ಕುತಂತ್ರಿ ಪಾಕಿಸ್ತಾನದಲ್ಲಿ ಬಹುತಂತ್ರಿ ಅಸೀಮ್ ಮುನೀರ್!

Column F
Published on
ಪದವಿಗನುಸಾರವಾಗಿ ಸೇನಾಧಿಕಾರಿಗಳಿಗೆ ನಗರ ಪ್ರದೇಶಗಳಲ್ಲಿ ನಿವೇಶನಗಳು ಮತ್ತು ಹಳ್ಳಿಗಾಡಿನಲ್ಲಿ, ಮುಖ್ಯವಾಗಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಫಾಮರ್್​ಗಳು ದೊರೆಯುತ್ತವೆ. ಹೀಗಾಗಿ, ಮೇಜರ್ ಜನರಲ್ ಮತ್ತದರ ಮೇಲಿನ ಸ್ಥಾನಗಳಿಗೇರಿದ ಸೇನಾಧಿಕಾರಿಗಳ ಹೆಸರಿನಲ್ಲಿರುವ ನೆಲ ಚದರ ಕಿಲೋಮೀಟರ್​ಗಳಲ್ಲಿರುತ್ತವೆ!

ಭಾರತ ಮತ್ತು ಪಾಕಿಸ್ತಾನಗಳೆರಡೂ ಸ್ವತಂತ್ರ ದೇಶಗಳಾಗಿ ಅಸ್ತಿತ್ವಕ್ಕೆ ಬಂದು ಮೊನ್ನೆಮೊನ್ನೆಯಷ್ಟೇ ಮುಕ್ಕಾಲು ಶತಮಾನವಾಯಿತು. ಈ ಎಪ್ಪತೆôದು ವರ್ಷಗಳಲ್ಲಿ, 1996ರಲ್ಲಿ ಅಟಲ್ ಬಿಹಾರಿ ವಾಜಪೇಯಿಯವರ ಹದಿಮೂರು ದಿನಗಳ ಆಡಳಿತವನ್ನೂ ಸೇರಿಸಿಕೊಂಡರೆ, ಈ ದೇಶ ಹದಿನಾರು ಪ್ರಧಾನ ಮಂತ್ರಿಗಳನ್ನು ಮತ್ತು ಭಾರತೀಯ ಸೇನೆ ಮೂವತ್ತೆರಡು ಸೇನಾ ದಂಡನಾಯಕರನ್ನು ಕಂಡಿದೆ. ಅಂದರೆ, ಪ್ರಧಾನ ಮಂತ್ರಿಗಳ ಸರಾಸರಿ ಅಧಿಕಾರಾವಧಿ ಸೇನಾ ದಂಡನಾಯಕರ ಅಧಿಕಾರಾವಧಿಯ ದುಪ್ಪಟ್ಟು.

ಈಗ ಪಾಕಿಸ್ತಾನದತ್ತ ಹೊರಳೋಣ. ಎಂಟು ತಿಂಗಳ ಹಿಂದೆ ಅಧಿಕಾರಕ್ಕೇರಿದ ಶೆಹ್​ಬಾಜ್ ಶರೀಫ್ ಅಲ್ಲಿನ ಇಪ್ಪತ್ತಮೂರನೆಯ ಪ್ರಧಾನಮಂತ್ರಿಯಾಗಿದ್ದರೆ, ಎರಡು ವಾರಗಳ ಹಿಂದೆ ಅಧಿಕಾರ ವಹಿಸಿಕೊಂಡ ಆಸಿಮ್ ಮುನೀರ್ ಸೇನೆಯ ಹನ್ನೊಂದನೆಯ ದಂಡನಾಯಕ! ಈ ವಿವರ ನಿಮಗೆ ಹೇಳುವುದು ಭಾರತಕ್ಕೆ ಸಂಪೂರ್ಣ ವಿರುದ್ಧವಾಗಿ ಪಾಕಿಸ್ತಾನದಲ್ಲಿ ಸೇನಾ ದಂಡನಾಯಕರ ಸರಾಸರಿ ಅಧಿಕಾರಾವಧಿಯು ಪ್ರಧಾನಮಂತ್ರಿಗಳ ಸರಾಸರಿ ಅಧಿಕಾರಾವಧಿಯ ದುಪ್ಪಟ್ಟು ಎಂಬ ಆಸಕ್ತಿಕರ ವಿಷಯವನ್ನು. ಅಲ್ಲಿ ಇದುವರೆಗೆ ಯಾವ ಪ್ರಧಾನಮಂತ್ರಿಯೂ ಐದು ವರ್ಷಗಳ ಪೂರ್ಣಾವಧಿ ಪೂರೈಸಿಲ್ಲ. ಬದಲಿಗೆ ಬರಖಾಸ್ತುಗೊಂಡ ಒಬ್ಬರು ಮತ್ತು