ಈ ದಸರೆಯ ಕಾಲದಲ್ಲೇ ಬನ್ನಿ. ಮುಸ್ಸಂಜೆ ಮುಸುಕಿದ ಮೇಲೆ ಬನ್ನಿ. ಊರಿನ ಆಗ್ನೇಯ ದಿಗ್ಭಾಗದಲ್ಲಿ ಪ್ರಕೃತಿಯೇ ಒಂದು ಭೂಮಸೌಂದರ್ಯದ ಬೆಟ್ಟಪರದೆಯನ್ನು ಎತ್ತಿ ನಿಲ್ಲಿಸಿದೆ. ಅದು ಚಾಮುಂಡಿಬೆಟ್ಟ. ನೀವು ಪ್ರಕೃತಿ ಪ್ರೇಮಿಯಾದರೆ ಒಂದಿಷ್ಟು ಹೊತ್ತು ಆನಂದವಾಗಿ ಮೈಮರೆಯಿರಿ. ಆಸ್ತಿಕರಾದರೆ ನಾಡದೇವತೆ ಚಾಮುಂಡಿಗೆ ಭಕ್ತಿಯಿಂದ ಕೈಮುಗಿಯಿರಿ. ಈಗ ಬೆಟ್ಟದ ವಾಯವ್ಯ ದಿಕ್ಕಿಗೆ ಬಂದು ನಿಂತು ಕೆಳಗೆ ಕಣ್ಣು ಹಾಯಿಸಿ, ಮೈಸೂರು ನಗರ ಕಾಣುತ್ತದೆ. ಇನ್ನೊಂದಿಷ್ಟು ಹೊತ್ತು ಕಣ್ಣು ತಿರುಗಿಸದೆ ಅಲ್ಲೇ ನೋಡುತ್ತಿರಿ. ಆಹ್! ಲಕ್ಷೋಪಲಕ್ಷ ವಿದ್ಯುದ್ದೀಪಗಳು ಧಿಗ್ಗನೆ ಬೆಳಗುತ್ತವೆ! ಆನಂದಪರವಶರಾಗಿ ಮೂರ್ಛೆ ಹೋದೀರಿ, ಎಚ್ಚರ. ಸುಮಾರು ಮುಕ್ಕಾಲು ಶತಮಾನ ಈ ನಗರದಲ್ಲೇ ವಾಸಿಸಿದ ಮಹಾಕವಿ ಕುವೆಂಪು ಈಗ ನೀವು ಕಂಡ ದೃಶ್ಯವನ್ನು ಹೇಗೆ ವರ್ಣಿಸುತ್ತಾರೆ ಗೊತ್ತೆ?
ತಾರೆಗಳ ದಿಬ್ಬಣವು ಗಗನದಿಂದೈತಂದು ಬೆಟ್ಟದುದಿಯಲಿ ತುಳುವಿ, ಸೋಪಾನಗಳನಿಳಿದು ತಪ್ಪಲಲಿ ಮೇಳವಿಸಿ, ಕವಿದು ಕಿಕ್ಕಿರಿದಂತೆ ಬುವಿ ಬೆಸಲೆಯಾದಂತೆ ಚುಕ್ಕಿಗಳ ತಿಂತಿಣಿಯ ತೆಕ್ಕನೆಯ ಪೆತ್ತಂತೆ ಸಗ್ಗ ನೆಲಕಿಳಿದಂತೆ, ಬಾನಿಳೆಗೆ ಬಿದ್ದಂತೆ ಬೆರಗಾಗಿ, ಮರುಳಾಗಿ ಬಾ, ನೋಡು, ನಿಂತಿಲ್ಲಿ ಮೂಕನಾಗಿ! ಕೇಳಿ, ಕೇಳಿ, ಇನ್ನೂ ಮುಗಿದಿಲ್ಲ ಕವಿಯ ಹಾಡು. ತಾರೆಗಳ ತವರೂರು ಸಿಂಗರದ ಮೈಸೂರು ಕನ್ನಡದ ಕುಶಲತೆಗೆ ಕನ್ನಡದ ರಸಕರೆಗೆ ಕನ್ನಡದ ನಿಪುಣತೆಗೆ ಕನ್ನಡಿಯು ಮೈಸೂರು! ಕನ್ನಡಿಗರೆದೆಯರಿಯೆ, ಕನ್ನಡಿಗರೊಲವರಿಯೆ ಕನ್ನಡಿಗರಿಂಪರಿಯೆ, ಸೋದರನೆ, ನೇಹಿಗನೆ ಲಲಿತ ಲಲಿತಾದ್ರಿಯಲಿ ನಿಂತು ನೋಡು! ದೇಗುಲವು ಭಕ್ತರಿಗೆ ಉಪವನವು ರಸಿಕರಿಗೆ ಲೌಕಿಕರಿಗಿದು ಸಗ್ಗ! ವೈದಿಕರಿಗಿದು ಮುಕ್ತಿ! ಇದೊಂದು ರಾಜನಗರಿ (Royal City) ಈ ಊರನ್ನು ರಾಜಧಾನಿ ಮಾಡಿಕೊಂಡು ಯದುವಂಶದ ರಾಜರು ಈ ಪ್ರಾಂತವನ್ನು ಆಳಿದ್ದಾರೆ. ಅವರಲ್ಲಿ ಹಲವು ದೊರೆಗಳು ನಮ್ಮ ಮೈಸೂರಿಗೆ ಪ್ರಾತಃಸ್ಮರಣೀಯರು. ಈ ಪುರ ಮತ್ತು ಪ್ರಾಂತಕ್ಕೆ ಹಲವು ಪ್ರಥಮಗಳನ್ನು ಪ್ರಸಾದಿಸಿದ ಪುಣ್ಯಾತ್ಮರು ಅವರು. ಜಗತ್ತಿನಲ್ಲಿ ಕೆಲವು ವಸ್ತುವಿಷಯಗಳು ಕೆಲವು ಸ್ಥಳಗಳ ಹೆಸರಿನ ಜೊತೆಗೇ ಅಂಟಿಕೊಂಡಿರುತ್ತವೆ.
ಅವುಗಳನ್ನು ಆ ಸ್ಥಳದ ವಿಶೇಷಗಳು (Local Factos) ಎಂದು ಗುರುತಿಸುವುದು ರೂಢಿ. ಉದಾಹರಣೆಗೆ ಲಂಡನ್ ಬ್ರಿಡ್ಜ್, ಬಿಗ್ ಬೆನ್ ಆಫ್ ಲಂಡನ್, ಲಂಡನ್ ಟ್ಯೂಬ್, ಟೈಮ್ ಸ್ಕೆ್ವೕರ್ ಆಫ್ ನ್ಯೂಯಾರ್ಕ್, ಗೋಲ್ಡನ್ ಗೇಟ್ ಬ್ರಿಡ್ಜ್ ಆಫ್ ಸ್ಯಾನ್ ಫ್ರಾನ್ಸಿಸ್ಕೋ, ಸಿಡ್ನಿ ಒಪೆರಾ ಹೌಸ್, ದೆಹಲಿಯ ಕೆಂಪುಕೋಟೆ, ಆಗ್ರಾದ ತಾಜ್ವುಹಲ್, ಹೈದರಾಬಾದಿನ ಚಾರ್ವಿುನಾರ್, ಕೊಲ್ಕತ್ತದ ಹೌರಾ ಬ್ರಿಡ್ಜ್, ಹಾಗೇ ಕರ್ನಾಟಕಕ್ಕೆ ಬಂದರೆ ಬೆಂಗಳೂರು ಕರಗ, ಹಂಪೆಯ ಕಲ್ಲಿನ ರಥ, ಬೇಲೂರು ಶಿಲಾಬಾಲಿಕೆ, ಶ್ರವಣಬೆಳಗೊಳದ ಗೊಮ್ಮಟೇಶ್ವರ, ದಾವಣಗೆರೆಯ ಬೆಣ್ಣೆ ದೋಸೆ, ಖಾರಾ ಮಂಡಕ್ಕಿ, ಧಾರವಾಡ ಪೇಡಾ, ಮಂಡ್ಯ ಸಕ್ಕರೆ, ಮಂಡ್ಯ ಬೆಲ್ಲ, ಬೆಳಗಾವಿ ಕುಂದ, ಗೋಕಾಕ್ ಕರದಂಟು, ಮೊಳಕಾಲ್ಮೂರು ಸೀರೆ, ನಂಜನಗೂಡು ರಸಬಾಳೆ, ವಿಜಯಪುರ ಗೋಲ್ ಗುಂಬಜ್ ಇತ್ಯಾದಿಯಾಗಿ ಒಂದೊಂದೋ ಎರಡೆರಡೋ ಹೆಚ್ಚೆಂದರೆ ಮೂರ್ನಾಲ್ಕು ವಸ್ತು ವಿಷಯಗಳು ಒಂದು ಊರ ಹೆಸರಿನೊಂದಿಗೆ ಅಂಟಿಕೊಂಡಿರುತ್ತವೆ. ಆದರೆ ಮೈಸೂರಿನ ಜೊತೆ ಅದೆಷ್ಟು ಇಂಥ ವಿಶೇಷ ವಸ್ತುವಿಷಯಗಳು (Iconic Factos) ಅಂಟಿಕೊಂಡಿವೆ ನೋಡಿ-
