ನವರಾತ್ರಿ ವೈಭವ- ಸಿದ್ಧಿದಾತ್ರಿ

Siddhi Dhatri
Published on

ಎಚ್.ವಿ.ದೀಪಕ್ ನರಸಿಂಹ ಸಿದ್ಧಗಂಧರ್ವ ಯಕ್ಷಾಧ್ಯೈಃ ಅಸುರೈರಮರೈರಪಿ | ಸೇವ್ಯಮಾನಾ ಸದಾ ಭೂಯಾತ್ ಸಿದ್ಧಿದಾ ಸಿದ್ಧಿದಾಯಿನೀ || ಜಗನ್ಮಾತೆ ದುರ್ಗಾದೇವಿಯ ಒಂಬತ್ತನೇ ಶಕ್ತಿಯ ಹೆಸರು ಸಿದ್ಧಿದಾತ್ರಿ. ಜಗತ್ತು ಹುಟ್ಟುವಾಗ ರುದ್ರನು ಆದಿಶಕ್ತಿಯ ಆದಿಮ ಅವತಾರವನ್ನು ಪೂಜೆ ಮಾಡಿದ. ಇದು ಆದಿಶಕ್ತಿಯಾದ್ದರಿಂದ ಯಾವುದೇ ರೂಪವಿರಲಿಲ್ಲ. ರುದ್ರನ ಪೂಜೆಯಿಂದಾಗಿ ಈಕೆ ಸಿದ್ಧಿದಾತ್ರಿಯ ರೂಪ ಧರಿಸಿ ಶಿವನ ಅರ್ಧದೇಹದಿಂದಲೇ ಅವತರಿಸಿದಳು. ಇವಳು ಎಲ್ಲ ಪ್ರಕಾರದ ಸಿದ್ಧಿಗಳನ್ನೂ ಅನುಗ್ರಹಿಸುವವಳು. ಬ್ರಹ್ಮವೈವರ್ತಪುರಾಣದ ಶ್ರೀ ಕೃಷ್ಣಜನ್ಮಖಂಡದಲ್ಲಿ ಬರುವ 18 ಸಿದ್ಧಿಗಳಾದ: ಅಣಿಮಾ, ಲಘಿಮಾ, ಪ್ರಾಪ್ತಿ, ಪ್ರಾಕಾಮ್ಯ, ಮಹಿಮಾ, ಈಶಿತ್ವ-ವಶಿತ್ವ, ಸರ್ವಕಾಮಾವಸಾಯಿತಾ, ಸರ್ವಜ್ಞತ್ವ, ದೂರಶ್ರವಣ, ಪರಕಾಯ ಪ್ರವೇಶನ, ವಾಕ್​ಸಿದ್ಧಿ, ಕಲ್ಪವೃಕ್ಷತ್ವ, ಸೃಷ್ಟಿ, ಸಂಹಾರಕರಣಸಾಮರ್ಥ್ಯ, ಅಮರತ್ವ, ಸರ್ವನ್ಯಾಯಕತ್ವ, ಭಾವನಾ, ಸಿದ್ಧಿ... ಎಲ್ಲವನ್ನೂ ಕೊಡುವವಳು. ಈ ದೇವಿಗೆ ನಾಲ್ಕು ಕೈಗಳು. ಅವುಗಳಲ್ಲಿ ಚಕ್ರ, ಗದೆ, ಕಮಲ ಹಾಗೂ ಶಂಖಗಳನ್ನು ಹಿಡಿದಿದ್ದಾಳೆ. ಸಾಮಾನ್ಯ ಸ್ಪಂದನಲಹರಿಗಳನ್ನು ಸೂಕ್ಷಾ್ಮತಿಸೂಕ್ಷ್ಮ ಶಕ್ತಿತರಂಗಗಳಲ್ಲಿ ಶಾಶ್ವತವಾಗಿ ಸೇರಿಸುವುದಕ್ಕೆ ‘ಮೋಕ್ಷ ಅಥವಾ ಸಿದ್ಧಿ’ ಎನ್ನುತ್ತಾರೆ. ಇವಳನ್ನು ಆರಾಧಿಸುವುದರಿಂದ ಸಾಧಕರಿಗೆ ಎಲ್ಲ ಸಿದ್ಧಿಗಳೂ ಲಭಿಸುತ್ತವೆ. ಸಿದ್ಧಿದಾತ್ರಿ ದೇಗುಲ ಮಧ್ಯಪ್ರದೇಶದ ಸಾಗರದಲ್ಲಿದೆ.

