

ಮಳೆ ಬಂದರೆ ಸುರಿಯುವ ಮುರುಕಲು ಕಟ್ಟಡ, ಬಯಲಿನಲ್ಲಿಯೇ ಶೌಚ, ಕುಡಿಯುವ ನೀರಿಗೆ ಪರದಾಟ, ಬೆಂಚು/ಡೆಸ್ಕ್ಗಳಿಲ್ಲದೆ ನೆಲದಲ್ಲಿಯೇ ಕುಳಿತುಕೊಳ್ಳುವ ವಿದ್ಯಾರ್ಥಿಗಳು, ಕಟ್ಟಡವಿದ್ದರೆ ಕಾಂಪೌಂಡ್ ಇಲ್ಲದಿರುವುದು...
- ಹೀಗೆ ಸೌಲಭ್ಯಗಳಿಲ್ಲದೆ ಸರ್ಕಾರಿ ಶಾಲೆಗಳು ಇಂದಿಗೂ ಸಮಸ್ಯೆಯನ್ನು ಎದುರಿಸುತ್ತಿವೆ. ಪರಿಣಾಮ, ಸರ್ಕಾರಿ ಶಾಲೆಗಳಲ್ಲಿ ವರ್ಷದಿಂದ ವರ್ಷಕ್ಕೆ ಮಕ್ಕಳ ದಾಖಲಾತಿ ಸಂಖ್ಯೆ ಕುಸಿಯುತ್ತಲೇ ಇದೆ. ಪ್ರಸ್ತುತ ರಾಜ್ಯಾದ್ಯಂತ 48 ಸಾವಿರ ಸರ್ಕಾರಿ ಶಾಲೆಗಳು ಕಾರ್ಯನಿರ್ವಹಿಸುತ್ತಿದ್ದು, ಬಹುತೇಕ ಶಾಲೆಗಳಲ್ಲಿ ಪಾಠ ಕಲಿಸುವ ಶಿಕ್ಷಕರೂ ಒಳಗೊಂಡಂತೆ ಯಾವುದೊಂದೂ ಪರಿಪೂರ್ಣ ಎಂಬಂತಿಲ್ಲ.
ಇಂತಹ ಶಾಲೆಗಳಿಗೆ ಕಾಯಕಲ್ಪ ನೀಡಬೇಕು. ಸರ್ಕಾರಿ ಶಾಲೆಗಳತ್ತ ಮಕ್ಕಳು ಆಕರ್ಷಿತರಾಗಬೇಕು. ಸರ್ಕಾರಿ ಶಾಲೆಗಳು ಕೂಡ ಖಾಸಗಿ ಶಾಲೆಗಳಂತೆ ಕಾರ್ಯನಿರ್ವಹಿಸಬೇಕು ಎಂಬ ಧ್ಯೇಯವನ್ನಿಟ್ಟುಕೊಂಡು ಬದ್ಧತೆಯಿಂದ ‘ಒಸ್ಯಾಟ್’ ಎಂಬ ಸರ್ಕಾರೇತರ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ.
ದಶಕಗಳ ಕಾಲ ನಿರಂತರವಾಗಿ ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗಳಲ್ಲಿ ಓಸ್ಯಾಟ್ ಕೂಡ ಒಂದು. ಒಸ್ಯಾಟ್- (ಒನ್ ಸ್ಕೂಲ್ ಅಟ್ ಎ ಟೈಮ್ ಎಂಬ ಸರ್ಕಾರೇತರ ಸಂಸ್ಥೆ ಕಳೆದ ಒಂದು ದಶಕದಿಂದ ಶಿಕ್ಷಣ ಕ್ಷೇತ್ರದಲ್ಲಿ ಶ್ರಮಿಸುತ್ತಿದೆ. ರಾಜ್ಯದ 47 ಸರ್ಕಾರಿ ಶಾಲೆಗಳು ಸೇರಿ ದೇಶದ ವಿವಿಧೆಡೆಯಲ್ಲಿರುವ 85 ಶಾಲೆಗಳನ್ನು ಅಭಿವೃದ್ಧಿ ಪಡಿಸಿದೆ.
