ಐಶ್ವರ್ಯಾ ರೈ ಬಗ್ಗೆ ರಾಹುಲ್ ಗಾಂಧಿ ಲೇವಡಿ..ಅಮಿತಾಬ್ ಬಚ್ಚನ್ ಪೋಸ್ಟ್ ವೈರಲ್​

amithab
Published on

ನವದೆಹಲಿ: ಭಾರತ್​ ಜೋಡೋ ನ್ಯಾಯ ಯಾತ್ರೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ಅಯೋಧ್ಯೆ ರಾಮಮಂದಿರದ ಬಾಲರಾಮ ದೇವರ ಪ್ರಾಣಪ್ರತಿಷ್ಠೆ ಕಾರ್ಯಕ್ರಮವನ್ನು ಟೀಕಿಸುವ ಭರದಲ್ಲಿ ನಟಿ ಐಶ್ವರ್ಯಾ ರೈ ಬಚ್ಚನ್ ಬಗ್ಗೆ ಆಘಾತಕಾರಿ ಹೇಳಿಕೆಗಳನ್ನು ನೀಡಿದ್ದು, ಈ ಬಗ್ಗೆ ನಟ ಅಮಿತಾಬ್ ಮೌನ ಮುರಿದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.

ಅಮಿತಾಭ್ ಕಾಮೆಂಟ್‌ಗಳಿಗೆ ಇನ್ನೂ ಪ್ರತಿಕ್ರಿಯಿಸದಿದ್ದರೂ, ಅವರು ತಮ್ಮ ಚಟುವಟಿಕೆಗಳ ಕುರಿತು ಪೋಸ್ಟ್ ಅನ್ನು ಎಕ್ಸ್‌(ಟ್ವಿಟರ್) ನಲ್ಲಿ ಹಂಚಿಕೊಂಡಿದ್ದಾರೆ. ಬಿಗ್ ಬಿ ಅವರು ಎಲ್ಲವನ್ನೂ ಬದಿಗಿಟ್ಟು ತಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಕೇಂದ್ರೀಕರಿಸುತ್ತಿರುವುದಾಗಿ ಬಹಿರಂಗಪಡಿಸಿದ್ದಾರೆ.

ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬೇಕು. ಇದರ ಮುಂದೆ ಉಳಿದೆಲ್ಲವೂನಗಣ್ಯ. ಜೀವನದಲ್ಲಿ ಮುಂದುವರಿಯುವ ಬಯಕೆಯು ಎಂದಿಗೂ ಮಸುಕಾಗಬಾರದು. ಪಂಡಿತರು ಮತ್ತು ಬುದ್ಧಿವಂತರು ಸಲಹೆ ನೀಡುತ್ತಲೇ ಇರುತ್ತಾರೆ. ವಾಸ್ತವವು ಬೇರೇನೋ ಇರುತ್ತದೆ. ನಾವು ಇನ್ನೂ ಕಾಲಹರಣ ಮಾಡುತ್ತೇವೆ ಮತ್ತು ಪ್ರಯತ್ನ ಮಾಡುತ್ತೇವೆ. ಹಿತೈಷಿಗಳ ಬೆಂಬಲದೊಂದಿಗೆ ನೀವೆಲ್ಲರೂ ಅವಿಶ್ರಾಂತರು, ನನ್ನ ಪಕ್ಕದಲ್ಲಿ ನಡೆಯುವ ಕೃಪೆ ಮತ್ತು ಶಕ್ತಿಯಿಂದ ತುಂಬಿರುವಿರಿ. ನಿಮಗೆ ಭರವಸೆ ಮತ್ತು ಧೈರ್ಯ ನೀಡುತ್ತಾ, ನಾನು ಅದಕ್ಕೆ ತಕ್ಕಂತೆ ಬದುಕಲು ಪ್ರಾರ್ಥಿಸುವೆ. ಇದು ಎಂದೆಂದಿಗೂ ನನ್ನ ಪ್ರೀತಿ ಮತ್ತು ನನ್ನ ಕೃತಜ್ಞತೆ ಯಾವಾಗಲೂ ಇರುತ್ತದೆ ಎಂದು ಅವರು ಬ್ಲಾಗ್‌ನಲ್ಲಿ ಸೇರಿಸಿದ್ದಾರೆ.

ರಾಹುಲ್ ಗಾಂಧಿ ರಾಮಮಂದಿರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಬಾಲಿವುಡ್ ಬಾದ್​ಷಾ ಅಮಿತಾಬ್ ಬಚ್ಚನ್​ರನ್ನು ಟೀಕಿಸಿದ್ದು, ಕಾರ್ಯಕ್ರಮದಲ್ಲಿ ಭಾಗವಹಿಸದಿದ್ದ ನಟಿ ಐಶ್ವರ್ಯಾ ಅವರ ಕುರಿತು ಕೀಳುಮಟ್ಟದ ಹೇಳಿಕೆ ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತವಾಗುತ್ತಿದ್ದು, ಅನೇಕ ನಟಿಯರು ರಾಹುಲ್ ಗಾಂಧಿ ಹೇಳಿಕೆ ವಿರುದ್ಧ ಕಿಡಿಕಾರಿದ್ದಾರೆ. ಅಲ್ಲದೇ ಇದು ವಿಶ್ವ ಸುಂದರಿ ಅಭಿಮಾನಿಗಳನ್ನೂ ಕೆರಳಿಸಿದೆ.

ಹೌದು ರಾಹುಲ್‌ ಗಾಂಧಿ ಭಾರತ್ ಜೋಡೋ ನ್ಯಾಯ ಯಾತ್ರೆಗಾಗಿ ಕಾನ್ಫುರದಲ್ಲಿದ್ದಾಗ ಸಮೂಹವನ್ನ ಉದ್ದೇಶಿಸಿ ಭಾಷಣ ಮಾಡುತ್ತಿದ್ದ ವೇಳೆ ರಾಮಮಂದಿರದ ಪ್ರತಿಷ್ಠಾಪನೆ ಸಮಾರಂಭದ ದಿನವನ್ನ ನೆನೆದ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಹರಿಹಾಯ್ದಿದ್ದರು.

ಕಾರ್ಯಕ್ರಮದಲ್ಲಿ ಬಡವರು ಯಾರೂ ಭಾಗವಹಿಸಿಲ್ಲ, ಎಲ್ಲ ಅಮಿತಾಬ್​ ಬಚ್ಚನ್​, ಅವರ ಪುತ್ರ ಅಭಿಷೇಕ್​ ಬಚ್ಚನ್​ ಮತ್ತು ಸೊಸೆ ಐಶ್ವರ್ಯಾ ರೈ ಅಂತಹ ಸಾಹುಕಾರರು ಭಾಗವಹಿಸಿದ್ದರು ಎಂದು ಟೀಕಿಸಿದ್ದರು. ಇದು ಈಗ ದೇಶಾದ್ಯಂತ ಟೀಕೆಗೆ ಗುರಿಯಾಗಿದೆ.

ರಾಹುಲ್​ ಗಾಂಧಿ ಈ ಹಿಂದೆ ಟಿವಿ ಕಾರ್ಯಕ್ರಮಗಳಲ್ಲಿ ಬಡವರ ಸಮಸ್ಯೆಗಳನ್ನು ತೋರಿಸುವುದಿಲ್ಲ, ಐಶ್ವರ್ಯಾ ರೈ ಡ್ಯಾನ್ಸ್​ ಹೆಚ್ಚಾಗಿ ತೋರಿಸುತ್ತಾರೆ ಎಂದು ವಿವಾಧಾತ್ಮಕ ಹೇಳಿಕೆ ನೀಡಿ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net