ಸಿದ್ಧಿದಾತ್ರಿ ಸ್ತೋತ್ರ

ಕಂಚನಾಭಾ ಶಂಖಚಕ್ರ ಗದಾಪದ್ಮಧರಾ ಮುಕುಟೋಜಲಾಂ |ಸ್ಮೇರಮುಖಿ ಶಿವಪತ್ನೀ ಸಿದ್ಧಿದಾತ್ರೀ ನಮೋಸ್ತುತೇ ||ಪಟ್ಟಾಂಬರ ಪರೀಧಾನಾಂ ನಾನಾಲಂಕಾರಭೂಷಿತಾಂ |ಪದ್ಮಸ್ಥಿತಾಂ ಪದ್ಮಹಸ್ತಾಂ ಸಿದ್ಧಿದಾತ್ರೀ ನಮೋಸ್ತುತೇ ||ಪರಮಾನಂದಮಯೀ ದೇವೀ ಪರಬ್ರಹ್ಮ ಪರಮಾತ್ಮಾ |ಪರಮಶಕ್ತಿ ಪರಮಭಕ್ತಿ ಸಿದ್ಧಿದಾತ್ರೀ ನಮೋಸ್ತುತೇ ||ವಿಶ್ವಕರ್ತಿೃ ವಿಶ್ವಭರ್ತಿೃ ವಿಶ್ವಹರ್ತಿೃ ವಿಶ್ವಪ್ರೀತಾ |ವಿಶ್ವಾರ್ಚಿತಾ ವಿಶ್ವಾತೀತಾ ಸಿದ್ಧಿದಾತ್ರೀ ನಮೋಸ್ತುತೇ ||ಭುಕ್ತಿಮುಕ್ತಿ ಕಾರಣೀ ಭಕ್ತಕಷ್ಟನಿವಾರಿಣೀ |ಭವಸಾಗರತಾರಿಣೀ ಸಿದ್ಧಿದಾತ್ರೀ ನಮೋಸ್ತುತೇ ||ಧರ್ಮಾರ್ಥಕಾಮ ಪ್ರದಾಯಿನೀ ಮಹಾಮೋಹ ವಿನಾಶಿನೀ |ಮೋಕ್ಷದಾಯಿನೀ ಸಿದ್ಧಿದಾಯಿನೀ ಸಿದ್ಧಿದಾತ್ರೀ ನಮೋಸ್ತುತೇ ||ಓಂ ದೇವಿ ಸಿದ್ಧಿದಾತ್ರ್ಯೈ ನಮಃ

ತಾಯಿ ಸಿದ್ಧಿದಾತ್ರಿಯು ಎಲ್ಲ ದೇವರು, ರಾಕ್ಷಸರು, ಗಂಧರ್ವರು, ಯಕ್ಷರು ಮತ್ತು ಸಿದ್ಧಿಗಳಿಗೆ ಸಿದ್ಧಿಯನ್ನು ದಯಪಾಲಿಸುವಳು. ತಾಯಿ ಸಿದ್ಧಿದಾತ್ರಿಯನ್ನು ಸೂಜಿಮಲ್ಲಿಗೆಯಿಂದ ಪೂಜಿಸುವುದರಿಂದ ಎಲ್ಲ ರೀತಿಯ ಶಕ್ತಿ, ಕೌಶಲ ಮತ್ತು ಸಾಮರ್ಥ್ಯ ಭಕ್ತರಿಗೆ ಸಿಗುವುದು. ಇದರಿಂದ ವೃತ್ತಿ, ಶಿಕ್ಷಣ ಹಾಗೂ ಬೇರೆ ವಿಭಾಗದಲ್ಲಿ ಯಶಸ್ಸು ಪಡೆಯಬಹುದು.

