ನುಡಿದೀಪ | ಪರಮಹಂಸರು ಹೇಳಿದ ಗೋವಿನ ಕಥೆ…

Paramahamsa
Published on
ಅಹಂ ಬಗ್ಗೆ ಭಗವಾನ್ ಶ್ರೀ ರಾಮಕೃಷ್ಣ ಪರಮಹಂಸರು ಒಂದು ಸೊಗಸಾದ ಉದಾಹರಣೆಯ ಮೂಲಕ ಭಕ್ತರಿಗೆ ಅತ್ಯಂತ ಸ್ಪಷ್ಟವಾಗಿ ವಿವರಿಸುತ್ತಾರೆ.

ಗ್ರಾಮೀಣ ಭಾಗದ ಈ ಸುಂದರ ಉಪಮೆಯ ಮೂಲಕ ನಾನು ಎಂದು ಬೊಬ್ಬಿಡುವವರಿಗೆ ಮನವರಿಕೆ ಮಾಡಿಕೊಡುತ್ತಾರೆ. ಆ ಕಥೆ ಹೀಗಿದೆ: ಗೋವು ಅಂಬಾ ! ಅಂಬಾ! ಎಂದು ಕೂಗುತ್ತಿರುತ್ತದೆ. ಅಂದರೆ ನಾನು! ನಾನು! ಎಂದು. ಅದಕ್ಕಾಗಿಯೇ ಅದು ಈ ಜಗತ್ತಿನಲ್ಲಿ ಅಷ್ಟೊಂದು ದುಃಖ ದುರಿತಗಳಿಗೆ ಈಡಾಗುತ್ತಿರುವುದು. ಮಳೆ ಬಿಸಿಲೆನ್ನದೆ ಇಡೀ ದಿನವೆಲ್ಲಾ ನೇಗಿಲಿಗೆ ಹೆಗಲು ಕೊಡಬೇಕಾಗುತ್ತದೆ. ಜೊತೆಗೆ ಒಂದು ದಿನ ಕಟುಕ ಅದನ್ನು ಕತ್ತರಿಸಿ ಹಾಕುತ್ತಾನೆ.

ಅದರ ದುಃಖ ಅಲ್ಲಿಗೇ ಕೊನೆಯಾಗದು. ಚಮ್ಮಾರ ಅದರ ಚರ್ಮವನ್ನು ಹದ ಮಾಡಿ ಅದರಿಂದ ಪಾದರಕ್ಷೆಗಳನ್ನು ತಯಾರು ಮಾಡುತ್ತಾನೆ. ಕಟ್ಟಕಡೆಯಲ್ಲಿ ಅದರ ಚಿಕ್ಕ ಕರುಳಿನಿಂದ ಹುರಿ ತಯಾರಾಗುತ್ತದೆ. ಅದು ಹತ್ತಿ ಬಿಡಿಸುವವನ ಕೈಗೆ ಸಿಕ್ಕಿ, ಆತನ ಯಂತ್ರದಲ್ಲಿ ಸಿಲುಕಿ ಬಡಿದಾಗ ‘ತುಹ್ಞೂ! ತುಹ್ಞೂ!’ ಅಂದು ಬಡಿದಾಗಲೆಲ್ಲಾ ಶಬ್ದ ಮಾಡುತ್ತಿರುತ್ತದೆ. ‘ತುಹ್ಞೂ! ತುಹ್ಞೂ!’ ಅಂದರೆ ನೀನು, ನೀನು! ಎಂದರ್ಥ. ಆಗಲೇ ಅದರ ದುಃಖ ದುರಿತಗಳೆಲ್ಲಾ ಅಂತ್ಯವಾಗುತ್ತದೆ. ಈ ರೀತಿ ಉದಾಹರಣೆಯ ಮೂಲಕ ನಾನು, ನಾನು ಎಂಬುದು ನೀನು! ನೀನು! ಎಂದು ಹೇಳುವ ತನಕ ಪಡೆದ ದುಃಖ ದುರಿತಗಳು ಹೇಳತೀರದು.

ನಿಜ! ಸಾಮಾನ್ಯವಾಗಿ ನಾನು ನೀನು ಎಂಬ ಸತ್ಯ ಅರಿಯಲು ಅತ್ಯಂತ ಕಷ್ಟ. ಪರಮಹಂಸರು ಮಾತನ್ನು ಮುಂದುವರಿಸುತ್ತಾ ಅದೇ ರೀತಿಯಾಗಿ ಜೀವ ಯಾವಾಗ ‘ನಾಹಂ! ನಾಹಂ!’ ನಾನು ಏನೂ ಅಲ್ಲ; ಹೇ ಭಗವಂತ; ನೀನೇ ಕರ್ತ, ನಾನು ದಾಸ, ನೀನು ಪ್ರಭು ಅಂತ ಹೇಳುವುದೋ ಆಗ ಮಾತ್ರವೇ ಅದಕ್ಕೆ ಸಕಲ ದುಃಖ ದುರಿತಗಳಿಂದ ಬಿಡುಗಡೆ; ಆಗ ಮಾತ್ರವೇ ಅದಕ್ಕೆ ಮುಕ್ತಿ’ ಎನ್ನುತ್ತಾರೆ. ನಾವು ತಿಳಿದುಕೊಳ್ಳಬೇಕಾದ ಅಂಶವೆಂದರೆ ‘ನಾನು’ ಎಂಬ ಅಹಂ ಸಂಪೂರ್ಣ ಕಳೆದು ಹೋಗಿ ‘ನೀನು’ ಎಂಬುದು ಬರುವತನಕ ಅಧ್ಯಾತ್ಮದಲ್ಲಿಯೇ ಆಗಲಿ, ಜೀವನದಲ್ಲಿಯೇ ಆಗಲಿ ಖಂಡಿತಾ ಮುಂದುವರಿಯಲು ಸಾಧ್ಯವಿಲ್ಲ. ಪ್ರಾಪಂಚಿಕದಲ್ಲಿಯೂ ನಾವು ಸ್ಪಷ್ಟವಾಗಿ ಕಾಣಬಹುದು. ಒಬ್ಬ ಅಹಂಕಾರಿಯ ಜತೆ ವ್ಯವಹಾರವಿಟ್ಟುಕೊಂಡು ಕೆಲಸ ಮಾಡಲು ಸಾಧ್ಯವೇ? ಖಂಡಿತಾ ಇಲ್ಲ.

ಎಲ್ಲಿಯವರೆಗೆ ಅಹಂ ಎಂಬ ರಾಕ್ಷಸ ಅವನಲ್ಲಿದ್ದುಕೊಂಡು ಕಾರ್ಯನಿರ್ವಹಿಸುತ್ತಾನೆಯೋ ಅಲ್ಲಿಯ ವರೆಗೆ ನಾನು, ನಾನೇ ಸರ್ವಸ್ವ! ಎಂಬ ಅತ್ಯಂತ ಮದದಿಂದ ವ್ಯವಹರಿಸುತ್ತಾನೆ. ಅಲ್ಲಿ ಖಂಡಿತಾ ಶಾಂತಿ, ನೆಮ್ಮದಿ ಕಾಣಲು ಸಾಧ್ಯವಿಲ್ಲ. ಅದೇ ಮಾನವ ಎಲ್ಲ ತರಹದ ಅನುಭವಗಳನ್ನು ಈ ಜಗತ್ತು ತೋರಿದ ನಂತರ ‘ನಾ ಹಂ ಕರ್ತಾಃ ಹರಿಃ ಕರ್ತಾಃ’ ಎಂಬ ಶರಣಾಗತಿ ಎಂಬ ಸ್ತರದಲ್ಲಿ ಸ್ಥಾಪಿಸಲ್ಪಟ್ಟಾಗ ಸರ್ವಸ್ವವೂ ದೈವಮಯವಾಗಿ ಗೋಚರಿಸುತ್ತದೆ. ಆಗ ಆ ಮಾನವನಿಂದ ಈ ತೆರನಾದ ನುಡಿಗಳು ಹೊರಬರುತ್ತದೆ. ‘ತೇನ ವಿನಾ ತೃಣಮಪಿ ನ ಚಲತಿ’! - ಎಂತಹ ಅದ್ಭುತವಾದ ಅನುಭಾವ ನುಡಿಗಳಿವು. ಇದೇ ನಿಜವಾದ ಅರ್ಥದಲ್ಲಿ ಶರಣಾಗತಿ ಹೊಂದಿದ ಮನುಜರ ಮನಃಸ್ಥಿತಿ. ಇಲ್ಲಿ ವಿಶೇಷತೆ ಎಂದರೆ ಎಲ್ಲೋ ಕೆಲವರಿಗೆ ಮಾತ್ರ ನಿಜವಾದ ಶರಣಾಗತಿಯ ಅರಿವು ಇರುತ್ತದೆ. ಉಳಿದ ಮನುಜರಿಗೆ ಈ ಜಗತ್ತೇ ಪಾಠವನ್ನು ಕಲಿಸುತ್ತದೆ. ಅಂತ್ಯದಲ್ಲಿ ಗೋವಿನ ಉಪಮೆಯಂತೆ ‘ತುಹ್ಞೂ! ತುಹ್ಞೂ!’ ಎನ್ನುವ ಸ್ಥಿತಿಗೆ ಬರಲು ಅದೆಷ್ಟು ಪರಿತಪಿಸಬೇಕು,

