ಕೃಷ್ಣ ಮೆನನ್ ರಸ್ತೆ; ಕವಿ ಸಮಯ...

Kavi Samaya
Published on

ಕೃಷ್ಣ ಮೆನನ್ ಬಂದಾಗ ಏನು ಜನ ಸರ್

ಏನು ಜನ ಸರ್, ಏನು ಜನ ಸರ್

- ಪಿ. ಲಂಕೇಶ್

ಕೃಷ್ಣಮೆನನ್ ರಸ್ತೆಯ ಹೆಂಗಸಾಕೆ,

ಗಿರಿಜಕ್ಕ ಎಂದಿರಲಿ ಹೆಸರು

ಆ ರಸ್ತೆಯ ಹತ್ತು ಮನೆಗಳು ಅವಳ ಲೆಕ್ಕಕ್ಕೆ

ಬಟ್ಟೆ ಒಗೆದು ಹಿಂಡಿ ಆರಿಸಿ

ಹೋಗುವ ಕೆಲಸಕ್ಕೆ

ಹೆಚ್ಚಿನ ಮನೆಯ ಒಂದೆರಡು ತಲೆಮಾರುಗಳ

ಬಟ್ಟೆಗಳ ಒಗೆದು ಹಿಂಡಿದ ನೋವಿದೆ ಅವಳ ಕೈಯಲ್ಲಿ

ಸಿಗದ ಸಂಬಳ ಆ ಮನೆಗಳ ವಾರ್ಷಿಕ ಉತ್ಪತ್ತಿಯ

ದಾಮಾಶಯದಲ್ಲಿ

ಆದರೂ ಹಿಂಡುವುದೂ

ಉಣ್ಣುವುದೂ ಒಂದೆನ್ನುವ ಹಾಗೆ

ಇದ್ದಳವಳು ಸಾಕಿ

ಕುಡುಕ ಗಂಡನ, ನಿರುದ್ಯೋಗಿ ಮಗನ

ಅವಳಿಗೊಬ್ಬಳು ಗೆಳತಿ, ಅದೇ ರಸ್ತೆಯ

ಇನ್ನೊಂದು ತುದಿಯಲ್ಲಿ

(ಯಾವ ಹೆಸರಾದರೂ ಸರಿ, ನೀವೇ ಇಟ್ಟುಕೊಳ್ಳಿ)

ಇಸ್ತ್ರಿ ಹಾಕುವ ಕೆಲಸದವಳಾಗಿ

ಇಸ್ತ್ರಿಪೆಟ್ಟಿಗೆಯಂತೆ ಇದ್ದಳು ಅವಳು

ಮನೆಯಲ್ಲು ಮತ್ತು ಹೊರಗೂ

ಇಬ್ಬರೂ ದಿನಾ ಮುಖಾಮುಖಿಯಾಗುತ್ತಿದ್ದರೂ

ಮಾತುಕತೆ ಇದ್ದಿಲ್ಲ

ಕಷ್ಟ ಸುಖ ಕಣ್ಣಿನಲ್ಲಿ ಇದ್ದು

ಸ್ನೇಹ, ಸಮಾನಚಿಂತನೆ ಎದೆಯಲ್ಲಿ ಬೆಳೆದು

ಪ್ರೀತಿಸುತ್ತಿದ್ದರು ಆ ರಸ್ತೆಯನ್ನು

ಮನೆಗಿಂತ ಹೆಚ್ಚು

ಇರಲಿಲ್ಲ ಹಬ್ಬ ಹರಿದಿನಗಳ ಸುದ್ದಿ ಅವರಲ್ಲಿ

ಅದೇನಿದ್ದರೂ ಅವರು ದುಡಿಯುವ ಮನೆಗಳಲ್ಲಿ

ಸಂಭ್ರಮಿಸುವ ಯುಗಾದಿ, ಗಣೇಶೋತ್ಸವ ಇತ್ಯಾದಿಗಳು

ಇವರ ಕಣ್ಣಿನ ಹೊರಗಿರುವ ರೆಪ್ಪೆಯಲ್ಲಿ

ಕುಣಿಕುಣಿದು ಹೋದರೂ

ಬಯಸರು ಇನ್ನೊಬ್ಬರ ಮನೆಯ ತಿಂಡಿತೀರ್ಥವ ಇವರು.

ಇಂಥ ಇಬ್ಬರು ದಿನಮೊದಲಾಗಿ

ಒಬ್ಬೊಬ್ಬರೇ ಹೊರಟು ನಿಂತರು

ಮನೆಯಿಂದ ಕೆಲಸಕ್ಕೆ

ಹೊರಟಂತೆ, ಕರೊನಾಕ್ಕೆ

ಬಲಿಯಾಗಿ ಕಳೆದ ವರ್ಷ

ನಡೆದು ಹೋದರೆ ಈಗ ನಾವು ಆ ರಸ್ತೆಯಲ್ಲಿ

ಜನ ಮೊದಲಿನಂತೆ ಇದ್ದಾರೆ

ಕೃಷ್ಣ ಮೆನನ್ ಬರುವ ಸುದ್ದಿ ಇದ್ದಂತೆ

ಅಕಸ್ಮಾತ್ ಯಾಕೆ ಈ ರಸ್ತೆಗೆ ಆ ಹೆಸರು ಬಂತು

ಎಂದು ಕೇಳಿದರೆ ಯಾರನ್ನಾದರೂ

ಗೋಣು ಅಲ್ಲಾಡಿಸುವ ಮಂದಿ, ಹೋಗುತ್ತಲೇ ಇರುತ್ತಾರೆ ಮುಂದೆ

ಬ್ಯೂಸಿಯಾಗಿ ತಮ್ಮ ಮರೆತು

- ಡಾ. ನಾ. ಮೊಗಸಾಲೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net