

ನಾಲ್ಕು ವರ್ಷಗಳ ಹಿಂದೆ ಸಂಸತ್ತಿನ ಒಪ್ಪಿಗೆ ಪಡೆದ ಪೌರತ್ವ ತಿದ್ದುಪಡಿ ಕಾಯ್ದೆಗೆ (ಸಿಎಎ) ಕೇಂದ್ರ ಸರ್ಕಾರ ಕೊನೆಗೂ ನಿಯಮಗಳನ್ನು ರೂಪಿಸಿ ಸೋಮವಾರ ಅಧಿಸೂಚನೆ ಹೊರಡಿಸಿದೆ. ಈ ಮೂಲಕ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಪ್ಘಾನಿಸ್ತಾನದಿಂದ ಧಾರ್ವಿುಕ ಕಿರುಕುಳ ಅನುಭವಿಸಿ ಭಾರತಕ್ಕೆ ಬಂದ ಆ ರಾಷ್ಟ್ರಗಳ ಅಲ್ಪಸಂಖ್ಯಾತರು ಇಲ್ಲಿನ ಪೌರತ್ವ ಪಡೆಯುವ ಹಾದಿ ಸುಗಮಗೊಂಡಿದೆ. ಇದಕ್ಕಾಗಿ ಪೋರ್ಟಲ್ ರೂಪಿಸಿರುವ ಕೇಂದ್ರ ಗೃಹ ಸಚಿವಾಲಯ, ಆನ್ಲೈನ್ ಅರ್ಜಿಗಳನ್ನು ನಿಗದಿತ ಅವಧಿಯಲ್ಲಿ ಇತ್ಯರ್ಥಗೊಳಿಸಿ, ಸುರಕ್ಷಾ ಏಜೆನ್ಸಿಗಳು ಸಮ್ಮತಿಸಿದ ಬಳಿಕ ಪೌರತ್ವ ಪ್ರಮಾಣ ಪತ್ರ ನೀಡಲಿದೆ. ಧಾರ್ವಿುಕ ಕಿರುಕುಳಕ್ಕೆ ಒಳಗಾಗಿ ಭಾರತದಲ್ಲಿ ಆಶ್ರಯ ಪಡೆದಿರುವವರಿಗೆ (2014ರ ಡಿಸೆಂಬರ್ 31ಕ್ಕೆ ಮುಂಚೆ ಬಂದವರು) ನ್ಯಾಯ ಸಿಕ್ಕಂತಾಗಿದೆ.
ಪೌರತ್ವಕ್ಕೆ ಸಂಬಂಧಿಸಿದಂತೆ ಕಾನೂನು ರೂಪಿಸುವ ಸ್ಪಷ್ಟ ಅಧಿಕಾರವು ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿ ಇರುವುದರಿಂದ ಇದನ್ನು ಎಲ್ಲ ರಾಜ್ಯಗಳು ಜಾರಿ ಮಾಡಬೇಕಾಗುತ್ತದೆ. ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಪಂಜಾಬ್ ಸೇರಿ ಕೆಲ ರಾಜ್ಯಗಳು ಮೊಂಡುವಾದ ಮುಂದುವರಿಸಿದ್ದರೂ, ಅವುಗಳು ತಮ್ಮ ನೀತಿಯನ್ನು ಬದಲಿಸಿಕೊಳ್ಳುವುದು, ವಾಸ್ತವವನ್ನು ಅರಿಯುವುದು ಅವಶ್ಯಕ. ನೆರೆಯ ದೇಶಗಳಲ್ಲಿ ಧಾರ್ವಿುಕ ಕಿರುಕುಳ ಅನುಭವಿಸಿ ಭಾರತಕ್ಕೆ ವಲಸೆ ಬಂದಿರುವ ಹಿಂದೂ, ಸಿಖ್, ಜೈನ, ಕ್ರೖೆಸ್ತ, ಪಾರ್ಸಿ, ಬೌದ್ಧ ಧರ್ವಿುಯರಿಗೆ (ಮುಸ್ಲಿಮರನ್ನು ಹೊರತುಪಡಿಸಿ) ಭಾರತದ ಪೌರತ್ವ ನೀಡುವ ಈ ಕಾಯ್ದೆಗೆ ವಿರೋಧ ಮಾಡುವ ಅಗತ್ಯವೇ ಇಲ್ಲ. ಏಕೆಂದರೆ, ಇದು ಯಾರದೇ ಪೌರತ್ವ ಕಿತ್ತುಕೊಳ್ಳುವುದಿಲ್ಲ. ಅಲ್ಲದೆ, ಭಾರತೀಯ ನಾಗರಿಕರ ಮೇಲೆ ಈ ಕಾಯ್ದೆ ಯಾವುದೇ ಪರಿಣಾಮ ಬೀರುವುದಿಲ್ಲ. ಹೀಗಿದ್ದರೂ, ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಸಿಪಿಐ (ಎಂ), ಆಮ್ ಆದ್ಮಿ ಪಾರ್ಟಿ ಮುಂತಾದ ಪಕ್ಷಗಳು ರಾಜಕೀಯ ಕಾರಣಗಳಿಗಾಗಿ ವಿರೋಧ ಮಾಡುತ್ತಿವೆ. ಇದು ಸರಿಯಲ್ಲ.