ಅಧಿಕಾರದಲ್ಲಿದ್ದಾಗಲೇ ಮರಣ ಹೊಂದಿದ ಒಬ್ಬರ ಹೊರತಾಗಿ ಎಲ್ಲ ಸೇನಾ ದಂಡನಾಯಕರೂ ಮೂರು ವರ್ಷಗಳ ಪೂರ್ಣಾವಧಿಯನ್ನು ಪೂರೈಸಿದ್ದಾರೆ. ಇತ್ತೀಚೆಗಿನ ಆಷ್ಪಾಕ್ ಪರವೇಜ್ ಕಯಾನಿ ಮತ್ತು ಕಮರ್ ಜಾವೆದ್ ಬಾಜ್ವಾ ಎರಡೆರಡು ಆವಧಿಗಳನ್ನು ಪೂರೈಸಿದ್ದಾರೆ. ಇದರಿಂದ ಸ್ಪಷ್ಟವಾಗುವುದು ಆ ನೆರೆನಾಡಿನಲ್ಲಿ ರಾಜಕೀಯ ನೇತಾರರ ಹಣೆಬರಹ ಅನಿಶ್ಚಿತ, ಸೇನಾನಾಯಕರದ್ದು ನಿಶ್ಚಿತ ಎಂದು. ಇದಕ್ಕೆ ಫೀಲ್ಡ್ ಮಾರ್ಷಲ್ ಅಯೂಬ್ ಖಾನ್ ಮತ್ತು ಜಿಯಾ-ಉಲ್-ಹಕ್ ಸೇನಾಕ್ರಾಂತಿ ಎಸಗಿ ತಲಾ ಹನ್ನೊಂದು ವರ್ಷಗಳು, ಪರ್ವೆಜ್ ಮುಷರ್​ರಫ್ ಒಂಬತ್ತು ವರ್ಷಗಳ ಕಾಲ ರಾಜ್ಯಭಾರ ಮಾಡಿದ್ದನ್ನೂ, ಜನರಲ್ ಯಾಹ್ಯಾ ಖಾನ್ ಮೂರು ವರ್ಷ ಅಧಿಕಾರ ಹಿಡಿದು ಕೂತದ್ದನ್ನೂ ಸೇರಿಸಿದರೆ ಮತ್ತು ಉಳಿದೆಲ್ಲಾ ಸಮಯಗಳಲ್ಲಿ ನಾಗರಿಕ ಸರ್ಕಾರಗಳ ಸೃಷ್ಟಿ ಸ್ಥಿತಿ ಲಯಗಳು ಸೇನೆಯ ಮರ್ಜಿಗನುಗುಣವಾಗಿಯೇ ನಡೆದದ್ದು ಪಾಕಿಸ್ತಾನದ ಮೇಲೆ ಸೇನೆಯ ಹಿಡಿತದ ಮಟ್ಟ ನಿಮಗೆ ಇನ್ನಷ್ಟು ಮನದಟ್ಟಾಗಬಹುದು. ಇದನ್ನು ಪಾಕಿಸ್ತಾನಿ ಪತ್ರಿಕೋದ್ಯಮಿ ನಜಮ್ ಸೇಠಿ ಹೀಗೆ ಇನ್ನಷ್ಟು ಸ್ಪಷ್ಟವಾಗಿ ಹೇಳುತ್ತಾರೆ- ‘ಪಾಕಿಸ್ತಾನ ಇದುವರೆಗೆ ನಾಲ್ಕು ಘೊಷಿತ ಸೇನಾ ಆಡಳಿತಗಳನ್ನು ಕಂಡಿದೆ. ಇನ್ನುಳಿದ ಸಮಯವನ್ನು ಅಘೊಷಿತ ಸೇನಾ ಆಡಳಿತದಲ್ಲಿ ಕಳೆದಿದೆ!’ ಇದಕ್ಕೇ ಹೇಳುವುದು, ‘ಜಗತ್ತಿನ ಇತರೆಲ್ಲಾ ದೇಶಗಳಿಗೆ ಸೇನೆಗಳಿದ್ದರೆ, ಪಾಕಿಸ್ತಾನದಲ್ಲಿ ಮಾತ್ರ ಸೇನೆಗೇ ಒಂದು ದೇಶವಿದೆ’ ಎಂದು. ಈ ಹಿನ್ನೆಲೆಯಲ್ಲಿ ನವೆಂಬರ್ 29ರಂದು ಪದವಿಯನ್ನಲಂಕರಿಸಿದ ಜನರಲ್ ಆಸಿಮ್ ಮುನೀರ್ ಅಹ್ಮದ್ ಶಾ ಅವರ ಹಿನ್ನೆಲೆಯ ಪರಿಶೀಲನೆ ಮತ್ತು ಮುನ್ನೆಲೆಯ ಅವಗಾಹನೆಗಳನ್ನು ಮಾಡುತ್ತಾ, ಅವರ ನೀತಿಗಳಿಂದಾಗಿ ಭಾರತದ ಮೇಲಾಗುವ ಪರಿಣಾಮಗಳ ಕುರಿತಾದ ಅವಲೋಕನವನ್ನೂ ಮಾಡೋಣ.