ಮೈಸೂರು ಮಲ್ಲಿಗೆ, ಮೈಸೂರು ರೇಷ್ಮೆ, ಮೈಸೂರು ಗಂಧದೆಣ್ಣೆ, ಮೈಸೂರು ಪೇಟ, ಮೈಸೂರು ಟಾಂಗಾ, ಮೈಸೂರು ವೀಳ್ಯದೆಲೆ, ಮೈಸೂರು ಪಾಕ್, ಮೈಸೂರು ಮಸಾಲೆ ದೋಸೆ, ಮೈಸೂರು ಅರಮನೆ, ಮೈಸೂರು ದಸರಾ, ಮೈಸೂರ್ ಇನ್ ಲೇ ಆರ್ಚ್ (ಮರದ ಕೊರೆವಚ್ಚಿನ ಕಲೆ)- ಇತ್ಯಾದಿಗಳಲ್ಲದೆ ಕೆಲವು ವಿಷಯಗಳಲ್ಲಿ ಮೈಸೂರಿನದೇ ಒಂದು ಶೈಲಿ ಅನ್ನುವುದಿದೆ. ಇಂಥದೊಂದು ಸಂಸ್ಕೃತಿ ಸಿರಿವಂತಿಕೆ ಇರುವಂಥ ಮೈಸೂರಿನ ದಸರಾ ಮತ್ತು ನವರಾತ್ರಿ ಆಚರಣೆ ವಿಶ್ವಪ್ರಸಿದ್ಧವಾದುದರಲ್ಲಿ ಏನಚ್ಚರಿ! ನವರಾತ್ರಿ ಹಬ್ಬದ ಕಾಲ ಭಾರತೀಯ ಕ್ಯಾಲೆಂಡರಿನ ಆಶ್ವಯುಜ ಮಾಸದಲ್ಲಿ ಬರುತ್ತದೆ. ಇದು ನವರಾತ್ರಿಯ ಕಾಲ ಎನ್ನವುದು ಪ್ರಕೃತಿಯಲ್ಲೇ ಕಾಣುತ್ತದೆ. ಈಗ ಮಳೆಗಾಲ ಮುಕ್ತಾಯಕ್ಕೆ ಬಂದಿರುತ್ತದೆ. ಮಳೆ ಸುರಿದು ಇಳೆಯಲ್ಲ ಹಸಿರು ಸಮೃದ್ಧಿಯಲ್ಲಿ ಸಂಭ್ರಮಿಸುತ್ತಿರುತ್ತದೆ. ಆಶ್ವಯುಜದ ಆರಂಭದ ಅಮಾವಾಸ್ಯೆ ಮಹಾಲಯ ಅಮಾವಾಸ್ಯೆ. ಅದನ್ನು ನಮ್ಮ ಹಳ್ಳಿಯ ಜನ ಮಾನೋಮಿ ಅಥವಾ ಮಾರ್ಲಮಿ ಹಬ್ಬ ಅಂತ ಕರೆಯುತ್ತಾರೆ. ಇದನ್ನು ವೈದಿಕರು ಪಿತೃಪಕ್ಷ ಅಂತ ಕರೆದು ಪಿತೃಗಳಿಗೆ ತರ್ಪಣ ಕೊಡುತ್ತಾರಾದರೆ ಗ್ರಾಮ್ಯರು ಅದೇ ದಿನ ‘ಸತ್ತ್ಕೆಟ್ಟೋರ್ಗೆ’ ಎಡೆ ಇಕ್ಕುತ್ತಾರೆ. ಅದಾದ ಮರುದಿನದಿಂದ ಧಾರ್ವಿುಕರು ಶಕ್ತಿದೇವತೆಯ ನವರೂಪಗಳನ್ನು ವಿವಿಧ ಬಗೆಯಲ್ಲಿ ಆರಾಧಿಸುತ್ತಾರೆ.
