'ಮೌನ'ಕ್ಕೆ ಯಾಕೆ ಶರಣಾದ್ರು ರಿಷಬ್​; ಬರುವ ಶುಕ್ರವಾರ ಅವರ ಯೂಟ್ಯೂಬ್​ ಚಾನಲ್​ ನೋಡಿ ಗೊತ್ತಾಗತ್ತೆ..!

Rishab 22 april 20
Published on

ಬೆಂಗಳೂರು: ‘ರುದ್ರಪ್ರಯಾಗ’ ಚಿತ್ರದ ಚಿತ್ರಕಥೆ ಫೈನ್​ಟ್ಯೂನ್ ಮಾಡುವುದರಲ್ಲಿ ತೊಡಗಿಸಿಕೊಂಡಿರುವ ರಿಷಭ್ ಶೆಟ್ಟಿ, ಈ ಮಧ್ಯೆ ತಮ್ಮ ರಿಷಭ್ ಶೆಟ್ಟಿ ಫಿಲಂಸ್ ಯೂಟ್ಯೂಬ್ ಚಾನಲ್​ನಲ್ಲಿ ‘ಮೌನ’ ಎಂಬ ಒಂಬತ್ತೂವರೆ ನಿಮಿಷದ ಹೊಸ ಕಿರುಚಿತ್ರ ಬಿಡುಗಡೆ ಮಾಡುತ್ತಿದ್ದಾರೆ. ಈಗಾಗಲೇ ಟೀಸರ್ ಬಿಡುಗಡೆಯಾಗಿದ್ದು, ಇದೇ ಶುಕ್ರವಾರ ಸಂಜೆ ಕಿರುಚಿತ್ರ ಬಿಡುಗಡೆಯಾಗಲಿದೆ. ಅಂದಹಾಗೆ, ಈ ಕಿರುಚಿತ್ರವನ್ನು ರಿಷಭ್ ನಿರ್ವಿುಸಿಲ್ಲ ಅಥವಾ ನಿರ್ದೇಶಿಸಿಲ್ಲ. ಇಲ್ಲಿ ಅವರು ಪ್ರೆಸೆಂಟರ್ ಅಷ್ಟೇ. ಚಿತ್ರ ನೋಡಿ ಇಷ್ಟವಾಗಿ, ಅದನ್ನು ತಮ್ಮ ಯೂಟ್ಯೂಬ್ ಚಾನಲ್​ನಲ್ಲಿ ಬಿಡುಗಡೆ ಮಾಡುವುದಕ್ಕೆ ಮುಂದೆ ಬಂದಿದ್ದಾರೆ.

ಅಂದಹಾಗೆ, ಎಂ.ಸಿ. ಭರತ್ ಕಥೆ ಬರೆದು ನಿರ್ದೇಶಿಸಿದ್ದಾರೆ. ಭರತ್ ಇದಕ್ಕೂ ಮುನ್ನ ‘ಗುಳ್ಟು’ ಚಿತ್ರಕ್ಕೆ ಸಂಕಲನ ಮಾಡಿದ್ದರು. ರಿಷಭ್ ನಿರ್ವಣದ ‘ಕಥಾ ಸಂಗಮ’ದ ‘ಸತ್ಯಕಥಾ ಪ್ರಸಂಗ’ ಎಡಿಟ್ ಮಾಡಿದ್ದರು. ಈಗ ‘ಮೌನ’ ನಿರ್ದೇಶನ ಮಾಡಿದ್ದಾರೆ. ಇದೊಂದು ನೈಜ ಘಟನೆ ಆಧಾರಿತ ಚಿತ್ರವಂತೆ. ಕೆಲವು ವರ್ಷಗಳ ಹಿಂದೆ ಹೊಸ ವರ್ಷದ ಹಿಂದಿನ ರಾತ್ರಿ ಬೆಂಗಳೂರಿನ ಕಮ್ಮನಹಳ್ಳಿಯಲ್ಲಿ ಒಬ್ಬ ಯುವತಿ ಮೇಲೆ ಕೆಲವರು ದಾಳಿ ಮಾಡಿದ್ದರು. ಈ ಘಟನೆಯನ್ನಿಟ್ಟುಕೊಂಡು

ಕಿರುಚಿತ್ರ ಮಾಡಿದ್ದಾರೆ ಭರತ್. ‘ಮೌನ’ದಲ್ಲಿ ಪವಿತ್ರಾ ಲೋಕೇಶ್, ವೀರೇಶ್, ರೂಪಾ ರಾಯಪ್ಪ, ಮಲ್ಲಿಕಾರ್ಜುನ ದೇವರಮನೆ ಮುಂತಾದವರು ನಟಿಸಿದ್ದಾರೆ. ಇನ್ನು ಈ ಚಿತ್ರವನ್ನು ಕ್ರಾಸ್​ಕಟ್ ಫಿಲಂಸ್ ಮತ್ತು ಟೆಸ್ಸಾರಕ್ಟ್ ಪ್ರೊಡಕ್ಷನ್ಸ್ ಜತೆಯಾಗಿ ನಿರ್ವಿುಸಿದೆ. ಈಗಾಗಲೇ ಮೂರು ಚಿತ್ರೋತ್ಸವಗಳಲ್ಲಿ ‘ಮೌನ’ ಪ್ರದರ್ಶನವಾಗಿದ್ದು, ಆ ಪೈಕಿ ಬೆಂಗಳೂರು ಅಂತಾರಾಷ್ಟ್ರೀಯ ಕಿರುಚಿತ್ರೋತ್ಸವದಲ್ಲಿ ಮೊದಲ ರನ್ನರ್ ಅಪ್ ಪ್ರಶಸ್ತಿ ಗೆದ್ದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net