ನುಡಿದೀಪ; ಭಗವಂತನನ್ನು ಕಂಡವರು ಯಾರು?

Untitled-1
Published on
ಅದೊಂದು ಕಾರ್ಯಕ್ರಮ. ಪ್ರವಚನಕಾರರು ಪ್ರತಿನಿತ್ಯ ಭಗವಂತನನ್ನು ನಾನಾವಿಧದಲ್ಲಿ ವಿವರಿಸುತ್ತಿದ್ದರು. ಅದೊಂದು ದಿನ ಒಬ್ಬ ತರುಣ, ‘ನೀವು ದೇವರನ್ನು ತೋರಿಸುವಿರಾ?’ ಎಂದು ಪ್ರಶ್ನೆ ಹಾಕಿದ. ಮಾತ್ರವಲ್ಲ, ನಾನಾ ರೀತಿಯಲ್ಲಿ ನಿಂದಿಸತೊಡಗಿದ. ಈ ವಿಚಿತ್ರ ಹಾಗೂ ಅಯೋಮಯ ಸ್ಥಿತಿಯಲ್ಲಿ ಪ್ರವಚನಕಾರನು ‘ನಾನು ನಿನಗೆ ದೇವರನ್ನು ತೋರಿಸುತ್ತೇನೆ’ ಎಂದು ಈ ಸಂದರ್ಭದಿಂದ ತಕ್ಕಣಕ್ಕೆ ಬಚಾವಾದ. ಇಲ್ಲಿ ಯುವಕ ಹಾಗೂ ಪ್ರವಚನಕಾರ ಇಬ್ಬರಲ್ಲೂ ಒಂದು ರೀತಿಯ ಅಹಂ ಇತ್ತು. ಯಾರೂ ಸೋಲನ್ನು ಒಪ್ಪುವಂತಿರಲಿಲ್ಲ. ಆಧುನಿಕ ಪ್ರಪಂಚದಲ್ಲಿ ಈ ತೆರನಾದ ನಾನಾ ಘಟನೆಗಳು ಸಂಭವಿಸುತ್ತಿರುತ್ತವೆ. ಹಾಗಾದರೆ ಯಾರು ಬೇಕಾದರೂ ಭಗವಂತನನ್ನು ಕಾಣಬಹುದೇ? ಇದು ನಿಜವೇ? ಅಥವಾ ಭ್ರಮೆಯೇ? ಎಂಬ ಸಂದೇಹಗಳು ಬರುವುದು ಸಹಜ. ಇಲ್ಲಿ ಮತ್ತೊಂದು ಅಂಶವನ್ನು ಗಮನಿಸಲೇಬೇಕು. ಭಗವಂತನ ದರ್ಶನಕ್ಕಾಗಿ ವ್ಯಾಕುಲತೆಯಿಂದ ಅಹರ್ನಿಶಿ ಪ್ರಾರ್ಥಿಸುತ್ತಾ, ಆಸೆ, ಲಾಲಸೆಗಳ ಸುಳಿಯಿಂದ ಪಾರಾಗಿರುವವನಿಗೆ ಭಗವದ್ದರ್ಶನ ಖಂಡಿತಾ ಲಭ್ಯವಾಗುತ್ತದೆ. ಭಗವಾನ್ ಶ್ರೀರಾಮಕೃಷ್ಣ ಪರಮಹಂಸರ ಪ್ರಕಾರ ಆ ಪರಮ ಪದವನ್ನು, ಪರಮಾದ್ಭುತವನ್ನು, ಪರಮ ಶಕ್ತಿಯ ದರ್ಶನ ಪಡೆದ ನಂತರ ಆ ವ್ಯಕ್ತಿಯು ಈ ಜಗತ್ತಿಗೆ ಸಂಬಂಧವಿಲ್ಲದವನಂತೆ ಇದ್ದು ಇಡೀ ಜಗತ್ತು ಬ್ರಹ್ಮಮಯವಾಗಿ ಕಾಣುವ ಸ್ಥಿತಿಗೆ ಬಂದಿರುತ್ತಾನೆ- ಉಪ್ಪಿನ ಬೊಂಬೆ ಸಮುದ್ರದ ಆಳವನ್ನು ಅಳೆದಂತೆ!- ಅಂದರೆ, ಹೇಗೆ ಉಪ್ಪಿನ ಬೊಂಬೆ ಸಂಪೂರ್ಣ ಸಮುದ್ರದಲ್ಲಿ ಲೀನವಾಗಿ ಬಿಡುತ್ತದೆಯೋ ಹಾಗೆಯೇ ಬ್ರಹ್ಮಾನಂದ ವನ್ನು ಅನುಭವಿಸಿದ ಬ್ರಹ್ಮಜ್ಞ ಪುರುಷ ಆ ಬ್ರಹ್ಮನಲ್ಲಿಯೇ ಲೀನವಾಗಿಬಿಡುತ್ತಾನೆ ಎಂದರ್ಥ.

