ಸನಾತನ ಧರ್ಮದಲ್ಲಿ ಗುರು-ಶಿಷ್ಯ ಪರಂಪರೆಯ ಮಹತ್ವ

Guru Parampare
Published on

ಗುರು-ಶಿಷ್ಯ ಪರಂಪರೆಯು ಭಾರತ ದೇಶದ ಸಾಂಪ್ರದಾಯಿಕ ಶಿಕ್ಷಣ ಪದ್ಧತಿಯಾಗಿದ್ದು, ಇದು ಗುರು ಹಾಗೂ ಶಿಷ್ಯನ ಮಧ್ಯೆ ಇರುವ ಒಂದು ಪವಿತ್ರ ವೈಯಕ್ತಿಕ ಸಂಬಂಧ. ಪ್ರಾಚೀನ ಭಾರತದಲ್ಲಿ, ಈ ಪದ್ಧತಿಯಲ್ಲಿ ಶಿಷ್ಯನು ಗುರುವಿನ ಬೋಧನೆಯೊಂದಿಗೆ ತನ್ನ ಶ್ರದ್ಧೆಯನ್ನು ಜೋಡಿಸಿ ಜ್ಞಾನ,

Amrutha Sinchana
ಕಾರ್ಯಕುಶಲತೆ ಮತ್ತು ಜೀವನಮೌಲ್ಯಗಳನ್ನು ಪರಿಣಾಮಕಾರಿಯಾಗಿ ಕಲಿಯುತ್ತಿದ್ದನು. ಇಂತಹ ಗುರು-ಶಿಷ್ಯ ಪರಂಪರೆಯು ಭಾರತೀಯ ಸಂಸ್ಕೃತಿಯ ಜೀವಾಳವಾಗಿದೆ. ಗುರು-ಶಿಷ್ಯರ ಸಂಬಂಧ ಯಾವುದೇ ರಂಗದಲ್ಲಿ ಪಠ್ಯಕ್ರಮ ಕಲಿಕೆಗಷ್ಟೇ ಸೀಮಿತವಾಗಿರದೆ, ಆಧ್ಯಾತ್ಮಿಕ ಹಾಗೂ ನೈತಿಕ ಮಾರ್ಗದರ್ಶನಕ್ಕೂ ವಿಸ್ತರಿಸುತ್ತದೆ. ಭಾರತದ ಈ ಪ್ರಾಚೀನ ಶಿಕ್ಷಣ ಪದ್ಧತಿ ಶಾಸ್ತ್ರೀಯ ಕಲೆ, ಸಂಗೀತ, ನೃತ್ಯ, ತತ್ವಜ್ಞಾನ ಇತ್ಯಾದಿ ವಿದ್ಯೆಗಳು ಒಂದು ಪೀಳಿಗೆಯಿಂದ ಮುಂದಿನ ಪೀಳಿಗೆಗೆ ಹರಿದು ಬಂದು, ಅವುಗಳು ಎಂದಿಗೂ ಅಳಿದು ಹೋಗದಂತೆ ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ.

ಗುರು-ಶಿಷ್ಯ ಪರಂಪರೆಯು ಭಾರತೀಯ ಸಂಸ್ಕೃತಿಯಲ್ಲಿ ಆಳವಾಗಿ ಬೇರೂರಿದ್ದು, ವೇದಗಳ ಕಾಲದಲ್ಲಿ ಇದರ ಉಗಮವಾಯಿತೆಂದು ಹೇಳಬಹುದು. ವೈದಿಕ ಸಂಪ್ರದಾಯದಲ್ಲಿ ಜ್ಞಾನ ಕೇವಲ ಮೌಖಿಕ ಬೋಧನೆ ಮೂಲಕ ಗುರುವಿನಿಂದ ಶಿಷ್ಯನಿಗೆ ಹರಿದು ಬರುತ್ತಿತ್ತು. ಪವಿತ್ರ ಗ್ರಂಥಗಳ ಹಾಗೂ ಅವುಗಳಲ್ಲಿನ ಆಚರಣೆಗಳು ಮತ್ತು ತತ್ವದರ್ಶನಗಳು ಯಾವುದೇ ರೀತಿಯಲ್ಲಿ ಅಪಭ್ರಂಶಗೊಳ್ಳದಂತೆ ರಕ್ಷಿಸುವುದೇ ಈ ಸಂಪ್ರದಾಯದ ಗುರಿಯಾಗಿತ್ತು.

