

| ಸುಷ್ಮ ಸಿಂಧು, ಮನಃಶಾಸ್ತ್ರಜ್ಞೆ
ನಮ್ಮ ಮನೆಯ ಪುಟ್ಟ ಹೆಣ್ಣುಮಕ್ಕಳು ಸೆಲೆಬ್ರಿಟಿಗಳನ್ನೂ ಮೀರಿಸುವಂತೆ ಬಳುಕುತ್ತಾ ನೃತ್ಯ ಮಾಡುತ್ತಾರೆ, ನಾಲ್ಕು ಮಂದಿ ಚಪ್ಪಾಳೆ ತಟ್ಟುವಂತೆ ಡೈಲಾಗ್ ಹೊಡೆಯುತ್ತಾರೆ, ತಲೆದೂಗುವಂತೆ ಮೇಕಪ್ ಮಾಡಿಕೊಂಡು ಕಲ್ಪನೆಯ ರ‍್ಯಾಂಪ್ ವಾಕ್ ಮಾಡುತ್ತಾ ಪ್ರದರ್ಶನ ನೀಡುತ್ತಾರೆ. ನಾವೂ ಅವರ ಮುದ್ದಾದ ರೀಲ್ಸ್ ಗಳನ್ನು ಮಾಡುತ್ತಾ, ನೋಡುತ್ತಾ ಹಂಚಿಕೊಂಡು ಖುಷಿ ಪಡುತ್ತೇವೆ. ಅದನ್ನು ಮಕ್ಕಳೂ ಸಂತೋಷಿಸುತ್ತಾರೆ. ಆದರೆ ಸೋಷಿಯಲ್ ಮೀಡಿಯಾದ ಟ್ರೆಂಡ್ಸು, ಲೈಕು, ಕಾಮೆಂಟುಗಳಿಗೇ ಸಿಕ್ಕಾಪಟ್ಟೆ ಸ್ಪಂದನೆ ನೀಡುತ್ತಾ ಅದರ ಮೇಲಿನ ಅವಲಂಬನೆಯೇ ಜಾಸ್ತಿ ಆಗುತ್ತಿದೆ ಎಂದಾಗ, ಆತ್ಮ ತೃಪ್ತಿಗಿಂತ ಇತರರ ಗಮನ, ಅವಲೋಕನಕ್ಕೇ ಮಹತ್ವ ನೀಡುವುದು ಕಾಣಿಸಿಕೊಳ್ಳುತ್ತಿದೆ ಎಂದರೆ ಎಚ್ಚರಿಕೆಯ ಅಗತ್ಯ ಇದೆ ಎಂದರ್ಥ. ಏಕೆಂದರೆ ಮಕ್ಕಳ ಮನೋಭೂಮಿಕೆಯನ್ನು ಜಾಲತಾಣವೇ ತುಂಬಿಕೊಳ್ಳುತ್ತಿದೆ! ಹಾಗೆಯೇ ಹೆಣ್ಣು ಮಕ್ಕಳ ರೀಲ್ಸುಗಳಿಗೆ ಬರುವ ತುಚ್ಚ ಮನಃಸ್ಥಿತಿಯ ಕಾಮೆಂಟುಗಳೂ ಅವರ ಕಣ್ಣಿಗೆ ಬೀಳದೇ ಇರದು. ಅದು ತನ್ನ ದೇಹದ ಬಗ್ಗೆ ಅನಗತ್ಯವಾದ ನಿಗಾ, ತನ್ನನ್ನು ಯಾವ ರೀತಿ ಜನ ನೋಡುತ್ತಾರೆ ಎನ್ನುವುದರ ಬಗ್ಗೆ ತಿರಸ್ಕಾರ-ಗೊಂದಲ, ಯಾವ ರೀತಿ ಇಂಪ್ರೆಸ್ ಮಾಡಬಹುದು ಎನ್ನುವ ಲೆಕ್ಕಾಚಾರಗಳನ್ನೂ ತಲೆಗೆ ತುಂಬಿ ಎಳೆಯ ಹುಡುಗಿಯರ ಮನಸ್ಸನ್ನು ದಿಕ್ಕು ತಪ್ಪಿಸುತ್ತದೆ.