ಪಾಕ್ ಸೇನೆಯಲ್ಲಿ ಪದೋನ್ನತಿ ಪಡೆಯುತ್ತಾ ಒಂದೊಂದು ಮೆಟ್ಟಲನ್ನೂ ಏರುತ್ತಾ ಹೋದರೆ ತೆರೆದುಕೊಳ್ಳುವ ಅದೃಷ್ಟದ ಬಾಗಿಲುಗಳೂ ದೊಡ್ಡದಾಗುತ್ತಲೇ ಹೋಗುತ್ತವೆ. ಪದವಿಗನುಸಾರವಾಗಿ ಸೇನಾಧಿಕಾರಿಗಳಿಗೆ ನಗರ ಪ್ರದೇಶಗಳಲ್ಲಿ ನಿವೇಶನಗಳು ಮತ್ತು ಹಳ್ಳಿಗಾಡಿನಲ್ಲಿ, ಮುಖ್ಯವಾಗಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಫಾಮರ್್​ಗಳು ದೊರೆಯುತ್ತವೆ. ಹೀಗಾಗಿ ಮೇಜರ್ ಜನರಲ್ ಮತ್ತದರ ಮೇಲಿನ ಸ್ಥಾನಗಳಿಗೇರಿದ ಸೇನಾಧಿಕಾರಿಗಳ ಹೆಸರಿನಲ್ಲಿರುವ ನೆಲ ಚದರ ಕಿಲೋಮೀಟರ್​ಗಳಲ್ಲಿರುತ್ತವೆ! ಲೆಫ್ಟಿನೆಂಟ್ ಜನರಲ್ ಮತ್ತು ಅಂತಿಮವಾಗಿ ಜನರಲ್ ಸ್ಥಾನಕ್ಕೇರಿ ಸೇನಾ ದಂಡನಾಯಕರಾದರಂತೂ ಹಣವನ್ನು ಅಕ್ಷರಶಃ ಕೊಳ್ಳೆ ಹೊಡೆಯುವ ಅವಕಾಶ ದೊರೆತುಬಿಡುತ್ತದೆ ಮತ್ತು ಅದನ್ನು ಅವರೆಲ್ಲರೂ ನಿರಾತಂಕವಾಗಿ, ನಿರಾಯಾಸವಾಗಿ ಹಾಗೂ ನಿರ್ಲಜ್ಜೆಯಿಂದ ಬಳಸಿಕೊಳ್ಳುತ್ತಾರೆ. ಆದರೆ, ಈ ವಿವರಗಳು ಮಾಧ್ಯಮದಲ್ಲಿ ‘ದೊಡ್ಡದಾಗಿ’ ಕಾಣಿಸಿಕೊಳ್ಳದಂತೆ ಸಾಮೂಹಿಕವಾಗಿ ಪ್ರಯತ್ನಗಳನ್ನವರು ಮಾಡುತ್ತಲೇ ಇರುತ್ತಾರೆ. ಹೀಗಾಗಿ, ಬೆನಝೀರ್ ಭುಟ್ಟೋ ಪ್ರಧಾನಿಯಾಗಿದ್ದಾಗ ಪತಿ ಆಸಿಫ್ ಆಲಿ ಜರ್ದಾರಿ ವರ್ಗಾವಣೆ, ಪದೋನ್ನತಿ, ಆರ್ಥಿಕ ಕಾರುಬಾರುಗಳ ಲೈಸನ್ಸ್​ಗಳಿಗಾಗಿ ಬಂದವರಿಂದೆಲ್ಲಾ ಹತ್ತು ಪರ್ಸೆಂಟ್ ಕಮಿಷನ್ ಪಡೆಯುತ್ತಿದ್ದುದರಿಂದ ಮಾಧ್ಯಮಗಳು ಅವರಿಗೆ ಮಿಸ್ಟರ್ ಟೆನ್ ಪರ್ಸೆಂಟ್ ಎಂದು ಹೆಸರಿಟ್ಟವು. ಅದೇ ಮಾಧ್ಯಮಗಳು ಬೆನಝೀರ್ ಭುಟ್ಟೋ ಮಹಾನ್ ಭ್ರಷ್ಟೆ ಎಂದು ಬರೆದವು, ನವಾಜ್ ಶರೀಫ್ ಚೀನಾ, ಯುಎಇ, ಸೌದಿ ಅರೇಬಿಯಾಗಳಿಂದ ಹೇರಳ ಲಂಚ ಪಡೆದು ಭಾರಿ ಗಂಟು ಮಾಡಿಕೊಂಡರು ಎಂದು ಕೂಗಾಡಿದವು. ಆದರೆ, ಪಾಕಿಸ್ತಾನಕ್ಕೆ ಐಎಂಎಫ್ ಮತ್ತು ಅಮೆರಿಕಾ ಸೇರಿದಂತೆ ಶ್ರೀಮಂತ ಮಿತ್ರ ದೇಶಗಳಿಂದ ದೊಡ್ಡ ಪ್ರಮಾಣದ ಸಾಲ ಅಥವಾ ನೆರವು ಬರುತ್ತಿದ್ದಂತೇ ಸೇನಾಧಿಕಾರಿಗಳು ಮನೆ ಖರೀದಿಸಲು ದುಬೈ, ಲಂಡನ್, ಬರ್ವಿುಂಗ್​ಹ್ಯಾಂಗಳಿಗೆ ದೌಡಾಯಿಸುತ್ತಿದ್ದ ಬಗ್ಗೆ ಯಾವ ಮಾಧ್ಯಮವೂ ಒಂದಕ್ಷರವನ್ನೂ ಬರೆಯುತ್ತಿರಲಿಲ್ಲ! ಬೆನಝೀರ್ ಭುಟ್ಟೋ ದುಬೈನಲ್ಲಿ, ನವಾಜ್ ಶರೀಫ್ ಲಂಡನ್​ನಲ್ಲಿ ಐಷಾರಾಮಿ ಬದುಕು ನಡೆಸುತ್ತಿರುವುದರ ಬಗ್ಗೆ ಪುಟಗಟ್ಟಲೆ ಬರೆಯುವ / ಹೇಳುವ ಮಾಧ್ಯಮಗಳು 2013ರಲ್ಲಿ ನಿವೃತ್ತಿಯಾದ ಜನರಲ್ ಆಷ್ಪಾಕ್ ಪರ್ವೆಜ್ ಕಾಯಾನಿ ಆಸ್ಟ್ರೇಲಿಯಾದ ಪರ್ತ್​ನಲ್ಲಿ, 2016ರಲ್ಲಿ ನಿವೃತ್ತಿಯಾದ ಜನರಲ್ ರಹೀಲ್ ಶರೀಫ್ ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನೆಲೆಸಿರುವುದು ಏಕೆ ಮತ್ತು ಹೇಗೆ ಎನ್ನುವುದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಸೇನಾಧಿಕಾರಿಗಳ ಭ್ರಷ್ಟಾಚಾರಗಳನ್ನು ತನಿಖೆ ಮಾಡಿದರೆ ಅವರ ಮುಂದೆ ರಾಜಕಾರಣಿಗಳು ಸಂತರಂತೆ ಕಾಣುತ್ತಾರೆ ಎಂದು ಮಾನವಹಕ್ಕುಗಳ ಹೋರಾಟಗಾರ್ತಿ ಆಸ್ಮಾ ಜಹಾಂಗೀರ್ ಹೇಳಿದ್ದು ಈ ಸಂದರ್ಭದಲ್ಲಿ ಅರ್ಥಪೂರ್ಣವೆನಿಸುತ್ತದೆ.

ತಮ್ಮವರ ‘ಗುಪ್ತ’ ವಿಷಯಗಳನ್ನು ಕಟ್ಟುನಿಟ್ಟಾಗಿ ಕಾಪಾಡಿಕೊಳ್ಳುವ ಸೇನೆಯ ಒಂದು ಭಾಗವೇ ಈ ಬಾರಿ ಸರ್ಕಾರದ ಜತೆ ಶಾಮೀಲಾಗಿ ಜನರಲ್ ಕಮರ್ ಜಾವೆದ್ ಬಾಜ್ವಾರನ್ನು ಬ್ಲಾ್ಯಕ್​ವೆುೕಲ್ ಮಾಡಿದ್ದರಿಂದ ಅವರ ಭ್ರಷ್ಟಾಚಾರಗಳ ಬಗ್ಗೆ ಒಂದಷ್ಟು ಮಾಹಿತಿಗಳು ಹೊರಬಿದ್ದಿವೆ. ಅವುಗಳಲ್ಲೊಂದು ಬಾಜ್ವಾರ ಪತ್ನಿ ಆಯೇಷಾ ಬಾಜ್ವಾ ಕೇವಲ ಅಮೆರಿಕನ್ ಬ್ಯಾಂಕ್​ಗಳಲ್ಲಷ್ಟೇ ಇಟ್ಟಿರುವ ಹಣ 650 ಮಿಲಿಯನ್ ಡಾಲರ್​ಗಳಂತೆ. ಅಂದರೆ ಇಂದಿನ ಪಾಕ್ ಕರೆನ್ಸಿಯ ಪ್ರಕಾರ ಸುಮಾರು ಹದಿಮೂರು ಸಾವಿರ ಕೋಟಿ ರೂಪಾಯಿಗಳು! ಇನ್ನು ಖುದ್ದು ಜನರಲ್ ಬಾಜ್ವಾ, ಮಗ ಸಾದ್ ಬಾಜ್ವಾರ ಹಣ ಸಂಗ್ರಹ ಎಷ್ಟಿರಬಹುದು? ಅದನ್ನು ಇತ್ತೀಚೆಗೆ ದುರ್ಮರಣಕ್ಕೀಡಾದ ನಮ್ಮ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಜನರಲ್ ಬಿಪನ್ ರಾವತ್ ಅವರ ಬ್ಯಾಂಕ್ ಖಾತೆಯಲ್ಲಿದ್ದ ಕೇವಲ ಮೂರೂವರೆ ಲಕ್ಷ ರೂಪಾಯಿಗಳಿಗೆ ಹೋಲಿಸಿ!