ಕಾಲಕ್ರಮೇಣ, ಉಪನಿಷತ್ತುಗಳ ಕಾಲದಲ್ಲಿ ಈ ಪದ್ಧತಿ ಮತ್ತಷ್ಟು ನಿಯಮಬದ್ಧ ರೀತಿಯಲ್ಲಿ ರೂಪುಗೊಂಡಿತು. ಶಿಷ್ಯನು ಗುರುವಿನ ಸನ್ನಿಧಿಯಲ್ಲಿ ಕುಳಿತು ಆಧ್ಯಾತ್ಮಿಕ ಮತ್ತು ತಾತ್ವಿಕ ಬೋಧನೆಗಳನ್ನು ವೈಯಕ್ತಿಕವಾಗಿ ಪಡೆದುಕೊಳ್ಳುತ್ತಿದ್ದನು. ಹೀಗೆ ಗುರು-ಶಿಷ್ಯರ ಸಂಬಂಧ ಹೆಚ್ಚಿನ ಪಾವಿತ್ರ್ಯ ಹೊಂದಿ, ಅದು ಶೈಕ್ಷಣಿಕ ಕ್ಷೇತ್ರವನ್ನು ಮೀರಿ, ಆಧ್ಯಾತ್ಮಿಕ ಹಾಗೂ ನೈತಿಕ ಮಾರ್ಗದರ್ಶನಗಳಿಗೂ ವಿಸ್ತರಿಸಿತು.

ಕಾಲಕ್ರಮೇಣ ಈ ಗುರು-ಶಿಷ್ಯ ಪರಂಪರೆಯ ಪರಿಕಲ್ಪನೆ ಮುಂದುವರಿದು ಸಂಗೀತ, ನೃತ್ಯ, ಸಮರ ಕಲೆಗಳು ಮತ್ತು ತತ್ವಶಾಸ್ತ್ರದಂಥ ಹಲವಾರು ಭಾರತೀಯ ಶಾಸ್ತ್ರೀಯ ವಿದ್ಯೆಗಳಿಗೂ ವಿಸ್ತರಿಸಿತು. ಈ ರೀತಿಯಲ್ಲಿ ಗುರು-ಶಿಷ್ಯ ಪರಂಪರೆ ಭಾರತೀಯ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಪ್ರದಾಯಗಳ ಪ್ರಮುಖ ಅಂಗವಾಗಿದ್ದು, ಅದು ನಮ್ಮ ವೈವಿಧ್ಯಮಯ ಜ್ಞಾನಭಂಡಾರ ರಕ್ಷಿಸಿ ಶ್ರೀಮಂತಗೊಳಿಸಿದೆ.

ಗುರು ಎಂಬ ಸಂಸ್ಕೃತ ಪದವು ಅಧ್ಯಾಪಕ ಅಥವಾ ಮಾರ್ಗದರ್ಶಕರಿಗೆ ಅನ್ವಯವಾಗುತ್ತದೆ. ಈ ಪದ ಎರಡು ಪದಗಳ ಸಂಯೋಗವಾಗಿದೆ:

ಗು ಎಂದರೆ ಕತ್ತಲು, ರು ಎಂದರೆ ಬೆಳಕು

ಗು ಹಾಗೂ ರು ಒಟ್ಟುಗೂಡಿದಾಗ, ಯಾರು ಕತ್ತಲೆಯಿಂದ ಬೆಳಕಿನೆಡೆಗೆ ಕರೆದೊಯ್ಯುತ್ತಾನೆಯೋ, ಅವನೇ ಗುರುವೆನಿಸಿಕೊಳ್ಳುತ್ತಾನೆ. ಗುರುವು ತನ್ನ ಅಪಾರ ಜ್ಞಾನ, ತಿಳಿವಳಿಕೆ ಮತ್ತು ತಾನು ಬೋಧಿಸುವ ವಿಷಯದ ಮೇಲಿನ ಹಿಡಿತಗಳನ್ನು ಉಪಯೋಗಿಸಿ ಶಿಷ್ಯರಿಗೆ ಮಾರ್ಗದರ್ಶನ ಮಾಡುತ್ತಾನೆ. ಜನರಿಗೆ ಶಿಕ್ಷಣ-ಮಾರ್ಗದರ್ಶನಗಳನ್ನು ನೀಡಿ, ಅವರನ್ನು ಉತ್ತಮ ನಾಗರಿಕರನ್ನಾಗಿ ರೂಪಿಸುವ ಗುರುಗಳೇ ಸುಸಂಸ್ಕೃತ ಸಮಾಜದ ನಿರ್ವಪಕರಾಗಿದ್ದಾರೆ.

ಗುಕಾರಂ ಚ ಗುಣಾತೀತಂ ರುಕಾರಂ ರೂಪವರ್ಜಿತಮ್ | ಗುಣಾತೀತ ಮರೂಪಂ ಚ ಯೋ ದದ್ಯಾತ್ ಸ ಗುರುಃ ಸೃ ್ಮಃ || (ಗುರು ಗೀತಾ 91)

ಗುರು ಗೀತೆಯಲ್ಲಿ ಉಲ್ಲೇಖಿಸಿರುವಂತೆ, ಶಿವನು ಪಾರ್ವತಿಗೆ ಗುರು ಪದದ ಅರ್ಥವನ್ನು ಈ ರೀತಿಯಾಗಿ ವಿಂಗಡಿಸಿ ಬೋಧಿಸಿದ್ದಾನೆ: ಗು ಎಂದರೆ ಗುಣಾತೀತ (ಗುಣಗಳನ್ನು ಮೀರಿದವನು), ರು ಎಂದರೆ ರೂಪವರ್ಜಿತ (ರೂಪವಿಲ್ಲದವನು). ಆದ್ದರಿಂದ ರೂಪ ಅಥವಾ ಗುಣಗಳಿಗೆ ಅತೀತನಾದ ಭಗವಂತನೇ ನಿಜವಾದ ಗುರುವು. ಹೀಗೆ ವೇದಾಂತ ಸಂಪ್ರದಾಯದಲ್ಲಿ ಗುರುವೆಂದರೆ, ಗುಣಾತೀತನೂ ಹಾಗೂ ನಿರಾಕಾರ ಸ್ವರೂಪಿಯೂ ಆದ ಪರಬ್ರಹ್ಮನ ಪ್ರತಿರೂಪವೇ. ಬ್ರಹ್ಮವಿದ್ ಬ್ರಹೈ ್ಮ ಭವತಿ- ಬ್ರಹ್ಮನನ್ನು ಅರಿತವನು ಬ್ರಹ್ಮನೇ ಆಗುತ್ತಾನೆ. ತನ್ನ ದಿವ್ಯತೆಯ ಅರಿವನ್ನು ಪಡೆದವನು ಮಾತ್ರವೇ ಶಿಷ್ಯರನ್ನು ಸರಿಯಾದ ಪಥದಲ್ಲಿ ನಡೆಸಬಲ್ಲ ಸಮರ್ಥ ಗುರುವಾಗುತ್ತಾನೆ.

ಭಾರತವು ವಿವಿಧ ಜ್ಞಾನರಂಗಗಳಲ್ಲಿ ಮಹಾನ್ ಗುರು-ಶಿಷ್ಯರ ಶ್ರೀಮಂತ ಇತಿಹಾಸ ಹೊಂದಿದೆ. ಅವುಗಳ ಪೈಕಿ ಕೆಲವು ಉಲ್ಲೇಖಾರ್ಹ ನಿದರ್ಶನಗಳು ಇಂತಿವೆ: ದ್ರೋಣಾಚಾರ್ಯ ಮತ್ತು ಅರ್ಜುನ: ಮಹಾಭಾರತದಲ್ಲಿ ಕಂಡುಬರುವಂತೆ, ದ್ರೋಣಾಚಾರ್ಯರು ಪಾಂಡವ ಹಾಗೂ ಕೌರವರ ಗುರುವಾಗಿದ್ದರು. ಅದರಲ್ಲೂ ಮಧ್ಯಮ ಪಾಂಡವನಾದ ಅರ್ಜುನನು ಅವರ ಪ್ರಿಯ ಶಿಷ್ಯೋತ್ತಮನಾಗಿದ್ದನು.