ಈಗ ತುಂಬ ಬೇಗ ಪ್ಯುಬರ್ಟಿಯನ್ನು ತಲುಪಿಕೊಳ್ಳುವ ಹೆಣ್ಣುಮಕ್ಕಳ ಮಿದುಳಿಗೆ ಇನ್ನೂ ಭಾವನಾತ್ಮಕ, ಸಾಮಾಜಿಕ ಯಾತನೆಗಳನ್ನು ಸಂಸ್ಕರಿಸುವ, ಸಂದರ್ಭಗಳನ್ನು ಸರಿಯಾದ ರೀತಿಯಲ್ಲಿ ನಿಭಾಯಿಸುವ ಸಾಮರ್ಥ್ಯ ಬಂದಿರುವುದಿಲ್ಲ. ಹಾಗಾಗಿ ಈ ಸಮಯದಲ್ಲಿ ಸಾಮಾಜಿಕ ಜಾಲತಾಣದಲ್ಲಿ ತಲೆದೋರುವ ವ್ಯತ್ಯಯ, ಸವಾಲುಗಳನ್ನು ಸಂಭಾಳಿಸಲು ಅವರು ಶಕ್ತರಿರುವುದಿಲ್ಲ ಎನ್ನುತ್ತಾರೆ ಸಂಶೋಧಕರು. ಬಹಳ ಬೇಗ ಪ್ರೌಢಾವಸ್ಥೆಗೆ ಇಂದು ಹೆಣ್ಣುಮಕ್ಕಳು ಕಾಲಿಡುತ್ತಿದ್ದಾರೆ. ಆ ಏರುಪೇರುಗಳಿಂದ ಅದಾಗಲೇ ಅವರಲ್ಲಿ ಸ್ಟ್ರೆಸ್ ಲೆವೆಲ್ ಜಾಸ್ತಿಯೇ ಇರುತ್ತದೆ. ಈ ಸಮಯದಲ್ಲಿ ಸೋಷಿಯಲ್ ಮೀಡಿಯಾ ಬಳಕೆ ತುಂಬಾ ಆದಷ್ಟೂ ಮಕ್ಕಳು ಮತ್ತೂ ದ್ವಂದ್ವಕ್ಕೆ ಸಿಲುಕುತ್ತಾರೆ. ಚಿಕ್ಕವರೂ ಅಲ್ಲದ - ದೊಡ್ಡವರೂ ಆಗಿರದ ಇಕ್ಕಟ್ಟು, ಬಾಲ್ಯದ ಆಟಗಳಿಂದ ಇನ್ನೂ ಕಳಚಿಕೊಳ್ಳದ ಮನಸ್ಸು. ಜತೆಗೇ ಆಕರ್ಷಕವಾಗಿ ಕಾಣಿಸಿಕೊಳ್ಳುವ ಯುವತಿಯರೊಡನೆ ತನ್ನನ್ನು ಹೋಲಿಸಿಕೊಳ್ಳುವ, ಹಾಗಾಗುವ ಹಂಬಲ. ಜನರ ಮುಂದೆ ವಿಪರೀತ ತೆರೆದುಕೊಂಡಷ್ಟೂ ಅದಕ್ಕೆ ಸ್ಪಂದಿಸುವ ಮಾನಸಿಕ ಸಿದ್ಧತೆ ಇಲ್ಲದಿರುವುದರಿಂದ ಅದು ಅವರ ಮಾನಸಿಕ ಸ್ವಾಸ್ಥ್ಯವನ್ನೇ ಹಾಳುಮಾಡುತ್ತಿದೆ.
