ಇಂದು ರಾಷ್ಟ್ರಕವಿ ಕುವೆಂಪು ಜನ್ಮದಿನ; ಕುವೆಂಪು ಸಾಹಿತ್ಯದ ಪ್ರಸ್ತುತತೆಯ ಮೆಲುಕು ಇಲ್ಲಿದೆ…

Kuvempu
Published on

ಜ್ಞಾನಪೀಠ ಪುರಸ್ಕೃತ ಕನ್ನಡದ ಮೊದಲ ಸಾಹಿತಿ, ಕನ್ನಡ ನಾಡು-ನುಡಿಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಸಾರಸ್ವತಲೋಕದ ದಿಗ್ಗಜ ಕುವೆಂಪು ಜನ್ಮದಿನ ಇಂದು. ಈ ಸಂದರ್ಭದಲ್ಲಿ ಅವರ ಸಾಹಿತ್ಯ, ಚಿಂತನೆಗಳು ಹಾಗೂ ಅವುಗಳ ಪ್ರಸ್ತುತತೆ ಕುರಿತು ನಾಡಿನ ಹಿರಿಯ ಬರಹಗಾರರು ಇಲ್ಲಿ ಮೆಲುಕು ಹಾಕಿದ್ದಾರೆ.

ಸಂಸಾರಿಯಾಗಿಯೂ ಅಧ್ಯಾತ್ಮ ಮಾರ್ಗದಲ್ಲಿ ನಡೆದರು...

ಪ್ರೊ.ಎನ್. ಬೋರಲಿಂಗಯ್ಯ ಸಾಹಿತಿ

ಸಾಂಸಾರಿಕ ಜೀವನದಲ್ಲಿ ಆಧ್ಯಾತ್ಮಿಕ ಗುರಿ ಸಾಧಿಸಿದವರು ಕುವೆಂಪು! ಕೌಟುಂಬಿಕ ಜೀವನಕ್ಕೆ ಮಹತ್ವ ಕೊಟ್ಟಿದ್ದರೂ ಅವರಿಗೆ ಆಧ್ಯಾತ್ಮಿಕ ತುಡಿತವಿತ್ತು. ಸಂಸಾರಿಯಾಗಿಯೇ ಇದ್ದುಕೊಂಡು, ರಾಮಕೃಷ್ಣ ಪರಮ ಹಂಸರು ಮತ್ತು ಸ್ವಾಮಿ ವಿವೇಕಾನಂದರ ಮಾರ್ಗದಲ್ಲಿ ಆಧ್ಯಾತ್ಮಿಕ ಯಶಸ್ಸು ಸಾಧಿಸಿದರು. ಕುವೆಂಪು ಅವರನ್ನು ಬಿಟ್ಟು 20ನೇ ಶತಮಾನದ ಕನ್ನಡ ಸಾಹಿತ್ಯವನ್ನು ಓದಲಾಗದು, ಗ್ರಹಿಸಲಾಗದು. ಅನೇಕ ಚಳವಳಿಗಳಿಗೆ ಅವರೇ ಸ್ಪೂರ್ತಿಯ ಸೆಲೆ. ಸ್ವಾತಂತ್ರ್ಯ ಚಳವಳಿ, ಬರಹಗಾರರ ಒಕ್ಕೂಟದ ಚಳವಳಿ, ಬೂಸಾ ಚಳವಳಿ, ಜಾತಿ ವಿನಾಶ ಚಳವಳಿ, ದಲಿತ ಬಂಡಾಯ, ಮಹಿಳಾ ಚಳವಳಿಗಳಿಗೆಲ್ಲ ಇವರೇ ಪ್ರೇರಕ ಶಕ್ತಿ. ಅವರ ಮುಖ್ಯವಿಚಾರಧಾರೆಯಾದ ಮನುಜಮತ, ವಿಶ್ವಪಥ, ಸವೋದಯ, ಸಮನ್ವಯ, ಪೂರ್ಣದೃಷ್ಟಿ- ಈ ಪಂಚಮಂತ್ರ ಮುಂದಿನ ದೃಷ್ಟಿಯಾಗಬೇಕಾಗಿದೆ.

