ಸ್ಟಾರ್​ ನಟನ ತಂದೆಯ ಬಂಧನ; ಫಾರ್ಮ್​ಹೌಸ್​ನಲ್ಲಿ ಗ್ಯಾಂಬ್ಲಿಂಗ್ ನಡೆಸಿದ ಆರೋಪ..

Gambling
Published on

ಹೈದರಾಬಾದ್​: ಫಾರ್ಮ್​ಹೌಸ್​ನಲ್ಲಿ ಗ್ಯಾಂಬ್ಲಿಂಗ್ ನಡೆಸಿದ ಆರೋಪದ ಮೇಲೆ ಸ್ಟಾರ್​ ನಟನ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ. ಫಾರ್ಮ್​ಹೌಸ್​ ಗುತ್ತಿಗೆಗೆ ಪಡೆದು ಅಲ್ಲಿ ಜೂಜು ದಂಧೆ ನಡೆಸುತ್ತಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ.

ಹೀಗೆ ಬಂಧನಕ್ಕೆ ಒಳಗಾಗಿರುವುದು ತೆಲುಗಿನ ಖ್ಯಾತ ನಟ ನಾಗ ಶೌರ್ಯ ಅವರ ತಂದೆ ಶಿವಲಿಂಗ ಪ್ರಸಾದ್. ಜೂಜು ದಂಧೆ ಆರೋಪದ ಮೇಲೆ ಬುಧವರ ಶಿವಲಿಂಗ ಪ್ರಸಾದ್ ಅವರನ್ನು ಬಂಧಿಸಿರುವ ಪೊಲೀಸರು ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಮತ್ತೊಂದೆಡೆ ಅವರಿಂದ ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಕೂಡ ಸಲ್ಲಿಕೆ ಆಗಿದೆ.

ಹೈದರಾಬಾದ್​ನ ನರ್ಸಿಂಗಿಯ ಮಂಚಿರೆವುಲ ಎಂಬಲ್ಲಿ ಈ ಫಾರ್ಮ್​ ಹೌಸ್​ ಇದ್ದು, ಅದನ್ನು ಚಿತ್ರೀಕರಣ ಉದ್ದೇಶಕ್ಕಾಗಿ ಶಿವಲಿಂಗ ಪ್ರಸಾದ್ ಗುತ್ತಿಗೆಗೆ ಪಡೆದಿದ್ದರು. ಆದರೆ ಅ. 31ರಂದು ಆ ಫಾರ್ಮ್​ಹೌಸ್​ಅನ್ನು ಬಾಡಿಗೆಗೆ ಪಡೆದಿದ್ದ ಗುಟ್ಟ ಸುಮನ್​ ಕುಮಾರ್ ಎಂಬಾತ ಜೂಜು ದಂಧೆ ಸೇರಿ ಕೆಲವು ಕಾನೂನುಬಾಹಿರ ಚಟುವಟಿಕೆ ನಡೆಸಿದ್ದ.

ಈ ಕುರಿತು ಮಾಹಿತಿ ತಿಳಿದ ಪೊಲೀಸರು ದಾಳಿ ನಡೆಸಿದ್ದು, ಅಂದು ಮಾಜಿ ಶಾಸಕ ಶ್ರೀರಾಮ್​ ಭದ್ರಯ್ಯ ಸೇರಿ 30 ಮಂದಿಯನ್ನು ಬಂಧಿಸಿದ್ದರು. 6.77 ಲಕ್ಷ ರೂ. ನಗದು, 33 ಮೊಬೈಲ್​ಫೋನ್​ , 29 ಗ್ಯಾಂಬ್ಲಿಂಗ್ ಸೆಟ್​ ವಶಪಡಿಸಿಕೊಂಡಿದ್ದರು. ಆ ಬಳಿಕ ಗುಟ್ಟ ಸುಮನ್​ ಕುಮಾರ್ ಹೊರತು ಪಡಿಸಿ ಎಲ್ಲರಿಗೂ ಜಾಮೀನು ಸಿಕ್ಕಿದ್ದು, ಒಂದೆರಡು ದಿನಗಳ ಹಿಂದೆ ಸುಮನ್​ಗೂ ಜಾಮೀನು ಸಿಕ್ಕಿದೆ.

ಸುಮನ್​ ಹೈದರಾಬಾದ್ ಮಾತ್ರವಲ್ಲದೆ ಬೆಂಗಳೂರು, ವಿಜಯವಾಡ ಮುಂತಾದೆಡೆಯೂ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವುದು ತಿಳಿದು ಬಂದಿದ್ದು, ಪೊಲೀಸರು ಆತನನ್ನು ಮತ್ತಷ್ಟು ವಿಚಾರಣೆಗೆ ಒಳಪಡಿಸಿದ್ದಾರೆ. ಈ ಸಂಬಂಧ ಮತ್ತಷ್ಟು ತನಿಖೆ ನಡೆಸಿರುವ ಪೊಲೀಸರು ಶಿವಲಿಂಗ ಪ್ರಸಾದ್ ಅವರನ್ನು ಬಂಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net