

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತೆ ಸುದ್ದಿಯಲ್ಲಿದ್ದಾರೆ. ಹೌದು. ಹಿಂದಿನಂತೆಯೇ ಇಂದೂ, ತಪ್ಪು ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ಸ್ಥಾನಕ್ಕೆ ತಕ್ಕುದಲ್ಲದ ಮಾತನ್ನಾಡಿ ಸುದ್ದಿಯಲ್ಲಿದ್ದಾರೆ. 2024ರ ನವೆಂಬರ್ನ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ವ್ಯಾಪಕ ಭ್ರಷ್ಟಾಚಾರವೆಸಗಿ ಬಿಜೆಪಿ ಮೈತ್ರಿಕೂಟ ಜಯಗಳಿಸಿದೆ ಎನ್ನುವುದು ರಾಹುಲ್ ಆರೋಪ.
ಇದಕ್ಕಾಗಿ ಅವರ ವಾದ ವಿಚಿತ್ರವಾಗಿದೆ. ಮೊದಲನೆಯದಾಗಿ, ಚುನಾವಣಾ ಆಯುಕ್ತರ ನೇಮಕದಲ್ಲಿ ಕೇಂದ್ರ ಸರ್ಕಾರ ಹೆಚ್ಚಿನ ಪಾರಮ್ಯ ಹೊಂದಿದ್ದು. ಎರಡನೆಯದಾಗಿ, ಚುನಾವಣೆಗೆ 5 ತಿಂಗಳಿರುವಂತೆ ವಿಪರೀತ ಪ್ರಮಾಣದಲ್ಲಿ ಮತದಾರರ ನೋಂದಣಿ ಮಾಡಿರುವುದು. ಅವರ ವಾದದಂತೆ, 2019ರ ವಿಧಾನಸಭೆ ಚುನಾವಣೆ ವೇಳೆ ಮಹಾರಾಷ್ಟ್ರದಲ್ಲಿ 8.98 ಕೋಟಿ ಮತದಾರರಿದ್ದರು. 5 ವರ್ಷದ ನಂತರ 2024ರ ಲೋಕಸಭೆ ಚುನಾವಣೆ ವೇಳೆಗೆ ಇದು 9.29 ಕೋಟಿ ಆಯಿತು. ಅಂದರೆ 5 ವರ್ಷದಲ್ಲಿ 31 ಲಕ್ಷ ಮತದಾರರು ಹೆಚ್ಚಿದರು. ಅದೇ 2024ರ ನವೆಂಬರ್ನ ವಿಧಾನಸಭೆ ಚುನಾವಣೆ ವೇಳೆಗೆ ಮತದಾರರ ಸಂಖ್ಯೆ 9.70 ಕೋಟಿಗೆ ಏರಿತು. ಅಂದರೆ ಐದೇ ತಿಂಗಳಲ್ಲಿ 41 ಲಕ್ಷ ಹೆಚ್ಚಳ. ಹಾಗೆ ನೋಡಿದರೆ ಈ ಅಂಕಿಅಂಶ ಸುಳ್ಳಲ್ಲ. ಆದರೆ ಇದನ್ನು ಸದುದ್ದೇಶದಿಂದ ಮಂಡಿಸದಿದ್ದರೆ ಯಾರನ್ನು ಬೇಕಾದರೂ ಮೋಸ ಮಾಡಬಹುದು.
