‘ನಾನು ನಂದಿನಿ, ಬೆಂಗಳೂರಿಗ್ ಬಂದೀನಿ!’

Senior Citizens
Published on
ಅಸಹಾಯಕತೆಯಿಂದಲೋ, ಬೇಸರದಿಂದಲೋ ಒಟ್ಟಿನಲ್ಲಿ ಯಾವುದೋ ಕಾರಣಕ್ಕೆ ಹಿರಿಯರು ಆಗೀಗ ಗೊಣಗುವುದುಂಟು; ಕಾಲ ಕೆಟ್ಟುಹೋಯಿತು ಎಂದು ಬೇಸರಿಸುವುದುಂಟು. ಆದರೆ, ನೌಕರಿ ಇತ್ಯಾದಿ ಕಾರಣಕ್ಕೆ ಮನೆಯ ಕಿರಿಯರೆಲ್ಲ ಬೇರೆಡೆ ಸೇರಿಕೊಂಡರೆ, ಮನೆಯಲ್ಲಿ ಹಿರಿಯರು ಮಾತ್ರ ಉಳಿಯುವಂತಾದರೆ... ಅಲ್ಲಿ ಸೃಷ್ಟಿಯಾಗುವ ಮೌನವಿದೆಯಲ್ಲ ಅದು ಭರಿಸಲಸಾಧ್ಯವಾದುದು.

ಇದೇ ಅಕ್ಟೋಬರ್ 1ರಂದು ಹಿರಿಯ ನಾಗರಿಕರ ದಿನವನ್ನು ಆಚರಿಸಲಾಯಿತು. ಕೇಂದ್ರೀಯ ಚುನಾವಣಾ ಆಯೋಗದ ಸೂಚನೆ ಮೇರೆಗೆ, ದೇಶದ ವಿವಿಧೆಡೆಗಳಲ್ಲಿ ಶತಾಯುಷಿಗಳನ್ನು ಅವರವರ ಮನೆಗೇ ತೆರಳಿ ಸನ್ಮಾನಿಸಿ ಗೌರವಿಸಲಾಯಿತು. ಆಯಾ ಜಿಲ್ಲಾಡಳಿತಗಳು ಶತಾಯುಷಿಗಳ ಪಟ್ಟಿ ಮಾಡಿದ್ದವು. ಇದು ಪರಿಪೂರ್ಣ ಪಟ್ಟಿ ಎಂದು ಹೇಳಲಾಗದಿದ್ದರೂ (ಏಕೆಂದರೆ ಎಷ್ಟೋ ಮಂದಿಗೆ ನೂರು ವರ್ಷ ದಾಟಿದ್ದರೂ ಜನ್ಮ ದಿನಾಂಕದ ದಾಖಲೆ ಇರದ್ದರಿಂದ ಅವರು ಈ ಯಾದಿಯಲ್ಲಿ ಸೇರುವುದು ಅನುಮಾನ. ಹಿಂದೆಲ್ಲ ಸಮರ್ಪಕವಾಗಿ ದಾಖಲೀಕರಣ ಮಾಡುವ ವಿಧಾನವೂ ಇರಲಿಲ್ಲವಲ್ಲ) ನಮ್ಮ ನಡುವಿನ ಹಿರಿಯರನ್ನು ಗುರುತಿಸಿ ಗೌರವಿಸಲು ಒಂದು ಸದವಕಾಶ ಎಂದಂತೂ ಹೇಳಬಹುದು. ಆ ಪ್ರಕಾರ, ಉತ್ತರ ಕನ್ನಡ ಜಿಲ್ಲೆಯಲ್ಲಿ 31 ಶತಾಯುಷಿಗಳನ್ನು ಗುರುತಿಸಿ ಸನ್ಮಾನಿಸಲಾಯಿತು. ಈ ಹಿಂದೆ ಚುನಾವಣಾ ಆಯೋಗ ವೃದ್ಧರು, ಮತಗಟ್ಟೆಗೆ ಬರಲಾಗದವರಿಗೆ ಮನೆಯಿಂದಲೇ ಮತ ಚಲಾಯಿಸುವ ಅವಕಾಶ ಕಲ್ಪಿಸಿತ್ತು. ಅದಿಲ್ಲವಾದಲ್ಲಿ ಇಂಥ ಎಷ್ಟೋ ಜನರು ಮತ ಚಲಾಯಿಸಲು ಆಗುತ್ತಿರಲಿಲ್ಲ. ಇಂಥ ನಡೆಗಳು ಸಕಾರಾತ್ಮಕ ಮನಸ್ಥಿತಿ ರೂಪುಗೊಳ್ಳುವುದಕ್ಕೆ ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡುವುದನ್ನು ಅಲ್ಲಗಳೆಯಲಾಗದು.

