ಸದೃಢ, ವಿಕಸಿತ ಭಾರತದ ಸಂಕಲ್ಪ ಸಾಕಾರ

pm modi
Published on

ಸ್ವತಂತ್ರ ಭಾರತದ ರಾಜಕೀಯ ಚರಿತ್ರೆಯಲ್ಲಿ 2014ರ ಮೇ 26 ಚಾರಿತ್ರಿಕ ದಿನ. ಅಂದು ನರೇಂದ್ರ ಮೋದಿ ಪೂರ್ಣ ಬಹುಮತದೊಂದಿಗೆ ಎನ್​ಡಿಎ ಸರ್ಕಾರದ ಚುಕ್ಕಾಣಿ ಹಿಡಿದು, ದೇಶದ ಸಾರಥಿಯಾದರು. ಅಲ್ಲಿಂದ ಇಲ್ಲಿಯವರೆಗೂ

R Ashok Sakalika
ತಮ್ಮ ಪ್ರತಿ ಹೆಜ್ಜೆಯಲ್ಲೂ ಎಲ್ಲ ದೃಷ್ಟಿಗಳಿಂದ ಸದೃಢ ಭಾರತವನ್ನು ಕಟ್ಟುವ ಹೊಂಗನಸನ್ನು ಬಿತ್ತುತ್ತಿದ್ದಾರೆ; ಅದರ ಸಾಕಾರಕ್ಕೆ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದಾರೆ. ಈ ಮೂಲಕ 140 ಕೋಟಿ ಭಾರತೀಯರ ಮಹತ್ವಾಕಾಂಕ್ಷೆಗಳ ಮೂರ್ತರೂಪವಾಗಿ ಕಂಗೊಳಿಸುತ್ತಿದ್ದಾರೆ. ಮೋದಿ ಪ್ರಧಾನಿಯಾಗಿ ಮೇ 26ಕ್ಕೆ 11 ವರ್ಷಗಳು ತುಂಬಿವೆ. 2019 ಮತ್ತು 2024ರ ಮಹಾಚುನಾವಣೆಗಳಲ್ಲೂ ಮೋದಿ ಅಭೂತಪೂರ್ವ ಜನಾದೇಶ ಪಡೆದಿದ್ದಾರೆ.

