ಅನೈತಿಕ ಸಂಬಂಧದ ಪಾಶ: ಆ ಕ್ಷಣ ಅಂಕಣ, ಭಾಗ-1

A kshana
Published on
ಕರಾವಳಿ ಜಿಲ್ಲೆಗಳ ಹಲವಾರು ಯುವಕರಂತೆ ಭಾಸ್ಕರ್ ತನ್ನ 22ನೇ ವಯಸ್ಸಿನಲ್ಲಿಯೇ ನೌಕರಿ ಹುಡುಕಿಕೊಂಡು ಸೌದಿ ಅರೇಬಿಯಾಕ್ಕೆ ಹೋದ. ಮೊದಲಿಗೆ ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಂಡು ಕಠಿಣ ಪರಿಶ್ರಮದಿಂದ ಉದ್ಯೋಗದಲ್ಲಿ ಮುಂದೆ ಬಂದ. ಕೆಲವೇ ದಶಕಗಳಲ್ಲಿ ಆತ ಸಾಕಷ್ಟು ಹಣವನ್ನು ಗಳಿಸಿ ಹಲವಾರು ಸೂಪರ್ ಮಾರ್ಕೆಟ್​ಗಳ ಒಡೆಯನಾದ.

ತನ್ನ 28ನೇ ವರ್ಷದಲ್ಲಿ, ಅಂದರೆ 1991ರಲ್ಲಿ ಭಾಸ್ಕರ್ ತಂದೆ-ತಾಯಿ ಆಯ್ಕೆ ಮಾಡಿದ ತನ್ನದೇ ಜಿಲ್ಲೆಯ ರಾಜೇಶ್ವರಿಯನ್ನು ವಿವಾಹವಾದ. ಇವರಿಬ್ಬರಿಗೂ ನಾಲ್ಕು ವರ್ಷಗಳ ವಯಸ್ಸಿನ ಅಂತರವಿತ್ತು. ಮದುವೆಯಾದ ಕೆಲಕಾಲದ ಬಳಿಕ ಭಾಸ್ಕರ್ ಪತ್ನಿಯನ್ನು ತಾನಿದ್ದ ಊರಿಗೆ ಕರೆಸಿಕೊಂಡ. ಇಬ್ಬರೂ ಸುಖದ ಜೀವನ ಸಾಗಿಸುತ್ತಿದ್ದರು. ಕೆಲಕಾಲಾನಂತರ ಅವರಿಗೊಂದು ಗಂಡು ಮಗುವಾಯಿತು. ಅವನಿಗೆ ‘ನವನೀತ’ ಎಂದು ನಾಮಕರಣ ಮಾಡಿದರು. ನವನೀತನಿಗೆ ಐದು ವರ್ಷವಾದಾಗ ಭಾಸ್ಕರ್ ಪತ್ನಿ ಮತ್ತು ಮಗನನ್ನು ತನ್ನೂರಿನಲ್ಲಿರಲು ಕಳಿಸಿದ. ಕೊಲ್ಲಿ ರಾಷ್ಟ್ರದಲ್ಲಿ ತನ್ನ ಒಬ್ಬನೇ ಮಗ ಬೆಳೆಯುವುದು ಅವನಿಗೆ ಇಷ್ಟವಿರಲಿಲ್ಲ. ಹುಟ್ಟೂರಿನ ತನ್ನ ಪೂರ್ವಜರ ಮನೆಯಲ್ಲಿ ತನ್ನ ತಾಯಿ ಹಾಗೂ ಸೋದರ ವಾಸಮಾಡುತ್ತಿದ್ದ ಕಾರಣ ಆತ ಪತ್ನಿ ಮತ್ತು ಮಗನಿಗಾಗಿ ಬೇರೊಂದು ಮನೆಯನ್ನೇ ಮಾಡಿದ. ವರ್ಷಕ್ಕೆ ಎರಡು ಬಾರಿ ಊರಿಗೆ ಬಂದು ಪತ್ನಿ, ಪುತ್ರ ಮತ್ತು ಸಂಬಂಧಿಕರೊಡನೆ ಮೂರ್ನಾಲ್ಕು ವಾರಗಳು ಕಳೆಯುತ್ತಿದ್ದ.