ಇಂದು ಸ್ಕ್ರೀನ್ ಟೈಮ್ ಜಾಸ್ತಿಯಾಗಿದೆ. ಸ್ಕೂಲಿನ ನಂತರದಲ್ಲಿ ಮಕ್ಕಳ ಹೆಚ್ಚಿನ ಸಮಯವನ್ನು ಹಿಡಿದಿಡುವುದು ಮೊಬೈಲುಗಳು. ಸಂಶೋಧನೆಯೊಂದು ಹೇಳುತ್ತದೆ : ಸುಮಾರು ಐದರ ಆಸುಪಾಸಿನ ಅತೀ ಎಳವೆಯಲ್ಲೇ ಅತಿ ಹೆಚ್ಚು ಜಾಲತಾಣಗಳಿಗೆ ತೆರೆದುಕೊಳ್ಳುವ ಹೆಣ್ಣುಮಕ್ಕಳೂ ತಮ್ಮ ದೇಹದ ಬಗ್ಗೆ ಅಸಮಾಧಾನ ಹೊಂದಲು ಪ್ರಾರಂಭಿಸುತ್ತಾರೆ. ಇದೇ ಮಗು ಹದಿವಯಸ್ಸಿಗೆ ಕಾಲಿಡುವ ಹೊತ್ತಿಗೆ ಮೀಡಿಯಾದ ಧೋರಣೆಯನ್ನು ತಾನೇ ಅಳವಡಿಸಿಕೊಳ್ಳುತ್ತಾ ಒಳಗಿನ ಗುಣ, ಸ್ವಭಾವಗಳಿಗಿಂತ ಅಂದ-ಚಂದ ಹಾವ-ಭಾವಗಳಿಗೆ ಪ್ರಾಶಸ್ಱ ನೀಡಲು ಕಲಿತುಬಿಡುತ್ತದೆ. ಈ ಪ್ರಾಮುಖ್ಯತೆ ನೆಗೆಟಿವ್ ದೇಹ ಚಿತ್ರಣದ ಸಮಸ್ಯೆಯೊಂದಿಗೆ ಬೇಡದ ಖಿನ್ನತೆ, ಒತ್ತಡವನ್ನು ಹೆಣ್ಣುಮಕ್ಕಳಲ್ಲಿ ತುಂಬುತ್ತಿದೆ. ತಾನು ಅರಿವಿಲ್ಲದೇ ಇಷ್ಟೊಂದು ಸಾಮಾಜಿಕ ತಾಣಗಳಲ್ಲಿ ತೊಡಗಿ ಕೊಂಡಿರುವುದೇ ಈ ತರಹದ ವೇದನೆಗೆ ಕಾರಣ ಎನ್ನುವುದು ಹುಡುಗಿಯರಿಗೆ ತಿಳಿಯದು. ಯಾರ ಬಗ್ಗೆಯೂ ಪೂರ್ಣ ಮಾಹಿತಿ ಇಲ್ಲದಿದ್ದರೂ ಕಂಡಿದ್ದನ್ನೇ ನಿಜವೆಂದು ನಂಬುತ್ತಾ ತಮಗೆ ತಾವೇ ನೋವು ಮಾಡಿಕೊಳ್ಳುತ್ತಿದ್ದಾರೆ. ಟೀನೇಜ್ ಹೆಣ್ಣುಮಕ್ಕಳಿಗೆ ಮನಃಶಾಸ್ತ್ರಜ್ಞರು ಹೇಳುತ್ತಾರೆ, ಸೋಷಿಯಲ್ ಮೀಡಿಯಾದಿಂದ ಬ್ರೇಕ್ ತೆಗೆದುಕೊಂಡಾಗ ಕೇಳಿಕೊಳ್ಳಿ - ‘ಇದನ್ನು ನೋಡುವಾಗ ನನಗೆ ನನ್ನ ಬಗ್ಗೆಯೇ ಬೇಸರ ಎನಿಸುತ್ತಿದೆಯೇ?’ ಎಂದು. ಹೀಗೆ ಪ್ರಶ್ನಿಸಿಕೊಂಡು ಯಾವ ರೀತಿ ನಮ್ಮ ಮನಸ್ಸನ್ನು ಆನ್ಲೈನ್ ಮೀಡಿಯಾ ಪ್ರಭಾವಿಸುತ್ತಿದೆ ಎನ್ನುವುದನ್ನು ಹೆಣ್ಣುಮಕ್ಕಳು ತಿಳಿದು ಕೊಂಡರೆ ಅದರ ಹಿಡಿತದಿಂದ ಹೊರಬರಲು ಸಾಧ್ಯವಿದೆ.
