More

    ಸವಾಲಾಯ್ತು ಜಾನುವಾರುಗಳ ರಕ್ಷಣೆ

    ಗೋಶಾಲೆ-ಮೇವು ಬ್ಯಾಂಕ್ ಆರಂಭಿಸಿ ಹನುಮಸಾಗರ, ಹನುಮನಾಳ ಹೋಬಳಿ ರೈತರ ಒತ್ತಾಸೆ


    ಮುತ್ತು ಗ್ವಾತಗಿ

    ಹನುಮಸಾಗರ: ಬೇಸಿಗೆಯಲ್ಲಿ ಜಾನುವಾರುಗಳಿಗೆ ಉಣಿಸಲು ಮೇವಿನ ಕೊರತೆ ರೈತರನ್ನು ಸಂಕಷ್ಟಕ್ಕೆ ದುಡಿದೆ. ಸಾಲ ಮಾಡಿ, ವಿವಿದಢೆ ಅಲೆದಾಡಿ ಮೇವು ಸಂಗ್ರಹಿಸಿಕೊಳ್ಳುತ್ತಿದ್ದಾರೆ. ಆದರೆ, ಮೇವು ಬ್ಯಾಂಕ್ ಹಾಗೂ ಗೋಶಾಲೆ ತೆರೆದು ರೈತರ ಸಹಾಯಕ್ಕೆ ಬರಬೇಕಾದ ಅಧಿಕಾರಿಗಳು ಮಾತ್ರ ನಮ್ಮಲ್ಲಿ ಮೇವಿನ ಸಮಸ್ಯೆ ಇಲ್ಲ. ಅಗತ್ಯಕ್ಕೆ ತಕ್ಕಷ್ಟು ಮೇವು ತಾಲೂಕಿನಲ್ಲಿದೆ ಎಂದು ಕ್ರಮ ಕೈಗೊಳ್ಳದೆ ಸುಮ್ಮನಿದ್ದಾರೆ.

    ಸರ್ಕಾರ ಕುಷ್ಟಗಿ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಆರೇಳು ತಿಂಗಳ ಹಿಂದೆಯೇ ಘೋಷಣೆ ಮಾಡಿದೆ. ಆಗ ರೈತರು ಸರ್ಕಾರಿಂದ ಮೇವು ಬ್ಯಾಂಕ್ ಹಾಗೂ ಗೋಶಾಲೆ ತೆರೆಯುತ್ತಾರೆ. ಅವುಗಳಿಂದ ನಮ್ಮ ದನಕರುಗಳಿಗೆ ಮೇವುಣಿಸಬಹುದು ಎಂದುಕೊಂಡಿದ್ದರು. ಆದರೆ, ಏಪ್ರಿಲ್ ಅರ್ಧ ತಿಂಗಳು ಕಳೆದರೂ ಮೇವಿನ ಕೊರತೆ ಇರುವ ಹನುಮಸಾಗರ ಹಾಗೂ ಹನುಮನಾಳ ಹೋಬಳಿ ವ್ಯಾಪ್ತಿಯಲ್ಲಿ ಮೇವು ಬ್ಯಾಂಕ್, ಗೋಶಾಲೆ ತೆರೆದಿಲ್ಲ. ಇದರಿಂದಾಂಗಿ ಸಂಕಷ್ಟಕ್ಕೆ ಸಿಲುಕಿದ ರೈತರು, ಜಾನೂವಾರಗಳಿಗೆ ಮೇವುಣಿಸಲು ಟೊಂಕಕಟ್ಟಿ ನಿಂತಿದ್ದು, ಸಾಲ ಮಾಡಿ, ಅಲೆದಾಡಿ ಮೇವು ಸಂಗ್ರಹ ಮಾಡಿಕೊಳ್ಳುತ್ತಿದ್ದಾರೆ.