ನವರಾತ್ರಿ ನಾಡಿಗೆಲ್ಲ ಬರುವುದು ಒಂದು ಬಗೆಯಾದರೆ ಮೈಸೂರಿಗೆ ಬರುವುದೇ ಒಂದು ಬಗೆ. ಇಲ್ಲಿ ದಸರೆಯ ಸಂಭ್ರಮ. ಈ ದಸರೆಯನ್ನು ವಿಜಯನಗರದ ಅರಸರು ಅತಿ ವೈಭವದಿಂದ ಆಚರಿಸುತ್ತಿದ್ದರಂತೆ. ಅದಕ್ಕೆ ಸಾಕ್ಷಿಯಾಗಿ ಈಗಲೂ ಹಂಪೆಯ ಮಹಾನವಮಿ ದಿಬ್ಬ ಸಾಕ್ಷಿಯಾಗಿ ನಿಂತಿದೆ. ಆಗ ವಿಜಯದಶಮಿ ಎಂಬುದು 9 ದಿನಗಳ ನವರಾತ್ರಿ ಹಬ್ಬಕ್ಕೆ ವೈಭವದ ಹತ್ತನೇ ದಿನದ ಸಮಾರೋಪ. ವಿಜಯನಗರ ಪತನಾನಂತರ ಮೈಸೂರಿನ ಯದುವಂಶದ ಅರಸರು ದಸರೆಯನ್ನು ಆರಂಭಿಸಿದರು. ಯದುವಂಶದ ಒಡೆಯರಲ್ಲಿ ಪ್ರಸಿದ್ಧರಾಗಿದ್ದ ಶ್ರೀ ರಾಜ ಒಡೆಯರು ಕ್ರಿ.ಶ.1610ರಲ್ಲಿ ಶ್ರೀರಂಗಪಟ್ಟಣದಲ್ಲಿ ದಸರೆಯನ್ನು ಆರಂಭಿಸಿದರು. ಆಮೇಲೆ ಮೈಸೂರು ರಾಜ್ಯ ಹೈದರ್-ಟಿಪ್ಪು ಅವರ ವಶವಾದ ಮೇಲೆ ದಸರೆ ನಿಂತು ಹೋಗಿತ್ತು. ಮೈಸೂರು ರಾಜ್ಯ ಮತ್ತೆ ಅರಸರ ಆಳ್ವಿಕೆಗೆ ಬಂದ ನಂತರ ದಸರೆಯೂ ಆರಂಭವಾಯಿತು. 1970ರ ವರೆಗೆ ದಸರೆ ಅರಮನೆಯೇ ಕೇಂದ್ರವಾಗಿ ನಡೆಯುತ್ತ ಬಂತು. ಆಗ ಜಂಬೂಸವಾರಿಯಲ್ಲಿ ಮೈಸೂರಿನ ದೊರೆಗಳು ಮೆರವಣಿಗೆಯಲ್ಲಿ ಬನ್ನಿ ಮಂಟಪಕ್ಕೆ ಹೋಗಿ ಅಲ್ಲಿ ಬನ್ನಿ ಪೂಜೆ ಮತ್ತು ಪಂಜಿನ ಕವಾಯತಿನೊಂದಿಗೆ ದಸರಾ ವಿಜಯದಶಮಿ ಮೆರವಣಿಗೆ ಪರಿಸಮಾಪ್ತಿಗೊಳ್ಳುತ್ತಿತ್ತು.
