

ಕಿತ್ತೂರು ಸಂಸ್ಥಾನದ ಆಕರಗಳ ಬಗ್ಗೆ ಅಧ್ಯಯನ ವಿರಳ. ಕಿತ್ತೂರು ರಾಣಿ ಚೆನ್ನಮ್ಮಳ ಜೀವನದ ಸಂಪೂರ್ಣ ಸನ್ನಿವೇಶಗಳನ್ನು ನೋಡುವ ಒಂದು ಥಿಯೇಟರ್ ಕಿತ್ತೂರಲ್ಲಿ ನಿರ್ವಣಗೊಂಡರೆ ಸಂಶೋಧಕರಿಗೆ, ಅಧ್ಯಯನಕಾರರಿಗೆ, ಪ್ರವಾಸಿಗರಿಗೆ ಅನುಕೂಲ. ಕಿತ್ತೂರನ್ನು ರಾಷ್ಟ್ರಾಭಿಮಾನ ತಾಣವನ್ನಾಗಿಸಿ, ಶೂರರ ತ್ಯಾಗ, ಬಲಿದಾನವನ್ನು ಸದಾ ಸ್ಮರಿಸುವಂತೆ ಮಾಡಬೇಕಿದೆ.
ಡಾ.ಸಂತೋಷ ಹಾನಗಲ್ಲ
ಸ್ವಾತಂತ್ರ್ಯ ಸಂಗ್ರಾಮದ ಬೆಳ್ಳಿಚುಕ್ಕಿ, ಬ್ರಿಟಿಷರ ವಿರುದ್ಧ ದಂಗೆ ಎದ್ದ ಮೊದಲ ವೀರಮಹಿಳೆ ಕಿತ್ತೂರು ಚೆನ್ನಮ್ಮ ಭಾರತೀಯ ಇತಿಹಾಸ ಎಂದೂ ಮರೆಯಲಾಗದ ವೀರವನಿತೆ. ಪ್ರಪಂಚದ ಬಲಾಢ್ಯ ವಸಾಹತುಶಾಹಿ ಶಕ್ತಿಗೆ ಸವಾಲು ಹಾಕಿ ಸ್ವಾತಂತ್ರ್ಯ ಉತ್ಕಟತೆ ಪ್ರದರ್ಶಿಸುವ ಮೂಲಕ ಚರಿತ್ರೆಯಲ್ಲಿ ಹಿರಿಮೆ ಮೆರೆದ ಸ್ವಾಭಿಮಾನದ ಬೀಡು ಕಿತ್ತೂರು.
ನಡೆಯಬೇಕಿದೆ ಸಂಶೋಧನೆ
ಕಿತ್ತೂರು ಸಂಸ್ಥಾನದ ಅಪ್ರಕಟಿತ ಮೋಡಿ ದಾಖಲೆಗಳು ಪುಣೆಯ ಪತ್ರಗಾರ ವಿಭಾಗ ಮತ್ತು ಪುಣೆಯ ಭಾಂಡಾರ್ಕರ್ ಗ್ರಂಥಾಲಯಗಳಲ್ಲಿದ್ದು ಸಮಗ್ರ ಅಧ್ಯಯನ ನಡೆಸಿದರೆ ಸಂಸ್ಥಾನದ ಬಗ್ಗೆ ಹೊಸ ಸಂಗತಿ ಅರಿಯಬಹುದು. ಪುಣೆಯ ಪತ್ರಗಾರದಲ್ಲಿ 34,972 ಗಂಟುಗಳಿದ್ದು, ಅವುಗಳನ್ನು ದಫ್ತರ್ ಅಥವಾ ರುಮಾಲು ಎಂದು ಕರೆಯುತ್ತಾರೆ. ಇವು ಕಿತ್ತೂರು ಸಂಸ್ಥಾನ ಹಾಗೂ ಅಲ್ಲಿ ನಡೆದ ಯುದ್ಧಗಳು, ಚೆನ್ನಮ್ಮಳ ಹೋರಾಟದಲ್ಲಿ ಹೆಗಲುನೀಡಿದ ವೀರರ ವಿವರಗಳನ್ನು ಒಳಗೊಂಡಿವೆ. ಕಿತ್ತೂರು ಸಂಸ್ಥಾನದಲ್ಲಿ 12 ಸಾವಿರ ಸೈನಿಕರ ಸೈನ್ಯ, 5 ಸಾವಿರ ಸೈನಿಕರ ಸಶಸ್ತ್ರ ಸೈನ್ಯ, 60 ತೋಪುಗಳು, ಗಜದಳ, ಅಶ್ವದಳ, ಒಂಟೆಗಳು ಇದ್ದವು. ಅಲ್ಲದೆ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಮಲೆನಾಡು ಮತ್ತು ಮಹಾರಾಷ್ಟ್ರದ ವಿವಿಧ ಭಾಗಗಳಲ್ಲಿ ಈಗಲೂ ಮೋಡಿ ಲಿಪಿ ದಾಖಲೆಗಳು ಕಾಣಸಿಗುತ್ತವೆ. ಹೀಗಾಗಿ ಒಟ್ಟಾರೆ ಸಂಸ್ಥಾನದ ಇತಿಹಾಸದ ಮೇಲೆ ಬೆಳಕು ಚೆಲ್ಲಲು ಮೋಡಿ ಲಿಪಿಯಲ್ಲಿರುವ ದಾಖಲೆಗಳ ಅಧ್ಯಯನಕ್ಕೆ ಪ್ರಾಶಸ್ಱ ನೀಡಬೇಕು.
ಚೆನ್ನಮ್ಮಳ ಖಡ್ಗದ ಬಗ್ಗೆ ನಡೆಯಬೇಕು ವೈಜ್ಞಾನಿಕ ಪರೀಕ್ಷೆ
ರಾಣಿ ಚೆನ್ನಮ್ಮಳ ಖಡ್ಗ ವಿದೇಶದಲ್ಲಿದೆ ಎಂದು ಭಾವಿಸಲಾಗಿತ್ತು. ಸರ್ಕಾರದ ವತಿಯಿಂದಲೂ ಖಡ್ಗ ತರುವ ಹಾಗೂ ನೋಡಲು ಹೋಗುವ ಸಂಬಂಧ ಪ್ರಕ್ರಿಯೆ ನಡೆದಿದ್ದವು. ಆದರೆ, ಚೆನ್ನಮ್ಮಳ ಖಡ್ಗಗಳು ಕಿತ್ತೂರು ಸಂಸ್ಥಾನದ ರಾಜಸಂಸ್ಥಾನದ ಮಠವಾದ ಕಲ್ಮಠದಲ್ಲಿಯೇ ಇವೆ ಎಂಬುದು ಆಮೇಲೆ ಬೆಳಕಿಗೆ ಬಂತು. ಆಗ ಸರ್ಕಾರ ವಿದೇಶ ಪ್ರಯಾಣ ಮೊಟಕುಗೊಳಿಸಿತು. ನಾನು ಕಿತ್ತೂರಿನ ಕಲ್ಮಠಕ್ಕೆ ಭೇಟಿ ನೀಡಿ ಅಲ್ಲಿರುವ ದೇಸಿ ಮತ್ತು ವಿದೇಶಿ ಖಡ್ಗಗಳನ್ನು ಪರಿಶೀಲಿಸಿದೆ. ಹಿರಿಯರಾದ ಡಾ.ಕೆ.ಎನ್.ಚಿಟ್ನೀಸ್ ರಾಣಿ ಚೆನ್ನಮ್ಮ ಕುರಿತು ಬರೆದ ಪುಸ್ತಕದಲ್ಲಿ-‘ಬ್ರಿಟಿಷರೊಂದಿಗೆ ಹೋರಾಡುತ್ತಿರುವಾಗ ರಾಣಿಯ ಬಂಧನವಾಯಿತು. ಆ ಸಮಯದಲ್ಲಿ ತನ್ನ ಪ್ರಾಣಕ್ಕಿಂತ ಹೆಚ್ಚಾದ ಕೆಲ ವಸ್ತುಗಳನ್ನು ರಾಜಗುರು ಸಂಸ್ಥಾನ ಮಠವಾದ ಕಲ್ಮಠಕ್ಕೆ ರವಾನಿಸಿದಳು ಎನ್ನಲಾಗಿದೆ’. ಆ ವಸ್ತುಗಳಲ್ಲಿ ಈ ಖಡ್ಗವೂ ಇರಬಹುದು ಎಂದು ತಿಳಿಸಿದ್ದಾರೆ. ಆ ಆಧಾರದಲ್ಲಿ ಖಡ್ಗಗಳು 18ನೇ ಶತಮಾನದ್ದೇ ಎಂಬುದನ್ನು ಡಾ.ಹಾನಗಲ್ ಖಚಿತಪಡಿಸಿದರು. ಒಂದು ದೇಸಿ ಖಡ್ಗವಾದರೆ ಇನ್ನೊಂದು ವಿದೇಶಿ ಖಡ್ಗ. ಒಂದು ಖಡ್ಗ 39 ಇಂಚು ಉದ್ದ, 2 ಇಂಚು ಅಗಲ, ಇನ್ನೊಂದು 23 ಇಂಚು ಉದ್ದ, 2 ಇಂಚು ಅಗಲವಾಗಿದ್ದು ಬಹಳ ಹರಿತವಾಗಿದೆ. ಆದರೆ, ಖಡ್ಗದ ವೈಜ್ಞಾನಿಕ ಪರೀಕ್ಷೆ ಅಗತ್ಯವಿದೆ.
ರಾಣಿ ಚೆನ್ನಮ್ಮ ಅಧ್ಯಯನ ಪೀಠ
ರಾಣಿ ಚೆನ್ನಮ್ಮ ಅಧ್ಯಯನ ಪೀಠ ಸ್ಥಾಪನೆಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿರುವುದು ಸ್ವಾಗತಾರ್ಹ. ಇದು ಕಿತ್ತೂರಿನಲ್ಲಿಯೇ ಸ್ಥಾಪನೆಯಾದರೆ ಉತ್ತಮ ಹಾಗೂ ಔಚಿತ್ಯಪೂರ್ಣ. ಅಧ್ಯಯನ ಪೀಠ, ಕೋಟೆ, ವಸ್ತು ಸಂಗ್ರಹಾಲಯ ಎಲ್ಲವೂ ಒಂದೆಡೆ ಇದ್ದರೆ ಪ್ರವಾಸಿಗರಿಗೆ, ಅಧ್ಯಯನಕಾರರಿಗೆ, ಸಂಶೋಧಕರಿಗೆ ಎಲ್ಲರಿಗೂ ಅತ್ಯುಪಯುಕ್ತ.
ಚೆನ್ನಮ್ಮ ಜಯಂತಿ
ರಾಣಿ ಚೆನ್ನಮ್ಮ ಹುಟ್ಟೂರು ಕಾಕತಿಯಲ್ಲೇ ಜಯಂತಿ ನಡೆಯಬೇಕು. ಚೆನ್ನಮ್ಮಳ ಮನೆ ಜೀಣೋದ್ಧಾರ ಮಾಡಬೇಕು. ಕಾಕತಿ ಹಾಗೂ ಕಿತ್ತೂರನ್ನು ಪ್ರೇಕ್ಷಣಿಯ ಸ್ಥಳವಾಗಿಸಬೇಕು. ಕಿತ್ತೂರು ನಾಡಿನ ಮಲಪ್ರಭಾ ನದಿ ತೀರದುದ್ದಕ್ಕೂ ಕಿತ್ತೂರು ಸಂಸ್ಥಾನ ಸಂಬಂಧಿತ ಪಳೆಯುಳಿಕೆಗಳು ಸಿಗುತ್ತವೆ. ಆ ಕುರಿತು ಶಿಸ್ತುಬದ್ಧ ಉತ್ಖನನ ಹಾಗೂ ಕ್ಷೇತ್ರ ಸಂಶೋಧನೆ ನಡೆಯಬೇಕು. ಕಿತ್ತೂರು ನಾಡಿನ ವೀರರನ್ನು (ರಾಯಣ್ಣ, ಚನ್ನಬಸಪ್ಪ, ಅಮಟೂರು ಬಾಳಪ್ಪ, ವಡ್ಡರ ಯಲ್ಲಣ್ಣ, ಗಜವೀರ ಮುಂತಾದವರು) ರಾಷ್ಟ್ರಮಟ್ಟದಲ್ಲಿ ಪರಿಚಯಿಸುವ ಕಾರ್ಯ ಆಗಬೇಕು.
