ಬಾಲ್ಯದಲ್ಲೇ ಸ್ಥೂಲಕಾಯ; ಆರೋಗ್ಯಕ್ಕೆ ಅಪಾಯ

Putani Lead
Published on

ಈಗಿನ ಮಕ್ಕಳು ಆಧುನಿಕ ಸಂಸ್ಕೃತಿಯನ್ನು ಮೈಗೂಡಿಸಿಕೊಂಡವರು. ಕಂಪ್ಯೂಟರ್ ಜಗತ್ತಿನಲ್ಲಿ ಮುಳುಗಿರುವ ಅವರಿಗೆ ಕುಳಿತಲ್ಲೇ ಇಡೀ ವಿಶ್ವವನ್ನು ನೋಡುವ ಸಾಮರ್ಥ್ಯ ಇದೆ. ಇದೇ ಚುರುಕುತನ ಅವರ ಆರೋಗ್ಯದ ಮೇಲೆ ಎಷ್ಟು ಪರಿಣಾಮ ಬೀರಿದೆ ಎಂಬುದನ್ನು ಅವಲೋಕಿಸಿದಾಗ ಆಘಾತಕಾರಿ ಸಂಗತಿ ಹೊರಬೀಳುತ್ತದೆ. ಈಗ ಮಕ್ಕಳಲ್ಲೂ ಬೊಜ್ಜು ಹೆಚ್ಚೆಚ್ಚು ಕಾಣಿಸಿಕೊಳ್ಳುತ್ತಿದ್ದು, ಎಚ್ಚೆತ್ತುಕೊಳ್ಳದಿದ್ದರೆ ಆರೋಗ್ಯ ತೊಂದರೆ ನಿಶ್ಚಿತ.

ಚಿಕ್ಕ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಸ್ಥೂಲಕಾಯವನ್ನು ಗಂಭೀರ ಸಮಸ್ಯೆ ಎಂದು ಪರಿಗಣಿಸದಿದ್ದರೆ ಮುಂದೊಂದು ದಿನ ಪಾಲಕರು ಬೆಲೆ ತೆರಬೇಕಾದೀತು. ಮಕ್ಕಳು ಜಂಕ್​ಫುಡ್​ಗಳಿಗೆ ಮಾರುಹೋಗುತ್ತಿರುವುದೇ ಇದಕ್ಕೆ ಮುಖ್ಯ ಕಾರಣ ಎಂದು ಹೇಳಬಹುದಾದರೂ ಆಹಾರ ಸೇವನೆಯಲ್ಲಿ ಏರುಪೇರಾದರೂ ಬೊಜ್ಜಿನ ಸಮಸ್ಯೆ ಕಾಡುತ್ತದೆ. ಇದರಿಂದ ದೇಹದ ಆರೋಗ್ಯವಷ್ಟೆ ಅಲ್ಲದೆ ಮಾನಸಿಕವಾಗಿಯೂ ಮಕ್ಕಳು ಕುಗ್ಗುತ್ತಾರೆ; ಕೀಳರಿ ಮೆಗೆ ಒಳಗಾಗುತ್ತಾರೆ. ಹೆಚ್ಚಿನ ಕೊಬ್ಬಿನಾಂಶ ಇರುವ ಆಹಾರ ಸೇವನೆಯಿಂದ ಆರೋಗ್ಯ ಮತ್ತು ಆರೋಗ್ಯದ ಸ್ಥಿತಿಯ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸ್ಥಿತಿ ಇದಾಗಿದೆ. ಸ್ಥೂಲಕಾಯವನ್ನು ಬಿಎಂಐ (ಬಾಡಿ ಮಾಸ್ ಇಂಡೆಕ್ಸ್) ಆಧಾರದಲ್ಲಿ ಅಳೆಯಲಾಗುತ್ತದೆ.

ಆಹಾರ ಅಭ್ಯಾಸವೂ ಕಾರಣ: ಹೆಚ್ಚು ತಿನ್ನುವ ಮಕ್ಕಳೆಲ್ಲ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಾರೆ ಎಂದು ಹೇಳಲಾಗದು. ಆಹಾರದಲ್ಲಿ ಎಷ್ಟು ಕ್ಯಾಲರಿ ಪ್ರಮಾಣ ಇದೆ, ಕೊಬ್ಬಿನಂಶ ಎಷ್ಟಿದೆ ಎಂಬುದನ್ನು ಗಮನಿಸಬೇಕಾಗುತ್ತದೆ. ಮಕ್ಕಳು ಬಾಲ್ಯದಲ್ಲೇ ಅತಿ ಕೊಬ್ಬಿನಾಂಶದ ಆಹಾರ ಸೇವಿಸಿದಾಗ ಇಂತಹ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ವಿವಿಧ ತರಕಾರಿ, ಹಣ್ಣು, ಧಾನ್ಯ, ಪ್ರೋಟಿನ್​ಯುುಕ್ತ ಪದಾರ್ಥ, ಕಡಿಮೆ ಕೊಬ್ಬಿನಾಂಶ ಇರುವ ಆಹಾರ ಸೇವಿಸುವುದು ಸೂಕ್ತ. ಕೋಲ್ಡ್ ಡ್ರಿಂಕ್ಸ್​ಗಳಲ್ಲಿ ಸಕ್ಕರೆ ಪ್ರಮಾಣ ಹೆಚ್ಚಿರುವುದರಿಂದ 1.6 ಪಟ್ಟು ಸ್ಥೂಲಕಾಯ ಹೆಚ್ಚಾಗುವ ಸಂಭವವಿರುತ್ತದೆ. ಆದರಿಂದ ಮಕ್ಕಳು ಸಿದ್ಧ ಆಹಾರ, ಸಿದ್ಧ ಪಾನೀಯದಿಂದ ದೂರ ಉಳಿದರೆ ಒಳಿತು.

