

| ಸೌಮ್ಯಾ ಪ್ರದೀಪ್
ಶ್ರೀಮದ್ರಾಮಾಯಣದ ಪ್ರಸಂಗ, ಆಂಜನೇಯನು ಸೀತಾ ನ್ವೇಷಣೆಗಾಗಿ ಸಮುದ್ರವನ್ನು ಹಾರಿ ಲಂಕೆಗೆ ಹೋದ. ಅಲ್ಲಿ ಅಶೋಕವನದಲ್ಲಿರುವ ಸೀತಾಮಾತೆಯನ್ನು ಸಂದರ್ಶಿಸುತ್ತಾನೆ. ಅಲ್ಲಿಂದ ಹೊರಟು ಶ್ರೀರಾಮನ ಬಳಿಗೆ ಬಂದು ಸೀತಾಮಾತೆಯನ್ನು ಭೇಟಿಮಾಡಿದ ಶುಭಸಮಾಚಾರ ತಿಳಿಸುತ್ತಾನೆ. ದುಷ್ಟ ರಾವಣನೊಂದಿಗೆ ಯುದ್ಧ ಮಾಡಿ ಸೀತೆಯನ್ನು ಕರೆತರಲು ಶ್ರೀರಾಮನ ಆದೇಶದಂತೆ ಸುಗ್ರೀವನ ನೇತೃತ್ವದಲ್ಲಿ ಸೈನ್ಯ ಸಿದ್ಧವಾಗುತ್ತದೆ. ಮೊದಲಿಗೆ, ಸಮುದ್ರದ ಮಧ್ಯದಲ್ಲಿರುವ ಲಂಕಾನಗರಿಯನ್ನು ತಲುಪಲು ಸಮುದ್ರಕ್ಕೆ ಸೇತುವೆಯನ್ನು ನಿರ್ಮಾಣ ಮಾಡುವ ಕಾರ್ಯ ಆರಂಭ ವಾಗುತ್ತದೆ. ಸಮುದ್ರಕ್ಕೆ ಸೇತುವೆಯನ್ನು ಕಟ್ಟುವುದು ಕ್ಲಿಷ್ಟಕರವಾದ ಕಾರ್ಯವಾದರೂ ರಾಮನಾಮ ಸ್ಮರಣೆಯೊಂದಿಗೆ ಆ ಅದ್ಭುತವಾದ ಕಾರ್ಯ ಆರಂಭವಾಗುತ್ತದೆ.
ಆ ಕಾರ್ಯಕ್ಕೆ ಕಾಡಿನಲ್ಲಿರುವ ಎಲ್ಲ ಪ್ರಾಣಿಗಳೂ ತಮ್ಮ ಶಕ್ತಿಯನುಸಾರ ಸಹಕಾರ ಮಾಡುತ್ತವೆ. ಅಳಿಲು, ಇರುವೆ ಮುಂತಾದ ಚಿಕ್ಕಪುಟ್ಟ ಪ್ರಾಣಿಗಳೂ ಸೇತುವೆ ನಿರ್ವಣಕ್ಕೆ ಬೇಕಾದ ಸಾಮಗ್ರಿಗಳನ್ನು ಹೊತ್ತು ತಂದುಕೊಡುತ್ತವೆ. ಅಂತಹ ಬೃಹತ್ತಾದ ಸೇತುವೆ ಕಟ್ಟಲು ಅವುಗಳು ತಂದು ಕೊಡುವ ಸಾಮಗ್ರಿಗಳು ಅತ್ಯಲ್ಪವಾದರೂ ರಾಮಕಾರ್ಯಕ್ಕೆ ಸಹಕರಿಸಬೇಕು, ಶ್ರೀರಾಮನ ಸೇವೆ ಮಾಡಬೇಕು ಎಂಬ ಅವುಗಳ ಮನಸ್ಸಿನ ಭಾವನೆ ಮಹತ್ತರವಾದುದ್ದು. ಹದಿನಾಲ್ಕು ಲೋಕಗಳಿಗೆ ಒಡೆಯನಾದ ಶ್ರೀರಾಮನಿಗೆ ಸಮುದ್ರಕ್ಕೆ ಸೇತುವೆ ಕಟ್ಟುವುದು ಹಾಗೂ ರಾವಣನ ಸಂಹಾರ ಅನ್ನುವಂತಹದ್ದು ಕ್ಷಣಮಾತ್ರದ ಕಾರ್ಯವಾದರೂ ರಾಮಾವತಾರದ ಸಂಕಲ್ಪದಂತೆಯೇ, ಸಾಮಾನ್ಯ ಮಾನವನಂತೆಯೇ ಪ್ರತಿಯೊಂದು ಹೆಜ್ಜೆಯನ್ನೂ ಇಡುತ್ತಾನೆ. ಸೇವಾಸೌಭಾಗ್ಯವನ್ನು ಕರುಣಿಸಿ, ತನ್ನನ್ನು ನಂಬಿದ ಜೀವಿಗಳ ಉದ್ಧಾರಕ್ಕಾಗಿಯೇ ಮೂಲನೆಲೆಯಿಂದ ಇಳಿದು ಬಂದ ದೇವನಲ್ಲವೇ ಅವನು!
