ನಮ್ಮ ಆರೋಗ್ಯ ಇರುವುದೇ ನಮ್ಮ ಕೈಯ್ಯಲ್ಲಿ…

Diet Workout
Published on
ಇಂದಿನ ದಿನಗಳಲ್ಲಿ ವಯೋಸಹಜ ಸಾವಿಗಿಂತ ಹಠಾತ್ ಸಾವುಗಳು ಹೆಚ್ಚುತ್ತಿರುವುದು ಆತಂಕಕಾರಿ ಸಂಗತಿ. ನಾನು ಗಮನಿಸಿದಂತೆ ಕಳೆದ ಒಂದು ದಶಕದಿಂದ ಈಚೆಗೆ ಜನರು ಹೃದಯಾಘಾತ, ಮೆದುಳು ನಿಷ್ಕಿ›ಯ, ಕ್ಯಾನ್ಸರ್​ನಂತಹ ಗಂಭೀರ ಕಾಯಿಲೆಗಳಲ್ಲದೆ ರಕ್ತದ ಒತ್ತಡ, ಲೋ ಬಿಪಿ ಹೀಗೆ ಹಲವಾರು ಕಾರಣಗಳಿಂದ ಸಾವನ್ನಪ್ಪುತ್ತಿದ್ದಾರೆ. ಆದರೆ, ಕಳೆದ ಎರಡು ದಶಕಗಳ ಹಿಂದೆ ಇಂತಹ ಅನಾರೋಗ್ಯಕರ ಬೆಳವಣಿಗೆ ಜನರಲ್ಲಿ ಇರಲಿಲ್ಲ. ಅಲ್ಲೊಂದು ಇಲ್ಲೊಂದು ಕ್ಯಾನ್ಸರ್, ಹೃದಯಾಘಾತ ಮುಂತಾದ ಕೆಲವೇ ಕೆಲವು ಕಾರಣಗಳಿಂದಷ್ಟೇ ಮರಣವನ್ನಪ್ಪುತ್ತಿದ್ದರು. ಅಪಘಾತ, ಅವಘಡಗಳ ಹೊರತಾಗಿ ಉಳಿದವರೆಲ್ಲರೂ ವಯೋಸಹಜವಾಗಿ ಮೃತರಾಗಿರುವುದೇ ಹೆಚ್ಚು. 85-90 ವರ್ಷವಾದರೂ ಅವರೇ ತಮ್ಮ ತಮ್ಮ ನಿತ್ಯ ಕರ್ಮಗಳನ್ನು ಪೂರೈಸುವರ ಮಟ್ಟಿಗೆ ಸಶಕ್ತರಾಗಿದ್ದು, ಆರೋಗ್ಯಯುತವಾಗಿ ಇದ್ದರು ಎಂಬುದು ಗಮನಿಸಬೇಕಾದ ಅಂಶ.

ಈ ಆಧುನಿಕ ಬದುಕಿನಲ್ಲಿ ಸಕಲ ವ್ಯವಸ್ಥೆ, ಸೌಲಭ್ಯಗಳೂ ಇವೆ. ಮುಖ್ಯವಾಗಿ ಆರೋಗ್ಯ ರಕ್ಷಣೆಗೆ ಬೇಕಾದ ವಿಧ-ವಿಧದ ಆಹಾರ/ಉತ್ಪನ್ನಗಳು, ಔಷಧಗಳು, ವೈದ್ಯಕೀಯ ಸಲಕರಣೆಗಳು ಎಲ್ಲವೂ ಇವೆ. ಸೌಲಭ್ಯಗಳೂ ಹೆಚ್ಚಿದ ಹಾಗೆಯೇ ರೋಗಗಳೂ ಹೆಚ್ಚಿದೆ ಎಂದರೆ ತಪ್ಪಾಗಲಾರದು. ಇತ್ತೀಚಿನ ವರ್ಷಗಳಲ್ಲಿ ಏಡ್ಸ್, ಕೋವಿಡ್ ಹಾಗೂ ಇತರ ಹೊಸ-ಹೊಸ ರೋಗಗಳು ಕಾಡುತ್ತಿವೆ. ಯಾಕೆ ಇಂತಹ ರೋಗಗಳು ನಮ್ಮನ್ನು ಕಾಡುತ್ತವೆ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡುವುದು ಸಹಜ. ಕೆಲವೊಂದು ಅನುವಂಶಿಕ ರೋಗಗಳನ್ನು ಹೊರತುಪಡಿಸಿದರೆ ಬಹುತೇಕ ರೋಗಗಳು ಅಥವಾ ರೋಗ ಕಾರಕಗಳು ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾದಾಗ ಬರುತ್ತವೆ. ಇದು ಎಲ್ಲರಿಗೂ ತಿಳಿದಿರುವಂತಹದ್ದೇ ಆದರೂ ಬಹುತೇಕರು ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಾರೆ.

