

ಪಮ್ಮುಕಲೆ ಎಂದರೆ ಟರ್ಕಿಶ್ ಭಾಷೆಯಲ್ಲಿ ಅರಳೆ ಅಥವಾ ಹತ್ತಿ ಎಂದರ್ಥ. ಹಾಗಾಗಿ ಸ್ಥಳೀಯವಾಗಿ ‘ಹತ್ತಿಯ ಕೋಟೆ’ ಎಂದೇ ಕರೆಯುವ ಅಥವಾ ‘ಕಾಟನ್ ಕ್ಯಾಸಲ್’ ಎನಿಸಿಕೊಳ್ಳುವ ಇಲ್ಲಿ ಬೆಟ್ಟದ ಮೇಲ್ಭಾಗದಿಂದ ಧುಮ್ಮಿಕ್ಕುವ ನೀರ ಹರಿವಿನ ಜೊತೆಗೆ ಕ್ಯಾಲ್ಸಿಯಂ ಕಾರ್ಬೇನೇಟ್ ಹೇರಳವಾಗಿ ಬೆರೆತು ಹರಿಯುತ್ತದೆ. ಹಲವು ಮೂಲಗಳಿಂದ ಭೂ ಮುಖದ ಹೊರಕ್ಕೆ ಧಾವಿಸುವ ಬಿಸಿನೀರ ಬುಗ್ಗೆಗಳು ಅಕ್ಷರಶಃ ನದಿನೀರಿನ ಹಾಗೆ ಮೇಲಿನಿಂದ ಹಂತ ಹಂತವಾಗಿ ಕೆಳಗೆ ಹರಿದು ಕೊನೆಯ ಹಂತದಲ್ಲಿ ಕಾಯ್ದಿರಿಸಲಾದ ‘ಕ್ಲಿಯೋಪ್ರಾತ’ ಹೊಂಡದ ಮೂಲಕ ಹೊರಕ್ಕೆ ಹೋಗುತ್ತದೆ.
ಅಪರೂಪದ ವಿನ್ಯಾಸದಲ್ಲಿ ಅರಳಿಕೊಂಡಿರುವ ಕಾಟನ್ ಕ್ಯಾಸಲ್ ಟರ್ಕಿಯ ಡೆನಿಜಿಲ್ (ಸ್ಥಳೀಯವಾಗಿ ಡಿಂಜಿಲಿ/ಡೆಂಜಿಲ್) ನಗರದ ಕೊನೆಯ ತುದಿಯಲ್ಲಿ ಇದೆ. ಸುಮಾರು ಇಪ್ಪತ್ತೆರಡು ಕಿ.ಮೀ. ದೂರ ಇರುವ ಕಾಟನ್ ಕ್ಯಾಸಲ್ಗೆ ಡೆಂಜಿಲ್ ಕೊನೆಯ ನಿಲ್ದಾಣ. ನೈರುತ್ಯ ಟರ್ಕಿಯ ಕೊನೆಯ ತುದಿಯಲ್ಲಿರುವ ಕಾಟನ್ ಕ್ಯಾಸಲ್ಗೆ ಟ್ಯಾಕ್ಸಿ ಮೂಲಕ ತಲುಪಿದರೆ ಎದುರಿಗೇ ಈ ಚಮತ್ಕಾರ ತೆರೆದುಕೊಳ್ಳುತ್ತದೆ. ಬಸ್ ಸೌಲಭ್ಯಗಳು ಇವೆಯಾದರೂ ಸಮಯಕ್ಕೆ ಸರಿಯಾಗಿ ಹೊಂದಾಣಿಕೆ ಮುಖ್ಯ. ಪ್ರವಾಸಿ ಆಕರ್ಷಣೆಗೆ ಏನೇನು ಬೇಕೋ ಎಲ್ಲವನ್ನೂ ಪೇರಿಸಿರುವ ಪಮ್ಮುಕಲೆಯಲ್ಲಿ, ಸಣ್ಣಪುಟ್ಟ ಅಪಸವ್ಯಗಳಿದ್ದರೂ ಸ್ವಚ್ಛತೆ, ಸಮಯ ಪಾಲನೆ ದೃಷ್ಟಿಯಿಂದ ಗಮನಾರ್ಹ ಪ್ರದೇಶ.