ಭಾಸ್ಕರ್ ತಾನು ಸೌದಿಯಲ್ಲಿ ಗಳಿಸಿದ ಹಣವನ್ನು ಹುಟ್ಟೂರಿನಲ್ಲಿ ಹೂಡಲಾರಂಭಿಸಿ ಹಲವಾರು ಫ್ಲ್ಯಾಟ್​ಗಳು ಮತ್ತು ವಾಣಿಜ್ಯ ಸಂಕೀರ್ಣಗಳನ್ನು ಖರೀದಿಸಿದ. ಒಂದು ಹೋಟೆಲ್ಲನ್ನು ಸಹ ಕಟ್ಟಿಸಿದ. ಈ ಆಸ್ತಿಗಳಿಗಾಗಿ ಬ್ಯಾಂಕಿನಿಂದ ಸಾಲವನ್ನೂ ಪಡೆದಿದ್ದ. ಭಾಸ್ಕರ್ ಮತ್ತು ರಾಜೇಶ್ವರಿಗಿದ್ದ ಏಕೈಕ ಚಿಂತೆಯೆಂದರೆ ನವನೀತ ವಿದ್ಯಾಭ್ಯಾಸದಲ್ಲಿ ಆಸಕ್ತಿ ತೋರಿಸದೇ ಇರುವುದು. ಹಾಗೂಹೀಗೂ ಮಾಡಿ ಆತ ಪಿಯುಸಿ ಪರೀಕ್ಷೆ ಪಾಸ್ ಮಾಡಿದ ನಂತರ ಭಾಸ್ಕರ್ ಅವನನ್ನು ಖಾಸಗಿ ಇಂಜಿನಿಯರಿಂಗ್ ಕಾಲೇಜಿಗೆ ಸೇರಿಸಿದ. ಆದರೆ ಅಲ್ಲಿಯೂ ಮಗ ಪಾಠಪ್ರವಚನಗಳಲ್ಲಿ ಯಾವ ಆಸಕ್ತಿ ತೋರಿಸದಾದಾಗ ಭಾಸ್ಕರ್ ಒಂದೂವರೆ ಕೋಟಿ ರೂಪಾಯಿ ಖರ್ಚು ಮಾಡಿ ಮಗನಿಗೆಂದು ಒಂದು ಜಿಮ್ ಹಾಕಿಸಿ ಅದರ ಮೂಲಕ ಹಣ ಗಳಿಸಲು ದಾರಿ ಮಾಡಿಕೊಟ್ಟ.

ಪತಿ ದೂರದೂರಿನಲ್ಲಿ ಇರುತ್ತಿದ್ದು ವರ್ಷಕ್ಕೆ ಒಂದೋ ಅಥವಾ ಎರಡು ಬಾರಿಯೋ ತನ್ನೊಡನೆ ಸಮಯವನ್ನು ಕಳೆಯುತ್ತಿದ್ದ ಕಾರಣ ರಾಜೇಶ್ವರಿಗೆ ಗಂಡನ ನಡತೆ ಮೇಲೆ ಸಂಶಯ ಮೂಡಿತು. ಅವಳ ಒಬ್ಬ ಗೆಳತಿ, ‘ನಿನ್ನ ಗಂಡ ತನ್ನ ಕಂಪನಿಯ ಮ್ಯಾನೇಜರ್ ಪತ್ನಿ ಜತೆಗೆ ಲಲ್ಲೆ ಹೊಡೆಯುತ್ತಿರುತ್ತಾನೆ’ ಎಂದಳು. ಕರಾವಳಿ ಮೂಲದವಳೇ ಆದ ಸುಧಾ ಎನ್ನುವವಳೊಡನೆ ಆತ ಅನೈತಿಕ ಸಂಬಂಧ ಬೆಳೆಸಿದ್ದಾನೆ ಎಂದು ಇನ್ನೊಬ್ಬ ಗೆಳತಿ ತಿಳಿಸಿದ್ದಲ್ಲದೆ, ಭಾಸ್ಕರ ಸುಧಾಳ ಜತೆಗಿರುವ ಫೋಟೋ ಒಂದನ್ನೂ ರಾಜೇಶ್ವರಿಗೆ ಕಳಿಸಿದಳು. ಗಾಬರಿಗೊಂಡ ರಾಜೇಶ್ವರಿ ಗಂಡನನ್ನು ಈ ಬಗ್ಗೆ ವಿಚಾರಿಸಿದಾಗ ಆತ ಅವೆಲ್ಲವೂ ಸುಳ್ಳು ಎಂದ. ಆದರೂ ಆಕೆ ಅವನನ್ನು ನಂಬದೆ ಅವನೊಡನೆ ಪದೇಪದೆ ಜಗಳ ಕಾಯುತ್ತಿದ್ದಳು.