1935ರಲ್ಲೇ ಕುವೆಂಪು ಹೇಳಿರುವ ‘ಗುಡಿ, ಚರ್ಚು, ಮಸೀದಿಗಳ ಬಿಟ್ಟು ಹೊರಬನ್ನಿ, ಬಡತನವ ಬುಡಮುಟ್ಟಿ ಕೀಳಬನ್ನಿ’ ಎಂಬ ಮಾತು ಇನ್ನೂ ಸಾಕಾರಗೊಂಡಿಲ್ಲ. ‘ಅನ್ಯ ಧರ್ಮಕ್ಕೆ ಮತಾಂತರಗೊಂಡವರನ್ನು ಮತ್ತೆ ಹಿಂದು ಧರ್ಮಕ್ಕೆ ಕರೆತರುವುದು ಏಕೆ? ಮತ್ತೆ ಅದೇ ತಾರತಮ್ಯ ಜಾಗಕ್ಕೆ ಏಕೆ ತಂದುಬಿಡುತ್ತೀರಿ? ಅವರು ಎಲ್ಲಿ ಇರುತ್ತಾರೋ ಅಲ್ಲಿ ನೆಮ್ಮದಿಯಿಂದ ಇರಲಿ ಬಿಡಿ’ ಎಂಬ ಮಾತನ್ನು ಈಗಿನವರು ಕೇಳಿಸಿಕೊಳ್ಳುತ್ತಿಲ್ಲ. ‘ರಾಮ-ಸೀತೆ ಹುಟ್ಟು ಅಯೋಧ್ಯೆಯಲ್ಲಿ. ಆದರೆ, ಆತ್ಮಸಾಕ್ಷಾತ್ಕಾರವಾಗಿದ್ದು ಲಂಕೆಯಲ್ಲಿ. ರಾವಣನೊಬ್ಬ ಕಲಿ ಮತ್ತು ಶೂರ. ಅವನು ಇರದಿದ್ದರೆ ರಾಮ-ಸೀತೆಯರಿಬ್ಬರೂ ಹೊರಪ್ರಪಂಚಕ್ಕೆ ಗೊತ್ತಾಗುತ್ತಿರಲಿಲ್ಲ’ ಎಂದು ಕುವೆಂಪು ಹೇಳಿದ್ದು ಈಗಲೂ ನೆನಪಿದೆ. ಪತ್ನಿ ಹೇಮಾವತಿ ಅವರೇ ಕುವೆಂಪು ಬರವಣಿಗೆಗೆ ಸ್ಪೂರ್ತಿ. ಅವರೆಲ್ಲ ಸಾಧನೆಗೂ ಪತ್ನಿಯೇ ಆದಿಶಕ್ತಿ ರೂಪಕದಂತೆ. ಅಂತ್ಯಕ್ರಿಯೆ ಸಂದರ್ಭದಲ್ಲಿ ಮೃತ ಪತ್ನಿಯ ಕಾಲುಮುಟ್ಟಿ ನಮಸ್ಕರಿಸಿ ಗಳಗಳನೆ ಅತ್ತಿದ್ದರು. ಕುವೆಂಪು ವಿಚಾರಧಾರೆಗಳು ಸದಾಕಾಲಕ್ಕೂ ಪ್ರಸ್ತುತವೇ. ಆದರೆ, ಅವುಗಳೆಲ್ಲವನ್ನೂ ಮರೆತು ಈ ಸಮಾಜ ಉಸಿರಾಡುತ್ತಿದೆ. ಇದಕ್ಕೆ ಭವಿಷ್ಯದಲ್ಲಿ ಬೆಲೆ ತೆರಬೇಕಾಗುತ್ತದೆ.

ಕೃತಿ ಅನುವಾದಿಸಿದ ತೃಪ್ತಿ...