ಮೇಲಿನ ತುದಿಯವರೆಗೆ ಕಿ.ಮೀ.ನಷ್ಟು ನಡೆಯಬೇಕಿದ್ದರೂ ಮಾಲಿನ್ಯದ ಕಾರಣ ವಾಹನ ಸಂಚಾರ ನಿಷೇಧಿಸಲಾಗಿದ್ದು, ನಡೆದೇ ತಲುಪಿ, ಬರಲು ಕನಿಷ್ಠ ಮೂರ್ನಾಲ್ಕು ಗಂಟೆ ಇರಿಸಿಕೊಂಡರೆ ಉತ್ತಮ. ಪಕ್ಕದಲ್ಲೆ ಹಾರಾಡಿಸುವ ಹಾಟ್ ಏರ್ಬಲೂನ್ ಕೂಡ ಪಮ್ಮುಕಲೆಯ ನೆತ್ತಿಯ ಮೇಲೆ ಹಾರುವಂತಿಲ್ಲ. ಇನ್ನೂರು ಚಿಲ್ರೆ ಟರ್ಕೀಶ್ ಲಿರಾ ಲೆಕ್ಕದಲ್ಲಿ ಪ್ರವೇಶ ದರ, ಅಂದರೆ ಸುಮಾರು ಎಂಟನೂರು ಚಿಲ್ರೆ ರೂಪಾಯಿ ಮುಖಬೆಲೆ ಟಿಕೆಟ್ ಪಡೆದು ಗೇಟು ದಾಟಿದರೆ, ಅಚ್ಚುಕಟ್ಟಾಗಿ ಕಾಲು ತೊಳೆದುಕೊಂಡು, ಶೂ ಬಿಚ್ಚಿಟ್ಟು ಹೋಗುವ ವ್ಯವಸ್ಥೆಗೆ ತಕ್ಕ ಸೆಕ್ಯೂರಿಟಿ ಕೂಡ ಇದ್ದು, ವಾಹನಕ್ಕಿಂತ ಹೆಚ್ಚು ದರ ಕೆಲವೊಮ್ಮೆ ಪ್ರವೇಶ ದರಕ್ಕೇ ತೆತ್ತಿರುವುದೂ ಇದೆ. ಹಾಗಂತ ಅಲ್ಲಿವರೆಗೆ ಹೋಗಿ ಇದೆಲ್ಲ ನೋಡದೆ, ಇಣುಕದೆ ಬರುವುದಾದರೂ ಹೇಗೆ?
ಸುಣ್ಣದ ಕಲ್ಲಿನ ರಚನೆ, ಅದರ ಮೇಲೆ ಹರಿಯುವ ನೀರು, ಎಂಥ ಕಾಲದಲ್ಲೂ ಕಾಲ ಕೆಳಗೆ ಬಿಸಿಬಿಸಿಯಾಗಿ ಹರಿಯುವ ನೀರಿನ ನೆಲದ ಮೇಲೆ ಕಾಲು ಜಾರದಂತೆ ಹರಳುಗಟ್ಟಿದ ಕಲ್ಲುಗಳ ಕಾರಣ ಎಲ್ಲ ಸಲೀಸು. ಒರಟು ಒರಟಾಗಿ ಫಾರ್ವೇಶನ್ ಆಗುವ ಕ್ಯಾಲಿಸಿಯಂ ಕಾರ್ಬೇನೇಟ್ ನೀರಿನಿಂದ ಜಿನುಗುತ್ತ ಹೊಸಹೊಸ ರೂಪ ಚಿತ್ರಿತವಾಗಲು ಶತಮಾನಗಳಷ್ಟು ಕಾಲ ತೆಗೆದುಕೊಳ್ಳುತ್ತದೆ. ಈಗ ಕಾಣುತ್ತಿರುವ ಈ ಅರಳೆ ಪದರದಂತಹ ಹರಳು ಕಲ್ಲಿನ ರಚನೆಗೆ ಆರಂಭವಾಗಿ ಎಷ್ಟು ಸಹಸ್ರ ವರ್ಷಗಳಾಗಿವೆಯೋ ಯಾರಿಗೂ ಗೊತ್ತಿಲ್ಲ.
ಸುಮಾರು ಸಾವಿರಾರು ಅಡಿ ಅಗಲದ ಪ್ರವೇಶದಲ್ಲಿ ಮೇಲಿನಿಂದ ಹರಿಯುವ ಇದನ್ನು ಕ್ಯಾಲ್ಸಿಯಂ ಕಾರ್ಬೇನೇಟ್ನ ಸೂಪರ್ ಸ್ಯಾಚುರೇಟಡ್ ವಾಟರ್ ಎನ್ನಬಹುದು. ಆ ಕಾರಣಕ್ಕೇನೆ ಇದು ನೀರಿನ ಮೇಲ್ಮೈಯಲ್ಲಿ ಉರುಟಾದ ಫಾರ್ವೇಶನ್ಗೆ ಸಹಾಯ ಮಾಡುತ್ತದೆ. ಒಂದು ರೀತಿಯಲ್ಲಿ ಸ್ಪಟಿಕವಾಗಿ ರೂಪಗೊಳ್ಳುವುದು ಎನ್ನಿ. ಹಾಗಾಗೇ ಅಲ್ಲಿನ ಒಂದು ಸಣ್ಣ ಕಲ್ಲೂ ಜರುಗದಂತೆ ಪ್ರವಾಸಿಗರು ಅದನ್ನೆಲ್ಲ ಗಲಬರಿಸಿ ತೊಂದರೆ ಮಾಡದಂತೆ ಎಚ್ಚರ ವಹಿಸಿದ್ದಾರೆ. 1988ರ ಹೊತ್ತಿಗೆ ಯುನಿಸ್ಕೋ ಹೆರಿಟೇಜ್ ಯಾದಿಗೆ ಇದು ಸೇರಿಕೊಳ್ಳುವುದರೊಂದಿಗೆ ಇದಕ್ಕೆ ಅಂತಾರಾಷ್ಟ್ರೀಯ ಮಾನ್ಯತೆ ಮತ್ತು ದರ್ಜೆ ಕಾಯ್ದುಕೊಳ್ಳಬೇಕಾದ ವ್ಯವಸ್ಥೆ ಜಾರಿಯಾಯಿತು. ಅಲ್ಲಿಗೆ ಪಮ್ಮುಕಲೆಗೆ ಟರ್ಕಿ ಪ್ರವಾಸೋದ್ಯಮದಲ್ಲಿ ಪ್ರಮುಖ ಸ್ಥಾನ ಲಭ್ಯವಾಯಿತು.
ಇತಿಹಾಸದ ಪ್ರಕಾರ ಕಿ.ಪೂ. 133ಕ್ಕೂ ಮೊದಲೇ ಇದನ್ನು ಯಹೂದಿಗಳು ಆಳಿಕೊಂಡು ಇಲ್ಲೆಲ್ಲ ರಾಜ್ಯಭಾರ ಮಾಡಿದ್ದರೆ, ನಂತರದಲ್ಲಿ ಹದಿನೇಳನೆ ಶತಮಾನದಲ್ಲಿ ಆದ ಭೂಕಂಪ ಇದೆಲ್ಲವನ್ನೂ ಗುಡಿಸಿ ಹಾಕಿತ್ತಂತೆ. ಈಗ ವ್ಯವಸ್ಥೆ ಮತ್ತು ಲಭ್ಯತೆ ಏನಿದ್ದರೂ ಅದೆಲ್ಲ ಇತ್ತೀಚಿನದ್ದು. ಬಹುಶಃ ಅಪೂರ್ವ ಎನ್ನಬಹುದಾದ ಪ್ರವಾಸಿತಾಣದ ಲೆಕ್ಕಕ್ಕೆ ಇದು ಸೇರಿಕೊಳ್ಳುವುದರಿಂದ ಟರ್ಕಿ ವಿದೇಶ ಪ್ರವಾಸದಲ್ಲಿ ಇದು ಇರಬೇಕಾದದ್ದೇ.
