ನೂರನೇ ವರ್ಷದಲ್ಲಿ ಸಂಘ; ರಾಷ್ಟ್ರೀಯ ಪುನರ್​ ನಿರ್ಮಾಣದ ಆಂದೋಲನ

ವಿಜಯವಾಣಿ (15)
Published on
ಹಿಂದೂ ಪಂಚಾಂಗದ ಮೊದಲ ದಿನವಾದ ವರ್ಷಪ್ರತಿಪದೆಯ ಯುಗಾದಿಯ ದಿನದಂದೇ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರೆಸ್ಸೆಸ್) ಸಂಸ್ಥಾಪಕ ಡಾ. ಕೇಶವ ಬಲಿರಾಮ ಹೆಡಗೇವಾರ್ ಅವರ ಜಯಂತಿ. ಅವರು ಸ್ಥಾಪಿಸಿದ ದೇಶಪ್ರೇಮಿ ಸಂಘಟನೆ ಆರೆಸ್ಸೆಸ್ ಈಗ ಶತಮಾನೋತ್ಸವ ಸಂಭ್ರಮದಲ್ಲಿದೆ. ನೂರು ವರ್ಷಗಳ ಯಾತ್ರೆಯ ಅವಲೋಕನ ಮಾಡಲು ಹೆಡಗೇವಾರರ ಜನ್ಮದಿನಕ್ಕಿಂತ ಉತ್ತಮವಾದ ಮುಹೂರ್ತ ಇನ್ನೊಂದಿರಲಿಕ್ಕಿಲ್ಲ.

ರಾಷ್ಟ್ರೀಯ ಸ್ವಯಂಸೇವಕ ಸಂಘವು ತನ್ನ ಸೇವೆಯ ನೂರನೇ ವರ್ಷವನ್ನು ಪೂರೈಸುತ್ತಿರುವ ಸಂದರ್ಭದಲ್ಲಿ, ಈ ಮೈಲಿಗಲ್ಲನ್ನು ಸಂಘವು ಹೇಗೆ ಕಾಣುತ್ತದೆ ಎಂಬುದರ ಬಗ್ಗೆ ಒಂದು ಕುತೂಹಲವಿರುವುದು ಗೋಚರಿಸುತ್ತದೆ. ಇಂತಹ ಸಂದರ್ಭಗಳು ಆಚರಣೆಯ ಸಲುವಾಗಿ ಅಲ್ಲ, ಆತ್ಮಾವಲೋಕನ ಮತ್ತು ಉದ್ದೇಶದ ಪೂರ್ತಿಗಾಗಿ ಪುನರ್​ಸಮರ್ಪಿಸಿಕೊಳ್ಳಲು ಅವಕಾಶವನ್ನು ಒದಗಿಸುತ್ತವೆ. ಹಾಗೆಯೇ ಈ ಆಂದೋಲನಕ್ಕೆ ಮಾರ್ಗದರ್ಶನ ನೀಡಿದ ಧೀಮಂತ ವ್ಯಕ್ತಿಗಳ ಕೊಡುಗೆಗಳನ್ನು ಮತ್ತು ನಿಸ್ವಾರ್ಥದಿಂದ ಕೆಲಸ ಮಾಡಿದ ಅಸಂಖ್ಯಾತ ಸ್ವಯಂಸೇವಕರು ಮತ್ತು ಅವರ ಕುಟುಂಬಗಳನ್ನು ನೆನೆಯಲೂ ಇದು ಅವಕಾಶ ಮಾಡಿಕೊಡುತ್ತದೆ.