ರೋಗ ಬಂದ ಮೇಲೆ ಔಷಧ ತೆಗೆದುಕೊಳ್ಳುವುದಕ್ಕಿಂತ ರೋಗ ಬಾರದಂತೆ ಮುಂಜಾಗ್ರತೆ ವಹಿಸುವುದು ಜಾಣತನ ಎಂದು ನಮ್ಮ ಹಿರಿಯರು ಯೋಗ, ಆರ್ಯುವೇದ, ಪ್ರಕೃತಿ ಚಿಕಿತ್ಸೆಗಳ ಮೂಲಕ ಹೇಳಿಕೊಂಡೇ ಬಂದಿದ್ದಾರೆ. ಅದಲ್ಲದೆ, ಅವೆಲ್ಲವನ್ನು ಪ್ರತ್ಯೇಕವಾಗಿ ಮಾಡದೆ ನಮ್ಮ ಜೀವನ ಕ್ರಮದಲ್ಲಿ ನಿತ್ಯ ಬಳಕೆಯಾಗುವ ರೀತಿಯಲ್ಲಿ ಅನುಷ್ಠಾನವಾಗುವಂತೆ ನೋಡಿಕೊಂಡಿದ್ದಾರೆ. ಯೋಗದ ಬಹುತೇಕ ಆಸನಗಳು ನಮ್ಮ ಜೀವನ ಕ್ರಮದಲ್ಲಿದ್ದವು. ಪುರುಷರು ತೋಟ, ಗದ್ದೆಗಳಲ್ಲಿ ದೈಹಿಕವಾಗಿ ಶ್ರಮಿಸುವುದರಿಂದ ಅವರಿಗೆ ಅದೇ ದೈಹಿಕ ಕಸರತ್ತು. ಹಾಗಾಗಿ ಬೇರಾವ ವಿಧದಲ್ಲೂ ದೇಹ ದಂಡನೆಯ ಅಗತ್ಯವಿರುವುದಿಲ್ಲ. ಉಳುಮೆ ಮಾಡುವುದು, ಬಿತ್ತುವುದು, ಕಳೆ ಕೀಳುವುದು, ಹೊರುವುದು, ಮರ ಹತ್ತುವುದು ಎಲ್ಲವೂ ಒಂದಲ್ಲ ಒಂದು ವ್ಯಾಯಾಮವೇ ಆಗಿವೆ. ಹಾಗೆಯೇ ಮಹಿಳೆಯರು ಗುಡಿಸುವುದು, ನೆಲ ಒರೆಸುವುದು, ರುಬ್ಬುವುದು, ನೀರು ಸೇದುವುದು ಮುಂತಾದ ಮನೆ ಕೆಲಸ ಮಾತ್ರವಲ್ಲದೆ ಕೃಷಿ ಕೆಲಸದಲ್ಲಿಯೂ ಸಹಕರಿಸುತ್ತಾರೆ. ಈ ಎಲ್ಲ ಕೆಲಸಗಳೂ ದೈಹಿಕ ವ್ಯಾಯಾಮವೇ ಆಗಿದೆ. ಬಿಡುವಿಲ್ಲದ ಕೆಲಸದ ಜತೆಗೆ ಮಾನಸಿಕ ಸಂತುಲನಕ್ಕಾಗಿ ದೇವರ ಆರಾಧನೆ, ಕೀರ್ತನೆ, ಭಜನೆ, ಸತ್ಸಂಗಗಳಲ್ಲಿ ತೊಡಗುವಿಕೆ, ನಾಟಕ, ಯಕ್ಷಗಾನ ಮನೋರಂಜನಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಿಕೆಗಳ ಮೂಲಕ ಮಾನಸಿಕವಾಗಿಯೂ ಸದೃಢರಾಗುತ್ತಿದ್ದರು.

