ಇಂದಿನ ತಲ್ಲಣಗಳಿಗೆ ನೈಸರ್ಗಿಕ ಕೃಷಿಯಲ್ಲಿದೆ ಪರಿಹಾರ...

Celebrity Feature
Published on

ಕೋವಿಡ್ ನಂತರದ ಕಾಲಘಟ್ಟದಲ್ಲಿ ಕೃಷಿಯಲ್ಲಿ ತೊಡಗಿಸಿಕೊಳ್ಳುತ್ತಿರುವ ಯುವಕರ ಸಂಖ್ಯೆ ಹೆಚ್ಚುತ್ತಿದೆ. ಇದು ಸಂತೋಷದ ವಿಷಯವಾದರೂ, ಒಂದು ಹಂತದಲ್ಲಿ ಯುವಜನತೆ ಕೃಷಿಯಿಂದ ವಿಮುಖರಾಗಿದ್ದೇಕೆ ಮತ್ತು ಈಗ ವಾಪಸ್ಸಾಗುತ್ತಿರುವುದೇಕೆ ಎಂಬ ಎರಡು ವಿಷಯಗಳ ಬಗ್ಗೆ ಆಳವಾಗಿ ಯೋಚಿಸಬೇಕಾಗಿದೆ. ಯುವಕರನ್ನು ಎರಡು ವಿಧಗಳಲ್ಲಿ ನೋಡಬೇಕಿದೆ. ಒಂದು, ನಗರದಲ್ಲಿರುವ ಯುವಜನತೆ. ಇನ್ನೊಂದು ಗ್ರಾಮಗಳಲ್ಲಿದ್ದು ನಗರದ ಕಡೆ ಮುಖ ಮಾಡುವ ಯುವಜನತೆ. ಈ ಪೈಕಿ, ಗ್ರಾಮಗಳಲ್ಲಿದ್ದು ಕೃಷಿಯಲ್ಲಿ ತೊಡಗಿಸಿಕೊಂಡಿರುವ ಯುವಕರ ಸಂಖ್ಯೆ ಕಡಿಮೆ. ಏಕೆಂದರೆ, ಅವರಲ್ಲಿ ಬಹಳಷ್ಟು ಜನ ಏನೋ ಮಾಡುವುದಕ್ಕೆ ಪ್ರಯತ್ನ ಪಡುತ್ತಿಲ್ಲ ಮತ್ತು ಅವರಿಗೆ ಮೋಟಿವೇಷನ್ ಸಿಗುತ್ತಿಲ್ಲ.

ನಗರದಲ್ಲಿರುವ ಯುವಕರು ಹೇಗಿದ್ದಾರೆ? ಈ ಭಾಗವು ಮಾಧ್ಯಮ ಕ್ರಾಂತಿ, ನಗರದ ರಂಗು, ಅವಕಾಶಗಳು, ಸುಖ-ಸೌಲಭ್ಯಗಳು, ಹಣದ ಮಧ್ಯೆ ಸಿಕ್ಕಿಹಾಕಿಕೊಂಡಿದೆ. ಅದರಿಂದ ತಪ್ಪಿಸಿಕೊಳ್ಳುವುದಕ್ಕೆ ಹಪಹಪಿಸುತ್ತಿದೆ. ಆದರೆ, ಇದರ ಬಗ್ಗೆ ಗೊತ್ತಿಲ್ಲದ ಮತ್ತು ಆ ಆಕರ್ಷಣೆೆಯನ್ನು ನೋಡಿ ಕೊರಗುತ್ತಿರುವ ಹಳ್ಳಿಯ ಯುವಕರು ಯಾವಾಗ ನಗರಕ್ಕೆ ಬಂದು ಸೇರಿಕೊಳ್ಳುತ್ತೇವೆ ಎಂದು