ಡಾ. ಹೆಡಗೇವಾರ್ ಜನ್ಮಜಾತ ದೇಶಭಕ್ತರಾಗಿದ್ದರು. ಭಾರತದ ಮೇಲಿದ್ದ ಉತ್ಕಟ ಪ್ರೀತಿ, ನಿಷ್ಕಳಂಕಿತ ಸಮರ್ಪಣೆಯ ಗುಣವು ಅವರ ಬಾಲ್ಯದ ದಿನಗಳಿಂದಲೇ ಗೋಚರಿಸುತ್ತಿದ್ದವು. ಕೊಲ್ಕತಾದಲ್ಲಿ ವೈದ್ಯಕೀಯ ಶಿಕ್ಷಣವನ್ನು ಪೂರ್ಣಗೊಳಿಸುವ ಹೊತ್ತಿಗೆ, ಸಶಸ್ತ್ರ ಕ್ರಾಂತಿಯಿಂದ ಸತ್ಯಾಗ್ರಹದವರೆಗೆ ಭಾರತವನ್ನು ಬ್ರಿಟಿಷ್ ವಸಾಹತುಶಾಹಿಯಿಂದ ಮುಕ್ತಗೊಳಿಸಲು ಕೈಗೊಂಡ ಎಲ್ಲಾ ಪ್ರಯತ್ನಗಳಿಗೆ ಅವರು ಆಗಲೇ ಒಡ್ಡಿಕೊಂಡಿದ್ದರು. ಸಂಘದ ವಲಯಗಳಲ್ಲಿ ನಾವು ಪ್ರೀತಿಯಿಂದ ಡಾಕ್ಟರ್​ಜಿ ಎಂದು ಕರೆಯುವ ಅವರು ಆ ಎಲ್ಲ ಮಾರ್ಗಗಳನ್ನೂ ಗೌರವಿಸುತ್ತಿದ್ದರು. ಸಾಮಾಜಿಕ ಸುಧಾರಣೆಗಳು, ರಾಜಕೀಯ ಸ್ವಾತಂತ್ರ್ಯ ಪ್ರಮುಖ ಚರ್ಚಾವಿಷಯವಾಗಿದ್ದ ಆ ಸಮಯದಲ್ಲಿ, ಭಾರತೀಯ ಸಮಾಜಕ್ಕೆ ಔಷಧ ನೀಡುವ ವೈದ್ಯರಾಗಿ ಮೂಡಿಬಂದ ಡಾಕ್ಟರ್​ಜಿ, ನಾವು ಸ್ವಾತಂತ್ರ್ಯವನ್ನು ಕಳೆದುಕೊಳ್ಳಲು ಕಾರಣವಾದ ಮೂಲಭೂತ ಸಮಸ್ಯೆಗಳನ್ನು ಪತ್ತೆ ಹಚ್ಚಿದರು. ಅದರ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಲು ನಿರ್ಧರಿಸಿದರು.

ದಿನನಿತ್ಯದ ಜೀವನದಲ್ಲಿ ದೇಶಭಕ್ತಿಯ ಅಭಿವ್ಯಕ್ತಿಯ ಕೊರತೆ, ಸಾಮೂಹಿಕ ರಾಷ್ಟ್ರೀಯ ಭಾವದ ಕ್ಷೀಣತೆ ಮತ್ತು ಇದರಿಂದ ಸಂಕುಚಿತ ಅಸ್ಮಿತೆಗಳು ಹುಟ್ಟಿಕೊಂಡಿದ್ದು ಹಾಗೂ ಸಾಮಾಜಿಕ ಜೀವನದಲ್ಲಿ ಶಿಸ್ತಿನ ಕೊರತೆ ಇವುಗಳು ಬಾಹ್ಯ ಆಕ್ರಮಣಕಾರರು ಭಾರತದಲ್ಲಿ ತಮ್ಮ ನೆಲೆಯನ್ನು ಕಂಡುಕೊಳ್ಳಲು ಮೂಲ ಕಾರಣಗಳು ಎನ್ನುವುದನ್ನು ಅರಿತುಕೊಂಡರು. ನಿರಂತರ ಆಕ್ರಮಣಗಳಿಂದಾಗಿ ಜನರು ತಮ್ಮ ವೈಭವಪೂರ್ಣ ಇತಿಹಾಸದ ಸಾಮೂಹಿಕ ಸ್ಮರಣೆಯನ್ನೇ ಕಳೆದುಕೊಂಡಿದ್ದಾರೆ ಎನ್ನುವುದನ್ನು ಮನಗಂಡರು. ನಮ್ಮ ಸಂಸ್ಕೃತಿ, ಜ್ಞಾನ ಪರಂಪರೆಯ ಕುರಿತು ನಿರಾಶಾವಾದ, ಕೀಳರಿಮೆಯ ಸಂಕೀರ್ಣ ಭಾವನೆ ಬೇರೂರಿತ್ತು. ಕೇವಲ ರಾಜಕೀಯ ಚಟುವಟಿಕೆಯು ನಮ್ಮ ಪ್ರಾಚೀನ ರಾಷ್ಟ್ರದ ಮೂಲಭೂತ ಸಮಸ್ಯೆಗಳನ್ನು ಪರಿಹರಿಸಲಾರದು ಎನ್ನುವುದು ಅವರ ದೃಢನಿಶ್ಚಯವಾಗಿತ್ತು. ಜನರು ರಾಷ್ಟ್ರಕ್ಕಾಗಿ ಬದುಕುವುದಕ್ಕೆ ತರಬೇತಿ ನೀಡಲು ಪ್ರಯತ್ನಗಳ ವಿಧಾನವನ್ನು ರೂಪಿಸಲು ನಿರ್ಧರಿಸಿದರು. ಶಾಖೆಯ ವಿಧಾನವನ್ನು ಆಧರಿಸಿದ ಸಂಘದ ನವೀನ, ವಿಶಿಷ್ಟ ಕಾರ್ಯಪದ್ಧತಿಯು ರಾಜಕೀಯ ಹೋರಾಟವನ್ನು ಮೀರಿದ ಈ ದಾರ್ಶನಿಕ ಚಿಂತನೆಯ ಫಲಿತಾಂಶವಾಗಿದೆ.