ಸುಧಾಳ ಜೊತೆ ನಿನ್ನ ತಂದೆಗೆ ಅನೈತಿಕ ಸಂಬಂಧವಿದೆಯೆಂದು ರಾಜೇಶ್ವರಿ ತನ್ನ ಮಗನಿಗೆ ಹೇಳಿದ್ದಲ್ಲದೆ ಅವಳಿಂದ ನಿನಗೆ ಒಬ್ಬ ತಮ್ಮನೂ ಹುಟ್ಟಿದ್ದಾನೆ ಎಂದು ಹೇಳಿದಳು. ಇದನ್ನು ಕೇಳಿದಾಗಲಿಂದ ನವನೀತ್ ತಂದೆಯನ್ನು ದ್ವೇಷಿಸತೊಡಗಿದ. ಆದರೆ ಮಗ ವಿದ್ಯೆಯಲ್ಲಿಯೂ ಉದ್ಯೋಗದಲ್ಲಿಯೂ ಮುಂದೆ ಬಾರದ್ದರಿಂದ ಆತನ ಜಾತಕವನ್ನು ಖ್ಯಾತ ಜ್ಯೋತಿಷಿಗೆ ತೋರಿಸಿದಳು. ಅವರು ಹೇಳಿದ ಪರಿಹಾರದಂತೆ ಸಮೀಪದ ಗ್ರಾಮದಲ್ಲಿ ಶ್ರೀನಿವಾಸ ಭಟ್ಟರಿಂದ ಹೋಮ, ಹವನಗಳನ್ನು ಮಾಡಿಸಿದಳು. ಆನಂತರ ರೋಗಗ್ರಸ್ತ ಪತ್ನಿಯ ಶುಶ್ರೂಷೆಯಲ್ಲಿ ನಿರತರಾಗಿರುವ ಕಾರಣ ಪುತ್ರ ನಿರಂಜನ ಭಟ್ಟನ ಮುಖಾಂತರ ಮುಂದಿನ ಹೋಮಹವನಗಳನ್ನು ಮಾಡಿಸಲು ಶ್ರೀನಿವಾಸ ಭಟ್ಟರು ಸೂಚಿಸಿದರು. 26 ವರ್ಷದ ನಿರಂಜನ ಭಟ್ಟ ವೇದಶಾಸ್ತ್ರಗಳಲ್ಲಿ ಪಾರಂಗತನಾಗಿರುವುದೇ ಅಲ್ಲದೆ ಲೌಕಿಕ ಜ್ಞಾನದಲ್ಲಿಯೂ ಮುಂದಿದ್ದ. ಅವಿವಾಹಿತನಾಗಿದ್ದ ಆತ ನೋಡಲು ಸಿನಿಮಾ ನಟನಂತೆಯೇ ಕಾಣುತ್ತಿದ್ದ. ಅವನನ್ನು ರಾಜೇಶ್ವರಿ ಸಂರ್ಪಸಿದಾಗ ತಾನು ಶ್ರದ್ಧಾ, ಭಕ್ತಿಯಿಂದ ಹೋಮಗಳನ್ನು ಮಾಡಿ ನವನೀತನ ಭವಿಷ್ಯ ಉತ್ತಮವಾಗುವಂತೆ ಮಾಡುತ್ತೇನೆ ಎಂದ. ರಾಜೇಶ್ವರಿ ಶ್ರೀಮಂತಳು ಎಂದು ತಿಳಿದ ಕೂಡಲೇ ಆಕೆಯಿಂದ ಸಾಕಷ್ಟು ಹಣವನ್ನು ಪಡೆದು ಹಲವು ರೀತಿಯ ಹೋಮ-ಹವನಗಳನ್ನು ಒಂದಾದನಂತರ ಒಂದಂತೆ ಮಾಡಿಸತೊಡಗಿದ.