2022ರಲ್ಲಿ ಪ್ರಕಟವಾದ, ಜಾಗತಿಕ ಜನಸಂಖ್ಯಾ ಅಂದಾಜಿನ ಪ್ರಕಾರ, ಭಾರತದ ಜನಸಂಖ್ಯೆ 140.75 ಕೋಟಿ. ಈ ಪೈಕಿ ಶೇ. 50 ಮಂದಿ 25ರ ಒಳಗಿನ ವಯೋಮಾನದವರು. ಮತ್ತು ಶೇ. 65ಕ್ಕಿಂತ ಹೆಚ್ಚಿನ ಜನರು 35ರ ಒಳಗಿನ ವಯಸ್ಸಿನವರು. ಈ ಕಾರಣಕ್ಕಾಗೇ ಭಾರತವನ್ನು ‘ಯುವದೇಶ’ ಎಂದು ಕರೆಯುವುದು. ಜಗತ್ತಿನ ಇನ್ಯಾವ ದೇಶದಲ್ಲೂ ಜನಸಂಖ್ಯೆಯಲ್ಲಿ ಯುವಜನರ ಪ್ರಮಾಣ ಇಷ್ಟು ಇಲ್ಲ. ಚೀನಾದಂತಹ ದೇಶಗಳು ‘ವೃದ್ಧಾಪ್ಯ’ದ ಸಮಸ್ಯೆ ಎದುರಿಸತೊಡಗಿ, ಅದರ ಪರಿಹಾರಾರ್ಥವಾಗಿ ಜನಸಂಖ್ಯಾ ನೀತಿಯಲ್ಲೇ ಬದಲಾವಣೆ ತಂದುಕೊಂಡಿರುವುದು ಉಲ್ಲೇಖನೀಯ. ಇಲ್ಲಿ ಇನ್ನೂ ಒಂದು ಸ್ವಾರಸ್ಯಕರ ಅಂಕಿಅಂಶವಿದೆ. ಅದೆಂದರೆ- 2020ರಲ್ಲಿ ಭಾರತೀಯರ ಸರಾಸರಿ ವಯಸ್ಸು 29. ಅದೇ ಚೀನಾದಲ್ಲಿ ಇದು 37 ಮತ್ತು ಜಪಾನಿನಲ್ಲಿ 48 ಇತ್ತು. 2021ರಲ್ಲಿ ಭಾರತದಲ್ಲಿ ಜನಗಣತಿ ನಡೆಯಬೇಕಿತ್ತು. ಆದರೆ ಕರೊನಾ ಕಾರಣಕ್ಕೆ ನಡೆದಿಲ್ಲ. ಹೀಗಾಗಿ ವಿಶ್ವಸಂಸ್ಥೆಯಂತಹ ನಂಬಿಕಾರ್ಹ ಸಂಸ್ಥೆಗಳು ನೀಡುವ ವರದಿಯನ್ನೇ ನಾವು ನೆಚ್ಚಿಕೊಳ್ಳಬೇಕಿದೆ.

