More

    ವಿಶೇಷ; ವೃಕ್ಷ ಅವತಾರದಲ್ಲಿ ಡಾ. ರಾಜ್​ ಫೋಟೋ ಸೃಷ್ಟಿಯಾಗಿದ್ದು ಹೇಗೆ!; ಈ ಚಿತ್ರ ರಚಿಸಿದ ಬಿಕೆಎಸ್​ ವರ್ಮಾ ‘ವಿಜಯವಾಣಿ’ ಜತೆ ಹಂಚಿಕೊಂಡಿದ್ದಾರೆ 14 ವರ್ಷದ ಹಿಂದಿನ ಕತೆ!

    ಬೆಂಗಳೂರು: ಡಾ. ರಾಜ್​ಕುಮಾರ್​ ಅವರನ್ನು ಎಷ್ಟು ನೆನೆದರು ಕಡಿಮೆಯೇ. ಇನ್ನು ಎರಡೇ ದಿನ ಕಳೆದರೆ ಅವರ ಜನ್ಮ ದಿನವೂ ಬಂತು. ಅದಕ್ಕೂ ಮೊದಲು ಅಂದರೆ, ಇಂದು(ಏ. 22) ವಿಶ್ವ ಭೂ ದಿನ. ಅದಕ್ಕೂ ಸಹ ಡಾ. ರಾಜ್​ ಕಡೆಯಿಂದ ಪರೋಕ್ಷವಾಗಿ ಶುಭಾಶಯ ಸಂದಾಯವಾಗಿದೆ. ಅದೂ ಹೇಗೆಂದರೆ, ಇಲ್ಲಿ ಮೇಲ್ಕಾಣಿಸಿದ ಚಿತ್ರದ ಮೂಲಕ. ಹೌದು, ಈ ಫೋಟೋವನ್ನು ನೀವು ಈಗಾಗಲೇ ನೋಡಿದ್ದೀರಿ. ಸಾಕಷ್ಟು ಸಾರಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಸಹ ಮಾಡಿದ್ದೀರಿ. ಆದರೆ, ಈ ಫೋಟೋ ಸೃಷ್ಟಿಯಾಗಲು ಕಾರಣ ಏನಿರಬಹುದು ಎಂಬುದು ಬಹುತೇಕರಿಗೆ ಗೊತ್ತಿಲ್ಲ. ಇದೀಗ ಈ ಫೋಟೋದ ಸೃಷ್ಟಿಕರ್ತ ಬಿಕೆಎಸ್ ವರ್ಮಾ ವಿಜಯವಾಣಿ ಜತೆಗೆ ಮಾತನಾಡಿದ್ದಾರೆ. ಈ ಫೋಟೋದ ಹಿನ್ನೆಲೆಯನ್ನೂ ಬಿಚ್ಚಿಟ್ಟಿದ್ದಾರೆ.
