ವೇದನೆ, ಹೊರೆ ತ್ಯಜಿಸಿ ಜೀವನವನ್ನು ಪ್ರೀತಿಸಿ

amruthadhare-6757973375c5a
Published on

(ಸದ್ಗುರು ಅವರು ಯೋಗಿ, ದಾರ್ಶನಿಕ, ಆಧ್ಯಾತ್ಮಿಕ ನಾಯಕ. www.isha.sadhguru.org)

ನಾಳೆ ಎಂಬುದು ವಾಸ್ತವವಾಗಿ ಎಂದೂ ಬಾರದಂತಹ ದಿನ, ಅಲ್ಲವೇ? ದೇಹಾರೋಗ್ಯವನ್ನು, ಗೆಲುವನ್ನು, ಆನಂದವನ್ನು ನಿಮ್ಮ ಜೀವನಕ್ಕೆ ಬೇಕಾಗಿರುವುದನ್ನು ‘ನಾಳೆ ಬಾ’ ಎಂದು ಹೇಳಿದರೆ ಅವು ಸಂತೋಷವಾಗಿ ಮುಂದಕ್ಕೆ ಹೋಗಿಬಿಡುತ್ತವೆ. ಎಚ್ಚರದಿಂದಿರಿ. ನಾಳೆ ಎಂಬುದನ್ನು ನಾವು ಭೇಟಿ ಮಾಡುವುದೇ ಇಲ್ಲ. ಈ ದಿನವನ್ನು ಮಾತ್ರ ನಾವು ನೋಡುವುದು.

ಶಂಕರನ್ ಪಿಳ್ಳೆಯ ಹೆಂಡತಿ ದೇಹವೆಲ್ಲ ನೋಯುತ್ತಿದೆಯೆಂದು ಡಾಕ್ಟರ್ ಬಳಿ ಬಂದಿದ್ದಳು. ‘ನೋಯುವುದು ಎಲ್ಲಿ?’ ಡಾಕ್ಟರು ಕೇಳಿದರು. ‘ಇಲ್ಲಿ’ ಎಂದು ಆಕೆ ತನ್ನ ಬೆರಳಿನಿಂದ ಮೊಣಕಾಲನ್ನು ತಡವಿ ತೋರಿಸಿದಳು, ನೋವಿನಿಂದ ಅಯ್ಯೋ ಎಂದಳು. ನಂತರ ತನ್ನ ತೋಳನ್ನು ಮುಟ್ಟಿ ಇಲ್ಲಿಯೂ ಎಂದು ನರಳಿದಳು. ಹೀಗೆ ದೇಹದ ಬೇರೆ-ಬೇರೆ ಭಾಗಗಳನ್ನು ಅದೇ ಬೆರಳಿನಿಂದ ಮುಟ್ಟಿತೋರಿಸುತ್ತ ನೋವನ್ನು ತಾಳಲಾರದೆ ಅರಚಿದಳು. ಡಾಕ್ಟರು ತಲೆ ಚಚ್ಚಿಕೊಂಡರು. ‘ನೋವು ನಿಮ್ಮ ಶರೀರದಲ್ಲೆಲ್ಲೂ ಇಲ್ಲ. ಪ್ರತಿಯೊಂದು ಭಾಗವನ್ನು ಮುಟ್ಟಿ ತೋರಿಸಲು ಬಳಸಿಕೊಂಡಿರಲ್ಲ, ಆ ಬೆರಳಿನಲ್ಲಿದೆ’ ಎಂದರು. ನೋಯುವ ಬೆರಳನ್ನು ಬಳಸಿಕೊಂಡು ಯಾವುದನ್ನು ಮುಟ್ಟಿದರೂ ಅದು ನೋಯುವಂತೆ ತೋರುತ್ತದೆ. ವಯಸ್ಸಾಗಿದೆಯೆಂದು ಭಾವಿಸಿ ಯಾವುದನ್ನು ಮಾಡಿದರೂ ಅದು ಕಳೆದುಕೊಂಡಂತೆಯೇ ತೋರುತ್ತದೆ.

ವಯಸ್ಸಾಗದೆ ಯೌವನದಲ್ಲಿಯೇ ಇರುವುದು ಹೇಗೆ?