ಕಾಯುತ್ತಿದ್ದಾರೆ. ಈ ಪರಿಸ್ಥಿತಿಗೆ ಕಾರಣ ಕೊಳ್ಳುಬಾಕ ಸಂಸ್ಕೃತಿ, ಕನ್​ಸ್ಯೂಮರಿಸಂ, ಕ್ಯಾಪಿಟಲಿಸಂ, ಇಂಪೀರಿಯಲ್ ಎಕಾನಮಿಯಲ್ಲಿ ಮೂಲ ಹುಡುಕಬಹುದು. ನಗರಗಳನ್ನು ವ್ಯಾಪಾರಿ ಜಾಗವನ್ನಾಗಿ ಮಾಡೋದಕ್ಕೆ, ನಗರದ ಕಡೆಗೆ ಅದರ ಗಿರಾಕಿಗಳನ್ನು ಎಳೆಯುವುದಕ್ಕೆ ಏನು ಬೇಕೋ ಅದಾಗುತ್ತಿದೆ. ಇದಕ್ಕೆ ಪ್ರಾಪಗಾಂಡ ಎನ್ನಬಹುದು. ಆ ವ್ಯಾಪಾರಿ ಶಕ್ತಿಗೆ, ಜನರನ್ನು ಸೆಳೆಯುವುದೇ ಕೆಲಸ. ಅದರ ಬೆನ್ನುಮೂಳೆ ಗಟ್ಟಿ ಮಾಡಿಕೊಳ್ಳುವುದಕ್ಕೆ ಯಾವ ವ್ಯವಸ್ಥೆ ಬೇಕಾದರೂ ಮುರಿಯುತ್ತದೆ. ಅದಕ್ಕೆ ನಮ್ಮ ದೇಸಿ ಪರ್ಯಾಯ ವ್ಯವಸ್ಥೆಗಳು, ಸ್ವಾವಲಂಬಿ, ಸುಸ್ಥಿರ ವ್ಯವಸ್ಥೆ ಒಡೆದು ಈ ವ್ಯವಸ್ಥೆ ನಿರ್ವಣವಾಯಿತು. ನೆಹರು ಅವರ ಆಧುನಿಕತೆ ಮತ್ತು ಬೆಳವಣಿಗೆಯ ಆಲೋಚನೆಗೂ, ಗಾಂಧಿ ಅವರ ಆಲೋಚನೆಗೂ ಇರುವ ವ್ಯತ್ಯಾಸವೇ ಅದು. ಗಾಂಧಿ ಮುಖ್ಯವಾಗಿ ಸ್ವಾವಲಂಬನೆ, ಗ್ರಾಮಸ್ವರಾಜ್ ಅಂತ ಮಾತಾಡಿದರೆ, ನೆಹರು ಕ್ಯಾಪಿಟಲಿಸಂ ಕಡೆಗೆ ವಾಲಿದರು. ‘ನಮ್ಮಲ್ಲಿರುವ ತೊಡಕುಗಳನ್ನು ಪರಿಹಾರ ಮಾಡುವುದಕ್ಕೆ ಕ್ಯಾಪಿಟಲಿಸಂನಿಂದ ಮಾತ್ರ ಸಾಧ್ಯ’ ಅಂತ ನೆಹರು ಪ್ರತಿಪಾದಿಸಿದರು. ಸಾಮಾಜಿಕ ಮತ್ತು ಆರ್ಥಿಕ ತಾರತಮ್ಯವನ್ನು ಹೋಗಲಾಡಿಸುವುದಕ್ಕೆ ಕ್ಯಾಪಿಟಲಿಸಂನಿಂದ ಸಾಧ್ಯ ಎಂದು ಅಂಬೇಡ್ಕರ್, ನೆಹರು ಸೇರಿದಂತೆ ಹಲವರು ಬಲವಾಗಿ ನಂಬಿದ್ದರು ಮತ್ತು ಇದರಲ್ಲಿ ಸತ್ಯ ಸಹ ಇದೆ.

ನಾವು ಆ ದಾರಿಯಲ್ಲಿ ಸಾಕಷ್ಟು ಸಾಗಾಗಿದೆ. ಇವತ್ತು ನಿಂತು ನೋಡಿದರೆ, ಎಷ್ಟು ಎಡವಿದ್ದೇವೆ ಎಂದು ಹುಡುಕುವುದಕ್ಕೆ ಹೊರಟರೆ, ಹಲವು ತಪು್ಪಗಳು ಸಿಗುತ್ತವೆ. ಇವತ್ತಿನ ಕರೊನಾ ಪರಿಸ್ಥಿತಿಯನ್ನು ಮುಂದಿಟ್ಟುಕೊಂಡರೂ ಯಾಕೆ ಇದು ಇಷ್ಟು ವ್ಯಾಪಕವಾಗಿ ಹರಡುತ್ತಿದೆ, ಯಾಕೆ ಮನುಷ್ಯನ ಆರೋಗ್ಯ ಕೆಡುತ್ತಿದೆ, ಅವನ ಜೀವನಶೈಲಿ ಏನಾಗಿದೆ ಎಂದು ಹುಡುಕಹೊರಟರೆ, ಈ ಆಧುನಿಕತೆ ಹಿಂದೆ ಓಡಿದ ಓಟದಲ್ಲಿ ಆದ ಎಡವಟ್ಟುಗಳು ಗಮನಕ್ಕೆ ಬರುತ್ತವೆ. ಹಾಗಂತ ವೈದ್ಯಕೀಯ ವ್ಯವಸ್ಥೆಯಲ್ಲೇ ಏನೋ ಸಮಸ್ಯೆ ಇದೆ ಎಂದು ಹೇಳುವುದು ಕಷ್ಟ. ವೈದ್ಯಕೀಯ ವ್ಯವಸ್ಥೆ ಸಾಕಷ್ಟು ಅಭಿವೃದ್ಧಿಯಾಗಿದೆ. ಸುಮಾರು ಜೀವಗಳನ್ನು ಉಳಿಸಿ ಕೊಂಡಿದ್ದೀವಿ. ಆ ಉಳಿಸಿಕೊಳ್ಳುವ ಓಟದಲ್ಲಿ ನಮ್ಮ ಜೀವನಶೈಲಿಯ ಸರಿಯಾದ ವಿಷಯಗಳು, ದೇಸಿ ಪರ್ಯಾಯಗಳೇನಿದ್ದವು, ಅದನ್ನೆಲ್ಲ ಕಡೆಗಣಿಸಿದ್ದೇವೆ. ಶಿಸ್ತುಬದ್ಧವಾದ ನಮ್ಮ ಹಳೆಯ ಜೀವನಶೈಲಿಯನ್ನು ಕಡೆಗಣಿಸಿ ಈಗ ಇನ್ನೊಬ್ಬರ ಹಿಡಿತಕ್ಕೆ ಸಿಕ್ಕಿಹಾಕಿಕೊಂಡಿದ್ದೇವೆ. ನಮ್ಮ ಕೈಯಲ್ಲೇ ಇದ್ದ ಆರೋಗ್ಯವನ್ನು ಹೊಸ ಆರೋಗ್ಯ ವ್ಯವಸ್ಥೆಗೆ ಒಪ್ಪಿಸಿಕೊಂಡಿದ್ದೇವೆ. ದೇಸಿ ಪರ್ಯಾಯಗಳನ್ನು ಮರೆತು, ಪಾಶ್ಚಾತ್ಯ ಮಾದರಿಗಳಿಗೆ ಒಲವು ತೋರಿಸುವುದಕ್ಕೆ ಹೋದಂತೆ ಬೆಳವಣಿಗೆಯ ಪಥ ಎಲ್ಲೋ ತಪ್ಪಾಯಿತೇನೋ ಅಂತ ಈಗ ಅನಿಸುತ್ತಿದೆ.

