

ಒಂಬತ್ತು ವರ್ಷಗಳ ಪ್ರಧಾನಮಂತ್ರಿತ್ವದಲ್ಲಿ ನರೇಂದ್ರ ಮೋದಿ ಸರಿಸುಮಾರು ಪ್ರತಿ ವರ್ಷವೂ ಅಮೆರಿಕಾಗೆ ಭೇಟಿ ನೀಡಿದ್ದಾರೆ. ಆ ಭೇಟಿಗಳೆಲ್ಲವೂ ಬಹುತೇಕ ವಿಶ್ವಸಂಸ್ಥೆಯ ಸಮಾವೇಶಗಳಲ್ಲಿ ಹಾಗೂ ಭಾರತ ಮತ್ತು ಅಮೆರಿಕಾ ಸಹಭಾಗಿಗಳಾಗಿರುವ ಕ್ವಾಡ್ ಗುಂಪಿನ ಶೃಂಗಸಭೆಗಳಿಗಾಗಿ ಕೈಗೊಂಡಂತಹವು. ಅವುಗಳ ಜತೆಜತೆಯೇ ಅಮೆರಿಕಾ ಅಧ್ಯಕ್ಷರ ಜತೆ ದ್ವಿಪಕ್ಷೀಯ ಹಾಗೂ ಬಹುಪಕ್ಷೀಯ ವಿಷಯಗಳ ಕುರಿತಾಗಿ ಮಾತುಕತೆಗಳೂ, ಆ ದೇಶದ ಶಾಸನಸಭೆಯಲ್ಲಿ ಭಾಷಣ, ನವಭಾರತದ ಅಗತ್ಯಗಳ ಕುರಿತಾಗಿ ಅಮೆರಿಕಾದ ತಾಂತ್ರಿಕ ಹಾಗೂ ಆರ್ಥಿಕ ಕ್ಷೇತ್ರದ ದಿಗ್ಗಜರೊಂದಿಗೆ ಫಲದಾಯಕ ಮಾತುಕತೆಗಳೂ ನಡೆಯುತ್ತಿದ್ದವು. ಆದರೆ ಮೋದಿಯವರ ಪ್ರಸಕ್ತ ಅಮೆರಿಕಾ ಭೇಟಿ ಅವೆಲ್ಲವುಗಳಿಗಿಂತಲೂ ಭಿನ್ನವಾದುದು ಹಾಗೂ ಮಹತ್ವಪೂರ್ಣವಾದುದು. ಇದೊಂದು ಸ್ಟೇಟ್ ವಿಸಿಟ್. ಅಂದರೆ ಅಮೆರಿಕಾ ತನ್ನೆಲ್ಲಾ ಸರ್ಕಾರಿ ಗೌರವಾದರ ಹಾಗೂ ಮರ್ಯಾದೆಗಳೊಂದಿಗೆ ಭಾರತದ ಪ್ರಧಾನಿಯನ್ನು ತನ್ನ ಅಧಿಕೃತ ಅತಿಥಿಯಾಗಿ ಬರಮಾಡಿಕೊಳ್ಳುವುದಾಗಿದೆ. ಈ ಭೇಟಿಯಲ್ಲಿ ಅಮೆರಿಕಾ ಅಧ್ಯಕ್ಷರು, ಉಪಾಧ್ಯಕ್ಷೆ ಹಾಗೂ ವಿದೇಶಾಂಗ ಕಾರ್ಯದರ್ಶಿ ಮೋದಿಯವರಿಗಾಗಿ ಸತ್ಕಾರ ಕೂಟಗಳನ್ನು ಏರ್ಪಡಿಸುತ್ತಾರೆ. ಅಷ್ಟೇ ಅಲ್ಲ, ಮೋದಿ ಎರಡನೆಯ ಬಾರಿಗೆ ಅಮೆರಿಕಾದ ಶಾಸಕಾಂಗ ಕಾಂಗ್ರೆಸ್ ಅನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇಂತಹ ಗೌರವ ಹಿಂದೆ ಪ್ರಾಪ್ತವಾಗಿರುವುದು ಇಬ್ಬರಿಗೆ ಮಾತ್ರ- ದ್ವಿತೀಯ ಮಹಾಯುದ್ಧದಲ್ಲಿ ಅಮೆರಿಕಾದ ಸಹಯೋಗಿ ಬ್ರಿಟನ್ನ ಪ್ರಧಾನಮಂತ್ರಿ ವಿನ್ಸ್ಟನ್ ರ್ಚಚಿಲ್ ಹಾಗೂ ವರ್ಣದ್ವೇಷದ ವಿರುದ್ಧದ ಹೋರಾಟಗಾರ ಹಾಗೂ ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ ನೆಲ್ಸನ್ ಮಂಡೇಲಾ. ಒಂದು ಕಾಲದಲ್ಲಿ ನಮ್ಮಲ್ಲಿನ ಸುಳ್ಳುಗಾರರ ಮಾತು ಕೇಳಿ ಮೋದಿಯವರಿಗೆ ತನ್ನ ನೆಲಕ್ಕೆ ಕಾಲಿಡುವ ಅವಕಾಶವನ್ನೇ ನಿರಾಕರಿಸಿದ್ದ ಅಮೆರಿಕಾ ಇಂದು ಅವರಿಗೆ ಈ ಬಗೆಯ ಗೌರವಾದರ ನೀಡಲು ಕಾರಣವಾದರೂ ಏನು?