ಚಾಣಕ್ಯ ಮತ್ತು ಚಂದ್ರಗುಪ್ತ ಮೌರ್ಯ: ಪ್ರಾಚೀನ ಭಾರತೀಯ ಗುರು ಚಾಣಕ್ಯರು ಒಬ್ಬ ಮಹಾನ್ ತತ್ವಜ್ಞಾನಿ ಹಾಗೂ ರಾಜನೀತಿ ತಂತ್ರಜ್ಞರಾಗಿದ್ದರು. ಚಂದ್ರಗುಪ್ತ ಮೌರ್ಯನನ್ನು ಚಕ್ರವರ್ತಿಯನ್ನಾಗಿ ರೂಪಿಸಿದವರು. ಋಷಿಸದೃಶರಾದ ಚಾಣಕ್ಯರು ಒಬ್ಬ ಯಶಸ್ವಿ ರಾಜಗುರುವಾಗಿ ಇತಿಹಾಸದಲ್ಲಿ ಗುರುತಿಸಿಕೊಂಡಿದ್ದಾರೆ.

ಆದಿ ಶಂಕರಾಚಾರ್ಯರು ಮತ್ತು ಅವರ ಶಿಷ್ಯಂದಿರು: ಪ್ರಭಾವಶಾಲಿ ತತ್ವಜ್ಞಾನಿಗಳಾದ ಆದಿ ಶಂಕರಾಚಾರ್ಯರು, ಸುರೇಶ್ವರ, ಹಸ್ತಮಲಕ, ಪದ್ಮಪಾದ ಮತ್ತು ತೋಟಕಾಚಾರ್ಯರಂತಹ ಶಿಷ್ಯರನ್ನು ಜಗತ್ತಿಗೆ ನೀಡಿದರು. ಅವರು ಅದೈ ್ವ ವೇದಾಂತವನ್ನು ಭಾರತದಾದ್ಯಂತ ಪಸರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಶ್ರೀರಾಮಕೃಷ್ಣರು ಮತ್ತು ಸ್ವಾಮಿ ವಿವೇಕಾನಂದ: ಪಾಶ್ಚಾತ್ಯ ದೇಶಗಳಿಗೆ ಭಾರತೀಯ ತತ್ವಗಳನ್ನು ಪರಿಚಯಿಸಿದ ಮಹನೀಯರ ಪೈಕಿ ಮೊದಲಿಗರಾದ ಸ್ವಾಮಿ ವಿವೇಕಾನಂದರು, ಕಲ್ಕತ್ತಾ ಬಳಿಯ ದಕ್ಷಿಣೇಶ್ವರದ ಮಹಾತ್ಮರಾದ ಶ್ರೀರಾಮಕೃಷ್ಣ ಪರಮಹಂಸರ ಶಿಷ್ಯರು. ಶ್ರೀರಾಮಕೃಷ್ಣ ಮಿಷನ್​ನ ಸ್ಥಾಪನೆ ವಿವೇಕಾನಂದರ ಗುರುಭಕ್ತಿಯನ್ನು ಎತ್ತಿತೋರುತ್ತದೆ.

ವಿವೇಕ ಚೂಡಾಮಣಿ ಗ್ರಂಥದಲ್ಲಿ ಶ್ರೀ ಆದಿ ಶಂಕರರು, ಗುರುವಿನ ಕರುಣೆ ಪರಿಧಿರಹಿತ ಸಾಗರಸದೃಶವಾದುದು. ಗುರುವು ತನ್ನಲ್ಲಿ ಶರಣಾಗಿ ಬಂದ ಸಜ್ಜನರಿಗೆ ದಾರಿದೀಪವಾಗಿ ಅವರ ಜೀವನಗಳನ್ನು ಬೆಳಗುತ್ತಾನೆ - ಎಂದು ಬಣ್ಣಿಸಿದ್ದಾರೆ:

ಅಹೇತುಕದಯಾಸಿಂಧುರ್ಬಂಧುರಾನಮತಾಂ ಸತಾಮ್ || 33 ||/ ಅಂತೆಯೇ ಮುಂದುವರಿದು,/ ಸ್ವಾಮಿನ್ನಮಸ್ತೇನತಲೋಕಬಂಧೋ/ ಕಾರುಣ್ಯಸಿಂಧೋ ಪತಿತಂ ಭವಾಭ್ದೌ/ ಮಾಮುದ್ಧರಾತ್ಮೀಯಕಟಾಕ್ಷ್ಯದೃಷ್ಟಾ್ಯ/ ಋಜ್ವಾ್ಯತಿಕಾರುಣ್ಯಸುಧಾಭಿವೃಷ್ಟಾ್ಯ || 35 ||

