ಅಶೋಕಾವನದಲ್ಲಿ ಪರಂಪರೆಯ ಪುನರುತ್ಥಾನ

Swamiji
Published on

ಅಭೂತಪೂರ್ವ ವೇದ ವಿದ್ವತ್ತು ಮತ್ತು ಅನ್ಯಥಾ ಅಸಾದೃಶವಾದ ಸನಾತನ ಜ್ಞಾನ ಸಂಪತ್ತಿಗಾಗಿ ವಿಶ್ವ ಮಟ್ಟದಲ್ಲಿ ಪ್ರಖ್ಯಾತರಾಗಿದ್ದ ಇಲ್ಲಿನ ಮಹರ್ಷಿ ದೈವರಾತರು ಅನುಷ್ಠಾನಕ್ಕೆ ತಂದಿದ್ದ ವಿವಿಧ ಪರಿಕಲ್ಪನೆಗಳು ಅವರ ಕರ್ಮಭೂಮಿ ಅಶೋಕಾವನದಲ್ಲಿ ಮತ್ತೆ ಚಿಗುರೊಡೆದಿವೆ. ಪುರಾತನ ವೇದ ಪರಂಪರೆಯ ಅಪರೂಪದ ಕೊಡುಗೆಗಳಾದ ಆಶ್ರಮ, ಗೋಶಾಲೆ ಮತ್ತು ದೇಶೀಯ ಪದ್ಧತಿಯ ಕೃಷಿ ಪ್ರಕ್ರಿಯೆಗಳು ಮಹರ್ಷಿಗಳ ಅದೇ ನೆಲದಲ್ಲಿ ಮತ್ತೆ ಹೊಸ ಉತ್ಸಾಹದಿಂದ ಪ್ರಾರಂಭವಾಗಿ ಇತಿಹಾಸದ ಪುನರುತ್ಥಾನವಾಗಿದೆ.

ಶತಮಾನದ ಉತ್ಥಾನ: ಶತಮಾನದ ನಂತರ ಮಹರ್ಷಿ ದೈವರಾತರ ನಿರ್ವಿುತಿಗಳು ಪುನರಪಿ ಜೀವ ತಳೆದಿರುವುದು ವಿಶೇಷ! ಮಹರ್ಷಿಗಳು ತಮ್ಮ 27ನೇ ವಯಸ್ಸಿನಲ್ಲಿ 1919ರಲ್ಲಿ ಈ ಎಲ್ಲ ಚಟುವಟಿಕೆಗಳನ್ನು ಗೋಕರ್ಣದ ಸಮುದ್ರ ತೀರದಲ್ಲಿ ಮತ್ತು ಇದೇ ಅಶೋಕಾವನದಲ್ಲಿ ಪ್ರಾರಂಭಿಸಿದ್ದರು. ಸಮುದ್ರ ತೀರದ 10 ಎಕರೆ ವಿಸ್ತೀರ್ಣದಲ್ಲಿ ಋಷಿಕುಲ ಬ್ರಹ್ಮಚರ್ಯಾಶ್ರಮ, ಅಶೋಕೆಯಲ್ಲಿ ಗೋಶಾಲೆ ಮತ್ತು ದೇಶೀಯ ಕೃಷಿಗೆ ಚಾಲನೆ ನೀಡಿದ್ದರು. ದೈವರಾತರ ಈ ಪರಿಶ್ರಮ ದೇಶದಲ್ಲಿಯೇ ಖ್ಯಾತವೆತ್ತಿ ಪ್ರಥಮ ರಾಷ್ಟ್ರಾಧ್ಯಕ್ಷ ಬಾಬು ರಾಜೇಂದ್ರಪ್ರಸಾದರಂತವರು ಭೇಟಿ ಕೊಡುವಂತೆ ಮಾಡಿತ್ತು. 60ರ ದಶಕದಲ್ಲಿ ಬಂದ ಮಹಾ ಪ್ರವಾಹದಲ್ಲಿ ಸಮುದ್ರ ತೀರದ ಸಮಸ್ತವೂ ಜಲಾರ್ಪಣವಾದ ನಂತರ ಅಶೋಕಾವನ ಸರ್ವ ಪರಿಕಲ್ಪನೆಗಳ ಮೂಲ ತಾಣವಾಯಿತು. ಈಗ ಇವೆಲ್ಲವುಗಳೂ ಮಹರ್ಷಿ ದೈವರಾತರ ಸಮಸ್ತ ಕುಟುಂಬದ ಒತ್ತಾಸೆಯಿಂದ ಅವರ ಮರಿಮೊಮ್ಮಗ ಡಾ.ಪತಂಜಲಿ ಶರ್ಮ ನೇತೃತ್ವದಲ್ಲಿ ಮತ್ತೆ ವಿಜೃಂಭಿಸಿ ಅಶೋಕೆ ದೈವರಾತರ ಕಾಲಮಾನದಂತೆ ಮತ್ತೆ ಆಕರ್ಷಣೆಯ ವೀಕ್ಷಣಾ ತಾಣವಾಗುತ್ತಿದೆ.