ಶುದ್ಧವಾದ ಮನಸ್ಸಿನಿಂದ ತನ್ನ ಕಾರ್ಯಕ್ಕೆ ಸಹಕಾರ ನೀಡುತ್ತಿರುವ ಪ್ರತಿಯೊಂದು ಜೀವಿಗಳ ಮೇಲೂ ಅನುಗ್ರಹ ದೃಷ್ಟಿ ಹರಿಸುತ್ತಾನೆ. ಅಳಿಲಿನ ಬೆನ್ನಮೇಲೆ ಅಮೃತಹಸ್ತವನ್ನು ರ್ಸ³ಸಿ ಅನುಗ್ರಹಿಸಿದನೆಂಬುದು ಲೋಕಪ್ರಸಿದ್ಧವಲ್ಲವೇ. ಭಗವಂತನ ಪರಿವಾರವಾಗಿ ಕರಡಿಯೇ ಬರಲಿ, ಕಪಿಯೇ ಆಗಲಿ, ಶಿಂಗಳೀಕವೇ ಆಗಲಿ, ಅವಕ್ಕೆಲ್ಲ ಭಗವತ್ಕಾರ್ಯದಲ್ಲಿ ಪಾತ್ರ ಉಂಟು. ‘ಭಗವಂತನವರಾಗಿ ಬಂದಾಗ, ಅವರ ಕಪಿತ್ವ, ಕರಡಿತನ ಎಲ್ಲ ಮರೆಯಾಗಿ ಬಿಡುತ್ತದೆ’ ಎಂಬ ಶ್ರೀರಂಗ ಮಹಾಗುರುಗಳ ವಾಣಿ ಇಲ್ಲಿ ಸ್ಮರಣೀಯ.
‘ಸ್ವಲ್ಪಮಪ್ಯಸ್ಯ ಧರ್ಮಸ್ಯ ತ್ರಾಯತೇ ಮಹತೋ ಭಯಾತ್’ ಎಂಬ ಭಗವದ್ವಾಣಿಯಂತೆ ಅತ್ಯಲ್ಪವಾದರೂ ಶುದ್ಧವಾದ ಮನಸ್ಸಿನಿಂದ, ಭಗವದರ್ಪಣ ಭಾವದಿಂದ ಮಾಡಿದ ಧರ್ಮಕಾರ್ಯಗಳು ಭಗವಂತನ ಕಾರ್ಯಗಳೇ. ಅಂತಹ ಕಾರ್ಯಗಳು ಎಂದಿಗೂ ವಿಫಲವಾಗದೆ ಮಾಡಿದವರನ್ನು ಮಹತ್ತಾದ ವಿಪತ್ತಿನಿಂದ ಪಾರು ಮಾಡುವ ಸಾಧನಗಳಾಗಿವೆ. ಸಂಸಾರಸಾಗರವನ್ನು ದಾಟಿಸಿ ಭಗವಂತನಲ್ಲಿ ಜೀವಿಗಳನ್ನು ಒಂದುಗೂಡಿಸುವಲ್ಲಿ ಸಹಕರಿಸುವ ಸಾಧನಗಳೇ ಆಗಿರುತ್ತವೆ.
ಸರ್ವಶಕ್ತನಾದ ಭಗವಂತನಿಗೆ ತನ್ನೆಲ್ಲ ಕಾರ್ಯಗಳನ್ನೂ ಮಾಡುವ ಸಾಮರ್ಥ್ಯವಿದ್ದರೂ ಜೀವಿಗಳನ್ನು ನಿಮಿತ್ತವಾಗಿರಿಸಿಕೊಂಡು ಅವುಗಳಲ್ಲಿ ಶಕ್ತಿಯನ್ನು ತುಂಬಿಸಿ ಆ ಕಾರ್ಯದಲ್ಲಿ ತೊಡಗಿಸುತ್ತಾನೆ, ಅವುಗಳ ಮನಸ್ಸನ್ನು ತನ್ನೆಡೆಗೆ ಹರಿಯುವಂತೆ ಮಾಡುತ್ತಾನೆ. ಕಾಲ ಕಾಲದಲ್ಲಿ, ಯುಗ ಯುಗದಲ್ಲಿ ಭಗವಂತನು ವ್ಯಕ್ತನಾಗಿಯೂ, ಅವ್ಯಕ್ತನಾಗಿಯೂ ತಾನು ಸಂಕಲ್ಪಿಸಿದ ಕಾರ್ಯವನ್ನು ನಡೆಸುತ್ತಲೇ ಇರುತ್ತಾನೆ. ಅಂತಹ ಭಗವತ್ಕಾರ್ಯದಲ್ಲಿ ನಮ್ಮ ಮನೋಬುದ್ಧಿಗಳನ್ನು ತೊಡಗಿಸಿ ನಮ್ಮ ಜೀವನವನ್ನೂ ಪಾವನವನ್ನಾಗಿಸಲಿ ಎಂದು ಪ್ರಾರ್ಥಿಸೋಣ.
(ಲೇಖಕರು ಸಂಸ್ಕೃತಿ ಚಿಂತಕರು)