‘ಹೇ ಗುರುವೇ! ಶರಣಾರ್ಥಿಗಳ ಪರಮ ಬಂಧುವೂ, ದಯಾಸಾಗರನೂ ಆದ ನೀನು ನನ್ನನ್ನು ಈ ಸಂಸಾರಸಾಗರದಿಂದ ಮೇಲೆತ್ತಿ ಕಾಪಾಡು. ನಿನ್ನ ಕಡೆಗಣ್ಣಿನ ಕಾರುಣ್ಯದ ಕಿರುನೋಟವೇ ನಾನು ಪಡೆಯಬಹುದಾದ ಅತ್ಯಮೂಲ್ಯ ಭಾಗ್ಯವಾಗಿದೆ. ನಿನ್ನಲ್ಲಿ ನಾನು ಸಂಪೂರ್ಣ ಶರಣಾಗುತ್ತೇನೆ’.

ಶಾಂತಾ ಮಹಾಂತೋ ನಿವಸಂತಿ ಸಂತೋ/ ವಸಂತವಲ್ಲೋಕಹಿತಂ ಚರಂತಃ |/ ತೀರ್ಣಾ ಸ್ವಯಂ ಭೀಮಭವಾರ್ಣವಂ ಜನಾನ್/ ಅಹೇತುನಾನ್ ಯಾನಪಿ ತಾರಯಂತಃ || (37)

‘ಹೇಗೆ ವಸಂತಕಾಲ ಎಲ್ಲರಿಗೂ ಹಿತ-ಸಂತಸವನ್ನು ತರುವುದೋ ಅದೇ ರೀತಿಯಲ್ಲಿ ಸರ್ವರಿಗೂ ಒಳ್ಳೆಯದನ್ನೇ ಮಾಡುವ ಶಾಂತ ಹಾಗೂ ಉದಾತ್ತ ಸಂತರೇ ನಿಜವಾದ ಜ್ಞಾನಿಗಳು. ಅವರು ತಾವು ಭಯಾನಕವಾದ ಈ ಭವಸಾಗರ ದಾಟಿದ್ದರೂ, ಯಾವುದೇ ಫಲಾಪೇಕ್ಷೆಯಿಲ್ಲದೆ ಇತರರನ್ನೂ ಈ ಭಾವಸಾಗರದಿಂದ ಉದ್ಧರಿಸಲು ಶ್ರಮಿಸುತ್ತಾರೆ’.

ಶ್ರೀ ಆದಿಶಂಕರಾಚಾರ್ಯರು ರಚಿಸಿದ ಗುರು ಅಷ್ಟಕಂ ಸ್ತೋತ್ರದಲ್ಲಿ ಗುರು-ಶಿಷ್ಯರ ಅವಿನಾಭಾವ ಸಂಬಂಧ ಹಾಗೂ ಶಿಷ್ಯನನ್ನು ಅಜ್ಞಾನದಿಂದ ಆತ್ಮಜ್ಞಾನದೆಡೆಗೆ ಮುನ್ನಡೆಸುವ ಗುರುವಿನ ಶಕ್ತಿಯ ಸುಂದರ ವಿವರಣೆಯಿದೆ. ಅಲ್ಲದೆ, ಲೌಕಿಕವಾಗಿ ಎಷ್ಟೇ ಬೆಳೆದಿದ್ದರೂ, ಶಿಷ್ಯನ ಮನಸ್ಸು ಗುರುವಾಕ್ಯದಲ್ಲಿ ಲಗ್ನವಾಗದಿದ್ದರೆ, ಅಂತಹ ಬೆಳವಣಿಗೆ ಸಂಪೂರ್ಣ ವ್ಯರ್ಥ. ಗುರುವಿನ ದಾಸನಾಗಿ ಅವನ ಆಜ್ಞೆಯನ್ನೇ ತನ್ನ ಜೀವನದ ಆಧಾರವನ್ನಾಗಿರಿಸಿಕೊಂಡರೆ ಶಿಷ್ಯನಿಗೆ ಆಧ್ಯಾತ್ಮಿಕ ಉನ್ನತಿಯೊಂದಿಗೆ ಲೌಕಿಕ ಲಾಭವೂ ಲಭಿಸುವುದೆಂದು ಸ್ಪಷ್ಟವಾಗಿ ವಿವರಿಸಲಾಗಿದೆ.

ಶರೀರಂ ಸ್ವರೂಪಂ ತಥಾ ವಾ ಕಲತ್ರಂ |/ ಯಶಶ್ಚಾರು ಚಿತ್ರಂ ಧನಂ ಮೇರು ತುಲ್ಯಮ್ ||/ ಮನಶ್ಚೇನ್ನ ಲಗ್ನಂ ಗುರೋರಂಘ್ರಿಪದ್ಮೇ |/ ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್ ||

ಮಾನವನು ಸದೃಢವಾದ ದೇಹವನ್ನೂ, ರೂಪವತಿಯಾದ ಪತ್ನಿಯನ್ನೂ ಪಡೆದಿರಬಹುದು. ಸಮಾಜದಲ್ಲಿ ಕೀರ್ತಿ-ಪ್ರತಿಷ್ಠೆಗಳನ್ನೂ ಹೊಂದಿರಬಹುದು. ಅಲ್ಲದೆ, ಮೇರುಪರ್ವತದಷ್ಟು ಸ್ವರ್ಣಾದಿ ಧನಸಂಪತ್ತನ್ನೂ ಸಂಪಾದಿಸಿರಬಹುದು. ಆದರೆ ಅವನ ಮನಸ್ಸು ಗುರುವಿನ ಪದಕಮಲಗಳಲ್ಲಿ ನೆಟ್ಟಿರದಿದ್ದರೆ ಏನು ಪ್ರಯೋಜನ? ಶ್ವೇತಾಶ್ವತರ ಉಪನಿಷತ್ತು, ಯಾರು ಭಗವಂತನಲ್ಲಿರುವಷ್ಟು ಭಕ್ತಿಯನ್ನು ಗುರುವಿನ ಮೇಲೂ ಹೊಂದಿರುತ್ತಾರೋ, ಅವರಿಗೆ ಮಾತ್ರವೇ ಆತ್ಮಜ್ಞಾನ ಲಭಿಸುತ್ತದೆ ಎಂದು ಘೊಷಿಸಿದೆ.

ಯಸ್ಯ ದೇವೇ ಪರಾ ಭಕ್ತಿರ್ಯಥಾ ದೇವೇ ತಥಾ ಗುರೌ |/ ತಸೈ ್ಯೇ ಕಥಿತಾಹ್ಯಾರ್ಥಾ ಪ್ರಕಾಶಂತೇ ಮಹಾತ್ಮನಃ ಪ್ರಕಾಶಂತೇ ಮಹಾತ್ಮನ ಇತಿ ||

ಹೀಗೆ, ಶಿಷ್ಯನಿಗೆ ಪರಮಜ್ಞಾನ ಗಳಿಸಲು ಇರಬೇಕಾದ ಅರ್ಹತೆಗಳೆಂದರೆ, ಗುರುವಿನ ಮೇಲಿನ ಅಚಲ ವಿಶ್ವಾಸ ಮತ್ತು ಅವನಲ್ಲಿ ಶರಣಾಗತಿಗಳು ಮಾತ್ರ.

ಶ್ವೇತಾಶ್ವತರ ಉಪನಿಷತ್ತು ಮುಂದುವರಿದು, ಗುರುವು ಎಂಥ ಶಿಷ್ಯನಿಗೆ ಆತ್ಮಜ್ಞಾನ ಬೋಧಿಸುತ್ತಿದ್ದನೆಂಬುದನ್ನು ಎತ್ತಿ ತೋರುತ್ತದೆ:

ವೇದಾಂತೇ ಪರಮಂ ಗುಹ್ಯಂ ಪುರಾಕಲ್ಪೇ ಪ್ರಚೋದಿತಮ್ |

ನಾಪ್ರಶಾಂತಾಯ ದಾತವ್ಯಂ ನಾಪುತ್ರಾಯಾಶಿಷ್ಯಾಯ ವಾ ಪುನಃ ||

‘ಪರಮ ಗುಹ್ಯವಾದ ಆತ್ಮಜ್ಞಾನವನ್ನು ಗುರುವು ಅಪ್ರಶಾಂತರಿಗೆ, ಇಂದ್ರಿಯ ನಿಗ್ರಹವಿಲ್ಲದವರಿಗೆ ಅಥವಾ ಕರ್ತವ್ಯನಿಷ್ಠೆಯಿಲ್ಲದ ಪುತ್ರನಿಗಾಗಲೀ, ಶಿಷ್ಯನಿಗಾಗಲೀ ಬೋಧಿಸುತ್ತಿರಲಿಲ್ಲ’.

