

| ಮಂಜುನಾಥ ಕೋಳಿಗುಡ್ಡ ಬೆಳಗಾವಿ
ಹೆಚ್ಚುತ್ತಿರುವ ಕೂಲಿ, ಏರುತ್ತಿರುವ ರಸಗೊಬ್ಬರ ಬೆಲೆ, ಬಿತ್ತನೆ ಬೀಜದ ದರ, ಯಂತ್ರೋಪಕರಣಗಳ ಬಾಡಿಗೆ, ಇಂಧನದ ಬೆಲೆ ಹೆಚ್ಚಳ ಹಾಗೂ ಕಬ್ಬಿನ ಬಿಲ್ ಕೈ ಸೇರದೆ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ಕೆಲ ರೈತರು ಸದ್ಯ ನರ್ಸರಿ ಕಬ್ಬಿನ ನರ್ಸರಿ ಸಸಿಗಳತ್ತ ಮುಖ ಮಾಡುತ್ತಿದ್ದಾರೆ. ಸಾಂಪ್ರದಾಯಿಕ ವಿಧಾನದಲ್ಲಿ ಕಬ್ಬು ಬೆಳೆಯಲು ಪ್ರತಿ ಎಕರೆಗೆ ಸರಾಸರಿ 3.5 ರಿಂದ 4 ಟನ್ ಕಬ್ಬಿನ ಬೀಜ ಬೇಕು. ಅಲ್ಲದೆ, ಎಕರೆಗೆ 30 ರಿಂದ 38 ಸಾವಿರ ರೂ. ಹಣ ಖರ್ಚಾಗುತ್ತದೆ. ಆದರೆ, ನರ್ಸರಿ ವಿಧಾನದಲ್ಲಿ ಎಕರೆಗೆ 7.5ರಿಂದ 8 ಕ್ವಿಂಟಾಲ್ ಬೀಜ ಅವಶ್ಯವಿದೆ. ಎಕರೆಗೆ 15 ರಿಂದ 18 ಸಾವಿರ ರೂ. ವರೆಗೆ ವೆಚ್ಚವಾಗುತ್ತದೆ. ಒಟ್ಟಾರೆ ನರ್ಸರಿ ಸಸಿ ನಾಟಿ ಮಾಡುವುದರಿಂದ ಎಕರೆಗೆ ಸರಾಸರಿ 18 ಸಾವಿರ ರೂ. ಉಳಿತಾಯವಾಗುವುದರ ಜತೆಗೆ ಇಳುವರಿ ಪ್ರಮಾಣವೂ ಹೆಚ್ಚುತ್ತದೆ. ಆರ್ಥಿಕ ಚೇತರಿಕೆ ಉದ್ದೇಶದಿಂದ ಸದ್ಯ ಬೆಳೆಗಾರರು ನರ್ಸರಿ ಕಬ್ಬಿನ ಸಸಿಗಳತ್ತ ಮುಖ ಮಾಡುತ್ತಿದ್ದಾರೆ. ಇದು ಉತ್ತಮ ಇಳವರಿಯೊಂದಿಗೆ ಲಾಭದಾಯಕ ಕೃಷಿಗೆ ಪೂರಕವಾಗಿದೆ. 2021-22ನೇ ಸಾಲಿನಲ್ಲಿ ರಾಜ್ಯದಲ್ಲಿ 5.22 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗುತ್ತಿದೆ. ಈ ಪೈಕಿ 80 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ನರ್ಸಸಿ ಕಬ್ಬಿನ ಸಸಿಗಳನ್ನು ನಾಟಿ ಮಾಡಿ, ಕಬ್ಬು ಬೆಳೆಯಲಾಗಿದೆ. ಆಯಾ ಪ್ರದೇಶದ ಮಣ್ಣಿನ ಫಲವತ್ತತೆ ಆಧರಿಸಿ ಎಕರೆಗೆ ಸರಾಸರಿ 50 ರಿಂದ 61 ಟನ್ ವರೆಗೆ ಇಳುವರಿ ಇದೆ. ಪ್ರಸಕ್ತ ಸಾಲಿನಲ್ಲಿ ನರ್ಸರಿಯಲ್ಲಿ ಬೆಳೆದಿರುವ ಕಬ್ಬಿನ ಸಸಿಗಳನ್ನು ನಾಟಿ ಮಾಡಲು ರೈತರ ಮುಂದಾದ ಕಾರಣ ಕಬ್ಬಿನ ಸಸಿಗಳ ಬೇಡಿಕೆ ಪ್ರಮಾಣವೂ ಅಧಿಕವಾಗಿದೆ.
ಕಬ್ಬಿನ ಬೀಜ ದರ ಏರಿಕೆ: ಕಬ್ಬಿನ ಪ್ರದೇಶ ವಿಸ್ತರಣೆಯಾಗು ತ್ತಿರುವ ಬೆನ್ನಲ್ಲೇ ಕಬ್ಬಿನ ಬೀಜದ ದರ ದುಬಾರಿಯಾಗಿದೆ. 180024 (ತಿಳಿ ಹಸಿರು), 86032 (ಕೆಂಪು), 8005 (ತಿಳಿ ಹಸಿರು), ಸಿಒಸಿ 671(ಗಂಗಾವತಿ), ಸಿಒ 91010 (ಬಿಳಿ ಕಬ್ಬು) ಹೀಗೆ ವಿವಿಧ ತಳಿಯ ಬೀಜಗಳು ಟನ್ಗೆ 4,200 ರಿಂದ 5,000 ರೂ. ವರೆಗೆ ಮಾರಾಟವಾಗುತ್ತಿದೆ ಎನ್ನುತ್ತಾರೆ ಅಧಿಕಾರಿಗಳು.
ಸಾಂಪ್ರದಾಯಿಕ ವಿಧಾನದಲ್ಲಿ ಕಬ್ಬು ನಾಟಿ ಮಾಡಿದರೆ ಮೊಳಕೆ ಒಡೆಯಲು 1 ತಿಂಗಳು ಬೇಕು. ಆದರೆ, ನರ್ಸರಿಯಲ್ಲಿ ಕಬ್ಬಿನ ಸಸಿಗಳು ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಆದಾಯ ನೀಡುತ್ತವೆ. ಕೆಲ ರೈತರು ಸ್ವತಃ ಕಬ್ಬಿನ ಸಸಿ ತಯಾರಿಸಿ ನಾಟಿ ಮಾಡಿಕೊಳ್ಳುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ನರ್ಸರಿ ಕಬ್ಬಿನ ಸಸಿಗಳ ಬೇಡಿಕೆ ವೃದ್ಧಿಸುತ್ತಿದೆ. | ಶಿವನಗೌಡ ಪಾಟೀಲ ಕೃಷಿ ಇಲಾಖೆ ಜಂಟಿ ನಿರ್ದೇಶಕ
ಒಂದು ಸಸಿಗೆ 2.25 ರೂಪಾಯಿ: ನರ್ಸರಿಯಲ್ಲಿ ಕಬ್ಬಿನ ಕೋಶ ಮಾತ್ರ ಕತ್ತರಿಸಿ ಅದನ್ನು ಪ್ಲಾಸ್ಟಿಕ್ ಟ್ರೇನಲ್ಲಿ ಹಾಕಿ ಸಸಿ ಬೆಳೆಸಲಾಗುತ್ತದೆ. ಇದಕ್ಕಾಗಿ ಕೋಕೊ ಪಿಟ್ (ತೆಂಗಿನ ನಾರು ಪುಡಿ) ಮತ್ತು ಮೂರು ತರಹದ ರಸಾಯನಿಕಗಳನ್ನು ಬಳಸಿ ಹದವಾದ ಮಣ್ಣಿನ ಮಾದರಿಯ ವಸ್ತುವನ್ನು ಸಿದ್ಧಪಡಿಸಲಾಗುತ್ತದೆ. ಇದನ್ನು ಪ್ಲಾಸ್ಟಿಕ್ ಟ್ರೇನಲ್ಲಿ ಹಾಕಿ, ಅದರಲ್ಲಿ ಕಣ್ಣನ್ನು ನೆನೆಹಾಕಿ, ಏಳು ದಿನಗಳ ಬಳಿಕ ಪ್ಲಾಸ್ಟಿಕ್ ಹಾಕಿ, ತೇವಾಂಶದಲ್ಲಿ ವ್ಯತ್ಯಯವಾಗದಂತೆ ಜೋಪಾನ ಮಾಡಲಾಗುತ್ತದೆ. ಸಸಿಗಳು 40 ಇಂಚು ಬೆಳೆದ ನಂತರ ಆರೈಕೆ ಮಾಡಿ ನಂತರ ಜಮೀನಿನಲ್ಲಿ ನಾಟಿ ಮಾಡಲಾಗುತ್ತದೆ. ಒಂದು ಸಸಿಗೆ 2.25 ರೂ. ದಿಂದ 3 ರೂ. ವರೆಗೆ ಮಾರಾಟವಾಗುತ್ತದೆ.