ಸ್ವಾತಂತ್ರ್ಯ ಹೋರಾಟದಲ್ಲಿ ಹೆಡಗೇವಾರ್ ಸ್ವಯಂ ಭಾಗವಹಿಸುತ್ತ ಮತ್ತು ಇತರರನ್ನೂ ಪಾಲ್ಗೊಳ್ಳಲು ಪ್ರೋತ್ಸಾಹಿಸುತ್ತ ಈ ತರಬೇತಿ ವಿಧಾನವನ್ನು ಅಭಿವೃದ್ಧಿಪಡಿಸಿದ್ದು ಸಮಾಜವನ್ನು ಸಂಘಟಿಸುವ ಸಲುವಾಗಿಯೇ ಹೊರತು ಇನ್ನೊಂದು ಸಂಘಟನೆಯನ್ನು ಸೃಷ್ಟಿಸಲಿಕ್ಕಲ್ಲ. ನೂರು ವರ್ಷಗಳ ನಂತರವೂ ಸಹಸ್ರಾರು ಯುವಜನರು ಹೆಡಗೇವಾರ್ ತೋರಿಸಿದ ಹಾದಿಯಲ್ಲಿ ಸೇರಿಕೊಳ್ಳುತ್ತಲೇ ಇದ್ದಾರೆ. ಸಂಘದ ಬಗ್ಗೆ ಸಮಾಜದ ಸ್ವೀಕಾರ ಬೆಳೆಯುತ್ತಿದೆ, ನಿರೀಕ್ಷೆಗಳು ಹೆಚ್ಚುತ್ತಿವೆ. ಇವೆಲ್ಲವೂ ಡಾಕ್ಟರ್​ಜಿಯವರ ದೂರದೃಷ್ಟಿಯ ಕುರುಹುಗಳಲ್ಲದೇ ಬೇರೇನೂ ಅಲ್ಲ. ಈ ಆಂದೋಲನ, ಚಿಂತನೆ ಒಂದು ಪವಾಡಕ್ಕಿಂತ ಕಡಿಮೆಯದ್ದಲ್ಲ. ಇಂಗ್ಲಿಷ್ ಶಿಕ್ಷಿತರಾದ ಸಮಾಜದ ಬಹುತೇಕ ಪ್ರಮುಖರು ಯುರೋಪಿನ ಸಂಕುಚಿತ, ಪ್ರತ್ಯೇಕತಾವಾದಿಯಾದ ರಾಷ್ಟ್ರೀಯತೆಯ ಕಲ್ಪನೆಯಿಂದ ಪ್ರಭಾವಿತರಾದ ಸನ್ನಿವೇಶದಲ್ಲಿ, ಹಿಂದುತ್ವ ಮತ್ತು ರಾಷ್ಟ್ರದ ಕಲ್ಪನೆಯನ್ನು ವಿವರಿಸುವುದು ಸುಲಭವಾಗಿರಲಿಲ್ಲ. ಹೆಡಗೇವಾರರು ಸಿದ್ಧಾಂತವನ್ನು ರೂಪಿಸಲಿಲ್ಲ, ಬದಲಾಗಿ ಅವರು ಒಂದು ಕಾರ್ಯಪದ್ಧತಿಯನ್ನು ನೀಡಿದರು, ಅದು ಈ ಯಾತ್ರೆಯ ಪಥದರ್ಶಕ ಶಕ್ತಿಯಾಗಿದೆ.