ಮೋದಿ ಪ್ರಧಾನಿ ಆದಾಗ ದೇಶದಲ್ಲಿ ಸಂದಿಗ್ಧ ಪರಿಸ್ಥಿತಿ ಇತ್ತು. 2004ರಿಂದ 2014ರವರೆಗೆ ಅಧಿಕಾರದಲ್ಲಿದ್ದ ಯುಪಿಎ ಸರ್ಕಾರದ ಕರ್ಮಕಾಂಡಗಳು ಮತ್ತು ‘ರಬ್ಬರ್ ಸ್ಟಾ್ಯಂಪ್’ ನಾಯಕತ್ವದಿಂದ ಭಾರತ ನಲುಗಿತ್ತು. ಆಗಿನ ಪ್ರಧಾನಿ ಎಷ್ಟು ಅಸಹಾಯಕರಾಗಿದ್ದರೆಂದರೆ, ಯಾವ ರಚನಾತ್ಮಕ ಕ್ರಮ ಕೈಗೊಳ್ಳುವುದಕ್ಕೂ ಆಗಿನ ‘ಡಮ್ಮಿ ಪಿಎಂಗಳು’ ಬಿಡುತ್ತಿರಲಿಲ್ಲ. ನೆಹರು ವಂಶದ ಕುಡಿ ರಾಹುಲ್ ಗಾಂಧಿಯಂತೂ ಆಗಿನ ಪ್ರಧಾನಿಯನ್ನು ಸಂಸತ್ತಿನಲ್ಲೇ ಅವಮಾನಿಸಿದ್ದರು. ಇವೆಲ್ಲದರಿಂದ ಬಸವಳಿದು ಹೋಗಿದ್ದ ಮನಮೋಹನ್ ಸಿಂಗ್ ಕೊನೆಗೆ, ‘ನಾಳಿನ ಚರಿತ್ರೆ ನನ್ನನ್ನು ಉದಾರವಾಗಿ ನೋಡಲಿದೆ’ ಎನ್ನುವ ಮೂಲಕ, ತಮ್ಮ ವೈಯಕ್ತಿಕ ಚಾರಿತ್ರ್ಯದ ನೆರಳನ್ನು ನೆಚ್ಚಿಕೊಳ್ಳಬೇಕಾಗಿ ಬಂದಿತ್ತು. ರಾಷ್ಟ್ರ ರಾಜಕಾರಣದಲ್ಲಿ ಮುನ್ನೆಲೆಗೆ ಬಂದ ಮೋದಿ ನಾಯಕತ್ವ ಇದೆಲ್ಲಕ್ಕೂ ತೆರೆ ಎಳೆದಿದೆ. ಇದರ ಫಲವಾಗಿ ಭಾರತ ಇಂದು 4 ಟ್ರಿಲಿಯನ್ ಡಾಲರಿಗೂ ಮೀರಿದ ಆರ್ಥಿಕತೆಯಾಗಿ ಬೆಳೆದಿದೆ. ಜಾಗತಿಕ ಮಟ್ಟದಲ್ಲಿ 4ನೇ ಅತಿದೊಡ್ಡ ಆರ್ಥಿಕಶಕ್ತಿಯಾಗಿ ಹೊರಹೊಮ್ಮಿದೆ. ದೇಶದ ಸ್ವಾತಂತ್ರ್ಯಕ್ಕೆ 100 ವರ್ಷ ತುಂಬಲಿರುವ 2047ರ ಹೊತ್ತಿಗೆ ‘ವಿಕಸಿತ ಭಾರತ’ವನ್ನು ಕಟ್ಟುವ ಪಣ ತೊಟ್ಟಿದ್ದಾರೆ. ಇದರ ಸಾಕಾರಕ್ಕಾಗಿ ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ಇಂಡಿಯಾ, ಆತ್ಮನಿರ್ಭರ ಭಾರತ ಮುಂತಾದ ದಿಟ್ಟ ಕ್ರಮಗಳನ್ನು ಕೈಗೊಂಡಿದ್ದಾರೆ. ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’. ಇದು ನವಭಾರತಕ್ಕೆ ಮೋದಿ ಕೊಟ್ಟಿರುವ ಅಭಿವೃದ್ಧಿ ಮಂತ್ರ. ಇದರಲ್ಲಿ ದೇಶದ ಪ್ರತಿಯೊಬ್ಬರನ್ನೂ ಒಳಗೊಳ್ಳುವಂಥ ‘ಇನ್​ಕ್ಲ್ಲೂಸಿವ್ ಫಿಲಾಸಫಿ’ ಇದೆ. 60 ವರ್ಷ ದೇಶವನ್ನಾಳಿದ ಕಾಂಗ್ರೆಸ್​ನ ವಿಭಜಕ ನೀತಿಗೆ ಇದೊಂದು ಒಳ್ಳೆಯ ಮದ್ದು! ‘ನಮಾಮಿ ಗಂಗೆ’ಯಿಂದ ಹಿಡಿದು ‘ಮೇಕ್ ಇನ್ ಇಂಡಿಯಾ’ವರೆಗೆ ಮೋದಿ ರೂಪಿಸಿರುವ ಎಲ್ಲ ಯೋಜನೆಗಳಲ್ಲೂ ಈ ತತ್ತ್ವ ಅಡಗಿದೆ. ಇದರಿಂದ, ಭಾರತೀಯರಲ್ಲಿ ಒಂದು ಪ್ರಚಂಡ ಆತ್ಮವಿಶ್ವಾಸ ಬೆಳೆದಿದೆ. ಇನ್ನೊಂದೆಡೆ, ಮೋದಿ ನಾಯಕತ್ವವನ್ನು ಇಡೀ ಜಾಗತಿಕ ಸಮುದಾಯ ಗೌರವಿಸುತ್ತಿದೆ. ತನ್ಮೂಲಕ ಭಾರತ ‘ವಿಶ್ವಗುರು’ವಾಗಿ ಪ್ರತಿಷ್ಠಾಪಿತವಾಗುತ್ತಿದೆ. ಜಿಯೋಪಾಲಿಟಿಕ್ಸ್ ವಲಯದಲ್ಲಿ ನಡೆಯುತ್ತಿರುವ ವಿದ್ಯಮಾನಗಳಲ್ಲಿ ಭಾರತದ ದನಿ ಏನೆಂಬುದನ್ನು ಈಗ ಎಲ್ಲರೂ ಕುತೂಹಲದಿಂದ ನೋಡುವ ಸ್ಥಿತಿ ಸೃಷ್ಟಿಯಾಗಿದೆ. 70 ವರ್ಷಗಳಿಂದ ದೇಶವನ್ನು ಕಾಡುತ್ತಿದ್ದ ಕಾಶ್ಮೀರ ಸಮಸ್ಯೆಗೆ ಮೂಲಕಾರಣವಾಗಿದ್ದ 370ನೇ ವಿಧಿಯನ್ನು ಹಿಂಪಡೆದಿದ್ದರಿಂದ ಹಿಡಿದು ಭಯೋತ್ಪಾದನೆಯ ವಿರುದ್ಧ ಶಸ್ತ್ರಸಜ್ಜಿತ ಪ್ರತಿದಾಳಿಯವರೆಗೆ, ಜಾಗತಿಕ ಮಟ್ಟದಲ್ಲಿ ಸೌರಶಕ್ತಿಯ ಪರಿಣಾಮಕಾರಿ ಬಳಕೆಗೆ ಅಗತ್ಯವಾದ ವ್ಯವಸ್ಥೆಯ ರಚನೆಗೆ ಕಾರಣರಾಗಿರುವುದರಿಂದ ಹಿಡಿದು ರಷ್ಯಾ-ಯೂಕ್ರೇನ್ ಸಂಘರ್ಷ ಸ್ಪೋಟಿಸಿದಾಗ ಜಾಣ್ಮೆಯಿಂದ ಭಾರತದ ಹಿತಾಸಕ್ತಿ ಕಾಪಾಡಿಕೊಳ್ಳುವವರೆಗಿನ ಅವರ ನಡೆಗಳೆಲ್ಲವೂ ಇದಕ್ಕೆ ನಿದರ್ಶನಗಳಾಗಿವೆ. ಅಂದರೆ, ದೇಶದ ಒಳಗೆ ಸುರಕ್ಷತೆ ಮತ್ತು ಹೊರಗೆ ದೇಶದ ವರ್ಚಸ್ಸುವೃದ್ಧಿ- ಈ ಎರಡನ್ನೂ ಮೋದಿ ಏಕಕಾಲಕ್ಕೆ ಸಾಧಿಸಿದ್ದಾರೆ.