ಅಂದರೆ ಹೇರಳ ಹಣ ಮಾಡುವುದೇ ಪಾಕ್ ಸೇನಾಧಿಕಾರಿಗಳ ಒಂದು ಮಹಾನ್ ಸಾಧನೆ ಎಂದಾಗಿರುವ ಇಂತಹ ಸನ್ನಿವೇಶದಲ್ಲಿ ಜನರಲ್ ಆಸಿಮ್ ಮುನೀರ್ ಇದಕ್ಕೆ ಹೇಗೆ ಹೊಂದಿಕೆಯಾಗುತ್ತಾರೆ ಎಂಬ ಪ್ರಶ್ನೆ ಎದುರಾಗುತ್ತದೆ. ಅದಕ್ಕೆ ಒಂದಷ್ಟು ತುಣುಕು ಉತ್ತರಗಳು ದೊರೆತಿವೆ. ಮಾಸ್ಟರ್ ಟೈಲ್ಸ್ ಎನ್ನುವುದು ಪಾಕಿಸ್ತಾನದ ಅತಿ ದೊಡ್ಡ ಟೈಲ್ಸ್ ಉತ್ಪಾದನಾ ಸಂಸ್ಥೆ. ಇದರ ವ್ಯವಹಾರಗಳು ವಿದೇಶಗಳಲ್ಲೂ ಹರಡಿವೆ. ಎರಡು ವರ್ಷಗಳ ಹಿಂದೆ ಗುಜ್ರಾಂವಾಲಾದಲ್ಲಿ ಕೋರ್ ಕಮಾಂಡರ್ ಆಗಿದ್ದಾಗ ಆಸಿಮ್ ಮುನೀರ್ ಮಾಸ್ಟರ್ ಟೈಲ್ಸ್​ನ ಸಿಇಒ ಶೇಖ್ ಮಹ್ಮೂದ್ ಇಕ್ಬಾಲ್ ಅವರನ್ನು ಸಂರ್ಪಸಿ, ತನಗೆ ತೊಂಬತ್ತು ಕೋಟಿ ರೂಪಾಯಿಗಳನ್ನು ಕೊಡದಿದ್ದರೆ ಮಧ್ಯ ಏಶಿಯಾ ದೇಶಗಳೊಂದಿಗಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಮಾಸ್ಟರ್ ಟೈಲ್ಸ್ ಎಸಗಿರುವ ತೆರಿಗೆ ಗೋಲ್​ವಾಲ್​ಗಳನ್ನು ಬಹಿರಂಗಪಡಿಸುವುದಾಗಿ ಹೆದರಿಸಿದರಂತೆ. ಅಂದರೆ, ಪಾಕ್ ಸೇನೆಯ ಉನ್ನತ ವಲಯದಲ್ಲಿ ಸಹಜವೇ ಆಗಿಹೋಗಿರುವ ಭ್ರಷ್ಟಾಚಾರ ಕೌಶಲ ಮುನೀರ್​ರಲ್ಲಿ ಇದೆ ಎಂದಾಯಿತು. ಇನ್ನು ಅವರ ಉಳಿದ ‘ಯೋಗ್ಯತೆ’ಗಳನ್ನು ಪರಿಶೀಲಿಸೋಣ. ಸೇನಾ ದಂಡನಾಯಕನ ಸ್ಥಾನ ತೆರವಾಗುವುದಕ್ಕೆ ಎರಡು ದಿನಗಳ ಮೊದಲೇ ಲೆಫ್ಟಿನೆಂಟ್ ಜನರಲ್ ಹುದ್ದೆಯಿಂದ ನಿವೃತ್ತರಾಗಲಿದ್ದ ಆಸಿಮ್ ಮುನೀರ್​ರನ್ನೇ ಆ ಸ್ಥಾನಕ್ಕೇರಿಸಲು ಪ್ರಸಕ್ತ ಶೆಹ್​ಬಾಜ್ ಶರೀಫ್ ಮತ್ತವರ ರಿಮೋಟ್ ಕಂಟ್ರೋಲ್ ಮಾಜಿ ಪ್ರಧಾನಿ ನವಾಜ್ ಶರೀಫ್ ನಿರ್ಧರಿಸಿದ್ದು, ಅವರು ಏಕಕಾಲದಲ್ಲಿ ಚೀನಾ ಮತ್ತು ಸೌದಿ ಅರೇಬಿಯಾಗಳೆರಡರ ‘ಆಶೀರ್ವಾದ’ವನ್ನು ಪಡೆದು ಬಂದವರು ಮತ್ತು ಶರೀಫ್​ದ್ವಯರ ಮಗ್ಗುಲ ಮುಳ್ಳಾದ ಇಮ್ರಾನ್ ಖಾನ್​ರ ಬದ್ಧದ್ವೇಷಿ ಎನ್ನುವುದನ್ನು ಲೇಖನದ ಹಿಂದಿನ ಭಾಗಗಳಲ್ಲಿ ಹೇಳಿಯಾಗಿದೆ. ಅಂದರೆ, ಮುನೀರ್ ಮೇಲೆ ಚೀನಾ ಮತ್ತು ಶರೀಫ್​ದ್ವಯರ ನಿರೀಕ್ಷೆಗಳು ದೊಡ್ಡದಾಗಿಯೇ ಇವೆ. ಅವುಗಳನ್ನು ಪೂರೈಸುವಲ್ಲಿ ಮುನೀರ್​ರ ಪೂರ್ವಾನುಭವಗಳೇನಿವೆ ಎನ್ನುವುದನ್ನು ನೋಡೋಣ.

