

| ಬೇಲೂರು ರಾಮಮೂರ್ತಿ
ಒಂದು ದಿನ ಒಬ್ಬ ಗೃಹಸ್ಥ ಹಿರಿಯ ಜ್ಞಾನಿಗಳ ಬಳಿ ಹೋಗಿ, ‘ನನಗೆ ಜೀವನದಲ್ಲಿ ನೆಮ್ಮದಿಯೇ ಇಲ್ಲ. ನನಗೆ ಮಾರ್ಗದರ್ಶನ ಮಾಡಿ’ ಎಂದು ನಿವೇದಿಸಿದ. ಜ್ಞಾನಿಗಳು ಅವನ ಪೂರ್ವಾಪರ ವಿಚಾರಿಸಿದರು. ‘ನನಗೆ ಮದುವೆಯಾಗಿ, ಇಬ್ಬರು ಮಕ್ಕಳಿದ್ದಾರೆ, ಇಬ್ಬರಿಗೂ ಮದುವೆಯಾಗಿದೆ, ಬೇರೆ ದೇಶಗಳಲ್ಲಿ ಇದ್ದಾರೆ. ಮೂವರು ಮೊಮ್ಮಕ್ಕಳೂ ಇದ್ದಾರೆ. ಮೂರು ಬಾರಿ ವಿದೇಶಕ್ಕೆ ಹೋಗಿಬಂದಿದ್ದೇವೆ. ಸ್ವಂತಮನೆ ಇದೆ. ನಾನು, ನನ್ನ ಹೆಂಡತಿ ಇಬ್ಬರ ಜೀವನಕ್ಕಾಗುವಷ್ಟು ದುಡ್ಡಿದೆ. ಆದರೂ ನೆಮ್ಮದಿಯಿಲ್ಲ’ ಅಂದ. ಜ್ಞಾನಿಗಳಿಗೆ ನಗು ಬಂತು. ತನ್ನ ತೊಂದರೆಯನ್ನು ಕೇಳಿ ಈ ಜ್ಞಾನಿಗಳು ನಗುತ್ತಿದ್ದಾರಲ್ಲ ಅಂತ ಗೃಹಸ್ಥನಿಗೆ ಬೇಜಾರಾಯಿತು.
ಕೆಲ ಕ್ಷಣಗಳ ನಂತರ ಜ್ಞಾನಿಗಳು ಮಾತು ಪ್ರಾರಂಭಿಸಿದರು, ‘ನೀನು ಆಡುತ್ತಿರುವ ಮಾತು ಹೊಟ್ಟೆ ತುಂಬಿದವನು ನನಗೆ ಇನ್ನೂ ಹಸಿವು ಎನ್ನುವಂತಿದೆ. ನೀನು ಏನೋ ಹುಡುಕುತ್ತಿದ್ದೀಯ. ಆದರೆ ಏನು ಹುಡುಕುತ್ತಿದ್ದೀಯ ಎನ್ನುವುದೇ ನಿನಗೆ ತಿಳಿದಿಲ್ಲ. ಯಾವುದೋ ಆಟಿಕೆಯನ್ನು ನೆನಪಿಸಿಕೊಂಡು ಚಿಕ್ಕಮಗುವೊಂದು ಅಳುವಂತಿದೆ ನಿನ್ನ ಸ್ಥಿತಿ. ಇದರಿಂದ ಹೊರಬರಬೇಕಾದರೆ ನಿನ್ನಲ್ಲಿರುವುದನ್ನು ಹಂಚಲು ಯತ್ನಿಸು. ನಿನ್ನಲ್ಲಿ ವಿದ್ಯೆಯಿದೆ, ಅದನ್ನು ನಾಲ್ಕಾರು ಹುಡುಗರಿಗೆ ಹಂಚು. ಸದಾ ಕಾಲ ಉತ್ಸಾಹದಿಂದ ಇರಲು ಯತ್ನಿಸು. ದಿನಾ ಒಬ್ಬನಾದರೂ ಹಸಿದವನಿಗೆ ಊಟ ಹಾಕು. ಎಲ್ಲ ಕಡೆಯಲ್ಲೂ ಸಂತಸವನ್ನು ಕಾಣಲು ಯತ್ನಿಸು. ಭಗವಂತ ಎಲ್ಲವನ್ನೂ ಕೊಟ್ಟಿದ್ದಾನೆ, ಇನ್ನೇನೂ ಬೇಡ ಎನ್ನುವ ಭಾವವನ್ನು ಹೊಂದು. ಮನೆಯ ಸುತ್ತಮುತ್ತ ಇರುವ ಸಂಘಸಂಸ್ಥೆಗಳಲ್ಲಿ ಸಮಾಜಸೇವೆ ಮಾಡು. ದಿನ ಬೆಳಗ್ಗೆ ಸ್ನಾನ ಆದ ಮೇಲೆ ಕಣ್ಣುಮುಚ್ಚಿ ಕೂತು, ನಾನು ಯಾರು, ಎಲ್ಲಿಂದ ಬಂದೆ, ಎಲ್ಲಿಗೆ ಹೋಗುತ್ತೀನಿ, ನಾನು ಬರುವಾಗ ಏನು ತಂದೆ ಹೋಗುವಾಗ ಏನು ತೆಗೆದುಕೊಂಡು ಹೋಗುತ್ತೀನಿ ಎನ್ನುವುದನ್ನೆಲ್ಲ ಚಿಂತಿಸು. ಬರಿಗೈಲಿ ಬಂದು ಇಲ್ಲಿ ಸಂಪಾದನೆ ಮಾಡಿದ್ದೀಯ. ಅದಕ್ಕೆ ಈ ಭೂಮಿ, ಪರಿಸರ, ಸಮಾಜ, ಇಲ್ಲಿನ ಜನರು ಇವರೆಲ್ಲ ಕಾರಣ. ಹೀಗಿರುವಾಗ ಸಂಪಾದನೆ ಮಾಡಿದ್ದನ್ನು ಇವರೊಂದಿಗೆ ಹಂಚಿಕೊ. ಹಳೆಯ ಚಿಂತೆಗಳನ್ನು ಬಿಡು, ಹೊಸ ಹೊಸ ಚಿಂತನೆಗಳನ್ನು ಬೆಳೆಸಿಕೋ. ಒಂದು ತಿಂಗಳ ನಂತರ ಬಂದು ನನ್ನನ್ನು ನೋಡು’ ಎಂದು ಹೇಳಿದರು.
ಗೃಹಸ್ಥ ತನ್ನ ಸಮಸ್ಯೆಗೆ ಪರಿಹಾರ ಸಿಗಲಿಲ್ಲ ಎಂದುಕೊಂಡು ಬೇಜಾರಿನಿಂದ ಮನೆಗೆ ಹೋದ. ಜ್ಞಾನಿಗಳು ಹೇಳಿದ್ದನ್ನು ಮಾಡಿ ನೋಡೋಣ ಎಂದು ಪ್ರಾರಂಭಿಸಿದವನು ಒಂದು ತಿಂಗಳ ನಂತರ ಜ್ಞಾನಿಗಳ ಬಳಿ ಹೋಗಿ ಅವರಿಗೆ ದೀರ್ಘದಂಡ ನಮಸ್ಕಾರ ಮಾಡಿ ‘ನನ್ನ ಕಣ್ಣು ತೆರೆಸಿದಿರಿ’ ಎಂದ. ನಿಜ... ಎಲ್ಲವೂ ಇದ್ದರೂ ಇನ್ನೇನನ್ನೋ ಹುಡುಕುವ ಗುಣ ಬಿಟ್ಟು ಇರುವುದನ್ನು ಎಲ್ಲರೊಂದಿಗೂ ಹಂಚಿಕೊಂಡು ನೆಮ್ಮದಿಯಿಂದಿರುವುದೇ ಜೀವನ ಅಲ್ಲವೇ?
(ಲೇಖಕರು ಸಾಹಿತಿ)