ಉಸಿರಾಡಿದ ಗಾಳಿ, ಕುಡಿದ ನೀರು, ಸೇವಿಸಿದ ಆಹಾರ ಇವುಗಳ ಸಂಗ್ರಹವೇ ದೇಹ. ಅಗತ್ಯ ಇಲ್ಲವೆಂದು ಒಂದು ದಿನವೂ, ಶೇಖರಿಸುವುದನ್ನು ನಿಲ್ಲಿಸಲಾರಿರಿ. ಆದ್ದರಿಂದ ದಿನವೊಂದು ಕಳೆದರೆ ಅದರ ವಯಸ್ಸಿನಲ್ಲಿ ಒಂದು ದಿನ ಸೇರುತ್ತದೆ. ದೇಹವನ್ನು ಆರೋಗ್ಯಕರವಾಗಿ ಇರಿಸಿಕೊಳ್ಳಬಹುದೇ ಹೊರತು ಅದರ ವಯಸ್ಸಿನಲ್ಲಿ ಒಂದು ದಿನವನ್ನು ಸಹ ಸೆಳೆದುಕೊಳ್ಳಲಾಗುವುದಿಲ್ಲ.

ಮನಸ್ಸನ್ನು ಎಲ್ಲಿಂದ ಪಡೆದಿರಿ?

ಹುಟ್ಟಿದಂದಿನಿಂದ ನಿಮ್ಮ ಮೇಲೆ ಬೀಸಿಬಂದು ಬಿದ್ದ ಸುತ್ತಲಿನ ವಿಷಯಗಳು, ಕಲಿತ ಪಾಠಗಳು, ತಿಳಿದುಕೊಂಡ ವಿಚಾರಗಳು, ಪಡೆದ ಅನುಭವಗಳು, ಸಮಾಜದಿಂದ ಹೊರಿಸಲಾದ ವಿಚಾರಗಳು, ಎಲ್ಲವನ್ನೂ ಶೇಖರಿಸಿದ ಕಸದ ತೊಟ್ಟಿಯಾಗಿದೆ ಮನಸ್ಸು. ಎಲ್ಲವನ್ನೂ ಇರಿಸಿಕೊಂಡೇ ತೀರಬೇಕೆಂಬ ನಿರ್ಬಂಧವೇನೂ ಇಲ್ಲ. ಯಾವುದನ್ನು ಬಿಟ್ಟುಬಿಡಬಹುದೆಂಬುದು ನಿಮ್ಮ ಕೈಯಲ್ಲಿಯೇ ಇದೆ. ಶೇಖರಿಸಿ ಇಟ್ಟಿರುವ ಎಲ್ಲವನ್ನೂ ಒಂದೇ ಕ್ಷಣದಲ್ಲಿ ಬೇಕಾದರೆ ಉದುರಿಸಿಬಿಡಬಹುದು. ಅಗತ್ಯವಿಲ್ಲದ್ದನ್ನು ತೊರೆದು ಮನಸ್ಸನ್ನು ಪ್ರತಿದಿನವೂ ಹೊಸದಾಗಿ ಹುಟ್ಟುವಂತೆ ಮಾಡುವ ಸ್ವಾತಂತ್ರ್ಯವನ್ನು, ಅದರ ವಯಸ್ಸು ಏರದಂತೆ ಎಂದೆಂದಿಗೂ ಯೌವನದಿಂದ ಇರಿಸಿಕೊಳ್ಳುವಂತಹ ಅವಕಾಶವನ್ನು ನಿಮಗೆ ನೀಡಲಾಗಿದೆ.

ಕ್ರಮಬದ್ಧವಾದ ಯೋಗದಿಂದ ಇದು ಸಾಧ್ಯ, ಮರೆಯದಿರಿ. ಆದರೆ ಗಮನವಿರಿಸಿಕೊಂಡು, ಹಳೆಯ ಕಸವನ್ನು ಆಗಾಗ ಬಿಸಾಡುತ್ತಿರುವವನಿಗೆ, ತನ್ನನ್ನು ಸದಾ ಭಾರವಿಲ್ಲದವರಂತೆ ಭಾವಿಸಿಕೊಳ್ಳುವವರಿಗೆ ವಯಸ್ಸು ಹೆಚ್ಚುತ್ತಿರುವಂತೆ ಕಂಡುಬರುವುದಿಲ್ಲ.

