ಹಸಿರ ಕಾಡು ಅಭಯ್ ತೋಟ!; ಶಾಶ್ವತ ಕೃಷಿ ವಿಧಾನ, ವಿಜ್ಞಾನವೇ ಜೀವಾಳ..

Vittavani
Published on

ಭೂಮಿಗೆ ರಾಸಾಯನಿಕ ಗೊಬ್ಬರ ಸುರಿದು ಹೆಚ್ಚೆಚ್ಚು ಬೆಳೆ ತೆಗೆದು ಲಾಭ ಮಾಡಬೇಕೆನ್ನುವವರ ಸಂಖ್ಯೆಯೇ ಈಗ ಜಾಸ್ತಿ. ಅಂತಹವರ ಮಧ್ಯೆ ನಿಸರ್ಗದತ್ತವಾಗಿ ಗಿಡಗಳನ್ನು ಬೆಳೆಸಿ ಪ್ರಕೃತಿ ಸೌಂದರ್ಯ ಹೆಚ್ಚಿಸುವುದರ ಜತೆಗೆ ನೈಸರ್ಗಿಕ ಕೃಷಿ ಪದ್ಧತಿ ಮೂಲಕ ಜೀವನ ರೂಪಿಸಿಕೊಂಡ ಯುವ ರೈತರೊಬ್ಬರ ಯಶೋಗಾಥೆ ಇದು.

| ಶಿವು ಹುಣಸೂರು

ಆರು ಎಕರೆ ವಿಸ್ತೀರ್ಣದ ತೋಟದಲ್ಲಿ ಎಲ್ಲಿ ನೋಡಿದರಲ್ಲಿ ಹಚ್ಚಹಸಿರು. ಒಳಹೊಕ್ಕರೆ ಕಾಡಿನೊಳಗೆ ಕಾಲಿಟ್ಟ ಅನುಭವ. ಅಪರೂಪದ ಹಣ್ಣಿನ ಗಿಡಗಳು, ನೈಸರ್ಗಿಕ ಕೃಷಿ ಪದ್ಧತಿ ಮೂಲಕ ಶಾಶ್ವತ ಕೃಷಿ ವಿಧಾನ ಮತ್ತು ವಿಜ್ಞಾನವೇ ಈ ತೋಟದ ಜೀವಾಳ. ಹೌದು, ಹುಣಸೂರು ತಾಲೂಕಿನ ರತ್ನಪುರಿಯ ಯುವ ರೈತ ಕೆ.ಎಂ. ನವೀನ್ ಅವರ ‘ಅಭಯ್ ತೋಟ’ಕ್ಕೆ ನೀವು ಕಾಲಿಟ್ಟರೆ ನಿಬ್ಬೆರಗಾಗುತ್ತೀರಿ. ಈ ತೋಟದಲ್ಲಿ ನೆಲ ಕಾಣುವುದಿಲ್ಲ. ನೆಲದ ತುಂಬಾ ಹಚ್ಚಹಸಿರಿನ ಹುಲ್ಲು ಬೆಳೆದಿದೆ. ಕಳೆ ಗಿಡಗಳೂ ಇವೆ. ನವೀನ್ ಪ್ರಕಾರ ಇವು ಕಳೆಯಲ್ಲ, ಭೂತಾಯಿಗೆ ಮತ್ತು ಗಿಡಮರಗಳಿಗೆ ಬೆಂಬಲವಾಗಿ ನಿಂತಿರುವ ಹಸಿರುಹುಲ್ಲು. ನೈಸರ್ಗಿಕ ಕೃಷಿ ಪದ್ಧತಿ ಅನುಸರಿಸಿ ಮಾಡಿರುವ ‘ಅಭಯ್ ತೋಟ’ ಇಡೀ ತಾಲೂಕಿನಲ್ಲಿ ಮನೆ ಮಾತಾಗಿದೆ.

