ಎಳೆಯರಲ್ಲಿ ಸಾಹಿತ್ಯಪ್ರೀತಿ ಹುಟ್ಟಿಸುವ ಕಮ್ಮಟಗಳು

Putani Lead
Published on
ಸಾಹಿತ್ಯವೆಂಬುದು ಕೇವಲ ಹಿರಿಯರ ಅಭಿರುಚಿಯ ವಸ್ತುವಲ್ಲ. ಎಳೆಯ ಮಕ್ಕಳ ಮನದಲ್ಲಿಯೂ ಸಾಹಿತ್ಯಿಕ ಭಾವನೆ ಅಂತರ್ಗತವಾಗಿರುತ್ತದೆ. ಪುಟ್ಟ ಮಗು ಉಲಿಯುವ ಶಿಶುಗೀತೆ, ತೊದಲು ನುಡಿಯಲ್ಲಿ ಹೇಳುವ ಪುಟ್ಟ ಕಥೆಗಳು ಕೂಡ ಸಾಹಿತ್ಯದತ್ತ ಒಲವು ಮೂಡಿಸಿಕೊಳ್ಳುವ ದಿಕ್ಸೂಚಕಗಳೆಂದೇ ಹೇಳಬಹುದು. ಎಳೆಯ ಮಕ್ಕಳಲ್ಲಿ ಸಾಹಿತ್ಯದ ಬೇರನ್ನು ಬಲಗೊಳಿಸಲು, ಸಾಹಿತ್ಯದಲ್ಲಿ ಪಕ್ವತೆ ಸಾಧಿಸಲು ಮಕ್ಕಳಿಗಾಗಿಯೇ ಸಾಹಿತ್ಯ ಕಮ್ಮಟ ಏರ್ಪಡಿಸುವುದು ಉತ್ತಮ ಯೋಚನೆಯಾಗಿದೆ.

| ಅನೀಶ್ ಬಿ. ಕೊಪ್ಪ

‘ನನ್ನ ಕನ್ನಡ ಕವನಗಳ ಯಶಸ್ಸಿನ ವ್ಯಾಪ್ತಿ ಲಂಡನ್ನಿನೊಳಗೂದಬೇಕಿಲ್ಲ ತುತ್ತೂರಿ! ನಮ್ಮ ಸೊಡರಿಗೆ ಮನೆಯ ಬೆಳಗುವುದೆ ಮೊದಲ ಗುರಿ’ ಎಂಬ ಕುವೆಂಪುರವರ ವಾಣಿಯಂತೆ ಎಳೆಯ ವಯಸ್ಸಿನಲ್ಲಿ ಸಾಹಿತ್ಯ ಕಮ್ಮಟದಲ್ಲಿ ಭಾಗವಹಿಸಿದ ಮಕ್ಕಳು ಮುಂದೊಂದು ದಿನ ಜಗಮೆಚ್ಚುವ ಕವಿ-ಸಾಹಿತಿ ಆಗಬೇಕೆಂದು ಬಯಸದಿದ್ದರೂ,ತನ್ನ ಮನೆಯ-ಮನದ ಭಾವನೆಯನ್ನು ಮುಕ್ತವಾಗಿ ಸಾಹಿತ್ಯದ ಪದಪುಂಜಗಳಲ್ಲಿ ಹೊರಹಾಕಿ ಭಾಷೆಯ ಉಳಿವಿಗೆ ಈ ನೆಲದಲ್ಲಿಯೇ ಹೆಜ್ಜೆಯನ್ನಿಡುವತ್ತ ಮಕ್ಕಳಲ್ಲಿ ಬರವಣಿಗೆಯ ಶಕ್ತಿಯನ್ನು ಬೆಳೆಸುತ್ತದೆ. ಸಾಹಿತ್ಯದ ವಿವಿಧ ಪ್ರಕಾರಗಳಾದ ಕಾವ್ಯ, ಕಥೆ, ನಾಟಕ, ಜನಪದ ಸಾಹಿತ್ಯ ಮತ್ತು ಇತ್ಯಾದಿಗಳ ವಿಭಾಗಗಳನ್ನು ಒಂದೇ ಭೂಮಿಕೆಯಲ್ಲಿ ತಂದು ಮೂರರಿಂದ ಐದು ದಿನಗಳ ಕಾಲ ಆಯಾಯ ವಿಭಾಗಗಳಲ್ಲಿ ನುರಿತವರಿಂದ ಮಕ್ಕಳಿಗೆ ಇನಿತು ತರಬೇತಿಗೊಳಿಸುವುದೇ ಕಮ್ಮಟದ ಉದ್ದೇಶವಾಗಿರುತ್ತದೆ. ಮಕ್ಕಳು ತಮ್ಮ ಆಸಕ್ತಿಯ ವಿಭಾಗಗಳಲ್ಲಿ ಮುಕ್ತವಾಗಿ ತೊಡಗಿಕೊಂಡು, ನುರಿತ ಸಂಪನ್ಮೂಲ ವ್ಯಕ್ತಿಗಳ ಮಾರ್ಗದರ್ಶನದಲ್ಲಿ ತಮಗೆ ತೋಚಿದನ್ನು ಗೀಚುವ ಭವ್ಯ ವೇದಿಕೆಯೇ ಈ ಕಮ್ಮಟಗಳು.

ಕಾವ್ಯದತ್ತ ಒಲವು: ಶಿಶುಗೀತೆಯನ್ನು ಸರಾಗವಾಗಿ ಹಾಡಬಲ್ಲ ಮಕ್ಕಳು, ಸಹಜವಾಗಿ ಕಾವ್ಯದಲ್ಲಿ ಆಸಕ್ತಿ ಹೊಂದಿರುತ್ತಾರೆ. ಚುಟುಕ, ಕವನ, ಶಿಶುಪ್ರಾಸ, ಶಿಶುಗೀತೆ ಇತ್ಯಾದಿಗಳನ್ನು ಸ್ವತಃ ಮಕ್ಕಳೇ ರಚಿಸಲು ಕಮ್ಮಟದ ಕಾವ್ಯ ವಿಭಾಗ ಪ್ರೇರೇಪಿಸುತ್ತದೆ. ಮಕ್ಕಳ ಸಾಹಿತಿಗಳ ಅನೇಕ ನಿದರ್ಶನಗಳು, ಕಾವ್ಯದ ಕೆಲವು ಸಾಮಾನ್ಯ ಲಕ್ಷಣಗಳನ್ನು ಸಂಪನ್ಮೂಲ ವ್ಯಕ್ತಿಗಳು ಮಕ್ಕಳಿಗೆ ತಿಳಿಸಿ, ಮಕ್ಕಳೇ ಬರವಣಿಗೆಯಲ್ಲಿ ತೊಡಗುವಂತೆ ಮಾಡುತ್ತಾರೆ. ಬರೆದ ಕವನಗಳನ್ನು ಸ್ವತಃ ತಾವೇ ವಾಚಿಸುವುದನ್ನೂ ಈ ರೀತಿಯ ಮಕ್ಕಳ ಸಾಹಿತ್ಯ ಕಮ್ಮಟಗಳಲ್ಲಿ ಕಲಿಯಬಹುದಾಗಿದೆ. ಸ್ವರಚಿತ ಕವನಗಳನ್ನು ಸ್ನೇಹಿತರ ಮುಂದೆ ವಾಚಿಸುವಾಗ ಮಕ್ಕಳಿಗೆ ಸಿಗುವ ಆನಂದ ಹೇಳತೀರದು.

ರಾಜ್ಯದ ಮೂಲೆಮೂಲೆಗಳಿಂದ ಮಕ್ಕಳನ್ನು ಆಯ್ಕೆ ಮಾಡಿ, ರಾಜ್ಯ ಮಟ್ಟದ ಮಕ್ಕಳ ಸಾಹಿತ್ಯ ಕಮ್ಮಟವನ್ನು ಏರ್ಪಡಿಸು ವುದು ಸವಾಲಿನ ಕೆಲಸ. ಆದರೂ ಮಕ್ಕಳಲ್ಲಿ ಸುಪ್ತವಾದ ಪ್ರತಿಭೆಯನ್ನು ಹೊರಹಾಕಲು, ಅವರ ಸಾಹಿತ್ಯಾಸಕ್ತಿಯ ಬೇರುಗಳನ್ನು ಬಲಗೊಳಿಸಲು ಮುಂದಿನ ಪೀಳಿಗೆಗೆ ಸಾಹಿತ್ಯದ ಕಂಪನ್ನು ಪಸರಿಸಲು ಕಮ್ಮಟಗಳ ಆಯೋಜನೆ ಅತ್ಯಗತ್ಯ. ಕಮ್ಮಟದಲ್ಲಿ ಭಾಗವಹಿಸಿದ ಅನೇಕ ಮಕ್ಕಳು ತಮ್ಮದೇ ಆದ ಸ್ವರಚಿತ ಪುಸ್ತಕಗಳನ್ನು ಬಿಡುಗಡೆಗೊಳಿಸಿದ್ದಾರೆ. ಕೆಲವರು ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುವ ಮಟ್ಟಿಗೆ ಭಾಷೆಯ ಮೇಲೆ ಒಲವು ತೋರಿದ್ದಾರೆ. | ಸಿ.ಎನ್. ಅಶೋಕ್ ಅಧ್ಯಕ್ಷ, ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು(ರಿ), ಚನ್ನರಾಯಪಟ್ಟಣ. ಮಕ್ಕಳ ಸಾಹಿತ್ಯ ಕಮ್ಮಟದಲ್ಲಿ ನಾನೂ ಭಾಗವಹಿಸಿದ್ದೆ. ಕಮ್ಮಟದ ಕಡೆಯ ದಿನ ರಾತ್ರಿ ಸಮಾರೋಪದ ಕಾರ್ಯಕ್ರಮಕ್ಕೆ ಬರುವಾಗ ಹೆಜ್ಜೆ ಹೆಜ್ಜೆಗೂ ಮನಸ್ಸಿನಲ್ಲಿ ಎಷ್ಟೆಲ್ಲಾ ಅನುಭವಗಳನ್ನು ನನಗೆ ನಾನೇ ಪರಿವೇ ಇಲ್ಲದೆಯೇ ಮನನ ಮಾಡಿಕೊಂಡು ಮುನ್ನಡೆಯುತ್ತಿದ್ದೆ. ನಾನು ನಾಟಕ ವಿಭಾಗದಲ್ಲಿ ಭಾಗವಹಿಸಿದ್ದೆ. ಅಲ್ಲಿ ನಮಗೆ ಇದ್ದಂತಹ ಸಂಪನ್ಮೂಲ ವ್ಯಕ್ತಿಗಳು ನಾಟಕದ ಕಥಾವಸ್ತುವನ್ನು ನಾವೇ ಬರೆದು, ರಂಗಮಂಟಪದ ಮೇಲೆ ಹೇಗೆ ಅಭಿನಯಿಸಬೇಕು ಎಂದು ಹೇಳಿಕೊಟ್ಟು, ಉತ್ತಮವಾದ ರಂಗಪ್ರದರ್ಶನಕ್ಕೆ ಅನುವು ಮಾಡಿಕೊಟ್ಟಿದ್ದರು. ಜೊತೆಗೆ ನಮ್ಮ ಜೀವನವೆಂಬ ರಂಗಮಂಟಪದಲ್ಲಿ ನಾವು ಹೇಗೆ ಸುಂದರ ವ್ಯಕ್ತಿಗಳಾಗಿ ಬಾಳಬೇಕು ಎಂಬುದರ ಅರಿವನ್ನೂ ಮೂಡಿಸಿದರು. | ಚಂದನ ವಿ.ಎಚ್. ಮಕ್ಕಳ ಸಾಹಿತ್ಯ ಕಮ್ಮಟದ ಶಿಬಿರಾರ್ಥಿ, ಹಾಸನ

ನಾನೂ ಕಥೆ ಬರೆಯುವೆ...: ತೊಟ್ಟಿಲಿನಲ್ಲಿರುವಾಗಲೇ ಹಿರಿಯರು ಹೇಳುತ್ತಿದ್ದ ಕಥೆಗಳಿಗೆ ಕಿವಿಯಾಗಿ, ಕಥೆಗಳೆಂಬ ಕಲ್ಪನಾ ಲೋಕದಲ್ಲಿ ವಿಹರಿಸುತ್ತಿದ್ದ ಮಕ್ಕಳಿಗೆ ಕಮ್ಮಟದ ಕಥಾ ವಿಭಾಗವು ಕಲ್ಪನೆಯನ್ನು ಗರಿಗೆದರುವಂತೆ ಮಾಡುತ್ತದೆ. ಕಥೆಗಳನ್ನು ಹಾವ-ಭಾವ ಸಹಿತವಾಗಿ ಹೇಳುವ ಕೌಶಲವೂ ಕಥಾ ವಿಭಾಗದಲ್ಲಿ ಬಹು ಮುಖ್ಯವಾಗುತ್ತದೆ. ತಮ್ಮ ಕಲ್ಪನೆಗೆ ನಿಲುಕುವ ದೈನಂದಿನ ಅನುಭವಗಳನ್ನು ಆಧರಿಸಿದ ಕಥೆಗಳ ರಚನೆಯು ಮಕ್ಕಳ ಮನಕೆ ಮುದ ನೀಡುತ್ತದೆ. ಕಥಾ ರಚನೆಯ ಶೈಲಿ, ಅಭಿವ್ಯಕ್ತಿಯನ್ನು ಕಮ್ಮಟಗಳು ಮಕ್ಕಳಿಗೆ ಕಲಿಸಿಕೊಡುತ್ತವೆ.

