'ಪ್ರತಿಪಕ್ಷಗಳು ದೇಶಕ್ಕಾಗಿ ಏನನ್ನೂ ಮಾಡಿಲ್ಲ, ನಾವು ನಿಮ್ಮೊಂದಿಗೆ ಒಟ್ಟಾಗಿ ಕೆಲಸ ಮಾಡ್ತೇವೆ': ಮೋದಿಯವರಿಗೆ ನಿತೀಶ್ ಕುಮಾರ್ ವಾಗ್ದಾನ

nithish
Published on

ನವದೆಹಲಿ: 'ಪ್ರತಿಪಕ್ಷಗಳು ದೇಶಕ್ಕಾಗಿ ಏನನ್ನೂ ಮಾಡಿಲ್ಲ, ನಾವು ನಿಮ್ಮೊಂದಿಗೆ ಒಟ್ಟಾಗಿ ಕೆಲಸ ಮಾಡುತ್ತೇವೆ' ಎಂದು ಎನ್‌ಡಿಎ ನಾಯಕ ನಿತೀಶ್ ಕುಮಾರ್ ಮೋದಿಯವರಿಗೆ ವಾಗ್ದಾನ ಮಾಡಿದರು.

ಹಳೆಯ ಸಂಸತ್​ ಭವನದಲ್ಲಿ ಶುಕ್ರವಾರ(ಜೂ7)ಆಯೋಜಿಸಿದ್ದ ಎನ್​ಡಿಎ ಎಂಪಿಗಳ ಸಭೆಯಲ್ಲಿ ಮಾತನಾಡಿದ ಜನತಾ ದಳ ಯುನೈಟೆಡ್ (ಯು) ಮುಖ್ಯಸ್ಥ ಮತ್ತು ಬಿಹಾರ ಸಿಎಂ ನಿತೀಶ್ ಕುಮಾರ್ ಅವರು ತಮ್ಮ ಬೆಂಬಲವನ್ನು ಘೋಷಿಸಿದರಲ್ಲದೆ, ನಾನು ಮತ್ತು ನನ್ನ ಪಕ್ಷವು ಯಾವಾಗಲೂ ಎನ್​ಡಿಎ ಜೊತೆಗೇ ಇರುತ್ತದೆ ಎಂದು ಹೇಳಿದರು.

“ನಾವೆಲ್ಲರೂ ಒಗ್ಗೂಡಿರುವುದು ದೇಶದ ದೃಷ್ಟಿಯಿಂದ ಬಹಳ ಒಳ್ಳೆಯ ನಡೆಯಾಗಿದೆ. ನಾವೆಲ್ಲರೂ ನಿಮ್ಮೊಂದಿಗೆ (ಪಿಎಂ ಮೋದಿ) ಒಟ್ಟಾಗಿ ಕೆಲಸ ಮಾಡುತ್ತೇವೆ. ನೀವು ಭಾನುವಾರ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತೀರಿ, ಆದರೆ ಇಂದೇ ಅದನ್ನು ಮಾಡಬೇಕೆಂದು ನಾನು ಬಯಸುತ್ತೇನೆ. ನೀವು ಪ್ರಮಾಣವಚನ ಸ್ವೀಕರಿಸಿದಾಗ, ನಾವು ನಿಮ್ಮೊಂದಿಗೆ ಇರುತ್ತೇವೆ... ನಿಮ್ಮ ನಾಯಕತ್ವದಲ್ಲಿ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಅವರು ಹೇಳಿದರು.

ಅವರು ತಮ್ಮ ಭಾಷಣದಲ್ಲಿ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು, ಅವರು(ಪ್ರತಿಪಕ್ಷಗಳು) ದೇಶ ಮತ್ತು ರಾಜ್ಯಕ್ಕಾಗಿ ಏನನ್ನೂ ಮಾಡಿಲ್ಲ ಎಂದು ಹೇಳಿದರು.

''ಪ್ರತಿಪಕ್ಷಗಳು ಏನೂ ಮಾಡಿಲ್ಲ. ಈ ಬಾರಿ ನೀವು (ಮೋದಿ) ಮತ್ತೆ ಅಧಿಕಾರಕ್ಕೆ ಬಂದರೆ, ಮುಂದಿನ ಬಾರಿ ಈಗ ಗೆದ್ದಿರುವ ಯಾವುದೇ ಸ್ಥಾನವನ್ನು ಅವರು ಗೆಲ್ಲುವುದಿಲ್ಲ ಎಂದು ನಾನು ಭಾವಿಸುತ್ತೇನೆ ಎಂದರು.

ಸಭೆಯಲ್ಲಿ ಹಿರಿಯ ಬಿಜೆಪಿ ನಾಯಕ ರಾಜನಾಥ್ ಸಿಂಗ್ ಅವರು ನರೇಂದ್ರ ಮೋದಿಯವರ ಹೆಸರನ್ನು ಎನ್‌ಡಿಎ ಸಂಸದೀಯ ಪಕ್ಷದ ನಾಯಕರಾಗಿ ಪ್ರಸ್ತಾಪಿಸಿದರು , ಅದನ್ನು ಅವರ ಪಕ್ಷದ ಸಹೋದ್ಯೋಗಿಗಳಾದ ಅಮಿತ್ ಶಾ ಮತ್ತು ನಿತಿನ್ ಗಡ್ಕರಿ ಮತ್ತು ಟಿಡಿಪಿ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು, ಎನ್‌ಡಿಎ ಉನ್ನತ ನಾಯಕರು ಬೆಂಬಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net