ಹೊರೆಗಳು ಏತಕ್ಕಾಗಿ ಹೆಚ್ಚಾಗುತ್ತವೆ?

ಒಂದನ್ನು ಕೊಟ್ಟು ಅದಕ್ಕಿಂತಲೂ ಚೆನ್ನಾಗಿರುವುದೊಂದನ್ನು ಪಡೆಯುವುದು ಹೇಗೆ ಎಂದು ಮನಸ್ಸು ಯಾವಾಗಲೂ ಲೆಕ್ಕ ಹಾಕುತ್ತಿರುತ್ತದೆ. ಜೀವನವನ್ನು ಹೊರಗಡೆಯಿಂದ ವೇದನೆಯೊಂದಿಗೆ ನೋಡುವುದನ್ನು ನಿಲ್ಲಿಸಿ. ಹೊರೆಗಳನ್ನು ತ್ಯಜಿಸಿ ಜೀವನವನ್ನು ಪ್ರೀತಿಯಿಂದ ರುಚಿಸಿ ಬದುಕಿ ನೋಡಿ. ನಂತರ ಜೀವನ ತಾನಾಗಿಯೇ ನಿಮ್ಮನ್ನು ಎಳೆತನದಲ್ಲಿ, ಕೋಮಲವಾಗಿ, ಮಧುರವಾಗಿ ಇರಿಸುತ್ತದೆ.

ದೇಹವನ್ನು ಚೆನ್ನಾಗಿ ಇರಿಸಿಕೊಳ್ಳಬೇಕೆಂಬ ಉದ್ದೇಶದಿಂದ ಕೆಲವರು ಯೋಗವನ್ನು ಕಲಿಯಲು ಬರುತ್ತಾರೆ. ಕೆಲವರು ಬೆಳಗ್ಗೆ ವಾಕ್ ಮಾಡಲು ಮುಂದಾಗುತ್ತಾರೆ. ಮತ್ತೆ ಕೆಲವರು ಬೇರೆ ರೀತಿಯಲ್ಲಿ ದೇಹಕ್ಕೆ ವ್ಯಾಯಾಮ ಕೊಡಲು ಬಯಸುತ್ತಾರೆ. ಆದರೆ, ಕಲಿತದ್ದನ್ನು ಸರಿಯಾಗಿ ತಪ್ಪದೆ ಮಾಡುತ್ತಾರೆಯೆ ಎಂಬುದನ್ನು ನೋಡಿದಾಗ, ಅದು ಹಾಗಿರುವುದಿಲ್ಲ. ಅವರನ್ನೇ ಕೇಳಿ ನೋಡಿ: ‘ಈವತ್ತು ಸುಸ್ತಾಗಿತ್ತು. ನಾಳೆಯಿಂದ ತಪ್ಪದೆ ಮಾಡುತ್ತೇನೆ’ ಎಂದು ಹೇಳುತ್ತಾರೆ. ನಿಜವಾಗಿಯೂ ನಾಳೆ ಇವರು ವಾಕಿಂಗ್ ಹೋಗುತ್ತಾರೆಯೆ? ಯೋಗಾಭ್ಯಾಸ ಮಾಡುತ್ತಾರೆಯೆ? ಅಂತಹ ಅವಕಾಶವೇ ಇರುವುದಿಲ್ಲ.