ಸಮ ಸಮಾಜದ ಕನಸು: ಬಡತನ, ಅನಕ್ಷರತೆ, ಶಿಕ್ಷಣದ ಅರಿವಿಲ್ಲದೆ ಲಕ್ಷಾಂತರ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದು, ಇಂತಹ ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಸಮಾಜದ ಮುಖ್ಯವಾಹಿನಿಗೆ ತರುವುದು ಮತ್ತು ಸಮಾನ ಸಮಾಜ ನಿರ್ವಿುಸುವ ಉದ್ದೇಶ ಈ ಸಂಸ್ಥೆಯದಾಗಿದೆ. ಯಾವುದೇ ಪ್ರತಿಫಲ ಅಪೇಕ್ಷೆ ಇಲ್ಲದೆ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಗುಣಮಟ್ಟದ ಮೂಲ ಸೌಕರ್ಯ ಕಲ್ಪಿಸಲು ಕಾರ್ಯನಿರ್ವಹಿಸುತ್ತಿದೆ. ವಾದಿರಾಜ ಭಟ್ ಎಂಬವರು ಈ ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿ . ’‘2003ರಲ್ಲಿ ಅಮೆರಿಕದಲ್ಲಿ ಜನ್ಮ ತಾಳಿದ ಸಂಸ್ಥೆಯು 2013ರಿಂದ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿದೆ. ಕರ್ನಾಟಕ ಹಾಗೂ ದೇಶದ ಇತರ ರಾಜ್ಯಗಳಾದ ತಮಿಳುನಾಡು, ಆಂಧ್ರ ಪ್ರದೇಶ, ಬಿಹಾರ, ಗುಜರಾತ್, ಮೇಘಾಲಯ, ಉತ್ತರಾಖಾಂಡ ಸೇರಿ ಹಲವೆಡೆ ಸೇವೆ ನೀಡುವಲ್ಲಿ ಸಂಸ್ಥೆ ನಿರತವಾಗಿದೆ.
ಅಮೆರಿಕದಿಂದ ಹಿಂತಿರುಗಿ ದೇಶದ ವಿವಿಧೆಡೆ ನೆಲೆಸಿರುವ ಸುಮಾರು 50 ಹಾಗೂ ಅಮೆರಿಕದಲ್ಲಿ ನೆಲೆಸಿರುವ 50 ಮಂದಿ ಒಟ್ಟಾರೆ 100 ಜನ ದೇಶದ ಹಳ್ಳಿಗಳಲ್ಲಿ ದುಃಸ್ಥಿತಿಯಲ್ಲಿರುವ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಗೊಳಿಸುವ ಕೆಲಸವನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿದ್ದಾರೆ’ ಎಂದು ಹೆಮ್ಮೆಪಟ್ಟುಕೊಳ್ಳುತ್ತಾರೆ ವಾದಿರಾಜ ಭಟ್.
ಗ್ರಾಮೀಣ ಮಕ್ಕಳಿಗೆ ಸಮಾನ ಶಿಕ್ಷಣ ದೊರೆಯಬೇಕು. ಆದರಲ್ಲೂ ಹೆಣ್ಣು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಎಂಬುದು ನಮ್ಮ ಉದ್ದೇಶವಾಗಿದೆ. | ವಾದಿರಾಜ ಭಟ್ ವ್ಯವಸ್ಥಾಪಕ ಟ್ರಸ್ಟಿ, ಒಸ್ಯಾಟ್
ಹತ್ತಾರು ಯೋಜನೆ: ‘ಒಂದು ಬಾರಿಗೆ ಒಂದು ಶಾಲೆ’ ಎಂಬ ಗುರಿಯಿಂದ ಆರಂಭವಾದ ಯೋಜನೆ ಇಂದು ಒಂದೇ ಬಾರಿಗೆ ಹತ್ತಾರು ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಸುಮಾರು 85 ಶಾಲೆಗಳನ್ನು ದುರಸ್ತಿ ಮಾಡಲಾಗಿದೆ. ಕನಿಷ್ಠ 50 ಲಕ್ಷ ರೂ.ಗಳಿಂದ ಆರಂಭವಾಗಿ ಕೋಟಿ ರೂ.ಗಳಲ್ಲಿ ಗುಣಮಟ್ಟದ ಕಾಮಗಾರಿ ಮಾಡಲಾಗಿದೆ ಎಂಬ ತೃಪ್ತಿ ವಾದಿರಾಜ್ ಅವರದು.