ಡಾ. ಪ್ರಧಾನ ಗುರುದತ್ತ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಮಾಜಿ ಅಧ್ಯಕ್ಷರು

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ‘ಶ್ರಿರಾ ಮಾಯಣ ದರ್ಶನಂ’ ಮಹಾಕಾವ್ಯವನ್ನು ಹಿಂದಿಗೆ ಅನುವಾದಿಸಿದ್ದಲ್ಲದೆ, ಕುವೆಂಪು ಹೆಸರಿನಲ್ಲಿ ಸ್ಥಾಪಿತವಾದ ‘ಕುವೆಂಪು ಭಾಷಾ ಭಾರತಿ ಪ್ರಾಧಿಕಾರ’ದ ಪ್ರಥಮ ಅಧ್ಯಕ್ಷನಾಗಿದ್ದು ನನ್ನ ಸೌಭಾಗ್ಯ.

‘ಶ್ರೀರಾಮಾಯಣ ದರ್ಶನಂ’ ಅನುವಾದಿತ ಕೃತಿಗೆ ಕೇಂದ್ರ ಸರ್ಕಾರದ ಹಿಂದಿ ನಿರ್ದೇಶನಾಲಯದಿಂದ ರಾಷ್ಟ್ರೀಯ ಪುರಸ್ಕಾರ ದೊರೆತಿದ್ದನ್ನು ಕೃತಜ್ಞತೆಯಿಂದ ಸ್ಮರಿಸುತ್ತೇನೆ.

ಕುವೆಂಪು ಕುರಿತು 1964ರಲ್ಲಿಯೇ ಹಿಂದಿ ಮತ್ತು ಕನ್ನಡ ಭಾಷೆಗಳಲ್ಲಿ ‘ಉರ್ವಿುಳಾ’ ಹೆಸರಿನಲ್ಲಿ ತೌಲನಿಕ ವಿಮರ್ಶಾ ಗ್ರಂಥ ರಚಿಸಿ ಪ್ರಕಟಿಸಿದ್ದೆ. ಹಿಂದಿಯಲ್ಲಿ ‘ಕುವೆಂಪು ಸಾಹಿತ್ಯ’ ಎಂಬ ಸಮೀಕ್ಷಾತ್ಮಕ ಲೇಖನ, ‘ಶ್ರೀರಾಮಚರಿತ ಮಾನಸ’ದಂತಹ ತೌಲನಿಕ ವಿಮರ್ಶೆ ಹೊರತರಲಾಯಿತು. ಕುವೆಂಪು ಕೃತಿಗಳು ಇತರ ಭಾಷೆಗಳಲ್ಲಿ ಬಂದಾಗ ಅವುಗಳ ಅನಧಿಕೃತ ವಿಮರ್ಶಕನೂ, ಅಭಿಪ್ರಾಯದಾರನೂ ಅಗಿರುತ್ತಿದ್ದೆ.

ಅಲಿನ್ ಹಾರ್ಪ್​ನ ಪ್ರಕಟಣೆ ಸಂದರ್ಭದಲ್ಲಿ ಮಹಾಕಾವ್ಯ ಅನುವಾದಿಸುವ ಸಂದರ್ಭ, ರಸೋ ವೈಸಃದ ಸಂಸ್ಕೃತ ಅನುವಾದದ ಪರಿಶೀಲನೆ ಸಮಯದಲ್ಲಿ ಕುವೆಂಪು ಅವರೊಡನೆ ಬಹುಮಟ್ಟಿಗೆ ನಿತ್ಯವೂ ಕಲೆತು ರ್ಚಚಿಸುವ ಸುಯೋಗ ನನ್ನದಾಗಿತ್ತು. ಪಿಎಚ್.ಡಿ ಸಂಶೋಧನೆ ಮಾರ್ಗದರ್ಶನ ಸಂದರ್ಭದಲ್ಲಿಯೂ ಅನೇಕ ಭೇಟಿ, ಚರ್ಚೆ ನನ್ನನ್ನು ಕುವೆಂಪು ಅವರೊಂದಿಗೆ ಇನ್ನಷ್ಟು ನಿಕಟವರ್ತಿಯನ್ನಾಗಿಸಿತು. ಬಹುತೇಕ ಸಾಹಿತಿಗಳು ಒಂದು ಪ್ರಕಾರದ ಬರವಣಿಗೆಗೆ ಸೀಮಿತವಾಗಿರುತ್ತಾರೆ. ಆದರೆ, ಕುವೆಂಪು ಕತೆ, ಕಾದಂಬರಿ, ಕಾವ್ಯ, ಮಹಾಕಾವ್ಯ, ಜೀವನ ಚರಿತ್ರೆ, ಪುರಾಣ, ನಾಟಕ, ಮಕ್ಕಳ ಸಾಹಿತ್ಯ, ಕಾವ್ಯ ಮೀಮಾಂಸೆ, ಕ್ರಾಂತಿಗೀತೆ, ವಿಮರ್ಶೆ, ಪ್ರಬಂಧ, ಅಧ್ಯಾತ್ಮ ಸೇರಿದಂತೆ ಎಲ್ಲ ಪ್ರಕಾರದ ಬರವಣಿಗೆಯಲ್ಲಿಯೂ ತೊಡಗಿಸಿಕೊಂಡಿದ್ದರು.

