ಸತತ 8ನೇ ಬಾರಿಗೆ ಬದಲಾಗದ ರೆಪೋ ದರ: 6.5% ನಲ್ಲಿ ಮುಂದುವರಿಕೆ

rbi
Published on

ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ನಿರೀಕ್ಷೆಯಂತೆ ಶುಕ್ರವಾರ ತನ್ನ ಪ್ರಮುಖ ಬಡ್ಡಿ ದರಗಳನ್ನು ಯಥಾಸ್ಥಿತಿಯಲ್ಲಿಟ್ಟಿದೆ, ದೃಢವಾದ ಆರ್ಥಿಕ ಬೆಳವಣಿಗೆಯ ಮಧ್ಯೆ ಹಣದುಬ್ಬರದ ಮೇಲೆ ಗಮನ ಕೇಂದ್ರೀಕರಿಸಿದೆ.

ಮೂವರು ಆರ್‌ಬಿಐ ಮತ್ತು ಅಷ್ಟೇ ಸಂಖ್ಯೆಯ ಬಾಹ್ಯ ಸದಸ್ಯರನ್ನು ಒಳಗೊಂಡಿರುವ ಹಣಕಾಸು ನೀತಿ ಸಮಿತಿಯು ಸತತ ಎಂಟನೇ ಬಾರಿಗೆ ರೆಪೊ ದರವನ್ನು ಶೇಕಡಾ 6.50ರ ಯಥಾಸ್ಥಿತಿಯಲ್ಲಿ ಇರಿಸಿದೆ ಎಂದು ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನರೇಂದ್ರ ಮೋದಿಯವರು ಸತತ ಮೂರನೇ ಬಾರಿಗೆ ಭಾರತದ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುವ ಕೆಲವೇ ದಿನಗಳ ಮೊದಲು ಈ ನಿರ್ಧಾರವು ಬಂದಿದೆ. ಆದರೆ, ಅವರ ಪಕ್ಷವು ಸ್ಪಷ್ಟ ಬಹುಮತ ಗಳಿಸದೆ ಸಮ್ಮಿಶ್ರ ಸರ್ಕಾರದಲ್ಲಿ ಅಧಿಕಾರವನ್ನು ಹಂಚಿಕೊಳ್ಳುವ ಪರಿಸ್ಥಿತಿ ತಲೆದೋರಿದೆ.

ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು 2024-25ರ ಹಣಕಾಸು ವರ್ಷದಲ್ಲಿ ಯೋಜಿತ ನೈಜ ಜಿಡಿಪಿ (ಒಟ್ಟು ದೇಶಿಯ ಉತ್ಪನ್ನ) ಬೆಳವಣಿಗೆಯಲ್ಲಿ ಹೆಚ್ಚಳವನ್ನು ಘೋಷಿಸಿದ್ದಾರೆ, ಇದನ್ನು ಹಿಂದಿನ ಅಂದಾಜಿನ 7% ಬದಲು 7.2% ಕ್ಕೆ ಹೆಚ್ಚಿಸಿದ್ದಾರೆ.

"ನಾವು ಈಗ ಪ್ರಸ್ತುತ ಹಣಕಾಸು ವರ್ಷ 2024-25 ಕ್ಕೆ 7.2% ರಷ್ಟು ಜಿಡಿಪಿ ಬೆಳವಣಿಗೆಯನ್ನು ನಿರೀಕ್ಷಿಸುತ್ತಿದ್ದೇವೆ. ಮೊದಲ ತ್ರೈಮಾಸಿಕದಲ್ಲಿ 7.3%, ಎರಡನೇ ತ್ರೈಮಾಸಿಕದಲ್ಲಿ 7.2%, ಮೂರನೇ ತ್ರೈಮಾಸಿಕದಲ್ಲಿ 7.3% ಮತ್ತು ನಾಲ್ಕನೇ ತ್ರೈಮಾಸಿಕದಲ್ಲಿ 7.2%. ಜಿಡಿಪಿ ಬೆಳವಣಿಗೆ ಆಗಬಹುದು. ಅಪಾಯಗಳು ಸಮನಾಗಿ ಸಮತೋಲನದಲ್ಲಿರುತ್ತವೆ" ಎಂದು ಶಕ್ತಿಕಾಂತ ದಾಸ್ ಹೇಳಿದ್ದಾರೆ.

