More

    ದನಗಳ ಹಿಂಬದಿಯಲ್ಲಿ ಕಣ್ಣಿನ ಚಿತ್ರ: ಕಾರಣ ಕೇಳಿದ್ರೆ ಅಚ್ಚರಿಯಾಗೋದು ಖಂಡಿತ

    ಸಿಡ್ನಿ: ಜಾನುವಾರುಗಳ ಹಿಂಬದಿಯಲ್ಲಿ ಜೋಡಿ ಕಣ್ಣಿನ ಚಿತ್ರಗಳನ್ನು ಬಿಡಿಸುವುದರಿಂದ ಸಿಂಹ ಮತ್ತು ಚಿರತೆಗಳ ದಾಳಿಯಿಂದ ದನಗಳನ್ನು ರಕ್ಷಣೆ ಸಾಧ್ಯವಿದೆ ಎಂದು ನೂತನ ಸಂಶೋಧನೆ ಬಹಿರಂಗಪಡಿಸಿದೆ.

    ಆಸ್ಟ್ರೇಲಿಯಾದ ನ್ಯೂ ಸೌಥ್​ ವೇಲ್ಸ್​ ಯೂನಿವರ್ಸಿಟಿಯ ವಿಜ್ಞಾನಿಗಳು ದಕ್ಷಿಣ ಆಫ್ರಿಕಾದ ಬೋಟ್ಸ್ವಾನಾದಲ್ಲಿರುವ ಒಕವಾಂಗೊ ಡೆಲ್ಟಾ ಪ್ರದೇಶದಲ್ಲಿ ಸಂಶೋಧನೆ ನಡೆಸಿದೆ. ಜಾನುವಾರಗಳ ಹಿಂಬದಿಯಲ್ಲಿ ಕಣ್ಣಿನ ಚಿತ್ರ ಬಿಡಿಸಿದರೆ, ಪರಭಕ್ಷಕ ಜೀವಿಗಳಿಂದ ತಪ್ಪಿಸಿಕೊಳ್ಳುವ ಸಾಧ್ಯತೆಯು ಇತರೆ ಜಾನುವಾರುಗಳಿಗಿಂತ (ಚಿತ್ರ ಬಿಡಿಸದ) ಹೆಚ್ಚಿದೆ ಎಂದು ಸಂಶೋಧನೆಯಲ್ಲಿ ತಿಳಿದುಬಂದಿದೆ.

    ನೇಚರ್​ ಸೈಂಟಿಫಿಕ್​ ಜರ್ನಲ್​ನಲ್ಲಿ ನೂತನ ಸಂಶೋಧನೆ ಪ್ರಕಟವಾಗಿದೆ. ಗ್ರಾಮೀಣ ಸಮುದಾಯದಲ್ಲಿ ಸಿಂಹಗಳ ದಾಳಿಯಿಂದ ಜಾನುವಾರುಗಳ ರಕ್ಷಣೆಗೆ ಇದೊಂದು ಪರಿಣಾಮಕಾರಿಯಾದ ಸಾಧನ ಎಂಬುದನ್ನು ಸಾಬೀತು ಮಾಡಬಹುದಾಗಿದೆ.

    ಇನ್ನು ಜೋಡಿ ಕಣ್ಣಿನ ಚಿತ್ರಗಳನ್ನು ಜಾನುವಾರುಗಳ ಹಿಂಬದಿಯಲ್ಲಿ ಬಿಡಿಸುವುದರಿಂದ ಬೇಟೆಗೆ ಹೋಂಚು ಹಾಕಿರುವ ಪರಭಕ್ಷಕ ಜೀವಿಯೂ ತನ್ನ ಕಣ್ಣಿಗೆ ಬಿದ್ದಿದೆ ಎಂಬ ಭ್ರಮೆಯನ್ನು ಪರಭಕ್ಷಕ ಜೀವಿಯಲ್ಲಿ ಸೃಷ್ಟಿಸಿ, ಸಮೀಪ ಬರದಂತೆ ಅದರ ಗಮನವನ್ನು ಬೇರೆಡೆ ಸೆಳೆಯಲು ಇದು ಪರಿಣಾಮಕಾರಿ ಎಂದು ಹೇಳಲಾಗಿದೆ.