ಆಯುರ್ವೆದ ಮತ್ತು ಪ್ರಕೃತಿ ಚಿಕಿತ್ಸೆಯಲ್ಲಿ ಪರಿಸರದಲ್ಲಿ ದೊರೆಯುವಂತಹ ಹಣ್ಣು-ತರಕಾರಿಗಳನ್ನೇ ಆಹಾರವಾಗಿ ಬಳಸಲು ತಿಳಿಸುತ್ತಾರೆ. ಹಿಂದೆ ಯಾವುದೇ ರಾಸಾಯನಿಕ ಗೊಬ್ಬರಗಳನ್ನು ಬಳಸದೆ, ರಾಸಾಯನಿಕಗಳನ್ನು ಬಳಸಿ ಸಂರಕ್ಷಿಸಿದ ಆಹಾರಗಳು ಇಲ್ಲವಾಗಿತ್ತು. ಕೆಲವು ಹಣ್ಣುಗಳನ್ನು ತಿನ್ನುವುದನ್ನು ನಾನು ಬಿಟ್ಟಿದ್ದೇನೆ. ಯಾಕೆಂದರೆ ಉತ್ತಮ ಬಣ್ಣ ಮತ್ತು ಆಕಾರದಿಂದ ಕೂಡಿದ್ದರೂ ಮೂಲ ಹಣ್ಣಿನ ರುಚಿ ಮಾಯವಾಗಿದೆ. ನೀರು, ಗಾಳಿ, ಅನ್ನಾಹಾರಗಳೆಲ್ಲವೂ ಪರಿಶುದ್ಧವಾಗಿದ್ದುದರಿಂದಲೇ ಆರೋಗ್ಯವೂ ಸುಸ್ಥಿರವಾಗಿತ್ತು. ಕಾಲ ಸರಿದಂತೆ ಜನಜೀವನವೂ, ಜೀವನ ಕ್ರಮವೂ ಬದಲಾಯಿತು. ಕೆಲಸ ಕಾರ್ಯಗಳಿಗೆಲ್ಲ ಯಂತ್ರಗಳ ಬಳಕೆ ಹೆಚ್ಚಾಯಿತು ಎನ್ನವುದಕ್ಕಿಂತ ಅವಲಂಬನೆಯೇ ಜಾಸ್ತಿಯಾಯಿತು ಎನ್ನಬಹುದು. ಆಹಾರದ ವಿಷಯದಲ್ಲೂ ಅಷ್ಟೇ ಫಾಸ್ಟ್​ಫುಡ್, ರೆಡಿಮೇಡ್ ಆಹಾರಗಳು ಜನರ ಕೆಲಸವನ್ನು ಕಡಿಮೆ ಮಾಡಿದವು. ಜತೆಗೆ ಅನಾರೋಗ್ಯ ಹೆಚ್ಚಲು ಕಾರಣವಾದವು.

