ಜೀನ್ಸ್ ಉದ್ಯಮಕ್ಕೆ ಕರೆಂಟ್ ಶಾಕ್!; ವಿದ್ಯುತ್ ದರ ಏರಿಕೆ ಬಿಸಿ; ಕರೊನಾ ನಂತರವೂ ಕಾಣದ ಚೇತರಿಕೆ

Jeans
Published on

| ಹೀರಾನಾಯ್ಕ ಟಿ. ಬಳ್ಳಾರಿ

ಗಾಯದ ಮೇಲೆ ಬರೆ ಎಳೆದಂತಾಗಿದೆ ಜೀನ್ಸ್ ಉದ್ಯಮದ ಸ್ಥಿತಿ. ಇನ್ನೂ ಕರೋನಾ ಸಂಕಷ್ಟದಿಂದ ಚೇತರಿಕೆ ಕಾಣದೆ ಕಂಗಾಲಾಗಿ ಕುಳಿತಿರುವ ಉದ್ಯಮಕ್ಕೆ ಇದೀಗ ವಿದ್ಯುತ್ ದರ ಏರಿಕೆ ಕುತ್ತು ಎದುರಾಗಿದ್ದು, ಕೆಲವರು ಉದ್ಯಮ ಮುಚ್ಚಿ ಮನೆಯತ್ತ ಮುಖ ಮಾಡಿದ್ದಾರೆ.

ಬಳ್ಳಾರಿ ಜಿಲ್ಲೆ ಕಬ್ಬಿಣದ ಅದಿರು ಜತೆಗೆ ಜೀನ್ಸ್ ಉದ್ಯಮದಲ್ಲೂ ಖ್ಯಾತಿ ಪಡೆದಿದ್ದು, ಇಲ್ಲಿನ ಮುಂಡರಗಿ ಕೈಗಾರಿಕೆ ಪ್ರದೇಶದಲ್ಲಿ ನಾಲ್ಕನೇ ಹಂತದಲ್ಲಿ 64.26 ಎಕರೆ ಪ್ರದೇಶದಲ್ಲಿ ಜೀನ್ಸ್ ವಾಷರ್ ಘಟಕಗಳಿವೆ. ಆದರೆ ಕರೋನಾ ಬಳಿಕ ಶೇ.20 ಉದ್ಯಮಗಳು ಮಾತ್ರ ನಡೆಯುತ್ತಿವೆ.

ವಿದ್ಯುತ್ ಸಂಕಷ್ಟ: ಈ ಹಿಂದೆ 35 ಸಾವಿರ ರೂ. ಆಸುಪಾಸು ವಿದ್ಯುತ್ ಬಿಲ್ ಬರುತ್ತಿತ್ತು. ಮೊದಲ ಹಂತವಾಗಿ 500 ಯೂನಿಟ್ ಒಳಗೆ ಬಳಕೆ ಮಾಡಿದ್ದರೆ 5.25 ರೂ., ಎರಡನೇ ಹಂತ 5.75 ರೂ. ಮತ್ತು ಮೂರನೇ ಹಂತ 6.10 ರೂ ನಿಗದಿಯಾಗಿತ್ತು. ಆದರೆ ಈಗ ಎರಡೇ ಹಂತದಲ್ಲಿ ವಿದ್ಯುತ್ ಬಿಲ್ ನಿಗದಿಪಡಿಸಿದ್ದು, ಪ್ರತಿ ತಿಂಗಳು 500 ಯೂನಿಟ್​ವರೆಗೆ 6.10 ರೂ., ಅದಕ್ಕಿಂತ ಹೆಚ್ಚು ಬಳಸಿದ್ದಲ್ಲಿ 7.10 ರೂ. ನಿಗದಿಯಾಗಿದೆ. ತಿಂಗಳಿಗೆ ಸರಾಸರಿ 45 ಸಾವಿರ ರೂ. ಕರೆಂಟ್ ಬಿಲ್ ಬರುತ್ತಿದೆ.

ಕಾರ್ವಿುಕರ ಸಮಸ್ಯೆ: ಕರೊನಾ 2ನೇ ಅಲೆ ಲಾಕ್​ಡೌನ್ ವೇಳೆ ಊರುಗಳಿಗೆ ಹೋದ ಕಾರ್ವಿುಕರು ಮತ್ತೆ ಇತ್ತ ಮುಖ ಮಾಡಿಲ್ಲ. ಬಹುತೇಕರು ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ರಾಜಸ್ಥಾನದಿಂದ ಬರುತ್ತಾರೆ.

