ನೈಸರ್ಗಿಕ ತಾಳೆ ಶೇಂದಿ ವಿನೆಗರ್

Vinegar
Published on

| ಭರತ್​ರಾಜ್ ಸೊರಕೆ ಮಂಗಳೂರು

ಆಪಲ್ ವಿನೆಗರ್ ಎಲ್ಲರಿಗೂ ಗೊತ್ತಿದೆ. ಆದರೆ ಶೇಂದಿಯಿಂದ ವಿನೆಗರ್ ಕೇಳಿದ್ದೀರಾ? ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳದ ಲೊರೆಟ್ಟೋವಿನ ಕೃಷಿಕ ದಂಪತಿ ಅರ್ವಿನ್ ಡಿಸೋಜ- ಸುನೀತಾ ರಾಜ್ಯದಲ್ಲೇ ಪ್ರಥಮ ಬಾರಿ ಸಾಂಪ್ರದಾಯಿಕ ವಿಧಾನದ ಮೂಲಕ ತಾಳೆ ಮರದ ಶೇಂದಿಯಿಂದ ವಿನೆಗರ್ ತಯಾರಿಸಿ ಗಮನ ಸೆಳೆದಿದ್ದಾರೆ. ಯಾವುದೇ ಕಲಬೆರಕೆ ಇಲ್ಲದ ತಾಳೆ ಮರದ ಶೇಂದಿಯನ್ನು ದೊಡ್ಡ ಮಣ್ಣಿನ ಪಾತ್ರೆಯಲ್ಲಿ ಸಂಗ್ರಹಿಸಲಾಗುತ್ತದೆ. ಈ ಪಾತ್ರೆಯನ್ನು ಅಡಕೆ ಹಾಳೆಯಿಂದ ಮುಚ್ಚಿ 3 ತಿಂಗಳ ಕಾಲ ಎಳೆ ಬಿಸಿಲಿಗೆ ಇಟ್ಟು ಹುಳಿ ಬರಿಸುತ್ತಾರೆ. ಪ್ರತಿವಾರ ಪಾತ್ರದ ತಳದಲ್ಲಿ ಸಂಗ್ರಹವಾಗುವ ಬಿಳಿಪದರವನ್ನು ತೆಗೆಯಬೇಕು. 3 ತಿಂಗಳಲ್ಲಿ ಪಾತ್ರೆಯಲ್ಲಿನ ಸುಮಾರು 20 ಶೇಕಡಾ ನೀರು ಆವಿಯಾಗುತ್ತದೆ. ಶೇಂದಿ ತಿಳಿ ನೀರಿನ ಬಣ್ಣಕ್ಕೆ ಬದಲಾಗುತ್ತ ಕಡು ಹುಳಿಯಾಗಿ ವಿನೆಗರ್ ತಯಾರಾಗುತ್ತದೆ.

ಶೇಂದಿಗೆ ನೀರು, ರಾಸಾಯನಿಕ ಕಲಬೆರಕೆಯಾದರೆ ವಿನೆಗರ್ ತಯಾರಿ ಸಾಧ್ಯವಾಗುವುದಿಲ್ಲ. ಹೀಗಾಗಿ ಸ್ವತಃ ಅರ್ವಿನ್ ಡಿಸೋಜರು ಪ್ರತಿದಿನ ಬೆಳಗ್ಗೆ 6 ಗಂಟೆಯಿಂದ ಮನೆ ಪರಿಸರದ 30 ತಾಳೆ ಮರದಿಂದ ಕಾರ್ವಿುಕರ ನೆರವಿನೊಂದಿಗೆ ಶೇಂದಿ ಸಂಗ್ರಹಿಸುತ್ತಾರೆ. ಹೆಚ್ಚುವರಿ ಶೇಂದಿಯನ್ನು ಮೂರ್ತೆದಾರರ ಸಹಕಾರಿ ಸಂಘದ ಮೂಲಕ ಪಡೆಯುತ್ತಾರೆ. ತಯಾರಾದ ವಿನೆಗರ್​ನ್ನು ಬಾಟಲಿಗೆ ತುಂಬಿಸುವುದು, ಗ್ರಾಹಕರಿಗೆ ಕಳಿಸುವುದು ಪತ್ನಿ ಸುನೀತಾ ಅವರ ಕೆಲಸ. ವರ್ಷಕ್ಕೆ ಸುಮಾರು 5 ಸಾವಿರ ಲೀಟರ್ ವಿನೆಗರ್ ತಯಾರಿಸುತ್ತಾರೆ.

ಪ್ರಯೋಗ ಶೀಲ ಕೃಷಿಕ: ಅರ್ವಿನ್ ಡಿಸೋಜ ದಂಪತಿ ಪ್ರಯೋಗಶೀಲ ಕೃಷಿಕರು. ಅಡಕೆ, ತೆಂಗು, ರಬ್ಬರ್, ಕಾಳುಮೆಣಸು, ಜಾಯಿಕಾಯಿ ಮತ್ತಿತರ ಮಿಶ್ರಕೃಷಿ ಇದೆ. ಕೃಷಿಕರ ತಂಡ ರಚಿಸಿಕೊಂಡು ಸುಮಾರು 400 ಜೇನು ಪೆಟ್ಟಿಗೆ ಇಟ್ಟಿದ್ದಾರೆ. ಶೇಂದಿಯಿಂದ ಓಲೆ ಬೆಲ್ಲ ತಯಾರಿ, ಹೊಸ ವಿನ್ಯಾಸದ ತುರಿಮಣೆ ಸ್ವತಃ ನಿರ್ವಿುಸಿ ಮಾರಾಟ ಮಾಡುತ್ತಾರೆ. ತೋಟದಲ್ಲಿ ಉತ್ಪಾದಿಸಿದ ಕೃಷಿ ವಸ್ತುಗಳನ್ನು ನೇರ ಗ್ರಾಹಕರಿಗೆ ತಲುಪಿಸುವುದು, ಕೃಷಿ ಉತ್ಪನ್ನದಿಂದ ಮೌಲ್ಯವರ್ಧಿತ ವಸ್ತುಗಳನ್ನು ತಯಾರಿಸುವುದು ಇವರ ಯಶಸ್ಸಿನ ಸೂತ್ರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net