ಪರಿಣಾಮವೇನು?:ಬಾಲ್ಯದಲ್ಲಿ ಬೊಜ್ಜು ಕಾಣಿಸಿಕೊಳ್ಳುವುದು ಒಂದು ಸಂಕೀರ್ಣ ಆರೋಗ್ಯ ಸಮಸ್ಯೆ. ಮಗುವಿನ ವಯಸ್ಸು ಮತ್ತು ಎತ್ತರಕ್ಕೆ ಸಾಮಾನ್ಯ ಅಥವಾ ಅಗತ್ಯಕ್ಕಿಂತ ತೂಕ ಹೆಚ್ಚಾದಾಗ ಬೊಜ್ಜು ಕಾಣಿಸಿಕೊಳ್ಳುತ್ತದೆ. ಕ್ರಮೇಣ ಅಧಿಕ  ರಕ್ತದೊತ್ತಡ, ನಿದ್ರಾಹೀನತೆ, ಮಧುಮೇಹ, ಹೃದಯ ಸಂಬಂಧಿ ಕಾಯಿಲೆ ಹೀಗೆ ಹಲವಾರು ರೋಗಕ್ಕೆ ದಾರಿ ಮಾಡಿಕೊಡುತ್ತದೆ. ದೇಹದ ತೂಕ ಹೆಚ್ಚಾದಂತೆ ಪದೇಪದೆ ಹಸಿವಾಗುವುದರಿಂದ ಇನ್ನಷ್ಟು ದಪ್ಪಗಾಗುವ ಸಾಧ್ಯತೆ ಇರುತ್ತದೆ.

ಕುಳಿತೇ ಇರುವ ಜೀವನಶೈಲಿ: ಮೊದಲೆಲ್ಲಾ ರಜೆ ಬಂದರೆ ಹೊರಾಂಗಣ ಆಟದಲ್ಲಿ ಬ್ಯುಸಿ ಆಗುತ್ತಿದ್ದರು. ಆಹಾರವೂ ಸಮತೋಲನದಲ್ಲಿ ಇದ್ದ ಕಾರಣ ಬೊಜ್ಜಿನ ಸಮಸ್ಯೆ ಕಾಡುತ್ತಿರಲಿಲ್ಲ. ಈಗ ಎಲ್ಲವೂ ಕುಳಿತಲ್ಲೇ ಬರುತ್ತದೆ. ಮಕ್ಕಳು ಮನೆಯ ಕೋಣೆಯೊಂದರಲ್ಲಿ ಕುಳಿತು ಆಟ ಆಡುತ್ತಾರೆ. ಒಳಾಂಗಣ ಕ್ರೀಡೆ ಅನ್ನುವುದಕ್ಕಿಂತ ಮೊಬೈಲ್, ಟಿವಿ, ವಿಡಿಯೋ ಗೇಮ್ ಆಡುತ್ತಾರೆ. ದಿನಕ್ಕೆ 4 ಗಂಟೆಗಿಂತ ಹೆಚ್ಚು ಟಿವಿ ನೋಡಿದರೆ ಶೇ.21, ಒಂದಕ್ಕಿಂತ ಹೆಚ್ಚು ತಾಸು ಗಣಕಯಂತ್ರ ಬಳಸಿದರೆ ಶೇ.4ರಷ್ಟು ತೂಕ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ದೇಹಕ್ಕೆ ಅಗತ್ಯಕ್ಕಿಂತ ಹೆಚ್ಚು ವಿಶ್ರಾಂತಿ ಕೊಟ್ಟಾಗ ದೇಹದಲ್ಲಿ ಕೊಬ್ಬಿನಾಂಶ ಶೇಖರಣೆಯಾಗಿ ಬೊಜ್ಜು ಬೆಳೆಯುತ್ತದೆ.