6 ಎಕರೆಗೆ ಇಬ್ಬರೇ ಕೃಷಿ ಕಾರ್ವಿುಕರು: ಬೆಂಗಳೂರಿನ ಖಾಸಗಿ ಕಂಪನಿ ಉದ್ಯೋಗಿಯಾಗಿದ್ದ ನವೀನ್ ಈಗ ಕೃಷಿಕ. ಭೂಮಿಗೆ ರಾಸಾಯನಿಕ ಗೊಬ್ಬರ ಬಳಸಿಲ್ಲ. ಹಣ್ಣು ಇನ್ನಿತರ ಗಿಡಗಳನ್ನು ತಂದು ನೆಡುವುದು ಮಾತ್ರ ಇವರ ಕೆಲಸ. ಇಡೀ ತೋಟದ ತುಂಬಾ ಹನಿ ನೀರಾವರಿ ವ್ಯವಸ್ಥೆ ಕಲ್ಪಿಸಲಾಗಿದೆ. ನೀರು ಹಾಯಿಸುವುದಷ್ಟೇ ಕೆಲಸ. ನಿಸರ್ಗದತ್ತವಾಗಿಯೇ ಗಿಡಗಳು ಬೆಳೆಯಬೇಕು ಎನ್ನುವುದು ನವೀನ್ ವಾದ.

ಹುಚ್ಚ ಎಂದವರು ಬೆಪ್ಪಾದರು: ಭೂಮಿಗೆ ರಾಸಾಯನಿಕ ಗೊಬ್ಬರ ಬಳಸದೆ ಸುತ್ತಮುತ್ತಲ ತ್ಯಾಜ್ಯಗಳನ್ನೇ ಗೊಬ್ಬರವನ್ನಾಗಿ ಮಾರ್ಪಡಿಸಿದ ನವೀನ್, ಆ ಮೂಲಕ ಭೂಮಿಯ ಫಲವತ್ತತೆ ಕಾಪಾಡಿಕೊಂಡಿದ್ದಾರೆ. ಸುತ್ತಮುತ್ತಲಿನ ರೈತರು ತಮ್ಮ ಭೂಮಿಯಲ್ಲಿ ಬೆಳೆದ ಮುಸುಕಿನ ಜೋಳದ ಕಟಾವಿನ ನಂತರ ಜೋಳದ ದಿಂಡು, ತೆನೆಯ ದಿಂಡು ಮತ್ತು ಎಲೆಗಳನ್ನು ಜಮೀನಿನಲ್ಲಿ ಗುಡ್ಡೆ ಹಾಕಿ ಸುಡುತ್ತಿದ್ದರು. ಇದನ್ನು ಗಮನಿಸಿದ ನವೀನ್, ಅವರಲ್ಲಿಗೆ ತೆರಳಿ ಎಕರೆಗೆ 500 ರೂ.ಗಳಂತೆ ತ್ಯಾಜ್ಯ ಗುಡ್ಡೆಯನ್ನು ಖರೀದಿಸಿ ತಮ್ಮ ಜಮೀನಿಗೆ ಹಾಕಿಕೊಳ್ಳುತ್ತಿದ್ದರು. ಮಿಕ್ಕ ರೈತರು ಇವರೇನು ಹುಚ್ಚರೇ ಎಂದು ಕುಹಕವಾಡಿದ್ದರು. ಆದರೆ ವರ್ಷ ಕಳೆದಂತೆ ಹುಚ್ಚ ಎಂದವರೇ ಬೆಪ್ಪಾಗಿ ನವೀನ್ ಅವರ ತೋಟ ಕಂಡು ಮೂಗಿನ ಮೇಲೆ ಬೆರಳಿಡುವಂತಾಯಿತು.

ತರಹೇವಾರಿ ಹಣ್ಣು: ಅಭಯ್ ಫಾರ್ಮ್​ ಸುತ್ತ 2,500ಕ್ಕೂ ಹೆಚ್ಚು ತೇಗ, ಮಹಾಗನಿ, ಸಿಲ್ವರ್, ಹೆಬ್ಬೇವು ಮುಂತಾದ ಮರಗಳನ್ನು ಬೆಳೆಸಲಾಗಿದೆ. 4,500ಕ್ಕೂ ಹೆಚ್ಚು ಬಾಳೆಗಿಡ, 120 ಬಟರ್​ಫೂ›ಟ್, 220 ತೆಂಗಿನ ಮರ, 100 ಸಪೋಟ, 1100 ಪಪ್ಪಾಯ, ಸೀತಾಫಲ, ರಾಮಫಲ, ಲಕ್ಷ್ಮಣಫಲ, ಬ್ರೆಡ್​ಫೂ›ಟ್(ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದನ್ನು ಜೀಕುಜ್ಜೆ ಎನ್ನುತ್ತಾರೆ), ಮಾತೃಫಲ, ನೇರನಳೆ, ಚಕ್ಕೆ, ಲವಂಗ, ವೀಳ್ಯದೆಲೆ, ಮೆಕೋ ಡೋಮಿಯಾ ಡ್ರೈ ಫೂ›ಟ್, ಪುನರ್​ಪುಳಿ, ಸ್ಟಾರ್ ಫೂ›ಟ್, ಮಾವು, ಅನಾನಸ್.... ಹೀಗೆ ಹಣ್ಣುಗಳ ರಾಶಿಯೇ ಇಲ್ಲಿದೆ. ಇದರಿಂದ ತಿಂಗಳಿಗೆ ಕನಿಷ್ಠ 50 ಸಾವಿರ ರೂ. ಆದಾಯ ಪಡೆಯುತ್ತಿದ್ದಾರೆ ನವೀನ್.