ಸಣ್ಣ ಆವಧಿಗಳಿಗಾದರೂ ಪಾಕ್ ಮಿಲಿಟರಿ ಇಂಟಲಿಜೆನ್ಸ್ ಮತ್ತು ಇಂಟರ್ ಸರ್ವೀಸಸ್ ಇಂಟಲಿಜೆನ್ಸ್ (ಐಎಸ್​ಐ) ಎರಡರ ಡೈರೆಕ್ಟರ್ ಜನರಲ್ ಜವಾಬ್ದಾರಿಗಳನ್ನೂ ನಿರ್ವಹಿಸಿದ ಅನುಭವವಿರುವ ಏಕೈಕ ಸೇನಾದಂಡನಾಯಕ ಆಸಿಮ್ ಮುನೀರ್. ಈ ಹಿನ್ನೆಲೆಯಲ್ಲಿ ಶತ್ರುವಿನ ಹಾಗೂ ತಮ್ಮದೇ ಬಲಾಬಲಗಳ ನಿಖರತೆಗೆ ಹತ್ತಿರದ ಚಿತ್ರ ಅವರಿಗಿದೆ, ಇಲ್ಲದ್ದನ್ನು ಪಡೆದುಕೊಳ್ಳಬಲ್ಲ ಮನೋಭಾವವೂ ಇದೆ.

ಐಎಸ್​ಐ ಮಹಾನಿರ್ದೇಶಕರಾಗಿದ್ದಾಗಲೇ ಇಮ್ರಾನ್ ಖಾನ್ ಪತ್ನಿ ಬುಶ್ರಾ ಬೀಬಿ ಮತ್ತವರ ಸಹಾಯಕಿಯ ಭ್ರಷ್ಟಾಚಾರಗಳ ಬಗ್ಗೆ ವರದಿ ತಯಾರಿಸಿ ಖಾನ್​ರಿಗೇ ಕೊಟ್ಟು ಅವರ ಕೆಂಗಣ್ಣಿಗೆ ಗುರಿಯಾಗಿ, ಆ ಕಾರಣದಿಂದಲೇ ಆ ಗುಪ್ತಚರ ಸಂಸ್ಥೆಯಿಂದ ಹೊರಗೆಸೆಯಲ್ಪಟ್ಟ ಮುನೀರ್ ಅವರಲ್ಲಿ ಖಾನ್ ದಂಪತಿಯ ಬಗ್ಗೆ ಇನ್ನೂ ಹೆಚ್ಚಿನ ವಿವರಗಳಿರುವುದು ನಿಶ್ಚಿತ. ಮತ್ತವರು ಅದನ್ನು ಮುಂದಿನ ದಿನಗಳಲ್ಲಿ ಸಾರ್ವಜನಿಕಗೊಳಿಸಿ ಖಾನ್​ರ ಜನಪ್ರಿಯತೆ ಕುಗ್ಗುವಂತೆ ಮಾಡುವುದು ನಿಶ್ಷಿತ. ಶರೀಫ್​ರಿಗೆ ಬೇಕಾಗಿರುವುದು ಅದೇ. ಇಂದು ಇಮ್ರಾನ್ ಖಾನ್ ಅತ್ಯಂತ ಜನಪ್ರಿಯ ರಾಜಕೀಯ ನಾಯಕ. ಹೀಗಾಗಿ, ಅವರ ಜೀವಕ್ಕೆ ಅಪಾಯ ತರುವುದು ತನಗೇ ತಿರುಗುಬಾಣವಾಗುತ್ತದೆ ಎಂದು ಶರೀಫ್ ಸರ್ಕಾರಕ್ಕೆ ಗೊತ್ತಿದೆ. ಹೀಗಾಗಿ, ಖಾನ್ ಪರಿವಾರವನ್ನು ಭ್ರಷ್ಟಾಚಾರಿಯೆಂದು ಸವಿವರವಾಗಿ ಬಿಂಬಿಸಿ ಅವರ ಜನಪ್ರಿಯತೆಯನ್ನು ಕುಗ್ಗಿಸುವ ಕೆಲಸವನ್ನು ಜನರಲ್ ಮುನೀರ್ ಮುಂದಿನ ವರ್ಷದ ಜುಲೈ ನಂತರ ಯಾವ ಸಮಯದಲ್ಲಾದರೂ ನಡೆಯಬಹುದಾದ ಮಹಾಚುನಾವಣೆಗಳ ಹೊತ್ತಿಗೆ ಪೂರ್ಣಗೊಳಿಸಿದರೆ, ಪರಿಣಾಮವಾಗಿ ಖಾನ್​ರ ಪಿಟಿಐ ಮಣ್ಣುಮುಕ್ಕಿದರೆ ಶರೀಫ್​ದ್ವಯರಿಗೆ ಕಂಟಕ ಕಳೆದಂತೆ. ಆದರೆ, ಈ ಲೆಕ್ಕಾಚಾರ ಸಫಲವಾಗುತ್ತದೆಯೇ ಎಂಬುದನ್ನು ಕಾಲವೇ ಹೇಳಬೇಕು. ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಶರೀಫ್ ಮತ್ತು ಭುಟ್ಟೋ ಕುಟುಂಬಗಳು ದರೋಡೆಕೋರರಾದರೆ ಖಾನ್ ಕುಟುಂಬ ಸಾಮಾನ್ಯ ಜೇಬುಗಳ್ಳ ಅಷ್ಟೇ. ಅಲ್ಲದೆ, ಭ್ರಷ್ಟಾಚಾರವನ್ನು ಸಹಜ ಮಾನವಸ್ವಭಾವ ಎಂದು ಒಪ್ಪಿಕೊಂಡಿರುವ ಪಾಕ್ ಸಮಾಜದಲ್ಲಿ ಆ ವಿಷಯದಲ್ಲಿ ಕಥೆ ಕಟ್ಟಿ ಹೇಳಿಯಾದರೂ ಖಾನ್​ರ ಜನಪ್ರಿಯತೆಯನ್ನು ಕುಗ್ಗಿಸುವುದು ಸಾಧ್ಯವಾಗಲಾರದು. ಇಂತಹ ಸನ್ನಿವೇಶದಲ್ಲಿ ಶರೀಫ್- ಮುನೀರ್ ಜೋಡಿ ಯಾವ ಸಂಚು ಹೂಡುತ್ತದೆ ಎನ್ನುವುದನ್ನೂ ಕಾಲವೇ ಹೇಳಬೇಕು. ಖಾನ್​ರನ್ನು ಪಾಕಿಸ್ತಾನದ ಶತ್ರು, ಭಾರತದ ಮಿತ್ರ ಎಂದು ಬಿಂಬಿಸುವುದು, ಖಾನ್​ರನ್ನು ದೇಶದ್ರೋಹದ ಆಪಾದನೆಯ ಮೇಲೆ ಬಂಧಿಸಿ ವಿಚಾರಣೆ ನಡೆಸುವುದು ಪರಿಣಾಕಾರಿಯಾಗಬಹುದು. ಭಾರತದ ಮಿತ್ರ ಎನ್ನುವುದೇ ಪಾಕ್ ನೇತಾರನೊಬ್ಬನ ಅತ್ಯಂತ ದೊಡ್ಡ ಅಪರಾಧವಾಗುವ ಸ್ಥಿತಿ ಆ ದೇಶದಲ್ಲಿದೆ. ಖಾನ್ ಈಗಾಗಲೇ ತಮ್ಮ ಹಲವಾರು ಜಲ್ಸಾಗಳಲ್ಲಿ ಭಾರತವನ್ನು, ಭಾರತದ ಪ್ರಧಾನಮಂತ್ರಿ ಮತ್ತು ವಿದೇಶಮಂತ್ರಿಯವರನ್ನು ಹಾಡಿ ಹೊಗಳಿದ್ದಾರೆ. ಹೀಗಾಗಿ, ಅವರಿಗೆ ಭಾರತದ ಮಿತ್ರ, ಪಾಕಿಸ್ತಾನದ ಶತ್ರು ಎಂಬ ಹಣೆಪಟ್ಟಿ ಹಚ್ಚುವುದು ಸುಲಭವಾಗಬಹುದು. ಇದರ ಜತೆಗೆ, ಇಮ್ರಾನ್ ಖಾನ್​ರ ಸರ್ಕಾರ-ವಿರೋಧಿ, ಸೇನಾ-ವಿರೋಧಿ ಲಾಂಗ್ ಮಾರ್ಚ್​ಗೆ ಧನಸಹಾಯ ನೀಡಬೇಕೆಂದು ಹರಕುಬಾಯಿಯ ಭಾರತೀಯ ರಕ್ಷಣಾ ‘ತಜ್ಞ’ರೊಬ್ಬರು ಕರೆಕೊಟ್ಟದ್ದು ಕಂಡಾಗ ಬೇಸರವಾಗುತ್ತದೆ. ಅವರ ಈ ಕರೆ ಪಾಕ್ ಸರ್ಕಾರ ಮತ್ತು ಸೇನೆಯ ಕೈಯಲ್ಲಿ ಖಾನ್ ವಿರುದ್ಧ ಒಂದು ಹರಿತ ಆಯುಧವಾಗಿಬಿಡುವ ಅಪಾಯವಿದೆ.