ದೊಡ್ಡಣ್ಣ ಅಮೆರಿಕಾಗೆ ಇಂದಿನ ಭಾರತ ಹಲವು ಕಾರಣಗಳಿಗಾಗಿ ಮಹತ್ವಪೂರ್ಣವೆನಿಸಿದೆ. ಅವುಗಳಲ್ಲಿ ಆರ್ಥಿಕ ಹಾಗೂ ಸಾಮರಿಕ ಕಾರಣಗಳನ್ನಷ್ಟೇ ನಾವಿಲ್ಲಿ ಪ್ರಮುಖವಾಗಿ ಗುರುತಿಸೋಣ.
ಕರೊನಾ ಸಂಕ್ರಮಣ, ಚೀನಾದೊಂದಿಗಿನ ಶುಲ್ಕ ಸಮರ ಮತ್ತು ಯೂಕ್ರೇನ್ ಯುದ್ಧದಿಂದಾಗಿ ರಷ್ಯಾದೊಂದಿಗೆ ಬಿಗಡಾಯಿಸಿದ ಆರ್ಥಿಕ ಸಂಬಂಧಗಳು ನೀಡಿದ ಹೊಡೆತ ಅಮೆರಿಕಾದ ಅರ್ಥವ್ಯವಸ್ಥೆಯನ್ನು ಹಿಂಜರಿತದ ಪ್ರಪಾತದಂಚಿಗೆ ತಂದು ನಿಲ್ಲಿಸಿದೆ. ಜತೆಗೆ ದಿನೇದಿನೇ ಏರುತ್ತಿರುವ ನಿರುದ್ಯೋಗ ಸಮಸ್ಯೆಗೆ ತಾನಾಗಿಯೇ ಪರಿಹಾರ ಕಂಡುಕೊಳ್ಳುವುದು ಅಮೆರಿಕಾಗೆ ಸಾಧ್ಯವಾಗುತ್ತಿಲ್ಲ. ಈ ಎಲ್ಲಾ ಕಾರಣಗಳಿಂದಾಗಿ ಅಮೆರಿಕಾದ ಸರ್ಕಾರೀ ಆದಾಯವೂ ಗಣನೀಯವಾಗಿ ಕುಗ್ಗಿದೆ. ಅಮೆರಿಕಾದ ಯೂರೋಪಿಯನ್ ಸಹಯೋಗಿಗಳೂ ಕಳೆದೊಂದು ವರ್ಷದಲ್ಲಿ ತೀವ್ರತಮ ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿರುವ ಕಾರಣ ಆ ‘ಸಾಂಪ್ರದಾಯಿಕ’ ಸಹಯೋಗಿಗಳಿಂದ ತನ್ನ ಆರ್ಥಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಅಮೆರಿಕಾಗೆ ಅಸಾಧ್ಯ. ಹೀಗಾಗಿ ತನ್ನ ಜನರಿಗೆ ಉದ್ಯೋಗಾವಕಾಶ ಕಲ್ಪಿಸುವ ಹೊಸ ‘ಅಸಾಂಪ್ರದಾಯಿಕ’ ಮೂಲಗಳನ್ನು ಹುಡುಕುವ, ಸಿಕ್ಕಿದೊಡನೆ ಬಲವಾಗಿ ಹಿಡಿದುಕೊಳ್ಳುವ, ಆ ಮೂಲಕ ತನ್ನ ಜನರದನ್ನಷ್ಟೇ ಅಲ್ಲ, ತನ್ನ ಆದಾಯವನ್ನೂ, ಜತೆಗೆ ಜಾಗತಿಕ ವರ್ಚಸ್ಸನ್ನೂ ಕಾಪಾಡಿಕೊಳ್ಳುವ ಒತ್ತಡಕ್ಕೆ ಬೈಡೆನ್ ಸರ್ಕಾರ ಒಳಗಾಗಿದೆ. ಅದರ ಅಗತ್ಯಗಳಿಗೆ ಇಂದು ಬಹುಮಟ್ಟಿಗೆ ಹೊಂದಿಕೊಳ್ಳುವ ದೇಶ ಭಾರತ.