ಕನ್ನಡದ ಪ್ರಥಮ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಕುವೆಂಪು ಹಲವು ಪ್ರಥಮಗಳನ್ನು ಸೃಷ್ಟಿಸಿದ್ದಾರೆ. ಶೈಕ್ಷಣಿಕ ಕ್ಷೇತ್ರದಲ್ಲಿ ಅನೇಕ ಪ್ರಯೋಗಗಳು ನಡೆಯುತ್ತಿದ್ದಾಗ ಪದವಿ ಪೂರ್ವ ಶಿಕ್ಷಣ ವ್ಯವಸ್ಥೆ ಜಾರಿಗೆ ಬಂತು. ಆಗ ಅದಕ್ಕೆ ಸಂಬಂಧಿಸಿದಂತೆ ಕನ್ನಡ ಮಾಧ್ಯಮದಲ್ಲಿ ಪಠ್ಯಪುಸ್ತಕಗಳನ್ನು ಹೊರತರುವ ಕಾರ್ಯಕ್ಕೂ ಕುವೆಂಪು ನಾಂದಿ ಹಾಡಿದರು.

ಪ್ರಸಾರಾಂಗಕ್ಕೆ ಹೊಸ ಚೈತನ್ಯ: ಕುವೆಂಪು ದೃಷ್ಟಿಯಲ್ಲಿ ವಿಶ್ವವಿದ್ಯಾಲಯದ ಚೈತನ್ಯಗಳು ಬೋಧನಾಂಗ, ಸಂಶೋಧನಾಂಗ ಹಾಗೂ ಪ್ರಸಾರಾಂಗ ಆಗಿದ್ದವು. ಬೋಧನಾಂಗ, ಸಂಶೋಧನಾಂಗ ವಿಶ್ವವಿದ್ಯಾಲಯದಲ್ಲಿ ಅಷ್ಟಿಷ್ಟು ನಡೆಯುತ್ತಿತ್ತು. ಆದರೆ, ಅವುಗಳ ಫಲವನ್ನು ಜನತೆಗೆ ತಲುಪಿಸುವ ಪ್ರಸಾರಾಂಗ ಕಾರ್ಯ ಇರಲಿಲ್ಲ. ಕುವೆಂಪು ಪ್ರಸಾರಾಂಗ ಕಾರ್ಯ ಚುರುಕುಗೊಳಿಸಿದರು. ಇದರಿಂದ ಮೈಸೂರು ವಿವಿ ಪ್ರಸಾರಾಂಗದ ವೈವಿಧ್ಯಮಯ ಕಾರ್ಯಚಟುವಟಿಕೆಗಳು ಇತರ ವಿಶ್ವವಿದ್ಯಾಲಯಗಳಿಗೆ ಮಾದರಿಯಾದವು.

ವೈಜ್ಞಾನಿಕ ದೃಷ್ಟಿಯ ಆಸ್ತಿಕ...

ಡಾ.ಸಿ.ಪಿ. ಕೃಷ್ಣಕುಮಾರ್ ಸಾಹಿತಿ

ಕನ್ನಡ ಭಾಷೆ ಅಭಿವೃದ್ಧಿ ಆಗಬೇಕೆಂದು ಕುವೆಂಪು ಕನಸು ಕಾಣುತ್ತಿದ್ದರು. ಆರಂಭದಲ್ಲಿ ಇಂಗ್ಲಿಷ್ ಕವಿತೆ ಬರೆಯುತ್ತಿದ್ದ ಅವರು, ನಂತರ ಕನ್ನಡದ ಕಡೆ ತಿರುಗಿದರು. ಅವರನ್ನು ನೋಡಲು ಹೋಗುತ್ತಿದ್ದ ವಿದ್ಯಾರ್ಥಿಗಳನ್ನು ಇಂಗ್ಲಿಷ್​ನಲ್ಲಿ ಏನೇನು ಓದಿಕೊಂಡಿದ್ದೀರಿ ಎಂದು ಕೇಳುತ್ತಿದ್ದರು. ಕನ್ನಡ ಮಾಧ್ಯಮದ ಮೇಲೆ ಒತ್ತು ಹಾಕುತ್ತಿದ್ದರು. ಯಾವುದೇ ಭಾಷೆಯನ್ನು ದ್ವೇಷ ಮಾಡಬಾರದು. ಎಲ್ಲ ಭಾಷೆಗಳನ್ನು ಕಲಿಯಬೇಕು. ಆದರೆ, ನಮ್ಮ ಶಿಕ್ಷಣ ಮಾಧ್ಯಮ ಕನ್ನಡ ಆಗಿರಬೇಕು. ಒಂದು ಭಾಷೆಯಾಗಿ ಇಂಗ್ಲಿಷ್ ಕಲಿಯಬೇಕು ಎನ್ನುತ್ತಿದ್ದರು.

‘ಓ ಬನ್ನಿ ಸೋದರರೆ ಬೇಗ ಬನ್ನಿ, ವಿಜ್ಞಾನ ದೀವಿಗೆಯ ಹಿಡಿಯ ಬನ್ನಿ...’ ಇದು ಕುವೆಂಪು ನೀಡಿದ ಮುಖ್ಯ ಕರೆ. ಸಮಾಜದಲ್ಲಿನ ಮೌಢ್ಯ ಹೋಗಬೇಕು. ವಿಜ್ಞಾನದ ಬೆಳಕಿನಲ್ಲಿ ಎಲ್ಲ ಮುಂದುವರಿಯಬೇಕು ಎನ್ನುವುದು ಕುವೆಂಪು ಆಶಯವಾಗಿತ್ತು.

ಕುವೆಂಪು ಅವರು ಪಂಪನ ‘ಮನುಷ್ಯ ಜಾತಿ ತಾನೊಂದೇ ವಲಂ’ ಮಾತಿನ ತಳಹದಿ ಮೇಲೆ ವಿಶ್ವಮಾನವ ಸಂದೇಶಕ್ಕೆ ಒತ್ತು ನೀಡಿದ್ದರು. ಅವರ ‘ಅನಿಕೇತನ’ ಕವನದಲ್ಲಿ ಈ ಸಂದೇಶ ಅಡಕವಾಗಿದೆ. ಎಲ್ಲರೂ ವಿಶ್ವಮಾನವರಾದರೆ ಸಾಕು. ಜಾತಿ, ಮತ, ಧರ್ಮ ಎಲ್ಲವನ್ನೂ ಮೀರಿ ಮುಂದೆ ಹೋಗಬೇಕು ಎನ್ನುತ್ತಿದ್ದರು. ಅವರು ಸವೋದಯ ತತ್ವಕ್ಕೂ ಹೆಚ್ಚು ಒತ್ತು ನೀಡುತ್ತಿದ್ದರು.