ಭಾಸ್ಕರ್ ತನ್ನ ಆಸ್ತಿಯ ವಹಿವಾಟುಗಳನ್ನು ನೋಡಿಕೊಳ್ಳಲು ರಾಜೇಶ್ವರಿಗೆ ಜನರಲ್ ಪವರ್ ಆಫ್ ಅಟಾರ್ನಿಯನ್ನು ಮಾಡಿಕೊಟ್ಟಿದ್ದ. ಈ ಕಾರಣದಿಂದ ಆಕೆ ಭಾಸ್ಕರ್ ಪರವಾಗಿ ಭಾರತದಲ್ಲಿ ಅವನ ಸಮಸ್ತ ಆರ್ಥಿಕ ವಹಿವಾಟುಗಳನ್ನೂ ನೋಡಿಕೊಳ್ಳುತ್ತಿದ್ದಳು. ಭಾಸ್ಕರ್ ಸಾಕಷ್ಟು ಸಾಲವನ್ನು ಬ್ಯಾಂಕುಗಳಿಂದ ಪಡೆದುಕೊಂಡಿದ್ದ. ಸೌದಿಯಲ್ಲಿ ಗಳಿಸಿದ ಹಣದಲ್ಲಿ ಮತ್ತು ಕಟ್ಟಡಗಳಿಂದ ಬರುತ್ತಿದ್ದ ಬಾಡಿಗೆಯಿಂದ ಈ ಸಾಲವನ್ನು ರಾಜೇಶ್ವ್ವ ಮೂಲಕವೇ ಕಾಲಕಾಲಕ್ಕೆ ತೀರಿಸುತ್ತಿದ್ದ.

ಏತನ್ಮಧ್ಯೆ ನಿರಂಜನ ಭಟ್ಟ ಮತ್ತು ರಾಜೇಶ್ವರಿ ಸನಿಹಕ್ಕೆ ಬಂದರು. ಅವರಿಬ್ಬರೂ ಸಾರ್ವಜನಿಕವಾಗಿಯೇ ಓಡಾಡತೊಡಗಿದರು. ಕಾಲಕ್ರಮೇಣ ಇದು ದೈಹಿಕ ಸಂಬಂಧಕ್ಕೂ ತಿರುಗಿತು ಎಂದು ಆಕೆಯನ್ನು ಬಲ್ಲ ಕೆಲವರು ಹೇಳುತ್ತಾರೆ. ತನ್ನ ಪ್ರೀತಿಯ ಕುರುಹಾಗಿ ರಾಜೇಶ್ವರಿ ನಿರಂಜನನಿಗೆ ಒಂದು ಫ್ಲಾಟ್​ನ್ನು ಬಳುವಳಿಯಾಗಿ ಕೊಟ್ಟಿದ್ದಲ್ಲದೆ ಒಂದು ಕಾರನ್ನು ಕೂಡ ಕೊಟ್ಟಳು. 