ಇಡೀ ವಿಶ್ವ ಆರ್ಥಿಕ ಹಿಂಜರಿತವನ್ನೆದುರಿಸುತ್ತಿರುವ ಈ ದಿನಗಳಲ್ಲಿ ಜಗತ್ತನ್ನೇ ಅಚ್ಚರಿಗೊಳಿಸುವ ಪ್ರಗತಿಯನ್ನು ದಾಖಲಿಸುತ್ತಿರುವುದು ಭಾರತ. ಶೇಕಡ 7.2ರ ವಾರ್ಷಿಕ ಪ್ರಗತಿ ದರವನ್ನು ತೋರುತ್ತಿರುವ ಭಾರತ ಇನ್ನು ಐದಾರು ತಿಂಗಳಲ್ಲಿ ಜರ್ಮನಿಯನ್ನು ಹಿಂದಿಕ್ಕಿ ಜಾಗತಿಕವಾಗಿ ನಾಲ್ಕನೆಯ ಅತಿ ದೊಡ್ಡ ಅರ್ಥವ್ಯವಸ್ಥೆಯಾಗಲಿದೆ. ಹೀಗೆ ಸತತವಾಗಿ ವಿಸ್ತಾರಗೊಳ್ಳುತ್ತಿರುವ ತನ್ನ ಅರ್ಥವ್ಯವಸ್ಥೆಗೆ ಹೊಂದುವಂತಹ ಸಹಕಾರಕ್ಕಾಗಿ ಭಾರತ ಸಹಜವಾಗಿಯೇ ಹೊರಜಗತ್ತಿನತ್ತ ನೋಡುತ್ತಿದೆ. ವೈಜ್ಞಾನಿಕ ಹಾಗೂ ತಾಂತ್ರಿಕ ಕ್ಷೇತ್ರಗಳಲ್ಲಿ ಜಾಗತಿಕವಾಗಿ ಇನ್ನೂ ಹಿಂದೆಯೇ ಇರುವ ಭಾರತದ ಅಗತ್ಯಗಳನ್ನು ಪೂರೈಸುವುದು ಏಷ್ಯಾದ ಈ ಅಭಿವೃದ್ಧಿಶೀಲ ದೇಶಕ್ಕಷ್ಟೇ ಅಲ್ಲ, ತನಗೂ ಲಾಭದಾಯಕ ಎನ್ನುವುದನ್ನು ಅಮೆರಿಕಾ ಗುರುತಿಸಿದೆ. ಕೆಲವು ತಿಂಗಳುಗಳ ಹಿಂದೆ 400 ವಿಮಾನಗಳಿಗಾಗಿ ಏರ್ ಇಂಡಿಯಾ, ಮತ್ತೀಗ 500 ವಿಮಾನಗಳಿಗಾಗಿ ಇಂಡಿಗೋ ವಿಮಾನಯಾನ ಸಂಸ್ಥೆಗಳು ಪಶ್ಚಿಮದ ಮುಖ್ಯವಾಗಿ ಅಮೆರಿಕಾದ ವಿಮಾನ ತಯಾರಿಕಾ ಸಂಸ್ಥೆಗಳಿಗೆ ಬೇಡಿಕೆ ಸಲ್ಲಿಸಿರುವುದು ಅಲ್ಲಿನ ಔದ್ಯೋಗಿಕ ಕ್ಷೇತ್ರದಲ್ಲಿ ಭಾರಿ ಸಂಚಲನೆಯನ್ನೇ ಉಂಟುಮಾಡಿದೆ. ಭಾರತೀಯ ವಿಮಾನಯಾನ ಸಂಸ್ಥೆಗಳ ಈ ಕ್ರಮ ಅಮೆರಿಕಾವೊಂದರಲ್ಲೇ ಏಳು ಲಕ್ಷ ಉದ್ಯೋಗಗಳನ್ನು ಸೃಷ್ಟಿಸಲಿರುವುದು ಅಲ್ಲಿನ ನಿರುದ್ಯೋಗ ಸಮಸ್ಯೆ ನಿವಾರಣೆಯಲ್ಲಿ ಭಾರತ ಯಾವ ಪ್ರಮಾಣದ ಪಾತ್ರ ವಹಿಸಬಹುದೆಂಬ ಸ್ಥೂಲ ಚಿತ್ರಣವನ್ನು ಅಮೆರಿಕಾದ ಆರ್ಥಿಕ-ರಾಜಕೀಯ ನಾಯಕತ್ವಕ್ಕೆ ಮನವರಿಕೆ ಮಾಡಿಕೊಟ್ಟಿದೆ.