ಗುರುವು ಸರಿಯಾಗಿ ಪರೀಕ್ಷಿಸಿ ಆಯ್ದುಕೊಂಡ ಯೋಗ್ಯ ಶಿಷ್ಯನಿಗೆ ಮಾತ್ರ ಜ್ಞಾನಬೋಧನೆ ಮಾಡುತ್ತಿದ್ದನು. ಇದೇ ಕಾರಣದಿಂದಲೇ ಪ್ರಶ್ನೋಪನಿಷತ್ತಿನ ಗುರು ಭಗವಾನ್ ಪಿಪ್ಪಲಾದನು, ಜ್ಞಾನವನ್ನರಸಿ ಬಂದ ಆರು ಮಂದಿ ಶಿಷ್ಯರನ್ನು ಬಂದಕೂಡಲೇ ಸ್ವೀಕರಿಸಲಿಲ್ಲ. ಬದಲಿಗೆ, ಅವರು ಒಂದು ವರ್ಷ ಬ್ರಹ್ಮಚರ್ಯ ಮತ್ತು ತಪಸ್ಸುಗಳಲ್ಲಿ ಶ್ರದ್ಧೆಯಿಂದ ನಿರತರಾಗಿಲು ಆಜ್ಞಾಪಿಸಿದ. ತದನಂತರವೇ ಅವರನ್ನು ಶಿಷ್ಯರನ್ನಾಗಿ ಸ್ವೀಕರಿಸಿ, ಅವರ ಆರು ಪ್ರಶ್ನೆಗಳಿಗೆ ಉತ್ತರಗಳನ್ನು ನೀಡಿದನು. ಆ ಪ್ರಶ್ನೋತ್ತರ ಸಂವಾದವೇ ಪ್ರಶ್ನೋಪನಿಷತ್ತು.

ಅನೇಕ ಸಹಸ್ರ ವರ್ಷಗಳಿಂದ ಸತತವಾಗಿ ಸುಸಜ್ಜಿತ ವಿನಾಶಕಾರೀ ದಾಳಿಗಳಿಗೆ ಗುರಿಯಾದರೂ, ಭಾರತ ಇಂದಿಗೂ ತನ್ನ ಸಂಸ್ಕೃತಿ, ಸಂಪ್ರದಾಯ ಮತ್ತು ಜ್ಞಾನಗಳನ್ನು ಉಳಿಸಿಕೊಂಡಿದೆಯೆಂದರೆ, ಅದಕ್ಕೆ ಗುರು-ಶಿಷ್ಯ ಪರಂಪರೆಯ ಪದ್ಧತಿಯ ಶಿಕ್ಷಣವೇ ಮುಖ್ಯ ಕಾರಣವಾಗಿದೆ. ಆದ್ದರಿಂದ, ಎಲ್ಲಿಯವರೆಗೆ ನಾವು ಈ ಗುರು-ಶಿಷ್ಯ ಪರಂಪರೆಯ ಪದ್ಧತಿಯನ್ನು ಗೌರವಿಸಿ ಆಚರಿಸುತ್ತೇವೆಯೋ, ಅಲ್ಲಿಯವರೆಗೆ ನಾವು ಸನಾತನ ಧರ್ವಿುಯರಾದ ಭಾರತೀಯರಾಗಿ ಉಳಿಯುತ್ತೇವೆ. ಇಂತಹ ಸರ್ವಶ್ರೇಷ್ಠ ಗುರು-ಶಿಷ್ಯ ಪರಂಪರೆಗೆ ನಾನು ಶಿರಸಾ ನಮಿಸುತ್ತೇನೆ!

(ಲೇಖಕರು ಸಾಮಾಜಿಕ ಹಾಗೂ ಆಧ್ಯಾತ್ಮಿಕ ಗುರುಗಳು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net