    ಸಂಶೋಧನಾ ಭಾಗವಾಗಿ ವಿಜ್ಞಾನಿಗಳು ಡೆಲ್ಟಾ ವಲಯದ 14 ಹಿಂಡಿನಲ್ಲಿ ಸುಮಾರು 2061 ಜಾನುವಾರಗಳನ್ನು ಆಯ್ದುಕೊಂಡು ಮೂರು ಭಾಗಗಳನ್ನಾಗಿ ಮಾಡಿದರು. ಅವುಗಳಲ್ಲಿ ಮೂರನೇ ಒಂದು ಭಾಗದ ಜಾನುವಾರಗಳ ಮೇಲೆ ಕಣ್ಣಿನ ಚಿತ್ರ, ಮೂರನೇ ಒಂದು ಭಾಗಕ್ಕೆ ಅಡ್ಡಗೆರೆ ಮತ್ತು ಉಳಿದ ಒಂದು ಭಾಗವನ್ನು ಏನೂ ಚಿತ್ರಿಸದೇ ಹಾಗೇ ಬಿಡಲಾಗಿತ್ತು. ಬಳಿಕ ಅವುಗಳ ಬೇಲಿಯನ್ನು ತೆಗೆದು ಹೊರಬಿಟ್ಟು ಪರಿಶೀಲಿಸಲಾಯಿತು.

    ಇದರಲ್ಲಿ ಕಣ್ಣಿನ ಚಿತ್ರ ಬಿಡಿಸಿದ 683 ದನಗಳಲ್ಲಿ ಒಂದೂ ಕೂಡ ಪರಭಕ್ಷಕ ಜೀವಿಗಳಿಗೆ ಆಹಾರವಾಗಿಲ್ಲ. ಚಿತ್ರ ಬಿಡಿಸದ 835ರಲ್ಲಿ 15 ದನಗಳು ಪರಭಕ್ಷಕ ಜೀವಿಗಳ ಪಾಲಾಗಿದೆ ಎಂದು ಸಂಶೋಧನೆ ಹೇಳಿದೆ.

    ಇನ್ನು ಪತಂಗಗಳು ಮತ್ತು ಚಿಟ್ಟೆಗಳು ಸಹ ತಮ್ಮ ರೆಕ್ಕೆಯ ಮೇಲೆ ಕಣ್ಣಿನ ಆಕಾರದ ಚಿತ್ರಗಳನ್ನು ಸ್ವಾಭಾವಿಕವಾಗೇ ಹೊಂದಿವೆ. ಅಲ್ಲದೆ, ಕೀಟಗಳು, ಮೃದ್ವಂಗಿಗಳು ಮತ್ತು ಪಕ್ಷಿಗಳು ಸೇರಿದಂತೆ ಅನೇಕ ಪ್ರಾಣಿ ಗುಂಪುಗಳು ಸಹ ಪರಭಕ್ಷಕಗಳನ್ನು ತಡೆಯಲು ಏಕಕೇಂದ್ರಕ ವಲಯಗಳನ್ನು ಬಳಸುತ್ತವೆ ಎಂದು ಸಂಶೋಧಕರು ಸ್ಪಷ್ಟನೆ ನೀಡಿದ್ದಾರೆ.

    ಹೀಗಾಗಿ ರೈತರು ತಮ್ಮ ಜಾನುವಾರುಗಳನ್ನು ಪರಭಕ್ಷಕ ಜೀವಿಗಳಿಂದ ರಕ್ಷಿಸಿಕೊಳ್ಳಲು ಇದೊಂದು ಪರಿಣಾಮಕಾರಿಯಾದ ಸಾಧನವೆಂದು ಹೇಳಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts