ಸೆx ತಿರಸ್ಕಾರ ತಂದ ಜೈಲುವಾಸ; ಆ ಕ್ಷಣ ಅಂಕಣ..

Office work
Published on
ನಿವೃತ್ತ ಬ್ಯಾಂಕ್ ಮ್ಯಾನೇಜರ್ ರಾಮಕೃಷ್ಣ ತಮ್ಮ ಪತ್ನಿ ಸೀತಮ್ಮ ಜೊತೆ ನಗರವೊಂದರಲ್ಲಿ ವಾಸಿಸುತ್ತಿದ್ದರು. ಅವರಿಗೆ ಒಬ್ಬ ಮಗ ಹಾಗೂ ಮಗಳಿದ್ದು ಇಬ್ಬರೂ ಅಮೆರಿಕ ಮತ್ತು ಇಂಗ್ಲೆಂಡ್​ಗಳಲ್ಲಿ ಕೆಲಸದಲ್ಲಿದ್ದರು. ಇಂಗ್ಲೆಂಡಿನಲ್ಲಿದ್ದ ಮಗಳಿಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದರು. ಮಗನಿಗಾಗಿ ರಾಮಕೃಷ್ಣ ವಧು ಹುಡುಕುತ್ತಿದ್ದರು. ಆತ ಅಮೆರಿಕದಲ್ಲಿ ಉತ್ತಮ ನೌಕರಿಯಲ್ಲಿದ್ದರೂ ಹೆಣ್ಣು ಸಿಗುವುದು ಕಠಿಣವಾಯಿತು. ಆಗವರು ಸ್ಥಳೀಯ ಮದುವೆ ಬ್ರೋಕರ್ ವಿಶಾಲಾಕ್ಷಿಯನ್ನು ಸಂರ್ಪಸಿದರು.

55 ವರ್ಷ ವಯಸ್ಸಿನ ವಿಶಾಲಾಕ್ಷಿ ರಾಮಕೃಷ್ಣರ ಮನೆಯ ಬಳಿಯೇ ವಾಸವಿದ್ದು ಆಕೆಯ ಪತಿ ಸುಂದರ್ ನಿವೃತ್ತ ಶಿಕ್ಷಕರಾಗಿದ್ದರು. ದಂಪತಿಗೆ ಮಕ್ಕಳಿರಲಿಲ್ಲ. ಪತಿಪತ್ನಿಯರಿಬ್ಬರೂ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು. ವಿಶಾಲಾಕ್ಷಿ ಹಲವಾರು ಸಂಘ ಸಂಸ್ಥೆಗಳ ಸದಸ್ಯೆಯಾಗಿದ್ದಲ್ಲದೇ ವಧು-ವರರ ಅನ್ವೇಷಣ ಕಾರ್ಯದಲ್ಲಿಯೇ ತಮ್ಮನ್ನು ಹೆಚ್ಚಾಗಿ ತೊಡಗಿಸಿಕೊಂಡಿದ್ದರು. ತಾವು ಮಾಡುತ್ತಿದ್ದ ಕಾರ್ಯಕ್ಕಾಗಿ ಯಾರಿಂದಲೂ ಹಣ ಪಡೆಯದ ಕಾರಣ ಅವರು ಜನಪ್ರಿಯರಾಗಿದ್ದರು. ರಾಮಕೃಷ್ಣರಿಗೆ ವಿಶಾಲಾಕ್ಷಿ ಹಲವಾರು ಯುವತಿಯರ ಮಾಹಿತಿ ಕೊಟ್ಟರು. ಆದರೆ ಅವು ಯಾವುವೂ ಸರಿಬರಲಿಲ್ಲ.

ಸುಮಾರು ಆರು ತಿಂಗಳು ರಾಮಕೃಷ್ಣ ಎಡಬಿಡದೇ ಪ್ರತಿದಿನವೂ ವಿಶಾಲಾಕ್ಷಿಯ ಮನೆಗೆ ಹೋಗುತ್ತಿದ್ದ ಕಾರಣ ಅವರಿಗೆ ವಿಶಾಲಾಕ್ಷಿ ಪತಿ ಸುಂದರ್ ಸಹ ಹತ್ತಿರವಾದರು. ಕಾಲಕ್ರಮೇಣ ಈ ಪರಿಚಯವು ಸ್ನೇಹಕ್ಕೆ ತಿರುಗಿ ಎರಡೂ ಕುಟುಂಬಗಳು ಕಾಲಕಾಲಕ್ಕೆ ಭೇಟಿಯಾಗತೊಡಗಿದವು. ಕಡೆಗೆ ವಿಶಾಲಾಕ್ಷಿಯ ಸಹಾಯದಿಂದಲೇ ಒಬ್ಬ ಸುಶಿಕ್ಷಿತ ಯುವತಿ ರಾಮಕೃಷ್ಣರ ಸೊಸೆಯಾಗಿ ಬಂದಳು. ಹೀಗಾಗಿ ಎರಡೂ ಕುಟುಂಬಗಳ ಬಾಂಧವ್ಯ ಇನ್ನಷ್ಟು ಬೆಸೆಯಿತು.

ಎರಡು ವರ್ಷಗಳ ನಂತರ ಒಂದು ದಿನ ಸೀತಮ್ಮ ಹೃದಯಾಘಾತದಿಂದ ನಿಧನರಾದರು. ರಾಮಕೃಷ್ಣರಿಗೆ ಆಕಾಶವೇ ತಲೆಯ ಮೇಲೆ ಕಳಚಿ ಬಿದ್ದಂತಾಯಿತು. ಏಕೆಂದರೆ ತಮ್ಮ ನಿವೃತ್ತಿಯ ನಂತರ ಅವರ ಇಡೀ ಜೀವನ ಹೆಂಡತಿಯ ಮೇಲೆಯೇ ಅವಲಂಬಿತವಾಗಿತ್ತು. ಆವರು ತೀವ್ರ ರೀತಿಯ ಷಾಕ್​ಗೆ ಗುರಿಯಾದರು. ತಾಯಿಯ ಅಂತ್ಯಕ್ರಿಯೆಗೆ ಮಕ್ಕಳಿಬ್ಬರೂ ವಿದೇಶದಿಂದ ಬಂದರು. ಎಲ್ಲ ಕಾರ್ಯಗಳು ಮುಗಿದ ನಂತರ ತಂದೆ ಬಳಿ ತೆರಳಿದ ಮಗ, ಅಪ್ಪಾ, ನಿಮಗೆ ಅಮ್ಮನಿಲ್ಲದೆ ಒಬ್ಬರೇ ಮನೆಯಲ್ಲಿರುವುದು ಸಾಧ್ಯವೇ ಇಲ್ಲ. ಹೇಗಿದ್ದರೂ ನಿಮ್ಮ ಬಳಿ ಅಮೆರಿಕದ ಹತ್ತು ವರ್ಷದ ವೀಸಾ ಇದೆ. ನೀವು ನನ್ನ ಜತೆಗೆ ಬಂದು ನಮ್ಮ ಮನೆಯಲ್ಲಿ ಆರು ತಿಂಗಳು ಕಳೆದು ಅಮ್ಮ ಹೋದ ದುಃಖವನ್ನು ಮರೆಯಿರಿ ಎಂದು ಬಲವಂತದಿಂದ ಅವರನ್ನು ತನ್ನೊಡನೆ ಅಮೆರಿಕಕ್ಕೆ ಕರೆದುಕೊಂಡು ಹೋದ. ಅಮೆರಿಕದಲ್ಲಿ ರಾಮಕೃಷ್ಣರಿಗೆ ಒಂಟಿತನವು ಇನ್ನಷ್ಟು ಕಾಡತೊಡಗಿತು. ಮಗ ಮತ್ತು ಸೊಸೆ ಇಬ್ಬರೂ ಕೆಲಸಕ್ಕೆ ಹೋಗುತ್ತಿದ್ದರು, ಮೊಮ್ಮಕ್ಕಳು ಶಾಲೆಗೆ ಹೋಗುತ್ತಿದ್ದರು, ಮನೆಯಲ್ಲಿ ಒಬ್ಬರೇ ಇರಬೇಕಾಗಿತ್ತು. ನಮ್ಮ ಊರಿನಲ್ಲಿಯೇ ಇದ್ದಿದ್ದರೆ ಚೆನ್ನಾಗಿರುತ್ತಿತ್ತೇನೋ, ಅಲ್ಲಿ ಮಾತನಾಡಲು ಗೆಳೆಯರಾದರೂ ಸಿಗುತ್ತಿದ್ದರು. ಇಲ್ಲಿ ಯಾರೂ ಇರದೆ ಇನ್ನಷ್ಟು ಒಬ್ಬಂಟಿಯಾದೆ ಎಂದು ರಾಮಕೃಷ್ಣ ಭಾವಿಸಿದರು. ಮೂರು ತಿಂಗಳ ಬಳಿಕ ಅವರು ತಮ್ಮ ಮಗನಿಗೆ ಅಮೆರಿಕದಲ್ಲಿ ಕಾಲಕಳೆಯಲು ತಮಗೆ ಆಗುತ್ತಿಲ್ಲವೆಂದು ಹೇಳಿ ಸ್ವದೇಶಕ್ಕೆ ವಾಪಸ್ ಬಂದರು. ಮನೆಗೆ ಬಂದಾಗ ಪತ್ನಿಯಿರದ ಅವರ ದೊಡ್ಡ ಮನೆ ಬಿಕೋ ಎನ್ನತೊಡಗಿತ್ತು.

ಮನೆಗೆಲಸಗಳನ್ನು ಮಾಡಲು ಆಳುಕಾಳುಗಳು ಇದ್ದರು. ವೇಳೆ ಕಳೆಯಲು ರಾಮಕೃಷ್ಣ ಪತ್ರಿಕೆಗಳನ್ನು ಓದುವುದಲ್ಲದೇ, ಬೆಳಗ್ಗೆ ಮತ್ತು ಸಂಜೆ ವಾಕಿಂಗ್ ಹೋಗಿ ಮಿತ್ರರೊಡನೆ ಕಾಲ ಕಳೆಯುತ್ತಿದ್ದರು. ಸಭೆ, ಸಮಾರಂಭಗಳಲ್ಲಿ ಭಾಗವಹಿಸತೊಡಗಿದರು. ವಿಶಾಲಾಕ್ಷಿ ಮತ್ತು ಸುಂದರ್​ರ ಮನೆಗೆ ಎರಡು ದಿನಕ್ಕೊಮ್ಮೆ ಹೋಗಿ ಬರುತ್ತಿದ್ದರು. ಹಬ್ಬ ಹರಿದಿನಗಳಲ್ಲಿ ಅವರ ಮನೆಯಲ್ಲಿಯೇ ಊಟಮಾಡುತ್ತಿದ್ದರು. ಅವರ ಜೊತೆಯೇ ಹತ್ತಿರದ ಊರುಗಳಿಗೆ ಪ್ರವಾಸ ಹೋಗಿ ಬರುತ್ತಿದ್ದರು. ಆದರೆ ಈ ಎಲ್ಲ ಚಟುವಟಿಕೆಗಳಿಂದಲೂ ಅವರಿಗೆ ಸಮಾಧಾನವಾಗಿರಲಿಲ್ಲ. ಸೋಷಿಯಲ್ ಮೀಡಿಯಾ ಮತ್ತು ಜಾಲತಾಣಗಳ ಮೊರೆ ಹೋದರು. ಪ್ರತಿದಿನವೂ ಗಂಟೆಗಟ್ಟಲೇ ಕಂಪ್ಯೂಟರಿನ ಮುಂದೆಯೇ ಕಳೆಯತೊಡಗಿದರು. ಒಂದು ರಾತ್ರಿ ಅವರಿಗೆ ಕಂಪ್ಯೂಟರಿನಲ್ಲಿ ಪೋನೋಗ್ರಾಫಿಕ್ (ಅಶ್ಲೀಲ ಹಾಗೂ ಕಾಮಪ್ರಚೋದಕ) ವೆಬ್​ಸೈಟೊಂದು ಎದುರಾಯಿತು. ಅದನ್ನು ನೋಡುತ್ತ ನೋಡುತ್ತ ರಾಮಕೃಷ್ಣ ಮೈಮರೆತರು. ಅಂದಿನಿಂದ ಆ ಸೈಟನ್ನು ಪ್ರತಿರಾತ್ರಿ ನೋಡುವುದೇ ಅವರ ಹವ್ಯಾಸವಾಯಿತು.

ಏತನ್ಮಧ್ಯೆ ಸುಂದರ್ ಯಾವುದೋ ಕಾಯಿಲೆಗೆ ತುತ್ತಾಗಿ ಹತ್ತು ದಿನ ಆಸ್ಪತ್ರೆಯಲ್ಲಿದ್ದು ಪ್ರಾಣ ಬಿಟ್ಟರು. ವಿಶಾಲಾಕ್ಷಿ ಪತಿಯ ಅಗಲಿಕೆಯನ್ನು ಸಹಿಸದಾದರು. ಕೆಲಕಾಲ ಅವರು ದೂರದೂರಿನ ಸೋದರಿಯ ಮನೆಗೆ ಹೋಗಿ ಅಲ್ಲಿ ಎರಡು ತಿಂಗಳಿದ್ದು ಮನೆಗೆ ವಾಪಸಾದರು. ಅವರು ಊರಿಗೆ ಬಂದ ನಂತರ ರಾಮಕೃಷ್ಣ ಪ್ರತಿ ದಿನವೂ ಅವರ ಮನೆಗೆ ಹೋಗಿ ಅವರಿಗೆ ಸಾಂತ್ವನ ನೀಡುತ್ತಾ ಇಡೀ ದಿನ ಅವರೊಡನೆಯೇ ಕಳೆದು ರಾತ್ರಿ ತಮ್ಮ ಮನೆಗೆ ಮರಳುತ್ತಿದ್ದರು. ಸುಂದರ್ ಮಾಡುತ್ತಿದ್ದ ಎಲ್ಲ ಕೆಲಸಗಳನ್ನೂ ರಾಮಕೃಷ್ಣ ಮಾಡಿಕೊಡುತ್ತಿದ್ದರು. ಇದರಿಂದ ವಿಶಾಲಾಕ್ಷಿ ಕಾಲಕ್ರಮೇಣ ತಮ್ಮ ನೋವನ್ನು ಮರೆತರು. ಸುಮಾರು 6 ತಿಂಗಳು ಹೀಗೆಯೇ ಕಳೆದ ನಂತರ ಒಂದು ದಿನ ರಾಮಕೃಷ್ಣ ವಿಶಾಲಾಕ್ಷಿಯನ್ನುದ್ದೇಶೀಸಿ, ಈಗ ನೀವೂ ಒಬ್ಬಂಟಿಯಾಗಿದ್ದೀರಿ, ನಾನೂ ಒಬ್ಬಂಟಿಯಾಗಿರುವೆ. ನೀವು ನಮ್ಮ ಮನೆಗೇ ಬಂದು ವಾಸಮಾಡಿ. ನಿಮಗೆ ಹೊತ್ತು ಹೋಗುತ್ತದೆ. ಹೇಗಿದ್ದರೂ ನಮ್ಮ ಮನೆಯಲ್ಲಿ ಆಳುಕಾಳುಗಳಿದ್ದಾರೆ. ಇಬ್ಬರಿಗೂ ಅನುಕೂಲವಾಗುತ್ತದೆ. ನೀವು ನಿಮ್ಮ ಸಾಮಾಜಿಕ ಚಟುವಟಿಕೆಗಳನ್ನು ಮುಂದುವರೆಸಿ ಎಂದರು. ಆರಂಭದಲ್ಲಿ ವಿಶಾಲಾಕ್ಷಿ ಈ ಪ್ರಸ್ತಾವನೆಗೆ ಒಪ್ಪದೆ ನಿಮಗೆ ಮಕ್ಕಳಿದ್ದಾರೆ, ಅವರನ್ನೊಮ್ಮೆ ಕೇಳಿ ನೋಡಿ ಎಂದರು.

ಅದೇ ರಾತ್ರಿ ರಾಮಕೃಷ್ಣ ತಮ್ಮ ಇಬ್ಬರೂ ಮಕ್ಕಳಿಗೆ ಕರೆ ಮಾಡಿ ವಿಷಯ ತಿಳಿಸಿದರು. ಮಕ್ಕಳಿಬ್ಬರೂ ತಮ್ಮ ತಂದೆ ವಿಶಾಲಾಕ್ಷಿಯವರ ಜೊತೆ ಸಹಜೀವನ ಮಾಡುವುದೇ ಸೂಕ್ತವೆಂದು ಅಭಿಪ್ರಾಯ ಕೊಟ್ಟರು. ಅಪ್ಪ, ನೀನು ಹೇಗಿದ್ದರೂ ಒಬ್ಬಂಟಿಯಾಗಿರುವೆ. ನಿನಗೆ ಕಂಪನಿಯ ಅಗತ್ಯವಿದೆ. ನಿನ್ನ ಆಸ್ತಿ ನಮಗೆ ಬೇಡ. ನೀನು ಖುಷಿಯಾಗಿರುವುದಷ್ಟೇ ನಮಗೆ ಬೇಕು, ನಿನಗೆ ಸರಿಯೆಂದು ತೋಚಿದ್ದನ್ನು ಮಾಡು ಎಂದು ಮಗ ಹೇಳಿದರೆ ತನ್ನ ತಂದೆ ವಿಶಾಲಾಕ್ಷಿಯ ಜೊತೆ ವಿವಾಹವಾಗುವುದು ಉತ್ತಮ ಎಂದು ಮಗಳು ಹೇಳಿದಳು. ಈ ಬಗ್ಗೆ ರಾಮಕೃಷ್ಣ ತೀವ್ರವಾಗಿ ಯೋಚಿಸಿದರು. ಕಡೆಗೆ ವಿಶಾಲಾಕ್ಷಿಯನ್ನು ಮದುವೆಯಾಗುವ ತೀರ್ವನಕ್ಕೆ ಬಂದರು.

ಮಾರನೆಯ ದಿನ ವಿಶಾಲಾಕ್ಷಿಯ ಮನೆಗೆ ಹೋಗಿ ಅವರನ್ನು ಮದುವೆಯಾಗುವುದಾಗಿ ರಾಮಕೃಷ್ಣ ಪ್ರಪೋಸ್ ಮಾಡಿದರು. ವಿಶಾಲಾಕ್ಷಿಯೂ ಒಪ್ಪಿದರು. ಇಬ್ಬರೂ ರಿಜಿಸ್ಟ್ರಾರ್ ಕಚೇರಿಗೆ ಹೋಗಿ ಅಲ್ಲಿ ತಾವು ಮದುವೆಯಾಗಲು ನಿರ್ಧರಿಸಿರುವ ಸೂಚನೆಯನ್ನು ಕೊಟ್ಟರು. ಮೊದಲಿಗೆ ನಾವಿಬ್ಬರೂ ಆರು ತಿಂಗಳ ಸಹಜೀವನ ನಡೆಸೋಣ, ಆನಂತರ ಮದುವೆ ಮಾಡಿಕೊಳ್ಳೋಣ ಎಂದರು ವಿಶಾಲಾಕ್ಷಿ. ರಾಮಕೃಷ್ಣ ಒಪ್ಪಿದಾಗ ವಿಶಾಲಾಕ್ಷಿ ರಾಮಕೃಷ್ಣರ ಮನೆಗೆ ಬಂದು ವಾಸಿಸತೊಡಗಿದರು. ಆದರೆ ಅವರು ತಾವೊಬ್ಬರೇ ಬೇರೆ ಕೋಣೆಯಲ್ಲಿ ಮಲಗಲಾರಂಭಿಸಿದರು.

65 ವರ್ಷ ವಯಸ್ಸಾಗಿದ್ದರೂ ರಾಮಕೃಷ್ಣರಿಗೆ ಲೈಂಗಿಕ ಆಸಕ್ತಿಯೇನೂ ಕಡಿಮೆಯಾಗಿರಲಿಲ್ಲ. ಪ್ರತಿರಾತ್ರಿಯೂ ಅವರು ನೋಡುತ್ತಿದ್ದ ಕಾಮಪ್ರಚೋದಕ ವೆಬ್​ಸೈಟುಗಳು ಅವರ ಲೈಂಗಿಕಾಸಕ್ತಿಯನ್ನು ಇಮ್ಮಡಿಸಿತ್ತು. ಒಂದು ರಾತ್ರಿ ಕಾಮಪ್ರಚೋದಿತರಾಗಿದ್ದ ರಾಮಕೃಷ್ಣ ವಿಶಾಲಾಕ್ಷಿಯನ್ನು ತಮ್ಮ ಕೋಣೆಯಲ್ಲಿಯೇ ಬಂದು ಮಲಗಲು ಆಗ್ರಹಿಸಿದರು. ವಿಶಾಲಾಕ್ಷಿ ಒಪ್ಪದಿದ್ದರೂ ರಾಮಕೃಷ್ಣರ ಬಲವಂತಕ್ಕೆ ಅವರ ಕೋಣೆಗೆ ಹೋದರು. ವಿಶಾಲಾಕ್ಷಿಯನ್ನು ರಾಮಕೃಷ್ಣ ಲೈಂಗಿಕ ಕ್ರಿಯೆಗೆ ಆಹ್ವಾನಿಸಿದರು. ಗಾಬರಿಯಾದ ಆಕೆ, ನಮಗಿಬ್ಬರಿಗೂ ವಯಸ್ಸಾಗಿದೆ. ನಾವಿಬ್ಬರೂ ಮದುವೆಯಾಗಲು ತೀರ್ವನಿಸಿರುವುದು ಒಬ್ಬರಿಗೊಬ್ಬರ ಆಧಾರಕ್ಕಾಗಿಯೇ ಹೊರತು ಲೈಂಗಿಕ ಕ್ರಿಯೆಗಲ್ಲ ಎಂದು ಖಡಾಖಂಡಿತವಾಗಿ ನುಡಿದರು. ಸೆಕ್ಸ್ ಮಾನವಸಹಜವಾದ ಒಂದು ಪ್ರಕ್ರಿಯೆ. ಅದಕ್ಕೆ ವಯಸ್ಸಿನ ಮಿತಿಯಿಲ್ಲ. ಹೇಗಿದ್ದರೂ ಆರು ತಿಂಗಳ ನಂತರ ನಾವಿಬ್ಬರೂ ಮದುವೆಯಾಗುತ್ತೇವೆ. ಇದಲ್ಲದೆ ನಮ್ಮ ಮಿಲನದ ಕಾರಣ ನೀನಂತೂ ಗರ್ಭಿಣಿಯಾಗುವುದಿಲ್ಲವಲ್ಲ, ಹೆದರಬೇಡ ಎಂದು ರಾಮಕೃಷ್ಣ ಆಕೆಗೆ ಹೇಳಿ ಅದೇ ರಾತ್ರಿಯೇ ಆಕೆಯೊಡನೆ ಬಲವಂತವಾಗಿ ಲೈಂಗಿಕ ಕ್ರಿಯೆಯನ್ನು ನಡೆಸಿದರು. ಆಘಾತಗೊಂಡ ವಿಶಾಲಾಕ್ಷಿ ಮಾರನೆಯ ದಿನದಿಂದಲೇ ತಮ್ಮ ಮೊದಲಿನ ಕೋಣೆಯಲ್ಲಿ ಮಲಗತೊಡಗಿದರು.