ಹಾಗಾದರೆ ಹುಲುಮಾನವ ಭಗವದ್ದರ್ಶನ ಪಡೆಯಲು ಅಸಾಧ್ಯವೇ?. ಖಂಡಿತ ಸಾಧ್ಯ. ಆದರೆ ದೇವರನ್ನು ದರ್ಶಿಸಲು ನೀನು ಮೊದಲು ದೈವತ್ವವನ್ನು ಪಡೆಯಬೇಕು. ಪ್ರಾಪಂಚಿಕ ಚಕ್ಷುಗಳಿಂದ ಅನಿರ್ವಚನೀಯ, ಅಗೋಚರ ಶಕ್ತಿಯ ದರ್ಶನ ಪಡೆಯಲಾಗದು. ಆ ದಿವ್ಯ ದರ್ಶನ ಪಡೆದವನು ಪೂರ್ಣ ಪ್ರಜ್ಞನಾಗಿ ಸದಾ ಭಗವದ್ ಆನಂದ ಸಾಗರದಲ್ಲಿ ತನ್ನ ಜೀವನವನ್ನು ಕಳೆಯುತ್ತಿರುತ್ತಾನೆ. ಉದಾಹರಣೆಗೆ : ಸದಾಶಿವ ಬ್ರಹ್ಮೇಂದ್ರ ಯತಿ, ತ್ಯಾಗರಾಜರು, ದಾಸವರೇಣ್ಯರು ಇತ್ಯಾದಿ.

ನಾಲ್ಕು ಜನ ಕುರುಡರು ಒಂದು ಆನೆಯನ್ನು ನೋಡಿದ ಉದಾಹರಣೆ ಜನಜನಿತ. ಆ ನಾಲ್ವರು ತಮಗೆ ಕಂಡ ರೀತಿಯಲ್ಲಿ ಆನೆಯನ್ನು ಬಣ್ಣಿಸುತ್ತಾರೆ. ಆ ಕುರಿತು ತಮ್ಮಲ್ಲಿಯೇ ವಾದ ಮಾಡ ತೊಡಗುತ್ತಾರೆ. ದಾರಿಹೋಕನೊಬ್ಬನಲ್ಲಿ ತಮ್ಮ ವಾದವನ್ನೆಲ್ಲ ಹೇಳಿ ಸರಿಯಾದ ತೀರ್ಪನ್ನು ಕೊಡುವಂತೆ ಕೇಳಿಕೊಳ್ಳುತ್ತಾರೆ. ಅವನು ನಿಮ್ಮಲ್ಲಿ ಯಾರೂ ಕೂಡ ಆನೆಯನ್ನು ಅರಿತಿಲ್ಲ, ಆನೆ ಕಂಬದಂತಿಲ್ಲ; ಅದರ ಕಾಲು ಕಂಬದಂತಿದೆ. ಅದು ಮೊರದಂತಿಲ್ಲ; ಅದರ ಕಿವಿ ಮೊರದಂತಿದೆ; ಅದು ಗದೆಯಂತಿಲ್ಲ; ಅದರ ಸೊಂಡಿಲು ಗದೆಯಂತಿದೆ. ಆನೆಯು ಕಾಲು, ಕಿವಿ, ಹೊಟ್ಟೆ, ಸೊಂಡಿಲು ಇವುಗಳೆಲ್ಲವನ್ನೂ ಕೂಡಿಕೊಂಡಿದೆ

ಎಂದು ತಿಳಿಸುತ್ತಾನೆ. ಭಗವಂತನನ್ನು ರ್ಚಚಿಸುವವರೆಲ್ಲಾ ಆ ಕುರುಡರಂತೆ ಭಗವಂತನ ಯಾವುದೋ ಒಂದು ಅಂಶಕ್ಕೆ ಸೀಮಿತವಾಗಿ ಅರಿತಿರುತ್ತಾರೆ. ಈ ಉದಾಹರಣೆಯ ಮೂಲಕ ಆ ದಿವ್ಯವಾದ ಅನಿರ್ವಚನೀಯ ಭಗವಂತನನ್ನು ತಿಳಿಯುವ ಬಗ್ಗೆ ರಾಮಕೃಷ್ಣರು ಅರಿವನ್ನು ಮೂಡಿಸುತ್ತಾರೆ.

ಈ ಜಗತ್ತಿನಲ್ಲಿ ನಮ್ಮದೇ ಮೇಲು, ಹೆಚ್ಚು, ನಾವು ಎಲ್ಲರಿಗಿಂತಲೂ ಮೇಲ್ಪಂಕ್ತಿಯವರು ಎಂದು ಬೊಬ್ಬಿಡುವ ಜನರಿಗೇನು ಕಡಿಮೆಯಿಲ್ಲ. ಈ ರೀತಿಯ ಸಂಕುಚಿತ ಭಾವನೆಯುಳ್ಳವರಿಗೆ ಪರಮಹಂಸರು ಬಾವಿಯೊಳಗಿನ ಕಪ್ಪೆಯ ಉದಾಹರಣೆಯ ಮೂಲಕ ಅರಿವು ಮೂಡಿಸುತ್ತಾರೆ. ಇದು ಕೂಡ ಜನಜನಿತವೇ. ಕಪ್ಪೆ ವಾಸಿಸುತ್ತಿದ್ದ ಬಾವಿಗೆ ಸಮುದ್ರದಿಂದ ಬಂದ ಕಪ್ಪೆಯೊಂದು ಬಿತ್ತು. ಹೊಸಕಪ್ಪೆ ಸಮುದ್ರದ ವಿಸ್ತಾರವನ್ನು ಎಷ್ಟು ವಿವರಿಸಿದರೂ ಬಾವಿಯ ಕಪ್ಪೆ ನಂಬಲಿಲ್ಲ. ನನ್ನ ಬಾವಿಗಿಂತ ದೊಡ್ಡದಾಗಿ ಯಾವುದೂ ಇರಲಾರದು. ಇವನು ಸುಳ್ಳುಗಾರ, ಇವನನ್ನು ಹೊರದಬ್ಬಬೇಕು ಎಂದೇ ಅದು ಯೋಚಿಸಿತು.

ಇದೇ ತೆರನಾಗಿ ಎಲ್ಲ ಮತಭ್ರಾಂತರೂ ಹೀಗೆಯೇ ತಮ್ಮ ಕೂಪಗಳಲ್ಲಿ ಕುಳಿತು ಪ್ರಪಂಚದಲ್ಲಿ ತಮ್ಮ ವಿಚಾರ, ಅನುಭವಕ್ಕಿಂತ ಬೇರೆ ಯಾವುದೂ ಇಲ್ಲವೆನ್ನುತ್ತಾರೆ. ಹಾಗೆಯೇ ಭಗವಂತನ ದರ್ಶನದ ಬಗ್ಗೆಯೂ ಚಿತ್ರ-ವಿಚಿತ್ರ ಉತ್ತರಗಳನ್ನು, ಅಲ್ಪತನವನ್ನು ಪ್ರದರ್ಶಿಸುತ್ತಾರೆ. ಆದರೆ ಪರಮಹಂಸರ ಪ್ರಕಾರ ಆ ದಯಾಮಯ ನಾದ ಪರಬ್ರಹ್ಮ ಎಲ್ಲರಿಗೂ ದರ್ಶನ ನೀಡುತ್ತಾನೆ. ಅದು, ಅಹರ್ನಿಶಿ ವ್ಯಾಕುಲತೆಯಿಂದ ಪ್ರಾರ್ಥಿಸಿ, ಶರಣಾಗತಿ ಹೊಂದುವವರಿಗೆ, ಶುದ್ಧ ಹೃದಯ, ಶುದ್ಧ ಭಕ್ತಿ ಹಾಗೂ ಶುದ್ಧ ಮನಸ್ಸನ್ನು ಹೊಂದಿರುವವರಿಗೆ ಮಾತ್ರ. ಇದೇ ಪೂರ್ಣ ಅಧ್ಯಾತ್ಮ ಗುರಿಯ ಮುಖ್ಯ ಅಂಶ. ಉಳಿದಿದ್ದೆಲ್ಲವೂ ಗೌಣ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net