ರಂಗೋಲಿಯೇ ಇಲ್ಲಿ ಟೀಚರ್​; ಸರ್ಕಾರಿ ಶಾಲೆಯಲ್ಲಿ ನೂತನ ಪ್ರಯೋಗ

ed ra
Published on

ದಿನವೂ ಆಟದ ಪಿರಿಯಡ್ ಇರಬಾರದೇ ಎಂದು ನೀವೆಲ್ಲಾ ಅಂದುಕೊಳ್ಳುವುದು ಸಹಜ. ಬೆಳಗ್ಗೆಯಿಂದ ಸಂಜೆಯವರೆಗೆ ಪಾಠವನ್ನು ಕೇಳಿ ಕೇಳಿ ಆಟ ಆಡಬೇಕೆನ್ನಿಸುತ್ತದೆ. ಆದರೆ ಇಲ್ಲೊಂದು ಶಾಲೆಯಲ್ಲಿ ಪಾಠವನ್ನೇ ಆಟದ ಮೂಲಕ ಹೇಳಿಕೊಡುತ್ತಿದ್ದಾರೆ. ನಿಮ್ಮ ಶಾಲೆಗೂ ಇದು ಮಾದರಿಯಾದರೆ ತುಂಬಾ ಒಳ್ಳೆಯದಲ್ಲವೆ? ಅದೆಂಥ ಪಾಠ, ನೋಡೋಣ ಬನ್ನಿ...

ನಿಮ್ಮಲ್ಲಿ ಅನೇಕರಿಗೆ ಪಾಠಕ್ಕಿಂತ ಆಟದ ಮೇಲೆ ಬಲು ಪ್ರೀತಿ ಅಲ್ಲವೆ? ಆಟದ ರೂಲ್ಸ್ ನೆನಪಿದ್ದರೂ ಪಾಠದ ರೂಲ್ಸ್​ಗಳು ಮರೆತು ಹೋಗೋದೇ ಹೆಚ್ಚು. ಆದ್ದರಿಂದ ಪಾಠವನ್ನೇ ಆಟದ ರೂಪದಲ್ಲಿ ಕಲಿಸಿದರೆ ಹೇಗೆ? ಇಂಥದ್ದೊಂದು ವಿನೂತನ ಯೋಚನೆ ಬಂದದ್ದು ಹಾವೇರಿ ಜಿಲ್ಲೆಯ ಹಾನಗಲ್ಲ ತಾಲೂಕಿನ ಅರಳೇಶ್ವರ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರಿಗೆ. ಅದನ್ನು ಜಾರಿ ಮಾಡಿದಾಗಿನಿಂದ ಇಲ್ಲಿಯ ಮಕ್ಕಳು ಫುಲ್ ಖುಷ್. ಪಾಠವೆಂದರೆ ಎಲ್ಲರಿಗೂ ಇಲ್ಲೀಗ ಬಲು ಇಷ್ಟ. ಶಾಲೆಯೆಂದರೂ ಇದೀಗ ಅಚ್ಚುಮೆಚ್ಚು. ಹೌದು. ಆ ಹೊಸ ವಿಧಾನ ಎಂದರೆ ರಂಗೋಲಿ! ಏನು, ರಂಗೋಲಿಯಿಂದ ಪಾಠ ಹೇಳುವುದು ಎಂದು ಅಚ್ಚರಿಯಾಯಿತೆ? ಇದನ್ನು ಈ ಶಾಲೆಯ ಶಿಕ್ಷಕರು ಮಾಡಿ ತೋರಿಸುತ್ತಿದ್ದಾರೆ. ಇಲ್ಲಿ ವಿದ್ಯಾರ್ಥಿಗಳಿಗೆ ರಂಗೋಲಿಯೇ ಈಗ ಟೀಚರ್. ಶಾಲೆಯ ಆವರಣದಲ್ಲಿ ಮಕ್ಕಳೆಲ್ಲಾ ಕೈಯಲ್ಲಿ ಪುಸ್ತಕದ ಬದಲು ಬಣ್ಣ ಬಣ್ಣದ ರಂಗೋಲಿಯ ಪುಡಿ ಹಿಡಿದು ಆ ಕಡೆ ಈ ಕಡೆ ಓಡಾಡುವುದನ್ನು ನೋಡುವುದೇ ಚೆಂದ. ಕೊಠಡಿಯ ಮುಂದಿನ ಜಗಲಿಯ ತುಂಬೆಲ್ಲ ರಂಗೋಲಿಯ ಸಂಭ್ರಮ!

ಏನಿದು ರಂಗೋಲಿ ಕಲಿಕೆ?: ಶಾಲೆಯಲ್ಲಿ 230 ವಿದ್ಯಾರ್ಥಿಗಳಿದ್ದಾರೆ. ಮುಖ್ಯ ಶಿಕ್ಷಕ ಆನಂದ ಹೆಗಡೆ ಹೈಸ್ಕೂಲ್ ಮಕ್ಕಳಿಗೆ ರಂಗೋಲಿಯ ಪಾಠ ಮಾಡುವ ಮುತುವರ್ಜಿ ವಹಿಸಿಕೊಂಡಿದ್ದಾರೆ. ಗಣಿತ ಶಿಕ್ಷಕಿಯಾದ ಜೆ.ವಿ ದೀಪಾ ಮತ್ತು ವಿಜ್ಞಾನ ಶಿಕ್ಷಕ ಗಣೇಶ ಲಮಾಣಿ ಇವರು ತಮ್ಮ ಪಾಠಗಳನ್ನು ರಂಗೋಲಿ ಮೂಲಕ ಹೇಳಿಕೊಡುತ್ತಾರೆ! ಗಣಿತದ ತ್ರಿಕೋನ, ವೃತ್ತ, ಪ್ರಮೇಯಗಳು, ಸಮಾಜ ವಿಷಯದಲ್ಲಿ ಭಾರತದ ಭೂಪಟ, ಅಕ್ಷಾಂಶ, ರೇಖಾಂಶ, ವಿಜ್ಞಾನ ವಿಷಯದ ಕಣ್ಣು, ಹೃದಯ, ಹೂ, ಮೂತ್ರಜನಕಾಂಗದಂತಹ ಚಿತ್ರಗಳನ್ನು ಬಿಡಿಸುತ್ತಲೇ ಪಾಠಗಳನ್ನು ಇಲ್ಲಿ ಹೇಳಿಕೊಡಲಾಗುತ್ತದೆ. ಹೀಗೆ ವಿದ್ಯಾರ್ಥಿಗಳು ನೋಟ್ ಬುಕ್​ನಲ್ಲಿ ಚಿತ್ರ ಬರೆಯುವ ಬದಲು ರಂಗೋಲಿ ಮೂಲಕ ಅದನ್ನು ಅರ್ಥೈಸಿಕೊಳ್ಳುತ್ತಾರೆ. ಇಂಥ ವಿನೂತನ ಕಲಿಕೆಯಿಂದ ಮಕ್ಕಳ ಬುದ್ಧಿ ಸಾಮರ್ಥ್ಯ ಹೆಚ್ಚುತ್ತದೆ ಎನ್ನುತ್ತಾರೆ ಶಿಕ್ಷಕರು. ಹೊಸ ಹೊಸ ಕಲಿಕೆಗೆ ಒತ್ತು ಕೊಡುವುದರಿಂದ ನಮ್ಮ ಮೇಲಿನ ಮಾನಸಿಕ ಹೊರೆ ಕಡಿಮೆಯಾಗುತ್ತದೆ. ಶಿಕ್ಷಕರು ನಮ್ಮ ಕಲಿಕಾ ಮಟ್ಟಕ್ಕೆ ಇಳಿದು ಕಲಿಸುವುದರಿಂದ ಅವರು ಹೆಚ್ಚು ಆಪ್ತರಾಗುತ್ತಾರೆ. ಹೀಗಾಗಿ ರಂಗೋಲಿ ಕಲೆಯನ್ನು ಅಂಕ ಗಳಿಕೆಯ ಆಭ್ಯಾಸದ ಭಾಗವಾಗಿಸಿಕೊಂಡಿದ್ದೇವೆ ಎನ್ನುತ್ತಾಳೆ ವಿದ್ಯಾರ್ಥಿ ದೀಪಾ ಚಿಕ್ಕೇರಿ.

ರಂಗೋಲಿಯ ಮಹತ್ವ ಗೊತ್ತಾ?: ಹಸ್ತಮುದ್ರಿಕಾ ಹಾಗೂ ಯೋಗ ವಿಜ್ಞಾನದ ಪ್ರಕಾರ ರಂಗೋಲಿ ಹಾಕುವಾಗ ತೋರು ಬೆರಳಿನ ತುದಿಯನ್ನು ಹೆಬ್ಬೆರಳು ಮೃದುವಾಗಿ ಒತ್ತುವುದರಿಂದ ದೇಹದಲ್ಲಿ ಸಕಾರಾತ್ಮಕ ಶಕ್ತಿಯು ಬಿಡುಗಡೆಯಾಗುವುದು. ಈ ಶಕ್ತಿಯು ಆತ್ಮವನ್ನು ಶುದ್ಧೀಕರಿಸುವುದಲ್ಲದೇ ರಕ್ತಪರಿಚಲನೆಗೂ ಸಹಾಯ ಮಾಡುತ್ತದೆ. ಆದ್ದರಿಂದ ಮಕ್ಕಳು ರಂಗೋಲಿ ಬಿಡಿಸುವುದನ್ನು ಕಲಿತುಕೊಂಡರೆ ಅದು ಅವರ ಆರೋಗ್ಯವನ್ನೂ ಕಾಪಾಡುತ್ತದೆ. ಇದೇ ಕಾರಣಕ್ಕೆ ಹಲವಾರು ಶಾಲಾ- ಕಾಲೇಜು ಸೇರಿದಂತೆ ಹಲವು ಕಡೆಗಳಲ್ಲಿ ರಂಗೋಲಿ ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತದೆ. ಇಂಥದ್ದೊಂದು ವೈಜ್ಞಾನಿಕ ಹಿನ್ನೆಲೆಯುಳ್ಳ ರಂಗೋಲಿಯ ಕಲಿಕೆ ನಿಮ್ಮಂಥ ಪುಟಾಣಿಗಳಿಗೆ ಅತ್ಯಗತ್ಯ.

ಮಕ್ಕಳಿಂದಲೇ ಪಾಠದ ಆಯ್ಕೆ: ಇಲ್ಲಿ ಮೊದಲು ಮಕ್ಕಳು ತಮ್ಮ ಪಾಠಕ್ಕೆ ಸಂಬಂಧಿಸಿದ ಚಿತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಅದನ್ನು ರಂಗೋಲಿಯ ಮೂಲಕ ಬಿಡಿಸುವ ಚಾಲೆಂಜ್ ಅವರಿಗೆ ಇರುತ್ತದೆ. ರಂಗೋಲಿಯನ್ನು ಹೇಗೆ ಹಾಕಬೇಕು ಮತ್ತು ಬಣ್ಣವನ್ನು ಹೇಗೆ ತುಂಬಬೇಕು ಎನ್ನುವುದನ್ನು ಶಿಕ್ಷಕರು ಮನವರಿಕೆ ಮಾಡುತ್ತಾರೆ. ಅದು ಹೇಗೆ ಬರಬೇಕು ಎಂದು ಮಕ್ಕಳು ಮನಸ್ಸಿನಲ್ಲಿಯೇ ಲೆಕ್ಕಾಚಾರ ಹಾಕುತ್ತಾರೆ. ಕಳೆದ ವಾರ ಇಂಥದ್ದೇ ಪ್ರಯೋಗ ನಡೆಯಿತು. ಶಿಕ್ಷಕರು ರಂಗೋಲಿಯ ಬಗ್ಗೆ ವಿವರಿಸುತ್ತಿದ್ದಂತೆಯೇ ಮಕ್ಕಳು ನಿಂತಲ್ಲಿ, ಕುಳಿತಲ್ಲಿ ಅದರ ಬಗ್ಗೆಯೇ ಯೋಚಿಸತೊಡಗಿದರು. ನಂತರ ಅದನ್ನು ಅದ್ಭುತ ರೀತಿಯಲ್ಲಿ ರಂಗೋಲಿ ರೂಪಕ್ಕಿಳಿಸಿದರು. ರಂಗು ರಂಗಿನ ಬಣ್ಣಗಳನ್ನು ತಂದು ಚಿತ್ರ ಬಿಡಿಸಿದ ಕಲಾಚತುರತೆಯನ್ನು ಅಭಿವ್ಯಕ್ತಪಡಿಸಿದರು. ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆಯುವ ರೀತಿಯಲ್ಲಿ ಕೆಲವು ಸರ್ಕಾರಿ ಶಾಲೆಗಳು ಕಾರ್ಯ ನಿರ್ವಹಿಸುತ್ತಿವೆ. ಆದರೆ ಪಾಲಕರಿಗೆ ಖಾಸಗಿ ಹಾಗೂ ಪಟ್ಟಣದ ಶಾಲೆಗಳ ಮೇಲೆ ವ್ಯಾಮೋಹ ಜಾಸ್ತಿ. ಇವುಗಳಿಗೆ ಪೈಪೋಟಿ ನೀಡಿ ಸರ್ಕಾರಿ ಶಾಲೆಗಳತ್ತ ಮಕ್ಕಳನ್ನು, ಪಾಲಕರನ್ನು ಸೆಳೆಯುವುದು ಇಂದಿನ ಅಗತ್ಯವಾಗಿದೆ. ಇದಕ್ಕಾಗಿಯೇ ಹೊಸ ಹೊಸ ಪ್ರಯೋಗಗಳನ್ನು ಮಾಡಲಾಗುತ್ತಿದೆ. ರಂಗೋಲಿ ಕಲಿಕೆ ಇಂಥದ್ದೊಂದು ವಿಭಿನ್ನ ಪ್ರಯೋಗ. ಖಾಸಗಿ ಶಾಲೆಗಳಲ್ಲಿ ಹಲವು ಪ್ರಯೋಗಗಳನ್ನು ಮಾಡಲು ಎಲ್ಲ ರೀತಿಯ ಅನುಕೂಲಕರ ವಾತಾವರಣಗಳು ಇವೆ. ಆದರೆ ಸರ್ಕಾರಿ ಶಾಲೆಗಳಲ್ಲಿ ಸಮಸ್ಯೆಗಳೇ ಹೆಚ್ಚಿರುತ್ತವೆ. ಆದ್ದರಿಂದ ಇರುವ ಸೌಕರ್ಯಗಳನ್ನು ಬಳಸಿಕೊಂಡು ರಂಗೋಲಿಯ ಕಲಿಕೆಯಂಥ ವಿಭಿನ್ನ ಪ್ರಯೋಗ ಮಾಡುತ್ತಿದ್ದೇವೆ. ಇದರಿಂದ ಮಕ್ಕಳಲ್ಲಿ ಕ್ರಿಯಾಶೀಲತೆ ಹೆಚ್ಚುತ್ತಿದೆ ಎನ್ನುವ ಸಮಾಧಾನವಿದೆ ಎನ್ನುತ್ತಾರೆ ಶಿಕ್ಷಕರು.

ರಂಗೋಲಿಯೊಂದಿಗೆ ಒಡನಾಟ ಬೆಳಸಿಕೊಂಡಿರುವ ಹಳ್ಳಿಯ ಮಕ್ಕಳು ಕಲಿಕೆಗೆ ಮತ್ತು ಅಂಕ ಗಳಿಕೆಗೆ ತುಂಬಾ ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಶಾಲೆಯ ಎಲ್ಲ ಶಿಕ್ಷಕರ ಶ್ರಮ ಮುಖ್ಯ. | ಡಾ. ಬಿ.ಎಂ. ಬೇವಿನಮರದ ಶಿಕ್ಷಣ ಇಲಾಖೆ ಸಮನ್ವಯಾಧಿಕಾರಿ, ಹಾನಗಲ್ಲ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net