

|ಚಂದ್ರಹಾಸ ಚಾರ್ವಡಿ
ಊರಿನ ಶ್ರದ್ಧಾಕೇಂದ್ರವೊಂದು ಸ್ವಚ್ಛಗೊಂಡರೆ ಆ ಊರಿನ ಜನರು ತಮ್ಮ ಮನೆ, ಪರಿಸರದ ಸ್ವಚ್ಛತೆಗೂ ಗಮನ ನೀಡುತ್ತಾರೆ. ಶ್ರದ್ಧಾಕೇಂದ್ರಗಳಿಂದ ಬರುವ ಸಂದೇಶವನ್ನು ಜನ ಮನಸಾರೆ ಒಪ್ಪಿಕೊಳ್ಳುತ್ತಾರೆ. ಅನುಪಾಲನೆ ಮಾಡುತ್ತಾರೆ. ಶ್ರದ್ಧಾಕೇಂದ್ರಗಳ ಮೂಲಕ ರಾಜ್ಯದ ಜನತೆಯಲ್ಲಿ ಸ್ವಚ್ಛತೆಯ ಕುರಿತು ಜಾಗೃತಿ ಮೂಡಿಸಬೇಕು, ಆ ಮೂಲಕ ಸ್ವಚ್ಛ ಕರ್ನಾಟಕ ನಿರ್ವಣವಾಗಬೇಕೆಂಬ ಆಶಯದೊಂದಿಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು 2016ರಲ್ಲಿ ಮಠಾಧಿಪತಿಗಳು, ಧಾರ್ವಿುಕ ಮುಖಂಡರ ಸಭೆ ಕರೆದು ರ್ಚಚಿಸಿ ‘ಸ್ವಚ್ಛ ಶ್ರದ್ಧಾಕೇಂದ್ರಗಳು’ ಎಂಬ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮಕರ ಸಂಕ್ರಮಣ ಕಾಲ, ಅಂದರೆ, ಜನವರಿ ತಿಂಗಳ ಮೊದಲ ವಾರ ಮತ್ತು ಸ್ವಾತಂತ್ರ್ಯೋತ್ಸವ ಸಂದರ್ಭ ಆಗಸ್ಟ್ ಮೊದಲ ವಾರ, ಹೀಗೆ ವರ್ಷದಲ್ಲಿ ಎರಡು ಬಾರಿ ರಾಜ್ಯದಾದ್ಯಂತ 45 ಲಕ್ಷ ಮಂದಿ ಸದಸ್ಯರನ್ನು ಹೊಂದಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಂದಾಳತ್ವದಲ್ಲಿ ಆಯಾ ಊರಿನ ಸಂಘದ ಸದಸ್ಯರು ಮತ್ತು ಇತರರನ್ನು ಒಟ್ಟುಗೂಡಿಸಿ ಸ್ವಚ್ಛತೆಯ ಕೆಲಸ ನಡೆಯುತ್ತದೆ. ಸ್ವಚ್ಛತೆಗೆ ಬೇಕಾದ ಅಗತ್ಯ ಪರಿಕರಗಳನ್ನು ಗ್ರಾಮಾಭಿವೃದ್ಧಿ ಯೋಜನೆಯಿಂದ ಉಚಿತವಾಗಿ ಒದಗಿಸಲಾಗುತ್ತದೆ. ಸ್ವಚ್ಛತೆ ಕೆಲಸ ನಡೆಯುತ್ತಿರುವ ಕೆಲವು ಸ್ಥಳಗಳಿಗೆ ಸ್ವತಃ ಹೆಗ್ಗಡೆಯವರೇ ಭೇಟಿ ನೀಡಿ ಮಾರ್ಗದರ್ಶನ ನೀಡುತ್ತಾರೆ. ಎಲ್ಲ ಧರ್ಮದವರು ಸೇರಿ ದೇವಾಲಯ, ಮಸೀದಿ, ಚರ್ಚ್ಗಳ ಸ್ವಚ್ಛತೆಯಲ್ಲಿ ತೊಡಗುವುದು ಇಲ್ಲಿನ ವಿಶೇಷ. ಇದರಿಂದಾಗಿ ಊರಿನಲ್ಲಿ ಸಾಮರಸ್ಯದ ವಾತಾವರಣ ನಿರ್ವಣವಾಗುತ್ತಿದೆ ಎನ್ನುತ್ತಾರೆ ಧಾರ್ವಿುಕ ಮುಖಂಡರು.