ನಮಗೆ ಸ್ವಾತಂತ್ರ್ಯ ದೊರಕಿದ ಸಮಯದಲ್ಲಿಯೇ ದುರದೃಷ್ಟವಶಾತ್ ಮತೀಯ ಆಧಾರದ ಮೇಲೆ ಭಾರತವು ವಿಭಜನೆಗೊಂಡಿತು. ಆ ಸಂದರ್ಭದಲ್ಲಿ ಪಾಕಿಸ್ತಾನದಿಂದ ನಿರಾಶ್ರಿತ ಹಿಂದೂ ಜನಸಮುದಾಯವನ್ನು ರಕ್ಷಿಸಿ ಗೌರವದಿಂದ ಅವರಿಗೆ ಪುನರ್ವಸತಿ ಕಲ್ಪಿಸಿದವರು ಸಂಘದ ಸ್ವಯಂಸೇವಕರು. ಸಂಘಟನೆಗಾಗಿ ಸಂಘಟನೆ ಎನ್ನುವ ಮಂತ್ರ ರಾಷ್ಟ್ರೀಯ ಜೀವನದ ವಿವಿಧ ಆಯಾಮಗಳಿಗೆ ಸಂಘಟನಾ ಶಕ್ತಿಯನ್ನು ರವಾನಿಸುವ ಕಾರ್ಯವಾಗಿ ವಿಕಸನಗೊಂಡಿತು. ಸಮಾಜದ ಕುರಿತ ಜವಾಬ್ದಾರಿ ಮತ್ತು ಕರ್ತವ್ಯದ ಪ್ರಜ್ಞೆಯಾಗಿರುವ ಸ್ವಯಂಸೇವಕ ಎಂಬ ಪರಿಕಲ್ಪನೆಯು ಶಿಕ್ಷಣದಿಂದ, ಕಾರ್ವಿುಕ, ರಾಜಕೀಯದವರೆಗಿನ ವಿಭಿನ್ನ ಕ್ಷೇತ್ರಗಳಲ್ಲಿ ತನ್ನ ಅಸ್ತಿತ್ವವನ್ನು ನಿರೂಪಿಸಲು ಪ್ರಾರಂಭಿಸಿತು. ರಾಷ್ಟ್ರೀಯ ತತ್ತ್ವದ ಬೆಳಕಿನಲ್ಲಿ ಎಲ್ಲವನ್ನೂ ಮರುಸಂಘಟಿಸಬೇಕಾಗಿದ್ದ ಈ ಹಂತದಲ್ಲಿ ಎರಡನೇ ಸರಸಂಘಚಾಲಕ ಗುರೂಜಿ (ಮಾಧವ ಸದಾಶಿವ ಗೋಳ್ವಲ್ಕರ್) ಮಾರ್ಗದರ್ಶಕ ಶಕ್ತಿಯಾಗಿದ್ದರು.