2016ರ ಮೇ ತಿಂಗಳಲ್ಲಿ ಭಾಸ್ಕರ್ ತವರಿಗೆ ವಾಪಸ್ಸಾದ ಎರಡು ದಿನಗಳ ನಂತರ ಬ್ಯಾಂಕಿಗೆ ಹೋಗಿ ಅಲ್ಲಿಯ ಮ್ಯಾನೇಜರ್​ನನ್ನು ಭೇಟಿ ಮಾಡಿ ಸಾಲದ ಕಂತುಗಳು ಇನ್ನೂ ಎಷ್ಟು ಬಾಕಿಯಿವೆ ಎಂದು ವಿಚಾರಿಸಿದ. ಅದಕ್ಕವರು ‘ಕಳೆದ ಮೂರು-ನಾಲ್ಕು ತಿಂಗಳುಗಳಿಂದ ನಿಮ್ಮ ಇಎಂಐಗಳನ್ನು ಕಟ್ಟಿಲ್ಲವಲ್ಲ, ನಾನೇ ನಿಮ್ಮನ್ನು ಸಂರ್ಪಸಬೇಕೆಂದಿದ್ದೆ’ ಎಂದು ಹೇಳಿ ಆತನ ಸಾಲದ ಬಾಕಿಯ ಬಗ್ಗೆ ವಿವರಗಳನ್ನು ಕೊಟ್ಟರು. ಭಾಸ್ಕರ್ ಹೌಹಾರಿದ. ಏಕೆಂದರೆ ಆತ ಸಾಲದ ಕಂತು ತುಂಬಲು ಪತ್ನಿಗೆ ಪ್ರತಿ ತಿಂಗಳೂ ಸಾಕಷ್ಟು ಹಣವನ್ನು ಕಳುಹಿಸಿಕೊಡುತ್ತಿದ್ದ. ಭಾಸ್ಕರ್ ಹೆಂಡತಿಯನ್ನು ವಿಚಾರಿಸಿದಾಗ ಆಕೆ ಹಾರಿಕೆಯ ಉತ್ತರಗಳನ್ನು ಕೊಡುವುದಲ್ಲದೆ ಅವನೊಡನೆ ಮಾತನಾಡುವುದನ್ನೇ ನಿಲ್ಲಿಸಿದಳು. ಇದರಿಂದ ಅನುಮಾನಗೊಂಡ ಭಾಸ್ಕರ್ ಪತ್ನಿಯ ಮೊಬೈಲ್ ಫೋನನ್ನು ಅವಳಿಗರಿವಿಲ್ಲದಂತೆ ತೆಗೆದು ನೋಡಿದಾಗ ಅದರಲ್ಲಿ ರಾಜೇಶ್ವರಿಯ ನಗ್ನಚಿತ್ರವಿತ್ತು. ಇದೇನಿದು ತನ್ನದೇ ನಗ್ನಚಿತ್ರವನ್ನು ಈಕೆ ಏಕಿಟ್ಟುಕೊಂಡಿದ್ದಾಳೆ ಎಂದು ಯೋಚಿಸತೊಡಗಿದಾಗ ಅದೇ ಫೋನಿನಲ್ಲಿಯೇ ನಿರಂಜನ ಭಟ್ಟನ ಚಿತ್ರವನ್ನೂ ಕಂಡ. ಇದರಿಂದ ಭಾಸ್ಕರನಿಗೆ ಪತ್ನಿಯ ನಡತೆ ಮೇಲೆ ಅನುಮಾನವುಂಟಾಯಿತು. ಆ ಫೋನನ್ನು ತನ್ನ ಬಳಿಯೇ ಇಟ್ಟುಕೊಂಡು ಪತ್ನಿ ವಾಪಸ್ ಮಾಡಲು ಕೋರಿದರೂ ಕೊಡಲಿಲ್ಲ.