    ಕಳೆದ ವರ್ಷ ಸರಿಯಾಗಿ ಮಳೆ ಆಗದಿದ್ದರಿಂದ ಮೇವಿನ ಸಮಸ್ಯೆ ಕಾಡುತ್ತಿದೆ. ರೈತರು ಕೈಯಲ್ಲಿ ಹಣ ಹಿಡಿದು ಪಕ್ಕದ ಗದಗ, ಬಾಗಲಕೋಟೆ ಜಿಲ್ಲೆಗಳ ಗ್ರಾಮಗಳಲ್ಲಿ ಅಲೆಯುತ್ತಿದ್ದು, ಬೇಡಿಕೆ ಹೆಚ್ಚಿದ್ದರಿಂದ ಮೇವಿನ ಬೆಲೆ ಗಗನಕ್ಕೆರಿದ್ದು, ರೈತರು ದಂಗಾಗುವಂತೆ ಮಾಡಿದೆ. ಅನುಕೂಲಸ್ಥ ಕೃಷಿಕರು ಹಣ ನೀಡಿ ಬೇರೆ ಜಿಲ್ಲೆಗಳಿಂದ ಮೇವು ತಂದು ತಮ್ಮ ಜಾನುವಾರುಗಳ ರಕ್ಷಣೆ ಮಾಡಿಕೊಳುತ್ತಿದ್ದಾರೆ. ಆದರೆ, ಮಳೆ ಕೊರತೆಯಿಂದಾಗಿ ಬೆಳೆದ ಅಲ್ಪಸ್ವಲ್ಪ ಬೆಳೆ ಮಾರಿ ಇದು ಸಾಲದೆ ಸಾಲ ಮಾಡಿ ಜೀವನ ಸಾಗಿಸುತ್ತಿರುವ ಬಡ ರೈತರು, ಜಾನೂವಾರುಗಳನ್ನು ಮಾರಾಟ ಮಾಡುತ್ತಿದ್ದಾರೆ.

    15 ಸಾವಿರ ದಾಟಿದ ಶೇಂಗಾ ಹೊಟ್ಟು:

    ಜಾನುವಾರುಗಳ ರಕ್ಷಣೆ ಮಾಡಿಕೊಳ್ಳಬೇಕೆಂದು ಟೊಂಕಕಟ್ಟಿ ನಿಂತ ರೈತರಿಗೆ ಮೇವಿನ ಬೆಲೆ ಬರೆಹಾಕಿದೆ. ಒಂದು ಟ್ರಾೃಕ್ಟರ್ ಶೇಂಗಾ ಹೊಟ್ಟಿಗೆ 15 ರಿಂದ 18 ಸಾವಿರ ನೀಡಬೇಕಾಗಿದೆ. ಒಂದು ಟ್ರಾೃಕ್ಟರ್ ಬಿಳಿ ಜೋಳದ ಮೇವಿಗೆ 7 ರಿಂದ 10 ಸಾವಿರ ರೂ. ದರವಿದೆ. ಟ್ರಾೃಕ್ಟರ್ ಬಾಡಿಗೆ ಹೊರತು ಇಷ್ಟೊಂದು ಹಣ ನೀಡಿ ಮೇವು ಖರೀದಿಸಲು ರೈತರು ಮುಂದಾದರೂ ಮೇವು ಸಿಗುವುದು ಕಷ್ಟವಾಗಿದೆ.

    ದನಗಳ ಮಾರಾಟ:

    ಸತತ ಬರಗಾಲದಿಂದ ಜಾನುವಾರುಗಳನ್ನು ರಕ್ಷಿಸಿಕೊಳ್ಳಲು ಕಷ್ಟ ಪಡುತ್ತಿರುವ ರೈತರು, ಸಾಕಲಾಗದೆ ಅಸಹಾಯಕರಾಗಿ ಸಮೀಪದ ಗಜೇಂದ್ರಗಡ, ಕುಷ್ಟಗಿ, ಜಾಲಿಹಾಳ, ಅಮಿನಗಡ ದನದ ಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ.

    ಒಣಗುತ್ತಿದೆ ಹುಲ್ಲು:

    ರೈತರು ತಮ್ಮ ಜಾನುವಾರುಗಳ ರಕ್ಷಣೆಗಾಗಿ ಜಮೀನುಗಳಲ್ಲಿ ಹುಲ್ಲು ಬೆಳೆದುಕೊಂಡಿದ್ದರು. ಅಂತರ್ಜಲ ಕುಸಿತದಿಂದಾಗಿ ಬೋರ್‌ವೇಲ್‌ಗಳು ಬಂದ್ ಆಗಿ ಹುಲ್ಲು ಒಣಗುತ್ತಿದ್ದು, ರೈತರನ್ನು ಆತಂಕಕ್ಕೆ ದೂರಿದೆ.