2.7 ಕೋಟಿ ವೆಚ್ಚದಲ್ಲಿ ಡಿವಿಜಿ ಶಾಲೆ ಅಭಿವೃದ್ಧಿ: ಕೋಲಾರ ಜಿಲ್ಲೆ ಮುಳಬಾಗಿಲಿನಲ್ಲಿ ಡಿ.ವಿ. ಗುಂಡಪ್ಪ ವ್ಯಾಸಂಗ ಮಾಡಿದ ಪ್ರೌಢಶಾಲೆಯಿದೆ. ಇಲ್ಲಿ 2.7 ಕೋಟಿ ರೂ. ವೆಚ್ಚದಲ್ಲಿ 10 ಕೊಠಡಿಗಳನ್ನು ಒಳಗೊಂಡ ಶಾಲಾ ಕಟ್ಟಡವನ್ನು ನಿರ್ವಿುಸುತ್ತಿದ್ದೇವೆ.
ಸುಸಜ್ಜಿತ ಕೊಠಡಿ, ಕುಡಿಯುವ ನೀರಿನ ಸೌಲಭ್ಯ, ಬಾಲಕ/ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯ, ಕಾಂಪೌಂಡ್ ಒಳಗೊಂಡಿರುತ್ತೆ. 2023ರ ಮಾರ್ಚ್ ನಲ್ಲಿ ಶಾಲೆ ಉದಾಟನೆಯಾಗುವ ನಿರೀಕ್ಷೆ ಇದೆ. ಇದರ ಜತೆಗೆ ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಸರ್ಕಾರಿ ಬಾಲಕಿಯರ ಜೂನಿಯರ್ ಕಾಲೇಜು ಅನ್ನು ಅಭಿವೃದ್ಧಿ ಪಡಿಸಲಾಗಿದೆ. ಇಲ್ಲಿ 1,200ಕ್ಕೂ ಹೆಚ್ಚಿನ ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಕರೊನಾ ಸಮಯದಲ್ಲಿ ಆರಂಭವಾದ ಒಡಿಸ್ಸಿ: ಕರೊನಾ ಸಮಯದಲ್ಲಿ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಕಲಿಕೆಯಲ್ಲಿ ಸಾಕಷ್ಟು ಹಿನ್ನಡೆಯಾಯಿತು. ಇಂತಹ ಸಮಯದಲ್ಲಿ ಎಲ್ಲ ಮಕ್ಕಳಿಗೂ ಸಮಾನ ಶಿಕ್ಷಣ, ಸಮಾನ ಸೌಲಭ್ಯ ದೊರೆಯಬೇಕು ಎಂಬ ಗುರಿಯಿಂದ ‘ಡಿಜಿಟಲ್ ಸಲಕರಣೆ’ಗಳನ್ನು ಕಲ್ಪಿಸುವ ಯೋಜನೆ (ಒಡಿಸ್ಸಿ)ಯನ್ನು ರೂಪಿಸಲಾಯಿತು. ಸದ್ಯ 54 ಶಾಲೆಗಳಲ್ಲಿ ಡಿಜಿಟಲ್ ಸಲಕರಣೆಗಳಾದ ಲ್ಯಾಪ್ಟಾಪ್, ಟ್ಯಾಬ್, ಸ್ಮಾರ್ಟ್ ಫೋನ್ಗಳನ್ನು ವಿತರಿಸಲಾಗಿದೆ. 9,493 ವಿದ್ಯಾರ್ಥಿಗಳು ಈ ಸೌಲಭ್ಯವನ್ನು ಪಡೆದಿದ್ದಾರೆ. ಲ್ಯಾಪ್ಟಾಪ್ ಹಾಗೂ ಟ್ಯಾಬ್ ಬಳಸಿ ವಿದ್ಯಾರ್ಥಿಗಳು ಕಲಿಕೆಗೆ ಪೂರಕವಾದ ಮಾಹಿತಿಗಳನ್ನು ಪಡೆಯುತ್ತಿದ್ದಾರೆ. ಗ್ರಾಮೀಣ ಮಕ್ಕಳ ಕಲಿಕೆಗೂ ಇದು ಸಹಕಾರಿಯಾಗಿದೆ ಎಂದರು ವಾದಿರಾಜ ಭಟ್.