ಯುನೈಟೆಡ್ ನೇಷನ್ಸ್ ಪಾಪ್ಯುಲೇಷನ್ ಫಂಡ್, ಇಂಡಿಯಾ (ಯುಎನ್​ಇಪಿಎ)ವು ಈಚೆಗೆ ತನ್ನ 2023ರ ವರದಿಯನ್ನು ಬಿಡುಗಡೆ ಮಾಡಿದೆ. ಈ ವರದಿಯಲ್ಲಿ ನೀಡಲಾದ ಕೆಲವು ಮಾಹಿತಿಗಳು ನಮ್ಮನ್ನು ಚಿಂತನೆಗೆ ಮತ್ತು ಕೆಲಮಟ್ಟಿಗೆ ಚಿಂತೆಗೆ ಹಚ್ಚುವಂತಿವೆ ಎಂದರೆ ಅತಿಶಯೋಕ್ತಿಯಲ್ಲ. ಈ ವರದಿಯಲ್ಲಿನ ಕೆಲವು ಅಂಕಿಅಂಶಗಳನ್ನು ಗಮನಿಸುವುದಾದರೆ- ಭಾರತದಲ್ಲಿ ಸಹ ವೃದ್ಧರ ಪ್ರಮಾಣ ಹೆಚ್ಚುತ್ತಿದೆ. ಭಾರತದಲ್ಲಿ ವೃದ್ಧರ ಜನಸಂಖ್ಯೆ ದಶಕವಾರು ಈಗಿನ ಶೇ.41ರ ವೇಗದಲ್ಲಿ ಏರುತ್ತ ಹೋದಲ್ಲಿ, 2050ರ ಹೊತ್ತಿಗೆ ದ್ವಿಗುಣವಾಗಿ ಜನಸಂಖ್ಯೆಯ ಶೇ.20 ಆಗುವ ಸಾಧ್ಯತೆ ಇದೆ. ದೇಶದ ವೃದ್ಧರಲ್ಲಿ ಶೇ.40 ಮಂದಿ ಬಡತನದ ಬೇಗೆಯಲ್ಲಿದ್ದಾರೆ ಮತ್ತು ಈ ಪೈಕಿ ಶೇ.18 ಮಂದಿಗೆ ಆದಾಯದ ಮೂಲವೇ ಇಲ್ಲ. ಹೈಫೈ ಲೈಫ್ ಮಾಡದೆ ಸಾಧಾರಣ ರೀತಿಯಲ್ಲಿ ಜೀವನ ಸಾಗಿಸುತ್ತೇನೆ ಎಂದರೂ, ಇವತ್ತಿನ ದಿನಮಾನದಲ್ಲಿ ಸಾವಿರ ಎಂದರೆ ಲೆಕ್ಕಕ್ಕೆ ಇಲ್ಲ ಎಂಬಂತಾಗಿದೆ. ಜೀವನಮಟ್ಟ ಅಷ್ಟು ಏರಿದೆ. ಹೀಗಿರುವಾಗ ಆದಾಯವೇ ಇಲ್ಲದವರ ಪರಿಸ್ಥಿತಿ ಏನು? ಅವರ ಹೊಟ್ಟೆಬಟ್ಟೆಯ ಕತೆ ಏನು? ಅದಲ್ಲದೆ, ವೃದ್ಧಾಪ್ಯದಲ್ಲಿ ವಯೋಕಾರಣದಿಂದ ಕಾಯಿಲೆಗಳೂ ಸಹಜವಾಗಿ ಹೆಚ್ಚೇ ಇರುತ್ತವೆ. ನಿಶ್ಚಿತ ಆದಾಯ ಇಲ್ಲದವರು ನಿಭಾಯಿಸುವುದಾದರೂ ಹೇಗೆ? ಹೀಗಾಗಿ ಸರ್ಕಾರಗಳ ಆಲೋಚನೆಗಳು- ಯೋಜನೆಗಳು ವೃದ್ಧರ ಆರೋಗ್ಯ ಹಾಗೂ ಅವರ ಅಗತ್ಯಗಳ ಬಗ್ಗೆ ಕೇಂದ್ರೀಕರಿಸುವ ಅಗತ್ಯ ಇದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಆಡಳಿತದಲ್ಲಿ ಇರುವವರು ಎಲ್ಲವನ್ನೂ ಮತಬ್ಯಾಂಕ್ ದೃಷ್ಟಿಯಿಂದ ಮಾತ್ರ ನೋಡದೆ, ಜನಹಿತದ ದೃಷ್ಟಿಯಿಂದಲೂ ನೋಡುವುದು ‘ಆರೋಗ್ಯಕರ’ ನಡೆಯಾದೀತು; ಇಂಥ ಕ್ರಮದಿಂದ ಹಿರಿಯರ ಆಶೀರ್ವಾದವೂ ದಕ್ಕೀತು. ವಿವಿಧ ಬಗೆಯ ಆರೋಗ್ಯ ವಿಮಾ ಯೋಜನೆಗಳು ಇವೆಯಾದರೂ, ಅದು ಒಳಗೊಂಡಿರುವ ಷರತ್ತು ಮತ್ತಿತರ ಕಾರಣಕ್ಕಾಗಿ ಎಲ್ಲರಿಗೂ ಪ್ರಯೋಜನ ದಕ್ಕುತ್ತದೆ ಎಂದು ಹೇಳಲಾಗದು. ಇವತ್ತು ಗಂಭೀರ ಕಾಯಿಲೆಗೆ ಚಿಕಿತ್ಸೆಗೆಂದು ಹೋದರೆ ಲಕ್ಷವೂ ಅಲಕ್ಷ್ಯ ಎಂಬ ವಾತಾವರಣವಿದೆ. ಆರೋಗ್ಯಸೇವೆ ಅಷ್ಟು ದುಬಾರಿಯಾಗಿದೆ.

2022 ಮತ್ತು 2050ರ ಅವಧಿಯಲ್ಲಿ ಭಾರತದಲ್ಲಿ ವೃದ್ಧರ ಸಂಖ್ಯೆ ಶೇ.279ರ ಪ್ರಮಾಣದಲ್ಲಿ ಹೆಚ್ಚುತ್ತದೆ ಎಂದು ಸಹ ಯುನೈಟೆಡ್ ನೇಷನ್ಸ್ ಪಾಪ್ಯುಲೇಷನ್ ಫಂಡ್, ಇಂಡಿಯಾ ಇದರ ವರದಿ ಬೊಟ್ಟುಮಾಡಿದೆ. ಇನ್ನೂ ಒಂದು ಅಂಶದತ್ತ ವರದಿ ಗಮನಸೆಳೆದಿದೆ. ದೇಶದ ಬಹುತೇಕ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ, 60 ಮತ್ತು 80 ವಯಸ್ಸು ದಾಟಿದ ನಂತರದಲ್ಲಿ ಪುರುಷರಿಗಿಂತ ಮಹಿಳೆಯರ ಜೀವಿತಾವಧಿ ಜಾಸ್ತಿ ಇರುತ್ತದೆ ಎಂದು ಈ ವರದಿ ಹೇಳಿದೆ. ಇದಕ್ಕೆ ಪುರಾವೆ ಎಂಬಂತೆ, ಲಿಂಗಾನುಪಾತದಲ್ಲಿ (1000 ಪುರುಷರಿಗೆ ಮಹಿಳೆಯರ ಪ್ರಮಾಣ)ಏರಿಕೆ ಕಂಡುಬರುತ್ತಿರುವುದನ್ನು ವರದಿ ಗುರುತಿಸಿದೆ. ಕೇಂದ್ರ ಭಾರತ ಪ್ರದೇಶದಲ್ಲಿ 2011ರಲ್ಲಿ ಲಿಂಗಾನುಪಾತ 973 ಇದ್ದುದು, 2021ರ ಹೊತ್ತಿಗೆ 1,053ಕ್ಕೆ ಹೆಚ್ಚಿದುದನ್ನು ಈ ಮಾತಿಗೆ ಪ್ರಾತಿನಿಧಿಕ ಉದಾಹರಣೆಯಾಗಿ ನೀಡಲಾಗಿದೆ. ಇದರಿಂದ ಗೊತ್ತಾಗುವ ಒಂದು ಸಂಗತಿಯೆಂದರೆ, ವಿಧವೆಯರ ಸಂಖ್ಯೆ ಹೆಚ್ಚಾಗುತ್ತದೆ ಮತ್ತು ಅವಲಂಬಿತರ ಪ್ರಮಾಣ ಏರುತ್ತದೆ ಎಂಬುದು. ಅಂಥವರಿಗೆ ಮನೆಯಲ್ಲಿ ಆರ್ಥಿಕ ಸಬಲತೆ ಅಥವಾ ದೇಖರೇಖ ನೋಡಿಕೊಳ್ಳಲು ಜನರು ಇದ್ದರೆ ವೃದ್ಧಾಪ್ಯ ಅಷ್ಟು ಹೊರೆ ಎನಿಸದು. ಆದರೆ ಎಷ್ಟು ಜನರಿಗೆ ಈ ಭಾಗ್ಯ ಇರುತ್ತದೆ?