ಇನ್ನು ಚೀನಾದ ನಿರೀಕ್ಷೆಗಳನ್ನು ಪರಿಗಣಿಸಿದರೆ ಅವೂ ಯಶಸ್ವಿಯಾಗುವುದು ಅನುಮಾನ. ಭಾರತವನ್ನು ಎರಡು ದಿಕ್ಕುಗಳಲ್ಲೂ ನಿರಂತರವಾಗಿ ಘಾಸಿಗೊಳಿಸಲು ಮುನೀರ್ ಸಹಾಯಕ ಎಂಬ ಚೀನೀ ನಿರೀಕ್ಷೆ ತಾತ್ವಿಕವಾಗಿ ಸರಿಯಿರಬಹುದು. ಮತ್ತದು ಈಗಾಗಲೇ ಕಾರ್ಯರೂಪಕ್ಕೂ ಬಂದಾಗಿದೆ. ಪಿಒಕೆಯನ್ನು ವಶಪಡಿಸಿಕೊಳ್ಳುವ ಬೆದರಿಕೆಯನ್ನು ಭಾರತದ ರಾಜಕೀಯ ಮತ್ತು ಸೇನಾ ನಾಯಕರು ಇತ್ತೀಚಿನ ದಿನಗಳಲ್ಲಿ ನೀಡುತ್ತಲೇ ಇದ್ದಾರೆ. ಇದಕ್ಕೆ ಬಾಜ್ವಾರಿಂದ ಗಮನ ಸೆಳೆಯುವ ಪ್ರತಿಕ್ರಿಯೆಯೇನೂ ಬಂದಿರಲಿಲ್ಲ. ಆದರೆ, ಭಾರತದ ಈ ಬೆದರಿಕೆಯನ್ನು ಮುನೀರ್ ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಅಧಿಕಾರ ವಹಿಸಿಕೊಂಡ ಐದೇ ದಿನಗಳಲ್ಲಿ ನಿಯಂತ್ರಣ ರೇಖೆಗೆ ಭೇಟಿ ನೀಡಿ ಪಾಕ್ ಸೇನೆಯ ಯುದ್ಧ ಸನ್ನದ್ಧತೆಯನ್ನು ಖುದ್ದಾಗಿ ಪರಿಶೀಲಿಸಿದ್ದಾರೆ. ಡಿಸೆಂಬರ್ 9ರಂದು ಪೂರ್ವದ ತವಾಂಗ್ ಪ್ರದೇಶದಲ್ಲಿ ಆರುನೂರು ಚೀನೀ ಸೈನಿಕರು ಭಾರತೀಯ ಪ್ರದೇಶದೊಳಗೆ ನುಗ್ಗಿಬಂದಿದ್ದಾರೆ. ಜಾಗೃತ ಭಾರತೀಯ ಸೈನಿಕರು ಅವರನ್ನು ಹಿಮ್ಮಟ್ಟಿಸಿ ಗಲ್ವಾನ್ ಪ್ರಕರಣವನ್ನು ನೆನಪು ಮಾಡಿಕೊಟ್ಟಿದ್ದಾರೆ. ಐದು ದಿನಗಳ ಅಂತರದಲ್ಲಿ ನಡೆದಿರುವ ಪಶ್ಚಿಮದ ನಿಯಂತ್ರಣ ರೇಖೆಗೆ ಮುನೀರ್ ಭೇಟಿ ಮತ್ತು ಪೂರ್ವದ ಮೆಕ್​ವುಹೋನ್ ರೇಖೆಯಲ್ಲಿ ಭಾರಿ ಪ್ರಮಾಣದ ಚೀನೀ ಅತಿಕ್ರಮಣ ಒಂದು ಸಂಯೋಜಿತ ಚಟುವಟಿಕೆಯಾಗಿರುವ ಸಾಧ್ಯತೆ ಇದೆ. ಮುಂದಿನ ದಿನಗಳಲ್ಲಿ ಭಾರತ ಎಚ್ಚರಿಕೆಯಿಂದ ಗಮನಿಸಬೇಕಾದ ಅಪಾಯ ಇದು.

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net