ನೀವು ಭಾವಿಸಿದಂತೆ ಏನನ್ನೂ ಮಾಡದೆ ಸೋಮಾರಿತನದಿಂದ ಕುಳಿತುಕೊಂಡಿದ್ದರೆ ‘ಅದೇನು ಸೋಮಾರಿತನದಿಂದ ಕುಳಿತಿದ್ದೀಯೆ? ಎದ್ದೇಳು’ ಎಂದು ನಿಮ್ಮ ಮನಸ್ಸೇ ತಪ್ಪುಭಾವನೆ, ಪಾಪಪ್ರಜ್ಞೆಯೊಂದಿಗೆ ನಿಮ್ಮನ್ನು ಕೇಳುತ್ತದೆ, ಮುಂದೆ ಹೋಗಲು ಅಟ್ಟುತ್ತದೆ. ಜವಾಬ್ದಾರಿ ಇಲ್ಲದೆ ಇದ್ದೇನೆ ಎಂದು ಒಪ್ಪಿಕೊಳ್ಳಲು ನಿಮ್ಮ ಅಹಂಕಾರ ಎಂದಿಗೂ ಅವಕಾಶವನ್ನು ನೀಡುವುದಿಲ್ಲ. ‘ನಾನೇನು ಸೋಮಾರಿಯಲ್ಲ. ನಾಳೆಯಿಂದ ಶುರು ಮಾಡೋಣ ಎಂದುಕೊಂಡಿದ್ದೇನೆ’ ಎಂದು ಸ್ವಪ್ರತಿಷ್ಠೆಯನ್ನು ಮುಂದು ಮಾಡಿಕೊಂಡು ಸಮಾಧಾನಗೊಳ್ಳುತ್ತೀರ.

ನಮ್ಮ ರಾಜ್ಯದ ಕೆಲವು ಹಳ್ಳಿಗಳಲ್ಲಿ ಒಂದು ನಂಬಿಕೆಯಿದೆ. ಸೂರ್ಯ ಮುಳುಗಿದ ನಂತರ ಆ ಭಾಗದಲ್ಲಿರುವ ದೆವ್ವ, ಪಿಶಾಚಿಗಳು ಮನೆಗಳೊಳಗೆ ನುಗ್ಗುವ ಸನ್ನಾಹದಲ್ಲಿ ಇರುತ್ತವಂತೆ. ಈ ದೆವ್ವಗಳನ್ನು ಹೊಡೆದೋಡಿಸಲು ಪ್ರಯತ್ನಿಸಿದರೆ ಅವುಗಳಿಗೆ ಕೋಪ ಬಂದು, ಕಷ್ಟಕರವಾದ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ ಎಂದು ಅಲ್ಲಿನ ಜನರಿಗೆ ಭಯ. ಆದರೆ, ಅವರು ಒಂದು ಉಪಾಯ ಮಾಡಿದ್ದಾರೆ. ದೆವ್ವಗಳಿಗೆ ರಕ್ತದ ಬಣ್ಣ ಹಿಡಿಸುತ್ತದೆ ಎಂದು ಒಂದು ನಂಬಿಕೆ ಇರುವುದರಿಂದ, ಅಂತಹ ಕೆಂಪು ಬಣ್ಣದಲ್ಲಿ ಪ್ರತಿಯೊಂದು ಮನೆಯ ಬಾಗಿಲಿನ ಮೇಲೆ ‘ನಾಳೆ ಬಾ’ ಎಂದು ಬರೆದು ಬಿಡುತ್ತಾರೆ.

ಏಕೆಂದು ಕೇಳಿದರೆ ದೆವ್ವಗಳು, ಪಿಶಾಚಿಗಳು ಯಾವಾಗಲೇ ಬರಲಿ, ಬಾಗಿಲಲ್ಲಿರುವ ಈ ಮಾತನ್ನು ಓದಿಕೊಂಡು ಹಿಂತಿರುಗಿ ಬಿಡುತ್ತವೆ ಎನ್ನುತ್ತಾರೆ. ಈ ದಿನ ಎಂದಾಗಲೀ, ಈಗ ಎಂದಾಗಲೀ ಹೇಳಿದರೆ ಅದನ್ನು ಕೂಡಲೇ ಮಾಡಬೇಕಾದ ಅಗತ್ಯ ಬರುತ್ತದೆ. ನಾಳೆ ಎಂಬುದು ವಾಸ್ತವವಾಗಿ ಎಂದೂ ಬಾರದಂತಹ ದಿನ, ಅಲ್ಲವೇ ದೇಹಾರೋಗ್ಯವನ್ನು, ಗೆಲುವನ್ನು, ಆನಂದವನ್ನು ನಿಮ್ಮ ಜೀವನಕ್ಕೆ ಬೇಕಾಗಿರುವುದನ್ನು ‘ನಾಳೆ ಬಾ’ ಎಂದು ಹೇಳಿದರೆ ಅವು ಸಂತೋಷವಾಗಿ ಮುಂದಕ್ಕೆ ಹೋಗಿಬಿಡುತ್ತವೆ. ಎಚ್ಚರದಿಂದಿರಿ.

ನಾಳೆಯಿಂದ... ಎಂಬುದು ಮನಸ್ಸಿನೊಳಗೆ ಹರಿದಾಡುವ ಬಹಳ ಆಳವಾದ ಒಂದು ತಂತ್ರ. ಜೀವನದ ಹಲವು ಘಟ್ಟಗಳಲ್ಲಿ ಈ ಮಾಯಾತಂತ್ರಕ್ಕೆ ನೀವಾಗಿಯೇ ಅವಕಾಶವನ್ನು ಕೊಟ್ಟುಬಿಟ್ಟಿದ್ದೀರಿ. ಮಾಡಬೇಕಾಗಿರುವುದನ್ನು ಮಾಡದೆ ಇರುವಂತಹವರಿಗೆ, ನಾಳೆ ಎಂಬುದು ಯಾವಾಗಲೂ ಒಳ್ಳೆಯ ದಿನ. ನಾಳೆ ಎಂದು ಹೇಳಿದರೆ ಅಲ್ಲಿಗೆ ಅಂದಿನ ಜವಾಬ್ದಾರಿ ಮುಗಿಯುತ್ತದೆ. ಹೀಗೆ ಪ್ರಾರಂಭಿಸಿದ ಕೆಲಸಗಳನ್ನು ಮುಂದೂಡುವುದು ಒಂದು ಬಗೆಯ ತೀರ್ಮಾನವೆಂದು ಲೋಕಸಭೆಯವರೆಗೂ ಅಭ್ಯಾಸವಾಗಿ ಹೋಗಿರುವುದೇ ದುಃಖಕರವಾದ ಸಂಗತಿ. ಇದನ್ನು ಅರ್ಥಮಾಡಿಕೊಳ್ಳಿ. ನಾಳೆ ಎಂಬುದನ್ನು ನಾವು ಭೇಟಿ ಮಾಡುವುದೇ ಇಲ್ಲ. ಈ ದಿನವನ್ನು ಮಾತ್ರ ನಾವು ನೋಡುವುದು. ಈ ದಿನ ಎಂಬುದನ್ನು ಬಿಟ್ಟು ನಾಳೆ ಎಂಬುದು ನಮ್ಮ ಜೀವನದಲ್ಲಿ ಎಂದಿಗೂ ಇಲ್ಲ.

ಶಂಕರನ್ ಪಿಳ್ಳೆ ಕಾರ್ ಮೆಕ್ಯಾನಿಕ್ ಬಳಿಗೆ ಹೋದರು. ‘ನನ್ನ ಕಾರಿನ ಹಾರ್ನ್ ಮತ್ತಷ್ಟು ಏರುಧ್ವನಿಯಲ್ಲಿ ಜೋರಾಗಿ ಬರುವಂತೆ ಬದಲಾಯಿಸಿಕೊಡಲು ಸಾಧ್ಯವೆ?’ ಎಂದು ಕೇಳಿದರು. ‘ಹಾರ್ನ್ ಸರಿಯಾಗಿ ಇದೆಯಲ್ಲವೆ?’ ಎಂದನು ಮೆಕ್ಯಾನಿಕ್. ‘ಬ್ರೇಕ್ ಹಿಡಿಯುತ್ತಿಲ್ಲ. ಅದನ್ನು ರಿಪೇರಿ ಮಾಡುವುದಕ್ಕಿಂತ ಹಾರ್ನ್ ಶಬ್ದವನ್ನು ಜಾಸ್ತಿ ಮಾಡಲು, ಕಡಿಮೆ ಚಾರ್ಜು ತಾನೆ ಆಗುತ್ತದೆ? ಆದ್ದರಿಂದ ಕೇಳಿದೆ’ ಎಂದರು ಶಂಕರನ್ ಪಿಳ್ಳೆ. ನಾಳೆ ಎಂಬುದು, ಬ್ರೇಕ್ ಸರಿ ಮಾಡಬೇಕಾದ ಸಂದರ್ಭದಲ್ಲಿ ಅದನ್ನು ಬಿಟ್ಟು ಹಾರ್ನ್ ಶಬ್ದ ಮಾಡಿ ಜನರನ್ನು ಪಕ್ಕಕ್ಕೆ ಸರಿಯಿರಿ ಎಂದು ಹೇಳಿದಂತಾಗುತ್ತದೆ. ಅಪಘಾತವನ್ನು ಯಾವಾಗ ಬೇಕಾದರೂ ಭೇಟಿ ಮಾಡಲು ಸಾಧ್ಯವಾಗುತ್ತದೆ.