ಇಂದಿನ ದಿನಗಳಲ್ಲಿ ಕೃಷಿಯಲ್ಲಿ ಸಾಕಷ್ಟು ರಾಸಾಯನಿಕಗಳನ್ನು ಬಳಕೆ ಮಾಡುತ್ತಿದೆ. ರಾಸಾಯನಿಕಗಳಿಂದ ಆಗುವ ಪರಿಣಾಮ ಸಣ್ಣದೇನಲ್ಲ. ಹಿಂದೊಮ್ಮೆ ಗೇರು ಕೃಷಿಗೆ ಎಂಡೋಸಲ್ಪಾನ್ ಬಳಸಿದ್ದರ ಪರಿಣಾಮವಾಗಿ ಇಂದಿಗೂ ಅದೆಷ್ಟೋ ಕುಟುಂಬಗಳು ಸಂಕಷ್ಟದ ಪರಿಸ್ಥಿತಿಯಲ್ಲಿ ದಿನ ದೂಡುತ್ತಿವೆ. ಆ ಪ್ರದೇಶದಲ್ಲಿ ಹುಟ್ಟಿದ ಮಕ್ಕಳೆಲ್ಲ ಅಂಗವಿಕಲರಾಗಿ ಜನಿಸಿದ್ದಾರೆ. ಈ ಘಟನೆ ನಡೆದು ಹಲವಾರು ವರ್ಷಗಳಾದರೂ ಅದರ ಪರಿಣಾಮ ಇಂದಿಗೂ ಅಲ್ಲಲ್ಲಿ ಕಂಡು ಬರುತ್ತದೆ. ಹಾಗೆಯೇ ಬೇಗ ಹಾಗೂ ಹೆಚ್ಚಿನ ಇಳುವರಿ ಪಡೆಯಲು ಸಾಕಷ್ಟು ರಾಸಾಯನಿಕಗಳನ್ನು ಬಳಸಲಾಗುತ್ತಿದೆ. ಜತೆಗೆ ಬೆಳೆ, ಹಣ್ಣು-ತರಕಾರಿಗಳು ಹಾಳಾಗದಂತೆ ಹೆಚ್ಚು ದಿನಗಳ ಕಾಲ ಮಾರಾಟಕ್ಕೆ ಯೋಗ್ಯವಾಗುವಂತೆ ವಿವಿಧ ರಾಸಾಯನಿಕಗಳನ್ನು ಬಳಕೆ ಮಾಡುವ ಅಭ್ಯಾಸ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ. ಪರಿಣಾಮವಾಗಿ ಅರಿತೋ, ಅರಿಯದೆಯೋ ಈ ರಾಸಾಯನಿಕಗಳು ಆಹಾರದ ಮೂಲಕ ನಮ್ಮ ಶರೀರವನ್ನು ಸೇರಿ ನಮ್ಮ ರೋಗ ನಿರೋಧಕ ಶಕ್ತಿಗೆ ಮಾರಕವಾಗುತ್ತವೆ, ಅನಾರೋಗ್ಯಕ್ಕೆ ಕಾರಣವಾಗುತ್ತವೆ.

ನಗರ, ಪಟ್ಟಣಕ್ಕೆ ಹೋಲಿಸಿದರೆ ಹಳ್ಳಿಗಳ ಜನರು ಹೆಚ್ಚು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗಿರುತ್ತಾರೆ. ಹೆಚ್ಚಿನ ಜನರು ತಮಗೆ ಬೇಕಾದ ಹಣ್ಣು-ತರಕಾರಿಗಳನ್ನು ಬೆಳೆದು ಬಳಸುತ್ತಾರೆ ಹಾಗೂ ಒತ್ತಡ ಜೀವನದಿಂದ ದೂರವಿರುತ್ತಾರೆ. ಆದರೆ, ನಗರ ಪ್ರದೇಶದ ಜನರ ಜೀವನ ಹಾಗೂ ಆರೋಗ್ಯವು ತದ್ವಿರುದ್ಧವಾಗಿರುತ್ತವೆ. ಈ ಬಗ್ಗೆ ಒಂದು ಹಾಸ್ಯವನ್ನು ಓದಿದ್ದು ನೆನಪು. ಕೆಲವರು ತಿನ್ನುವ ಆಹಾರಕ್ಕಾಗಿ ದೇಹ ದಂಡಿಸಿದರೆ, ಇನ್ನು ಕೆಲವರು ತಿಂದ ಆಹಾರವನ್ನು ಕರಗಿಸಲು ದೇಹ ದಂಡಿಸುತ್ತಾರೆ ಎಂದು. ಹಾಸ್ಯವಾಗಿ ಹೇಳಿದ್ದಾದರೂ ಅದು ಚಿಂತನೆಗೀಡು ಮಾಡುವ ನುಡಿಯಾಗಿದೆ. ದೇಹಕ್ಕೆ ಎಷ್ಟು ಬೇಕು ಅಷ್ಟನ್ನೇ ತಿಂದರೆ ಜಿಮ್ಳಲ್ಲಿ ಕೊಬ್ಬು ಇಳಿಸಲು ಕಷ್ಟಪಡಬೇಕಾದ ಸಂಗತಿಯೇ ಬರುವುದಿಲ್ಲ ಅಲ್ಲವೇ?

ಇಂದಿನ ಜನತೆ ಹೆಚ್ಚೆಚ್ಚು ಆಧುನಿಕತೆಯನ್ನು ಅತಿಯಾಗಿ ಅವಲಂಬಿಸುತ್ತಿದ್ದಾರೆ. ಅಗತ್ಯವಿಲ್ಲದಿದ್ದರೂ ವಿಷಯ-ವಸ್ತುಗಳ ಬಳಕೆ ಹೆಚ್ಚುತ್ತವೆ. ಬೀದಿಯ ಕೊನೆಯಲ್ಲಿರುವ ಅಂಗಡಿಯಿಂದ ಪೇಪರ್ ತರಲು, ಹಾಲು ತರಲು ಕೂಡ ವಾಹನ ಬೇಕೇಬೇಕಾಗಿದೆ. ಅಡುಗೆ ಮಾಡಲು ಉದಾಸೀನತೆಯಿಂದ ಆನ್​ಲೈನ್ ಫುಡ್ ಬಲು ಇಷ್ಟವಾಗುತ್ತಿದೆ. ಹೀಗೆ ಅನೇಕ ವಿಚಾರಗಳಿಗೆ ನಮ್ಮನ್ನು ನಾವೇ ಬದಲಾಯಿಸಿಕೊಳ್ಳುತ್ತಿದ್ದೇವೆ ಎಂದರೆ ತಪ್ಪಾಗಲಾರದು. ಮಕ್ಕಳಿಗೆ ಅಕ್ಕಿ ರುಬ್ಬಿದ ಹಿಟ್ಟಿನಿಂದ ಮಾಡಿದ ದೋಸೆ ಆಗುವುದಿಲ್ಲ, ಬೇಡವೆಂದು ರಂಪ ಮಾಡುತ್ತಾರೆ. ಬದಲಾಗಿ ನೂಡಲ್ಸ್, ಬರ್ಗರ್ ನೀಡಿದರೆ ಇನ್ನೂ ಬೇಕು ಎಂದು ಚಪ್ಪರಿಸಿ ತಿನ್ನುತ್ತಾರೆ. ಇಂತಹ ಜೀವನ ಶೈಲಿಗೆ ಹೆಚ್ಚು ಹೆಚ್ಚು ಮಾರು ಹೋಗುತ್ತಿದ್ದೇವೆ. ಅತಿಯಾದ ಪಾಶ್ಚಾತ್ಯ ಅನುಕರಣೆ, ಅವಲಂಬನೆ. ಜೀವನ ಶೈಲಿಗಳು ಜನರ ಜೀವನ ಕ್ರಮಕ್ಕೆ ಮಾರಕವಾಗಿವೆ.