ಅದೆಷ್ಟು ಜೀವನದಲ್ಲಿ ಪಾಠ ಕಲಿಯಬೇಕು? ಶರಣಾಗತಿ ಅಷ್ಟು ಸುಲಭವೇ? ದಿನ ನಿತ್ಯ ನಾವು ಕೇಳುವ ವಾಕ್ಯಗಳು ಹೀಗಿವೆ. ನಾನು ಕಲ್ಯಾಣೋತ್ಸವ ಮಾಡಿಸಿದೆ, ನಾನು ಈ ದಿನ ದೇವರಿಗೆ ಉಯ್ಯಾಲೋತ್ಸವ ಮಾಡಿಸಿದೆ, ನಾನೇ ರಥೋತ್ಸವ ಮಾಡಿಸಿದ್ದು! ಇತ್ಯಾದಿ ಇತ್ಯಾದಿ. ಈ ನಾನು ಹೇಗೆ ತಾನೇ ಅಷ್ಟು ಸುಲಭವಾಗಿ ಹೋದೀತು? ನಂತರ ನಮಗೆ ಕೇಳಿಸುವ ವಾಕ್ಯಗಳು ನಾನು ದೇವರಿಗೆ ವಜ್ರಖಚಿತ ಕಿರೀಟ ಮಾಡಿಸಿದೆ, ಕವಚ ಮಾಡಿಸಿದೆ ಇತ್ಯಾದಿ. ಆಗ ಭಗವಂತ ಈ ತೆರನಾದ ಅಹಂಕಾರಿ ವ್ಯಕ್ತಿಗಳಿಂದ ಶೃಂಗರಿಸಲ್ಪಡುತ್ತಾನೆಯೇ? ಖಂಡಿತಾ ಇಲ್ಲ. ಬದಲಾಗಿ ಶಬರಿ ಕಚ್ಚಿಟ್ಟ ಹಣ್ಣು ಸೇವಿಸುತ್ತಾನೆ, ಸುಧಾಮ ನೀಡಿದ ಅವಲಕ್ಕಿ ಸ್ವೀಕರಿಸುತ್ತಾನೆ. ಇಲ್ಲಿ ನಾನು ಎಂಬುದೇ ಇಲ್ಲ, ಕೇವಲ ಸ್ವಾಮಿ ನೀನು, ಎಲ್ಲಾ ನಿನ್ನದೇ ಎಂಬ ಶರಣಾಗತಿಯ ತತ್ತ್ವವನ್ನು ಕಾಣುತ್ತೇವೆ. ಆಗಲೇ ಅಧ್ಯಾತ್ಮ ಸ್ಪುರಣವಾಗುತ್ತದೆ. ಅಧ್ಯಾತ್ಮ ಪ್ರಗತಿಯುಂಟಾಗುತ್ತದೆ. ಇದೇ ನಿಜವಾದ ಅರ್ಥದಲ್ಲಿ ಶರಣಾಗತಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net