ಇಂತಹ ಪರಿಸ್ಥಿತಿಯನ್ನು ಹೇಗೆ ಬದಲಾಯಿಸುವುದು?

ಮನೆ ಕೆಲಸವಾದರೂ ಸರಿಯೆ, ಒಂದು ಉದ್ದಿಮೆಯನ್ನು ನಡೆಸುವುದಾದರೂ ಸರಿಯೆ, ನಮ್ಮ ಆರೋಗ್ಯಕ್ಕಾಗಿ ಮಾಡುವ ದೈಹಿಕ ವ್ಯಾಯಾಮಗಳಾದರೂ ಸರಿಯೆ, ಅದಕ್ಕೆ ಸಾಧಕವಾದ ಸನ್ನಿವೇಶವನ್ನು ಮೊದಲು ಸೃಷ್ಟಿಸಿಕೊಳ್ಳಬೇಕು. ರಾತ್ರಿ ಹತ್ತು ಗಂಟೆಯಾದ ನಂತರ ಹೊಟ್ಟೆ ತುಂಬಿಸಿಕೊಳ್ಳಲು ದೋಸೆಯನ್ನು ತಿಂದಿರಿ. ಬೆಳಗ್ಗೆ ಆರು-ಏಳು ಗಂಟೆಗೆ ಯೋಗವನ್ನು ಮಾಡಬೇಕು. ವಾಕ್ ಹೋಗಬೇಕೆಂದರೆ ದೇಹ ಹೇಗೆ ತಾನೆ ಹೊಂದಿಕೊಳ್ಳುತ್ತದೆ? ಬೆಳಗ್ಗೆ ನಾಲ್ಕು ಗಂಟೆಗೆ ಎಚ್ಚರವಾಗುವಂತೆ ಕಡಿಮೆ ಪ್ರಮಾಣದಲ್ಲಿ ಆಹಾರ ಸೇವನೆ ಮಾಡಿ ನೋಡಿ, ನಿಮಗೆ ಆಗ ತಾನಾಗಿಯೇ ಎಚ್ಚರವಾಗುವುದು. ಯೋಗವನ್ನು ಮಾಡಬಹುದು. ವಾಕ್ ಹೋಗಲು ದೇಹವೇ ಹೇಳುತ್ತದೆ.

ಕೆಲವು ದಿನಗಳು ಹೀಗೆಯೇ ಮಾಡುತ್ತ ಬಂದರೆ ಅದರ ಪ್ರತಿಫಲ ನಿಮಗೆ ತಿಳಿಯುತ್ತದೆ. ನಂತರ ನಿಮಗೆ ಯಾರೂ ಅದನ್ನು ಒತ್ತಿ ಹೇಳಬೇಕಾದ ಪ್ರಮೇಯವೇ ಇರುವುದಿಲ್ಲ. ಒಳಗೆ ಮನೋನಿಶ್ಚಯ, ಹೊರಗೆ ಸೂಕ್ತ ಸನ್ನಿವೇಶ ಇವೆರಡನ್ನೂ ಸೃಷ್ಟಿಸಿಕೊಂಡರೆ ಆಸೆಪಟ್ಟು ಬಯಸಿದ್ದನ್ನು ಮುಂದಕ್ಕೆ ಹಾಕದೆ ಪೂರ್ತಿಗೊಳಿಸುವ ಮನೋಬಲ ನಮಗೆ ತಾನೇತಾನಾಗಿ ಲಭಿಸುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net