ಇಲ್ಲಿ ಭೂಮಿ ಉದ್ಭವ ಆದಾಗಿನಿಂದಲೂ ನೀರು ಹರಿಯುತ್ತಲೇ ಇತ್ತು, ಲೆಕ್ಕವಿಲ್ಲದಷ್ಟು ಚಿತ್ರ ವಿಚಿತ್ರಾಕಾರದ ನಿರ್ವಣಗಳು ಹುಟ್ಟುವುದೂ ಕ್ರಮೇಣ ಕರಗುವುದು ಪ್ರಕೃತಿ ಸಹಜ. ಪಕ್ಕದಲ್ಲೆ ಇರುವ ಐತಿಹಾಸಿಕ ರೋಮ ಮತ್ತು ಗ್ರೀಕ್ ಪುರಾತನ ವ್ಯವಸ್ಥೆಗಳು, ಆಗಿನ ನಿರ್ವಣ, ಕಾಲಕ್ರಮೇಣ ನಿಸರ್ಗದ ವೈಪರೀತ್ಯ ಮತ್ತು ಕಾಲದ ಹೊಡೆತಕ್ಕೆ ಪಳಿಯುಳಿಕೆ ಆಗುತ್ತಲೇ ಇತ್ತು. ಶತಮಾನಗಳ ಬದಲಾವಣೆಯಲ್ಲಿ ಅಪರೂಪದ ವೈದ್ಯಕೀಯ ಚಿಕಿತ್ಸೆ ಇಲ್ಲಿ ನಡೆಯುತ್ತಿದ್ದರೂ ಜಗತ್ತು ಈ ನೆಲದ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಏನಿದ್ದರೂ ಹಾಂ.. ನೀರು ತಾನೆ ಹರಿಯಲಿ ಬಿಡು... ಎಂದೇ ನಿರ್ಲಕ್ಷಿಸಲಾಗಿತ್ತು.
ಆದರೆ ಕ್ಲಿಯೋಪಾತ್ರ ಎಂಬ ಪುರಾತನ ಕಥಾನಕದ ರಾಜಕುಮಾರಿ ಒಮ್ಮೆ ತನ್ನ ಸುಕೋಮಲ ದೇಹವನ್ನು ಬಹಿರಂಗಕ್ಕಿಳಿಸಿ, ಇಲ್ಲಿ ಆಕಸ್ಮಿಕವಾಗಿ ವಿಹರಿಸಿದಳು ನೋಡಿ. ಏರಿದ್ದ ಕೊಳಗಳ ಮಧ್ಯದಲ್ಲಿ ಕಾಲಿಟ್ಟು ಆಕೆ ನೀರಿಗಳಿದವಳೇ ಅರೇ.. ಎಂದು ಉದ್ಗರಿಸಿರಬೇಕು. ಕಾರಣ ಎಂಥ ಚಳಿಯಲ್ಲೂ ಮೈಗೆ ಹಿತವಾಗುವಷ್ಟು ಬೆಚ್ಚಗಿನ ಹಿತವಾದ ಬಿಸಿನೀರು. ಎಷ್ಟು ಸ್ನಾನ ಮಾಡಿದರೂ ಈಜಿದರೂ ಮುಗಿಯದ ಬಿಸಿನೀರ ಮಾಯೆ. ಅದಕ್ಕೆ ಸರಿಯಾಗಿ ಆಕೆಯ ಸಖಿಯಾಗಿದ್ದ ಮತ್ತು ಸೇವೆಗೂ ಇದ್ದ ಮೈಗೆಲ್ಲ ಹುಣ್ಣಾಗಿದ್ದ ಯುವತಿಯೊಬ್ಬಳಿಗೆ ಇಲ್ಲಿ ಹರಿಯುತ್ತಿದ್ದ ಬರೀ ನೀರೇ ಚಿಕಿತ್ಸೆಯಾಗಿ, ರೋಗವೆಲ್ಲ ಗುಣವಾಗಿ ಸುಂದರವೇ ಮೂರ್ತಿವೆತ್ತಂತೆ ಬದಲಾಗಿದ್ದರಿಂದ ಅಲ್ಲಿನ ರಾಜನೇ ಆಕೆಯನ್ನು ಮದುವೆಯಾದ ಬಗ್ಗೆ ದಂತಕತೆಯೂ ಹಬ್ಬಿತ್ತಲ್ಲ, ಕ್ಲಿಯೋಪಾತ್ರ ಕೂಡ ಇಲ್ಲಿ ದಿನವೂ ಮೀಯಲು ಹಾತೊರೆದುಬಿಟ್ಟಳು. ಅದರಲ್ಲೂ ಆಗಿನ ಕಾಲದ ಭೂಮುಖ ಕಂಡ ಅಪರೂಪದ ರೂಪಸಿ ಕ್ಲಿಯೋಪಾತ್ರ ಕಾಲಿಟ್ಟ ಮೇಲೆ ಆ ನೆಲೆ ಪವಿತ್ರವಾಗದಿದ್ದರೆ ಹೇಗೆ?
ಅಲ್ಲಿಗೆ ಟರ್ಕಿ ಎಂಬ ಉದ್ದಾನು ಉದ್ದದ ಕಣಿವೆ ರಾಷ್ಟ್ರದಲ್ಲಿ ಯಹೂದಿಗಳು ಹಡಾಹುಡಿ ಮಾಡಿ ನಿರ್ವಿುಸಿದ್ದ ಐತಿಹಾಸಿಕ ರಾಜವೈಭವದ ಪುರಾತನ ನಗರಿಯ ಮಧ್ಯದಲ್ಲಿದ್ದ ಮೆಂಡರಸ್ ನದಿಕಣಿವೆಯ ಹೃದಯ ಭಾಗದಲ್ಲಿ ಹುಟ್ಟಿಕೊಂಡಿರುವ ಈ ಬಿಸಿನೀರ ಬುಗ್ಗೆ ರಾತ್ರೋರಾತ್ರಿ ಚಲಾವಣೆಗೆ ಬಂತು. ಕ್ಲಿಯೋಪಾತ್ರಳ ಆಗಮನಕ್ಕೂ ಮೊದಲು ವೈದ್ಯಕೀಯ ಕಾರಣಕ್ಕಾಗಿ ಬಳಸಲಾಗುತ್ತಿತ್ತು. ಅದರಲ್ಲಿ ದಿನಗಟ್ಟಲೇ ಶುಶ್ರೂಶೆಗೆ ಜನರನ್ನು ಕೂರಿಸಿಟ್ಟು ಹದವಾದ ಸಸ್ಯಜನ್ಯ ಉತ್ಪನ್ನಗಳ ಮೂಲಕ ಉಪಚರಿಸುತ್ತಿದ್ದರು. ದೈಹಿಕ ಮತ್ತು ಮಾನಸಿಕ ರೋಗಗಳ ಜಲಚಿಕಿತ್ಸೆಗೆ ನಿಸರ್ಗ ಪೂರೈಕೆಯ ನೀರನ್ನು ಬಳಸಿ ನಡೆಸಿದ ಮೊದಲ ಪ್ರಯೋಗ ಇಲ್ಲಿ ಕ್ರಿ.ಪೂ. 63ಕ್ಕೂ ಮೊದಲೇ ನಡೆದಿತ್ತು ಎನ್ನಲಾಗಿದೆ.