ಆಗಿನ ಪ್ರಧಾನಿ ಇಂದಿರಾ ಗಾಂಧಿಯವರು ‘ರಾಜಧನ’ ರದ್ದು ಮಾಡಿದ ಮೇಲೆ ದಸರಾ ಕೂಡ ನಿಂತುಹೋಯಿತು. ಆ ನಂತರ ಕರ್ನಾಟಕ ಸರ್ಕಾರ ಅದನ್ನು ಜನತಾ ದಸರಾ ಆಗಿ, ನಾಡಹಬ್ಬವಾಗಿ ಪುನಾರಂಭಿಸಿತು. ಈಗ ಜಂಬೂಸವಾರಿಯ ಚಿನ್ನದ ಅಂಬಾರಿಯ ಮೇಲೆ ದೊರೆಗಳಿಗೆ ಬದಲಾಗಿ ಚಾಮುಂಡೇಶ್ವರಿಯ ಪ್ರತಿಮೆ ಮೆರವಣಿಗೆಗೊಳ್ಳುತ್ತದೆ. ರಾಜ ವಿಜಯದ ಮತ್ತು ಪರಾಕ್ರಮದ ಸಂಕೇತವಾಗಿ ಆಚರಣೆಗೊಳ್ಳುತ್ತಿದ್ದ ದಸರಾ ಈಗ ನಾಡಿನ ಸಂಸ್ಕೃತಿಯ ಅಭಿವ್ಯಕ್ತಿಯಾಗಿ ಮಾತ್ರವಲ್ಲದೆ ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಕಟಣೆಯಾಗಿಯೂ ನಡೆಯುತ್ತಿದೆ.
ರಾಜರ ಜಾಗದಲ್ಲಿ ಈಗ ರಾಜಕಾರಣಿಗಳು ಬಂದಿದ್ದಾರೆ. ರಾಜಪ್ರಮುಖರ ಜಾಗದಲ್ಲಿ ಅಧಿಕಾರಿಗಳಿರುತ್ತಾರೆ. ‘ಇದು ಜನತೆಯ ದಸರಾ ಆಗಬೇಕು’ ಎಂದು ಮುಖ್ಯಮಂತ್ರಿಗಳು ಈ ವರ್ಷದ ದಸರಾ ಉದ್ಘಾಟನೆಯ ಸಂದರ್ಭದಲ್ಲಿ ಹೇಳಿದ್ದು ನಿಜವಾದರೂ ಜನತೆಗೆ ದಸರಾ ನಮ್ಮದು ಅನ್ನಿಸುವುದಿಲ್ಲ. ಯಾವ ಸರ್ಕಾರಗಳೂ ದಸರೆಯನ್ನು ತಮ್ಮ ಹಾಗೂ ತಮ್ಮ ಪಕ್ಷದ ಜಾಹೀರಾತು ಮಾಡುವುದನ್ನು ತಪ್ಪಿಸಿಕೊಳ್ಳುವುದಿಲ್ಲ. ಅದೇನೇ ಇರಲಿ. ಮೈಸೂರು ದಸರಾ ಎಷ್ಟೆಲ್ಲ ಕೊರತೆಗಳ ನಡುವೆಯೂ ತನ್ನ ಆಕರ್ಷಣೆಯನ್ನು ಕಳೆದುಕೊಂಡಿಲ್ಲ. ಈ ಹತ್ತು ದಿನ ಮೈಸೂರು ವಿಶ್ವಭೂಪಟದಲ್ಲಿ ದೇದೀಪ್ಯಮಾನವಾಗಿರುತ್ತದೆ. ದಸರೆಯ ನೆಪದಲ್ಲಿ ಮೈಸೂರು ತನ್ನ ಜೀವಂತಿಕೆಯನ್ನು, ವೈಭವವನ್ನು, ಸಂಸ್ಕೃತಿಯನ್ನು ಪ್ರಕಟಿಸಿಕೊಳ್ಳುತ್ತಿರುತ್ತದೆ.