ದೈವದ ಕೃಪಾಕಟಾಕ್ಷಕ್ಕೆ ಸುಲಭ ಮಾರ್ಗದಲ್ಲಿ 9ನೇ ವಿಧ ಆತ್ಮನಿವೇದನೆ. ‘ಪ್ರಪತ್ತಿ’ಯೇ ಆತ್ಮನಿವೇದನೆ. ಇದನ್ನು ‘ಶರಣಾಗತಿ’ ಎಂದೂ ಕರೆಯಬಹುದು. ಅನನ್ಯ ಸಾಧ್ಯವಾದ ಭಗವತ್ ಪ್ರಪತ್ತಿಯಲ್ಲಿ ವಿಶ್ವಾಸಪೂರ್ವಕವಾಗಿ ಭಗವಂತನೊಬ್ಬನನ್ನೇ ‘ಉಪಾಯ’ವಾಗಿ ಭಾವಿಸಿ, ಪ್ರಾರ್ಥಿಸುವ ನಿಶ್ಚಯಾತ್ಮಕ ಬುದ್ಧಿಯೇ ‘ಆತ್ಮನಿವೇದನೆ’ ಎಂದು ಹೇಳಲಾಗುವುದು. ಇಂತಹ ಆತ್ಮನಿವೇದನಕ್ಕೆ ಸಂಬಂಧಪಟ್ಟ ಅಂಶಗಳು ಆಳ್ವಾರರ ದಿವ್ಯಪ್ರಬಂಧಗಳಲ್ಲಿವೆ.

‘ಮಾನವನು ಒಂದು ಕೆರೆಯನ್ನು ನಿರ್ವಿುಸಬಲ್ಲನೆ ಹೊರತು, ಭಗವದುಗ್ರಹ ರೂಪವಾದ ಮಳೆ ಸುರಿದಾಗಲೇ ಆ ಕೆರೆ ನೀರಿನಿಂದ ತುಂಬಬಲ್ಲದಲ್ಲವೆ? ಆದುದರಿಂದ, ಭಗವಂತನ ಅನುಗ್ರಹದ ಮೇಲೆಯೇ ಮಾನವ ಪ್ರಯತ್ನಗಳೆಲ್ಲವೂ ಆಧಾರಪಟ್ಟಿರುತ್ತದೆ’ ಎಂದು ಪೂದತ್ತಾಳ್ವಾರ್ (ಇರಂಡಾಂ ತಿರುವಂದಾದಿ - 16) ತಿಳಿಸುವರು. ‘ಓ ಪರಮಾತ್ಮಾ! ಸಮಸ್ತ ವಿಶ್ವವೂ ನೀನೇ ಆಗಿರುವೆ. ವಿಶ್ವವೆಲ್ಲವೂ ನಿನ್ನ ಮೇಲೆಯೇ ಆಧಾರಪಟ್ಟದೆ. ದಯಾನಿಧಿಯಾದ ನೀನೇ ಭಕ್ತರ ಹೃದಯಗಳಲ್ಲಿ ಭಕ್ತಿಬೀಜವನ್ನು ನೆಡುತ್ತಿರುವೆ’ ಎಂದು ತಿರುಮಂಗೈ ಆಳ್ವಾರರು (ನಾನ್ಮುಗನ್ ತಿರುವಂದಾದಿ - 14) ತಿಳಿಸುತ್ತಾರೆ. ಈ ರೀತಿಯಲ್ಲಿ ತಾವು ಶರಣು ಕೋರುವ ಸರ್ವೇಶ್ವರನು ಪರಮಾತ್ಮನೊಬ್ಬನೇ. ಅವನನ್ನೇ ನಾವೆಲ್ಲರೂ ಆಶ್ರಯಿಸಬೇಕು ಎಂದು ಎಲ್ಲ ಆಳ್ವಾರರೂ ಪ್ರಬೋಧಿಸುತ್ತಾರೆ.

(ಲೇಖಕರು ಆಧ್ಯಾತ್ಮಿಕ ಚಿಂತಕರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net