ಪತ್ನಿ ನಿರಂಜನನಿಗೆ ಒಂದು ಫ್ಲಾಟನ್ನು ಬಳುವಳಿಯಾಗಿ ಕೊಟ್ಟಿರುವುದಲ್ಲದೆ, ಆತ ಖರೀದಿ ಮಾಡಿರುವ ಕಾರಿನ ಸಾಲದ ಕಂತುಗಳನ್ನೂ ಆಕೆಯೇ ತುಂಬುತ್ತಿರುವ ವಿಷಯ ಭಾಸ್ಕರನಿಗೆ ತಿಳಿಯಿತು. ಆಗ ಅವನಿಗೆ ಪತ್ನಿ ನಿರಂಜನನ ಜತೆಗೆ ಅನೈತಿಕ ಸಂಬಂಧವಿಟ್ಟುಕೊಂಡಿದ್ದಾಳೆ ಎಂದೆನಿಸಿ, ವಿವಾಹ ವಿಚ್ಛೇದನ ಪಡೆಯಲು ತೀರ್ವನಿಸಿದ. ಈ ವಿಷಯವನ್ನು ನವನೀತನಿಗೂ ತಿಳಿಸಿದ. ಆದರೆ ನವನೀತ ತಾಯಿಯ ಪರವಾಗಿದ್ದ. ಏಕೆಂದರೆ ರಾಜೇಶ್ವರಿ ಅವನ ಮನದಲ್ಲಿ ತಂದೆ ಬಗ್ಗೆ ದ್ವೇಷದ ಬೀಜವನ್ನು ಬಿತ್ತಿದ್ದಳು. ಏತನ್ಮಧ್ಯೆ ಭಾಸ್ಕರ್ ಅದೇ ಊರಿನಲ್ಲಿರುವ ಹಲವಾರು ಸ್ತ್ರೀಯರ ಜತೆಗೂ ಅನೈತಿಕ ಸಂಬಂಧವನ್ನು ಹೊಂದಿದ್ದಾನೆ ಎಂದು ರಾಜೇಶ್ವರಿಗೆ ಯಾರೋ ಹೇಳಿದರು. ಇದನ್ನು ಆಕೆ ನವನೀತನಿಗೆ ತಿಳಿಸಿದಾಗ ಆತ ಅಪ್ಪ ಫೋನಿನಲ್ಲಿ ಮಾತನಾಡುವ ಸಂಭಾಷಣೆಗಳನ್ನು ರೆಕಾರ್ಡ್ ಮಾಡಿಕೊಳ್ಳುವ ಪ್ರಯತ್ನ ಮಾಡಿದ. ಪತಿ-ಪತ್ನಿ ಇಬ್ಬರೊಳಗೆ ಕುದಿಯುತ್ತಿದ್ದ ದ್ವೇಷ 2016 ಜುಲೈ 9 ರಂದು ಆಸ್ಪೋಟಗೊಂಡು, ಮಾರಾಮಾರಿಯೇ ನಡೆಯಿತು. ರಾಜೇಶ್ವರಿ ಗಂಡನಿಗೆ, ‘ನೀನು ಬೇರೊಬ್ಬಳ ಸಂಗ ಬೆಳೆಸಿದ್ದೀಯೇ, ಅವಳಿಂದ ನಿನಗೆ ಮಗುವಾಗಿದೆ’ ಎಂದು ದೂಷಿಸಿದಳು. ಆ ಸಮಯದಲ್ಲಿ ನವನೀತ್ ಸಹ ಸ್ಥಳದಲ್ಲಿಯೇ ಇದ್ದು ತಾಯಿಯ ಪರ ವಹಿಸಿದ. ಇಬ್ಬರೂ ಪರಸ್ಪರರನ್ನು ನಿಂದಿಸಿದ ಬಳಿಕ ಒಬ್ಬರ ಮೇಲೊಬ್ಬರು ಹಲ್ಲೆ ನಡೆಸಿದರು. ಕೋಪಗೊಂಡ ಭಾಸ್ಕರ್, ‘ನಿಮಗೆ ಹಣದ ಮದ ಏರಿದೆ, ನಿಮ್ಮಿಬ್ಬರನ್ನು ಬೀದಿಯಲ್ಲಿ ನಿಲ್ಲಿಸುವೆ, ನನ್ನ ಎಲ್ಲ ಆಸ್ತಿಯನ್ನು ಅನಾಥಾಶ್ರಮಕ್ಕೆ ಬರೆಯುತ್ತೇನೆ’ ಎಂದು ಗದರಿದ. ಆನಂತರ ಪತಿ-ಪತ್ನಿಯರಿಬ್ಬರೂ ಬೇರೆ ಬೇರೆಯಾಗಿ ಪೊಲೀಸ್ ಠಾಣೆಗೆ ಹೋಗಿ ಪರಸ್ಪರರ ವಿರುದ್ಧ ದೂರುಗಳನ್ನು ಸಲ್ಲಿಸಿದರು. ಪೊಲೀಸರು ಇಬ್ಬರನ್ನೂ ಕರೆಸಿ ಬುದ್ಧಿವಾದ ಹೇಳಿ ರಾಜಿ ಮಾಡಿಸಿದರು.

(ಮುಂದುವರಿಯುವುದು) 

(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net