ದುಡ್ಡಿನ ವ್ಯವಹಾರದಿಂದ ದೂರ: ಕಳೆದ ವಾರ ಜ.7ರಂದು ಆಚರಿತವಾದ ಮಹರ್ಷಿಗಳ ಜನ್ಮ ದಿನದಂದು ನೂತನ ದೈವರಾತ ಆಶ್ರಮ ಉದ್ಘಾಟಿತವಾಯಿತು. ಈ ಆಶ್ರಮದಲ್ಲಿ ಅಗತ್ಯ ವ್ಯವಸ್ಥೆಗಳಿರುವ ಪ್ರತ್ಯೇಕವಾದ ಏಳು ಕುಟೀರಗಳಿವೆ. ಹಸಿರು ವನದ ಮಧ್ಯೆ ದೂರ ದೂರದಲ್ಲಿ ಇವುಗಳನ್ನು ಕಟ್ಟಲಾಗಿದೆ. ದೈವರಾತರು ಆಶ್ರಮ, ಕೃಷಿ ಮತ್ತು ಗೋಶಾಲೆಗಳನ್ನು ವ್ಯವಹಾರ ವೃದ್ಧಿಗಾಗಿ ಅಥವಾ ಧನ ಸಂಗ್ರಹಣೆಗಾಗಿ ಎಂದೂ ಮಾಡಿದವರಲ್ಲ. ಇದೇ ನೀತಿ ನಿಯಮಗಳನ್ನು ಇಲ್ಲಿ ಅನುಸರಿಸಲಾಗುತ್ತಿದೆ. ಹೀಗಾಗಿ ಆಶ್ರಮದಲ್ಲಿ ಕುಟೀರಗಳನ್ನು ದುಡ್ಡಿಗಾಗಿ ಅಥವಾ ಪ್ರವಾಸೋದ್ಯಮ ದಂಧೆಗಾಗಿ ಬಾಡಿಗೆಗೆ ಕೊಡಲಾಗುವುದಿಲ್ಲ. ವಿಶೇಷ ಸಂಶೋಧನೆ, ಅಧ್ಯಯನ, ವೇದಾಭ್ಯಾಸ, ಯೋಗಾಭ್ಯಾಸ, ಕೃಷಿ ಶಿಕ್ಷಣ, ಗೋಸೇವೆ ಮುಂತಾದ ನಿಃಸ್ವಾರ್ಥ ಸೇವೆಗಳನ್ನು ಮಾಡಲು ಬರುವವರಿಗೆ ಇವುಗಳು ಮೀಸಲಾಗಿವೆ. ಇಂತವರಿಗೆ ವಸತಿಯ ಜೊತೆಗೆ ಊಟೋಪಚಾರವೂ ಉಚಿತ. ಆಡಂಬರವಾಗಿ ಇರಲಿಚ್ಛಿಸುವವರಿಗೆ ಇಲ್ಲಿ ಆಸ್ಪದವಿಲ್ಲ.

ಮಹರ್ಷಿ ದೈವರಾತರು ವೇದಕಾಲೀನ ಜೀವನ ಪದ್ಧತಿಯ ಪುನರುತ್ಥಾನಕ್ಕೆ ಇಂಬಿತ್ತವರು. ಇದಕ್ಕಾಗಿಯೇ ತಮ್ಮ ಜೀವನವನ್ನೆ ಮುಡುಪಿಟ್ಟವರು. ಅವರ ನಂತರ ಶತಮಾನ ಕಾಲ ಸ್ಥಗಿತಗೊಂಡಿದ್ದ ಅವರ ಎಲ್ಲ ಪರಿಕಲ್ಪನೆ ಗಳನ್ನು ಮತ್ತೆ ಕಾರ್ಯ ರೂಪಕ್ಕೆ ಇಳಿಸಲು ಸಮಸ್ತ ದೈವರಾತ ಕುಟುಂಬ ಇಂದು ಕಟಿ ಬದ್ಧವಾಗಿದೆ. ಇದರ ಜೊತೆಗೆ ಅವರ ಅಪ್ರಕಟಿತ ವಿಚಾರಧಾರೆಗಳ ಮುದ್ರಣ ಮತ್ತು ಪ್ರಸರಣವನ್ನು ಕೂಡ ಆಯೋಜಿಸಲಾಗುತ್ತಿದೆ. | ಡಾ.ಪತಂಜಲಿ ವೇದಶ್ರವ ಶರ್ಮ ಅಶೋಕಾವನ ಗೋಕರ್ಣ