ಇಂದಿನ ದಿನಗಳಲ್ಲಿ ಆರೋಗ್ಯದ ಬಗ್ಗೆ ಅತಿ ಹೆಚ್ಚಿನ ಕಾಳಜಿ ಅಗತ್ಯ. 40 ವರ್ಷ ದಾಟಿದ ಕೂಡಲೇ ಗಂಟು ನೋವು, ಬೆನ್ನು ನೋವು, ಬಿಪಿ, ಶುಗರ್ ಇತ್ಯಾದಿಗಳು ಹೆಚ್ಚಿನ ಜನರಲ್ಲಿ ಕಂಡುಬರುತ್ತವೆ. ಇವೆಲ್ಲದರಿಂದ ಪಾರಾಗಬೇಕಾದರೆ ಉತ್ತಮ ಜೀವನಕ್ರಮವನ್ನು ಅನುಸರಿಸಬೇಕಾದುದು ಅಗತ್ಯ. ತುಳುನಾಡಿನಲ್ಲಿ ಆಷಾಢ ಮಾಸದಲ್ಲಿ ವಿವಿಧ ಪ್ರಾಕೃತಿಕ ವಸ್ತುಗಳನ್ನು ಬಳಸಿ ನಾನಾ ಬಗೆಯ ತಿಂಡಿಗಳನ್ನು ಮಾಡುತ್ತಾರೆ. ಅವೆಲ್ಲವೂ ರಾಸಾಯನಿಕ ಮುಕ್ತವಾಗಿರುತ್ತವೆ ಹಾಗೂ ಪೌಷ್ಠಿಕಾಂಶಯುಕ್ತವಾಗಿರುತ್ತವೆ. ಈ ಅಭ್ಯಾಸ ಆಚರಣೆಗೆ ಮಾತ್ರ ಸೀಮಿತವಾಗದೆ ವರ್ಷದ ಎಲ್ಲಾ ದಿನಗಳಲ್ಲೂ ನೈಸರ್ಗಿಕ ಆಹಾರಗಳನ್ನು, ರಾಸಾಯನಿಕ ಮುಕ್ತ, ಪೌಷ್ಠಿಕಾಂಶವುಳ್ಳ ಆಹಾರವನ್ನು ಹೆಚ್ಚೆಚ್ಚು ಬಳಸುವಂತಾಗಬೇಕು.

ನಮ್ಮ ತುಳುನಾಡಿನಲ್ಲಿರುವ ಸಂಪ್ರದಾಯವೊಂದು ಬಹಳ ವಿಶೇಷವಾದುದು. ಮದುವೆಯಾಗಿ ವರ್ಷವಾಗುವುದರ ಒಳಗೆ ಮದುವೆ ಮಾಡಿಕೊಟ್ಟ ಮಗಳನ್ನು ಆಷಾಢ ಮಾಸದ ಆರಂಭದಲ್ಲಿ ತವರಿಗೆ ಕರೆದುಕೊಂಡು ಕೆಲವು ದಿನ ಉಳಿಸಿಕೊಂಡು ಬಳಿಕ ಗಂಡನ ಮನೆಗೆ ಕಳುಹಿಸಿ ಕೊಡುತ್ತಾರೆ. ಕೆಲವು ಪ್ರದೇಶಗಳಲ್ಲಿ ಮಗಳನ್ನು ಪಂಚಮಿ ಹಬ್ಬಕ್ಕೆ ಕರೆಸಿಕೊಳ್ಳುತ್ತಾರೆ. ಈ ಬಗ್ಗೆ ಜಾನಪದ ಪದ್ಯವೊಂದು ಬಹಳ ಸೊಗಸಾಗಿದೆ. ಗಂಡನ ಮನೆಯಲ್ಲಿರುವ ತಂಗಿಯು ತನ್ನನ್ನು ತವರಿಗೆ ಕರೆದುಕೊಂಡು ಹೋಗಲು ಅಣ್ಣ ಬರಲಿಲ್ಲ ಎಂಬ ‘ಪಂಚಮಿ ಹಬ್ಬಾ ಉಳಿತವ್ವ ದಿನ ನಾಕ ಅಣ್ಣ ಬರಲಿಲ್ಲಾ ಯಾಕೋ ಕರಿಲಾಕ’ ಹಾಡೊಂದು ಬಹಳ ಪ್ರಸಿದ್ಧವಾಗಿದೆ.