‘ನಾನು ನಂದಿನಿ ಬೆಂಗಳೂರಿಗ್ ಬಂದೀನಿ’ ಎಂಬ ವಿಡಿಯೋ ಸಾಂಗ್ ಈಚಿನ ದಿನಗಳಲ್ಲಿ ಸಕತ್ ಸದ್ದು ಮಾಡಿರುವುದು ಗೊತ್ತಿರುವಂಥದೇ. ಐಟಿ ಕೆಲಸಗಾರ್ತಿಯೊಬ್ಬಳ ಅಂತರಂಗದ ಮಾತಂತಿರುವ ಈ ವಿಡಿಯೋ, ಗೊತ್ತಿದ್ದೋ ಗೊತ್ತಿಲ್ಲದೆಯೋ ನಗರವಲಸೆಯ ಆಯಾಮವನ್ನೂ ತೆರೆದಿಡುತ್ತದೆ. ಬೇರೆ ಬೇರೆ ಕಾರಣಗಳಿಂದಾಗಿ ಹಳ್ಳಿಗಳಿಂದ ನಗರದತ್ತ ವಲಸೆ ನಡೆಯುವುದು ಹೊಸದೇನಲ್ಲ; ಈ ಪ್ರವೃತ್ತಿಗೆ ದೀರ್ಘ ಇತಿಹಾಸವೇ ಇದೆ. ಆದರೆ ಜನರ ಜೀವನಶೈಲಿ ಹಾಗೂ ಆಲೋಚನಾವಿಧಾನ ಬೇರೆಯದೇ ಜಾಡು ಹಿಡಿದ ನಂತರದಲ್ಲಿ ನಗರವಲಸೆ ವೇಗ ವಿಪರೀತವಾಗಿ ಏರಿದೆ. ವಾಹನ ಚಾಲನೆಯಲ್ಲಿ ಒಂದು ಪ್ರಾಥಮಿಕ ನಿಯಮವಿದೆ. ‘ನಿಧಾನವೇ ಪ್ರಧಾನ. ಅತಿ ವೇಗ ಅಪಾಯಕ್ಕೆ ಆಹ್ವಾನ’. ಇದು ಎಲ್ಲರಿಗೂ ಗೊತ್ತಿರುವಂತಹುದೇ. ಡ್ರೖೆವಿಂಗ್ ಕ್ಲಾಸಿನಲ್ಲಿಯೇ ಇದನ್ನು ಕಲಿಸಬೇಕೆಂದೇನೂ ಇಲ್ಲ. ಆದರೆ ಸ್ಟೇರಿಂಗ್ ಹಿಡಿದಾಗ ಈ ನಿಯಮ ನೆನಪಾಗುವುದು ಕಡಿಮೆ. ಪರಿಣಾಮ- ಎಷ್ಟೋ ಸಲ ಅಪಘಾತ. ಈ ನಗರವಲಸೆಯದೂ ಇದೇ ಕತೆ. ಇದರ ಪರಿಣಾಮ ಹಾಗೂ ದುಷ್ಪರಿಣಾಮಗಳ ಬಗ್ಗೆ ಎಲ್ಲರಿಗೂ ಗೊತ್ತಿದೆ. ವಲಸೆಯಿಂದಾಗಿ ನಗರದ ಮೇಲೆ ಒತ್ತಡವುಂಟಾಗಿ, ಕೊನೆಗೆ ಅದು ತನ್ನ ಧಾರಣಾ ಸಾಮರ್ಥ್ಯವನ್ನು ಕಳೆದುಕೊಳ್ಳುವ ಹಂತಕ್ಕೆ ತಲುಪುತ್ತದೆ. ಹೀಗಾಗಿ ಬೆಂಗಳೂರಿನಂತಹ ನಗರಗಳು ನಿವಾಸಿಗಳಿಗೆ ಸರಿಯಾಗಿ ನೀರು ಒದಗಿಸಲು ಪರದಾಡಬೇಕಾಗುತ್ತದೆ; ಕಸ ವಿಲೇವಾರಿ ಮಾಡಲಾಗದೆ ಹೈರಾಣಾಗುವಂತಾಗುತ್ತದೆ. ಮೂಲಸೌಕರ್ಯಗಳ ಕೊರತೆ ಇದ್ದರೂ, ಮಾಲಿನ್ಯದಿಂದ ಮೂಗು ಕಟ್ಟಿದಂತಾದರೂ ‘ನಾನೂ ಬರ್ತೀನಿ ಬೆಂಗಳೂರಿಗೆ’ ಎನ್ನುವ ಸೊಲ್ಲೇನೂ ಕಡಿಮೆಯಾಗುವುದಿಲ್ಲ.

ಹಿಂದೆಲ್ಲ ಒಂದೊಂದು ಮನೆಯಲ್ಲಿ ಮೂರ್ನಾಲ್ಕು ಮಕ್ಕಳಿರುತ್ತಿದ್ದರು. ಹೀಗಾಗಿ ಎಲ್ಲರೂ ಮನೆಯಲ್ಲಿದ್ದರೆ ಜೀವನ ಸಾಗಿಸುವುದು ಕಷ್ಟ; ಮನೆಯಲ್ಲಿ ಕೃಷಿ ನೋಡಿಕೊಳ್ಳಲು ಒಬ್ಬ ಅಥವಾ ಇಬ್ಬರು ಸಾಕು; ಉಳಿದವರು ಹೊರಗೆ ಹೋಗಿ ಏನಾದರೂ ಬದುಕಿನ ದಾರಿ ಕಂಡುಕೊಳ್ಳಲಿ ಎಂದು ಬಯಸುವುದು ಸಹಜವಾಗಿತ್ತು. ಆದ್ದರಿಂದ ಇಬ್ಬರು ಬೇರೆಡೆ ಹೋದರೂ ಮನೆಯಲ್ಲಿರುವ ಹಿರಿಯರ ಯೋಗಕ್ಷೇಮ ನೋಡಿಕೊಳ್ಳಲು ಜನರ ಕೊರತೆ ಆಗುತ್ತಿರಲಿಲ್ಲ. ಕೃಷಿಯೂ ಅದರ ಪಾಡಿಗೆ ಸಾಗುತ್ತಿತ್ತು. ಹೊರಗಿದ್ದವರು ಹಬ್ಬಹುಣ್ಣಿಮೆಗೆ ಮನೆಗೆ ಬಂದು ಎಲ್ಲರೂ ಸೇರಿ, ‘ನಮ್ಮ ಸಂಸಾರ ಆನಂದಸಾಗರ’ ಎಂದು ಕೋರಸ್ ಹಾಡಲು ತೊಂದರೆ ಇರಲಿಲ್ಲ. ಆದರೆ ಈಗಿನ ವಾತಾವರಣ ಹಾಗಿದೆಯೇ? ಇರುವುದೇ ಒಂದು ಮಗು. ಹೆಚ್ಚೆಂದರೆ ಎರಡು. ಶಿಕ್ಷಣದ ಅವಕಾಶಗಳು ಹಾಗೂ ಮಕ್ಕಳನ್ನು ಓದಿಸಬೇಕು ಎಂಬ ಪಾಲಕರ ಹೆಬ್ಬಯಕೆಯಿಂದಾಗಿ, ಗೂಡಿನಲ್ಲಿ ಯಾವ ಹಕ್ಕಿಯೂ ಇರದ ಸ್ಥಿತಿ. ಅದು ಸಹಜವೇ ಎನ್ನಿ. ಉನ್ನತ ವಿದ್ಯಾಭ್ಯಾಸ ಪಡೆದು, ಉತ್ತಮ ನೌಕರಿ ಸಿಕ್ಕಾಗ ಬೇಡ ಎಂದು ತ್ಯಾಗ ಮಾಡಲಾದೀತೆ? ‘ನೀವು ನೌಕರಿಗೆ ಹೋಗಿ. ನಾವು ಹೇಗೋ ಮನೆನೋಡಿಕೊಂಡು ಹೋಗ್ತೇವೆ’ ಎಂದು ತಂದೆತಾಯಿ ಹೇಳುವ ಸನ್ನಿವೇಶ ನಿರ್ವಣವಾಗಿದೆ. ಹೀಗಾಗಿ, ಅತ್ತ ಕೃಷಿ ಕಾಯಕಕ್ಕೂ ಜನರ ತುಟಾಗ್ರತೆಯಾಗಿದೆ. ಪೇಟೆಗಳಲ್ಲಂತೂ ಆಯಿತು, ಹಳ್ಳಿಗಳಲ್ಲಿ ಸಹ ಹಿರಿಯರಷ್ಟೇ ಇರುವ ಎಷ್ಟೋ ಮನೆಗಳು ಕಾಣಸಿಗುತ್ತವೆ. ಇನ್ನು ಮುಂದೆ ಆ ಮನೆಗಳಲ್ಲಿ ಬಹುಸದಸ್ಯರ ಕಲರವ ಕೇಳಲು ಸಾಧ್ಯವೆ? ಮಕ್ಕಳ ಆಟನೆಗೆದಾಟ ಮರುಕಳಿಸೀತೆ? ಎಲ್ಲ ಕಡೆ ಇಂಥ ಸಾಮಾಜಿಕ ಸನ್ನಿವೇಶ ನಿರ್ವಣವಾದರೆ ನಗರವಲಸೆ ಹೆಚ್ಚಾಗದೆ ಇರುತ್ತದೆಯೆ? ಹಾಗಂತ, ನಗರಕ್ಕೆ ಬರುವುದು ಕೆಲವರಿಗೆ ಹೊಟ್ಟೆಪಾಡಿನ, ಜೀವನೋಪಾಯದ ಅನಿವಾರ್ಯತೆ ಎಂಬುದನ್ನೂ ಅಲ್ಲಗಳೆಯಲಾಗುವುದಿಲ್ಲ. ಊರಲ್ಲೇ ಇದ್ದರೆ ಜೀವನ ಸಾಗಿಸುವಷ್ಟು ಆದಾಯ ಇರುವುದಿಲ್ಲ. ಜಮೀನು ಸಹ ಇರುವುದಿಲ್ಲ. ಮನೆಯಲ್ಲಿದ್ದುಕೊಂಡು ದಿನಾ ಮುನಿಸು, ಗೊಣಗಾಟ ಮಾಡಿಕೊಳ್ಳುವದಕ್ಕಿಂತ ಇದೇ ವಾಸಿ ಎಂಬ ತೀರ್ವನಕ್ಕೆ ಬಂದು ಗಂಟುಮೂಟೆ ಕಟ್ಟಿಕೊಂಡು ನಗರದ ಬಸ್ಸೇರುತ್ತಾರೆ. ಒಟ್ಟಿನಲ್ಲಿ ನಗರಗಳು ತುಂಬಿತುಳುಕುತ್ತವೆ. ಇದೆಲ್ಲ ಎಲ್ಲಿಗೆ ಹೋಗಿ ತಲುಪುತ್ತದೋ! ಅಸಹಾಯಕತೆಯಿಂದಲೋ, ಬೇಸರದಿಂದಲೋ ಒಟ್ಟಿನಲ್ಲಿ ಯಾವುದೋ ಕಾರಣಕ್ಕೆ ಹಿರಿಯರು ಆಗೀಗ ಗೊಣಗುವುದುಂಟು; ಕಾಲ ಕೆಟ್ಟುಹೋಯಿತು ಎಂದು ಬೇಸರಿಸುವುದುಂಟು. ಆ ಕ್ಷಣಕ್ಕೆ ಇತರರಿಗೆ ಅದರಿಂದ ಕಿರಿಕಿರಿ ಆಗುವುದು ಸಹಜ. ಆದರೆ, ನೌಕರಿ ಇತ್ಯಾದಿ ಕಾರಣಕ್ಕೆ ಮನೆಯ ಕಿರಿಯರೆಲ್ಲ ಬೇರೆಡೆ ಸೇರಿಕೊಂಡರೆ, ಮನೆಯಲ್ಲಿ ಹಿರಿಯರು ಮಾತ್ರ ಉಳಿಯುವಂತಾದರೆ... ಅಲ್ಲಿ ಸೃಷ್ಟಿಯಾಗುವ ಮೌನವಿದೆಯಲ್ಲ ಅದು ಭರಿಸಲಸಾಧ್ಯವಾದುದು. ‘ಹಳೆ ಬೇರು ಹೊಸ ಚಿಗುರು ಕೂಡಿರಲು ಮರ ಸೊಬಗು’ ಎಂಬ ಕವಿವಾಣಿ ವಾಸ್ತವದಲ್ಲಿಯೂ ಸಾಕಾರವಾದಲ್ಲಿ ಮಾತ್ರ ಜೀವನದ ನಿಜವಾದ ಸೊಬಗು ಗೋಚರಿಸಬಲ್ಲದು. ಆದರೆ ಆಧುನಿಕ ಜೀವನದ ರಭಸವು ಈ ಸೊಗಡು, ಸೊಬಗನ್ನು ಸವಿಯಲು ಅವಕಾಶವೀಯುವುದೇ ಎಂಬುದೇ ದೊಡ್ಡ ಪ್ರಶ್ನೆ.

ಕೊನೇ ಮಾತು: ಯಕ್ಷಗಾನ ಎಂಬುದೊಂದು ಅದ್ಭುತ ಕಲೆ. ಇಲ್ಲಿ ಸಂಗೀತ, ನೃತ್ಯ, ಮಾತುಗಾರಿಕೆ, ಹಾಸ್ಯ ಎಲ್ಲವೂ ಇದೆ. ಯಕ್ಷಗಾನ ಪ್ರಸಂಗಗಳು ಬಹುತೇಕವಾಗಿ ರಾಮಾಯಣ, ಮಹಾಭಾರತ, ಪುರಾಣ ಕಥೆಗಳನ್ನು ಆಧರಿಸಿದ್ದರೂ, ಕಲಾವಿದನ ಸಮಯಪ್ರಜ್ಞೆ ಮತ್ತು ವಾಕ್ಚಾತುರ್ಯವು ಯಕ್ಷಗಾನಕ್ಕೆ ಸಮಕಾಲೀನತೆಯನ್ನೂ ತಂದುಕೊಡುತ್ತದೆ. ಇದಕ್ಕೆ ಒಂದು ಉದಾಹರಣೆ- ಈಚೆಗೆ ಜನಪ್ರಿಯವಾದ ‘ನಾನು ನಂದಿನಿ, ಬೆಂಗಳೂರಿಗ್ ಬಂದೀನಿ’ ಎಂಬ ವಿಡಿಯೋ ಹಾಡನ್ನು ಹಾಸ್ಯಕಲಾವಿದನೊಬ್ಬ ಯಕ್ಷಗಾನ ಪ್ರಸಂಗದಲ್ಲಿ ಬಳಸಿಕೊಂಡು, ತನ್ನದೇ ಆದ ರೀತಿಯಲ್ಲಿ ಪ್ರಸ್ತುತಪಡಿಸಿದ್ದು, ಜನ ಬಿದ್ದುಬಿದ್ದು ನಗುವಂತೆ ಮಾಡಿತ್ತು. ಕಲೆಯ ಗಮ್ಮತ್ತು ಇರುವುದೇ ಅಲ್ಲಿ; ಸಮಕಾಲೀನತೆಯ ಸ್ಪರ್ಶ ನೀಡುವುದರಲ್ಲಿ. ಇಂತಹ ಗುಣಗ್ರಾಹಿತ್ವದಿಂದಲೇ ಯಾವುದೇ ಕಲೆ ಉಳಿದು ಬೆಳೆಯುವುದು.

(ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net