ಏಕೆಂದರೆ ಮಹಾರಾಷ್ಟ್ರ ಚುನಾವಣೆಯಲ್ಲಿ ಅತ್ಯಂತ ಕಡಿಮೆ ಸಮಯದಲ್ಲಿ ಹೆಚ್ಚಿನ ಮತದಾರರು ಸೇರ್ಪಡೆ ಆಗಿರುವುದು ಇದೇ ಮೊದಲಲ್ಲ. 2004ರಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ 5 ತಿಂಗಳಲ್ಲಿ ಮತದಾರರ ಸಂಖ್ಯೆ ಶೇ.32 ಹೆಚ್ಚಳವಾಗಿತ್ತು. 2009ರಲ್ಲಿ, ಅದೂ ಕಾಂಗ್ರೆಸ್ ಆಡಳಿತಾವಧಿಯಲ್ಲೇ, ಶೇ.30 ಹೆಚ್ಚಳವಾಗಿತ್ತು. 2019ರ ಚುನಾವಣೆ ವೇಳೆ ಅತಿ ಕಡಿಮೆ ಸಮಯದಲ್ಲಿ ಮತದಾರರ ಸಂಖ್ಯೆ ಶೇ.84 ಹೆಚ್ಚಳವಾಗಿತ್ತು. ಅದರ ಹೋಲಿಕೆಯಲ್ಲಿ 2024ರಲ್ಲಿ ಆದ ಶೇ.49 ಹೆಚ್ಚಳ ಕಡಿಮೆಯೇ. ಮೂರನೆಯದಾಗಿ, ಮತದಾನ ಪ್ರಮಾಣ ಸಂಜೆ 5ರ ನಂತರ ವಿಪರೀತ ಏರಿಕೆಯಾಗಿದೆ ಎಂದಿದ್ದಾರೆ ರಾಹುಲ್. ನಾಲ್ಕನೆಯದು, ಒಟ್ಟು 1 ಲಕ್ಷ ಬೂತ್ ಪೈಕಿ, 85 ಕ್ಷೇತ್ರದ 12,000 ಬೂತ್ಗಳಲ್ಲೇ ನಕಲಿ ಮತದಾನವಾಗಿದೆ ಎಂದಿದ್ದಾರೆ. ಐದನೆಯದಾಗಿ, ಚುನಾವಣಾ ಅಕ್ರಮ ಸಾಬೀತುಪಡಿಸುವ ದಾಖಲೆಗಳನ್ನು ನೀಡದ ಆರೋಪವನ್ನು ಚುನಾವಣಾ ಆಯೋಗದ ಮೇಲೆ ಮಾಡಿದ್ದಾರೆ.
ಬಿಜೆಪಿ ಮೈತ್ರಿಕೂಟ ಚುನಾವಣೆಯಲ್ಲಿ ಭ್ರಷ್ಟಾಚಾರ ಎಸಗಿದೆ ಎಂದು ಐದು ಹಂತಗಳಲ್ಲಿ ರಾಹುಲ್ ಆರೋಪಿಸಿದ್ದಾರೆ. ಚುನಾವಣೆ ಭ್ರಷ್ಟಾಚಾರವೆಸಗಿ ಸಂಸದತ್ವ ಕಳೆದುಕೊಂಡಿದ್ದ ಇಂದಿರಾ ಗಾಂಧಿಯವರು ಅಧಿಕಾರ ಉಳಿಸಿಕೊಳ್ಳಲು ತುರ್ತು ಪರಿಸ್ಥಿತಿ ಹೇರಿದ 50ನೇ ವರ್ಷ ಇದು. ಇಂತಹ ಪ್ರಜಾಪ್ರಭುತ್ವ ವಿರೋಧಿ ನಡೆಯನ್ನು ವಿರೋಧಿಸಿದ, ಪ್ರಜಾಪ್ರಭುತ್ವವನ್ನು ಮರುಸ್ಥಾಪಿಸಿದ ಗುಂಪಿನ ನೇತೃತ್ವ ವಹಿಸಿದ್ದು ರಾಷ್ಟ್ರೀಯ ಸ್ವಯಂಸೇವಕ ಸಂಘ ಹಾಗೂ ಜನಸಂಘದ ಕಾರ್ಯಕರ್ತರು. ಅಂದಿನ ಜನಸಂಘವೇ ಇಂದಿನ ಬಿಜೆಪಿ. ಈಗಿನ ವ್ಯಂಗ್ಯವೆಂದರೆ, ಅಂದು ಚುನಾವಣಾ ಭ್ರಷ್ಟಾಚಾರ ಎಸಗಿದ್ದ ಇಂದಿರಾ ಅವರ ಮೊಮ್ಮಗ ರಾಹುಲ್, ಬಿಜೆಪಿ ವಿರುದ್ಧವೇ ಚುನಾವಣಾ ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದಾರೆ. ‘ಉಲ್ಟಾ ಚೋರ್ ಕೊತ್ವಾಲ್ ಕೋ ಡಾಂಟಾ’ ಎಂಬಂತೆ!