    ‘ಅಣ್ಣಾವ್ರು ಮತ್ತು ನನ್ನದು ಕೇವಲ ಆರು ವರ್ಷಗಳ ಪರಿಚಯ. ಕಡಿಮೆ ಸಮಯದ ಪರಿಚಯವಾದರೂ, ನಾನು ನಮ್ಮ ಕುಟುಂಬ ಅಂದರೆ ಅವರಿಗೆ ಅಚ್ಚುಮೆಚ್ಚು. ಹಲವು ಬಾರಿ ನಮ್ಮ ಮನೆಗೂ ಅವರು ಬಂದಿದ್ದರು. ಬಿಡುವಿದ್ದಾಗ ಡಾ. ರಾಜ್ ಅವರ ತಂದೆ ತಾಯಿಯ ಫೋಟೋವನ್ನೂ ಚಿತ್ರಿಸಿ ರಾಜ್​ಗೆ ನೀಡಿದ್ದೆ. ಈ ವೃಕ್ಷ ದೇವರ ಫೋಟೋವನ್ನು ನನಗನಿಸಿದ ಮಟ್ಟಿಗೆ ಅಣ್ಣಾವ್ರು ನಿಧನರಾದ ಬಳಿಕ ಸೃಷ್ಟಿ ಮಾಡಿದ್ದು. 2006ರ ಏಪ್ರಿಲ್​ನಲ್ಲಿ ಅವರು ನಮ್ಮನ್ನೆಲ್ಲ ಅಗಲಿದ ಮೇಲೆ ಮೇ ತಿಂಗಳಲ್ಲಿ ಅವರು ಹೇಳಿದ ಒಂದೇ ಒಂದು ಮಾತನ್ನು ಗಮನದಲ್ಲಿಟ್ಟುಕೊಂಡು ಪೇಂಟಿಂಗ್​ ಮಾಡಿದ್ದೆ. ‘ನೋಡಿ ವರ್ಮಾ.. ನಾನು ಸಣ್ಣ ಚಿಗುರಾಗಿದ್ದೆ. ಲಕ್ಷಾಂತರ ಅಭಿಮಾನಿಗಳು ಆ ಚಿಗುರಿಗೆ ನೀರು ಹಾಕಿ ಹಾಕಿ ದೊಡ್ಡ ಮರವನ್ನಾಗಿ ಮಾಡಿದ್ದಾರೆ. ಹಾಗಾಗಿ ಅವರಿಂದಲೇ ನಾವು. ಅವರಿಗೆ ನಮ್ಮ ಕೃತಜ್ಞತೆ ಸಲ್ಲಿಸಬೇಕು’ ಎಂದಿದ್ದರು. ಅದನ್ನು ಗಮನದಲ್ಲಿಟ್ಟುಕೊಂಡೇ ಮೂರು ದಿನದಲ್ಲಿ ಈ ಚಿತ್ರವನ್ನು ಸೃಷ್ಟಿಸಿದೆ. ಬಳಿಕ ಅದಕ್ಕೆ ಅಜರಾಮರ ಎಂಬ ಹೆಸರಿಟ್ಟು, ಪಾರ್ವತಮ್ಮ ಅವರ ಮನೆಗೆ ತೆರಳಿ ಫೋಟೋ ನೀಡಿದಾಗ ಅದನ್ನು ನೋಡಿ ಕಣ್ಣೀರಾದರು. ಒಂದಷ್ಟು ಹೊತ್ತು ಪೇಂಟಿಂಗ್​​ ಮೇಲೆ ಕೈಯಾಡಿಸುತ್ತ ಯಜಮಾನ್ರನ್ನು ಮತ್ತೆ ನೆನೆಸಿಕೊಂಡರು. ಇಂದಿಗೂ ಆ ಫೋಟೋ ಪಾರ್ವತಮ್ಮ ಅವರ ಮನೆಯಲ್ಲಿದೆ. ಜಾಲತಾಣದಲ್ಲಿ ಆಗಾಗ ಕಾಣಿಸಿಕೊಂಡು ನನ್ನನ್ನು ಆ ದಿನಗಳತ್ತ ಕರೆದೊಯ್ಯುತ್ತದೆ’ ಎಂದು ಒಂದಷ್ಟು ವಿಶೇಷತೆಗಳನ್ನು ಹಂಚಿಕೊಂಡರು ಬಿಕೆಎಸ್​ ವರ್ಮಾ.
    ಸದ್ಯ ಈ ಅಜರಾಮರ ಫೋಟೋವನ್ನು ಇಂದು ವಿಶ್ವ ಭೂ ದಿನದ ಪ್ರಯುಕ್ತ ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಟ್ವಿಟರ್​ನಲ್ಲಿ ಫೋಟೋ ಶೇರ್​ ಮಾಡಿಕೊಂಡಿದ್ದು, ಬಿಕೆಎಸ್​ ವರ್ಮಾ ಅವರ ಹೆಸರನ್ನೂ ಬರೆದುಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts