ಅರಿವಿನ ಪರಮಾನಂದ; ಶ್ರೀ ಸಿದ್ಧಲಿಂಗ ಶಿವಾಚಾರ್ಯ ಭಗವತ್ಪಾದರ ಪುಣ್ಯಸ್ಮರಣೆ

Ujjayini
Published on

| ನಿರಂಜನ ದೇವರಮನೆ ಚಿತ್ರದುರ್ಗ

ನಾಡಿನ ಧಾರ್ವಿುಕ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ರಂಗಗಳನ್ನು ಜಾಗೃತಿಗೊಳಿಸುವ ಕಾರ್ಯದಲ್ಲಿ ಪಂಚಪೀಠಗಳು ಬಹುಕಾಲದಿಂದ ನಿರತವಾಗಿವೆ. ಇಂಥ ಪರಂಪರೆಯಲ್ಲಿ ಸಾಗಿಬಂದ ವೀರಶೈವ ಧರ್ಮ ಅತ್ಯಂತ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಇದರ ಪ್ರವರ್ತಕರಾದ ಶ್ರೀ ರೇಣುಕಾದಿ ಪಂಚಪೀಠಾಚಾರ್ಯರು ಸದಾ ಭಕ್ತರ ಉನ್ನತಿ ಮತ್ತು ಸಮಾಜದ ಪ್ರಗತಿ ಹಾಗೂ ವಿಶ್ವಶಾಂತಿಗಾಗಿ ಕಾಲಕಾಲಕ್ಕೆ ಧಮೋಪದೇಶ ಮತ್ತು ಮಾರ್ಗದರ್ಶನ ನೀಡುತ್ತಾ ಬಂದಿದ್ದಾರೆ. ಇಂಥ ಪರಮ ಪೀಠಾಚಾರ್ಯರಲ್ಲಿ ಉಜ್ಜಯಿನಿ ಸದ್ಧರ್ಮ ಪೀಠದ ಲಿಂ. ಶ್ರೀ ಜಗದ್ಗುರು ಸಿದ್ಧಲಿಂಗ ಶಿವಾಚಾರ್ಯ ಭಗವತ್ಪಾದರೂ ಒಬ್ಬರು. ಉಜ್ಜಯಿನಿ ಸದ್ಧರ್ಮ ಪೀಠದ 107ನೇ ಜಗದಾಚಾರ್ಯರಾಗಿ ಮತ್ತು ಮಹಾಮಹಿಮ ಅನುಷ್ಠಾನ ಮೂರ್ತಿಗಳಾಗಿ ತಮ್ಮ ಯೋಗ ಸಾಧನೆಯ ಮುಖೇನ ನಾಡಿಗೆ ಅನೇಕ ಪವಾಡ ಸದೃಶ ಕಾರ್ಯಗಳನ್ನು ಮಾಡಿ ಆ ಮೂಲಕ ಭಕ್ತರ ಮನೆ-ಮನಗಳಲ್ಲಿ ನೆಲೆ ನಿಂತಿದ್ದಾರೆ. ಚಿತ್ರದುರ್ಗ ಸೀಮೆಯ ಬಂಗಾರನಾಯಕನಹಳ್ಳಿ ಹಿರೇಮಠದ ಚನ್ನಬಸಯ್ಯ ಮತ್ತು ಗುರುಸಿದ್ಧಮ್ಮ ಅವರ ಪುಣ್ಯಗರ್ಭದಲ್ಲಿ 1890ರ ಫೆ. 1ರಂದು ಜನಿಸಿದ ಅವರು 8ನೇ ವಯಸ್ಸಿನಲ್ಲಿ ಇಷ್ಟಲಿಂಗ ದೀಕ್ಷೆ ಹಾಗೂ ಧಮೋಪದೇಶವನ್ನು ಪಡೆದರು. 1906ರಲ್ಲಿ ಉಜ್ಜಯಿನಿ ಸದ್ಧರ್ಮ ಪೀಠದ ಜಗದ್ಗುರುವಾಗಿ ನಿಯುಕ್ತಿ ಹೊಂದಿದರು. ಪತಂಜಲಿ ಮಹರ್ಷಿಯ ಯೋಗಶಾಸ್ತ್ರ, ಷಡ್​ದರ್ಶನ, ಸಿದ್ಧಾಂತ ಶಿಖಾಮಣಿ, ಭಗವದ್ಗೀತೆ ಅಧ್ಯಯನದಿಂದ ತಮ್ಮ ವಿದ್ವತ್ತನ್ನು ಹೆಚ್ಚಿಸಿಕೊಂಡರು. ಸದಾ ಇಷ್ಟಲಿಂಗಪೂಜೆ, ಜಪ-ತಪಗಳಿಂದ ದಿವ್ಯಜ್ಞಾನಿಯಾಗಿ ಶಿವಯೋಗ ಸಿದ್ಧಿಯನ್ನು ಸಾಧಿಸಿಕೊಂಡರು. ಜನರ ಕಷ್ಟನಷ್ಟಗಳಿಗೆ ಸ್ಪಂದಿಸುತ್ತಿದ್ದ ಶಿವಯೋಗಿ ಅವರು. ಸಂಸ್ಕೃತ, ವೇದ, ಆಗಮಗಳನ್ನು ಅಧ್ಯಯನ ಮಾಡಿ, ಶಿವಾದ್ವೈತವನ್ನು ಮತ್ತಷ್ಟು ಪ್ರಜ್ವಲಗೊಳಿಸಿ, ಅಷ್ಟಾವರಣ, ಪಂಚಾಚಾರ ಹಾಗೂ ಷಟ್​ಸ್ಥಲಗಳ ಮುಖೇನ ಶಿವಯೋಗವನ್ನು ಸಾಧಿಸುವ ಪರಿಯನ್ನು ಮನದಟ್ಟಾಗುವಂತೆ ಬೋಧಿಸುತ್ತಿದ್ದರು.