ನಿಜ ಹೇಳಬೇಕೆಂದರೆ ತಮ್ಮ ಮನೆಯ ಹೆಣ್ಣುಮಕ್ಕಳಿಗೆ ಹೇಗೆ ಮಾರ್ಗದರ್ಶನ ನೀಡಬೇಕು ಎಂಬ ಅರಿವು ಎಷ್ಟೋ ಪೋಷಕರಿಗೇ ತಿಳಿದಿರುವುದಿಲ್ಲ. ಏಕೆಂದರೆ ತಂತ್ರಜ್ಞಾನದ ವಿಷಯದಲ್ಲಿ ಮಕ್ಕಳು ಎಷ್ಟು ಅಪ್ಡೇಟೆಡ್, ಅಡ್ವಾನ್ಸ್ ್ಡ ಆಗಿರುತ್ತಾರೋ ಪೋಷಕರು ಅಷ್ಟೇ ಔಟ್ ಡೇಟೆಡ್ ಆಗಿ ಹಿಂದೆ ಉಳಿದು ಬಿಟ್ಟಿರುತ್ತಾರೆ. ಹಾಗಾಗಿ, ನೀನು ಮೊಬೈಲ್ ನಲ್ಲಿ ಏನನ್ನೂ ಮಾಡಬೇಡ ಎನ್ನಲು ಆತಂಕ ಇಲ್ಲವೇ ಅವಳು ಎಲ್ಲರನ್ನೂ ಮೀರಿಸುವಷ್ಟು ತಿಳಿದುಕೊಂಡಿದ್ದಾಳೆ ಎಂಬ ಅತೀವಿಶ್ವಾಸವನ್ನೇ ಕಾಣುತ್ತಿರುತ್ತೇವೆ. ಪೋಷಕರಾಗಿ ಆದಷ್ಟೂ ಹೊಸದನ್ನು ಕಲಿಯಲು ತೊಡಗಿರಿ. ನಿಮ್ಮದೇ ಅಕೌಂಟ್ ಮಾಡಿಕೊಂಡು ಚೂರುಚೂರೇ ತಿಳಿದುಕೊಳ್ಳಲು ಪ್ರಾರಂಭಿಸಿ. ಮಕ್ಕಳ ವೇಗದಲ್ಲಿ ಹೆಜ್ಜೆ ಹಾಕಲು ಅಸಾಧ್ಯವೆನಿಸಿದರೂ ಜಾಲತಾಣದ ಜಗತ್ತಿನಲ್ಲಿ ಎದುರಾದ ಸಂಕಷ್ಟಗಳನ್ನು ಹೇಳಿಕೊಂಡರೆ ತಕ್ಕಮಟ್ಟಿಗೆ ಅರ್ಥಮಾಡಿಕೊಳ್ಳಬಲ್ಲಷ್ಟು ಕ್ಲೋಸ್, ಓಪನ್, ಅಪ್ಡೇಟೆಡ್ ಪೇರೆಂಟ್ ಆಗಲು ಪ್ರಯತ್ನಿಸಿ. ಬುಲ್ಲಿಯಿಂಗ್, ಬಾಡಿ ಇಮೇಜ್ ಸಮಸ್ಯೆಗಳು, ವೇಟ್ ಲಾಸ್ ಕುರಿತಾದ ಅವಾಸ್ತವಿಕ ಚಿತ್ರಣ ಮೊದಲಾದ ವಿಚಾರಗಳನ್ನು ಕುರಿತು ಮುಕ್ತವಾಗಿ ಹೆಣ್ಣುಮಕ್ಕಳೊಡನೆ ಮಾತಾಡಿ. ಅವರ ಮನಸ್ಸಿಗೆ ಮೀಡಿಯಾದ ಮಿಥ್ಯೆಗಳು ಧಾವಿಸುವ ಮೊದಲು ನೀವೇ ಪ್ರಭಾವಿಸಿ, ಸದೃಢರನ್ನಾಗಿಸಿ.