ಆಗಷ್ಟೇ ಮದುವೆಯಾದ ಹೆಣ್ಣುಮಗಳನ್ನು ತವರಿಗೆ ಕರೆದುಕೊಂಡು ಬರುವ ಸಂಪ್ರದಾಯವು ವೈಜ್ಞಾನಿಕವಾಗಿಯೂ ಮಹತ್ತ್ವವನ್ನು ಪಡೆದಿದೆ. ಹಿಂದಿನ ಕಾಲದಲ್ಲಿ ಎಲ್ಲೆಡೆಗಳಲ್ಲಿ ಜನರು ಬಹಳ ಕಷ್ಟದಿಂದ ಜೀವನ ನಡೆಸುತ್ತಿದ್ದರು. ಬಹುತೇಕರ ಮನೆಗಳಲ್ಲಿ ಎರಡು ಹೊತ್ತು ಊಟ ಮಾತ್ರವಲ್ಲ ಗಂಜಿ ಕುಡಿಯಲು ಕಷ್ಟ. ಆಗ ಗಂಡನ ಮನೆ ಹೊಸದಾದ ವಾತವರಣ, ಅಲ್ಲಿ ಮಗಳು ಹೇಗಿರುತ್ತಾಳೋ ಅವಳಿಗೆ ಹೊಟ್ಟೆ, ಬಟ್ಟೆಗೆ ಕೊರತೆಯಾಗುವುದೋ ಎಂಬಿತ್ಯಾದಿ ಚಿಂತೆಗಳು ತಂದೆ-ತಾಯಿಯರನ್ನು ಕಾಡುತ್ತದೆ. ಹಾಗೂ ಮದುವೆ ಮಾಡಿಕೊಟ್ಟ ಮೇಲೆ ಅವಳನ್ನು ನೋಡಿಯೇ ಇರದ ಕಾರಣ, ತವರಿಗೆ ಬಂದು ಕೆಲ ದಿನ ಇದ್ದು ಹೋಗಲಿ ಎಂಬ ಆಸೆಯೂ ಇರುತ್ತದೆ.

ಈಗಿನಂತೆ ಆಗ ಯಾವ ಕುಟುಂಬ ಯೋಜನೆಗಳು ಇರಲಿಲ್ಲ. ಮಕ್ಕಳು ಬೇಕೇ ಬೇಡವೋ, ಎರಡು ವರ್ಷ ನಂತರ ಸಾಕೇ ಎಂಬ ವಿಷಯವೇ ಬರುತ್ತಿರಲಿಲ್ಲ. ಮದುವೆಯಾದ ಮರುವರ್ಷವೇ ಮಕ್ಕಳನ್ನು ಹೆರುತ್ತಿದ್ದ ಕಾಲ ಅದಾಗಿತ್ತು. ಹಾಗಾಗಿ ಮಕ್ಕಳನ್ನು ಹೆರಲು ಆಕೆ ಆರೋಗ್ಯವಾಗಿರಬೇಕು. ಅದಕ್ಕೆ ಪೂರಕ ಆಹಾರ, ವಾತಾವರಣ ಅತ್ತೆ ಮನೆಯಲ್ಲಿ ಸಿಗುತ್ತದೆಯೋ ಇಲ್ಲವೋ, ಅತ್ತೆ ಚೆನ್ನಾಗಿ ನೋಡಿಕೊಳ್ಳುತ್ತಾಳೋ ಇಲ್ಲವೋ ಎಂಬ ಆತಂಕವನ್ನು ದೂರ ಮಾಡಲು ತವರಿಗೆ ಕರೆಸಿಕೊಂಡು ಪ್ರಕೃತಿಯಲ್ಲಿ ದೊರೆಯುವ ಪೌಷ್ಠಿಕಾಂಶವುಳ್ಳ ವಸ್ತುಗಳನ್ನು ಕಷಾಯ, ತಿಂಡಿ ತಿನಸುಗಳ ಮೂಲಕ ಆಕೆಗೆ ನೀಡಲಾಗುತ್ತದೆ. ಆಷಾಢದ 31 ದಿನಗಳಲ್ಲಿ 16 ದಿವಸದಲ್ಲಿ 16 ಬಗೆಯ ಕಷಾಯಗಳನ್ನು ನೀಡುವ ಪದ್ಧತಿ ಹಿಂದಿತ್ತು. ಅದರ ಜತೆಗೆ ಪಲ್ಲೊಡಿ, ಕಳಲೆ, ಕೆಸು, ಹೀಗೆ ವಿವಿಧ ತಿಂಡಿ ತಿನಸುಗಳನ್ನು ಮಾಡಿ ತಿನ್ನುವ ಆಚರಣೆಯಿದೆ. ಅದಲ್ಲದೆ, ಹಾಲೆ ಮರದ ಕೆತ್ತೆಯ ಕಷಾಯವನ್ನು ಕುಡಿದರೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎಂಬ ವಿಷಯದ ಜತೆ ಕೆಲವೊಂದು ವೈಜ್ಞಾನಿಕ ವಿಷಯಗಳು ಸಂಪ್ರದಾಯಗಳಲ್ಲಿ ಮಿಳಿತವಾಗಿದೆ ಎನ್ನಬಹುದು. ಧರ್ಮಸ್ಥಳದ ಮನೆಯಲ್ಲಿ ಇಂದಿಗೂ ನಮ್ಮ ತಾಯಿ ಶ್ರೀಮತಿ ರತ್ನಮ್ಮನವರು ಹಾಕಿಕೊಟ್ಟ ಮಾರ್ಗದರ್ಶನದಂತೆ ಈ ವೈವಿಧ್ಯಮಯ ಆಹಾರ ಬಳಸುತ್ತೇವೆ.

ತುಳುನಾಡು, ಉತ್ತರ ಕನ್ನಡ, ಮಲೆನಾಡು, ಉತ್ತರ ಕರ್ನಾಟಕ ಯಾವುದೇ ಭಾಗವಿರಲಿ ಹೆಚ್ಚಿನ ಸಂಪ್ರದಾಯ, ಆಚರಣೆಗಳು ತಮ್ಮದೇ ಆದ ಮಹತ್ವ, ವೈಶಿಷ್ಟ್ಯದ ಜತೆಗೆ ವೈಜ್ಞಾನಿಕ ಕಾರಣವನ್ನು ಹೊಂದಿವೆ. ಆದರೆ, ನಂಬಿಕೆ ಮತ್ತು ಮೂಢನಂಬಿಕೆಗಳ ಬಗ್ಗೆ ಸರಿಯಾದ ವ್ಯತ್ಯಾಸ ತಿಳಿಯದೇ ಇರುವುದರಿಂದ ಆಚರಣೆ ಹಾಗೂ ಸಂಪ್ರದಾಯಗಳ ಬಗ್ಗೆ ಗೊಂದಲಗಳು ಏರ್ಪಡುತ್ತವೆ. ಮೂಢನಂಬಿಕೆಗಳನ್ನು ತೊರೆದು, ಸಂಪ್ರದಾಯ, ಪರಂಪರೆಯನ್ನು ಆಚರಣೆಯನ್ನಾಗಿಸದೆ ಜೀವನ ಕ್ರಮದಲ್ಲಿ ಅಳವಡಿಸಿಕೊಳ್ಳುವಂತಾಗಬೇಕು. ದೈಹಿಕ ಚಟುವಟಿಕೆಗಳಿಂದ ದೇಹ ದಂಡನೆಯಾಗುವುದು ಉತ್ತಮವೇ ಹೊರತು, ತಿಂದ ಅನ್ನವನ್ನು ಕರಗಿಸಿಕೊಳ್ಳಲು ದೇಹ ದಂಡನೆ ಮಾಡುವುದು ಆರೋಗ್ಯಕರ ಸಂಗತಿಯಲ್ಲ. ನಿತ್ಯ ಜೀವನದಲ್ಲಿ ಎಷ್ಟು ಸಾಧ್ಯವೋ ಅಷ್ಟು ದೈಹಿಕ ಚಟುವಟಿಕೆಗಳಿಗೆ ಒತ್ತು ನೀಡೋಣ. ರಾಸಾಯನಿಕ ಮುಕ್ತ ಆಹಾರ ಸೇವಿಸೋಣ. ಆರೋಗ್ಯದಿಂದ ಇರೋಣ.

(ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net