ರಾಹುಲ್ ಮಾತು ಹಾಗೂ ಒಂದು ಆರ್ಟಿಐ ಉತ್ತರ ಆಧರಿಸಿ ಮಹಾರಾಷ್ಟ್ರದ ಚೇತನ್ ಚಂದ್ರಕಾಂತ್ ಆಹೀರೆ ಮುಂಬೈ ಹೈಕೋರ್ಟ್ನಲ್ಲಿ ಮೊಕದ್ದಮೆ ದಾಖಲಿಸಿದರು. 2024ರ ವಿಧಾನಸಭೆ ಚುನಾವಣೆಯಲ್ಲಿ ಸಂಜೆ 6ಕ್ಕೆ ಮತದಾನ ಮುಗಿದ ನಂತರ 76 ಲಕ್ಷ ಜನ ಮತದಾನ ಮಾಡಿದ್ದಾರೆ. ಹಾಗಾಗಿ ಫಲಿತಾಂಶ ರದ್ದುಗೊಳಿಸಬೇಕು ಎಂಬುದವರ ಕೋರಿಕೆ. ಪ್ರಕರಣದಲ್ಲಿ ಯಾವುದೇ ಹುರುಳಿಲ್ಲ ಎಂದ ನ್ಯಾಯಾಲಯ, ಅರ್ಜಿದಾರರಿಗೆ ಛೀಮಾರಿ ಹಾಕಿತು. ವಿಪರ್ಯಾಸವೆಂದರೆ, ಈ ಹುರುಳಿಲ್ಲದ ಪ್ರಕರಣದಲ್ಲಿ ಆಹೀರೆ ಪರ ವಾದ ಮಾಡಿದವರು ಸಂವಿಧಾನಶಿಲ್ಪಿ ಡಾ. ಅಂಬೇಡ್ಕರ್ರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್.
ರಾಹುಲ್ ಆರೋಪಕ್ಕೆ ಕೋರ್ಟ್ ಆದೇಶ ಉತ್ತರ ನೀಡಿದೆ ಎಂದು ಚುನಾವಣಾ ಆಯೋಗ ಪ್ರತಿಕ್ರಿಯಿಸಿತು. ರಾಹುಲ್ ಆಗಲಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗಾಗಲಿ ಪದೇಪದೆ ಚುನಾವಣಾ ಪ್ರಕ್ರಿಯೆ ಕುರಿತೇ ಏಕೆ ಚರ್ಚೆಗಳು ಏಳುತ್ತವೆ? ಒಂದು ಕಾಲದಲ್ಲಿ ರಾಹುಲ್ರಂತೆಯೇ ಕಾಲುಕೆರೆದು ವಿನಾಕಾರಣ ಬಿಜೆಪಿಯನ್ನು ಟೀಕಿಸುತ್ತಿದ್ದ ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಈ ವಿಚಾರದಲ್ಲಿ ಪ್ರಬುದ್ಧತೆ ಮೆರೆದಿದ್ದಾರೆ. ನಾವು ಗೆದ್ದ ಚುನಾವಣೆಯನ್ನು ಸಂಭ್ರಮಿಸಿ, ಸೋತ ಚುನಾವಣೆಯಲ್ಲಿ ಭ್ರಷ್ಟಾಚಾರದ ಆರೋಪ ಮಾಡುವುದು ಸರಿಯಲ್ಲ ಎಂದಿದ್ದಾರೆ. ಇವಿಎಂಗಳ ಮೇಲೆ ಅನುಮಾನ ವ್ಯಕ್ತಪಡಿಸಿದ ಕಾಂಗ್ರೆಸ್ಗೆ ಆಯೋಗ ಅನೇಕ ಬಾರಿ, ಆರೋಪ ಸಾಬೀತಿಗೆ ಅವಕಾಶ ನೀಡಿದೆ. ಹ್ಯಾಕಥಾನ್ಗಳನ್ನು ಮಾಡಿದೆ. ಅದ್ಯಾವುದರಲ್ಲೂ ಆರೋಪ ಸಾಬೀತುಪಡಿಸದ ಕಾಂಗ್ರೆಸ್, ಚುನಾವಣೆಯಲ್ಲಿ ಸೋತ ಕೂಡಲೆ ಇವಿಎಂ ಮೇಲೆ ಆರೋಪ ಹೊರಿಸುತ್ತದೆ. ಇವಿಎಂ ಹ್ಯಾಕ್ ಮಾಡಲು ಸಾಧ್ಯವಿಲ್ಲ ಎಂಬುದು ಗೊತ್ತಿದ್ದೂ ಕಾಂಗ್ರೆಸ್ ಆರೋಪ ಮಾಡುತ್ತಿರುವುದು ಜಾಣ ಕುರುಡು.
ಆಗಿಂದಾಗ್ಗೆ ನ್ಯಾಯಾಲಯಗಳು ಇವಿಎಂ ಪರವಾಗಿಯೇ ತೀರ್ಪು ನೀಡಿದರೂ ಮತ್ತೆಮತ್ತೆ ಇವಿಎಂ ಕುರಿತ ಪ್ರಕರಣಗಳನ್ನು ವಿಚಾರಣೆಗೆ ಕೈಗೆತ್ತಿಕೊಳ್ಳುತ್ತಿವೆ. ಚುನಾವಣಾ ಪ್ರಕ್ರಿಯೆಯಲ್ಲಿ ಎಳ್ಳಷ್ಟೂ ಅನುಮಾನ ಇರಬಾರದು ಎಂಬ ಕಾಳಜಿ ಅವುಗಳದು. ಆದರೆ ಆ ಕಾಳಜಿಯನ್ನೇ ಕಾಂಗ್ರೆಸ್ನಂತಹ ಪಕ್ಷಗಳು ದುರುಪಯೋಗಪಡಿಸಿಕೊಳ್ಳುತ್ತಿವೆ. ಚುನಾವಣಾ ಆಯೋಗದ ಹೊಣೆಗಾರಿಕೆ. ರಾಹುಲ್ರಂಥವರ ಆರೋಪಗಳಲ್ಲಿ ಹುರುಳಿಲ್ಲವಾದರೂ ಚುನಾವಣೆ ಪ್ರಕ್ರಿಯೆ ಕುರಿತು ಆಗಿಂದಾಗ್ಗೆ ಕೇಳಿಬರುವ ನಿಜವಾದ ಆರೋಪಗಳೂ ಇವೆ. ವಿವಿಪ್ಯಾಟ್ ಹಾಗೂ ಮತಯಂತ್ರದಲ್ಲಿರುವ ಮತಗಳ ನಡುವೆ ಕೆಲವೊಮ್ಮೆ ತಾಳೆ ಆಗದಿರುವುದು ಅನುಮಾನಕ್ಕೆ ಎಡೆಮಾಡಿಕೊಡುತ್ತದೆ. ಮತದಾರ ಪಟ್ಟಿಯ ಪರಿಷ್ಕರಣೆಯಲ್ಲಿ ಸ್ಥಳೀಯ ರಾಜಕಾರಣಿಗಳ ಕೈವಾಡ ಇರುವುದೇ ಇಲ್ಲ ಎಂದು ಹೇಳಲಾಗದು. ಕರ್ನಾಟಕದಲ್ಲೇ ಕಳೆದ ಚುನಾವಣೆ ವೇಳೆ, ಸ್ಥಳೀಯ ಚುನಾವಣಾ ಅಧಿಕಾರಿಗಳು ಶಾಮೀಲಾಗಿ ಕೆಲವು ಮತದಾರರ ಬೂತ್ಗಳನ್ನು ದೂರದ ಸ್ಥಳಕ್ಕೆ ಬದಲಾಯಿಸಿರುವ ಆರೋಪ ಕೇಳಿಬಂದಿತ್ತು.
ಇದು ಕಾನೂನಾತ್ಮಕವಾಗಿ ತಪ್ಪಲ್ಲವಾದರೂ, ಮತದಾನ ಪ್ರಮಾಣ ಹೆಚ್ಚಿಸಲು ಚುನಾವಣಾ ಆಯೋಗ ಕೈಗೊಳ್ಳುವ ಸ್ವೀಪ್ ಚಟುವಟಿಕೆಗಳಿಗೆ ವಿರುದ್ಧವೇ ಆಗಿವೆ. ಜತೆಗೆ, ತಮಗೆ ವಿರುದ್ಧವಾಗಿ ಮತ ನೀಡುವವರ ಹೆಸರುಗಳನ್ನು ಡಿಲೀಟ್ ಮಾಡಿಸುವಂತಹ ಆರೋಪಗಳೂ ಇವೆ. ಇದೆಲ್ಲಕ್ಕಿಂತ ಮುಖ್ಯವಾಗಿ, ಒಂದಕ್ಕಿಂತ ಹೆಚ್ಚು ಕಡೆ ಮತದಾರರು ನೋಂದಣಿ ಮಾಡಿಕೊಂಡಿರುವುದರಿಂದಲೇ ಒಟ್ಟಾರೆ ಮತದಾನ ಪ್ರಮಾಣ ಕಡಿಮೆ ಆಗಲು ಕಾರಣವಾಗಿದೆ. ಆಯೋಗ ಇತ್ತೀಚೆಗಷ್ಟೇ ಬ್ಲಾ್ಯಕ್ಚೈನ್ ತಂತ್ರಜ್ಞಾನ ಬಳಸಿ, ಮನೆಯಿಂದಲೇ ಮತದಾನ ಮಾಡುವ ಪ್ರಯೋಗವನ್ನು ಬಿಹಾರದಲ್ಲಿ ನಡೆಸಿದೆ. ಆದರೆ ಯಾವುದೇ ತಂತ್ರಜ್ಞಾನವನ್ನೂ ಶೇ.100 ಸುರಕ್ಷಿತ ಎನ್ನುವ ಹಾಗಿಲ್ಲ. ಇವಿಎಂಗಳ ವಿರುದ್ಧ ಆರೋಪಗಳಿರುವಾಗ ಆಯೋಗ ಆನ್ಲೈನ್ ಮತದಾನಕ್ಕೆ ಮುಂದಾಗಿರುವುದು ಅನುಮಾನ ಹೆಚ್ಚಿಸುತ್ತದೆ. ಅದರ ಬದಲಿಗೆ, ಒಂದಕ್ಕಿಂತ ಹೆಚ್ಚಿನ ಕಡೆ ನೋಂದಣಿ ತಡೆಯಲು ಆಯೋಗ ಕ್ರಮ ಕೈಗೊಳ್ಳಬೇಕು.
ಮತದಾರರ ಗುರುತಿನ ಚೀಟಿಯನ್ನು ಆಧಾರ್ಗೆ ಜೋಡಿಸಬೇಕು. ಈ ಕುರಿತ ಪ್ರಕರಣ ಸುಪ್ರೀಂಕೋರ್ಟ್ನಲ್ಲಿದೆ. ಈ ಕುರಿತು ಆಯೋಗ ಹಾಗೂ ಕೇಂದ್ರ ಸರ್ಕಾರ ಒಟ್ಟಾಗಿ ಸುಪ್ರೀಂಕೋರ್ಟ್ಗೆ ಮನವರಿಕೆ ಮಾಡಿಕೊಡಬೇಕು. ಎಲ್ಲ ಚುನಾವಣೆಗಳಿಗೂ ಏಕ-ಮತದಾನ ಪಟ್ಟಿಯಾದಾಗ ಸಮಸ್ಯೆ, ಗೊಂದಲ ಬಗೆಹರಿಯುತ್ತವೆ. ಬೆಂಗಳೂರಿನಂತಹ ನಗರಗಳಲ್ಲಿ, ಮಲ್ಟಿ ಕಾನ್ಸ್ಟಿಟುಯೆನ್ಸಿ ರಿಮೋಟ್ ಎಲೆಕ್ಟ್ರಾನಿಕ್ ವೋಟಿಂಗ್ ಮಷೀನ್ (ಆರ್ವಿಎಂ) ಪ್ರಯೋಗ ಮುಂದುವರಿಸಬೇಕು. ನಗರವಾಸಿಗಳು ಚುನಾವಣೆ ದಿನ ಊರಿಗೆ ಹೋಗದೇ ಆರ್ವಿಎಂನಲ್ಲಿ ಮತ ಚಲಾಯಿಸಬಹುದು. ಮತದಾನ ಕಡ್ಡಾಯಗೊಳಿಸಿ, ಮತ ಹಾಕದವರಿಗೆ ಸಾಮಾಜಿಕ-ಸರ್ಕಾರಿ ಸೌಲಭ್ಯ ಕಡಿತ ಮಾಡುವ ಕುರಿತು ಯೋಚಿಸಬೇಕು. ಒಂದು ರಾಷ್ಟ್ರ-ಒಂದು ಚುನಾವಣೆ ಆದಷ್ಟೂ ಶೀಘ್ರ ಆರಂಭಿಸಿ, ವೆಚ್ಚಕ್ಕೆ ಕಡಿವಾಣ ಹಾಕಬೇಕು. ಚುನಾವಣಾ ಭ್ರಷ್ಟಾಚಾರದಲ್ಲಿ ಭಾಗಿಯಾದವರಿಗೆ ಸಾಮಾಜಿಕ- ಆರ್ಥಿಕ ನಿರ್ಬಂಧಗಳನ್ನು ವಿಧಿಸುವ ಕಾನೂನು ಜಾರಿಯಾಗಬೇಕು. ಇಂತಹ ಅನೇಕ ಸುಧಾರಣಾ ಕ್ರಮಗಳನ್ನು ಕೈಗೊಳ್ಳುವ ಮೂಲಕ, ಚುನಾವಣಾ ಪ್ರಕ್ರಿಯೆಯನ್ನು ಶೇ.100 ಶುದ್ಧ ಹಾಗೂ ಸಂಪೂರ್ಣ ಪಾರದರ್ಶಕವಾಗಿಸಬೇಕು.