ನಂತರ ಈ ಪ್ರದೇಶ ಆಗಿನ ಕಾಲದ ಅರಸುಮನೆತನದ ಸ್ನಾನದ ಮನೆಯೇ ಎನ್ನುವಷ್ಟರ ಮಟ್ಟಿಗೆ ಬದಲಾದರೆ, ವಿಸ್ಮಯಕಾರಿ ಬಿಸಿನೀರ ಬುಗ್ಗೆ, ಕಾಲಕ್ರಮೇಣ ನೀರ ಹರಿವಿಗೆ ಸಿಕ್ಕ ಭೂಪದರ ಹನಿ ಹನಿಯ ತೊಟ್ಟಿಕ್ಕುವಿಕೆಯಿಂದ ಆಗುತ್ತಿದ್ದ ಬದಲಾವಣೆಯಿಂದ ಚಿತ್ರ ವಿಚಿತ್ರವಾದ ಆಕೃತಿಗಳು ರೂಪಗೊಳ್ಳತೊಡಗಿದ್ದವು. ಸುಮಾರು ಹದಿನಾರಕ್ಕೂ ಹೆಚ್ಚು ಬಿಸಿನೀರ ಸೆಲೆಯನ್ನು ಹೊಂದಿರುವ ಮೆಂಡಸ್ ಕಣಿವೆಯ ಮೇಲ್ಭಾಗದಲ್ಲೆ ಬಾತ್ (ಸ್ನಾನಗೃಹಗಳು)ಗಳನ್ನು ಸ್ಥಾಪಿಸಲಾಯಿತಲ್ಲದೆ, ಅವುಗಳ ಸಂಗ್ರಹಕ್ಕಾಗಿ ಕಟ್ಟುಗಳನ್ನು ಹಾಕಿ ಬಿಸಿನೀರು ನಿಲ್ಲಿಸುತ್ತಿದ್ದ ಕಾರಣ ಕ್ರಮೇಣ ಅಲ್ಲೆಲ್ಲ ಅದೇ ಶಾಶ್ವತ ಮೆಟ್ಟಿಲುಗಳಂತೆ ಸಣ್ಣಸಣ್ಣ ಬಿಸಿನೀರ ಸಂಗ್ರಹದ ತೊಟ್ಟಿಯಾಗಿ ಬದಲಾದವು. ಅಂಥ ಹದಿನೈದಕ್ಕೂ ಹೆಚ್ಚು ತೊಟ್ಟಿಗಳು ಇವತ್ತಿಗೂ ಲಭ್ಯವಿದ್ದು, ಅಕ್ಷರಶಃ ಚಿತ್ರಗಳಲ್ಲಿ ತೋರಿಸಿರುವುದಕ್ಕಿಂತಲೂ ಅತ್ಯುತ್ತಮವಾದ ಬೆಳಕಿನ ರಿಪ್ಲೆಕ್ಸ್ ಕೊಡುವುದರಿಂದ ಪಮ್ಮುಕಲೆ ಇವತ್ತು ಜಗತ್ತಿನ ಆಕರ್ಷಕ ತಾಣ. ಜೊತೆಗೆ ಆಧುನಿಕ ಯುಗದ ಸಾಮಾಜಿಕ ಜಾಲತಾಣಕ್ಕೆ ಹಾಕಿಕೊಳ್ಳುವ ಚಿಕ್ಕಪುಟ್ಟ ವಿಡಿಯೋಗಳನ್ನು ನಿರ್ವಿುಸಿಕೊಡಲೇ ಭಾರಿ ಮೊತ್ತದವರೆಗೂ ವ್ಯವಹಾರ ನಡೆಸುವಷ್ಟು ಹೆಸರುವಾಸಿ. ಇಲ್ಲಿವತ್ತು ಶೂಟಿಂಗ್ ಮತ್ತು ರೀಲ್ಸ್ ಮಾಡುವವರದ್ದೇ ಸಾಮ್ರಾಜ್ಯ. ಕಾರಣ ಎಲ್ಲಿ ಹೇಗೇ ಕ್ಯಾಮೆರಾ ಹಾಕಿ ನೀವು ಅಲ್ಲಿ ಥೇಟ್ ಹಿರೋಗಳೇ.