ದೇಶವನ್ನು ಬಯಲುಶೌಚದ ಸಮಸ್ಯೆಯಿಂದ ಮುಕ್ತಗೊಳಿಸುವ ಉದ್ದೇಶದಿಂದ ಇಟ್ಟ ದಿಟ್ಟ ಹೆಜ್ಜೆ ‘ಸ್ವಚ್ಛ ಭಾರತ’. ಈ ಯೋಜನೆಯಡಿ ಕಟ್ಟಿದ ಶೌಚಗೃಹಗಳ ಸಂಖ್ಯೆ 100 ಮಿಲಿಯನ್! ದೇಶದಲ್ಲಿ ಪ್ರತಿಯೊಬ್ಬ ಪ್ರಾಪ್ತ ವಯಸ್ಕರೂ ತಮ್ಮದೇ ಆದ ಬ್ಯಾಂಕ್ ಖಾತೆ ಹೊಂದಿರಬೇಕೆಂಬುದು ‘ಜನಧನ್’ ಯೋಜನೆಯ ಗುರಿಯಾಗಿತ್ತು. ಇದರಡಿ ತೆರೆದ ಖಾತೆಗಳ ಸಂಖ್ಯೆ 55.02 ಕೋಟಿ! ಇದರಲ್ಲಿ ಶೇ. 55.7 ಖಾತೆಗಳು ಮಹಿಳೆಯರ ಹೆಸರಿನಲ್ಲಿದ್ದರೆ, 36.63 ಕೋಟಿ ಖಾತೆಗಳು ಗ್ರಾಮೀಣರವು. ಇವುಗಳಲ್ಲಿ ಇದುವರೆಗೆ ಸಂಗ್ರಹವಾಗಿರುವ ಹಣ 2,31,236 ಕೋಟಿ ರೂ.! ಈ ಪೈಕಿ 5.5 ಕೋಟಿ ಖಾತೆಗಳಿಗೆ ಸರಕಾರದ ವಿವಿಧ ಯೋಜನೆಗಳ ಸಬ್ಸಿಡಿಯನ್ನು ನೇರವಾಗಿ ವರ್ಗಾಯಿಸಲಾಗುತ್ತಿದೆ. ಇದು ದಲ್ಲಾಳಿಗಳ ಕಾಟಕ್ಕೆ, ಭ್ರಷ್ಟಾಚಾರಕ್ಕೆ ಕೊನೆ ಹಾಡಿದೆ.