ಇದರ ಜತೆಗೇ ರಷ್ಯಾ-ಯೂಕ್ರೇನ್ ಸಮರ ಭಾರತದ ಮುಂದೆ ಸೃಷ್ಟಿಸಿರುವ ಕೆಲವು ಸಾಮರಿಕ ಪ್ರಶ್ನೆಗಳು ಅಮೆರಿಕಾಗೆ ಹೊಸ ಅವಕಾಶಗಳ ಬಾಗಿಲನ್ನು ತೆರೆಯುತ್ತಿವೆ. ಭಾರತ ಕಳೆದ ಮೂರು ದಶಕಗಳಿಂದಲೂ ಜಾಗತಿಕವಾಗಿ ಶಸ್ತ್ರಾಸ್ತ್ರಗಳ ಅತಿ ದೊಡ್ಡ ಆಯಾತಕ. ಶೀತಲಸಮರ ಕಾಲದಿಂದಲೂ ಪ್ರಚಲಿತವಿದ್ದ ಕೆಲವು ರಾಜತಾಂತ್ರಿಕ ಹಾಗೂ ಸಾಮರಿಕ ಕಾರಣಗಳಿಂದಾಗಿ ತನ್ನ ಶಸ್ತ್ರಭಂಡಾರದ 70% ಅಗತ್ಯಗಳಿಗಾಗಿ ಭಾರತ ಸೋವಿಯೆತ್ ಯೂನಿಯನ್ ಮತ್ತದರ ಉತ್ತರಾಧಿಕಾರಿ ರಷ್ಯಾದ ಮೇಲೇ ಅವಲಂಬಿತವಾಗಿತ್ತು. ಆದರೆ ಹದಿನಾರು ತಿಂಗಳುಗಳನ್ನು ದಾಟಿ ಮುಂದುವರಿಯುತ್ತಿರುವ ಯೂಕ್ರೇನ್ ಸಮರ ರಷ್ಯಾದ ಶಸ್ತ್ರಾಸ್ತ್ರ ಪೂರೈಕೆಯ ಸಾಮರ್ಥ್ಯಕ್ಕೆ ಮಿತಿ ಒಡ್ಡಿದೆ. ಈ ಮಿತಿಯ ಪ್ರಮಾಣ ಅರ್ಥಮಾಡಿಕೊಳ್ಳಲು ಕಳೆದ ಎರಡು ವರ್ಷಗಳ ಅಂಕಿಅಂಶಗಳೇ ಸಾಕು. 2020ರವರೆಗೂ ಭಾರತದ ಶಸ್ತಾಸ್ತ್ರ ಆಮದಿನ ಶೇ.67ನ್ನು ರಷ್ಯಾ ಪೂರೈಸುತ್ತಿತ್ತು. 2022ರಲ್ಲಿ ಅದು ಶೇ.45ಕ್ಕೆ ಇಳಿಯಿತು! ತನ್ನದೇ ಯುದ್ಧದಿಂದಾಗಿ ಮಾತು ಕೊಟ್ಟಂತೆ ಎಸ್-400 ಕ್ಷಿಪಣಿಗಳನ್ನು ಭಾರತಕ್ಕೆ ಪೂರೈಸುವುದೂ ರಷ್ಯಾಗೆ ಸಾಧ್ಯವಾಗುತ್ತಿಲ್ಲ. ಆದರೆ ಚೀನಾದ ಜತೆ ವೃದ್ಧಿಸುತ್ತಿರುವ ವೈಮನಸ್ಯದಿಂದಾಗಿ ಅನಿರ್ದಿಷ್ಟ ಕಾಲದವರೆಗೆ ಕಾಯುವುದೂ ಭಾರತಕ್ಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಭಾರತದ ಕೆಲ ಅಗತ್ಯಗಳನ್ನು ಪೂರೈಸುವುದಲ್ಲದೇ ಹೊಸ ಆಮಿಷಗಳನ್ನೂ ಈ ದೇಶದ ಮುಂದೆ ಒಡ್ಡಿ ಭಾರಿ ಮೊತ್ತದ ಬೇಡಿಕೆಗಳನ್ನು ಪಡೆದು, ಅವುಗಳನ್ನು ಪೂರೈಸುವ ಹಾದಿಯಲ್ಲಿ ತನ್ನ ನಿರುದ್ಯೋಗ ಸಮಸ್ಯೆಯನ್ನು ಒಂದು ಪ್ರಮಾಣದಲ್ಲಿ ನಿವಾರಿಸಿಕೊಳ್ಳುತ್ತಾ ಅಷ್ಟರ ಮಟ್ಟಿಗೆ ತನ್ನ ವಾರ್ಷಿಕ ಆದಾಯವನ್ನೂ ಹೆಚ್ಚಿಸಿಕೊಳ್ಳುವುದು ಅಮೆರಿಕಾ ಕಂಡುಕೊಂಡ ಹೊಸ ಹಾದಿ. ಹೀಗಾಗಿಯೇ ಅದು ತನ್ನ ಜನರಲ್ ಅಟಾಮಿಕ್ಸ್ ಸಂಸ್ಥೆ ತಯಾರಿಸುವ ಎಂಕ್ಯೂ-1 (ಪ್ರಿಡೇಟರ್), ಎಂಕ್ಯೂ-9 (ರೀಪರ್) ಮತ್ತು ಎಂಕ್ಯೂ-9ಬಿ (ಸೀ ಗಾರ್ಡಿಯನ್) ಡ್ರೋನ್ಗಳನ್ನು ಭಾರತಕ್ಕೆ ನೀಡಲು ಮುಂದೆ ಬಂದಿದೆ. ಈ ಅತ್ಯಾಧುನಿಕ ಡ್ರೋನ್ಗಳನ್ನು ಹೊಂದಿರುವ ಅಮೆರಿಕಾ, ಬ್ರಿಟನ್, ಫ್ರಾನ್ಸ್, ನೆದರ್ಲ್ಯಾಂಡ್, ಸ್ಪೇನ್ ಮತ್ತು ಜಪಾನ್ಗಳಂತಹ ಬೆರಳೆಣಿಕೆಯಷ್ಟು ದೇಶಗಳ ಪಟ್ಟಿಗೆ ಭಾರತ ಸೇರುವುದೆಂದರೆ ಅದರ ರಕ್ಷಣಾ ಸಾಮರ್ಥ್ಯವಷ್ಟೇ ಅಲ್ಲ, ಆಕ್ರಾಮಕ ಸಾಮರ್ಥ್ಯವೂ ಅಗಾಧವಾಗಿ ಏರಲಿದೆ. ಈ ಡ್ರೋನ್ಗಳು ಶತ್ರುಗಳ ಸೇನಾ ಠಿಕಾಣೆ, ಸೇನಾ ಜಮಾವಣೆ ಹಾಗೂ ಸೇನಾ ಸಂಚಲನೆಯ ಮಾಹಿತಿಯನ್ನಷ್ಟೇ ಅಲ್ಲ, ಅವುಗಳ ಮೇಲೆ ನಿರಾಯಾಸವಾಗಿ ದಾಳಿಯೆಸಗುವ ಅವಕಾಶವನ್ನು ಭಾರತಕ್ಕೆ ನೀಡುತ್ತವೆ. ಅಷ್ಟೇ ಅಲ್ಲ, ಈಗಾಗಲೇ ತನ್ನಲ್ಲಿರುವ ಹೆಲ್ ಫೈರ್ ಕ್ಷಿಪಣಿಗಳನ್ನು