    ದಾಖಲೆಗಳಲ್ಲಷ್ಟೇ ದಾಸ್ತಾನು

    ರೈತರು ಮೇವಿಗಾಗಿ ಅಲೆಯುತ್ತಿದ್ದಾರೆ, ಆದರೆ, ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು ಮಾತ್ರ ಗೋಶಾಲೆ, ಮೇವು ಬ್ಯಾಂಕ್ ತೆರೆಯುತ್ತಿಲ್ಲ. ಕುಷ್ಟಗಿ ತಾಲೂಕಿನಲ್ಲಿ ಮೇವಿನ ಸಮಸ್ಯೆಯಿಲ್ಲ. ಅಗತ್ಯಕ್ಕೆ ತಕ್ಕಷ್ಟು ಮೇವು ನಮ್ಮಲ್ಲಿದೆ ಎನ್ನುತ್ತಿದ್ದಾರೆ. ರೈತರ ಬೀತ್ತನೆ ಆಧಾರದ ಮೇಲೆ ಅಧಿಕಾರಿಗಳು ಮೇವು ಲಭ್ಯವಿದೆ ಎನ್ನುತ್ತಿದ್ದಾರೆ. ಆದರೆ, ಮಳೆ ಕೊರತೆಯಿಂದಾಗಿ ನಿರೀಕ್ಷಿದಷ್ಟು ಬೆಳೆ ಬೆಳೆದಿಲ್ಲ. ಫಸಲು ಬರುವ ಮೊದಲೇ ಬೆಳೆಗಳು ಒಣಗಿ ಹೋಗಿದ್ದು, ಅಧಿಕಾರಿಗಳು ಇದನ್ನು ಪರಿಗಣಿಸುತ್ತಿಲ್ಲ. ಕೇವಲ ಬೀತ್ತನೆ ಆಧಾರದ ಮೇಲೆಯೇ ಅಗತ್ಯಕ್ಕೆ ತಕ್ಕಷ್ಟು ಮೇವು ಲಭ್ಯವಿದೆ ಎನ್ನುತ್ತಿದ್ದಾರೆಂದು ರೈತರು ಸಮಸ್ಯೆ ಹೇಳಿಕೊಳ್ಳುತ್ತಿದ್ದಾರೆ.

    ನಾವು ಗ್ರೌಂಡ್ ಲೇವಲ್ ಭೇಟಿ ನೀಡಿ ಪರಿಶೀಲಿಸಿದ್ದೇವೆ. ಕುಷ್ಟಗಿ ತಾಲೂಕಿನಲ್ಲಿ ಮೇವಿನ ಸಮಸ್ಯೆ ಇಲ್ಲ. ಇನ್ನೂ 16 ವಾರ ಆಗುವಷ್ಟು ಮೇವು ಲಭ್ಯವಿದೆ ಎಂಬುದಕ್ಕೆ ನಮ್ಮ ಬಳಿ ಮಾಹಿತಿ ಇದೆ. ರೈತರಿಗೆ ಅನುಕೂಲವಾಗಲಿ ಎಂದು ಹುಲ್ಲು ಬೆಳೆದುಕೊಳ್ಳಲು ಮಿನಿ ಕಿಟ್ ನೀಡುತ್ತಿದ್ದೇವೆ. ಗೋಶಾಲೆ ಹಾಗೂ ಮೇವು ಬ್ಯಾಂಕ್ ತೆರೆಯುವ ಕಾರ್ಯ ಜಿಲ್ಲಾ ಮಟ್ಟದಲ್ಲಿ ಪ್ರಗತಿಯಲ್ಲಿದೆ.
    | ಆನಂದ ಎಸ್. ದೇವರನಾವದಗಿ ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಕುಷ್ಟಗಿ

    ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು ಯಾವ ಆಧಾರದಲ್ಲಿ ಅಗತ್ಯಕ್ಕೆ ತಕ್ಕಷ್ಟು ಮೇವು ಇದೆ ಎನ್ನುತ್ತಿದ್ದಾರೆ ತಿಳಿಯುತ್ತಿಲ್ಲ. ಮೇವಿಗಾಗಿ ಹನುಮಸಾಗರ ಹಾಗೂ ಹನುಮನಾಳ ಭಾಗದ ರೈತರು ಅಲೆಯುತ್ತಿದ್ದೇವೆ. ಸಾಲ ಮಾಡಿ ಎಲ್ಲೆಲ್ಲಿಗೋ ಹೋಗಿ ಮೇವು ತಂದಿದ್ದೇವೆ. ನಮ್ಮ ಸುತ್ತಮುತ್ತಲಿನ ಬಹುತೇಕ ಹಳ್ಳಿಗಳ ರೈತರು ಬೇರೆಡೆಯಿಂದ ಮೇವು ತಂದು ಸಂಗ್ರಹಿಸಿಕೊಳ್ಳುತ್ತಿದ್ದು, ಅಧಿಕಾರಿಗಳು ಸರಿಯಾಗಿ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು.
    | ಬಸವರಾಜ ರೈತ ತುಮರಿಕೊಪ್ಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts