ಭಾರತೀಯರಿಗೆ ಸಂಸ್ಕೃತಿ ಎಂಬುದೊಂದು ಇದೆಯೇ?

Lead Article
Published on

ಭೂಮಿಯೆಲ್ಲ ರಿಯಲ್ ಎಸ್ಟೇಟ್ ಎಂಬ ಅನ್​ರಿಯಲ್ ಕಲ್ಪನೆಯಲ್ಲಿ ಸತ್ತು, ರೈತರೆಲ್ಲ ವ್ಯವಸಾಯ, ದುಡಿಮೆಯನ್ನು ಕೀಳಾಗಿ ಕಾಣುತ್ತ ಅನುತ್ಪಾದಕ ಬ್ಯಾಂಕಿಂಗ್, ರಾಜಕೀಯದಲ್ಲಿ ಹಣ ಮಾಡುವ, ದುಷ್ಟ ಸೇನಾ ನಿರ್ವಣದ, ಹಳ್ಳಿ-ಹಳ್ಳಿಗಳು ಪಕ್ಷಮೂಲದ ರಾಜಕೀಯ ದ್ವೇಷ ಹರಡುವಿಕೆಯಲ್ಲಿ ಭಾರತವು ವಿನಾಶದತ್ತ ಹೊರಟಿದೆ.

ಈ ಪ್ರಶ್ನೆಯನ್ನು ಕೇಳುತ್ತಿರುವವರು ನಾನೂ, ನೀವೂ ಅಲ್ಲ. ವಿದೇಶೀ ಮತಾಂತರಿಗಳು, ತಲೆಗೆಟ್ಟು ಮತಾಂತರವಾದ ನಮ್ಮವರು ಮತ್ತು ಈಗ ಭಾರತನಾಶಕ್ಕೆ ದೀಕ್ಷೆ ಹೊತ್ತಿರುವ ಕಾಮ್ರೇಡರು, ಅಧಿಕಾರಕ್ಕಾಗಿ ವೋಟುಬ್ಯಾಂಕು ನಿರ್ವಿುಸಿಕೊಂಡು, ಗಟ್ಟಿ ಮಾಡುತ್ತ, ನಮ್ಮ ಸಂಸ್ಕೃತಿಯನ್ನೇ ದೂಷಿಸುತ್ತಿರುವ ಸ್ವಾರ್ಥಿ ರಾಜಕಾರಣಿಗಳು. ಆದರೆ ಪ್ರಶ್ನೆ ಹೊಸದೇನಲ್ಲ. ತುಂಬ ಹಿಂದೆಯೇ ಇದು ವಿಲಿಯಂ ಅರ್ಚರ್ ಎಂಬ ಜೆಸೂಟ್ ಪಾದ್ರಿಯ ಪ್ರಶ್ನೆಯಾಗಿದ್ದು, ಇದಕ್ಕೆ ಶ್ರೀ ಅರವಿಂದರು 1918-21ರ ನಡುವೆ ಅನೇಕ ಲೇಖನಗಳಲ್ಲಿ ಉತ್ತರಿಸಿದ್ದು, ಇವು ಪುಸ್ತಕ ರೂಪದಲ್ಲಿ The Foundations of Indian Culture ಎಂಬ ಶೀರ್ಷಿಕೆಯಲ್ಲಿ ಪ್ರಕಟವಾಗಿದೆ (1959). ಈ ಮುನ್ನ 1953ರಲ್ಲೂ ಸಹ.

ಭಾರತಸಂಜಾತ ಭಾರತದ್ವೇಷಿಗಳು ಈಗಲಾದರೂ ಓದುವುದು ಅವರಿಗೂ ದೇಶಕ್ಕೂ ಹಿತ. ಸೋನಿಯಾ, ರಾಹುಲ್, ಪ್ರಿಯಾಂಕಾ ವಾದ್ರಾ, ಈ ಸುತ್ತಣ ಸಿಬಲ್, ಮಣಿಶಂಕರ್ ಅಯ್ಯರ್, ಸಿಂಘ್ವಿ, ತಿವಾರಿಯಂಥವರು ಓದುವುದಿಲ್ಲ ಬಿಡಿ. ಶಶಿ ತರೂರ್ ಮತ್ತು ಈ ಬಳಗದವರನ್ನು ಕೇಳಲೇಬೇಡಿ. ತಿಳಿಯಬೇಕೆಂದು ಬಯಸುವವರಿಗೆ ಏನನನ್ನಾದರೂ ಹೇಳಬಹುದು. ತಿಳಿಯಬಾರದೆಂದು, ಆಕ್ಷೇಪಗಳನ್ನೇ ಉಗುಳುತ್ತ ಬಾಯಿ ಬಡಿಯುವವರಿಗೆ ಏನು ಹೇಳೋಣ? ಇಂದಿನ ಯುವಪೀಳಿಗೆ ತೆರೆದ ಮನಸ್ಸಿನದು. ಇವರಿಗಾಗಿ ಬರೆಯಬೇಕಿದೆ. ಈ ಪುಸ್ತಕದ ಪ್ರಥಮ ಪ್ರಕಟಣೆ ನ್ಯೂಯಾರ್ಕ್ ಪಟ್ಟಣದಲ್ಲಾಯ್ತು! ನೆಹ್ರೂಯುಗದಲ್ಲಿ ಇಲ್ಲೆಲ್ಲಿ ಅವಕಾಶ? 1953ರ ನಂತರ ಪಾಂಡಿಚೇರಿಯಲ್ಲಿ ಬಹಳ ಸಲ ಆದವು. ಮೂರು ವಿಭಾಗಗಳುಳ್ಳ ಈ ಮಹಾಗ್ರಂಥದಲ್ಲಿ ಈಗ ಒಟ್ಟು 7 ಅಧ್ಯಾಯಗಳಿವೆ. ಭಾರತವು ಸುಸಂಸ್ಕೃತಿಯುಳ್ಳದ್ದೇ? ಭಾರತೀಯ ಸಂಸ್ಕೃತಿಯ ತರ್ಕಬದ್ಧ ವಿಶ್ಲೇಷಣೆ, ಭಾರತೀಯ ಸಂಸ್ಕೃತಿಯ ರಕ್ಷಣೆ, ಮತ ಮತ್ತು ಧರ್ಮ, ಭಾರತೀಯ ಕಲೆ, ಭಾರತೀಯ ಸಾಹಿತ್ಯ, ಭಾರತೀಯ ರಾಜಕಾರಣ-ಎಂಬವು ಈ ಏಳು. ಇನ್ನೊಂದು ಹೆಚ್ಚಿನದು- ಭಾರತೀಯ ಸಂಸ್ಕೃತಿಯ ಮೇಲೆ ವಿದೇಶೀ ಪ್ರಭಾವ.

ಎಲ್ಲ ಸುಸಂಗತ, ಸುವಿಹಿತವಾದ ಉತ್ತಮ ಭಾಷೆಯಲ್ಲಿ ಪ್ರತಿಪಾದಿತವಾದ ಗ್ರಂಥ. ಇಲ್ಲಿ ಸಂಗ್ರಹಿಸಿ, ಎತ್ತಿ ತೋರಿಸುವ ಅಂಶಗಳ ಅವಗಾಹನೆಗೆ ಮುನ್ನ ಇನ್ನೊಂದಂಶವನ್ನು ಇಂದಿಗೆ ನಾವು ಗಮನಿಸುವುದು ಮುಖ್ಯ: ನಾಗರಿಕತೆ ಬೇರೆ, ಸಂಸ್ಕೃತಿ ಬೇರೆ ಎಂಬುದು. ‘ಸಿವಿಲಿಸೇಷನ್’ ಎಂದರೆ ಜೀವನಕ್ರಮದ ಬಾಹ್ಯ ಅಂಶಗಳು-ಒಂದು ಸಮುದಾಯದ ರಸ್ತೆಗಳು, ಸೇತುವೆಗಳು, ಈಜುಕೊಳಗಳು, ವಾಹನಗಳು, ಉಡುಪು, ಆಭರಣಗಳು, ಸತ್ತವರನ್ನು ಹೂಳುವ ಬಗೆ, ಸ್ಮಶಾನ ನಿರ್ಮಾಣ, ಕೆತ್ತನೆ, ನಾಣ್ಯರೀತಿಗಳು, ವಾಣಿಜ್ಯ, ವ್ಯವಸಾಯ ಉಪಕರಣಗಳು, ಕಾಮಗಾರಿ, ಕುಂಬಾರರ ರೀತಿ-ಇಂಥವು. ಸಂಸ್ಕೃತಿ- "culture'’ ಎಂಬುದು ಸಮುದಾಯದ ಅಂತಃಸತ್ವ, ಶ್ರದ್ಧೆ, ಭೌತಾತೀತ ವಿಸ್ಮಯಗಳ ಗ್ರಹಿಕೆ, ಆತ್ಮೋನ್ನತಿಯ ಸಾಧನೆಗಳು-ಯೋಗ, ಚಿಂತನೆ, ತತ್ವಾನ್ವೇಷಣೆ, ಸಿದ್ಧಿ, ಮೌಲ್ಯಪ್ರಪಂಚ, ಮನುಷ್ಯ ಮನುಷ್ಯರ ಸಂಬಂಧದ ಕಲ್ಪನೆಗಳು, ಅದರಲ್ಲಿ ರಾಷ್ಟ್ರಕಲ್ಪನೆ, ಅದರ ಸಿದ್ಧಿಗಾಗಿ ಸಂಸ್ಥೆಗಳು, ವರ್ಣ, ಆಶ್ರಮ, ಸಾಧನೆಯ ಸೋಪಾನಗಳು, ಜೀವನಗುರಿ, ಇಂಥವು. ಈ ವಿಭಾಗವನ್ನು ಪ್ರೊ.ಸಿ.ಇ.ಎಂ.ಜೋಡ್ ಎಂಬ ಕ್ರೖೆಸ್ತ ವಿದ್ವಾಂಸ ವಿಸ್ತಾರವಾಗಿ ಬರೆದ ಗ್ರಂಥವೇ ಇದೆ. ನನ್ನ ಓದಿನಲ್ಲಿ ಈ ಮಹಾಶಯನ ಅಪೂರ್ವ ಗ್ರಹಿಕೆ, ನಿರ್ವಹಣೆಗಳ ಬಗ್ಗೆ ತುಂಬ ಗೌರವವಿದ್ದು, ಪ್ರಭಾವಿತನಾಗಿದ್ದೇನೆ. ಈತ ಹತ್ತು ಹನ್ನೆರಡು ಈ ಬಗೆಯ ಗ್ರಂಥಗಳನ್ನು ಬರೆದಿರುತ್ತಾನೆ. ಓದಿ.

ಈ ಪ್ರಶ್ನೆಯ ಅಂತರಾಳದಲ್ಲಿ ಹುದುಗಿರುವ ಇನ್ನೊಂದು ಮಹಾಪ್ರಶ್ನೆಯೊಂದನ್ನು ಅರವಿಂದರು ಹೀಗೆ ಎತ್ತಿ ತೋರಿಸುತ್ತಾರೆ. ಅದೇ ನಮಗೆ ಇಂದು ಬೇಕಾಗಿರುವುದು. ಹಿಂದೂನಾಶದಲ್ಲೇ ದೇಶಾಭ್ಯುದಯ ಎನ್ನುತ್ತಾರೆ ಕಾಮ್ರೇಡರು, ಅವರ ದಾರಿಯ ಮತಾಂತರಿತ ದಲಿತರು, ವಿದೇಶೀ ಮಿಷನರಿಗಳು, ಅವರಿಗೆ ಕುಮ್ಮಕ್ಕು ಕೊಡುವ ಕಾಂಗ್ರೆಸ್ಸು, ಡಿಎಂಕೆ, ಇನ್ನಿತರ ಪ್ರಕಾರಗಳ ಪಕ್ಷಗಳು. ಆ ಪ್ರಶ್ನೆ ಹೀಗೆ. ‘ಮಾನವ ಜನಾಂಗದ ಭವಿಷ್ಯದ ಕಲ್ಪನೆಯು ಬರೀ ತರ್ಕ, ಭೌತವಿಜ್ಞಾನ, ತಂತ್ರಜ್ಞಾನದ ಸಾಧನೆ ಎಂಬೀಥರದ ಅಂಶಗಳಲ್ಲಿದೆಯೋ? ಅಥವಾ, ಮನುಷ್ಯ ಜೀವನದ ಪ್ರಗತಿಯು ಮನಸ್ಸಿನ ಆವಿಷ್ಕಾರ, ಸಾಮುದಾಯಿಕ ಉದ್ಧಾರ, ಪೀಳಿಗೆ ಪೀಳಿಗೆಗಳ ಸಾವಿನಾಚೆಗೂ ಉಳಿಯುವ ಅಂಶಗಳಲ್ಲಿದೆಯೋ? ಕತ್ತಲೆಯಾಚೆಗೆ ಇರುವ, ಅಳಿವಿನ ಆಚೆಗೂ ಇರುವ ನಿತ್ಯ ಬೆಳಕಿನ ಅನ್ವೇಷಣೆ, ಸಾಧನೆ, ಸಮನ್ವಯಗಳಲ್ಲೋ?’ ಇತ್ಯಾದಿ (ಪುಟ 13). ಈ ಪ್ರಶ್ನೆಯ ವಿನ್ಯಾಸವನ್ನು ಸುದೀರ್ಘ ಪ್ರತಿಪಾದನೆಯ ಅರವಿಂದರ ಮಾತುಗಳನ್ನೇ ನೀವು ಓದಬೇಕು. ಈ ಪ್ರಶ್ನೆಯ ಅನ್ವಿತಾರ್ಥ, ಪ್ರಸ್ತುತಿ, ಅರಿವಿನ ಅಗತ್ಯತೆಯ ಬಗೆಗೆ ನೋಡೊಣ.