ಅವರಿಗೆ ವಿಜ್ಞಾನ ಒಂದು ಕಣ್ಣಾದರೆ, ಅಧ್ಯಾತ್ಮ ಮತ್ತೊಂದು ಕಣ್ಣಾಗಿತ್ತು. ಅವರೇನೂ ನಾಸ್ತಿಕರಾಗಿರಲಿಲ್ಲ. ದೇವರನ್ನು ನಂಬುತ್ತಿದ್ದರು.

ಕುವೆಂಪು ಪುರೋಹಿತಶಾಹಿ ವಿರುದ್ಧ ಇದ್ದರೇ ಹೊರತು ಪುರೋಹಿತರ ವಿರುದ್ಧ ಅಲ್ಲ. ಬ್ರಾಹ್ಮಣ್ಯದ ವಿರುದ್ಧ ಮಾತನಾಡುತ್ತಿದ್ದರು. ಪುರೋಹಿತಶಾಹಿ ಎಂದರೆ ಬ್ರಾಹ್ಮಣರು ಅಂತ ಅಲ್ಲ. ಎಲ್ಲ ಮತ, ಧರ್ಮದಲ್ಲೂ ಪುರೋಹಿತಶಾಹಿ ಇದೆ ಎನ್ನುವುದು ಅವರ ವಿವರಣೆ ಆಗಿತ್ತು.

ಅವರು ಇನ್ನೊಂದು ಮಹಾ ಕಾದಂಬರಿ ‘ಕಾಲೋಸ್ಮಿ’ ಬರೆಯಬೇಕೆಂದು ಸಿದ್ಧತೆ ಮಾಡಿಕೊಂಡಿದ್ದರು. ‘ಸಾಹಿತ್ಯ ಲೋಕ ಕಂಡರಿಯದಂತಹ ಕಾದಂಬರಿ ಆಗಬೇಕು ಅದು. ನನ್ನ ಉಳಿದ ಸಾಹಿತ್ಯದಲ್ಲಿ ಕೊಂಚ ಪ್ರಮಾಣದಲ್ಲಿಯಾದರೂ ಬೇರೆಯವರ ಪ್ರಭಾವ ಇದೆ. ಆದರೆ ‘ಕಾಲೋಸ್ಮಿ’ಯನ್ನು ಯಾರ ಪ್ರಭಾವವೂ ಇಲ್ಲದ ರೀತಿ ಬರೆಯಬೇಕು’ ಅಂದುಕೊಂಡಿದ್ದರು. ಆದರೆ, ಆಗಲಿಲ್ಲ.

ದೆಸೆ ಬದಲಿಸಿದರು...

ಪ್ರೊ.ರಾಜೇಂದ್ರ ಚೆನ್ನಿ ಸಾಹಿತಿ

ಕರ್ನಾಟಕ ನವೋದಯದ ಪ್ರಮುಖ ಶಕ್ತಿಕೇಂದ್ರಗಳಲ್ಲಿ ಮೈಸೂರು ಒಂದಾಗಿತ್ತು. ಕರ್ನಾಟಕ ಏಕೀಕರಣ ಚಳವಳಿಯು ಚಾರಿತ್ರಿಕ ಸಂದರ್ಭಗಳಿಂದಾಗಿ ಅಂದಿನ ಮುಂಬೈ ಕರ್ನಾಟಕ - ಧಾರವಾಡದಲ್ಲಿ ಪ್ರಭಾವಿಯಾಗಿ ಬೆಳೆದರೂ ಮೈಸೂರು ಕೂಡ ಮುಂದಿನ ಹಂತಗಳಲ್ಲಿ ಸಹಭಾಗಿಯಾಗಿತ್ತು. ಅಲ್ಲದೆ, ಕನ್ನಡ ಸಾಹಿತ್ಯವು ಒಂದು ಶೈಕ್ಷಣಿಕ ಶಿಸ್ತಾಗಿ ನೆಲೆಯೂರಿದ್ದು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ. ಆಧುನಿಕ ಕನ್ನಡವು ತಲೆಯೆತ್ತುವ ಬಗೆಗಳನ್ನು ಚಿಂತಿಸಿ ಪ್ರಚುರಗೊಳಿಸಿದ ಬಿಎಂಶ್ರೀ ಕಾರ್ಯಸಾಧನೆ, ವ್ಯಕ್ತಿತ್ವಗಳು ಮೈಸೂರಿನ ಸಂಸ್ಕೃತಿಯಿಂದಲೇ ರೂಪುಗೊಂಡಿದ್ದವು. ಕನ್ನಡ ಸಾಹಿತ್ಯ ಪರಂಪರೆಯ ಮುಖ್ಯ ಕೃತಿಗಳ ಪಾಂಡಿತ್ಯಪೂರ್ಣವಾದ ಸಂಶೋಧನೆ ನಡೆದದ್ದು ಇಲ್ಲಿಯೇ.