ಸಿಗುತ್ತಾ ವಿಶೇಷ ಪ್ಯಾಕೇಜ್?: ಕಾಂಗ್ರೆಸ್ ನಾಯಕ ರಾಹುಲ್​ಗಾಂಧಿ ಚುನಾವಣೆ ಪ್ರಚಾರಕ್ಕಾಗಿ ಬಳ್ಳಾರಿಗೆ ಬಂದಾಗ ಜೀನ್ಸ್ ಉದ್ಯಮ ಉತ್ತೇಜನಕ್ಕೆ 5000 ಕೋಟಿ ರೂ. ಅನುದಾನವನ್ನು ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಮೊದಲ ಬಜೆಟ್​ನಲ್ಲೇ ಘೊಷಣೆ ಮಾಡುವುದಾಗಿ ಆಶ್ವಾಸನೆ ನೀಡಿದ್ದರು. ಆದರೆ, ಮೊದಲ ಆಯ-ವ್ಯಯದಲ್ಲಿ ಐದು ಗ್ಯಾರಂಟಿ ಯೋಜನೆಗಳಿಗೆ ಒತ್ತು ನೀಡಿದ್ದರಿಂದ ಜೀನ್ಸ್ ಉದ್ಯಮಕ್ಕೆ ಉತ್ತೇಜನ ನೀಡುವ ಕನಸು ಹುಸಿಯಾಗಿತ್ತು. ಮುಂದಾದರೂ ಬಳ್ಳಾರಿಯನ್ನು ಜೀನ್ಸ್ ರಾಜಧಾನಿಯಾಗಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ವಹಿಸುವುದೇ ಎನ್ನುವುದನ್ನು ಕಾದುನೋಡಬೇಕಿದೆ.

ವಿದ್ಯುತ್ ದರ ಹೆಚ್ಚಳದಿಂದ ಮನೆ ನಡೆಸುವುದೇ ಕಷ್ಟವಾಗಿದೆ. ಇನ್ನು ಉದ್ಯಮಿಗಳ ಪಾಡು ಹೇಳತೀರದು. ಕೆಲಸ ಮಾಡಿದವರಿಗೆ ಸಂಬಳ ಕೊಡುವುದು ಕಷ್ಟವಾಗಿದೆ. ಕರೊನಾ ನಂತರ ಜೀನ್ಸ್ ಉದ್ಯಮ ಸಂಪೂರ್ಣ ಕುಸಿದಿದೆ. ಪ್ರತಿದಿನ ಎರಡು ಲಕ್ಷ ಜೀನ್ಸ್ ಪ್ಯಾಂಟ್​ಗಳು ತಯಾರಾಗುತ್ತಿದ್ದವು. ಈಗ 50-60 ಸಾವಿರ ತಯಾರಾಗುತ್ತಿವೆ. | ಜೆ.ವೇಣುಗೋಪಾಲ್, ಅಧ್ಯಕ್ಷ, ಅಪರೆಲ್ ಪಾರ್ಕ್ ಪ್ರೊಸೆಸಿಂಗ್ ಅಸೋಸಿಯೇಷನ್, ಬಳ್ಳಾರಿ

ಬ್ರಿಟಿಷರ ಕಾಲದಲ್ಲಿ ಜೀನ್ಸ್ ಪರಿಚಯ: 1870ರಲ್ಲಿ ಬ್ರಿಟಿಷ್ ಆರ್ವಿು ಬಳ್ಳಾರಿಗೆ ಆಗಮಿಸುತ್ತದೆ. ಬ್ರಿಟಿಷ್ ಸೈನಿಕರಿಗಾಗಿ ಸಮವಸ್ತ್ರ ಒಲಿಯಲು ಟೈಲರಿಂಗ್ ವ್ಯವಸ್ಥೆ ಕಲ್ಪಿಸಲಾಗುತ್ತದೆ. ನಂತರದಲ್ಲಿ ಜೀನ್ಸ್ ಪರಿಚಯಿಸಲಾಯಿತು. ಈಗ ಅದೇ ಉದ್ಯಮವಾಗಿ ಬೃಹದಾಕಾರದಲ್ಲಿ ಬೆಳೆದಿದ್ದು, ಎರಡು ಲಕ್ಷ ಕುಟುಂಬಗಳು ಈ ಉದ್ಯಮವನ್ನು ಅವಲಂಬಿಸಿವೆ.

ಕಚ್ಚಾ ವಸ್ತು ಬೆಲೆ ಏರಿಕೆ: ಜೀನ್ಸ್ ಪ್ಯಾಂಟ್ ಉತ್ಪಾದನಾ ವೆಚ್ಚ ಏರಿಕೆ ಆಗುತ್ತಿದೆ. ಕರೊನಾ ಎದುರಾದ ನಂತರ ಶೇ.60-70 ಪ್ಯಾಂಟ್ ಗಾರ್ವೆಂಟ್ಸ್​ಗಳಲ್ಲೇ ಬಿದ್ದಿವೆ. ಒಂದೆಡೆ ಕಚ್ಚಾ ವಸ್ತುಗಳ ಬೆಲೆ ಏರಿಕೆ, ಮತ್ತೊಂದೆಡೆ ವ್ಯಾಪಾರವಿಲ್ಲದಿರುವುದು ಬಹುದೊಡ್ಡ ಸಮಸ್ಯೆಯಾಗಿದೆ. ಈ ವಿಷವರ್ತಲದಲ್ಲಿ ಸಿಕ್ಕಿಕೊಂಡು ಜೀನ್ಸ್ ಉದ್ಯಮ ನಲುಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net