ಇಂದು ಪಶ್ಚಿಮದವರ ರೀತಿಯ ಅನಿವಾರ್ಯ ಸ್ಪರ್ಧೆಯಲ್ಲಿ ಮೋದಿ ಸರ್ಕಾರವೂ ‘ಅಭಿವೃದ್ಧಿ’ ಕಾರ್ಯಗಳ ಬಗೆಗೆ ತಳೆದಿರುವ ನೀತಿ-ರೀತಿಗಳನ್ನು ಇಲ್ಲಿ ಪರಾಮಶಿಸಬಹುದಾಗಿದೆ. ಸೇನಾ ಅಭಿವೃದ್ಧಿ, ರಕ್ಷಣೆಗಾಗಿ ಅಣ್ವಸ್ತ್ರಗಳು, ಕ್ಷಿಪಣಿಗಳು, ವಿಮಾನಸಾಗಣೆಯ ನೌಕೆಗಳು, ಹಿಮಾಲಯದಲ್ಲೂ ರಸ್ತೆಸಂಪರ್ಕಗಳು, ಭೂಗರ್ಭ ನಿಧಿಯ ಶೋಧ, ಪೆಟ್ರೋಲು, ಯುರೇನಿಯಂ, ಥೋರಿಯಂ ಮುಂತಾದವು. ಹಳ್ಳಿ-ಹಳ್ಳಿಗಳೆಲ್ಲದರ ನಗರೀಕರಣ, ಲಂಗುಲಗಾಮಿಲ್ಲದ Urbanisation, ಪರಿಸರ ನಾಶ, ಗುಡ್ಡಗಳ ಕುಸಿತ, ನದಿಗಳ ಶೋಷಣೆ, ಅರಣ್ಯ ವಿನಾಶ, ಎಲ್ಲೋ ಒಂದು ಕಡೆ ನದಿಗೆ ಒಡ್ಡು ಹಾಕಿ, ಹರಿವಿನ ಇತರ ಕಡೆ, ನೀರೇ ಸಿಗದಂತೆ ಮಾಡುವುದು, ಮಿತಿಮೀರಿದ ಭೋಗಸಾಧನೆಗಳ ಉತ್ಪಾದನೆ, ರವಾನೆ, ಮಾರಾಟ, ಇವುಗಳ ಲೆಕ್ಕದ ಜಿಡಿಪಿ ಮುಂತಾದವು. ಜಿಎಸ್​ಟಿ ಮೊದಲಾದ ತೆರಿಗೆಯ ನೀತಿ, ದೇಶಿಯ ಬುದ್ಧಿ, ವಿದ್ಯೆಗಳ ಯುವಶಕ್ತಿಯ ಪರದೇಶೀಕರಣ, ಸದಾ ಯುದ್ಧಭೀತಿ, ಸ್ವರಕ್ಷಣೆಗಾಗಿ ತುದಿಗಾಲ ಮೇಲೆ ಸದಾ ನಿಲ್ಲುವುದು-ಇವು ‘ಸಂಸ್ಕೃತಿಯೆ?’ ಇದು ಅರಬ್ಬರ, ಕ್ರೖೆಸ್ತರ, ಹಿಂದಿನ ಗ್ರೀಕ, ರೋಮಕರ ದಾರಿಯಲ್ಲಿಲ್ಲವೇ?

ಈ ಪ್ರಶ್ನೆ ಕೇಳಿದರೆ ನನ್ನನ್ನು ‘ಸಿನಿಕ’ನೆಂದು ನೀವು ಮುದ್ರಿಸಿದರೂ ಪರವಾಗಿಲ್ಲ. ದಯವಿಟ್ಟು ಉತ್ತರಿಸಿಕೊಳ್ಳಿ. ಮನುಷ್ಯನನ್ನು ಪಶುತ್ವದಿಂದ ಮೇಲೆತ್ತುವ ಸಂಗೀತ, ಸಾಹಿತ್ಯ, ದರ್ಶನ, ಕಲೆ ಇವು ಎಲ್ಲಿಹೋದವು? ಹಿಂಬದಿಗೆ- ನಿಧಾನವಾಗಿ ಮರೆವಿನ ಲೋಕಕ್ಕೆ. ಇಲ್ಲಿ ವ್ಯವಸಾಯವೂ ಸಾಯುತ್ತಿದೆ. ಭೂಮಿಯೆಲ್ಲ ರಿಯಲ್ ಎಸ್ಟೇಟ್ ಎಂಬ ಅನ್​ರಿಯಲ್ ಕಲ್ಪನೆಯಲ್ಲಿ ಸತ್ತು, ರೈತರೆಲ್ಲ ವ್ಯವಸಾಯ, ದುಡಿಮೆಯನ್ನು ಕೀಳಾಗಿ ಕಾಣುತ್ತ, unproductive- ಅನುತ್ಪಾದಕ ಬ್ಯಾಂಕಿಂಗ್, ರಾಜಕೀಯದಲ್ಲಿ ಹಣ ಮಾಡುವ, ದುಷ್ಟ ಸೇನಾ ನಿರ್ವಣದ, ಹಳ್ಳಿ-ಹಳ್ಳಿಗಳು ಪಕ್ಷಮೂಲದ ರಾಜಕೀಯ ದ್ವೇಷ ಹರಡುವಿಕೆಯಲ್ಲಿ ಭಾರತವು ವಿನಾಶದತ್ತ ಹೊರಟಿದೆ.

ಗುಪ್ತರ ಕಾಲದ ಸಮನ್ವಯ ಎಲ್ಲಿ? ಅಲ್ಲಿ ವಿಜ್ಞಾನ, ಯೋಗ, ಭಾಷೆ, ಗಣಿತ, ಖಗೋಳ, ಆಡಳಿತಕ್ರಮ, ಜೀವನ ಸುಧಾರಣೆ, ನ್ಯಾಯವಿತರಣಾ ನೀತಿ, ದುಷ್ಟ ಶಿಕ್ಷಣ, ಶಿಷ್ಟ ರಕ್ಷಣಾ ರೀತಿಗಳ ಪ್ರಯೋಗಗಳು, ಇನ್ನೂ ಹಿಂದಿನ ಮೌರ್ಯರ ಕಾಲದ ಚಾಣಕ್ಯ ಅರ್ಥನೀತಿಯ ಪ್ರಯೋಗಗಳು ಎಲ್ಲಿ ಹೋದವು? ಹಣ ಗಳಿಕೆ ಎಂಬುದು ನಾಗರಿಕತೆಯೋ? ಸಂಸ್ಕೃತಿಯೋ? ಒಬ್ಬನು ಎನ್​ಕೌಂಟರ್​ನಲ್ಲಿ ಸಾಯುತ್ತಾನೋ? ಮಾದಕದ್ರವ್ಯ ಸೇವಿಸಿಯೋ ಎಂಬುದು ನಾಗರಿಕತೆಯೋ ಸಂಸ್ಕೃತಿಯೋ? ಟಿ.ವಿ. ವಾರ್ತೆಗಳನ್ನು ನೋಡುವುದೇ ಅಪಾಯಕರ, ಅವಿವೇಕ ಎಂಬ ಪರಿಸ್ಥಿತಿ. ಭಯಂಕರ, ಉದ್ರೇಕಕರ, ಹಿಂಸಾತ್ಮಕ ದೃಶ್ಯಗಳ ಪ್ರದರ್ಶನದಲ್ಲಿ ಸಾವು ತರುವ Mortal ಸ್ಪರ್ಧೆ. ವಾರಗಟ್ಟಲೇ ಇದೇ ಚರ್ಚೆ. ಚರ್ಚೆ ಮುಗಿಯುವುದೇ ಇಲ್ಲ. ಸದಾ ಹೊಸಸುಳಿಗಳು. ಖಾಕಿ, ಕಾವಿ, ಸಿನಿಮಾ ನಟರು, ಕ್ರೀಡಾಪಟುಗಳು, ಇವರನ್ನು ಸಾಕುವ ದುಷ್ಟ ರಾಜಕೀಯಕೂಟ, ಇವುಗಳು ಯಾರ ಸೃಷ್ಟಿ? ಅವುಗಳ ನಾಶವೇ ಇಲ್ಲವೇ? ಒಂದೇ ಮಾತಿನಲ್ಲಿ ಬದುಕಿಸಬಲ್ಲ ಧರ್ಮದ ಬಗೆಗೆ ಏಕೆ ಮೌನ? ತಿರಸ್ಕಾರ? ಶಾಂತಿ ಬದುಕಿಗೆ ಅವಕಾಶವೆಲ್ಲಿ? ರಾಜಕಾರಣಿಗಳು, ಇಂದಿನವರು, ಹಿಂದಿನ ಕೌರವ, ಯಾದವರಂತೆ ಸತ್ತ ಮೇಲೂ ಭಾರತ ಬದುಕಿರುತ್ತದೆ!

ಅರವಿಂದರು ಬರೆದಾಗ ಬ್ರಿಟಿಷರು ಹೋದ ಮೇಲೂ, ಕ್ರೖೆಸ್ತವೂ, ಇಸ್ಲಾಮೂ ಇಲ್ಲವಾದಾಗಲೂ ಭಾರತ ಬದುಕಿ, ವಿಜೃಂಭಣೆಯಲ್ಲಿ ಇರುತ್ತದೆ ಎಂದರು. ಅಲ್ಲಿ ಆವಿಷ್ಕಾರ. ಒಂದು ತೆಂಗಿನ ಮರದ ಆವಿಷ್ಕಾರ, ಸುಳಿಯಲ್ಲಿರುತ್ತದೆ. ಕಾಯಿಗಳು ಬೆಳೆದು ಉದರುತ್ತವೆ. ಎಳೆನೀರು, ಕೊಬ್ಬರಿಯಾಗುತ್ತದೆ, ಆದರೆ ಮರ ಉಳಿದರೆ ಮಾತ್ರ ಇದೆಲ್ಲ! ಅದು ಕಲ್ಪವೃಕ್ಷ ಎಂದವರು ಮೂರ್ಖರಲ್ಲ! ಅಶ್ವತ್ಥ, ಆಲಗಳನ್ನು ಪೂಜ್ಯತೆಯಿಂದ ಕಂಡ ಭಾರತೀಯ ಪ್ರಜ್ಞೆಗೆ ಅಲ್ಲಿ ಭಾರತೀಯ ಸಂಸ್ಕೃತಿಯ ಆವಿಷ್ಕಾರದ ಬಿಂಬಗಳೇ ಕಂಡಿರಬೇಕು! ತೆಂಗು, ಆಲ, ಅಶ್ವತ್ಥ, ಬೇವು ಎಲ್ಲವನ್ನೂ ಕಡಿದು, ಹಲಗೆ, ಕೊರಟು, Plywood ಮಾಡಿ, ಮಾರಾಟ ಮಾಡಿ, ಹಣ ಮಾಡುವುದು,civilization. ಅಯ್ಯಾ! ನೆಲದ ಮೇಲಾದರೂ ಕೂಡಿ, ಸುಖಾಸನದಲ್ಲಾದರೂ ಕೂಡಿ, ಒಳತೆರೆಯ ಆತ್ಮಾವಲೋಕನ ಮಾಡಿ, ಯೋಗಧಾರಣೆ ಒಮ್ಮೆಯಾದರೂ ಮಾಡಿ. ಕೂಡುವ ಕುರ್ಚಿ ಮುಖ್ಯವಲ್ಲ, ತೆರೆದ ಮನಸ್ಸು ಮುಖ್ಯ ಎಂಬ ಶ್ರೇಣಿಕೃತ ಜ್ಞಾನ ಭಾರತೀಯನದು.