ಆಧುನಿಕ ಕನ್ನಡವನ್ನು ಕಟ್ಟುವುದರಲ್ಲಿ ಮುಂಚೂಣಿಯಲ್ಲಿದ್ದವರಲ್ಲಿ ಅನೇಕರು ಕುವೆಂಪು ಅವರ ಗುರುಗಳಾಗಿದ್ದರು. ಅವರ ಪ್ರತಿಭೆಯನ್ನು ಗುರುತಿಸಿ, ಮಲೆನಾಡಿನ ಪುಟ್ಟಪ್ಪ ಅವರು ಕನ್ನಡದ ಕುವೆಂಪು ಆಗುವುದರಲ್ಲಿ ಅವರ ಗುರುಗಳು ವಹಿಸಿದ ಪಾತ್ರವು ಒಂದು ಐತಿಹ್ಯದಂತೆ ನಮಗೆಲ್ಲ ಪರಿಚಿತವಾಗಿದೆ. ಕುವೆಂಪು ಮೈಸೂರಿಗೆ ಬಂದದ್ದು ಒಂದು ಚಾರಿತ್ರಿಕ ಘಟನೆಯಾಗಿ ಕಾಣುತ್ತದೆ.

ವಿದ್ಯಾರ್ಥಿಯಾಗಿದ್ದಾಗಲೇ ಇಂಗ್ಲಿಷ್ ಭಾಷೆಯಲ್ಲಿ ಪದ್ಯಗಳನ್ನು ಬರೆದು ಪ್ರಕಟಿಸಿದ್ದರು. ಆದರೆ, ಅತ್ಯಂತ ನಾಟಕೀಯವಾದ ಘಟನೆಯೊಂದರಲ್ಲಿ ಅವರಿಗೆ ಜೆಎಚ್ ಕಸಿನ್ಸ್ ಕನ್ನಡದಲ್ಲಿ ಬರೆಯಲು ಹೇಳಿದರು. ಅಂದಿನ ಮೈಸೂರು ಆಧುನಿಕ ಕನ್ನಡವು ಇಂಗ್ಲಿಷ್ ಮೂಲಕ ಪಶ್ಚಿಮದ ಜತೆಗೆ ಅನುಸಂಧಾನ ಮಾಡುವ ಬಹುಮುಖ್ಯ ಕೆಲಸದಲ್ಲಿ ಭಾಗಿಯಾಗಿತ್ತು. ಇದರ ಪ್ರಭಾವದಿಂದಾಗಿ ಕುವೆಂಪು ಒಂದು ಕಡೆಗೆ ಆಧುನಿಕತೆಯನ್ನೂ ಇನ್ನೊಂದು ಕಡೆಗೆ ಕನ್ನಡ ಸಂಪ್ರದಾಯವನ್ನೂ ಮೇಳೈಸಿಕೊಂಡರು. ಅಷ್ಟು ಮಾತ್ರವಲ್ಲ, ಮೇಲ್ಜಾತಿಯ, ಮಧ್ಯಮ ವರ್ಗದ ಅಭಿವ್ಯಕ್ತಿಯಾಗಿದ್ದ ಕನ್ನಡ ಸಾಹಿತ್ಯದಲ್ಲಿ ಶೂದ್ರಪ್ರಜ್ಞೆಯನ್ನು, ಸಾಮಾಜಿಕ ಸಂಘರ್ಷಗಳನ್ನು ಮುನ್ನೆಲೆಗೆ ತಂದು ಕ್ರಾಂತಿಕರವಾದ ಬದಲಾವಣೆಗಳನ್ನು ತಂದರು. ಗುರುಗಳಾದ ಬಿಎಂಶ್ರೀ ಅವರು ಮಹಾರಾಜರ ಬಗ್ಗೆ, ಬ್ರಿಟಿಷ್ ರಾಜನಿಷ್ಠೆಯ ಬಗ್ಗೆ ಸ್ತುತಿಗೀತೆಗಳನ್ನು ಬರೆಯುತ್ತಿದ್ದಾಗ ಕುವೆಂಪು ಕರಿಸಿದ್ದನ ಬಗ್ಗೆ ಬರೆದರು. ಮಲೆನಾಡು, ಮೈಸೂರು ಇವೆರಡೂ ಆಧುನಿಕ ಕನ್ನಡ ಸಂಸ್ಕೃತಿಗೆ ಬೇಕಾಗಿದ್ದವು. ವಿವೇಕಾನಂದರಿಂದ ಶೂದ್ರ ಪ್ರಜ್ಞೆಯನ್ನು, ಅಂದಿನಿಂದ ಮೈಸೂರಿನ ಆಧುನಿಕತೆಯನ್ನು ಮೈಗೂಡಿಸಿಕೊಂಡ ಕುವೆಂಪು ಕನ್ನಡಪ್ರಜ್ಞೆಯ ದಿಕ್ಕು-ದೆಸೆಗಳನ್ನೇ ಬದಲಾಯಿಸಿದರು.

ಕರ್ನಾಟಕದ ಅಂಬೇಡ್ಕರ್

ಕುವೆಂಪು ಅವರನ್ನು ಕರ್ನಾಟಕದ ಅಂಬೇಡ್ಕರ್ ಮತ್ತು ಕರ್ನಾಟಕದ ಟಾಲ್​ಸ್ಟಾಯ್ (ಸಾಹಿತ್ಯ ಮಹರ್ಷಿ) ಎಂದು ಕರೆಯಬಹುದು. ಕನ್ನಡ ಸಾಹಿತ್ಯದಲ್ಲಿ ಕುವೆಂಪು ಹತ್ತಿರಕ್ಕೂ ಮತ್ತೊಬ್ಬ ಸಾಹಿತಿ ಸೃಷ್ಟಿಯಾಗಲಿಲ್ಲ. ಆದರೆ, ಅವರ ನಂತರ ದೇವನೂರ ಮಹಾದೇವ ಮುಂದುವರಿಯುತ್ತಿದ್ದು, ‘ಕುವೆಂಪು ವಾಯ್್ಸ ಅನ್ನು ಉಳಿಸಿಕೊಂಡು ಸಾಗುತ್ತಿದ್ದಾರೆ.

ಪುನರ್ಜನ್ಮದಲ್ಲಿ ನಂಬಿಕೆ...

ಅವರಿಗೆ ಪುನರ್ಜನ್ಮದಲ್ಲಿ ಅಪಾರ ನಂಬಿಕೆ ಇತ್ತು. ಸಾಮಾನ್ಯವಾಗಿ ವೈಚಾರಿಕರು ಪುನರ್ಜನ್ಮವನ್ನು ಪುರಸ್ಕರಿಸು ವುದಿಲ್ಲ. ಆದರೆ, ಕುವೆಂಪು ವೈಚಾರಿಕರಾಗಿದ್ದರೂ, ವೈಜ್ಞಾನಿಕ ದೃಷ್ಟಿ ಹೊಂದಿದ್ದರೂ ಪುನರ್ಜನ್ಮದ ಕಲ್ಪನೆ ಅವರ ಕಾದಂಬರಿಯಲ್ಲಿ ಬರುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net