ಟರ್ಕಿ ವಿಸಾ ಪಡೆಯುವುದೂ ಸುಲಭ. ಯಾವುದಾದರೂ ಪ್ರಥಮ ದರ್ಜೆಯ ದೇಶದ ವೀಸಾ ನಿಮ್ಮಲ್ಲಿದ್ದರೆ, ಆನ್ಲೈನ್ನಲ್ಲಿ ಪಡೆಯಬಹುದಾಗಿದ್ದು, ವೈದ್ಯಕೀಯ ವಿಮಾ ಕಡ್ಡಾಯ ಎನ್ನುವುದು ನಿಯಮವಾಗಿದ್ದರೂ ಆ ಬಗ್ಗೆ ಎಲ್ಲೂ ಅಧಿಕೃತ ಮಾಹಿತಿ ಇಲ್ಲ, ನಿಮ್ಮನ್ನು ಯಾರೂ ಕೇಳುವುದೂ ಇಲ್ಲ. ಭಾರತೀಯ ಪಾಸ್ಪೋರ್ಟ್ ಹೊಂದಿರುವವರಿಗೆ ಹೆಚ್ಚಿನ ರಗಳೆಗಳಿಲ್ಲ. ಮುಂಬೈನಲ್ಲಿ ಮೂಲ ವೀಸಾ ಕಚೇರಿ ಇದ್ದರೂ ಬೆಂಗಳೂರಿನಲ್ಲಿ ಸೇವೆ ಒದಗಿಸುವುದರಿಂದ ತುಸು ಸುಲಭ.
ಅಕಸ್ಮಾತ್ ಯು.ಕೆ. ಅಥವಾ ಮೊದಲ ಇಪ್ಪತ್ತು ದೇಶಗಳ ಟಾಪ್ ವೀಸಾ ನೀವು ಪಡೆದಿದ್ದರೆ ಎರಡೇ ಸೆಕೆಂಡಿನಲ್ಲಿ ಮನೆಯಲ್ಲಿ ಕುಳಿತು ಟರ್ಕಿ ವೀಸಾ ಪಡೆಯಬಹುದು. ಅರವತ್ತು ದಿನಕ್ಕೂ ಹೆಚ್ಚು ಮೊದಲೇ ವಿಮಾನ ಕಾಯ್ದಿರಿಸಿದರೆ ಹೆಚ್ಚುವರಿ ಹೊರೆ ಕೂಡ ಬೀಳಲಾರದು. ಉಳಿಯಲು ಹೋಮ್ ಸ್ಟೇ ಮಾದರಿಯ ಬುಕಿಂಗ್ ತೆಗೆದುಕೊಂಡು ಹೋದರೆ, ಟ್ರಾವೆಲ್ ಏಜೆನ್ಸಿ ಕೊಡುವ ದರದ ಅರ್ಧಕ್ಕಿಂತ ಕಡಿಮೆ ಲೆಕ್ಕದಲ್ಲಿ ಪ್ರವಾಸ ಖಂಡಿತ. ಖಡಕ್ ಮತ್ತು ಸ್ವಾದಭರಿತ ಟರ್ಕಿಶ್ ಚಹಾ ಪ್ರಸಿದ್ಧಿ. ಪ್ರವಾಸಿಗರಿಗೂ ಸ್ಥಳೀಯರಿಗೂ. ಕಾನಸ್ಟಂಟಿನೋಪಲ್ ನೋಡಲೇಬೇಕಾದ ಟರ್ಕಿ ಪೂರ್ವ, ಪಶ್ಚಿಮಗಳ ಸಂಪರ್ಕಸೇತು ಕೂಡ.
(ಲೇಖಕರು ಕತೆಗಾರರು)