ಪ್ರಾಚೀನ ನಾಗರಿಕತೆಯಾದ ಭಾರತವು ತನ್ನ ಆಧ್ಯಾತ್ಮಿಕ ಪರಂಪರೆಗಳ ಆಧಾರದ ಮೇಲೆ ಮಾನವತೆಯ ಹಿತಕ್ಕಾಗಿ ಕಾರ್ಯನಿರ್ವಹಿಸಬೇಕಾದ ಪರಮಗುರಿಯನ್ನು ಹೊಂದಿದೆ. ಸಾರ್ವತ್ರಿಕ ಸಾಮರಸ್ಯ ಮತ್ತು ಏಕತೆಯ ಕಲ್ಪನೆಗಳ ಆಧಾರದ ಮೇಲೆ ಭಾರತವು ತನ್ನ ಕರ್ತವ್ಯವನ್ನು ನಿರ್ವಹಿಸಬೇಕಾದರೆ, ಭಾರತದ ಸಾಮಾನ್ಯ ಜನಮಾನಸವು ಆ ಸದುದ್ದೇಶಕ್ಕಾಗಿ ತನ್ನನ್ನು ತಾನು ಸಿದ್ಧಪಡಿಸಿಕೊಳ್ಳಬೇಕು. ಅದಕ್ಕೆ ಗುರೂಜಿಯವರು ಬಲವಾದ ಸೈದ್ಧಾಂತಿಕ ಅಡಿಪಾಯವನ್ನು ಒದಗಿಸಿದರು. ಯಾವುದೇ ರೀತಿಯ ತಾರತಮ್ಯಕ್ಕೆ ಧಾರ್ವಿುಕ ಮಾನ್ಯತೆ ಇಲ್ಲ ಎಂದು ಭಾರತೀಯ ಸಮಾಜಗಳು ಘೊಷಿಸಿದಾಗ ಹಿಂದೂ ಸಮಾಜದ ಸುಧಾರಣಾ ಕಾರ್ಯಸೂಚಿ ಹೊಸ ವೇಗ ಪಡೆಯಿತು. ತುರ್ತು ಪರಿಸ್ಥಿತಿಯ ಸಮಯದಲ್ಲಿ ಸಂವಿಧಾನವು ಕ್ರೂರವಾಗಿ ದಾಳಿಗೊಳಗಾದಾಗ, ಸಂಘದ ಸ್ವಯಂಸೇವಕರು ಶಾಂತಿಯುತ ಮಾರ್ಗಗಳ ಮೂಲಕ ಪ್ರಜಾಪ್ರಭುತ್ವವನ್ನು ಪುನಃಸ್ಥಾಪಿಸುವ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದರು.

ಶಾಖೆಯ ಪರಿಕಲ್ಪನೆಯಿಂದ ಮೊದಲುಗೊಂಡು ಸಮಾಜದ ಸಜ್ಜನ ಶಕ್ತಿಯನ್ನು ಜೊತೆಗೂಡಿಸಿಕೊಂಡು ಸೇವಾ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವವರೆಗೆ ಸಂಘ ವಿಸ್ತರಿಸಿದೆ ಮತ್ತು ಈ 99 ವರ್ಷಗಳಲ್ಲಿ ಗಮನಾರ್ಹ ಸಾಧನೆಯನ್ನೂ ಮಾಡಿದೆ. ರಾಮಜನ್ಮಭೂಮಿ ವಿಮೋಚನೆಯಂತಹ ಆಂದೋಲನಗಳು ಸಾಂಸ್ಕೃತಿಕ ವಿಮೋಚನೆಗಾಗಿ ಭಾರತದ ಎಲ್ಲಾ ವರ್ಗಗಳು ಮತ್ತು ಪ್ರದೇಶಗಳನ್ನು ಜೋಡಿಸಿದವು. ರಾಷ್ಟ್ರೀಯ ಭದ್ರತೆಯಿಂದ ಗಡಿ ನಿರ್ವಹಣೆಯವರೆಗೆ, ಆಡಳಿತದಲ್ಲಿ ಪಾಲ್ಗೊಳ್ಳುವಿಕೆಯಿಂದ ಗ್ರಾಮೀಣಾಭಿವೃದ್ಧಿಯವರೆಗೆ, ಸಂಘ ಸ್ವಯಂಸೇವಕರಿಂದ ರ್ಸ³ಸಲ್ಪಡದ ರಾಷ್ಟ್ರೀಯ ಜೀವನದ ಯಾವುದೇ ಆಯಾಮವೂ ಇಲ್ಲ. ಸಮಾಜವು ಈ ವ್ಯವಸ್ಥಿತ ಪರಿವರ್ತನೆಯ ಭಾಗವಾಗಲು ಮುಂದೆ ಬರುತ್ತಿದೆ.