ಈ ಹಿಂದೆಯೂ ರಾಜಕೀಯ ಕಾರಣಗಳಿಗಾಗಿ ಮುಸ್ಲಿಮರಲ್ಲಿ ಕಾಯ್ದೆ ಬಗ್ಗೆ ತಪು್ಪಭಾವನೆ ಮೂಡಿಸಿದ್ದರ ಪರಿಣಾಮ ದೇಶದ ಹಲವು ಭಾಗಗಳು ತೀವ್ರ ಹಿಂಸಾಚಾರಕ್ಕೆ ಸಾಕ್ಷಿಯಾದವು. ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಭಯ ಸೃಷ್ಟಿಸುವ, ವದಂತಿಗಳನ್ನು ಹರಡುವ, ಶಾಂತಿಗೆ ಕೊಳ್ಳಿ ಇಡುವ ಪ್ರಯತ್ನಗಳು ಖಂಡನೀಯ ಮತ್ತು ಯಾವುದೇ ನಾಗರಿಕ ಸಮಾಜ ಇಂಥ ನಡವಳಿಕೆಗಳನ್ನು ಒಪು್ಪವುದಿಲ್ಲ. ಅಲ್ಲದೆ, ಸಿಎಎ ತರಾತುರಿಯಲ್ಲಿ ಜಾರಿಗೊಂಡಿಲ್ಲ. ಈ ಬಗ್ಗೆ ಅರಿವು ಮೂಡಿಸುವ, ಸರಿಯಾದ ಮಾಹಿತಿ ನೀಡುವ ಪ್ರಯತ್ನಗಳನ್ನು ಕೇಂದ್ರ ಹಂತ-ಹಂತವಾಗಿ ಮಾಡುತ್ತ ಬಂದಿದೆ. ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿಗೂ, ಸಿಎಎಗೂ ಇರುವ ವ್ಯತ್ಯಾಸವನ್ನು ಸ್ಪಷ್ಟವಾಗಿ ತಿಳಿಸಿಕೊಟ್ಟಿದೆ. ಬುಡಕಟ್ಟು ಪ್ರಾಬಲ್ಯದ ರಾಜ್ಯಗಳಲ್ಲಿ ಈ ಕಾಯ್ದೆ ಜಾರಿಗೆ ವಿನಾಯಿತಿ ನೀಡಲಾಗಿದೆ. ಹೀಗೆ ಎಲ್ಲ ಪರಿಸ್ಥಿತಿಗಳನ್ನು ಅವಲೋಕಿಸಿಯೇ ಪೌರತ್ವ ತಿದ್ದುಪಡಿ ಕಾಯ್ದೆ ರೂಪಿಸಲಾಗಿದ್ದು, ಸಂಸತ್ತಿನ ಅನುಮೋದನೆ ನಂತರವೂ ಬೇಡದ ಕಾರಣಗಳಿಗಾಗಿ ವಿರೋಧ ವ್ಯಕ್ತವಾಗಿತ್ತು. ಲೋಕಸಭೆ ಚುನಾವಣೆ ಸಮೀಪಿಸಿದ್ದು, ಇಂಥ ಸೂಕ್ಷ್ಮ ಸಂದರ್ಭಗಳಲ್ಲಿ ರಾಜಕಾರಣಿಗಳು ಜನರ ಭಾವನೆಗಳನ್ನು ಪ್ರಚೋದಿಸುವ ಅಥವಾ ತಪು್ಪ ಮಾಹಿತಿ ಹರಡುವ ಪ್ರಯತ್ನಗಳಿಗೆ ಮುಂದಾಗಬಾರದು.