ತ್ಯಾಜ್ಯ ವಿಭಜಕ ಬಳಕೆ

ಭಾರತದಲ್ಲಿ ಪ್ರತಿ ವರ್ಷ ವಿವಿಧ ಸ್ತರಗಳಲ್ಲಿ (ಕೃಷಿ ಮತ್ತು ಕೃಷಿಯೇತರ) 62 ಮಿಲಿಯನ್ ಟನ್​ಗಳಷ್ಟು ತ್ಯಾಜ್ಯ ಉತ್ಪಾದನೆಯಾಗುತ್ತಿದೆ. ಇಷ್ಟು ಪ್ರಮಾಣದ ತ್ಯಾಜ್ಯವನ್ನು ಸುಡುವುದು ಅಥವಾ ಗುಡ್ಡೆಹಾಕಿ ಕೊಳೆಯುವಂತೆ ಮಾಡುತ್ತಿದ್ದೇವೆ. ಆದರೆ, ಈ ತ್ಯಾಜ್ಯಗಳ ಕೊಳೆಯುವಿಕೆಯನ್ನು ಉತ್ತಮ ರೀತಿಯಲ್ಲಿ ಮಾಡಲು ನ್ಯಾಷನಲ್ ಸೆಂಟರ್ ಆಫ್ ಆರ್ಗ್ಯಾನಿಕ್ ಫಾರ್ವಿುಂಗ್(ಕೇಂದ್ರ ಸರ್ಕಾರ) ಸಂಸ್ಥೆ ತ್ಯಾಜ್ಯ ವಿಭಜಕ(ವೇಸ್ಟ್ ಡೀ-ಕಂಪೋಸರ್)ವೊಂದನ್ನು ಸಂಶೋಧನೆ ಮಾಡಿದೆ. ರೈತರ ಆದಾಯವನ್ನು ದ್ವಿಗುಣಗೊಳಿಸಲು ಮತ್ತು ಸ್ವಚ್ಛ ಭಾರತ ಯೋಜನೆಯಡಿ ಈ ಸಂಶೋಧನೆ ನಡೆದಿದ್ದು, 20 ರೂ. ಬೆಲೆಯ ತ್ಯಾಜ್ಯ ವಿಭಜಕ ಔಷಧದ ಬಾಟಲ್ ರೈತರ ಪಾಲಿಗೆ ವರವಾಗಿ ಪರಿಣಮಿಸಿದೆ. ಒಮ್ಮೆ ಹಣ ಕೊಟ್ಟು ಒಂದು ಬಾಟಲ್ ಖರೀದಿಸಿದರೆ ನಂತರ ರೈತರೇ ತ್ಯಾಜ್ಯ ವಿಭಜಕ ಔಷಧ ತಯಾರಿಸಬಹುದಾಗಿದೆ.