ಕಮ್ಮಟಗಳ ಆಯೋಜನೆ: ಸಾಮಾನ್ಯವಾಗಿ 10-18 ರ ವಯಸ್ಸಿನ ಮಕ್ಕಳಿಗೆ ಮಕ್ಕಳ ಸಾಹಿತ್ಯ ಕಮ್ಮಟಗಳು ಹೆಚ್ಚು ಉಪಯುಕ್ತವಾಗುತ್ತವೆ. ಆಧುನಿಕ ಕಾಲಘಟ್ಟದಲ್ಲಿ ಭರಾಟೆಯಲ್ಲಿರುವ ಬೇಸಿಗೆ ಶಿಬಿರಗಳನ್ನೂ ಮೀರಿಸುವಂತೆ, ಬೇಸಿಗೆ ರಜೆಯಲ್ಲಿ ಮಕ್ಕಳ ಸಾಹಿತ್ಯ ಕಮ್ಮಟಗಳನ್ನು ಆಯೋಜಿಸಬಹುದು. ಪ್ರಶಾಂತ ಪ್ರಾಕೃತಿಕ ಪರಿಸರ, ನಿಸರ್ಗದ ಮಡಿಲು ಕಮ್ಮಟಗಳ ರುಚಿಯನ್ನು ಹೆಚ್ಚಿಸುತ್ತದೆ. ಮಕ್ಕಳಿಗೆ ಕಮ್ಮಟದಲ್ಲಿ ಏಕತಾನತೆ ಬಾರದಂತೆ ಹತ್ತಿರದಲ್ಲಿಯೇ ಅವಕಾಶವಿದ್ದಲ್ಲಿ ನಸುಕಿನಲ್ಲಿ ಚಾರಣ, ಬಿಡುವಿನ ವೇಳೆಯಲ್ಲಿ ಮಕ್ಕಳ ಸಿನಿಮಾ ವೀಕ್ಷಣೆ, ಸಮೀಪದ ಗ್ರಂಥಾಲಯದ ಭೇಟಿ ಇವೆಲ್ಲವನ್ನೂ ಕಮ್ಮಟದ ವೇಳಾಪಟ್ಟಿಯಲ್ಲಿ ಸೇರಿಸಿಕೊಳ್ಳಬಹುದಾಗಿದೆ. ಪ್ರತಿದಿನ ಸಂಜೆ ಸೀಮಿತ ಅವಧಿಯ ಸಾಂಸ್ಕೃತಿಕ ಕಾರ್ಯಕ್ರಮವು ಕಮ್ಮಟದ ರಂಜನೆಯನ್ನು ಇಮ್ಮಡಿಗೊಳಿಸುತ್ತದೆ.

ಸ್ನೇಹಿತರ ಕೂಟ: ಜಿಲ್ಲಾ ಅಥವಾ ರಾಜ್ಯ ಹಂತದಲ್ಲಿ ಮಕ್ಕಳ ಸಾಹಿತ್ಯ ಕಮ್ಮಟಗಳನ್ನು ಆಯೋಜಿಸುವುದರಿಂದ ಮಕ್ಕಳಿಗೆ ಹೊಸ ಸ್ನೇಹಿತರ ಕೂಡುವಿಕೆಗೆ ಅವಕಾಶವಾದಂತಾಗುತ್ತದೆ. ಕನ್ನಡ ಭಾಷೆಯ ವೈವಿಧ್ಯತೆ, ಭಾಷೆಯ ಸೊಗಡು, ಸಾಂಸ್ಕೃತಿಕ ವಿನಿಮಯಕ್ಕೆ ಈ ರೀತಿಯ ಕಮ್ಮಟಗಳು ಕಾರಣವಾಗುತ್ತವೆ. ಕೂಡಿ ಬಾಳುವ ಕಲೆ ಶಿಬಿರಾರ್ಥಿಗಳ ನೆಲೆಯಲ್ಲಿ ರೂಪುಗೊಳ್ಳುತ್ತದೆ.

ನಾಟಕವೆಂಬ ಉತ್ಸಾಹದ ರಂಗ: ಅಭಿನಯ ಎಂಬುದು ಮಕ್ಕಳಿಗೆ ಎಲ್ಲಿಲ್ಲದ ಆಸಕ್ತಿಯ ಕ್ಷೇತ್ರ. ಮಕ್ಕಳ ಸಾಹಿತ್ಯ ಕಮ್ಮಟದ ನಾಟಕ ವಿಭಾಗದಲ್ಲಿ ರಂಗ ನಿರ್ದೇಶಕರು ನಾಟಕಾಭಿನಯವನ್ನು ಮಾತ್ರ ಕಲಿಸದೆ, ತಾವೇ ಗುಂಪಿನಲ್ಲಿ ರ್ಚಚಿಸಿ, ನಾಟಕದ ರಚನೆಗೂ ಮಾರ್ಗದರ್ಶನ ಮಾಡುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net