ವಿವಾದ ಬಗೆಹರಿಯಲಿ
ಯ.ರು. ಪಾಟೀಲ್ ಸಂಶೋಧಿಸಿದ ಚೆನ್ನಮ್ಮಳ ಭಾವಚಿತ್ರದ ಬಗ್ಗೆ ಅಧ್ಯಯನ ದಾಖಲೆಯುತವಾಗಿದೆ (ವಿಜಯವಾಣಿ ದಿನಪತ್ರಿಕೆ 2014 ಸೆಪ್ಟೆಂಬರ್ 24). ಅದರೆ, ಇಂದಿಗೂ ಆ ಬಗ್ಗೆ ಭಿನ್ನಾಭಿಪ್ರಾಯವಿದೆ. ಕಿತ್ತೂರು ಸಂಸ್ಥಾನದ ಸ್ಮಾರಕಗಳನ್ನು ಪತ್ತೆಹಚ್ಚಿ ಅವನ್ನು ರಕ್ಷಿಸುವ ಕಾರ್ಯ ಆಗಬೇಕು. ಕಿತ್ತೂರು ಕೋಟೆ ಹಾಗೂ ಅರಮನೆಯನ್ನು ಜೀಣೋದ್ಧಾರಗೊಳಿಸಿ, ಕಿತ್ತೂರನ್ನು ರಾಷ್ಟ್ರಾಭಿಮಾನದ ಕೇಂದ್ರವನ್ನಾಗಿಸಬೇಕು.
ಕಿತ್ತೂರು ಉತ್ಸವ
ಹಲವು ವರ್ಷಗಳಿಂದ ಆಚರಿಸುತ್ತಿರುವ ಕಿತ್ತೂರು ಉತ್ಸವದ ಹಿಂದೆ ಹೋರಾಟದ ಇತಿಹಾಸವೇ ಇದೆ. 1982ರಲ್ಲಿ ಚನ್ನಪ್ಪ ಮಾರಿಹಾಳ ಮತ್ತು ಗುರುಸಿದ್ಧಯ್ಯ ಕಲ್ಮಠ ನೇತೃತ್ವದಲ್ಲಿ ಚೆನ್ನಮ್ಮ ವಿಜಯೋತ್ಸವ ಸಮಿತಿ ರಚಿಸಿ 1996ರವರೆಗೂ ಉತ್ಸವ ಆಚರಿಸಿಕೊಂಡು ಬರಲಾಯಿತು. ಬಳಿಕ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆದ ಮೇಲೆ ಉತ್ಸವಕ್ಕೆ ಹೊಸ ಮೆರುಗು ಬಂತು. ಈಗ ಉತ್ಸವದ ಅವಧಿ 3 ದಿನಕ್ಕೆ ಹೆಚ್ಚಿಸಿ ವಿವಿಧ ಕಾರ್ಯಕ್ರಮ ಹಮ್ಮಿಕೊಂಡು ನಾಡಹಬ್ಬವನ್ನಾಗಿ ಆಚರಿಸುತ್ತಿದ್ದಾರೆ. ಕಿತ್ತೂರು ಉತ್ಸವವನ್ನು ವಿಜೃಂಭಣೆಯಿಂದ ಆಚರಿಸುತ್ತಿರುವುದು ಸಂತೋಷದ ವಿಷಯ.
ರಾಷ್ಟ್ರಾಭಿಮಾನದ ಉತ್ಸವವಾಗಲಿ
ಉತ್ಸವದಲ್ಲಿ ಇತಿಹಾಸ ಪ್ರಜ್ಞೆ ವಿರಳ ಎಂದು ತೋರುತ್ತದೆ. ಉತ್ಸವದ ತಳಹದಿಯೇ ಇತಿಹಾಸ ಆಧಾರಿತ. ಆದ್ದರಿಂದ ಉತ್ಸವದಲ್ಲಿ ಕನಿಷ್ಠ ಪಕ್ಷ ಆರ್ಧ ದಿನವಾದರೂ ಇತಿಹಾಸದ ಅಧ್ಯಯನ, ಸಾಕ್ಷ್ಯಚಿತ್ರ, ಇತಿಹಾಸವನ್ನು ಸಾರುವ ಧ್ವನಿವರ್ಧಕ ಅಳವಡಿಸಿ, ಯುವಪೀಳಿಗೆಯಲ್ಲಿ ಕಿತ್ತೂರು ಸಂಸ್ಥಾನದ ಬಗ್ಗೆ ಅರಿವು ತುಂಬಬೇಕು. ಕಿತ್ತೂರು ಉತ್ಸವ ಅಂದರೆ ಕೇವಲ ಹಾಡು, ಕುಣಿತ ಆಟವಾಗಬಾರದು. ಅದು ರಾಷ್ಟ್ರಾಭಿಮಾನ ಮೂಡಿಸುವ ಉತ್ಸವವಾಗಬೇಕು.
(ಲೇಖಕರು ಸಂಶೋಧಕರು)