ಸೋಲಾರ್ ಟ್ರಾಪ್: ತೋಟ ಮತ್ತು ಜಮೀನಿನಲ್ಲಿ ಕೀಟಗಳ ಬಾಧೆ ಹೆಚ್ಚು ಇರುವುದು ಸಹಜ. ನವೀನ್ ಇದಕ್ಕೂ ಒಂದು ಉಪಾಯ ಕಂಡುಕೊಂಡಿದ್ದಾರೆ. ಅದೇ ಸೋಲಾರ್ ಟ್ರಾಪ್ ಬಳಕೆ. ಸಂಜೆ 6ರಿಂದ ರಾತ್ರಿ 9 ಗಂಟೆಯವರೆಗೆ ಗಿಡಗಳನ್ನು ಬಾಧಿಸುವ ಶತ್ರುಕೀಟಗಳು ಹೆಚ್ಚು ಚಲನಶೀಲವಾಗಿರುತ್ತವೆ. ಈ ಸಂದರ್ಭದಲ್ಲಿ ಅವು ಗಿಡಗಳಿಗೆ ಹಾನಿಯುಂಟು ಮಾಡುತ್ತವೆ. ಇದನ್ನು ತಡೆಯಲು ಸೋಲಾರ್ ಟ್ರಾಪ್ ಬಳಸಿದ್ದಾರೆ. ಸೂರ್ಯಕಿರಣಗಳನ್ನು ಬಳಸಿ ಸಂಜೆ 6ರಿಂದ 9ರವರೆಗೆ ದೀಪ ಬೆಳಗಿಸಲಾಗುತ್ತಿದೆ. ದೀಪದಡಿಯಲ್ಲಿ ಲಿಥೇನಿಯಂ ದ್ರಾವಣ ಇಡಲಾಗುತ್ತದೆ. ಬೆಳಕಿಗೆ ಆಕರ್ಷಣೆಗೊಂಡ ಕೀಟಗಳು ಸೋಲಾರ್ ಟ್ರಾಪ್ ಬಳಿ ಬಂದು ದ್ರಾವಣಗೊಳಗೆ ಬೀಳುತ್ತವೆ. ಎಕರೆಗೊಂದರಂತೆ ಈ ಯಂತ್ರವನ್ನು ಇಟ್ಟಿದ್ದು, ಈ ಮೂಲಕ ಕೀಟಬಾಧೆ ನಿಯಂತ್ರಿಸಲಾಗಿದೆ.

ಡೀ ಕಾಂಪೊಸರ್ ಉಪಯೋಗ: ಡೀ ಕಾಂಪೊಸರ್ ಅತ್ಯಂತ ಸರಳ ಪದಾರ್ಥ, ಕೈಗೆಟುಕುವ ಬೆಲೆ, ಉಪಯೋಗ ಸುಲಭ, 3 ವರ್ಷಗಳವರೆಗೆ ಕೆಡುವುದಿಲ್ಲ, ಎಲ್ಲ ಬೆಳೆಗಳಿಗೂ ಬಳಸಿ ಗುಣಮಟ್ಟದ ಬೆಳೆ ಪಡೆಯಲು ಸಾಧ್ಯ. ನವೀನ್ ಅವರ ತೋಟದಲ್ಲಿ ಮುಸುಕಿನ ಜೋಳದ ತ್ಯಾಜ್ಯ ಇನ್ನಿತರ ತ್ಯಾಜ್ಯ ಒಟ್ಟುಗೂಡಿಸಿ ಗಿಡದ ಬುಡಕ್ಕೆ ಹಾಕಿ ಅದಕ್ಕೆ ಡೀ ಕಂಪೋಸರ್ ಬಳಸಿ ಉತ್ತಮ ಸಾವಯವ ಗೊಬ್ಬರ ನೀಡಿದ್ದಾರೆ.

ಕೃಷಿ ಪದ್ಧತಿಯ ಪರಿಕಲ್ಪನೆ ಈಗ ಬದಲಾಗಿದೆ. ಸರ್ಕಾರದ ಯೋಜನೆಗಳನ್ನು ಅರಿತು ಯೋಜನಾಬದ್ಧವಾಗಿ ಕೃಷಿ ಮಾಡಿದಲ್ಲಿ ಲಾಭದಾಯಕವಾಗಲಿದೆ. ಸರ್ಕಾರ ರೈತರ ಆದಾಯ ದ್ವಿಗುಣ ಗೊಳಿಸುವ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ. ಸಾಲ ಮನ್ನಾ, ರಿಯಾಯಿತಿ ಇಂಥದನ್ನೆಲ್ಲ ಬಿಟ್ಟು ಬುದ್ಧಿವಂತಿಕೆಯಿಂದ ಬೇಸಾಯ ನಡೆಸಿದಲ್ಲಿ ಆರ್ಥಿಕಾಭಿವೃದ್ಧಿ ಸಾಧ್ಯ.

| ಕೆ.ಎಂ. ನವೀನ್ ರೈತ, ರತ್ನಪುರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net