ಸ್ಥೂಲಕಾಯದಿಂದಾಗುವ ದುಷ್ಪರಿಣಾಮ

  • ಆತ್ಮವಿಶ್ವಾಸದ ಕೊರತೆಯಿಂದ ಸ್ಥೂಲಕಾಯದ ಶೇ.19 ಮಕ್ಕಳು ದುಃಖಿತರಾಗುತ್ತಾರೆ
  • ಕೀಳರಿಮೆ, ಸಂಕೋಚ ಸ್ವಭಾವದವರಾಗಿರುತ್ತಾರೆ
  • ಅತಿ ಒತ್ತಡ ತಿನ್ನುವ ಅಭ್ಯಾಸವನ್ನು ಪ್ರಚೋದಿಸುತ್ತದೆ
  • ಅತಿಯಾದ ಖಿನ್ನತೆ ತೂಕ ಹೆಚ್ಚಿಸುತ್ತದೆ
  • ತಮ್ಮೊಂದಿಗಿರುವವರ ಜೊತೆ ಬೆರೆಯುವ ಗುಣ ಕಡಿಮೆ ಯಾಗುತ್ತದೆ
  • ಅಸ್ತಮಾ ಮತ್ತು ನಿದ್ರೆಯಲ್ಲಿ ಉಸಿರುಕಟ್ಟುವಿಕೆ ಕಾಣಿಸಿಕೊಳ್ಳುತ್ತದೆ

ಮಾನಸಿಕ ಖಿನ್ನತೆ ಹೆಚ್ಚು: ಬೊಜ್ಜಿರುವ ಮಕ್ಕಳು ಶಾಲೆ, ಮನೆ, ಕುಟುಂಬದಲ್ಲಿ ತಾರತಮ್ಯಕ್ಕೆ ಒಳಗಾಗುತ್ತಾರೆ. ಇದರಿಂದ ಆತ್ಮವಿಶ್ವಾಸ ಕಡಿಮೆಯಾಗಿ ಖಿನ್ನತೆಗೆ ದಾರಿ ಮಾಡಿಕೊಡುತ್ತದೆ. ಸಾಮಾನ್ಯ ವಾಗಿ 5ರಿಂದ 15 ವರ್ಷ ವಯಸ್ಸಿನ ಮಕ್ಕಳು ಈ ಸಮಸ್ಯೆ ಎದುರಿಸುತ್ತಾರೆ. ನೋಡಲು ಸುಂದರವಾಗಿಲ್ಲ; ದಪ್ಪ ಇದ್ದಾಳೆ/ನೆ ಎಂಬ ಕಾರಣ ಕ್ಕಾಗಿ ಗುಂಪಿನಿಂದ ಹೊರ ಗುಳಿಯುವ ಸಾಧ್ಯತೆ ಇರುತ್ತದೆ.

ಪರಿಹಾರ ಹೇಗೆ

  • ಸ್ಥೂಲಕಾಯದ ಬಗ್ಗೆ ಶಾಲಾ ಹಂತದಲ್ಲಿ ಮಕ್ಕಳಲ್ಲಿ ಅರಿವು ಮೂಡಿಸುವುದು
  • ಕೊಬ್ಬಿನಾಂಶ ಕಡಿಮೆ ಇರುವ ಆಹಾರ ಸೇವನೆ
  • ಅಗತ್ಯಕ್ಕಿಂತ ಹೆಚ್ಚು ನಿದ್ರೆ ಮಾಡದಂತೆ ನೋಡಿಕೊಳ್ಳುವುದು
  • ಖಿನ್ನತೆಗೆ ಒಳಗಾದ ಮಕ್ಕಳನ್ನು ತಕ್ಷಣ ಮನೋವೈದ್ಯರಲ್ಲಿ ಕರೆದುಕೊಂಡು ಹೋಗುವುದು 
  • ಪ್ರಾರಂಭಿಕ ಹಂತದಲ್ಲೇ ಆಹಾರ ಪದ್ಧತಿಯಲ್ಲಿ ಬದಲಾವಣೆ ತರುವುದು

ಕರೊನಾ ಕಾರಣದಿಂದ ಮಕ್ಕಳು ಆನ್​ಲೈನ್ ತರಗತಿ ಯಲ್ಲೇ ಹೆಚ್ಚು ಕಳೆದಿದ್ದರಿಂದ ಸ್ಥೂಲಕಾಯ ಪ್ರಮಾಣ ಹೆಚ್ಚಾಗಿದೆ. ಕುಳಿತಲ್ಲೇ ತಿಂಡಿ, ಊಟ, ಓದು, ಆಟ ಎಲ್ಲವೂ ಆದಾಗ ದೈಹಿಕ ಶ್ರಮಕ್ಕೆ ಆಸ್ಪದವೇ ಇರುವುದಿಲ್ಲ. ಇದರಿಂದ ಕ್ರಮೇಣ ಬೊಜ್ಜು ಕಾಣಿಸಿಕೊಳ್ಳುತ್ತದೆ. ಇದು ಪ್ರಾರಂಭದಲ್ಲಿ ಪರಿಣಾಮ ಬೀರದಿದ್ದರೂ ಮುಂದೆ ಮಧುಮೇಹ, ಬಿಪಿಯಂತಹ ಕಾಯಿಲೆಗೆ ದೂಡುವ ಸಂಭವವಿರುತ್ತದೆ. ಆರೋಗ್ಯ, ಆಹಾರದ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಬೇಕು.

| ಡಾ. ಬಸವರಾಜ ಮಕ್ಕಳ ತಜ್ಞ, ಇಂದಿರಾಗಾಂಧಿ ಆಸ್ಪತ್ರೆ, ಬೆಂಗಳೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net