ತಮ್ಮ ಪ್ರಬುದ್ಧ ಚಿಂತನೆ ಮತ್ತು ಕ್ರಿಯಾತ್ಮಕತೆಯ ಮೂಲಕ ನಾಡಿನ ಧರ್ಮಪೀಠಗಳ ಸಮಸ್ಯೆಗಳನ್ನು ಪರಿಹರಿಸುತ್ತಿದ್ದರು. ಜಾತಿ ಮತ ಪಂಥಗಳ ಭೇದ ಎಣಿಸದೆ, ಸಕಲರಿಗೆ ಲೇಸನ್ನೇ ಬಯಸಿ ಸಂಸ್ಕಾರ, ಸಂದೇಶಗಳನ್ನು ನೀಡುತ್ತಿದ್ದರು. ತಾವು ಸಂಚರಿಸಿದ ಕಡೆಗಳಲ್ಲೆಲ್ಲ ನೀರು, ಶಾಲೆ, ದೇವಮಂದಿರ, ರುದ್ರಭೂಮಿ ಹಾಗೂ ಜೀವನ ಸೌಲಭ್ಯದ ವ್ಯವಸ್ಥೆಯನ್ನು ಮಾಡಿದ್ದಾರೆ. ಸಿದ್ಧಲಿಂಗನ ಬಾವಿಗಳು ಉತ್ತರ ಕರ್ನಾಟಕದಲ್ಲಿ ಇಂದಿಗೂ ಇದಕ್ಕೆ ಸಾಕ್ಷಿಯಾಗಿವೆ. ಭಕ್ತರಿಗೆ ಏನೇ ಕಷ್ಟ-ಕಾರ್ಪಣ್ಯ ಬಂದರೂ ತಮ್ಮ ತಪಃಶಕ್ತಿಯಿಂದ ಅವೆಲ್ಲವುಗಳನ್ನು ಪರಿಹರಿಸಿ, ಅವರಲ್ಲಿ ಧರ್ಮಶ್ರದ್ಧೆ, ದೈವಶ್ರದ್ಧೆ ಬೆಳೆಯುವಂತೆ ಮಾಡುತ್ತಿದ್ದರು.

ಅನ್ನದಾಸೋಹ ಮತ್ತು ವಿದ್ಯಾದಾನಕ್ಕೆ ಅನುಕೂಲ ಕಲ್ಪಿಸುವ ಸಂಕಲ್ಪ ಮಾಡಿ, ಅದಕ್ಕೆ ಅಗತ್ಯವಿರುವ ನೆರವು ನೀಡಿದರು. ವೀರಶೈವ ವಿದ್ಯಾವರ್ಧಕ ಸಂಘವನ್ನು ಸ್ಥಾಪಿಸಲು ಕಾರಣೀಭೂತರಾಗಿದ್ದರು. ಈ ಸಂಘ ಇಂದು ನಾಡಿನೆಲ್ಲೆಡೆ ತನ್ನ ಶಾಖೆಗಳನ್ನು ವಿಸ್ತರಿಸಿಕೊಂಡು ಲಕ್ಷಾಂತರ ವಿದ್ಯಾರ್ಥಿಗಳಿಗೆ ಬದುಕನ್ನು ಕಟ್ಟಿಕೊಟ್ಟಿದೆ.