ಭಾರತದ ನೈಜ ಜಿಡಿಪಿ 2023-24 (ಏಪ್ರಿಲ್ 2023 ರಿಂದ ಮಾರ್ಚ್ 2024) ಹಣಕಾಸು ವರ್ಷದಲ್ಲಿ ಶೇ. 8.2 ರಷ್ಟು ಬೆಳೆದಿದೆ, ಆದರೆ, ಹಣದುಬ್ಬರವು ಏಪ್ರಿಲ್‌ನಲ್ಲಿ ಆರ್​ಬಿಐ ಗುರಿಗಿಂತ ಶೇಕಡಾ 4.83 ಆಗಿದೆ. 2023-24ನೇ ಹಣಕಾಸು ವರ್ಷದ ಬೆಳವಣಿಗೆಯು ಮಾರ್ಚ್ ತ್ರೈಮಾಸಿಕದಲ್ಲಿ ಶೇಕಡಾ 7.8 ರಷ್ಟು ಆಗಿದೆ.

ಆರ್​ಬಿಐ ತನ್ನ ಹೊಂದಾಣಿಕೆಯ ನೀತಿಯನ್ನು ಹಿಂತೆಗೆದುಕೊಳ್ಳುವಲ್ಲಿ ತನ್ನ ಗಮನ ಮುಂದುವರಿಸಲು ಯೋಜಿಸಿದೆ. ಇದಲ್ಲದೆ, ಸಾಮಾನ್ಯ ನೈಋತ್ಯ ಮಾನ್ಸೂನ್ ನಿರೀಕ್ಷಿಸಲಾಗಿದೆ, ಇದು ಖಾರಿಫ್ ಬೆಳೆ ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ಜಲಾಶಯಗಳಲ್ಲಿ ನೀರಿನ ಸಂಗ್ರಹ ಮಟ್ಟವನ್ನು ಸುಧಾರಿಸಲು ನಿರೀಕ್ಷಿಸಿದೆ.

2024-25ನೇ ಹಣಕಾಸು ವರ್ಷದಲ್ಲಿ ಆರ್​ಬಿಐ ಹಣದುಬ್ಬರ ಮುನ್ಸೂಚನೆಯನ್ನು 4.5% ನಲ್ಲಿ ಇರಿಸಿದೆ. ಶಕ್ತಿಕಾಂತ ದಾಸ್ ಅವರು ದೀರ್ಘಾವಧಿಯಲ್ಲಿ ಹಣದುಬ್ಬರವನ್ನು 4% ಗುರಿಗೆ ಮರುಸ್ಥಾಪಿಸಲು ಆರ್​ಬಿಐನ ಸಮರ್ಪಣೆಯನ್ನು ಖಚಿತಪಡಿಸಿದ್ದಾರೆ. "ವಿತ್ತೀಯ ನೀತಿಯು ಹಣದುಬ್ಬರ ಇಳಿತವನ್ನು ಮುಂದುವರಿಸಬೇಕು ಮತ್ತು ಬಾಳಿಕೆ ಬರುವ ಆಧಾರದ ಮೇಲೆ ಹಣದುಬ್ಬರವನ್ನು ಶೇಕಡಾ 4.0 ರ ಗುರಿಗೆ ಹೊಂದಿಸುವ ಬದ್ಧತೆಯಲ್ಲಿ ದೃಢವಾಗಿರಬೇಕು" ಎಂದು ಅವರು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net