ರೀಪರ್ ಡ್ರೋನ್ಗಳಿಗೆ ಆಳವಡಿಸಿ ಭಾರತ ಭಯೋತ್ಪಾದಕರನ್ನು ಹುಡುಕಿ ಹುಡುಕಿ ಕೊಲ್ಲಲೂಬಹುದು! ಇರಾನೀ ಸೇನಾಧಿಕಾರಿ ಖಾಸಿಂ ಸುಲೇಮಾನಿಯನ್ನು ಬಗ್ದಾದ್ನಲ್ಲಿ ಮತ್ತು ಅಲ್-ಖಯೀದಾ ಮುಖ್ಯಸ್ಥ ಅಯ್ಮೆನ್ -ಅಲ್-ಜವಾಹಿರಿಯನ್ನು ಕಾಬೂಲ್ನಲ್ಲಿ ಅಮೆರಿಕಾ ಕೊಂದದ್ದು ಈ ಡ್ರೋನ್ಗಳ ಸಹಾಯದಿಂದ ಎನ್ನುವುದನ್ನು ನೆನಪಿಸಿಕೊಂಡರೆ ಭಯೋತ್ಪಾದನೆ ನಿಗ್ರಹದಲ್ಲಿ ಈ ಡ್ರೋನ್ಗಳು ಭಾರತಕ್ಕೊಂದು ವರದಾನವಾಗಬಲ್ಲುವು ಎನ್ನುವುದು ವೇದ್ಯವಾಗುತ್ತದೆ. ಬಾಯಿಯಲ್ಲಿ ನೀರೂರಿಸುವ ಈ ಆಮಿಷವನ್ನು ಭಾರತ ನಿರಾಕರಿಸುವುದು ಸಾಧ್ಯವೇ ಇಲ್ಲ.
ಜತೆಗೇ, ಜನರಲ್ ಮೋಟಾರ್ಸ್ ಸಂಸ್ಥೆ ತಯಾರಿಸುವ ಅತ್ಯಾಧುನಿಕ ಜೆಟ್ ಎಂಜಿನ್ಗಳ ತಂತ್ರಜ್ಞಾನವನ್ನೂ ಭಾರತಕ್ಕೆ ನೀಡಲು ಅಮೆರಿಕಾ ಮುಂದೆ ಬಂದಿದೆ. ಇಂತಹ ಅತ್ಯಾಧುನಿಕ ಎಂಜಿನ್ಗಳನ್ನು ಹೊಂದಿರುವುದು ಅಮೆರಿಕಾ, ಬ್ರಿಟನ್, ಫ್ರಾನ್ಸ್ ಮತ್ತು ರಷ್ಯಾ ಮಾತ್ರ. ಇದುವರೆಗೆ ಈ ತಂತ್ರಜ್ಞಾನವನ್ನು ಭಾರತ ಇರಲಿ, ನಂಬಿಗಸ್ತ ನ್ಯಾಟೋ ಸಹಯೋಗಿಯಲ್ಲದ ಯಾವ ದೇಶಕ್ಕೂ ಅಮೆರಿಕಾ ನೀಡಿರಲಿಲ್ಲ. ಇಂದು ಅದು ಭಾರತದ ಪಾಲಿಗೆ ಒದಗಿಬಂದಿದೆ. ಈ ವಹಿವಾಟು ನಡೆಯಬೇಕಾದರೆ ಅಮೆರಿಕಾ ಸರ್ಕಾರದ ವಾಣಿಜ್ಯ ಇಲಾಖೆ, ವಿದೇಶಾಂಗ ಇಲಾಖೆ, ರಕ್ಷಣಾ ಇಲಾಖೆ ಮತ್ತು ಶಾಸಕಾಂಗ ಕಾಂಗ್ರೆಸ್ ಒಪ್ಪಿಗೆ ನೀಡಬೇಕು. ಆನಂತರ ಅಧ್ಯಕ್ಷರು ಮುದ್ರೆಯೊತ್ತಬೇಕು. ಅದಕ್ಕೆ ಅಧ್ಯಕ್ಷರು ಈಗಾಗಲೇ ತಯಾರಾಗಿದ್ದಾರೆ ಮತ್ತು ಉಳಿದೆಲ್ಲಾ ಒಪ್ಪಿಗೆಗಳು ಸಿಗಲು ವ್ಯವಸ್ಥೆ ಆಗಿದೆ! ಇದನ್ನು ಕಳೆದ ವಾರ ನವದೆಹಲಿಯಲ್ಲಿದ್ದ ಅಧ್ಯಕ್ಷರ ರಾಷ್ಟ್ರೀಯ ಸುರಕ್ಷಾ ಸಲಹೆಗಾರ ಜೇಕ್ ಸಲಿವನ್ ಘಂಟಾಘೊಷವಾಗಿಯೇ ಸಾರಿದ್ದಾರೆ. ಇದೆಲ್ಲದರ ಅರ್ಥ ಭಾರತವನ್ನು ಸಂಪ್ರೀತಗೊಳಿಸಲು ಬೈಡೆನ್ ಸರ್ಕಾರ ತುದಿಗಾಲಿನಲ್ಲಿ ನಿಂತಿದೆ. ಇದರಿಂದಾಗಿ ಅಮೆರಿಕಾಗೆ ಅಗಾಧ ಪ್ರಮಾಣದ ಆರ್ಥಿಕ ಲಾಭವಾಗಲಿದೆ. ಒಪ್ಪಂದದ ಪ್ರಕಾರ ಎಚ್ಎಎಲ್ನಲ್ಲಿ ತಯಾರಾಗುವ ಈ ಎಂಜಿನ್ಗಳನ್ನು ಭಾರತ ತನ್ನ ತೇಜಸ್ ಯುದ್ಧವಿಮಾನಗಳಿಗೆ ಆಳವಡಿಸಿ ಅವುಗಳ ಸಾಮರ್ಥ್ಯವನ್ನು ಅಗಾಧವಾಗಿ ವೃದ್ಧಿಸಬಹುದು. ರಕ್ಷಣೆಯ ಕ್ಷೇತ್ರದಲ್ಲಿ ಭಾರತದ ಆತ್ಮನಿರ್ಭರತೆಯ ಹಾದಿಯಲ್ಲಿ ಇದೊಂದು ಮಹತ್ತರ ಹೆಜ್ಜೆ.
ಇನ್ನು ಸಾಮರಿಕ ಕ್ಷೇತ್ರಕ್ಕೆ ಬರುವುದಾದರೆ ಅಮೆರಿಕಾದ ಅತಿ ದೊಡ್ಡ ಶತ್ರು ಚೀನಾ ಎಂದು ಡೊನಾಲ್ಡ್ ಟ್ರಂಪ್ ಗುರುತಿಸಿದ್ದರಷ್ಟೇ. ಈ ನಿಚ್ಚಳ ವಾಸ್ತವವನ್ನು ನಿರ್ಲಕ್ಷಿಸಿ, ಶೀತಲ ಸಮರದ ಹಳವಂಡಕ್ಕೆ ಸಿಲುಕಿ ರಷ್ಯಾವನ್ನೇ ಪ್ರಮುಖ ವೈರಿ ಎಂದು ಜೋ ಬೈಡೆನ್ ತಿಳಿದದ್ದರಿಂದಾದ ಅನಾಹುತ ಇಂದು ಎಲ್ಲರ ಮುಂದಿದೆ. ಯೂಕ್ರೇನನ್ನು ಎತ್ತಿ ಕಟ್ಟಿ ರಷ್ಯಾವನ್ನು ಅಲ್ಲಿ ಕಟ್ಟಿಹಾಕಿದ ಬೈಡೆನ್ ಸರ್ಕಾರದ ಆತ್ಮಹತ್ಯೀಯ ನಡವಳಿಕೆ ಅಮೆರಿಕಾವನ್ನಷ್ಟೇ ಅಲ್ಲ, ಇಡೀ ಪಶ್ಚಿಮ ಜಗತ್ತನ್ನೇ ಆರ್ಥಿಕ ಸಂಕಷ್ಟಕ್ಕೆ ಹಾಗೂ ಅಣ್ವಸ್ತ್ರ ಸಮರದ ಅಂಚಿಗೆ ತಂದು ನಿಲ್ಲಿಸಿದ್ದನ್ನು ನಾವು ನೋಡಿಯಾಗಿದೆ. ಬೈಡೆನ್ ಸರ್ಕಾರ ಕೊನೆಗೂ ತನ್ನ ತಪ್ಪನ್ನು ಸರಿಪಡಿಸಿಕೊಳ್ಳಲು ತಯಾರಾಗಿದೆ. ಪರಿಣಾಮವಾಗಿ ಅಧ್ಯಕ್ಷ ಟ್ರಂಪ್ ಹಾದಿಗೆ ಬೈಡೆನ್ ಎರಡು ವರ್ಷ ತಡವಾಗಿ ಕಾಲಿಟ್ಟಿದ್ದಾರೆ, ಚೀನಾ ವಿರುದ್ಧ ಶಕ್ತಿವರ್ಧನೆಗಾಗಿ ಅವರು ಭಾರತದ ಸಹಯೋಗವನ್ನು ಬಯಸುತ್ತಿದ್ದಾರೆ.
ಹೀಗೆ ಅಮೆರಿಕಾದ ಇಂದಿನ ಆರ್ಥಿಕ ಹಾಗೂ ಸಾಮರಿಕ ಅಗತ್ಯಗಳ ಪೂರೈಕೆಯಲ್ಲಿ ಭಾರತದ ಮಹತ್ವ ಅಗಾಧವಾಗಿ ಏರಿದೆ, ಅದಕ್ಕನುಗುಣವಾಗಿ ಭಾರತದ ಪ್ರಧಾನಿಗಳ ವರ್ಚಸ್ಸು ಸಹ. ಇಂದು ನರೇಂದ್ರ ಮೋದಿಯವರಿಗೆ ಸಿಗುತ್ತಿರುವ ಗೌರವಾದರಗಳಿಗೆ ಇದು ಕಾರಣ. ಜಾಗತಿಕವಾಗಿ ಭಾರತಕ್ಕೆ ಇಂತಹ ಮಹತ್ವಪೂರ್ಣ ಸ್ಥಾನ ದೊರೆತಿರುವುದೇ ಮೋದಿಯವರು ಕಳೆದ ಒಂಬತ್ತು ವರ್ಷಗಳಲ್ಲಿ ರೂಪಿಸಿ ಜಾರಿಗೆ ತಂದ ರಾಜಕೀಯ, ರಾಜತಾಂತ್ರಿಕ, ಆರ್ಥಿಕ ಹಾಗೂ ಸಾಮರಿಕ ನೀತಿಗಳಿಂದಾಗಿ. ಹೀಗಾಗಿ ಇಂದು ಅಮೆರಿಕಾ ಸೇರಿದಂತೆ ಜಗತ್ತು ತೋರುತ್ತಿರುವ ಎಲ್ಲ ಗೌರವಾದರಗಳಿಗೂ ಅವರು ಸಹಜವಾಗಿಯೇ ಪಾತ್ರರು. ಅವರ ಪ್ರಸಕ್ತ ಅಮೆರಿಕಾ ಭೇಟಿಯಲ್ಲಿ ಸಹಿ ಬೀಳಲಿರುವ ಒಪ್ಪಂದಗಳು ಭಾರತದ ರಕ್ಷಣಾ ಸ್ಥಿತಿಯನ್ನು ಸದೃಢಗೊಳಿಸುವುದಲ್ಲದೇ ಜಾಗತಿಕವಾಗಿ ಅದರ ರಾಜತಾಂತ್ರಿಕ ಹಾಗೂ ಸಾಮರಿಕ ಸ್ಥಾನಮಾನಗಳನ್ನು ಇನ್ನೂ ಹೆಚ್ಚಿನ ಸ್ತರಕ್ಕೆ ಏರಿಸುತ್ತವೆ.
(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)