ಧರ್ಮಪೀಠಗಳ ಸುಧಾರಣೆಗೋಸ್ಕರ ವಾರಣಾಸಿಯಲ್ಲಿ 1918ರ ಮಾ. 20ರಂದು ಮಹಾ ಸಮ್ಮೇಳನವನ್ನು ಆಯೋಜಿಸಿದ್ದರು. ಚಿಕ್ಕಮಗಳೂರು ಜಿಲ್ಲೆ ಬೀರೂರಿನಲ್ಲಿ ಜರುಗಿದ ವೀರಶೈವ ಮಹಾಸಭೆಯ 5ನೇ ಅಧಿವೇಶನದ ಸಾರಥ್ಯ-ಸಾನಿಧ್ಯ ವಹಿಸಿದ್ದರು. ಅಂದಿನ ಅವರ ಸಂದೇಶವೇ ಇಂದು ವೀರಶೈವ ಧರ್ಮ ಹಾಗೂ ಸಮಾಜದ ಗಟ್ಟಿತನಕ್ಕೆ ಅಡಿಪಾಯವಾಗಿದೆ. ಅದೇ ಜಿಲ್ಲೆಯ ಬುಕ್ಕಾಂಬುಧಿ ಬೆಟ್ಟದಲ್ಲಿ ಉಗ್ರವಾದ ತಪಸ್ಸನ್ನು ಕೈಗೊಂಡು ಯೋಗಿಕ ಶಕ್ತಿಯನ್ನು ಪಡೆದು ಅಷ್ಟಸಿದ್ಧಿಗಳನ್ನು ಸಾಧಿಸಿಕೊಂಡು ಅವುಗಳನ್ನು ಭಕ್ತರಿಗೆ ಧಾರೆಯೆರೆಯುತ್ತಿದ್ದರು. ಭಕ್ತರನ್ನು ಬೆಳಕಿನೆಡೆಗೆ ಕರೆತಂದು, ಜ್ಞಾನ-ಕ್ರಿಯೆಗಳನ್ನು ಧಾರೆಯೆರೆದು ಶಿವಾದ್ವೈತ ಸಿದ್ಧಾಂತದ ಪ್ರಬೋಧಕರಾಗಿ, ಲಿಂಗಗುಣ ಸಂಪನ್ನ ಶಿವಾಚಾರದ ಗಣಿಯಾಗಿ, ಗುರು-ಲಿಂಗ-ಜಂಗಮತ್ವದ ಗುರುಸಾರ್ವಭೌಮರಾಗಿ, ಪಂಚಪೀಠಗಳ ಕಾರಣಿಕ ಯುಗಪುರುಷರಾಗಿ, ಉಜ್ಜಯಿನಿ ಸದ್ಧರ್ಮಪೀಠಕ್ಕೆ ಶಕ್ತಿ ತುಂಬಿದ ಜ್ಞಾನಸೂರ್ಯ ಶ್ರೀ ಸಿದ್ಧಲಿಂಗ ಶಿವಾಚಾರ್ಯ ಭಗವತ್ಪಾದರು 1936ರಲ್ಲಿ ಲಿಂಗಾಂಗ ಸಾಮರಸ್ಯದಲ್ಲಿ ಒಂದಾದರು. ಪ್ರಸ್ತುತ ಜಗದ್ಗುರು ಶ್ರೀ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಉಜ್ಜಯಿನಿ ಪೀಠದ ಪರಂಪರೆ ಹಾಗೂ ಧರ್ವಚರಣೆಗಳನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.ಉಜ್ಜಯಿನಿ ಶ್ರೀ ಸದ್ಧರ್ಮ ಪೀಠದ ಸಿದ್ಧಲಿಂಗ ಶಿವಾಚಾರ್ಯ ಭಗವತ್ಪಾದರ 86ನೇ ಪುಣ್ಯಸ್ಮರಣೆ ನಿಮಿತ್ತ ಪ್ರಸ್ತುತ ಜಗದ್ಗುರುಗಳು ಚಿಕ್ಕಮಗಳೂರು ಜಿಲ್ಲೆ ಬುಕ್ಕಾಂಬುಧಿ ತಪೋಕ್ಷೇತ್ರದಲ್ಲಿ ಇಷ್ಟಲಿಂಗ ತಪೋನುಷ್ಠಾನ ಮತ್ತು ವಿವಿಧ ಧಾರ್ವಿುಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಜ. 17ರಿಂದ ಕಾರ್ಯಕ್ರಮಗಳು ಆರಂಭವಾಗಿದ್ದು, 21ರವರೆಗೆ ನಡೆಯಲಿವೆ. 22ರಂದು ಉಜ್ಜಯಿನಿ ಮಹಾಪೀಠದಲ್ಲಿ ಲಿಂಗೈಕ್ಯರ ಸಂಸ್ಮರಣೆ ಕಾರ್ಯಕ್ರಮ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net