ಸ್ವಾತಂತ್ರ್ಯ ಬಂದು ಮುಕ್ಕಾಲು ಶತಮಾನವೇ ಉರುಳಿದ್ದರೂ ದೇಶದ 18,452 ಹಳ್ಳಿಗಳಿಗೆ ವಿದ್ಯುತ್ ಸಂಪರ್ಕವೇ ಇರಲಿಲ್ಲ. ಇದಕ್ಕಾಗಿ ಮೋದಿ 2015ರ ಆಗಸ್ಟ್ 15ರಂದು ‘ಸೌಭಾಗ್ಯ’ ಯೋಜನೆ ಘೊಷಿಸಿದರು. ತತ್ಪಲವಾಗಿ, ಕೇವಲ 3 ವರ್ಷಗಳಲ್ಲಿ ಇಷ್ಟೂ ಹಳ್ಳಿಗಳಿಗೆ ವಿದ್ಯುತ್ ದೊರೆಯಿತು.

ಬಿಪಿಎಲ್ ಕುಟುಂಬಗಳಿಗೆ ಎಲ್​ಪಿಜಿ ಸಂಪರ್ಕ ಒದಗಿಸುವ ‘ಉಜ್ವಲಾ’ ಯೋಜನೆ 2016ರ ಮೇ 1ರಂದು ಘೊಷಿಸಲ್ಪಟ್ಟಿತು. ಇದುವರೆಗಿನ ಫಲಾನುಭವಿಗಳ ಸಂಖ್ಯೆ 10.33 ಕೋಟಿ ದಾಟಿದೆ. ಇದೇ ರೀತಿ, ಚಿಕಿತ್ಸೆಗೆ ನೆರವು ನೀಡುವ ‘ಆಯುಷ್ಮಾನ್ ಭಾರತ’ದಿಂದ 12 ಕೋಟಿ ಕುಟುಂಬಗಳಿಗೆ ಪ್ರಯೋಜನವಾಗಿದೆ. ಪ್ರತಿ ಕುಟುಂಬಕ್ಕೂ ವಾರ್ಷಿಕ 5 ಲಕ್ಷ ರೂ.ವರೆಗಿನ ವೈದ್ಯಕೀಯ ವೆಚ್ಚವನ್ನು ಸರ್ಕಾರವೇ ಭರಿಸುತ್ತಿದೆ. 2024ರಲ್ಲಿ ಇದನ್ನು ಎಲ್ಲ ಹಿರಿಯ ನಾಗರಿಕರಿಗೆ ವಿಸ್ತರಿಸಲಾಗಿದೆ. ಮನೆಮನೆಗೂ ಕುಡಿಯುವ ನೀರು ಒದಗಿಸುವ ‘ಜಲಜೀವನ್ ಮಿಷನ್’ ಯೋಜನೆಯಡಿ 5 ವರ್ಷಗಳಲ್ಲಿ 11.80 ಕೋಟಿ ಕುಟುಂಬಗಳಿಗೆ ಕೊಳಾಯಿ ಸಂಪರ್ಕ ಕಲ್ಪಿಸಲಾಗಿದೆ.

ಇವು ಬೆರಳೆಣಿಕೆಯ ಉದಾಹರಣೆಗಳಷ್ಟೆ. ಮೋದಿ 11 ವರ್ಷಗಳಲ್ಲಿ ತಂದಿರುವ ಯೋಜನೆಗಳ ಪಟ್ಟಿ ನೋಡಿದರೆ, ಅವರ ಶತ್ರುಗಳು ಕೂಡ ಮೂಕವಿಸ್ಮಿತರಾಗುತ್ತಾರೆ. ಒಂದೊಂದು ಯೋಜನೆಯಿಂದಲೂ ಕೋಟ್ಯಂತರ ಜನರು ಉಪಯೋಗ ಪಡೆದುಕೊಳ್ಳುತ್ತಿದ್ದಾರೆ.