ಎಲ್ಲವನ್ನೂ ರಾಜಕೀಯ ಮಸೂರದ ಮೂಲಕ ನೋಡುವ ಪ್ರವೃತ್ತಿ ಬಲವಾಗಿದ್ದರೂ, ಸಂಘವು ಸಮಾಜದ ಸಾಂಸ್ಕೃತಿಕ ಜಾಗೃತಿ ಮತ್ತು ಸಮಾನ ಮನಸ್ಕ ಜನರು ಮತ್ತು ಸಂಸ್ಥೆಗಳ ಶಕ್ತಿಯುತ ಜಾಲವನ್ನು ರಚಿಸುವತ್ತ ಇನ್ನೂ ಗಮನಹರಿಸುತ್ತಿದೆ. ಸಾಮಾಜಿಕ ಪರಿವರ್ತನೆಯಲ್ಲಿ ಮಹಿಳೆಯರ ಭಾಗವಹಿಸುವಿಕೆ ಮತ್ತು ಕುಟುಂಬ ವ್ಯವಸ್ಥೆಯ ಪಾವಿತ್ರ್ಯವನ್ನು ಪುನಃಸ್ಥಾಪಿಸುವ ಕೆಲಸದಲ್ಲಿ ಕಳೆದ ಕೆಲವು ವರ್ಷಗಳಿಂದ ಸಂಘ ಗಮನಹರಿಸಿದೆ. ಲೋಕಮಾತಾ ಅಹಲ್ಯಾಬಾಯಿ ಹೋಳ್ಕರ್ ಅವರ ತ್ರಿಶತಮಾನೋತ್ಸವ ಆಚರಣೆಗೆ ಸಂಘ ಕರೆ ನೀಡಿದ ನಂತರ ಭಾರತದಾದ್ಯಂತ ಸುಮಾರು 10 ಸಾವಿರ ಕಾರ್ಯಕ್ರಮಗಳನ್ನು ಆಯೋಜಿಸಲಾಗಿ, 27 ಲಕ್ಷಕ್ಕೂ ಹೆಚ್ಚು ಜನ ಭಾಗವಹಿಸಿದರು - ಇದು ನಮ್ಮ ರಾಷ್ಟ್ರೀಯ ಪ್ರತಿಮೆಗಳನ್ನು ನಾವು ಸಾಮೂಹಿಕವಾಗಿ ಹೇಗೆ ಗೌರವದಿಂದ ಕಾಣುತ್ತೇವೆ ಎನ್ನುವುದಕ್ಕೆ ಸಾಕ್ಷಿಯಾಗಿದೆ. ಸಂಘದ ಕಾರ್ಯವು ನೂರನೇ ವರ್ಷಕ್ಕೆ ಕಾಲಿಟ್ಟ ಸಂದರ್ಭದಲ್ಲಿ, ರಾಷ್ಟ್ರ ನಿರ್ವಣಕ್ಕಾಗಿ ವ್ಯಕ್ತಿ ನಿರ್ವಣದ ಈ ಪ್ರಮುಖ ಕಾರ್ಯವನ್ನು ಮಂಡಲ ಮತ್ತು ಗ್ರಾಮ ಮಟ್ಟಕ್ಕೆ ಕೊಂಡೊಯ್ಯಲು ನಿರ್ಧರಿಸಿತು.

ಕಳೆದ ಒಂದು ವರ್ಷದಲ್ಲಿ ವ್ಯವಸ್ಥಿತ ಯೋಜನೆ ಮತ್ತು ಅದರ ಅನುಷ್ಠಾನದೊಂದಿಗೆ 10 ಸಾವಿರ ಹೊಸ ಶಾಖೆಗಳನ್ನು ಸೇರಿಸಿರುವುದು ದೃಢನಿಶ್ಚಯ ಮತ್ತು ಸಮಾಜದಲ್ಲಿ ಸ್ವೀಕಾರದ ಸಂಕೇತವಾಗಿದೆ. ಪ್ರತಿ ಗ್ರಾಮ ಮತ್ತು ವಸತಿಯನ್ನು ತಲುಪುವ ಗುರಿ ಇನ್ನೂ ಪೂರ್ಣವಾಗಿ ಈಡೇರದ ಕಾರ್ಯವಾಗಿರುವುದರಿಂದ ಇದು ಆತ್ಮಾವಲೋಕನದ ವಿಷಯವೂ ಹೌದು. ಐದು ಆಯಾಮದ ಪರಿವರ್ತನೆಗಾಗಿ ಕಾರ್ಯಕ್ರಮವಾದ ಪಂಚ ಪರಿವರ್ತನೆಯ ಕರೆಯು ಮುಂಬರುವ ವರ್ಷಗಳಲ್ಲಿ ಹೆಚ್ಚಿನ ಗಮನಹರಿಸುವ ಪ್ರಮುಖ ವಿಷಯವಾಗಿರುತ್ತದೆ. ಶಾಖೆಯ ಜಾಲವನ್ನು ವಿಸ್ತರಿಸುವುದರ ಜೊತೆಗೆ, ನಾಗರಿಕ ಕರ್ತವ್ಯಗಳು, ಪರಿಸರ ಸ್ನೇಹಿ ಜೀವನಶೈಲಿ, ಸಾಮಾಜಿಕ ಸಾಮರಸ್ಯದ ನಡವಳಿಕೆ, ಕೌಟುಂಬಿಕ ಮೌಲ್ಯಗಳು ಮತ್ತು ಸ್ವತ್ವದ ಪ್ರಜ್ಞೆಯನ್ನು ಆಧರಿಸಿದ ಪರಿವರ್ತನೆಯ ಮೇಲೆ ಸಂಘವು ಗಮನವನ್ನು ಕೇಂದ್ರೀಕರಿಸಿದೆ.