ದೇಶೀಯ ತಳಿ ವೃದ್ಧಿ

ಅಶೋಕಾವನದಲ್ಲಿ ಎರಡು ವರ್ಷ ಹಿಂದಿನಿಂದಲೇ ದೈವರಾತ ಪ್ರಣೀತ ಸಾವಯವ ಕೃಷಿ ಕಾರ್ಯಗಳು ಮತ್ತು ಇದಕ್ಕೆ ಪೂರಕ ಮತ್ತು ಸಹಾಯಕವಾದ ಗೋಶಾಲೆ ಪ್ರಾರಂಭವಾಗಿದೆ. ದೇಶೀಯ ತಳಿಗಳಿಗೆ ಮಾತ್ರ ಇಲ್ಲಿ ಆದ್ಯತೆ. ಗೋಶಾಲೆಯಲ್ಲಿ ಒಟ್ಟು 60 ದೇಶೀಯ ತಳಿಯ ಗೋವುಗಳನ್ನು ಸಂರಕ್ಷಿಸಲಾಗುತ್ತಿದೆ. ಈ ಪೈಕಿ 25 ಗೀರ್ ಮತ್ತು 35 ಮಲೆನಾಡು ಗಿಡ್ಡ ಗೋವುಗಳಿವೆ. ದೈವರಾತರ ಗೋಶಾಲೆ ಮುಕ್ತ ಗೋಶಾಲೆಯಾಗಿತ್ತು. ಗೋವುಗಳಗೆ ದಾಬು ಬಿಗಿದು ಕೊಟ್ಟಿಗೆಯಲ್ಲಿ ಕೂಡು ಹಾಕುವುದನ್ನು ಅವರು ವಿರೋಧಿಸಿದ್ದರು. ಕೂಡು ಕೊಟ್ಟಿಗೆಯ ಇದೇ ಪದ್ಧತಿ ಇಲ್ಲಿ ಮುಂದುವರಿಸಲಾಗುತ್ತಿದೆ. ಇದರ ಜೊತೆಗೆ ಗೋವನ್ನು ಮಹರ್ಷಿಗಳು ಲಾಭಕ್ಕಾಗಿ ಸಾಕಿದವರಲ್ಲ. ಇದರ ಅನುಸರಣೆಯನ್ನು ಅಶೋಕಾವನದಲ್ಲಿ ತಪ್ಪದೆ ಮಾಡಲಾಗುತ್ತಿದೆ. ಗೋಶಾಲೆ ನಿರ್ವಹಣೆಗೆ ಪ್ರತಿ ಮಾಸ 1ಲಕ್ಷ 80 ಸಾವಿರ ರೂ. ವ್ಯಯವಾಗುತ್ತಿದೆ. ಇಲ್ಲಿಯೇ ಬೆಳೆಸಲಾಗುವ ಹಸಿರು ಹುಲ್ಲನ್ನು ಮತ್ತು ಇಲ್ಲಿಯೇ ತಯಾರಿಸುವ ಆಹಾರವನ್ನು ಮಾತ್ರ ಗೋವುಗಳಿಗೆ ಕೊಡಲಾಗುತ್ತದೆ. ಇದರ ಜೊತೆಗೆ ಪ್ರತಿ ತಿಂಗಳು 4 ಲಾರಿ ಒಣ ಹುಲ್ಲನ್ನು ಖರೀದಿಸಲಾಗುತ್ತಿದೆ. ದೊರಕುವ ಹಾಲನ್ನು ಮಾರಲಾಗುವುದಿಲ್ಲ. ಆಶ್ರಮ ಮತ್ತು ಆಯುರ್ವೆದ ಚಿಕಿತ್ಸೆಗೆ ಹಾಲು ಬಳಕೆಯಾಗುತ್ತದೆ.

ಋಷಿ ಮತ್ತು ಕೃಷಿ

ಕೃಷಿ ಇಲ್ಲದೆ ಋಷಿಯಾಗಲಾರ ಎಂಬುದು ಮಹರ್ಷಿಗಳ ಬಲವಾದ ನಂಬಿಕೆಯಾಗಿತ್ತು. ಹೀಗಾಗಿಯೇ ಆಶ್ರಮ ವಾಸಿಗಳಿಗೆ ಅವಶ್ಯವಿರುವ ಗರಿಷ್ಠ ಆಹಾರದ ಕೃಷಿ ಆಶ್ರಮದಲ್ಲಿ ಆಗುವಂತೆ ಅವರು ಶ್ರಮ ವಹಿಸಿದ್ದರು. ಇದೇ ಸಾವಯವ ಕೃಷಿಯನ್ನು ಈಗ ಇಲ್ಲಿ ಮುಂದುವರಿಸಲಾಗುತ್ತಿದೆ. ಇಂತಹ ಋಷಿ ಪರಂಪರೆಯ ಸನಾತನ ವೇದ ಕಾಲೀನ ವ್ಯವಸ್ಥೆಯನ್ನು ನೋಡಲೆಂದೆ ಅಂದು ಮಹರ್ಷಿ ದೈವರಾತರ ಆಶ್ರಮಕ್ಕೆ ಗಣ್ಯಾತಿಗಣ್ಯರಿಂದ ಹಿಡಿದು ಗೋಕರ್ಣಕ್ಕೆ ಯಾತ್ರಾರ್ಥವಾಗಿ ಬರುವವರೆಲ್ಲ ಬಂದು ಹೋಗುತ್ತಿದ್ದರು. ಇದೇ ಆಕರ್ಷಣೆಯನ್ನು ಇಂದಿನ ಆಧುನಿಕ ಯುಗದಲ್ಲಿ ಅಶೋಕಾವನ ಮತ್ತೆ ಹುಟ್ಟುಹಾಕುವ ಭರವಸೆಯಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net