ಮನೆಯಲ್ಲಿ ಅಡುಗೆ ಮಾಡಿಕೊಂಡಿರುವ ಮಹಿಳೆಯರಿಂದ ಹಿಡಿದು ನೈರ್ಮಲ್ಯವನ್ನು ಕಾಪಾಡುತ್ತಿರುವ ಪೌರಕಾರ್ವಿುಕರವರೆಗೆ, ಬೀದಿಯಲ್ಲಿ ಪಕೋಡಾ ಮಾರಿ ಜೀವನೋಪಾಯ ಮಾಡುತ್ತಿರುವವನಿಂದ ಹಿಡಿದು ಪಾಶ್ಚಾತ್ಯ ದೇಶಗಳು ಭಾರತವನ್ನು ಹೇಗೆ ಪರಿಗಣಿಸಬೇಕು ಎನ್ನುವವರವರೆಗೆ ಎಲ್ಲರ ಬಗ್ಗೆಯೂ ಮೋದಿ ಯೋಚಿಸಬಲ್ಲರು. ಅವರಿಂದಾಗಿ ಭಾರತದ ವಿರಾಟ್ ಶಕ್ತಿ ವಿಶ್ವಮಟ್ಟದಲ್ಲಿ ಪ್ರಜ್ವಲಿಸುತ್ತಿದೆ. ಇದುವರೆಗೂ ಗುಪ್ತಗಾಮಿನಿಯಾಗಿದ್ದ ನಮ್ಮ ಅಂತಃಸತ್ತ್ವ ಪುಟಿದೆದ್ದಿದೆ; ರಕ್ಷಣೆ, ಬಾಹ್ಯಾಕಾಶ, ಜೀವವಿಮೆ, ರೈಲ್ವೆ ಇತ್ಯಾದಿ ಕ್ಷೇತ್ರಗಳಿಗೂ ವಿದೇಶಿ/ಖಾಸಗಿ ಬಂಡವಾಳ ಹರಿದುಬರುತ್ತಿದೆ.

ಮೋದಿ ಜಾರಿಗೆ ತಂದ ಜಿಎಸ್​ಟಿ ಪದ್ಧತಿಯಿಂದ ಬೊಕ್ಕಸಕ್ಕೆ ಈ ವರ್ಷದ ಮೇ ತಿಂಗಳಲ್ಲಿ 2.01 ಲಕ್ಷ ಕೋಟಿ ರೂ. ಹರಿದುಬಂದಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಇಲ್ಲಿ ಶೇ. 16.4ರಷ್ಟು ಹೆಚ್ಚಿನ ತೆರಿಗೆ ಬಂದಿದೆ. ಮೋದಿ ಸಾಮರ್ಥ್ಯ, ಸಂಕಲ್ಪ, ಛಾತಿಗೆ ಇದಕ್ಕಿಂತ ಪುರಾವೆ ಬೇಕಿಲ್ಲ. ಇಂತಹ ಒಬ್ಬ ಧೀಮಂತ ಮತ್ತು

ನಿಸ್ಪೃಹ ನಾಯಕನಿಗಾಗಿ ಭಾರತ ಕಾಯುತ್ತಿತ್ತು. ಅದಕ್ಕೆ ತಕ್ಕಂತೆ ಮೋದಿ ಕೂಡ ದೇಶದ ಕೀರ್ತಿಪತಾಕೆಯನ್ನು ಹಾರಿಸುತ್ತಲೇ ಇದ್ದಾರೆ. ಅವರ ನಾಯಕತ್ವವು ದೇಶವಾಸಿಗಳಿಗೆ ಇನ್ನೂ ಹೆಚ್ಚು ಕಾಲ ದೊರೆಯಲಿ. ಅವರ ಯೋಗದಾನದಿಂದ ಭಾರತವರ್ಷವು ಸುಖಸಮೃದ್ಧಿಗಳ ಹೊನಲಾಗಲಿ.

(ಲೇಖಕರು ಕರ್ನಾಟಕ ವಿಧಾನಸಭೆ ಪ್ರತಿಪಕ್ಷದ ನಾಯಕರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net