ಕಳೆದ ನೂರು ವರ್ಷಗಳಲ್ಲಿ, ರಾಷ್ಟ್ರೀಯ ಪುನರ್ನಿರ್ವಣದ ಆಂದೋಲನವಾಗಿ ಸಂಘವು ನಿರ್ಲಕ್ಷ್ಯ ಮತ್ತು ಅಪಹಾಸ್ಯದಿಂದ ಕುತೂಹಲ ಮತ್ತು ಸ್ವೀಕಾರದತ್ತ ಸಾಗಿದೆ. ಸಂಘವು ಯಾರನ್ನೂ ವಿರೋಧಿಸುವುದರಲ್ಲಿ ನಂಬಿಕೆ ಇಡುವುದಿಲ್ಲ ಮತ್ತು ಸಂಘದ ಕೆಲಸವನ್ನು ವಿರೋಧಿಸುವ ಯಾರಾದರೂ ಒಂದು ದಿನ ಸಂಘದ ಅಂಗಳವನ್ನು ಪ್ರವೇಶಿಸುತ್ತಾರೆ ಎಂಬ ವಿಶ್ವಾಸ ಹೊಂದಿದೆ. ಹವಾಮಾನ ಬದಲಾವಣೆಯಿಂದ ಮೊದಲುಗೊಂಡು ಹಿಂಸಾತ್ಮಕ ಸಂಘರ್ಷಗಳವರೆಗೆ ಜಗತ್ತು ಅನೇಕ ಸವಾಲುಗಳನ್ನು ಎದುರಿಸುತ್ತಿರುವ ಇಂದಿನ ಸನ್ನಿವೇಶದಲ್ಲಿ, ಭಾರತದ ಪ್ರಾಚೀನ ಮತ್ತು ಅನುಭವಾತ್ಮಕ ಜ್ಞಾನವು ಸವಾಲುಗಳಿಗೆ ಪರಿಹಾರಗಳನ್ನು ಒದಗಿಸುವಲ್ಲಿ ಅತ್ಯಂತ ಸಮರ್ಥವಾಗಿದೆ.

ಭಾರತ ಮಾತೆಯ ಪ್ರತಿಯೊಂದು ಮಗುವೂ ತನ್ನ ಕರ್ತವ್ಯವನ್ನು ಅರಿತುಕೊಂಡು ಇತರರೂ ಅನುಕರಿಸಲು ಪ್ರೇರೇಪಿಸುವ ದೇಶೀಯ ಮಾದರಿಯನ್ನು ನಿರ್ವಿುಸಲು ಕೊಡುಗೆ ನೀಡಿದಾಗ ಈ ಬೃಹತ್ ಆದರೆ ಅನಿವಾರ್ಯವಾದ ಕಾರ್ಯ ಸಾಧ್ಯವಾಗುತ್ತದೆ. ಸಜ್ಜನ ಶಕ್ತಿಯ ನಾಯಕತ್ವದಲ್ಲಿ ಇಡೀ ಸಮಾಜವನ್ನು ಒಗ್ಗಟ್ಟಿನಲ್ಲಿ ಜೋಡಿಸಿಕೊಂಡು, ಸಮರಸ ಮತ್ತು ಸಂಘಟಿತ ಭಾರತದ ಒಂದು ಆದರ್ಶದ ಮಾದರಿಯನ್ನು ವಿಶ್ವದ ಮುಂದೆ ಪ್ರಸ್ತುತಪಡಿಸುವ ಈ ಸಂಕಲ್ಪದಲ್ಲಿ ನಾವೆಲ್ಲ ಜೊತೆಯಾಗೋಣ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net