ಪರಿಣಾಮವೇನಾಗಿದೆ?: ‘‘ಹಿಂದೆ ದೇವಸ್ಥಾನದ ಸುತ್ತ ಗಿಡಗಂಟಿಗಳು ಬೆಳೆದಿದ್ದವು. ದೇವಾಲಯಕ್ಕೆ ಹೋಗುವುದೇ ಕಷ್ಟವಾಗಿತ್ತು. ಬರುತ್ತಿದ್ದ ಭಕ್ತರ ಸಂಖ್ಯೆಯೂ ದಿನೇದಿನೆ ಕಡಿಮೆಯಾಗುತ್ತಿತ್ತು. ಇದೀಗ ವರ್ಷದಲ್ಲಿ ಎರಡು ಬಾರಿ ಊರಿನ ಮಂದಿಯೆಲ್ಲ ಸೇರಿ ಸ್ವಚ್ಛಗೊಳಿಸುತ್ತಿದ್ದೇವೆ. ಇದರಿಂದಾಗಿ ದೇವಾಲಯಕ್ಕೆ ಪ್ರತಿನಿತ್ಯ ಬರುವ ಭಕ್ತರ ಸಂಖ್ಯೆಯೂ ಹೆಚ್ಚಾಗಿದೆ. ದೇವಾಲಯದ ಸ್ವಚ್ಛತೆಯನ್ನು ನೋಡಿ ಪುಳಕಿತರಾದ ಜನರು ಊರನ್ನು ಕೂಡ ವರ್ಷದಲ್ಲಿ ನಾಲ್ಕೈದು ಬಾರಿ ಸ್ವಚ್ಛಗೊಳಿಸುತ್ತಿದ್ದಾರೆ...’’ ಎಂಬುದು ಈ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿರುವ ಭದ್ರಾವತಿಯ ನಾಗೇಶ್ ಅವರ ಅಭಿಪ್ರಾಯ. ಕಾರ್ಯಕ್ರಮದಿಂದ ಆದ ಪರಿವರ್ತನೆಗಳ ಪಟ್ಟಿ ದೊಡ್ಡದು. ಊರವರೇ ಹೇಳುವಂತೆ ಗಿಡಗಂಟಿಗಳಿಂದ ಸುತ್ತುವರಿದಿದ್ದ ಶ್ರದ್ಧಾಕೇಂದ್ರಗಳು ಮರುವೈಭವವನ್ನು ಪಡೆದಿವೆ. ಹರಿಹರ ತಾಲೂಕಿನಲ್ಲಿ ಭಕ್ತರಿಂದ ದೂರವಾಗಿದ್ದ ದೇವಾಲಯವೊಂದು ಬ್ರಹ್ಮಕಲಶವನ್ನು ಕಂಡು ಇದೀಗ ಸಾವಿರಾರು ಭಕ್ತರ ನಂಬುಗೆಯ ತಾಣವಾಗಿದೆ. ಕಾರ್ಯಕ್ರಮವನ್ನು ಮೆಚ್ಚಿ ರಾಜ್ಯ ಸರಕಾರ ಮುಜರಾಯಿ ಇಲಾಖೆಯಡಿ ಬರುವ ದೇವಸ್ಥಾನಗಳಲ್ಲೂ ಸ್ವಚ್ಛತಾ ಕಾರ್ಯಕ್ರಮವನ್ನು ಆರಂಭಿಸಿದೆ. ಧಾರ್ವಿುಕ ಮುಖಂಡರು, ವಿದ್ಯಾರ್ಥಿಗಳು, ಸಾರ್ವಜನಿಕರು ಹೀಗೆ ಈವರೆಗೆ ಸುಮಾರು 30 ಲಕ್ಷ ಮಂದಿ ಈ ಕೆಲಸದಲ್ಲಿ ಕೈ ಜೋಡಿಸಿದ್ದಾರೆ. ಜನರು ಸ್ವಚ್ಛತಾ ಕಾರ್ಯವನ್ನು ಜಾತ್ರೆ, ಉತ್ಸವಗಳು, ವಿಶೇಷ ಪರ್ವ ದಿನಗಳಲ್ಲಿ ಅಭಿಯಾನದಂತೆ ಮುಂದುವರಿಸಿದ್ದಾರೆ. ಈ ಕಾರ್ಯಕ್ರಮ ದೇಶದ ಸ್ವಚ್ಛತಾ ಅಭಿಯಾನಕ್ಕೆ ಹೊಸ ತಿರುವನ್ನು ನೀಡುತ್ತಿದೆ. ಎಲ್ಲೆಡೆ ಇಂತಹ ಪ್ರಯತ್ನಗಳಾದಾಗ ಸ್ವಚ್ಛ ಭಾರತ ಅಭಿಯಾನ ಯಶಸ್ಸಿನ ಉತ್ತುಂಗಕ್ಕೇರುವುದರಲ್ಲಿ ಸಂಶಯವಿಲ್ಲ.
ಶ್ರದ್ಧಾಕೇಂದ್ರಗಳ ಮುಂದಾಳತ್ವದಲ್ಲಿ ರಾಜ್ಯದ ಇತರ ಶ್ರದ್ಧಾಕೇಂದ್ರಗಳನ್ನು ಸ್ವಚ್ಛಗೊಳಿಸಲು ಪ್ರಯತ್ನಿಸಿದ ಈ ಉದಾಹರಣೆ ದೇಶದಲ್ಲೇ ಮೊದಲು. ಧರ್ಮಸ್ಥಳ ಈ ಕೆಲಸವನ್ನು ಮಾಡಿದೆ. ಕ್ಷೇತ್ರದಲ್ಲಿ ಸ್ವಚ್ಛತೆಗೆ ವಿಶೇಷ ಮಹತ್ವ ನೀಡಲಾಗುತ್ತಿದ್ದು ಪ್ರಶಸ್ತಿಗೂ ಭಾಜನವಾಗಿದೆ. 2016ರಲ್ಲಿ ನಿಯತಕಾಲಿಕವೊಂದು ದೇಶದಾದ್ಯಂತ ನಡೆಸಿದ ಸಮೀಕ್ಷೆಯಲ್ಲಿ ಧರ್ಮಸ್ಥಳವು ದೇಶದಲ್ಲಿಯೇ ಅತ್ಯಂತ ಸ್ವಚ್ಛ ಧಾರ್ವಿುಕ ಕ್ಷೇತ್ರವೆಂಬುದು ಸಾಬೀತಾಯಿತು. ಆ ನಿಯತಕಾಲಿಕದವರು ‘ಸ್ವಚ್ಛ ಧಾರ್ವಿುಕ ನಗರ’ ರಾಷ್ಟ್ರೀಯ ಸಫಾಯಿಗಿರಿ ಪ್ರಶಸ್ತಿ ನೀಡಿದರು. ಅದರ ನೆನಪಿಗಾಗಿ ಹುಟ್ಟಿಕೊಂಡ ಕಾರ್ಯಕ್ರಮ ಇದೀಗ ಮನೆ ಮಾತಾಗಿದೆ.
ಕಳೆದ ಐದು ವರ್ಷಗಳಿಂದ ಶ್ರದ್ಧಾಕೇಂದ್ರಗಳ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡ ಮಠಾಧೀಶರಿಗೆ, ಸಂತರಿಗೆ, ಮಹಾತ್ಮರಿಗೆ, ರಾಜ್ಯ ಸರಕಾರದ ಧಾರ್ವಿುಕ ದತ್ತಿ ಇಲಾಖೆಗೆ, ನೇತೃತ್ವ ವಹಿಸಿದ ದೇವಸ್ಥಾನಗಳ ಆಡಳಿತ ಮಂಡಳಿ ಅಧ್ಯಕ್ಷರಿಗೆ ಹಾಗೂ ಎಲ್ಲಾ ಸ್ವಯಂಸೇವಕರಿಗೆ ಈ ಪವಿತ್ರ ಕಾರ್ಯದಲ್ಲಿ ಭಾಗವಹಿಸಿದ ಲಕ್ಷಾಂತರ ಭಕ್ತರಿಗೆ, ಸಂಘ ಸಂಸ್ಥೆಗಳ ಸದಸ್ಯರಿಗೆ, ಗ್ರಾಮಾಭಿವೃದ್ಧಿ ಯೋಜನೆಯ ಎಲ್ಲ ಕಾರ್ಯಕರ್ತರಿಗೆ ಕೃತಜ್ಞತೆಗಳು ಮತ್ತು ಅಭಿನಂದನೆಗಳು.
| ಡಾ. ಡಿ. ವೀರೇಂದ್ರ ಹೆಗ್ಗಡೆ ಧರ್ವಧಿಕಾರಿ, ಧರ್ಮಸ್ಥಳ
ಶಾಲೆ ಮತ್ತು ದೇವಸ್ಥಾನ ಅಭಿವೃದ್ಧಿಯಾಗಿದ್ದರೆ ಆ ಗ್ರಾಮ ಅಭಿವೃದ್ಧಿ ಆಗಿದೆ ಎಂದೇ ಅರ್ಥ. ಈ ನಿಟ್ಟಿನಲ್ಲಿ ದೇವಸ್ಥಾನದ ಸ್ವಚ್ಛತೆ ಕೂಡ ಗ್ರಾಮದ ಅಭಿವೃದ್ಧಿಯ ಸಂಕೇತ. ಜನರಿಗೆ ಮಹತ್ವದ ಸಂದೇಶಗಳು ದೊರೆಯುವುದು ಶ್ರದ್ಧಾಕೇಂದ್ರಗಳಿಂದ. ಇಂದು ಜಗತ್ತಿನಾದ್ಯಂತ ಸ್ವಚ್ಛತೆ ಒಂದು ಪ್ರಮುಖ ವಿಷಯ. ಹಾಗಾಗಿ ಸ್ವಚ್ಛತೆಯ ಸಂದೇಶ ಶ್ರದ್ಧಾಕೇಂದ್ರಗಳಿಂದ ಬಂದರೆ ಜನರು ಬಹಳ ಚೆನ್ನಾಗಿ ಇದನ್ನು ಪಾಲಿಸುತ್ತಾರೆ. ಈ ಪರಿಕಲ್ಪನೆಯಲ್ಲಿ ಗ್ರಾಮಸ್ಥರೆಲ್ಲ ಸೇರಿ ಊರಿನ ಶ್ರದ್ಧಾಕೇಂದ್ರಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವಂತಹ ಪ್ರಯತ್ನ ಇದು. ಈ ಆಂದೋಲನಕ್ಕೆ ರಾಜ್ಯದ ಜನತೆಯಿಂದ ಉತ್ತಮ ಸ್ಪಂದನೆ ದೊರೆತಿದೆ.
