ರಾಜ್ಯದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳ ಪದವಿ, ಸ್ನಾತಕೋತ್ತರ ಪರೀಕ್ಷೆಗಳನ್ನು ಮುಂದೂಡಲಾಗಿದೆ. ರಾಜ್ಯದ 1ರಿಂದ 9ನೇ ತರಗತಿ ಮಕ್ಕಳಿಗೆ ಪರೀಕ್ಷೆ ಇಲ್ಲದೇ ಪಾಸ್ ಮಾಡುವ ಕುರಿತು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ನಿರ್ಧಾರಗಳು ಸೂಕ್ತವಾಗಿವೆ. ಆದರೆ ರಾಜ್ಯದ 10 ನಗರಸಭೆ ಹಾಗೂ 2 ಪಟ್ಟಣ ಪಂಚಾಯತ್ಗಳಿಗೆ ಏಪ್ರಿಲ್ 27ರಂದು ಚುನಾವಣೆ ನಡೆಸುವುದು ಎಷ್ಟು ಸೂಕ್ತ, ಇಂಥ ಕೋವಿಡ್ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಚುನಾವಣೆ ನಡೆಸುವುದು ಸಮಂಜಸವೇ? ರಾಜ್ಯದಲ್ಲಿ ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಎಲ್ಲ ಪಕ್ಷಗಳ ನಾಯಕರು ಕೋವಿಡ್ ನಿಯಮಗಳನ್ನು ಉಲ್ಲಂಘಿಸಿ ಬಹಿರಂಗ ಪ್ರಚಾರ ಕೈಗೊಂಡರು. ಉಪಚುನಾವಣೆ ನಂತರ ಬಸವಕಲ್ಯಾಣ ಕ್ಷೇತ್ರ ಹಾಗೂ ಬೀದರ ಜಿಲ್ಲೆಯಲ್ಲಿ ಸೋಂಕು ಪ್ರಕರಣಗಳ ಸಂಖ್ಯೆ ಮಿತಿಮೀರಿದೆ. ಇಂಥ ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ನಗರಸಭೆ ಚುನಾವಣೆ ಕಾವು ಜೋರಾಗಿದೆ.
ರಾಜ್ಯದ ಶಾಲಾ-ಕಾಲೇಜು ಬಂದ್, ಪರೀಕ್ಷೆಗಳು ಮುಂದೂಡಿಕೆ, ನೈಟ್ ಕರ್ಫ್ಯ ವೀಕೆಂಡ್ ಲಾಕ್ಡೌನ್ ಸೇರಿದಂತೆ ಹಲವು ಕಠಿಣ ಕ್ರಮಗಳನ್ನು ಕೈಗೊಂಡಿರುವ ರಾಜ್ಯ ಸರ್ಕಾರಕ್ಕೆ ನಗರಸಭೆ, ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಂದೂಡಲು ಸಾಧ್ಯವಿಲ್ಲವೇ? ಎಲ್ಲ ರಾಜಕೀಯ ಪಕ್ಷಗಳು ಈ ಕುರಿತು ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಬೇಕು.
| ಬಾಲಾಜಿ ಕುಂಬಾರ ಚಟ್ನಾಳ (ಔರಾದ್ ತಾಲೂಕು)