ಹದಿಹರೆಯದ ಹೆಣ್ಣುಮಕ್ಕಳು ಇನ್ಸಾ್ಟಗ್ರಾಂ, ಫೇಸ್ಬುಕ್, ಸ್ನಾ್ಯಪ್ ಚಾಟ್ ಮೊದಲಾದ ಸೋಷಿಯಲ್ ಮೀಡಿಯಾ ಪ್ಲಾಟ್ಫಾರಂಗಳಲ್ಲಿ ಕ್ರಿಯಾಶೀಲರಾಗಿರುವುದು ತಪ್ಪಲ್ಲ. ಆದರೆ ಅದು ಅವರ ವ್ಯಕ್ತಿತ್ವವನ್ನು ಹೇಗೆ ಪ್ರಭಾವಿಸುತ್ತಿದೆ ಎಂದು ಗಮನವಿರಿಸಿದರೆ ಎಷ್ಟೋ ತೊಂದರೆಗಳನ್ನು ತಪ್ಪಿಸಬಹುದು. ಹಾಗೇ ನಾವು ಯಾವ ರೀತಿಯ ರಿಸ್ಕೂ ತೆಗೆದುಕೊಳ್ಳಲು ಬಯಸುವುದಿಲ್ಲವೆಂದುಕೊಂಡು ಮಕ್ಕಳಿಗೆ ಎಲ್ಲಿಯೂ ಸಕ್ರಿಯರಾಗಲು ಅವಕಾಶ ನೀಡದ ಪೇರೆಂಟಿಂಗ್ ನಿಂದಲೂ ಲಾಭವೇನೂ ಆಗದು. ಬೇಡವೆಂದುದರೆಡೆಗೆ ಅನವಶ್ಯಕ ಆಸಕ್ತಿ, ಕುತೂಹಲವನ್ನು ನಾವೇ ಮೊಳೆಸುವ ಬದಲು ಕಂಟ್ರೋಲ್ಡ್ ಆದ ಬಳಕೆಗೆ ಒಂದಷ್ಟು ಅವಕಾಶ ನೀಡಿದರೆ ಜಾಣ್ಮೆಯಾದೀತು. ಏಕೆಂದರೆ ಬದಲಾದ ಕಾಲದೊಡನೆ ಮುಂದುವರಿಯುವ ಹಪಹಪಿಯೊಂದಿಗೆ ಹೆಜ್ಜೆ ಹಾಕುತ್ತಲಿರುವ ಮಕ್ಕಳೊಡನೆ ನಾವೂ ಜೊತೆಯಾಗದಿದ್ದಲ್ಲಿ ಹಿಂದೆ ಉಳಿಯುವವರು, ಅವರ ಮನದ ಪರಿಧಿಯಿಂದ ದೂರವೇ ಸರಿಯುವವರು ನಾವಷ್ಟೇ. ಒಂದೋ ಅವರು ಬೇರೊಂದು ಮಾರ್ಗವನ್ನು ಕಂಡುಕೊಂಡು ತಮಗೆ ಬೇಕಿದ್ದನ್ನು ಪಡೆದೇ ತೀರುತ್ತಾರೆ. ಇಲ್ಲವೇ ಒಂದು ಕಹಿಯಾದ ಭಾವವನ್ನು ಸಲಹುತ್ತ ಅಂತರ ಕಾಪಾಡಿಕೊಂಡು ಮುನ್ನಡೆದು ಬಿಡುತ್ತಾರೆ.
ಸಲಹೆ, ಅಭಿಪ್ರಾಯ ಮತ್ತು ಬರಹಗಳಿಗೆ: lalithavijayavani@gmail.com