| ಡಾ.ಎಲ್.ಎಚ್. ಮಂಜುನಾಥ್ ಕಾರ್ಯನಿರ್ವಾಹಕ ನಿರ್ದೇಶಕ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ
ಶ್ರದ್ಧಾಕೇಂದ್ರಗಳ ಒಳಾಂಗಣ ಮತ್ತು ಸುತ್ತಮುತ್ತಲಿನ ಗಿಡ ಗಂಟಿಗಳನ್ನು ತೆಗೆದು ಸ್ವಚ್ಛಗೊಳಿಸುವುದು, ದೇವಸ್ಥಾನದ ಕಲ್ಯಾಣಿ, ಸಭಾಭವನ, ಅಶ್ವತ್ಥಕಟ್ಟೆ, ಅರಳಿಕಟ್ಟೆಗಳನ್ನು ಸ್ವಚ್ಛಗೊಳಿಸುವುದು, ಪ್ಲಾಸ್ಟಿಕ್ ಬಳಕೆ ನಿಲ್ಲಿಸಿ ಬಟ್ಟೆ ಚೀಲ ಬಳಕೆ ಮಾಡುವುದು, ಜಾತ್ರೆ-ವಿಶೇಷ ಕಾರ್ಯಕ್ರಮದ ದಿನ ಸ್ವಚ್ಛತೆಗೆ ತಂಡ ರಚಿಸಿ ಜಾಗೃತಿ ಮೂಡಿಸುವುದು ಮುಂತಾದವು ಈ ಕಾರ್ಯಕ್ರಮದ ಅಂಗವಾಗಿ ನಡೆಯುವ ಚಟುವಟಿಕೆಗಳು. ಶ್ರದ್ಧಾಕೇಂದ್ರಗಳ ಸುತ್ತಮುತ್ತ ಉಗುಳುವುದು, ಅಡುಗೆ ಮಾಡುವುದು, ಮಕ್ಕಳಿಗೆ ಸ್ನಾನ ಮಾಡಿಸುವುದು, ಕಲ್ಯಾಣಿ ಕೆರೆಗಳಲ್ಲಿ ಬಟ್ಟೆ ಒಗೆಯುವುದು, ಎಲ್ಲೆಂದರಲ್ಲಿ ಕಸಕಡ್ಡಿ, ಪ್ಲಾಸ್ಟಿಕ್ ಬಾಟಲ್, ತಿಂಡಿ ಕವರ್ಗಳನ್ನು ಬಿಸಾಡದಂತೆ, ದೇಹಬಾಧೆ ತೀರಿಸಿಕೊಳ್ಳದಂತೆ ಜನರಿಗೆ ಮಾಹಿತಿ ನೀಡುವ ಫಲಕಗಳನ್ನು ಅಳವಡಿಸುವುದು ಕೂಡ ಇದರ ಒಂದು ಭಾಗ. ಕಸ ಹಾಕಲು ಬುಟ್ಟಿಗಳನ್ನು ಇಡುವುದು, ಶ್ರದ್ಧಾಕೇಂದ್ರಗಳ ಹೊರಾಂಗಣವನ್ನು ಊರಿನ ಜನರು, ಒಳಾಂಗಣವನ್ನು ಮತ್ತು ಪೂಜಾ ಸಾಮಗ್ರಿಗಳನ್ನು ಅರ್ಚಕರು ಶುಚಿಗೊಳಿಸುವುದು... ಇಂತಹ ಸ್ವಚ್ಛತಾ ಕೆಲಸ ನಡೆಯುತ್ತದೆ. ಸಾರ್ವಜನಿಕ ಶೌಚಾಲಯ, ನಗರ ಸ್ವಚ್ಛತೆ, ಬೀದಿ ಸ್ವಚ್ಛತೆಗೆ ಒತ್ತು ನೀಡುವುದು ಕೂಡ ಇದರದೇ ಒಂದು ಭಾಗವಾಗಿದೆ.