ತಮ್ಮೊಡನೆ ಲೈಂಗಿಕ ಕ್ರಿಯೆಯನ್ನು ತಿರಸ್ಕರಿಸಿದ ಕಾರಣ ರಾಮಕೃಷ್ಣರಿಗೆ ವಿಶಾಲಾಕ್ಷಿ ಬೇಡವಾದರು. ಅವರೊಡನೆ ಕ್ಷುಲ್ಲಕ ಕಾರಣಗಳಿಗಾಗಿ ಪ್ರತಿದಿನವೂ ಜಗಳವಾಡತೊಡಗಿದರು. ಒಂದು ದಿನ ಯಾವುದೋ ಕಾರಣಕ್ಕಾಗಿ ವಿಶಾಲಾಕ್ಷಿಯ ಮೇಲೆ ಕೋಪಗೊಂಡ ರಾಮಕೃಷ್ಣ ಆಕೆಯನ್ನು ತಾವು ಮದುವೆಯಾಗುವುದಿಲ್ಲವೆಂದು ಹೇಳಿ ಅವರನ್ನು ತಮ್ಮ ಮನೆಯಿಂದ ಹೊರಹಾಕಿದರು. ಇದರಿಂದ ತೀವ್ರ ಆಘಾತಗೊಂಡ ವಿಶಾಲಾಕ್ಷಿ ನೇರವಾಗಿ ಪೊಲೀಸ್ ಠಾಣೆಗೆ ಹೋದರು. ರಾಮಕೃಷ್ಣ ತನ್ನನ್ನು ಮದುವೆಯಾಗುವುದಾಗಿ ವಂಚಿಸಿ ತನ್ನೊಡನೆ ಬಲವಂತ ಲೈಂಗಿಕ ಕ್ರಿಯೆ ನಡೆಸಿ ಅತ್ಯಾಚಾರ ನಡೆಸಿದ್ದಾರೆ ಎಂದು ದೂರು ಕೊಟ್ಟರು. ಅಚ್ಚರಿಗೊಂಡ ಪೊಲೀಸರು ಇಬ್ಬರನ್ನೂ ಕರೆಸಿ ಸಮಾಲೋಚನೆ ನಡೆಸಿದರು, ರಾಮಕೃಷ್ಣ ಅತ್ಯಾಚಾರ ಮಾಡಿರುವುದು ನಿಜ ಎಂದು ಸಾಧಿಸಿದ ವಿಶಾಲಾಕ್ಷಿ ಯಾವುದೇ ಕಾರಣಕ್ಕೂ ತಮ್ಮ ದೂರನ್ನು ಹಿಂತೆಗೆದುಕೊಳ್ಳುವುದಿಲ್ಲವೆಂದರು.. ಪೊಲೀಸರು ರಾಮಕೃಷ್ಣ ಮೇಲೆ ದೂರನ್ನು ದಾಖಲಿಸಿ ಆತನನ್ನು ಬಂಧಿಸಿದರು. ಆರೋಪಿ ಮತ್ತು ಸಂತ್ರಸ್ತೆ ಇವರಿಬ್ಬರನ್ನೂ ವೈದ್ಯಕೀಯ ಪರೀಕ್ಷೆಗೆ ಗುರಿಪಡಿಸಲಾಯಿತು. ಅವರಿಬ್ಬರೂ ಲೈಂಗಿಕ ಕ್ರಿಯೆಯನ್ನು ನಡೆಸಲು ಸಮರ್ಥರಾಗಿದ್ದಾರೆಂದು ವೈದ್ಯರು ಅಭಿಪ್ರಾಯ ಪಟ್ಟರು. ರಾಮಕೃಷ್ಣರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಯಿತು.

ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಗೆ ಬಂದಾಗ ಈ ಪ್ರಕರಣವು ಕೇವಲ ಸಂತ್ರಸ್ತೆಯ ಹೇಳಿಕೆಯ ಮೇಲೆಯೇ ಅವಲಂಬಿತವಾಗಿರುವುದನ್ನು ಕಂಡ ರಾಮಕೃಷ್ಣರ ವಕೀಲರು, ಆರೋಪಿಗೆ ಖಂಡಿತವಾಗಿಯೂ ಶಿಕ್ಷೆಯಾಗುವುದೆಂದು ಮನಗಂಡರು. ಇಳಿವಯಸ್ಸಿನಲ್ಲಿ ತಮ್ಮ ಕಕ್ಷಿದಾರ ಜೈಲಿಗೆ ಹೋಗುವುದು ಅವರಿಗೆ ಬೇಕಾಗಿರಲಿಲ್ಲ. ಹೀಗಾಗಿ ಅವರು ಎರಡೂ ಪಾರ್ಟಿಗಳ ಹಿತೈಷಿಗಳ ಜತೆಗೆ ಮಾತನಾಡಿ ಆರೋಪಿ ಮತ್ತು ದೂರುದಾರರು ಒಂದಾಗುವಂತೆ ಮಾಡಲು ಸಫಲರಾದರು. ಅವರ ಪ್ರಯತ್ನದ ಫಲವಾಗಿ ಇಬ್ಬರ ನಡುವೆ ಒಪ್ಪಂದವೊಂದಾಯಿತು. ಇದರನ್ವಯ ವಿಶಾಲಾಕ್ಷಿ ತಮ್ಮ ಹೇಳಿಕೆಯನ್ನು ನ್ಯಾಯಾಲಯದಲ್ಲಿ ಸಮರ್ಥಿಸಲಿಲ್ಲ. ಪ್ರಕರಣ ಖುಲಾಸೆಯಾಯಿತು. ರಾಮಕೃಷ್ಣ ಬಿಡುಗಡೆಯಾದ ನಂತರ ವಿಶಾಲಾಕ್ಷಿಯನ್ನು ಲಗ್ನವಾದರು.

ಸೆಕ್ಸ್​ನ ಆನಂದ ಕ್ಷಣಿಕ. ಅದರ ಸ್ಥಾನ ಹಾಸ್ಯಾಸ್ಪದ. ಅದರ ಬೆಲೆ ಅಪಾರ ಎಂದ 18ನೆಯ ಶತಮಾನದ ಇಂಗ್ಲಿಷ್ ಲೇಖಕ ಹಾಗೂ ರಾಜತಾಂತ್ರಿಕ ಫಿಲಿಪ್ ಸ್ಟಾನ್​ಹೋಪ್​ನ ಮಾತುಗಳನ್ನು ರಾಮಕೃಷ್ಣ ಆಲಿಸಿದ್ದರೆ ಅವರಿಗೆ ಜೈಲಿಗೆ ಹೋಗುವ ಪ್ರಮೇಯವೇ ಬರುತ್ತಿರಲಿಲ್ಲವೇನೋ.

(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net