ಕೃಷಿಯನ್ನು ಸಮಗ್ರವಾಗಿ ನೋಡಬೇಕಾಗುತ್ತದೆ. ಸಿಂಧು ನಾಗರಿಕತೆ ಶುರುವಾಗಿದ್ದು, ಅದರ ನದಿಯ ತಪ್ಪಲಲ್ಲಿ. ಮನುಷ್ಯ ಯಾವಾಗ ಅಲ್ಲಿ ವ್ಯವಸಾಯ ಶುರು ಮಾಡಿದನೋ, ಅಲ್ಲಿಂದ ನಾಗರಿಕತೆ ಪ್ರಾರಂಭವಾಯಿತು. ಹಾಗಾಗಿ ಕೃಷಿಯಿಂದಲೇ ಎಲ್ಲವೂ. ಕೃಷಿ ಆಹಾರಕ್ಕೆ ಸಂಬಂಧಿಸಿದೆ. ಸಂಸ್ಕೃತಿ ಜತೆಗೆ ತಳುಕು ಹಾಕಿಕೊಂಡಿದೆ. ಹಾಗಾಗಿ, ಎಲ್ಲವನ್ನೂ ಸಮಗ್ರವಾಗಿ ನೋಡಿದರೆ ಇವತ್ತಿನ ನಮ್ಮ ಸಮಸ್ಯೆಗಳಿಗೆ ಉತ್ತರ ಹುಡುಕುವುದಕ್ಕೆ ಸಾಧ್ಯ. ನಾವು ಇದುವರೆಗೂ ಮಾಡಿದ್ದು ತಪ್ಪಾಗುತ್ತಿದೆ ಅಂತ ಈಗ ಅನಿಸುತ್ತಿದೆ. ನಿಸರ್ಗಚಕ್ರದಲ್ಲಿ ಬದಲಾವಣೆಗಳು ಸಹಜ. ಆದರೆ, ಅದು ತುಂಬ ನಿಧಾನ. ಎಷ್ಟೋ ವರ್ಷಕ್ಕೆ ಒಮ್ಮೆ ಆಗುವುದು, ನಾವು ತೊಡರುಗಾಲು ಹಾಕುತ್ತಿರುವುದರಿಂದ ಅದರಲ್ಲಿ ವೇಗ ಜಾಸ್ತಿಯಾಗುತ್ತಿದೆ. ಇದರಿಂದ ಬೇಗ ಆಗುತ್ತಿದೆ. ವೈರಸ್ ಬಂದು, ಅದರ ರೂಪಾಂತರಗಳು ಒಂದರ ಹಿಂದೊಂದು ಬರುತ್ತಿರುವುದು ಸಹ ಇದೇ ಕಾರಣಕ್ಕೆ.

ಮುಂಚೆ ಒಂದು ವೈರಸ್ ರೂಪಾಂತರ ಗೊಳ್ಳುವುದಕ್ಕೆ ದೀರ್ಘ ಸಮಯ ಬೇಕಾಗುತ್ತಿತ್ತು. ಆದರೆ, ಈಗ ಹಾಗಲ್ಲ. ಬೇಗ ಆಗುತ್ತಿದೆ ಎಂದರೆ ನಮ್ಮ ಕಡೆಯಿಂದ ತಪು್ಪಗಳಾಗುತ್ತಿವೆ ಎಂದೇ ಅರ್ಥ. ಆಧುನಿಕತೆ ಹೆಸರಿನಲ್ಲಿ ನಾವೇನೇನು ಮಾಡುತ್ತಿದ್ದೀವಿ, ಅದ್ಯಾವುದೂ ಸುಸ್ಥಿರವಲ್ಲ. ನಮ್ಮ ನೈಸರ್ಗಿಕ ಸಂಪನ್ಮೂಲಗಳು ನಾಶವಾಗುತ್ತಿವೆ. ಅದರ ಗುಣಮಟ್ಟ ಹಾಳಾಗುತ್ತಿದೆ. ಮಳೆ ಏರುಪೇರಾಗುತ್ತಿದೆ. ಗ್ಲೋಬಲ್ ವಾರ್ವಿುಂಗ್ ಹೆಚ್ಚಾಗುತ್ತಿದೆ. ಮನುಷ್ಯನ ಆರೋಗ್ಯ ಹದಗೆಡುತ್ತಿದೆ. ಈ ಆಧುನಿಕ ತಂತ್ರಜ್ಞಾನದಿಂದ ಅವೆಲ್ಲವೂ ಸರಿಯಾಗಿದೆ ಎಂದು ಕಾಣಿಸುವಂತೆ ಮಾಡಲಾಗುತ್ತಿದೆಯೇ ಹೊರತು, ಒಳಗೆ ನೋಡಿದರೆ ಹುಳುಕು ಕಾಣಿಸುತ್ತದೆ. ಆ ತರಹದ ಗಟ್ಟಿ ಜೀವನ, ಸುಸ್ಥಿರವಾದ ಜೀವನ ಇವತ್ತು ಇಲ್ಲ. ಇದಕ್ಕೆ ಪರಿಹಾರ ಹುಡುಕಬೇಕಿದೆ. ಕೃಷಿಯಲ್ಲಿ ಇದಕ್ಕೆ ಉತ್ತರ ಇದೆ. ನೈಸರ್ಗಿಕ ಅಥವಾ ಸುಸ್ಥಿರ ಕೃಷಿಯಲ್ಲಿ ಉತ್ತರ ಕಾಣಿಸುತ್ತದೆ. ಆ ಕಡೆಗೆ ಇಂದಿನ ತಲೆಮಾರಿನವರನ್ನು ಹೇಗೆ ಕರೆದುಕೊಂಡು ಹೋಗಬಹುದು ಎಂಬುದನ್ನು ಮೊದಲು ಯೋಚಿಸಬೇಕಿದೆ. ಅಷ್ಟೇ ಅಲ್ಲ, ಈ ಬಗ್ಗೆ ಯುವಜನತೆಯ ಅಭಿಪ್ರಾಯವೇನು, ಕೃಷಿ ಎಂದರೆ ಅವರ ಮನಸ್ಸಿನಲ್ಲಿ ಏನು ಬರುತ್ತದೆ ಎಂಬುದನ್ನು ಆಲೋಚಿಸಬೇಕಿದೆ. ಹಳ್ಳಿಯಲ್ಲಿರುವ ಹುಡುಗರೆಲ್ಲ, ನಗರಗಳಿಗೆ ಬರುವುದಕ್ಕೆ ಆಸಕ್ತಿ ತೋರಿಸುತ್ತಿದ್ದಾರೆ ಮತ್ತು ಅವರ್ಯಾರಿಗೂ ಕೃಷಿಯಲ್ಲಿ ಮನಸ್ಸಿಲ್ಲ ಎನ್ನುವಂಥ ಪರಿಸ್ಥಿತಿ ನಿರ್ವಣವಾಗಿದೆ. ಅದಕ್ಕೆ ಕಾರಣಗಳೂ ಇವೆ.

ಪ್ರಮುಖವಾಗಿ, ಇಲ್ಲಿದ್ದರೆ ಏನೂ ಆಗುವುದಿಲ್ಲ ಎಂಬ ಮನಸ್ಥಿತಿ ಹೆಚ್ಚಾಗುತ್ತಿದೆ. ಮಲೆನಾಡಿನ ಕಡೆಗಳಲ್ಲಿ ಹುಡುಗರಿಗೆ ಹೆಣ್ಣು ಕೊಡುವುದಿಲ್ಲ. ಇದಲ್ಲದೆ ಕೃಷಿಯಲ್ಲಿ ಬೇರೆ ತರಹದ ಸಮಸ್ಯೆಗಳೂ ಇವೆ. ಬದಲಾವಣೆ ತರಬೇಕು ಎಂಬುದರ ಬಗ್ಗೆ ರಾಜಕೀಯ ಇಚ್ಛಾಶಕ್ತಿಯ ಕೊರತೆ ಇದೆ. ನಮ್ಮಲ್ಲಿ ಕೃಷಿಕರಿಗೆ ಸೌಲಭ್ಯಗಳೇನೋ ಇವೆ. ಆದರೆ, ಅರ್ಹರಿಗೆ ಅದು ತಲುಪುವುದಿಲ್ಲ. ಇದಲ್ಲದೆ ಸಣ್ಣ ಮಟ್ಟದಲ್ಲಿ ಮಾಡಿದರೆ ಪ್ರಯೋಜನವಾಗುವುದಿಲ್ಲ, ಮಾಡಿದರೆ ಇಂಡಸ್ಟ್ರಿಯಲ್ ಫಾರ್ವಿುಂಗ್ ಮಾಡಬೇಕು ಎಂಬ ನಂಬಿಕೆ ಬಂದುಬಿಟ್ಟಿದೆ. ಪಂಜಾಬ್​ನಲ್ಲಿ ಇಂಡಸ್ಟ್ರಿಯಲ್ ಫಾರ್ವಿುಂಗ್ ದೊಡ್ಡಮಟ್ಟದಲ್ಲಿ ಚಾಲ್ತಿಯಲ್ಲಿದೆ. ಇದರಲ್ಲಿ ಅನುಕೂಲಗಳಿಗಿಂತ ಅನನುಕೂಲಗಳೇ ಜಾಸ್ತಿ. ಎಲ್ಲರ ಆರೋಗ್ಯವೂ ಹದಗೆಡುತ್ತಿದೆ. ಕೆಮಿಕಲ್ಸ್​ನಿಂದಾಗಿ ಹಲವರು ಕ್ಯಾನ್ಸರ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಭೂಮಿ ಬಂಜರಾಗುತ್ತಿದೆ. ನಿಜವಾಗಿಯೂ ಹಳ್ಳಿಯಲ್ಲಿ ಇರಬೇಕು, ಕೃಷಿಯಲ್ಲಿ ತೊಡಗಿಸಿಕೊಳ್ಳಬೇಕು ಎಂಬ ಆಸಕ್ತಿ ಇದ್ದರೂ ಈ ತರಹದ ಒತ್ತಡಗಳಿಂದ ಹಳ್ಳಿ ಬಿಡುವಂಥ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.

ನಗರದಲ್ಲಿರುವ ಯುವಕರಿಗೆ ಕೃಷಿ ಬಗ್ಗೆ ಆಸಕ್ತಿ ಇದ್ದರೂ, ಅವರಿಗೆ ಕೃಷಿಯ ಗಂಧ-ಗಾಳಿಯೂ ಇಲ್ಲದಂತೆ ಬೆಳೆಸುತ್ತಿದ್ದೇವೆ. ಇತ್ತೀಚಿನ ದಿನಗಳಲ್ಲಿ ಒಂದಷ್ಟು ಜನರಿಗೆ ಇಲ್ಲಿ ಭ್ರಮನಿರಸನವಾಗಿ ಅವರು ಹಳ್ಳಿ ಕಡೆಗೆ ಹೋಗುವುದಕ್ಕೆ ತಯಾರಾಗುತ್ತಿದ್ದಾರೆ. ಇದು ಸಣ್ಣ ಪ್ರಮಾಣ ಅಷ್ಟೇ. ಹಳ್ಳಿಗಳಿಂದ ನಗರಕ್ಕೆ ವಲಸೆ ಹೋಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದೆಲ್ಲವೂ ಸರಿಹೋಗಬೇಕು ಎಂದರೆ ನೈಸರ್ಗಿಕ ಕೃಷಿಯತ್ತ ಮುಖ ಮಾಡಬೇಕಿದೆ. ನೈಸರ್ಗಿಕ ಕೃಷಿಯೇ ಎಲ್ಲ ಪ್ರಶ್ನೆಗಳಿಗೂ ನಿಜವಾದ ಉತ್ತರ. ನಾವು ಬರೀ ಕೃಷಿ ಎಂದರಷ್ಟೇ ಸಾಲದು. ಅದನ್ನು ನಿಜಜೀವನದಲ್ಲೂ ಅಳವಡಿಸಿಕೊಳ್ಳಬೇಕು. ಹಾಗಾದಾಗಲಷ್ಟೇ ಸ್ವಾವಲಂಬನೆ, ಗ್ರಾಮ ಸ್ವರಾಜ್ ಎಲ್ಲವೂ ಸಾಧ್ಯ.

(ಲೇಖಕರು ನಟ, ನಿರ್ಮಾಪಕ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net