ಇಂಗ್ಲೆಂಡು ನಾಶವಾಗುತ್ತಿರುವ ಚಿತ್ರವನ್ನು "London bridge is falling' ಅಂತ ಟಿ.ಎಸ್.ಎಲಿಯೆಟ್ ಚಿತ್ರಿಸಿದ! ಸೇತುವೆ, ಅಲ್ಲಿ ಲಂಡನ್ನಿನ ಸಂಚಾರದ ದಟ್ಟಣೆಯ ಸಂಕೇತ! ಅಜ್ಞಾನಿ ಮೇಷ್ಟ್ರೊಬ್ಬರು ಇದನ್ನು ಅಪಹಾಸ್ಯ ಮಾಡಿ, ‘ರಿಪೇರಿಗಾಗಿ ಇಂಜಿನಿಯರರನ್ನು ಕರೆಯಿರಿ’ ಎಂದು ನಗುತ್ತಿದ್ದರು.

ಕನ್ನಡ ಸಾಹಿತ್ಯದಲ್ಲಿ ಈ Eliot ಶ್ರೇಣಿಯ ಕವಿಗಳೆಲ್ಲಿ? ಡಿವಿಜಿ, ಬೇಂದ್ರೆ, ಗೋಕಾಕರೆಲ್ಲಿ? ಈಚಿನ ಕೃತಕ ಜ್ಞಾನಪೀಠಿಗಳೆಲ್ಲಿ? ಕೃಷ್ಣರಾಜ ಒಡೆಯರ ಮಂತ್ರಿಮಂಡಳವೆಲ್ಲಿ? ಈಚಿನ ಅಪ್ಪರ್ ಹೌಸ್, ಲೋವರ್ ಹೌಸ್​ಗಳ ಆಭಾಸಗಳೆಲ್ಲಿ? ಚಿಂತಕರೆಲ್ಲಿ? ಹಂತಕರೆಲ್ಲಿ? ಅರವಿಂದ, ವಿವೇಕಾನಂದ, ರವೀಂದ್ರರೆಲ್ಲಿ, ಬೊಗಳುಭಟ್ಟರು ಈಚಿನ, ಸಾಹಿತಿಗಳ ಹಣೆಪಟ್ಟಿಯವರೆಲ್ಲಿ? ಶಾಂತ ವಾತಾವರಣವಿಲ್ಲದೆ ಸಂಸ್ಕೃತಿ, ನ್ಯಾಯ, ಆವಿಷ್ಕಾರ ಇಲ್ಲ. ವಿಸ್ತಾರ ಕಾಂಕ್ರಿಟು ರಸ್ತೆಯ ಆಚೀಚಿನ ಹುಣಸೆ ಮರಗಳಿಗೆ ಹತ್ತಿರುವ ಧೂಳನ್ನು ನೋಡಿ! ಅದು ಇಂದಿನ ನಾಗರಿಕತೆ! ಸಂಸ್ಕೃತಿಯನ್ನು ಕೊಲ್ಲುತ್ತಿರುವ ಮಾರಿಯ ರೂಪದ್ದು. ಮೋದಿ ಸುಸಂಸ್ಕೃತರಿದ್ದಾರೆ. ಆ ಪಕ್ಷದ ಎಲ್ಲರೂ ಅಲ್ಲ. ಚೀನಾದ ಕ್ಸಿ, ಅಮೆರಿಕದ ಟ್ರಂಪ್, ಇನ್ನಿತರರಲ್ಲಿ ಸಂಸ್ಕೃತಿ ಎಷ್ಟಿದೆಯೋ ಹುಡುಕಿ ನೋಡಿ. ಈಗ ಬರಲಿರುವ ಮಹಾಯುದ್ಧದ ರೂಪ-ನಾಗರಿಕತೆ, ಸಂಸ್ಕೃತಿಯನ್ನೇ ಅಳಿಸಿ ನುಂಗುವ ವಿಶ್ವಪ್ರಯತ್ನಗಳು. ಯುದ್ಧ ಮುಗಿದ ಮೇಲೂ ಉಳಿಯುವುದು ವೇದ, ಉಪನಿಷತ್ತು, ರಾಮಾಯಣ, ಭಾರತ, ಗೀತೆಗಳು. ಮಠ, ಮಾನ್ಯಗಳು ಹೋದರೂ ಉಳಿಯುವುದು ಋಷಿಗಳ ಸಂಸ್ಕೃತಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net